ಮಾನವೀಯತೆ
-ಚಂದು ಹೊನ್ನವಳ್ಳಿ
ಅದೊಂದು ಸಭ್ಯ ನಾಗರಿಕರ ಆಧುನಿಕ ಹಾಗೂ ಶಾಂತ ನಗರ, ತಲೆ ಎತ್ತಿ ನೋಡಿದರೂ ಕಾಣ ಸಿಗದ ಎತ್ತರವಾದ ಕಟ್ಟಡಗಳು, ಹಳ್ಳಿಗಾಡಿನ ಸೊಬಗೇ ನಾಚುವಂತೆ ಹಚ್ಚ ಹಸಿರಿನಿಂದ ಕೂಡಿದ ಉದ್ಯಾನವನಗಳು, ಶುಭ್ರವಾದ ಕಪ್ಪು ಡಾಂಬರು ರಸ್ತೆಗಳು, ಕಣ್ಣಿಗಂತು ಹಬ್ಬವನ್ನುಂಟು ಮಾಡುವ ದೃಶ್ಯವದು.
ಮೂಲತಃ ಹಳ್ಳಿಯವನಾಗಿದ್ದ ನನಗೆ ಆ ದೃಶ್ಯಾವಳಿಗಳು ಸ್ವರ್ಗದಲ್ಲೆ ವಿಹರಿಸುತ್ತಿರುವಷ್ಟು ಮುದವನ್ನುಂಟು ಮಾಡುತ್ತಿದ್ದವು, ಹಾಗೆಯೆ ಮೈ ಮರೆತು ಕೊಂಚ ದೂರ ನೆಡೆದು ಹೋದ ನನಗೆ ಎಲ್ಲೋ ಯಾರೋ ನರಳುತ್ತಿರುವ ಸದ್ಧು ತಟ್ಟನೆ ಕಿವಿಗೊಡೆದು ವಾಸ್ತವಕ್ಕೆ ಕರೆತಂದಿತು.
ನಾನು ನಿಂತಿದ್ದ ರಸ್ತೆಯಂಚಿನಿಂದ ಕೊಂಚ ದೂರದಲ್ಲಿ ಉದ್ದ ಕಟ್ಟಡಗಳ ಬಾಲ್ಕನಿಯಲ್ಲಿ ಕೆಲ ನಾಗರಿಕ ಗೃಹಿಣಿಯರು ನನ್ನೆಡೆ ನೋಡುತ್ತಿರುವಂತೆನಿಸಿತು, ಸುತ್ತಲೂ ಒಮ್ಮೆ ಕಣ್ಣಾಯಿಸಿದೆ, ನಾನು ನಿಂತಿದ್ದ ರಸ್ತೆಯ ಎಡ ಭಾಗದಲ್ಲಿ ಒಬ್ಬ ವಯಸ್ಸಾದ,ಮಾಸಲು ಬಟ್ಟೆ, ವಾರಗಟ್ಟಲೆ ಸ್ನಾನವೇ ಕಾಣದ ಮೈಯಿಂದ ದುರ್ವಾಸನೆ ಬೀರುತ್ತಿದ್ದ ಹಳ್ಳಿಯ ಮುದುಕನೊಬ್ಬ ಪಿಡ್ಸ್ ಬಂದು ಒದ್ದಾಡುತ್ತಿದ್ದ, ಕ್ಷಣದಲ್ಲಿ ನನ್ನೊಳಗೆ ಏನೋ ಸಂಕಟವಾದಂತಾಯಿತು, ತಕ್ಷಣ ಯಾವುದಾದರೂ ಕಬ್ಬಿಣದ ವಸ್ತು ಸಿಗುವುದೇ ಎಂದು ಸುತ್ತ ಹುಡುಕಾಡಿದೆ, ಕೊನೆಗೆ ಏನೂ ಸಿಗದೆ ಅಲ್ಲೇ ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದ ಗೃಹಿಣಿಯರ ಸಹಾಯ ಕೇಳಲು ಎತ್ನಿಸಿದೆ, ನಾನು ಅವರ ಕಡೆ ಹೋಗುತ್ತಿರುವುದನ್ನು ಗಮನಿಸಿ ಕೆಲವರಂತು ದೆವ್ವ ಕಂಡವರ ಹಾಗೆ ಮನೆಯೊಳಗೆ ಓಡಿ ಬಾಗಿಲು ಜಡಿದುಕೊಂಡರು, ಇನ್ನೂ ಕೆಲವರು ಅಯ್ಯೋ, ಅವನು ಯಾವ ಜಾತಿಯವನೋ,ಅವನನ್ನು ಹೇಗೆ ಮುಟ್ಟುವಿರಿ ಅಂತೆಲ್ಲಾ ಅಸಹ್ಯಕರ ಪ್ರಶ್ನೆಗಳ ಕೇಳತೊಡಗಿದರು, ಕೊನೆಗೆ ಯಾರೋ ಒಬ್ಬರು ಸಭ್ಯರಲ್ಲಿ ಸಭ್ಯ ಗೃಹಿಣಿ ತಮ್ಮ ಮನೆಯಲ್ಲಿ ನಾಯಿ ಕಟ್ಟಲು ಉಪಯೋಗಿಸುತ್ತಿದ್ದ,ತುಕ್ಕು ಹಿಡಿದು ಮೂಲೆ ಸೇರಿದ್ದ ಸರಪಳಿಯನ್ನು ಕೊಟ್ಟರು. ಅದನ್ನೇ ತೆಗೆದುಕೊಂಡು ಆ ವಯಸ್ಸಾದ ವ್ಯಕ್ತಿಯ ಕೈಗಿಟ್ಟೆ.

ತಿನ್ನಬಾರದ್ದನ್ನು ತಿಂದು ದೇಹದ ಸುತ್ತ 4 ಸುತ್ತು ಕೊಬ್ಬು ಹೆಚ್ಚಾದ, ಅದನ್ನು ಕರಗಿಸಲು ಹಗಲು ರಾತ್ರಿ ವಾಕಿಂಗ್ ಮಾಡುವ ದಢೂತಿ ನಾಗರಿಕನೊಬ್ಬ ಅದೇ ರಸ್ತೆಯಲ್ಲಿ ಬಂದ, ಅವನ ಮುಖವನ್ನೊಮ್ಮೆ ಸಹಾಯ ಕೋರುವ ದೃಷ್ಟಿಯಲ್ಲಿ ನೋಡಿದೆ, ಆ ಪುಣ್ಯಾತ್ಮ ಬೆಂಕಿ ತುಳಿದವನಂತೆ ಒಂದು ಮಾರು ದೂರದಲ್ಲಿ ನಿಂತು ಸಾರ್,ಅವರ ಕಾಲಿನ ಹೆಬ್ಬೆರಳು ಬಿಗಿಯಾಗಿ ತುಳಿಯಿರಿ ಎಂದು ಆಜ್ಞೆಯಿತ್ತ, ಏನೂ ಮಾಡಲು ತೋಚದೆ ಒದ್ದಾಡುತ್ತಿದ್ದ ನನಗೆ ಅವನ ಮಾತು ಕೊಂಚ ಧೈರ್ಯ ತಂದಿತು, ಸ್ವಲ್ಪ ನೀರು ಕುಡಿಸಿ ಎಂಬ ಧ್ವನಿ ಕೇಳಿ ಹಿಂತಿರುಗಿದೆ, ಅಲ್ಲಿ 8 ಪಟ್ಟು ಕೊಬ್ಬು ಹೆಚ್ಚಿ ನಿಂತಿದ್ದ ಇನ್ನೊಬ್ಬ ಧಡೂತಿ ಆಸಾಮಿ, ಅವನನ್ನೆ ಸಾರ್, ಸ್ವಲ್ಪ ನೀರು ತಂದು ಕೊಡಿ ಎಂದೆ, ಅವನ ಮುಖದಲ್ಲಿ ಕಾಣುತ್ತಿದ್ದ ಹೊಳಪು ಕ್ಷಣಾರ್ಧದಲ್ಲಿ ಮಾಯವಾಯಿತು, ಇರಲಾರದೆ ಇರುವೆ ಬಿಟ್ಟುಕೊಂಡೆನಲ್ಲಾ ಎಂದುಕೊಂಡು ಒಲ್ಲದ ಮನಸಿನಲ್ಲಿ ಹೆಜ್ಜೆ ಎಣಿಸುತ್ತ ಪಕ್ಕದಲ್ಲೇ ಇದ್ದ ಅವನ ಮನೆಗೆ ಹೋಗಿ ಯಾವುದೋ ಪ್ಲಾಸ್ಟಿಕ್ ಡಬ್ಬದಲ್ಲಿ ನೀರು ತೆಗೆದುಕೊಂಡು ಹೊರ ಬಂದ, ತಕ್ಷಣ ಹಿಂದಿನಿಂದ ಅವನ ಮಡದಿಯ ಧ್ವನಿ ಕೇಳಿಸಿತು, ಯಾಕ್ರೀ, ಟಾಯ್ಲೆಟ್ ಮಗ್ ತಗೊಂಡು ಹೋಗ್ತಿದಿರಾ?, ಒಮ್ಮೆಲೆ ನನ್ನ ಕೋಪ ನೆತ್ತಿ ಮುಟ್ಟಿ ಆ ಮುದುಕನ ಅವಸ್ಥೆ ನೋಡಿ ಕಾಲ ಬೆರಳಿಗೆ ಇಳಿದು ಹೋಯ್ತು, ಆಧುನಿಕತೆಯ ಮರುಭೂಮಿಯಲ್ಲಿ ಆ ಪ್ಲಾಸ್ಟಿಕ್ ಡಬ್ಬದಲ್ಲಿದ್ದ ನೀರು ಓಯಸ್ಸೀಸ್ನಂತೆ ತೋರಿತು, ಅದನ್ನೆ ಆ ಮುದುಕನ ಮುಖಕ್ಕೆ ಚಿಮುಕಿಸಿದರು, ಸಧ್ಯ ಅವರಿಗೆ ಸ್ವಲ್ಪ ಜ್ಞಾನ ಬಂದು ಎದ್ದು ಕುಳಿತಾಗ ನನ್ನ ಮನಸ್ಸು ತಣ್ಣಗಾಯಿತು, ಅಲ್ಲೆ ಶಾಲೆಗೆ ಹೋಗುತ್ತಿದ್ದ ಚಿಕ್ಕ ಮಗು ಹತ್ತಿರ ಬಂದು ಏನಾಯ್ತು ಅಂಕಲ್ ಎಂದು ಆ ಮುದುಕನ ಮುಖ ನೋಡಿ, ತನ್ನ ಹತ್ತಿರ ಇದ್ದ ತಾನು ಕುಡಿಯಲು ಇಟ್ಟುಕೊಂಡಿದ್ದ ವಾಟರ್ ಕ್ಯಾನ್ ನಿಂದ ಆ ಮುದುಕನಿಗೆ ನೀರು ಕುಡಿಸತೊಡಗಿದ, ತಕ್ಷಣ ಹಿಂದೆ ಬರುತ್ತಿದ್ದ ಆತನ ತಂದೆ ಓಡಿ ಬಂದು ಆ ಮಗುವಿಗೆ ತಲೆಯ ಮೇಲೆ ಹೊಡೆದು ದೂರ ಎಳೆದಾಗ ಮಗುವಿನ ಮುಖದಲ್ಲಿ ಮೂಡಿದ ನೋವಿಗೆ ಒಮ್ಮೆಲೆ ನನ್ನ ಹೃದಯ ಒಡೆದಂತಾಯಿತು.ಆಧುನಿಕ ಪ್ರಪಂಚದ ವಿಧ್ಯಾವಂತ ನಾಗರಿಕ ಸಮಾಜವೆಂದರೆ ಹೀಗೇನಾ ಎನ್ನುವ ಪ್ರಶ್ನೆ ಕಾಡತೊಡಗಿತು.
ಈ ಆಧುನಿಕತೆಯ ಭರಕ್ಕೆ ಎಷ್ಟೋ ಮುಗ್ಧ ಮನಸ್ಸುಗಳಿಗೆ ಮಾನವೀಯತೆ ಎಂದರೆ ಕೇವಲ ಕೆಲ ಪುಟಗಳಿಗೆ ಸೀಮಿತವಾದ ಪಠ್ಯವಾಗಿಯೇ ಉಳಿದಿದೆ.
ಅಷ್ಟುಹೊತ್ತು ಆ ನಗರದ ಬಾಹ್ಯ ಸೌಂಧರ್ಯ ನೋಡಿ ನನ್ನೊಳಗೆ ಕಟ್ಟಿಕೊಂಡಿದ್ದ ಸ್ವರ್ಗದ ಕಲ್ಪನೆ ಹೊಡೆದು, ಕೇವಲ ರೋಬೊಗಳಿಂದ ಕೂಡಿದ ಯಾವುದೋ ಆಂಗ್ಲ ಸಿನಿಮಾ ತರಹ ಕಾಣ ತೊಡಗಿತು, ಉಸಿರಾಡುತ್ತ ನಡೆದಾಡುವ ಜೀವವಿಲ್ಲದ ಶವಗಳ ನೋಡಿದಂತಾಯಿತು,
ಕೇವಲ ಆ ವಯಸ್ಸಾದ ವ್ಯಕ್ತಿಯ ಕೊಳಕಾದ ಬಟ್ಟೆ, ವಾಸನೆ ಬೀರುತ್ತಿದ್ದ ಮೈಯಿಂದಾಗಿ ಅವನ ಜೀವಕ್ಕೂ ಈ ತಾಂತ್ರಿಕ ಜಗತ್ತಿನಲ್ಲಿ ಬೆಲೆಯೇ ಇಲ್ಲದಂತಾಯಿತೇ? ಅಥವ ಆಧುನಿಕ ಹಾಗೂ ಆಡಂಭರ ಬದುಕಿನಲ್ಲಿ ಮಾನವೀಯತೆ ಎನ್ನುವುದೆ ಮರೆಯಾಗಿ ಹೋಯಿತೇ? ಕುಲ,ಮೇಲು ಕೀಳು ಎನ್ನುವ ಕಲ್ಮಷ ಮನಸ್ಥಿತಿ ಆಧುನಿಕತೆಯ ನಡುವೆಯೂ ಬದುಕಿದೆಯೇ? ಇಂತಹ ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಮುಳ್ಳಿನಂತೆ ಚುಚ್ಚತೊಡಗಿದವು.
ಅಷ್ಟು ಹೊತ್ತು ಅಲ್ಲಿನ ತಂಗಾಳಿ ಸವಿಯುತ್ತ ನೆಡೆಯುತ್ತಿದ್ದ ನನಗೆ ಗಾಳಿಯೂ ಕೊಳೆತ ಹೆಣಗಳ ದುರ್ವಾಸನೆಯಾಗಿ ಮಾರ್ಪಟ್ಟಿತು,ಎತ್ತರವಾಗಿ ನಿಂತಿದ್ದ ಕಟ್ಟಡಗಳೂ ಸಮಾಧಿಗಳಾಗಿ ಕಾಣತೊಡಗಿದವು, ಆ ವ್ಯಕ್ತಿಯ ಕೃತಜ್ಞತಾ ಭಾವದಿಂದ ಕೂಡಿದ ಮುಖವನ್ನೊಮ್ಮೆ ನೋಡಿ ಆ ನರಕದಿಂದ ಹೊರಬಿದ್ದರೆ ಸಾಕೆನ್ನುವಂತೆ ವೇಗದಿಂದ ನಡೆದು ತನ್ನ ಊರಿನ ದಾರಿ ಹಿಡಿದೆ.





This can’t be a story, but is a vivid depiction of reality in day today life. The unattached suggestions of the passers-by, bringing water for drinking in a toilet mug are all realities. The way a small kid gives his water bottle for feeding the old man indicates his unadulterated mind. To top the events, boy’s father beats the boy!
Well written. You have given words to reality of life.
manaviyathe ge gramina parisarave chenna
I really appreciate the intention of writing this story. But I am concerned. One should not give water when person is having pits. It just blocks there breathing. I have seen worst effect of that.
Just that your good story should not mislead