ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಯ್! ಒಂದು ಒಸಗೆ ಒಯ್ಯುವುದಿತ್ತು ಮಾರಾಯ್ರೇ..

ಹೋಯ್! ಒಂದು ಒಸಗೆ ಒಯ್ಯುವುದಿತ್ತು ಮಾರಾಯ್ರೇ.

ಅಗಾ ಅಲ್ನೋಡಿ, ನಾಗಮ್ಮನ ಮನೆಯ ಸಣ್ಣ ಗೇಟು ಕಾಣಿಸ್ತದಾ? ಅದರ ಹುರಿಹಗ್ಗದ ಕೊಂಡಿ ತೆಗೆದು ಈಚೆ ಬನ್ನಿ. ಬಂದವರೇ ಗೇಟನ್ನು ಪುನಃ ಮುಚ್ಚಿಬಿಡಿ. ನಿಮ್ಮೆದುರಿಗಿರುವ ಹಾದಿಯುದ್ದಕ್ಕೂ ಒಂದ್ನಾಲ್ಕು ಹೆಜ್ಜೆ ಹಾಕಿದ ನಂತರ ನಿಮಗೆ ಎದುರಾಗುವುದು ಬೊಳ್ಳದ ಸಂಕ. ಅದನ್ನು ದಾಟಿಕೊಂಡೇ ಬನ್ನಿ.
ಸಂಕದ ಈಚೆ ಬದಿ ಇರುವುದೇ ಸೋಫಿ ಕಟ್ಟಿದ ಮನೆ. ಅದಕ್ಕೆ ತಾಗಿಕೊಂಡ ಪಾಚಿ ಕಟ್ಟಿದ ಪಾಗಾರದಾಚೆ ಯಾರ ನಿವಾಸ ಹೇಳಿ ನೋಡುವ? ಹೌದು, ಬಿಳಿ ನೈಲಾನು ಸೀರೆಯ ರೋಜಿಯದ್ದಲ್ವ. ಮತ್ತಿನ್ಯಾರದ್ದು ಎಂದುಕೊಂಡಿರಿ?

mitra venkataraj1ನೀವು ಬಂದರೆ ‘ಅಲ್ಲೇ ಇರು’ ಎನಿಸಿಕೊಂಡ ಝೇಬುನ್ನಿಸ ಕೂಡ ನಗುನಗುತ್ತ ಬಂದು ನಿಮ್ಮ ಜೊತೆ ಸೇರಿಕೊಂಡಾಳು, ಮೊದಲಿನಂತೆಯೇ. ಮತ್ತೆ ಬಾಬಿಯಕ್ಕ, ಪುರಾಣಮ್ಮ, ಅಂತಿ, ರುಕುಮಾಯಿ, ಈಗಲೂ ಅಟ್ಟ ಮುಟ್ಟ ತನ್ನ ದೇವಿ ಎನ್ನುವ ನಮ್ಮ ಗಿರಿಜೆ ಇವರೆಲ್ಲ ಸಿಗುವುದೇ ಸೈ! ಮಾಧವ, ಸೀತಾರಾಮ, ಪಾರ, ಲಕ್ಷ್ಮೀದೇವಿ, ಕಮಲಿ ಮೊದಲಾದವರೂ ಬಂದೇ ಬರುತ್ತೇವೆಂದು ಹೇಳಿದ್ದಾರೆ…

ಇಲ್ಲಿ ನೀವು ಮಕ್ಕಳಂತೆ ಕತಿ ಹೇಳ್, ಪಾರಕ್ಕ ಎಂದು ಪದೇ ಪದೇ ಪೀಡಿಸಬಹುದು. ಸೂಸನಳ ಪ್ರಬಂಧ ಓದಬಹುದು. ಹೂವಿನ ಪೂಜೆಯ ವಿಶಿಷ್ಟ ಘಮಲನ್ನು ಆಘ್ರಾಣಿಸಬಹುದು. ಗುರಿಕಾರ ರಾಮಯ್ಯನ ಮನೆಯ ಮಾಯಕದ ಸತ್ಯವಾದರೂ ಎಂಥದ್ದು ಎಂದು ಕುಷ್ಟ-ಗುಳ್ಳಿ-ಸೀನಣ್ಣರನ್ನು ಖುದ್ದಾಗಿ ಕೇಳಬಹುದು. ಎರಡನೆಯ ಅಂಕದ ನಂತರ ಪ್ರಮೋದಿನಿ ಯಾವ ದಾರಿಯಲ್ಲಿ ಸಾಗಿದಳು ಎಂದು ಕುತೂಹಲ ತಾಳಬಹುದು.

ಮತ್ತೆ ಸೀತೆ? ಇಲ್ಲೊಬ್ಬಳು ಸೀತೆ ಇದ್ದಾಳಲ್ಲ. ಸರಿಯಾಗಿ ನೋಡಿಕೊಳ್ಳಿ. ನಿಮ್ಮೊಳಗೇ ಇಲ್ಲವೆ ಅವಳು? ಓ ಅಲ್ಲಿ ಕಿಟಕಿಯಾಚೆಗಿನ ಮರದ ಹಸಿರಿನ ಮಧ್ಯೆ ಕೂತು ಪಿಳಿಪಿಳಿ ಕಣ್ಣಿನಿಂದ ಎಲ್ಲವನ್ನೂ ವೀಕ್ಷಿಸುತ್ತಿರುವುದು ಹಕ್ಕಿಯೋ ಅವಳೋ?

ಜನವರಿ 29, 2016. ಜೆ.ಪಿ. ನಾಯಕ್ ಭವನ, ವಿದ್ಯಾನಗರಿ, ಸಾಂತಾಕ್ರೂಜ್(ಪೂ), ಮುಂಬಯಿ. ಮಧ್ಯಾಹ್ನ 2 ರಿಂದ.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸುತ್ತಿರುವ ಮಿತ್ರಾ ವೆಂಕಟ್ರಾಜ್ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ನಮ್ಮೊಂದಿಗೆ ಖ್ಯಾತ ವಿಮರ್ಶಕರಾದ ಎಸ್.ಆರ್. ವಿಜಯಶಂಕರ್ ಇರುತ್ತಾರೆ. ಮಿತ್ರಾ ಅವರ ಅಭಿನಂದನ ಗ್ರಂಥ ಮಿತ್ರಾವಳಿಯನ್ನು ಲೇಖಕ ಡಾ. ವ್ಯಾಸರಾವ್ ನಿಂಜೂರು ಲೋಕಾರ್ಪಣೆ ಮಾಡುತ್ತಾರೆ. ವಿಭಾಗದ ಮುಖ್ಯಸ್ಥರೂ ಈ ಗ್ರಂಥದ ಸಂಪಾದಕರೂ ಆಗಿರುವ ಡಾ. ಜಿ.ಎನ್. ಉಪಾಧ್ಯ ಇರುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಸ್ವತಃ ಮಿತ್ರಾ ಅಲ್ಲಿ ಸಿಗುತ್ತಾರೆ.

ಈಗ ಹೇಳಿ, ನೀವು ಬರದೇ ಇದ್ದರೆ ಹೇಗೆ?

‍ಲೇಖಕರು Admin

28 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading