ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..

ಕಲ್ಲೇಶ್ ಕುಂಬಾರ್

  • ಬದುಕನ್ನು ಬರಹದ ಭಾಗವಾಗಿಸಿಕೊಂಡಿರುವ ಪರಿಶುದ್ಧ ಮನುಷ್ಯ!

ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆದುಕೊಂಡು ಬರುತ್ತಿರುವ ನಮ್ಮ ನಡುವಿನ ಅತ್ಯಂತ ಸೃಜನಶೀಲ ಮನಸ್ಸಿನ ಹಿರಿಯ ಬರಹಗಾರರಾದ ಡಾ.ಬಾಳಾಸಾಹೇಬ ಲೋಕಾಪುರ ಅವರದು ಸಾಹಿತ್ಯಲೋಕದ ಕನ್ನಡ ಕಥನ ಪ್ರಕಾರದಲ್ಲಿ ದೊಡ್ಡ ಹೆಸರು. ಒಂದು ತೆರದಲ್ಲಿ ಹೊಸ ತಲೆಮಾರಿನ ಬರಹಗಾರರಿಗೆ ಅವರ ಸಾಹಿತ್ಯವೇ ಒಂದು ಕಥನದ ಮಾದರಿಯಾಗಿದೆ. ಇವರು ಕಥೆ ಕಟ್ಟುವ ಬಗೆಯನ್ನು ಬದಲಾದ ಕಾಲಘಟ್ಟದಲ್ಲಿ ಬದಲಾದ ಅಗತ್ಯಗಳಿಗೆ ತಕ್ಕಂತೆ ಬರವಣಿಗೆಯನ್ನು ಮರುರೂಪಿಸಿಕೊಳ್ಳುವ ಗುರುತರವಾದ ಜವಾಬ್ದಾರಿಯನ್ನು ಹೊತ್ತವರು.

ಸದಾ ಚಟುವಟಿಕೆಯಿಂದಿರುವ, ಬದುಕನ್ನು ಅಗಾಧವಾಗಿ ಪ್ರೀತಿಸುವ ಬಾಳಾಸಾಹೇಬ ಅವರ ಬದುಕು ಮತ್ತು ಬರಹವನ್ನು ಬದಿಗಿರಿಸಿ ಇಡಿಯಾಗಿ ಅವರ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟಸಾಧ್ಯ! ಅವರ ವ್ಯಕ್ತಿತ್ವಕ್ಕೊಂದು ಪರಿಪೂರ್ಣವಾದ ಆಕಾರ ಕೊಡಬೇಕೆಂದರೂ ಅವರ ಇನ್ನಾವುದೋ ಗುಣ, ಸ್ವಭಾವ, ನಡಾವಳಿ ಹೊರಗುಳಿದು ಬಿಡುತ್ತವೆ. ಅಷ್ಟರ ಮಟ್ಟಿಗೆ ತಮ್ಮ ಸುತ್ತಲ ಲೋಕದ ಹೊಸ ಹೊಸ ಸಂಗತಿಗಳೊಂದಿಗೆ ಮತ್ತು ಸ್ವಯಂ ತಾವು ನಿರ್ವಹಿಸುತ್ತಿರುವ ಬದುಕಿನೊಂದಿಗೆ ನವನವೀನವಾಗಿರುವಂತೆ ಮುಖಾಮುಖಿಯಾಗಬಲ್ಲ ವ್ಯಕ್ತಿತ್ವ ಅವರದು.

ಮೇಲಿನ ಮಾತಿಗೆ ಸಾಕ್ಷಿಯಾಗಿ ಅವರಿಗೆ ಸಂಬಂಧಿಸಿದ ಕೆಲವು ಖಾಸಗಿ ವಿಚಾರಗಳನ್ನು ಹೇಳುವುದಾದರೆ, ತಮ್ಮ ಹೊಲದಲ್ಲಿ ಕೆಲಸ ಮಾಡುವ ಕೂಲಿ ಆಳುಗಳೊಂದಿಗೆ ಕುಳಿತು ಮಾತನಾಡುವಾಗ ಅಪ್ಪಟ ರೈತನಂತೆ, ತರಗತಿಗಳಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬದುಕನ್ನು ರೂಪಿಸಬಲ್ಲ ಪ್ರಾಮಾಣಿಕ ಅಧ್ಯಾಪಕನಂತೆಯೂ, ಸಾಹಿತ್ಯ ಅಕಾಡೆಮಿಗಳು, ಸಾಹಿತ್ಯ ಪ್ರತಿಷ್ಠಾನಗಳು ಏರ್ಪಡಿಸುವ ಕಥಾ ಕಮ್ಮಟಗಳಲ್ಲಿ ನಿರ್ದೇಶಕರೋ ಅಥವಾ ಸಂಪನ್ಮೂಲ ವ್ಯಕ್ತಿಗಳೋ ಆಗಿ ಹೋದಾಗ ತಮಗಿಂತ ಕಿರಿಯ ಬರಹಗಾರರೊಂದಿಗೆ ಒಡನಾಡುವಾಗಾಗಲಿ, ಇಲ್ಲವೇ ಗಂಟೆಗಟ್ಟಲೆ ಅವರೆದುರು ಕುಳಿತು ಸಾಹಿತ್ಯದ ಕುರಿತು ಮಾತನಾಡುವಾಗ ತಮ್ಮ ಬದುಕನ್ನೇ ಬರಹದ ಭಾಗವಾಗಿಸಿಕೊಂಡಿರುವ ಪರಿಶುದ್ಧ ಮನುಷ್ಯನಂತೆಯೂ ಕಂಡು ಬರುತ್ತಾರೆ.

ಹಾಗೆ ನೋಡಿದರೆ ಅವರು ಸ್ವಯಂ ತಾವೇ ದಾರಿ ರೂಪಿಸಿಕೊಂಡು, ಹೆಜ್ಜೆ ಮೂಡಿಸದೆ ಹರಿಯುವ ನದಿಯಂತೆ ಮತ್ತು ಸಮಯವನ್ನೇ ಹಿಂದಿಕ್ಕಿ ಓಡುವ ಗಾಳಿಯಂತೆ ಕಂಡು ಬರುತ್ತಾರೆ. ಅಂತೆಯೇ ಅವರಲ್ಲಿ ಕಪಟವಿಲ್ಲ; ಯಾವ ವಂಚನೆ ಇಲ್ಲ; ಪ್ರಶಸ್ತಿ ಪುರಸ್ಕಾರಗಳ ಕುರಿತಾದ ಹಪಹಪಿ ಇಲ್ಲ, ತನ್ನತನ ಪ್ರದರ್ಶಿಸುವ ಅಹಂಮಿಕೆ ಇಲ್ಲ! ಕಟ್ಟಕಡೆಗೆ ಈ ಎಲ್ಲವುಗಳನ್ನು ಮೀರಿ ಕಾದಂಬರಿಕಾರ ಬಾಳಾಸಾಹೇಬರು ಈ ಲೋಕದಲ್ಲಿನ ಮನುಷ್ಯ ಮತ್ತು ಮನುಷ್ಯೇತರ ಜೀವ ಸಂಕುಲಗಳ ಬಗ್ಗೆ ತಮ್ಮ ಕಥೆ, ಕಾದಂಬರಿಗಳ ಮೂಲಕ ಅಂತಃಕರಣ ಹಾಗೂ ಮಾನವೀಯತೆಯನ್ನು ಮಿಡಿಯುವ ಪರಿಶುದ್ಧ ಬರಹಗಾರನಂತೆಯೂ ಕಂಡು ಬರುತ್ತಾರೆ. ಏಕೆಂದರೆ, ಅದು ಅವರ ವಿಶಿಷ್ಟ ಗುಣ ಮತ್ತು ಸ್ವಭಾವವೇ ಆಗಿದೆ!

‍ಲೇಖಕರು Admin

21 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading