ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‌ಸಾರವತ್ತಾದ್ದನ್ನೇ ನೀಡಿದ ಸಾರಾ ಅಬೂಬಕ್ಕರ್‌…

ನಾ ದಾಮೋದರ ಶೆಟ್ಟಿ

ಈ ಲೇಖನ ಈ ಮೊದಲು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ

ಕೇರಳದ ಕಾಸರಗೋಡು ಮೂಲದ, ಮಲಯಾಳ ಮನೆಮಾತಿನ ಕನ್ನಡದೊಡತಿ ಸಾರಾ ಅಬೂಬಕ್ಕರ್ ಕನ್ನಡವನ್ನು ಅಪಾರವಾಗಿ ಪ್ರೀತಿಸಿದವರು. ವಿದ್ಯಾವಂತರ ಮನೆತನದಿಂದ ಬಂದ ಸಾರಾ ತನ್ನ ಸುತ್ತಮುತ್ತಣ ಬಡತನವನ್ನು, ತಮ್ಮ ಸಮುದಾಯದ ಕುಂದುಕೊರತೆಗಳನ್ನು ನೋಡಿಕೊಂಡೇ ಬಳೆದವರು. ವಿವಾಹ ನಿಮಿತ್ತವಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಗಿ ಬಂದರೂ ಓದು -ಬರಹ ಅವರ ಕೈಹಿಡಿಯಿತು. ಇಂಜಿನಿಯರ್‌ ಆಗಿದ್ದ ಅವರ ಪತಿ ಅಬೂಬಕ್ಕರ್‌ ತನ್ನ ಪತ್ನಿ ಬರವಣಿಗೆಯ ಹಾದಿಯಲ್ಲಿ ದಿಟ್ಟವಾಗಿ ಸಾಗುವುದನ್ನು ಕಂಡು ಅಭಿಮಾನ ಪಡುತ್ತಿದ್ದರು. ಮುಂದೆ ಮಕ್ಕಳೂ ಸೊಸೆಯಂದಿರೂ ಅವರ ದಾರಿಯನ್ನು ಪ್ರೋತ್ಸಾಹಕ ದೃಷ್ಟಿಯಲ್ಲೇ ನೋಡಿಕೊಂಡರು. 

ಅವರು ಸಣ್ಣಕತೆ, ಕಾದಂಬರಿ, ಅನುವಾದ, ರೇಡಿಯೋ ನಾಟಕ- ಕ್ಷೇತ್ರಗಳಲ್ಲಿ ವಿಪುಲವಾದ ಬೆಳೆ ಬೆಳೆದವರು. ಅವರ ಧೋರಣೆ ಯಾವ ಬಗೆಯದು ಎಂಬುದನ್ನು ಬಿಂಬಿಸಲು ʻಮುಸ್ಲಿಮ್‌ ಹುಡುಗಿ ಶಾಲೆ ಕಲಿತದ್ದುʼ ಹಾಗೂ ʻಚಂದ್ರಗಿರಿಯ ತೀರದಲ್ಲಿʼ – ಇವರೆಡು ಕೃತಿಗಳು ಸಾಕು, ಸಾರಾ ಅವರ ದಿಟ್ಟ ನಿಲುವನ್ನು ಎತ್ತಿತೋರಿಸಲು. ಅವರ ಬರವಣಿಗೆ  ಬಹುಮುಖ್ಯವಾಗಿ ತಮ್ಮ ಸಮುದಾಯದ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಬವಣೆಗಳ ಕುರಿತಾದುದೇ ಆಗಿತ್ತು. ತಾನು ಸಮುದಾಯದೊಳಗಿದ್ದುಕೊಂಡೇ ತನ್ನ ಸಮುದಾಯದ ಹೆಣ್ಣುಮಕ್ಕಳನ್ನು ಬಿಡುಗಡೆಯತ್ತ ಕೊಂಡೊಯ್ಯಬೇಕೆಂಬುದು ಅವರ ಉದ್ದೇಶವಾಗಿತ್ತು.  ಅವರ ಎಲ್ಲ ಕತೆ, ಕಾದಂಬರಿಗಳೂ ಆ ಗುರಿಯ ಸುತ್ತಲೇ ಸಾಗಿತ್ತು. 

ಸಾರಾ ಅವರು ʻಸಮುದಾಯ ವಿರೋಧಿʼ ಎಂಬ ಹುಯ್ಯಲು ಬಹುಕಾಲ ನೆಲೆ ಗೊಂಡಿತ್ತು. ಪರಿಣಾಮವಾಗಿ ಅವರು ಕಲ್ಲೇಟುಗಳನ್ನು ತಿಂದದ್ದೂ ಇದೆ. ಅವರೆಂದೂ ಧರ್ಮವಿರೋಧಿ ಆಗಿರಲಿಲ್ಲ ಎಂಬುದನ್ನು ಒಂದು ಕಾರ್ಯಕ್ರಮಕ್ಕೆ ಅವರನ್ನು ಅತಿಥಿಯಾಗಿ ಕರೆಯಲೆಂದು ಅವರ ಮನೆಗೆ ಹೋದಾಗ ನಾನೇ ಅರಿತುಕೊಂಡೆ:

ಅದು ನೋಂಬಿನ ಕಾಲವಾಗಿತ್ತು. ಅವರ ಮನೆಗೆ ಹೋಗಿ, ಮೊಮ್ಮಗನ ಹತ್ತಿರ ನಾನು ಬಂದಿರುವುದಾಗಿ ತಿಳಿಸಿದೆ. ತುಂಬ ಹೊತ್ತಿನ ತನಕ ಅವರು ಹೊರಗೆ ಬರಲಿಲ್ಲ. ಕೊನೆಗೂ ಬಂದಾಗ ಕ್ಷೀಣಿತರಾಗಿ ತೋರಿದರು. ನಾನು ಬಂದ ವಿವರ ತಿಳಿಸಿದೆ. ʻನೋಂಬಿನ ಕಾಲ ಅಲ್ವಾ, ಮನೆಯಿಂದ ಹೊರಬರುವುದು ಕಷ್ಟ; ನಿಮ್ಮ ಕಾರ್ಯಕ್ರಮಕ್ಕೆ ಬರಲಾಗದುʼಎಂದರು. ನನಗೆ ಬೇಸರವಾಗಲಿಲ್ಲ; ಬದಲಿಗೆ ಅವರ ಧರ್ಮನಿಷ್ಠೆಯನ್ನು ಕಂಡು ನಾನು ಬೆರಗಾದೆ. 

ಸಾರಾ ಅವರ ಚಿಂತನೆ ಯಾವತ್ತೂ ಪ್ರಗತಿ ಪರ. ಮಂಗಳೂರಿನಲ್ಲಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರಿನಲ್ಲಿ ಸ್ಥಾಪನೆಯಾಗುವ  ಹೊತ್ತಿಗೆ, ಸಂಘಕ್ಕೆ ಸ್ವಂತ ಕಟ್ಟಡ ಬೇಕು ಎಂಬ ಆಶಯದೊಂದಿಗೆ ಜಿಲ್ಲಾಧಿಕಾರಿ ಕಛೇರಿಯ ಸುತ್ತಮುತ್ತ ಓಡಾಡುತ್ತ ಅವರು ಪಡುತ್ತಿದ್ದ ಪಾಡನ್ನು ಕಂಡು ಅಚ್ಚರಿ ಪಟ್ಟಿದ್ದೇನೆ. ಹಿಡಿದ ಕೆಲಸವನ್ನು ಬಿಡದ ಛಲವಾದಿ ಅವರು. ಸ್ತ್ರೀಪರ ಆಲೋಚನೆಗಳನ್ನು ವಿರೋಧಿಸುವವರನ್ನು ವಿರೋಧಿಸುವುದರಲ್ಲಿ ಅವರಿಗೆ ಯಾವ ಅಳುಕೂ ಇರಲಿಲ್ಲ.

ತನ್ನ ಸಾಹಿತ್ಯ ರಚನೆಗಳ ಬಗ್ಗೆ ಸಾರಾ ಅವರಿಗೆ ವಿಶೇಷ ಅಭಿಮಾನ. ಅವನ್ನು ತನ್ನ ಮಕ್ಕಳಂತೆ ನೋಡಿಕೊಂಡವರು. ಆ ಕುರಿತು  ಪಿಹೆಚ್‌. ಡಿ , ಎಂ. ಫಿಲ್‌ ಮಾಡುತ್ತೇವೆಂದು ಬಂದವರ ಹಾಗೂ ಅವರ ಸಂದರ್ಶನ ಮಾಡಲು ಬಂದವರ  ಜೊತೆ ʻಚೆನ್ನಾಗಿ ಓದಿಕೊಂಡು ಬನ್ನಿʼ ಎಂದು ಹಿಂದಕ್ಕೆ ಕಳುಹಿಸುವುದಕ್ಕೆ ಅವರಿಗೆ ಯಾವ ಮುಲಾಜೂ ಇರಲಿಲ್ಲ. ತಮ್ಮ ಪುಸ್ತಕಗಳನ್ನು ಪ್ರಕಾಶಕರು ಕೈಗೆತ್ತಿಕೊಂಡು ಬಿಡಿಗಾಸೂ ಕೊಡದೆ ಮೋಸಮಾಡುವುದನ್ನುಕಂಡು ರೋಸಿಹೋಗಿ ತಾವೇ ಪ್ರಕಟಣೆಗೆ ಮುಂದಾದದ್ದು, ತಾವೇ ಮಾರಾಟವನ್ನೂ ಮಾಡಿದ್ದು ಈಗ ಇತಿಹಾಸ.  ʻಚಂದ್ರಗಿರಿಯ ತೀರದಲ್ಲಿʼ ಕಾದಂಬರಿಯನ್ನು ಅವರ ಒಪ್ಪಿಗೆ ಪಡೆಯದೆ  ಸಿನಿಮಾ ಮಾಡಿದವರ, ಮಾಡುತ್ತೇನೆಂದು ಹೊರಟವರ ವಿರುದ್ಧ ಕೋರ್ಟಿಗೆ ಹೋಗುವುದು ತನ್ನ ಹಕ್ಕು ಎಂದು ತಿಳಿದು ಅಂತೆಯೇ ಮಾಡಿ, ಗೆದ್ದವರು ಕೂಡ. 

ಸಾರಾ ಅವರನ್ನು ಕನ್ನಡ ಸಾಹಿತ್ಯ ಲೋಕ ಅಚ್ಚರಿಯಿಂದ, ಅಭಿಮಾನದಿಂದ ಕಂಡಿದೆ. ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮುಂತಾದ ಪ್ರತಿಷ್ಠೆಯ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿವೆ. ಅವರನ್ನು ಕೇವಲ ಮುಸ್ಲಿಮ್‌ ಸಾಹಿತಿ ಎಂದು ಯಾರೂ ಮುದ್ರೆ ಒತ್ತಿದ್ದು ಕಂಡುಬರಲಿಲ್ಲ. ಸಮಾಜದ ಒಳಿತಿಗೆ ಶ್ರಮಿಸಿದ, ಸಾಹಿತ್ಯದ ಮೂಲಕ ಸಶಕ್ತ ಸಂದೇಶಗಳನ್ನು ಸಾರಿದ ಕೀರ್ತಿ ಸಾರಾ ಅಬೂಬಕ್ಕರ್‌ ಅವರಿಗೆ ಸಲ್ಲುತ್ತದೆ. 

‍ಲೇಖಕರು Admin

11 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading