ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋರಾಟದ ಕಥನ.. ‘ದೊಡ್ಡುಲಿ ಪೋಡಿನ ಕಲ್ಲಿ’

ಸೂರ್ಯನಾರಾಯಣ ಕೆದಿಲಾಯ

`ಕಿರುತೆರೆಯ ಆಕರ್ಷಣೆಯಿಂದ ರಂಗಭೂಮಿಯ ಚಟುವಟಿಕೆಗಳು ಕಡಿಮೆಯಾಗುತ್ತಿವೆ, ಪ್ರೇಕ್ಷಕರು ಮನೆಯಿಂದ ಹೊರಬರುತ್ತಿಲ್ಲ’’, ಎಂಬ ಆಪಾದನೆಯ ನಡುವೆಯೂ ಮುಖ್ಯಮಂತ್ರಿ, ಸದಾರಮೆ, ಜೋಕುಮಾರಸ್ವಾಮಿ, ಅತೀತಗಳಂತಹ ನಾಟಕಗಳು ನೂರಾರು ಬಾರಿ ಪ್ರದರ್ಶನಗೊಳ್ಳುವುದರೊಂದಿಗೆ, ಇಂದಿಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿವೆ ಎಂಬುದೂ ಸತ್ಯ.

70-80ರ ದಶಕದ ಕಾಲಕ್ಕೆ ಹೋಲಿಸಿದರೆ ನಿರಾಶೆಯಾದರೂ ಹೊಸ ಹೊಸ ನಾಟಕಗಳು ರಂಗಕ್ಕೇರುತ್ತಲೇ ಇವೆ, ಹೊಸ ತಂಡಗಳು ಬರುತ್ತಲೇ ಇವೆ. ಆದರೆ ಸಾಕಷ್ಟು ಪ್ರಚಾರದ ಕೊರತೆಗಳು ಅವುಗಳನ್ನು ಜನರಿಗೆ ತಲುಪಿಸುವುದರಲ್ಲಿ ವಿಫಲವಾಗುತ್ತಿರುವುದೂ ಸತ್ಯ. ಅದೆಷ್ಟೋ ಯುವ ಕಲಾವಿದರಿಗೆ ನಾಟಕದ ಹಿನ್ನೆಲೆಯು ಸಿನೆಮಾ ಮತ್ತು ದೂರದರ್ಶನಗಳಿಗೆ ಸೇತುವೆಯಾಗುತ್ತಿವೆಯಲ್ಲದೇ ತಮ್ಮ ಕಲಾಭಿರುಚಿಯನ್ನು ಹೊರಗೆ ತೆರೆದಿಡಲು ಮಾಧ್ಯಮವಾಗಿವೆ.

ಇತ್ತೀಚೆಗೆ ಯಶಸ್ವಿಯಾಗಿ ಪ್ರದರ್ಶನಗೊಂಡವುಗಳಲ್ಲಿ ಹೆಸರಿಸಬೇಕಾದ ರಂಗಪ್ರಯೋಗವೆಂದರೆ ಕೆ.ಎಂ. ವಿಜಯಲಕ್ಷ್ಮಿಯವರು ರಚಿಸಿದ ನಾಟಕ ‘ದೊಡ್ಡುಲಿ ಪೋಡಿನ ಕಲ್ಲಿ.’ ಸುಮಾರು ಇಪ್ಪತ್ತು ಉತ್ಸಾಹಿ ನಟ-ನಟಿಯರು, ಬಹುತೇಕರು ಯುವ ಕಲಾವಿದರು, ನಟಿಸಿದ ನಾಟಕವಿದು. ಇದನ್ನು ನಿರ್ದೇಶಿಸಿದವರು ಶರತ್ ಪರ್ವತವಾಣಿ ಮತ್ತು ಡಾ. ರಾಜಶ್ರೀ. ವಿಜಯಲಕ್ಷ್ಮಿಯವರು ಎಂಬತ್ತರ ದಶಕದ ಹೆಸರಾಂತ ನಾಟಕಕಾರರೂ ನಿರ್ದೇಶಕರೂ ಆದ ಪರ್ವತವಾಣಿಯವರ ಸೊಸೆಯಾಗಿದ್ದು ತಮ್ಮ ಮಾವನವರ ಹಾದಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದಾರೆ.

ಗುಡ್ಡಗಾಡಿನಲ್ಲಿ ವಾಸಿಸುತ್ತಾ ತಮ್ಮದೇ ಆದ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬದುಕುತ್ತಿರುವ ಕೆಲ ಆದಿವಾಸಿಗಳ ಗುಂಪಿನಲ್ಲಿ ದೊಡ್ಡುಲಿ ಪೋಡಿನವರದೂ ಒಂದು. ಪೋಡು ಎಂದರೆ ಹಾಡಿ ಎಂದರ್ಥ. ಇಲ್ಲಿನವರ ಭಾಷೆಯು ನಾಗರೀಕತೆಯ ಭಾಷೆಗಿಂತ ವಿಭಿನ್ನ ಎಂಬುದನ್ನು ಲೇಖಕಿ ಸಮರ್ಥವಾಗಿ ತೋರಿಸಿದ್ದಾರೆ. ಬಲಿಷ್ಠರು ದುರ್ಬಲರ ಮೇಲೆ ಹೇಗೆ ದಬ್ಬಾಳಿಕೆ ತೋರಿಸುತ್ತಾರೆ, ಅವರದ್ದನ್ನೆಲ್ಲಾ ಕಬಳಿಸಿಕೊಂಡು ಬೆಳೆಯಲು ಯತ್ನಿಸುತ್ತಾರೆ ಎಂಬ ಸಾರ್ವಕಾಲಿಕ ಸತ್ಯವನ್ನೂ ಈ ನಾಟಕ ಬಿಂಬಿಸುತ್ತದೆ.

ನೃತ್ಯ ಮತ್ತು ದೇವರ ಪೂಜೆಯೊಂದಿಗೆ ನಾಟಕ ಆರಂಭವಾಗುತ್ತದೆ. ಈ ಗುಂಪಿಗೆ ಹೊಸ ಸದಸ್ಯನೊಬ್ಬನ ಸೇರ್ಪಡೆಯಾಗಿದೆ, ಜನ ಸಂತಸದಿಂದ ಇದ್ದಾರೆ. ದೊಡ್ಡುಲಿ ಪೋಡು ತಮಗೆ ದೇವರು ಕೊಟ್ಟ ಭೂಮಿ ಎಂಬ ನಂಬಿಕೆ ಇವರದ್ದು. ಅಲ್ಲಿ ಬೆಳೆದ ಕಾಡಿನ ವಸ್ತುಗಳನ್ನು ನಗರದಲ್ಲಿ ಮಾರಿ ಜೀವನ ಸಾಗಿಸುತ್ತಾ ಶಾಂತಿಯಿಂದ ಇರುವ ಇವರಿಗೆ ಹೊರಗಿನವರು ಬಂದು, ಬಲವಂತವಾಗಿ ಊರನ್ನು ಬಿಟ್ಟು ತೆರಳುವಂತೆ ಆಜ್ಞಾಪಿಸುತ್ತಾರೆ. ಆದರೆ ಎಲ್ಲಿಗೆ ಹೋಗುವುದೆಂದು ತಿಳಿಯದ ನಿವಾಸಿಗಳು ಪ್ರತಿಭಟಿಸುತ್ತಾರೆ. ಆಗ ಆ ಹೊರಗಿನ ಆಗಂತುಕರು ಎಲ್ಲರನ್ನೂ ನಿರ್ದಯವಾಗಿ ಕೊಲ್ಲುತ್ತಾರೆ. ಏಟು ತಿಂದೂ, ಅತ್ಯಾಚಾರಕ್ಕೆ ಒಳಗಾಗಿಯೂ, ಹೇಗೋ ಬದುಕುಳಿವ ‘ಕಲ್ಲಿ’ ಎಂಬ ಯುವತಿ ತನ್ನ ದೇವರು, ಭಕ್ತರು ಮತ್ತು ದೇವಸ್ಥಾನಗಳನ್ನು ಉಳಿಸುವುದಕ್ಕಾಗಿ ಹೋರಾಡುತ್ತಾಳೆ ಎಂಬುದು ಸ್ಥೂಲ ಕತೆ.

ಜಾಗವನ್ನು ಆಕ್ರಮಿಸಿಕೊಳ್ಳುವುದಲ್ಲದೇ ಅಲ್ಲಿನ ದೇವಸ್ಥಾನದ ಜಾತ್ರೆಯ ಸಮಾರಂಭಕ್ಕೆ ಬರುವ, ಕೇಂದ್ರ ಗೃಹ ಮಂತ್ರಿಯನ್ನೂ ಸಾಯಿಸಲು ಈ ಗುಂಪು ಯೋಜಿಸುತ್ತದೆ. ಅವರು ಬರುವ ಸಮಯ, ಹೋಗುವ ದಾರಿ, ಇವೆಲ್ಲವನ್ನೂ ಮುಂಚಿತವಾಗಿಯೇ ತಿಳಿದುಕೊಂಡು, ಅಲ್ಲಿ ಬಾಂಬ್ ಸಿಡಿಸಿ ಹತ್ಯೆಗೆಯ್ಯುವ ಯೋಜನೆಯನ್ನು ನಿರೂಪಿಸುತ್ತಾರೆ. ಇಲ್ಲಿ ಕಾಣಿಸುವ ಮಂತ್ರಿಯು ಜನಪರ ಕಾರ್ಯವನ್ನು ಮಾಡುವ ‘ಒಳ್ಳೆಯ’ ರಾಜಕಾರಣಿಯಾಗಿರುವುದು ಒಂದು ವಿಶೇಷ. ಆದರೆ ಇಲ್ಲಿ ಆ ಮಂತ್ರಿ, ದೇವಸ್ಥಾನದ ಪೂಜಾರಿ, ಇವರು ರಂಗದ ಮೇಲೆ ಬಂದರೂ ಅವರ ಮುಖದರ್ಶನವಾಗುವುದಿಲ್ಲ. ಇವೆಲ್ಲವನ್ನೂ ಶವದಂತೆ ಮಲಗಿರುವ ಕಲ್ಲಿಯ ಬೆನ್ನಿನ ಮೇಲಿನ ಬಟ್ಟೆಯ ಮೇಲೆ ಬರೆಯುವ ಮೂಲಕ ಯೋಜನೆಯ ವಿಷಯವನ್ನು ಉಗ್ರರ ತಂಡದ ಮುಖಂಡ, ಇತರರಿಗೆ ವಿವರಿಸುತ್ತಾನೆ. ಆ ಹೊತ್ತಿಗೆ ಹುಲಿಯೊಂದರ ಗರ್ಜನೆ ಕೇಳಿ ಭಯಪಟ್ಟು ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಕಲ್ಲಿಯು ತೆವಳುತ್ತಾ, ತನಗೆ ತಿಳಿಯದ ‘ಪೊಲಿರುಸು’ರನ್ನು ಹುಡುಕಿ ಅವರ ಮುಂದೆ ನಡೆದುದೆಲ್ಲವನ್ನೂ ತಿಳಿಸುತ್ತಾಳೆ. ಮೊದಲು ನಿರ್ಲಕ್ಷಿಸಿದರೂ ವಿಷಯದ ಗಂಭೀರತೆಯನ್ನು ಅರಿತುಕೊಂಡು ಪೊಲೀಸರು ಕೆಟ್ಟಕೆಲಸ ಗೈದವರನ್ನು ಮಟ್ಟಹಾಕುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಮಾತು, ನೃತ್ಯ, ಹಾಸ್ಯ, ವ್ಯಂಗ್ಯಗಳು ನಾಟಕದ ಗಹನತೆಗೆ ಇನ್ನಷ್ಟು ಕಸುವು ನೀಡಿದವು. ಆರಂಬದಿಂದ ಅಂತ್ಯದ ವರೆಗೆ ಒಂದೇ ರೀತಿಯ ಕುತೂಹಲ ಹಾಗೂ ಆಕರ್ಷಣೆಯನ್ನು ಉಳಿಸಿಕೊಂಡ ಈ ನಾಟಕಕ್ಕೆ; ಸಮಯಕ್ಕೆ ಸರಿಯಾದ ಧ್ವನಿ, ಮಂದ ಬೆಳಕಿನ ಚಮತ್ಕಾರಗಳು. ಕ್ಷಿಪ್ರ ಚಲನೆಗಳು, ಆಕರ್ಷಕ ನಟನೆ, ಎಲ್ಲವೂ ಹೆಚ್ಚಿನ ಸತ್ವ ತುಂಬಿದವು. ಒಂದೆಂದರೆ, `ಪೋಡು’ ಎಂದರೆ ಹಸಿ ಹಸಿರಿನ ಕಾಡು ಎಂದು ತಿಳಿದವರಿಗೆ ಮಾತ್ರ, ಹಸಿರಿನ ಬಣ್ಣವಾಗಲೀ, ಹಸಿರಾಗಲೀ ಕಾಣಿಸುತ್ತಿಲ್ಲ ಎನಿಸಿದ್ದು ನಿಜ.

ಈ ನಾಟಕದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ಕಲಾವಿದರೂ ತುಂಬ ಚೆನ್ನಾಗಿಯೇ ಅಭಿನಯಿಸಿದರು. ಆದರೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಸೌಮ್ಯ ಗಂಗಟ್‍ಕರ್(ಕಲ್ಲಿ)ಳ ಶ್ರಮ ಮತ್ತು ಅರ್ಪಣೆಯನ್ನು ವಿಶೇಷವಾಗಿ ಪ್ರಶಂಸಿಸಲೇಬೇಕು. ಇದೇ ರೀತಿ, ಇನ್ಸ್‍ಪೆಕ್ಟರ್ ಹಸನ್‍ನ ಪಾತ್ರದಲ್ಲಿ ರಘು ಡೇಯಾರ್, ಅಮಾಸಿಯ ಪಾತ್ರ ವಹಿಸಿದ ಕೌಸ್ತುಭ್ ಜಯ್‍ಕುಮಾರ್, ನಾಟಕಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡ ಇನ್ನಿಬ್ಬರು ಕಲಾವಿದರು. ಇದು ಮೊದಲ ಪ್ರದರ್ಶನವೇ ಆದರೂ ತಯಾರಿಯ ಕಾರಣ ಎಲ್ಲೂ ಮುಕ್ಕು ಕಾಣಿಸಿಕೊಳ್ಳಲಿಲ್ಲ. ಹೆಸರಿಸಬಹುದಾದ ಇನ್ನಿತರ ಕಲಾವಿದರೆಂದರೆ, ವಿನಯ್ ಶಾಸ್ತ್ರಿ, ಶ್ರೀಹರಿ ಜಿ.ವಿ, ಕೆ. ಗೋಪಾಲಕೃಷ್ಣ ಮುಂತಾದವರು.

ಯಾವಾಗಲೂ, ಬೆಳಕು (ನವೀನ್) ಮತ್ತು ಸಂಗೀತಗಳು (ನಿಖಿಲ್ ಪಾರ್ಥಸಾರಥಿ), ನಿರೂಪಣೆಗೆ ಪುಷ್ಟಿ ನೀಡುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಇದೊಂದು ಯಶಸ್ವಿ ಪ್ರಯೋಗ ಎಂದೆನ್ನಬಹುದು. ನಾಟಕದ ಅವಧಿ 85 ನಿಮಿಷಗಳು. ಪ್ರೇಕ್ಷಕರ ಕರತಾಡನವು ರಂಗ ಪ್ರಯೋಗದ ಯಶಸ್ಸನ್ನು ಸೂಚಿಸುತ್ತದೆ ಮಾತ್ರವಲ್ಲ ಎಲ್ಲರ ಸಫಲ ಪರಿಶ್ರಮಕ್ಕೆ ದ್ಯೋತಕವಾಗಿದೆ.

 

‍ಲೇಖಕರು Avadhi GK

16 March, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading