ಭಾರತಿ ಬಿ ವಿ
ಹೋದವಾರ ರಂಗಶಂಕರದಲ್ಲಿ ಸುರೇಂದ್ರನಾಥ್ ಅವರ ‘ನೀ ನಾನಾದರೆ ನಾ ನೀನೇನಾ’ ನಾಟಕವಿತ್ತು. 5 ವರ್ಷದ ಕೆಳಗೆ ಒಮ್ಮೆ ನೋಡಿದ್ದ ನಾಟಕ ಅದು. ಆದರೂ ಭಾನುಮತಿ ಅನ್ನುವ ರಾಕೆಟ್ ಗೆಳತಿ ತನ್ನ ಎಂದಿನ ಗಡಿಬಿಡಿಯ ದನಿಯಲ್ಲಿ ‘ಓಡ್ಕೊಂಡು ಬಾ, ನಾಟಕ ನೋಡೋಣ’ ಅಂದಾಗ ನಾನು ಹೇಗೆ ನಿರಾಕರಿಸಲಿ? ಇದ್ದ ಬದ್ದ ಕೆಲಸಗಳನ್ನೆಲ್ಲ ಕೈಬಿಟ್ಟು ರಂಗಶಂಕರದ ಕಡೆ ಓಡಿದೆ. ಉಸಿರು ಕಟ್ಟಿಕೊಂಡು ಅಲ್ಲಿಗೆ ತಲುಪಿದಾಗ ರಂಗಮಂದಿರ ತುಂಬಿದೆ ಅನ್ನುವ ಬೋರ್ಡು ಕಾಣಿಸಿ ಒಂದೆರಡು ಕ್ಷಣ ಮಂಕಾದೆ. ಆದರೆ, ಬದುಕಿನಲ್ಲಿ ‘ಎಲ್ಲ ಮುಗಿಯಿತು’ ಅನ್ನುವಾಗ ಬರುವ ಆ ಛಲ, ಕೆಚ್ಚು ಇದೆಯಲ್ಲ, ಅದು ಯಾವುದಕ್ಕೂ ಸೋಲಲು ಬಿಡುವುದೇ ಇಲ್ಲ. ರಂಗಶಂಕರ ತುಂಬಿದೆ ಅಂದಾಗ ಮತ್ತಿಷ್ಟು ರಣೋತ್ಸಾಹದಲ್ಲಿ ಹೇಗಾದರೂ ಟಿಕೆಟ್ ಸಿಗುತ್ತಾ ನೋಡುವಾ ಅಂದುಕೊಳ್ಳುತ್ತಾ ಟಿಕೆಟ್ ಕೌಂಟರ್ ಕಡೆಗೆ ನುಗ್ಗಿದೆ. ಅಲ್ಲಿ ಒಂದು ಪರಿಚಿತ ಮುಖ ಕಂಡಿತು. ಕೂಡಲೇ ‘ಅದೇ ಕಣೇ! ನಾ ಹೇಳಲಿಲ್ವಾ … ಏನಾದರೂ ಪ್ರಯತ್ನ ಮಾಡಬೇಕು ಅಂತ? ಪ್ರಯತ್ನ ಮುಂದುವರೆಸು’ ಅಂತ ನನ್ನ ನಾನೇ ಹುರಿದುಂಬಿಸಿಕೊಂಡೆ. ಆ ಕೌಂಟರಿನಲ್ಲಿದ್ದ ಹುಡುಗ ಒಂದೆರಡು ಬಕೆಟ್ ನೀರು ಪಕ್ಕದಲ್ಲೇ ಇಟ್ಟು ಕೂತಿದ್ದವರಂತೆ ಟಿಕೆಟ್ ಇಲ್ಲ ಅನ್ನುವ ರೀತಿಯಲ್ಲಿ ಅಡ್ಡಡ್ಡ ತಲೆಯಾಡಿಸುತ್ತಾ, ಬಕೆಟ್‌ನಲ್ಲಿದ್ದ ನೀರನ್ನು ಮುಖಕ್ಕೆರಚಿದರು. ಒರೆಸಿಕೊಂಡು ಮತ್ತೆ ಅಲ್ಲೇ ನಿಂತೆ … ಕ್ಯಾನ್ಸಲ್ ಮಾಡಿಸಲು ಯಾರಾದರೂ ಬಂದರೆ! ಅನ್ನುವ ಆಶಾವಾದದೊಡನೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಐದು ನಿಮಿಷ ಕಾಯುವುದರಲ್ಲಿ ಅವಿರತದ ಸತೀಶ್ ಗೌಡರು ಎದುರಾಗಿ ‘ಟಿಕೆಟ್ ಬೇಕಿತ್ತಾ?’ ಅಂದಾಗ ಅವರು ಥೇಟ್ ಮಾರುವೇಷದಲ್ಲಿದ್ದ ಶ್ರೀಕೃಷ್ಣನ ಥರ ಕಂಡರು!! ಚಾಚಿದ ಕೈಗೆ ಟಿಕೆಟ್ ಬಂತು ….
ಟಿಕೆಟ್ ಸಿಕ್ಕ ನಂತರ ನಿರಾಳವಾಗಿ ಸುತ್ತ ಮುತ್ತ ಕಣ್ಣು ಹಾಯಿಸಿದೆ. ಅಲ್ಲಿಯವರೆಗೂ ಕೇಳಿಸದೇ ಇದ್ದ ಎಂ ಡಿ ಪಲ್ಲವಿ ಅವರ ಕಂಚಿನ ಕಂಠ ಈಗ ಕಿವಿ ಮೇಲೆ ಬಿತ್ತು! ಆಗಲೇ ಉದ್ದಕ್ಕೆ ಬೆಳೆದಿದ್ದ ಕ್ಯೂನಲ್ಲಿ ನಿಂತು ಹಾಡು ಕೇಳುತ್ತಾ, ಹಬ್ಬದ ವಾತಾವರಣವಿದ್ದ ರಂಗಶಂಕರದ ಸಂಭ್ರಮವನ್ನು ನನ್ನಲ್ಲೂ ಆವಾಹಿಸಿಕೊಂಡೆ. ರಂಗಶಂಕರವೆನ್ನುವ ತಾಜ್‌ಮಹಲಿನ ಹತ್ತು ವರ್ಷದ ಹ್ಯಾಪಿ ಬರ್ತ್ ಡೇ ಮತ್ತು ಶಂಕರನ 60 ನೇ ವರ್ಷದ ಹ್ಯಾಪಿ ಬರ್ತ್ ಡೇ ಪ್ರಯುಕ್ತ ರಂಗಶಂಕರ ಸಖತ್ತಾಗಿ ಅಲಂಕರಿಸಿಕೊಂಡಿತ್ತು. ನನ್ನ ಶಂಕರ ಇದ್ದಿದ್ದರೆ ಈಗ ಅವನಿಗೆ 60 ವರ್ಷವಾಗಿರುತ್ತಿತ್ತಾ …. ಹೋ! ಕಲ್ಪನೆ ಯಾಕೋ ಮನಸ್ಸಿಗೆ ಹಿಡಿಸಲಿಲ್ಲ. ಅವನು ಮನಸ್ಸಿನಲ್ಲಿ ಚಿರಯುವಕನಾಗೇ ನಿಂತಿದ್ದಾನೆ, ಹಾಗೇ ನಿಂತಿರಲಿ ಅಂದುಕೊಂಡಿತು ಮನಸ್ಸು. ನನ್ನ ಹೀರೋ ಶಂಕರ ಹೇಗಿದ್ದನಲ್ಲವಾ ಆಗ ….
***
ಮೊದಲಿನಿಂದ ನನಗೆ ತುಂಬ ಅಚ್ಚುಕಟ್ಟಾಗಿ, ನೀಟಾಗಿ ಡ್ರೆಸ್ ಮಾಡುವ ಹುಡುಗರೆಂದರೆ ಅಷ್ಟಕ್ಕಷ್ಟೇ. ಒಡ್ಡೊಡ್ಡಾಗಿ, ಒಂಥರಾ ಕೇರ್‌ಲೆಸ್ attitude ಇರಬೇಕು ಗಂಡಸಾದವನಿಗೆ ಅನ್ನುವುದು ನನ್ನ ತಿಕ್ಕಲುತನಗಳಲ್ಲಿ ಒಂದು. ಎಲ್ಲ ಹೀರೋಗಳು ನಟಿಸಿರುವ ಎಲ್ಲ ಸಿನೆಮಗಳನ್ನೂ ಹುಚ್ಚಿಯಂತೆ ನೋಡುತ್ತಿದ್ದೆ, ಮೆಚ್ಚುತ್ತಿದ್ದೆನಾದರೂ ‘ಇವ ನನ್ನ ಹೀರೋ’ ಅನ್ನಿಸುವಂಥ ಮೋಹ ಯಾರ ಬಗ್ಗೆಯೂ ಬೆಳೆದಿರಲೇ ಇಲ್ಲ. ನಟನೆಯ ಲೆಕ್ಕದಲ್ಲಿ ಎಲ್ಲರೂ ಮೆಚ್ಚಿಗೆಯಾಗುತ್ತಿದ್ದರು. ಆದರೆ, ಆ ಹದಿಹರೆಯಕ್ಕೆ ಮೋಹಕ್ಕೆ ಬೀಳುವಂಥ ಹೀರೋ ಸಿಕ್ಕಿರಲೇ ಇಲ್ಲ. ಆಗ ಎಲ್ಲಿಂದಲೋ ಮಿಂಚಿನ ಹಾಗೆ ಅವತರಿಸಿದ್ದ ಶಂಕರ. ನನ್ನ ಕಲ್ಪನೆಯಲ್ಲಿದ್ದ ಮೋಹಕ ಹೀರೋನನ್ನು ನೂರಕ್ಕೆ ನೂರರಷ್ಟು … ನೂರಕ್ಕೆ ಇನ್ನೂರರಷ್ಟು ಲೆಕ್ಕದಲ್ಲಿ ಸರಿದೂಗುತ್ತಿದ್ದ ಶಂಕರನನ್ನು ಕಂಡು ಅವನ ಹುಚ್ಚು ಹಿಡಿದೇಬಿಟ್ಟಿತು ನನಗೆ. ಅವನ ಸಿನೆಮಾ ನೋಡುತ್ತ, ನೋಡುತ್ತ ಮೋಹ ಹೆಚ್ಚಾಗುತ್ತಲೇ ಹೋಯಿತು. ಯಾವ ಪರಿ ಮೋಹವೆಂದರೆ ನನಗೊಬ್ಬ ಮಗ ಹುಟ್ಟಿದರೆ ‘ಶಂಕರ್ ನಾಗ್’ ಎಂದು ಹೆಸರಿಡುತ್ತೇನೆ ಅಂತ ಘೋಷಿಸುವಷ್ಟು!! ಈಗ ನಗು ಬರುತ್ತದೆ … ಅಲ್ಲಾ ಶಂಕರ ಅನ್ನುವ ಹೆಸರನ್ನು ಇಡುವುದೆಂದರೆ ಓಕೆ, ಅವನ ಸರ್‌ನೇಮನ್ನೂ ಸೇರಿಸಿ ಮಗನಿಗೆ ಹೆಸರಿಟ್ಟಿದ್ದಿದ್ದರೆ ಹೇಗಿರುತ್ತಿತ್ತು ಎಂದು! ಒಟ್ಟಿನಲ್ಲಿ ಅದೊಂಥರಾ ಈ ಲೋಕದಾಚೆಗಿನ ಲೋಕ.
ಆ ನಂತರ ನನ್ನ ಮೋಹ ಪರಾಕಾಷ್ಠೆಯ ಮಟ್ಟ ತಲುಪಿತು. ಅವನ ಹೆಜ್ಜೆ ಹೆಜ್ಜೆಯನ್ನೂ ಪ್ರೀತಿಸಲು ಶುರು ಮಾಡಿದೆ. ಅವನ ಮಿಂಚುಗೂದಲು, ಸೊಟ್ಟ ನಡೆ, ಸ್ವಲ್ಪ ವಿಚಿತ್ರ ಸ್ಟೈಲಿನ ಕನ್ನಡ ಸಂಭಾಷಣೆ, ಅವನ ಬೆಲ್ ಬಾಟಮ್, ಪೂರ್ತಿ ಕರಾಟೆಯಲ್ಲದ ಕರಾಟೆ ಸ್ಟೈಲಿನ ಫೈಟು, ಅವನ ಕುರುಚಲು-ತರಚಲು ಗಡ್ಡ … ಸಾರಾಸಗಟಾದ ಮೆಚ್ಚಿಗೆಯದು… ಇಡಿಯಾಗಿ ಶಂಕರನಿಗೆ ಸಂಬಂಧಿಸಿದ್ದೆಲ್ಲವೂ …..
‘ನಗುವಾ ಗುಲಾಬಿ ಹೂವೆ’ ಅಂತ ಅವ ಬಿಗಿದ ಕಂಠದಲ್ಲಿ ಹಾಡಿದರೆ ನನ್ನ ಕಣ್ಣಲ್ಲೂ ನೀರೂರುವಷ್ಟು ಸಂಕಟ ….
‘ಒಂದೇ ಒಂದು ಆಸೆಯು’ ಅಂತ ಹಾಡುವಾಗ ಕೈಬಳೆ ಘಲ್ ಎನ್ನಲು ಅಂತ ಅವ ಮೆಚ್ಚಿ ಹಾಡಿದ್ದಕ್ಕೆ, ಶಂಕರನಿಗೆ ನಿಜ ಜೀವನದಲ್ಲೂ ಗಾಜಿನ ಬಳೆ ಪ್ರೀತಿಯೇ ಅನ್ನುವ ಭ್ರಮೆಗೆ ಬಿದ್ದು, ಎಂದೂ ಗಾಜಿನ ಬಳೆ ತೊಡದ ನಾನು ಬಣ್ಣ ಬಣ್ಣದ ಡಜ಼ನ್‌ಗಟ್ಟಳೆ ಬಳೆಯನ್ನು ಯೂನಿಫಾರ್ಮ್‌ನ ಜೊತೆಗೆ ತೊಡುವ ಮಂಗಚೇಷ್ಟೆಗಿಳಿಯುತ್ತಿದ್ದೆ …
ಮಿಂಚಿನ ಓಟವೆಂಬ ಸಿನೆಮಾ ಎಷ್ಟು ಸಲ ನೋಡಿದೆ ಅಂತ ಲೆಕ್ಕ ಇಡಲೂ ಹೋಗಲಿಲ್ಲ …
‘ಜೊತೆಯಲಿ ಜೊತೆ ಜೊತೆಯಲಿ’ ಅಂತ ಹಾಡಿದನಲ್ಲ ಕ್ಯಾನ್ಸರ್ ರೋಗಿ ಪ್ರೇಯಸಿಗೆ, ಆಗ ಶಂಕರನಂಥ ಶಂಕರ ಹೀಗೆಲ್ಲ ಹಾಡುತ್ತಾನೆಂದರೆ ಕ್ಯಾನ್ಸರ್ ರೋಗ ಕೂಡಾ ತೀರ ಕೆಟ್ಟದೇನಲ್ಲ ಅಂತ ಭ್ರಮಿಸುವಷ್ಟು …
‘ಕೇಳದೇ ನಿಮಗೀಗ’ – ಬದುಕಿನಲ್ಲಿ ಸಂಬಂಧಗಳನ್ನು ಕಳೆದುಕೊಂಡಾಗಲೆಲ್ಲ ಬದುಕಿನ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಯಿತು …
ಮಾಲ್ಗುಡಿ ಡೇಸ್ … ನೋಡಿ ಸ್ವಾಮಿ ನಾವಿರೋದು ಹೀಗೆ (ಅದು ನನ್ನ ಬದುಕಿನ ಮೂಲಮಂತ್ರ ಕೂಡ!) … ಪರಮೇಶಿ ಪ್ರೇಮ ಪ್ರಸಂಗ …
ಅವನ ಕೆಟ್ಟ ಸಿನೆಮಾಗಳಿಂದ ಹಿಡಿದು, ಬೆಸ್ಟ್ ಅನ್ನಿಸುವ ಎಲ್ಲ ಸಿನೆಮಾ, ಸೀರಿಯಲ್ ಎಲ್ಲ ನೋಡಿ ನೋಡಿ ಮುಗಿಸಿದೆ ….
ಮೋಹವೆಂದರೆ ಆ ರೀತಿಯಾದ ಉತ್ಕಟ ಮೋಹಕ್ಕೆ ಬೀಳಬೇಕು ….
***
‘ಕ್ಯೂನ ಕೊನೆ ಎಲ್ಲಿದೆ’ – ಯಾರೋ ಕೇಳಿದರು, ಆಗ ನಾನು ಮತ್ತೆ ಈ ಜಗತ್ತಿಗಿಳಿದೆ. ಕ್ಯೂನ ಕೊನೆಯತ್ತ ಕೈ ತೋರಿಸಿದೆ. ನಾನು ನಿಂತ ನಂತರ ಪಿನೋಕಿಯೋನ ಮೂಗಿನ ಹಾಗೆ ಮತ್ತಿಷ್ಟು ಬೆಳೆದಿತ್ತು ಅದು. ಮತ್ತೆ ನನ್ನೊಳಗಿನ ಯೋಚನೆಗೆ ಮರಳಿದೆ …
ಶಂಕರ ಆತುರಕ್ಕೆ ಬಿದ್ದವನಂತೆ ವಿದಾಯ ಹೇಳಿದಾಗ ಅವನಿಗೆ ಬರೀ 36 ವರ್ಷ …
ಇವತ್ತಿಗೆ ಬದುಕಿದ್ದರೆ 60 ವರ್ಷ ಆಗಿರುತ್ತಿತ್ತಂತೆ …
ಬದುಕಿದ್ದರೆ ಹೇಗಿರುತ್ತಿದ್ದ ಈಗ?
ಆ ಕಾಲಿಗೆ ಚಕ್ರ ಕಟ್ಟಿಕೊಂಡಂಥ ನಡಿಗೆ ನಿಧಾನವಾಗಿರುತ್ತಿತ್ತಾ?
ಮುಖದಲ್ಲಿ ಸುಕ್ಕು ಬಂದಿರುತ್ತಿತ್ತಾ?
ಈಗ ಬದುಕಿದ್ದರೆ ಹೀರೋಯಿನ್ನಿನ ಅಪ್ಪನ ಪಾತ್ರ ಮಾಡುತ್ತಿದ್ದನಾ? ಅಯ್ಯೋ! ಉಹೂಂ, ಸಾಧ್ಯವಿಲ್ಲ!!
ರಾಜಕೀಯದಲ್ಲಿ ಆಸಕ್ತಿಯಿದ್ದ ಅವ ಮಿನಿಸ್ಟರ್ ಆಗಿಹೋಗಿ, ಖಾದಿ ಶರ್ಟು ಹಾಕಿ, ಡೊಳ್ಳು ಹೊಟ್ಟೆ …..?
ಶಂಕರನಿಗೆ ವಯಸ್ಸಾಗಿ ಹೋಗಿರುತ್ತಿತ್ತಾ?
ಛೇ! ಛೇ! ಹೀರೋಗಳಿಗೆ ವಯಸ್ಸಾಗುವುದಿಲ್ಲವಲ್ಲ …!
ಯಾಕೋ ಯಾವ ಕಲ್ಪನೆಯೂ ಶಂಕರನಿಗೆ ಮ್ಯಾಚ್ ಆಗದೇ ಕೊನೆಗೆ – ಉಹೂಂ, ಅವ ಬದುಕಿದ್ದರೆ ಇನ್ನಿಷ್ಟು ಮುಂಚೆ ರಂಗಶಂಕರ ಕಟ್ಟಿ, ಮತ್ತಿಷ್ಟು ನಾಟಕ ಅಡಿಸುತ್ತಾ ಬದುಕಿರುತ್ತಿದ್ದ ಅಷ್ಟೇ. ಇವತ್ತಿನ ದಿನ ಅವನಿದ್ದಿದ್ದರೆ, ಅದೇ ಟಪ ಟಪ ನಡಿಗೆಯಲ್ಲಿ ನನಗೆ ಎದುರಾಗಿ, ತುಟಿ ಓರೆ ಮಾಡಿ ನಗುತ್ತಿದ್ದ ಅಷ್ಟೇ ಅನ್ನುವ ತೀರ್ಮಾನಕ್ಕೆ ಬಂದಾಗ ಸ್ವಲ್ಪ ಸಮಾಧಾನವೆನ್ನಿಸಿತು … ಸಧ್ಯ! ನನ್ನ ಶಂಕರನಿಗೆ ನನ್ನ ಕಲ್ಪನೆಯಲ್ಲಿ ವಯಸ್ಸಾಗಲು ನಾನು ಬಿಡಲಿಲ್ಲ ಎಂದು …!
ಅಷ್ಟರಲ್ಲಿ ಥಿಯೇಟರಿನ ಒಳಗೆ ಜನರನ್ನು ಬಿಡಲು ಶುರು ಮಾಡಿದರು …
***
ನಾಟಕ ಶುರುವಾಗುವ ಮುನ್ನ ಅರುಂಧತಿ ಸ್ಟೇಜಿನ ಮೇಲೆ ಬಂದು ನಿಂತರು. ಸಾಧಾರಣವಾಗಿ ತಿಳಿ ಬಣ್ಣದ ಸೀರೆಗಳನ್ನುಡುವ ಅವರು ಅವತ್ತು ಅಪರೂಪಕ್ಕೆ ಗಾಢ ಗುಲಾಬಿ ಸೀರೆಯನ್ನುಟ್ಟು ಚೆಂದಕ್ಕೆ ಕಾಣುತ್ತಿದ್ದರು. ಬೆಳಕಿನದ್ದೊಂದು ವೃತ್ತದ ನಟ್ಟನಡುವೆ ನಿಂತು ನಗುತ್ತಾ ಮಾತು ಶುರು ಮಾಡಿದರು. ರಂಗಶಂಕರದ ಕನಸು ಶುರುವಾದ ದಿನದಿಂದ ಘಟನೆಗಳನ್ನು ಹೇಳುತ್ತಾ ಹೋದರು, ತುಂಬ ಪ್ರೀತಿಯಿಂದ – ರಂಗಭೂಮಿಯ ಬಗ್ಗೆ ಸಿಕ್ಕಾಪಟ್ಟೆ ಹುಚ್ಚಿದ್ದ ಶಂಕರ, ಅವನಿರುವಾಗಲೇ ಸಂಕೇತ್ ತಂಡವನ್ನು ಕಟ್ಟಿದ್ದ. ಬೆಂಗಳೂರಿನ ಹವ್ಯಾಸಿ ನಟರಿಗೆ ನಾಟಕವಾಡಲು ಇಂಥ ಒಂದು ಸ್ಥಳ ಇರಬೇಕು ಅನ್ನುವುದು ಶಂಕರನ ಕನಸಾಗಿತ್ತು. ಎಂದಾದರೂ ರಂಗಶಂಕರದ ಕನಸೊಂದನ್ನು ನನಸು ಮಾಡುವವನೇ ಇದ್ದ. ಆದರೆ, ಅವನಿರುವಾಗ ಅದು ಸಾಧ್ಯವಾಗಲೇ ಇಲ್ಲ. ಅವನು ಹೋದ ನಂತರ ಸುರೇಂದ್ರನಾಥ್ ಮತ್ತು ಗೆಳೆಯರೆಲ್ಲ ಸೇರಿ ಸಂಕೇತ್ ತಂಡವನ್ನು ಮುಂದುವರೆಸಿಕೊಂಡು ಬರಲು ಅಗತ್ಯವಾದ ನಾಟಕಗಳನ್ನು ಆಡಿಸಿದರು. ಹೊಸ ಹೊಸ ರಂಗ ಪ್ರಯೋಗಗಳನ್ನು ಮಾಡಿದರು. ಸಂಕೇತ್ ಇವರೆಲ್ಲರ ಸಹಕಾರದಿಂದ ಇವತ್ತಿಗೂ ಉಳಿದಿದೆ. ಶಂಕರ ಅವತ್ತು ಕಂಡಿದ್ದ ಕನಸು ನನಸಾಗಿದೆ – ಹೇಳುತ್ತಿದ್ದ ಅರುಂಧತಿಯವರ ಮುಖವನ್ನೇ ನೋಡುತ್ತಾ ಇದ್ದೆ. ಶಂಕರನ ಹೆಸರು ಹೇಳುವಾಗ ಕಣ್ಣಂಚಿನಲ್ಲಿ ನೀರು ಕಾಣಿಸುತ್ತಾ ಅಂತ ತಳಮಳಗೊಂಡೆ. ಉಹೂಂ, ಆ ರೀತಿಯ ಯಾವುದೂ ಆಗದೇ ಅರುಂಧತಿ, ಶಂಕರನ ಕನಸು ನನಸಾದ ಬಗ್ಗೆ ನಗುತ್ತಲೇ ಮಾತಾಡುತ್ತಾ ಹೋದರು. ದನಿಯಲ್ಲೊಂದಿಷ್ಟು ಸಾರ್ಥಕ್ಯಭಾವ, ನಗು ಮಾತ್ರವಿತ್ತು. ಅರುಂಧತಿ ಅಲ್ಲಿ ಹೇಳಿದ್ದು ಇಷ್ಟು ಮಾತ್ರ … ಹೇಳದೇ ಉಳಿದದ್ದು ಇನ್ನೂ ತುಂಬ ಇತ್ತು ….
ತಾನು ಅಷ್ಟು ಬೇಗ ಇಲ್ಲವಾಗಬಹುದು ಅನ್ನುವ ಕಲ್ಪನೆಯೂ ಮನಸ್ಸಿನಲ್ಲಿ ಮೂಡದ ಶಂಕರ, ಹೋಗುವ ಸಮಯದಲ್ಲಿ ಸಿಕ್ಕಾಪಟ್ಟೆ ಪ್ರಾಜೆಕ್ಟ್‌ಗಳಲ್ಲಿ ಹಣ ತೊಡಗಿಸಿದ್ದ. ಯಾವ ಪ್ರಾಜೆಕ್ಟೂ ಸೋಲುವಂಥದ್ದಲ್ಲವಾದ್ದರಿಂದ ಮತ್ತು ಗೆಲ್ಲುವ ಭರವಸೆ ಶಂಕರನಲ್ಲಿ ಪರ್ವತದಷ್ಟಿದ್ದಿದ್ದರಿಂದ ತುಂಬ ಹಣವನ್ನು ಸಾಲವಾಗಿಯೂ ತೆಗೆದುಕೊಂಡು ಇವುಗಳಲ್ಲಿ ಹೂಡಿದ್ದ. ಒಂದು ದಿನ ಅಚಾನಕ್ ಶಂಕರ ಅಪಘಾತಕ್ಕೀಡಾಗಿ ಕೈ ಕೊಡವಿ ನಡೆದುಬಿಟ್ಟ. ಅರುಂಧತಿಯವರಿಗೂ ಆ ಅಪಘಾತದಲ್ಲಿ ಗಾಯವಾಗಿದ್ದವು, ಮಗಳು ಕಾವ್ಯಳಿಗೂ. ಬದುಕು ಮುರಿದು ಹೋಗಿತ್ತು, ಜೊತೆಗೆ ಮೈಯಲ್ಲಿನ ಸುಮಾರು ಮೂಳೆಗಳೂ. ಆ ಮುರಿದ ಮೂಳೆಗಳು ಒಂದಿಷ್ಟು ತಿಂಗಳ ನಂತರ ರಿಪೇರಿಯಾದವು. ಆದರೆ, ಮುರಿದ ಬದುಕು ….? ಅದು ರಿಪೇರಿಯಾಗುವುದು ಸುಲಭವಿರಲಿಲ್ಲ. ಹೇಗೋ ಒಂದು ದಿನ ಬದುಕನ್ನು ಕೈಗೆತ್ತಿಗೊಳ್ಳುವ ಸ್ಥೈರ್ಯದಿಂದ ಮುನ್ನುಗ್ಗಿದ್ದ ಅರುಂಧತಿಯವರಿಗೆ ಆಗಲೇ ತಿಳಿದಿದ್ದು ಸಾಲದ ವಿಷಯ. ತನ್ನ ಖರ್ಚುಗಳನ್ನೆಲ್ಲ ತೀರಾ ಅಗತ್ಯಗಳಿಗೆ ಮಾತ್ರ ಮೀಸಲಾಗಿರಿಸಿದ ಅರುಂಧತಿ ಸಾಲ ಮುಕ್ತರಾಗುವ ದಿಕ್ಕಿನಲ್ಲಿ ಹೆಜ್ಜೆಯಿಡುತ್ತಾರೆ. ಆ ದಿನಗಳಲ್ಲಿ ಹಣಕ್ಕೆ ಪರದಾಡಬೇಕಾದ ಸ್ಥಿತಿಯಲ್ಲಿ ಮಗಳು ಕಾವ್ಯಳ ಸ್ಕೂಲಿನ ಫೀಸ್ ಕಟ್ಟುವ ಕೊನೆಯ ಪೋಷಕಿ ತಾನೇ ಆಗಿರುತ್ತಿದ್ದೆ ಅನ್ನುತ್ತಾರೆ. ಆ ದಿನಗಳಲ್ಲಿ ಕಾಲು ಚಾಚಿ ಕೂತು ಅಳಲೂ ಸಾಧ್ಯವಿರದ ಪರಿಸ್ಥಿತಿಯಲ್ಲಿದ್ದ ಅರುಂಧತಿ ಯಾವುದಕ್ಕೆ ದುಃಖಿಸಬೇಕಿತ್ತು? ಆಗಿರುವ ಸ್ಥಿತಿಗಾ? ಇಲ್ಲವೆಂದರೆ ಶಂಕರನಂಥ ಗೆಳೆಯನನ್ನು-ಗಂಡನನ್ನು ಕಳೆದುಕೊಂಡೂ ಬದುಕಬೇಕಾದ ಸ್ಥಿತಿಗಾ? ಶಂಕರ ಎಂದೂ ಜೋರಾಗಿ ಒಮ್ಮೆಯೂ ದನಿಯನ್ನೂ ಏರಿಸುತ್ತಿರಲಿಲ್ಲವಂತೆ ಅರುಂಧತಿಯವರೊಡನೆ. ಅಂಥ ಅದ್ಭುತ ಸಾಂಗತ್ಯ, ಸ್ನೇಹ, ಪ್ರೇಮ, ಒಟ್ಟಾಗಿ ಕಟ್ಟಿದ ಕನಸು ಎಲ್ಲವನ್ನೂ ಒಮ್ಮೆಲೇ ಕಳೆದುಕೊಂಡ ಅರುಂಧತಿಯವರ ಬದುಕು ಎಷ್ಟು ಕಠಿಣವಾಗಿದ್ದಿರಬೇಕು. ಆದರೆ, ಅರುಂಧತಿ ಆ ಸ್ಥಿತಿಯಲ್ಲೂ ಶಂಕರನ ಕನಸನ್ನು ನಿಜ ಮಾಡುವುದಕ್ಕೆ ಎದ್ದು ನಿಲ್ಲುತ್ತಾರಲ್ಲ, ಎಂಥ ಅದ್ಭುತ ಹೆಣ್ಣು ಈಕೆ ಅಂತೆಲ್ಲ ಯೋಚನೆಗಳು ಮನಸ್ಸಿನ ತುಂಬ. ನಾಟಕ ಮುಗಿಸಿ ಮನೆಗೆ ಬಂದ ವಾರದ ನಂತರವೂ ಇನ್ನೂ ಆ ಯೋಚನೆಗಳು ಕೊನೆಗಂಡಿಲ್ಲ …
***
ಕಟ್ಟಕಡೆಯದಾಗಿ ಹೀಗೊಂದು ಮಾರಲ್ ಆಫ್ ದ ಸ್ಟೋರಿ :
ಬದುಕಿನಲ್ಲೇನಿದೆ ಅನ್ನುತ್ತ ಹತಾಶಳಾದದ್ದೆಷ್ಟು ಸಲ …
ನಾನೊಬ್ಬಳು ಇಲ್ಲವಾದರೆ ಆಗುವ ನಷ್ಟವೇನು ಅನ್ನಿಸಿದ್ದು ಎಷ್ಟು ಸಲ …
ದಾರಿ ಕಾಣದೇ ಮಂಕಾಗಿ ನಿಂತವಳು ಮತ್ತೆ ಮಬ್ಬು ಬೆಳಕಿನಲ್ಲಿ ಕಾಲೆಳೆದುಕೊಂಡು ಹೆಜ್ಜೆಯಿಡಲು ಕಲಿತದ್ದೆಷ್ಟು ಸಲ …
ಬದುಕು ಯಾಕೆ ಹೀಗೆ ಪರೀಕ್ಷೆ ತಂದೊಡ್ಡಿತು ಅಂತ ದುಃಖಿಸಿದ್ದು ಎಷ್ಟು ಸಲ …
‘ಉಹೂಂ, ನೀನಿಲ್ಲದೇ ಬದುಕು ಸಾಧ್ಯವೇ ಇಲ್ಲ’ ಅನ್ನುತ್ತ ಕುಸಿದು ಬಿದ್ದದ್ದೆಷ್ಟು ಸಲ …
ಈಗ ಅರುಂಧತಿಯವರನ್ನು ನೋಡಿ ಬಂದ ದಿನದಿಂದ ಮನಸ್ಸು ಯೋಚಿಸುತ್ತಿದೆ –
ಹೌದೇ? ಬದುಕು ಬದುಕಲಾರದಷ್ಟು ಅಸಹನೀಯವಾಗಿದೆಯೇ …?
ಉಹೂಂ, ಕಷ್ಟ ಸಾಧ್ಯವಿರಬಹುದು, ಆದರೆ ಅಸಾಧ್ಯವಂತೂ ಖಂಡಿತ ಅಲ್ಲ….
ಶಂಕರನನ್ನು ಕಳೆದುಕೊಂಡ ಅರುಂಧತಿಯೇ ಬದುಕಿದ್ದಾರೆಂದ ಮೇಲೆ ಉಳಿದದ್ದು ಯಾವುದೂ ಅಸಾಧ್ಯವಲ್ಲ ….
ಆದರೆ, ಬದುಕಿಗೊಂದಿಷ್ಟು ಕನಸಿರಬೇಕಷ್ಟೇ …
***
ಅರಸುತಾ ಸುಖವನು
ಬಯಸುತಾ ಜಗವನು
ಕಳೆಯುತಾ ದಿನವನು
ಕದಿಯುತಾ ಬದುಕನು ……..
ಕದಿಯುತಾ ಬದುಕನು …………….








very nice bharati chennagide lekhana
ಶಂಕರನನ್ನು ಕಳೆದುಕೊಂಡ ಅರುಂಧತಿಯೇ ಬದುಕಿದ್ದಾರೆಂದ ಮೇಲೆ ಉಳಿದದ್ದು ಯಾವುದೂ ಅಸಾಧ್ಯವಲ್ಲ ….
idakkinta hechenu heloke saadhyavilla deemantha vyakti chetanagala belakina bagge
Tumbaa chennaagide.
ಚಿಕ್ಕಂದಿನಲ್ಲಿ ನನ್ನ ಅಚ್ಚು ಮೆಚ್ಚಿನ ಹೀರೋ ಅವನೇ…ನೀವಂದಂತೆ 60 ವರ್ಷದ ಶಂಕರನನ್ನು ಕಲ್ಪಿಸಿಕೊಳ್ಳಲು ಮನ ಒಪ್ಪುವುದಿಲ್ಲ. 36 ರ ಶಂಕರನೇ ಮನದಲ್ಲಿನ್ನೂ ತುಂಬಿಕೊಂಡಿದ್ದಾನೆ. ಶಂಕರನನ್ನು ಈ ರೀತಿಯಲ್ಲಿ ಸೊಗಸಾಗಿ ನೆನಪಿಸಿದ್ದಕ್ಕೆ ಧನ್ಯವಾದಗಳು.
ಎಕ್ಸ್ ಪೈರಿ ದಿನಾಂಕವೇ ಇರದ ಪಾದರಸದ ನೆನಪು ಶಂಕರ……… ಮತ್ತೆ ನಿಮ್ ಬರಹ ಇರ್ಲಿ ನಿರಂತರ……….ಅಭಿನಂದನೆಗಳು…
ನನ್ನ ಮೆಚ್ಚಿನ ಹೀರೋ .. ತುಂಬಾ ಚೆನ್ನಾಗಿದೆ ಭಾರತಿ . ರಂಗಶಂಕರ ಶಂಕರನಾಗ್ ಇರುವಿಕೆಯ ಸಾಕ್ಷಿ .
ಚಿರಯುವಕನ ಬಗ್ಗೆ ಬರೆದ ಲೇಖನಕ್ಕೆ ಧನ್ಯವಾದಗಳು
Thanks all …
Just beautiful. ನಾನೂ ಅವನ ಹುಚ್ಚಿ.ಈ ಇದೇ ಕಾರಣಕ್ಕೆ.ಅವನ ಹೆಸರು ಮಗನಿಡಬೇಕು ಅಂದುಕೊಂಡದ್ದು.ನವೆಂಬರ್ 9 ಕ್ಕೇ ಮಗ ಹುಟ್ಟಬೇಕು ಅಂತ ಜಪಿಸಿ 11 ಕ್ಕೆ ಹೆತ್ತದ್ದು.ಅವನನ್ನು ಯಾವತ್ತೂ ಮುದುಕನಾಗಿ ಕಲ್ಪಿಸಿಕೊಳ್ಳಲು ಇಷ್ಟಪಡದುದು. ಓಹ್ ನನ್ನದೇ ಭಾವ ಅದ್ದಿ ಬರೆದಂತಿದೆ.ಹೆಂಗಿದು? ಅಥವಾ ಅವನ ಬಗ್ಗೆ ಈ ಬಾವ ಸಾರ್ವತ್ರಿಕವಾ?
thanna kanasu,kalpane,huchu,sankalpa,karthruthva shakthi,sahasa manovrutthi ivannella avanannu kandu kelidarigella avaravara yathashakthi hancha ballantha adbhutha chaithanyada chilumeyadhu. aa adbutha nenapige namo embe.
Super!