
ಮೇಘನಾ ಸುಧೀಂದ್ರ
—–
ಪ್ರೀತಿಯ ತಾತ,
ಕುಶಲವೇ ? ಕ್ಷೇಮವೇ ? ಹೀಗೆಲ್ಲಾ ಕೇಳಿ ಪತ್ರ ಬರೆಯಲು ಕಲಿಸಿದವರೇ ನೀವು. ಇವತ್ತು ನಿಮ್ಮ ಹುಟ್ಟುಹಬ್ಬ, ಸ್ವರ್ಗದಲ್ಲಿ ಇವತ್ತು ದೊಡ್ಡ ಸಂಭ್ರಮವೇನೋ ಅಲ್ಲವೇ ? ಅಲ್ಲೂ ಕೆಂಪು ಕಲ್ಲುಸಕ್ಕರೆ ಮತ್ತು ಡೈಮೆಂಡ್ ಕಲ್ಲುಸಕ್ಕರೆಯನ್ನು ಹಂಚುತ್ತಿದ್ದೀರೇನೋ ಗೊತ್ತಿಲ್ಲ. ನಮಗಂತೂ ಕಲ್ಲುಸಕ್ಕರೆಯಂತಹ ಮಾತುಗಳು ಮತ್ತು ವಿಷಯಗಳನ್ನೆ ಬಿಟ್ಟು ಹೋದಿರಿ. ಹೆಚ್ಚೂ ಕಡಿಮೆ ನನ್ನ ಟೀನೇಜಿನ ಶುರುವಿನಲ್ಲಿ ನನ್ನ ಬಿಟ್ಟುಹೋದಿರಿ, ಆ ವಯಸ್ಸಲ್ಲೇ ಅಲ್ಲವೇ ದೊಡ್ಡವರ ಬುದ್ಧಿಮಾತು ಬೇಕಾದ್ದದ್ದು ? ಆದರೆ ಆ ವಯಸ್ಸಿಗಿಂತ ಮುಂಚೆಯೇ ಅದೆಷ್ಟೆಲ್ಲಾ ಹೇಳಿಹೋದಿರಿ ತಾತ. ದಿನಾ ದಿನಾ ನೀವು ಹೇಳುತ್ತಿದ್ದ ಕಥೆಗಳನ್ನೇ ನಾನೀಗ ನನ್ನ ಮಕ್ಕಳಿಗೂ ಹೇಳುತ್ತೇನೆ. ಹೂಂ, ನನ್ನ ಮಕ್ಕಳೆಂದರೆ ನನ್ನ ಮಕ್ಕಳೇ ತಾತ. ನಿಮ್ಮ ಗುಡ್ಡಿ ಈಗ ಎರಡು ಮಕ್ಕಳ ತಾಯಿ, ಹೋಗಲಿ ಅದನ್ನಾದರೂ ಕಂಡು ಖುಷಿಯಾದಿರಾ ಹೇಗೆ ? ಅಜ್ಜಿ ಕನಕಾಭಿಷೇಕ ಮಾಡಿಸಿಕೊಂಡಾಗಲೂ ಅವರ ಮನಸ್ಸಲ್ಲಿ ನೀವೇ ತುಂಬಿದ್ದೀರಿ ಅನ್ನೋದಂತೂ ಸುಳ್ಳಲ್ಲ. ಅಲ್ಲಿದ್ದವರೆಲ್ಲಾ ನಿಮ್ಮನ್ನೇ ನೆನಪಿಸಿಕೊಂಡಿದ್ದು.
ಮಕ್ಕಳ ಬಗ್ಗೆ ನೀವು ಯಾವಾಗಲೂ ಒಂದು ಮಾತು ಹೇಳುತ್ತಿದ್ದಿರಿ, “ನಮಗೆ ಅವಶ್ಯಕತೆ ಇದ್ದಾಗ ಮಕ್ಕಳಲ್ಲ, ಮಕ್ಕಳ ಅವಶ್ಯಕತೆಗೆ ನಾವು” ಎಂದು. ಈಗ ನನ್ನ ಮಕ್ಕಳನ್ನು ಸಾಕೋವಾಗ ನನಗೆ ಅದೇ ನೆನಪಿಗೆ ಬರುತ್ತದೆ. ಇಂತಹ ಗಂಭೀರವಾದ ಮಾತುಗಳನ್ನು ಅಜ್ಜಿಗೆ ಹೇಳೋವಾಗಲ್ಲೆಲ್ಲಾ ನಾನು ನಿಮಗೆ ಕಥೆ ಹೇಳಿ ಎಂದು ತಲೆ ತಿನ್ನುತ್ತಿದ್ದೆ. ನೀತಿಪಾಠಗಳನ್ನು, ನಾನು ಹೇಗಿರಬೇಕೆಂದು ಕಥೆಯ ಮೂಲಕವೇ ತಿಳಿಸಿಬಿಟ್ಟಿರಿ ನೀವು. ಕೆಲವೊಮ್ಮೆ ಕಥೆಯಲ್ಲಿ ಹೀಗೆ ನಿಜವಾಗಿಯು ನಡೆದೇ ಇರುತ್ತಿರಲ್ಲಿಲ್ಲ, ಆದರೂ ನಿಮ್ಮದೊಂದು ಟಚ್ ಎಂದು ತಿಳಿಸಿಬಿಡುತ್ತಿದ್ದಿರಿ. ಈಗ ನಾನು ದೊಡ್ಡವಳಾದ ಮೇಲೆ ನಿಜವಾದ ಕಥೆ ತಿಳಿದುಕೊಂಡು ಆಮೇಲೆ ನಿಮ್ಮ ಕಥೆಯ ಚಮತ್ಕಾರವನ್ನು ತಿಳಿದುಕೊಂಡು ನಗುತ್ತಿರುತ್ತೇನೆ.

ಮಕ್ಕಳನ್ನ ಸಾಕೋವಾಗ ಅಗಾಧವಾದ ತಾಳ್ಮೆ ಬೇಕು ಎಂದು ಹೇಳುತ್ತಿದ್ದಿರಿ. “ಹಾಗೆಲ್ಲಾ ರೇಗಬಾರದು ಮಕ್ಕಳ ಮೇಲೆ , ಅವರಿಗೆ ಗೊತ್ತಾಗದ ವಯಸ್ಸು ಅದು” ಎಂದು ಯಾವಗಲೂ ಹೇಳುತ್ತಿದ್ದಿರಿ. ಕೆಲವೊಮ್ಮೆ ಮಕ್ಕಳು ರಾತ್ರೋರಾತ್ರಿ ರಚ್ಚೆ ಹಿಡಿದು ಮಲಗೋದೆ ಇಲ್ಲ ಎಂದಾಗ ತುಂಬಾ ಸುಸ್ತಾಗಿ ನಿದ್ದೆಗೆಟ್ಟಿದ್ದಕ್ಕೆ ಬರುವ ಕೋಪವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳೋದು ನಿಮ್ಮ ಮಾತಿನಿಂದಲೇ. ಅದು ಮೆಲುದನಿಯಲ್ಲಿ ನೀವು ಹೇಳಿದ ಸ್ವರ ನನ್ನ ಕಿವಿಯಲ್ಲಿ ಗುಯ್ಗುಡುತ್ತದೆ. ಮಕ್ಕಳ ಒಂದೊಂದು ಮೈಲ್ಸ್ಟೋನ್ನನ್ನೂ ಬರೆದಿಡಬೇಕು ಎಂದು ಹೇಳಿಕೊಟ್ಟೋರೆ ನೀವು. ನಾನು ಬರೆದ ಮೊದಲ ಅಕ್ಷರ, ನಾನು ಬರೆದ ಮೊದಲ ಪ್ರಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದೀರಿ.
ಈಗ ಬರೆಯೋದಿಲ್ಲ, ಸಿಕ್ಕಸಿಕ್ಕಿದ್ದಕ್ಕೆಲ್ಲಾ ಫೋಟೋ ತೆಗೆದು ವಿಡಿಯೋ ಮಾಡಿ ಅದನ್ನ ಬೆಚ್ಚಗೆ ಕಾಪಾಡಿಕೊಂಡಿದ್ದೇನೆ. ಆದರೆ ಬರೆಯೋದಷ್ಟು ಸುಖ ಇನ್ನೊಂದಿಲ್ಲ ಎಂದು ತಿಳಿಸಿಕೊಟ್ಟವರು ನೀವು. ನಾನು ನನ್ನ ಮಕ್ಕಳು ಗರ್ಭದಲ್ಲಿದ್ದಾಗಿನಿಂದ ಆದ ಅಮೂಲ್ಯ ಕ್ಷಣಗಳನ್ನ ಬರೆದಿಟ್ಟುಕೊಂಡಿದ್ದೇನೆ, ಮಕ್ಕಳ ತಲೆಹರಟೆಗಳನ್ನೂ ಸಹ.
ನಿಮ್ಮ ಮಕ್ಕಳು, ಮೊಮ್ಮಕ್ಕಳು ಒಂದು ಬಾರಿಯೂ ನಿಮ್ಮ ಬಗ್ಗೆ ಒಂದು ಕೆಟ್ಟ ಮಾತನ್ನೂ ಆಡಿಲ್ಲ. ಆಷ್ಟರ ಮಟ್ಟಿಗೆ ನೀವು ಒಳ್ಳೆಯ ಪೇರೆಂಟ್ ಮತ್ತು ಗ್ರಾಂಡ್ ಪೇರೆಂಟ್. ನಿಮ್ಮ ಹಾಗೆ ಮಕ್ಕಳಿಗೆ ಕಥೆಗಳು, ಆದರ್ಶ ಮತ್ತು ಕನ್ನಡವನ್ನು ಸರಿಯಾಗಿ ಹೇಳಿಕೊಟ್ಟು ಬೆಳೆಸಬೇಕೆಂಬ ಆಸೆ ನನ್ನದು. ಅದಕ್ಕೆ ನೀವೆ ನನಗೆ ಶಕ್ತಿ ಕೊಡಬೇಕು.
ನನ್ನ ಮಗ ಮತ್ತು ಮಗಳು ಇಬ್ಬರೂ ಅವರ ತೊದಲು ಭಾಷೆಯಲ್ಲಿ ಕಥೆ ಹೇಳಲು ಶುರು ಮಾಡಿದ್ದಾರೆ. ಅದನ್ನ ನೀವೇ ಹೇಳಿಸುತ್ತಿರುವ ಗುಮಾನಿ ನನಗೆ. ಹೇಳಿಸಿದ್ದರೆ, ಅದನ್ನ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನೂ ಕರುಣಿಸಿ.
ನಿಮ್ಮ ಮತ್ತು ಅಪ್ಪನ ಪ್ರತಿರೂಪವಾಗಿಯೇ ನನ್ನ ಮಕ್ಕಳು ಬಂದಿದ್ದಾರೆ ಎಂದು ಅಂದುಕೊಂಡು ಮುಂದೆ ಜೀವನ ಸಾಗಿಸುತ್ತೇನೆ.
ಹ್ಯಾಪಿ ಬರ್ತಡೇ ಅಗೈನ್ ತಾತ, ಇನ್ನು ಆಕಾಶ, ನಕ್ಷತ್ರ ಎಲ್ಲಾ ಮೇಲೆ ನೋಡಿಕೊಂಡು ಕೂರೋದಿಲ್ಲ, ಯಾಕೆಂದರೆ ಈಗ ನೀವು ನನ್ನ ಮಕ್ಕಳಲ್ಲೇ ಇದ್ದೀರಾ…
ಇತಿ ನಿಮ್ಮ ಗುಡ್ಡಿ






0 Comments