‘ಬದುಕು’ವುದನ್ನು ಮರೆಸುವ ಕಾತರಗಳು
‘ಶಾಲೆಯಲ್ಲಿರುವಾಗ ಹೈಸ್ಕೂಲು ಮುಗಿಸಿ ಕಾಲೇಜು ಸೇರಬೇಕೆನ್ನುವ ಕಾತರದಿಂದ ಸಾಯುತ್ತಿದ್ದೆ;
ಆಮೇಲೆ ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ಕಾತರದಿಂದ ಸಾಯುತ್ತಿದ್ದೆ ;
ಮತ್ತೆ ಮದುವೆಗಾಗಿ, ಮದುವೆಯ ನಂತರ ಮಕ್ಕಳು ಬೇಕೆನ್ನುವ ಕಾತರದಿಂದ ಸಾಯುತ್ತಿದ್ದೆ;
ಮಕ್ಕಳಾದ ಮೇಲೆ ಅವರನ್ನು ಬೆಳೆಸುವ ಕಾತರದಲ್ಲಿ, ಬೆಳೆದಮೇಲೆ ಅವರು
ಅವರ ಕಾಲಲ್ಲಿ ನಿಲ್ಲುವುದನ್ನು ನೋಡಬೇಕೆನ್ನುವ ಕಾತರದಿಂದ ಸಾಯುತ್ತಿದ್ದೆ;
ಮಕ್ಕಳ ಜವಾಬ್ದಾರಿ ಮುಗಿದ ಮೇಲೆ ನನ್ನ ಕೆಲಸಗಳನ್ನು ಮಾಡಬಹುದಲ್ಲ ಎಂದು ಲೆಖ್ಖ ಹಾಕಿದ್ದೆ.
ಆದರೆ, ಅಷ್ಟರಲ್ಲೇ ನಿವೃತ್ತನಾಗುವ ಕಾಲ ಸಮೀಪಿಸಿತ್ತು. ನನಗಾಗಿ ಬದುಕುವ ಕಾಲ ಕಳೆದು ಹೋಗಿತ್ತು.
ಈಗ ಸಾವಿಗಾಗಿಯೇ ಸಾಯುತ್ತಿದ್ದೇನೆ.
ಸಾವು ಹತ್ತಿರವಾಗಿರುವ ಈ ಕ್ಷಣಗಳಲ್ಲಿ ಅನಿಸುತ್ತಿದೆ
ಈ ಎಲ್ಲ ಕಾತರಗಳ ಜಂಜಾಟದಲ್ಲಿ ದಿನಾ ಸ್ವಲ್ಪ ಸ್ವಲ್ಪ ಸಾಯುತ್ತಲೇ
‘ಬದುಕು’ವುದನ್ನೇ ಮರೆತೇ ಇದ್ದೆ ಎಂದು!
ನಿಮ್ಮಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ
ನಿಮ್ಮ ಜೀವನ ಹೀಗಾಗದಂತೆ ನೋಡಿಕೊಳ್ಳಿ
ಜೀವನದ ಪ್ರತಿಯೊಂದು ಘಟ್ಟವನ್ನೂ ಸಂತೋಷದಿಂದ ಸ್ವಾಗತಿಸಿ
ಪ್ರತಿಯೊಂದು ದಿನವನ್ನೂ ತುಂಬು ಹೃದಯದಿಂದ ಅನುಭವಿಸಿ
ಪ್ರತಿಯೊಂದು ಕ್ಷಣದಲ್ಲೂ ಖುಷಿ ಖುಷಿಯಾಗಿ ಬದುಕಿ
ಕಾತರಗಳ ಭಾರ ಹೊತ್ತು ಬದುಕುವುದನ್ನು ಮರೆಯಬೇಡಿ!
ಹಣಮಾಡಲು ಆರೋಗ್ಯ ಕಳಕೊಳ್ಳುತ್ತೇವೆ
ಆರೋಗ್ಯ ಪಡೆಯಲು ಹಣ ಕಳಕೊಳ್ಳುತ್ತೇವೆ!
ಸಾವೇ ಇಲ್ಲವೇನೋ ಎಂದು ಬದುಕುತ್ತೇವೆ.
ಸಾಯುವಾಗ ನಾವು ಬದುಕಿಯೇ ಇಲ್ಲವೇನೋ ಎನ್ನುವಂತೆ ಸಾಯುತ್ತೇವೆ!’
ಈ ಸಾಲುಗಳು ನನ್ನವಲ್ಲ. ಯಾರೋ ಅನಾಮದೇಯ ‘ಹಳೆಯ ಗೆಳೆಯ’ ಎನ್ನುವ ಹೆಸರಿನಿಂದ ಬರೆದಿದ್ದ ಕೆಲವು ಸಾಲುಗಳ ಭಾವಾನುವಾದ. ಇದನ್ನು ಪದೇ ಪದೇ ಓದುತ್ತಾ ಅಲ್ಲಿ ಅಡಗಿದ್ದ ವಾಸ್ತವ ನನ್ನನ್ನು ಬಹಳ ಕಾಡಿತ್ತು! ತಲೆತಲಾಂತರದಿಂದ ಎಲ್ಲರೂ ಮಾಡುತ್ತಲೇ ಬಂದಿರುವ, ಈಗಲೂ ಮಾಡುತ್ತಿರುವ ತಪ್ಪುಇದು. ಎಲ್ಲದಕ್ಕೂ ಕಾತರಿಸುತ್ತಾ ‘ಬದುಕು’ವುದನ್ನು ಮರೆತು ದಿನಾ ಸ್ವಲ್ಪ ಸ್ವಲ್ಪ ಸಾಯುತ್ತಲೇ ಇರುವ ತಪ್ಪು.
ಈಗ ಸಾವಿನ ಸನಿಹದಲ್ಲಿ ಬಂದು ನಿಂತಿರುವ ಹೆಚ್ಚಿನ ಹಿರಿಯ ನಾಗರಿಕರು ಮಾಡಿದ್ದೂ ಈ ತಪ್ಪನ್ನೇ. ವಿದ್ಯೆ, ಸಂಪಾದನೆ, ಮದುವೆ, ಮನೆ ಮಕ್ಕಳು ಅವರ ವಿದ್ಯಾಭ್ಯಾಸ, ಅವರ ಮದುವೆ ಎನ್ನುವ ಕಾತರದಲ್ಲಿ ಬದುಕುವುದನ್ನು ಮರೆತು, ಬದುಕಿನ ಖುಷಿಯನ್ನು ಅನುಭವಿಸಲು ಸಾಧ್ಯವಾಗದೆ ಜೀವನವಿಡೀ ನಿಟ್ಟುಸಿರು ಬಿಡುತ್ತಲೇ ದಿನಾ ಸ್ವಲ್ಪ ಸ್ವಲ್ಪ ಸಾಯುತ್ತಲೇ ಆಯಸ್ಸು ಕಳೆದು ಕೊನೆಯ ಸಾವಿಗೆ ಹತ್ತಿರವಾದದ್ದು. ಬದುಕನ್ನು ರಿವೈಂಡ್ ಮಾಡುವುದು ಸಾಧ್ಯವಿಲ್ಲ. ಬದುಕಿಯೇ ಇಲ್ಲ ಎನ್ನುತ್ತಾ ಸಾವನ್ನು ಸ್ವಾಗತಿಸುವುದಷ್ಟೇ ಈಗ ಅವರಿಗೆ ಉಳಿದದ್ದು.
ವೃದ್ದಾಪ್ಯದಲ್ಲಿ ಎಷ್ಟು ಜನ ಸುಖವಾಗಿದ್ದಾರೆ ಎನ್ನುವುದನ್ನು ಯಾರಾದರೂ ಸರ್ವೆ ಮಾಡಿದರೆ, ಎಲ್ಲಾ ಸರಿಯಾಗಿ ಸಂತೋಷದಿಂದಿದ್ದೇವೆ ಎನ್ನುವವರು ಎಷ್ಟು ಜನ ಸಿಗಬಹುದು? ಎನ್ನುವ ಪ್ರಶ್ನೆ ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ. ಎಲ್ಲರ ಮನೆಯ ದೋಸೆಯೂ ತೂತೇ.
ಮೊನ್ನೆ ಮನೆಯ ಎದುರು ನಿಂತುಕೊಂಡಿರುವಾಗ ದಿನಾ ವಾಕಿಂಗ್ ಹೋಗುತ್ತಿದ್ದ ಮಹಿಳೆಯೊಬ್ಬಳು ನನ್ನನ್ನು ನೋಡಿ ಮಾತಿಗೆ ನಿಂತಳು. ‘ಡಯಾಬೆಟೀಸ್ 400ಕ್ಕೆ ಏರಿತ್ತು. ಕೈಕಾಲು ನೋವಿನಲ್ಲಿ ನಡೆಯಲೂ ಕಷ್ಟವಾಗುತ್ತಿತ್ತು. ಅಡುಗೆ ಮಾಡಲೂ ಸುಸ್ತು. ಕಾಲಡಿಯೆಲ್ಲಾ ಉರಿ. ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಆದರೂ ಶುಗರ್ ಕೆಳಗೆ ಬರುತ್ತಿರಲಿಲ್ಲ. ಆಗ ಯಾರೋ ಹೇಳಿದರು ಯಾರೋ ಒಬ್ಬ ಡಾಕ್ಟರು ಹರ್ಬಲ್ ಚಿಕಿತ್ಸೆ ಕೊಡುತ್ತಾರೆ. ಒಂದೇ ವಾರದಲ್ಲಿ ಶುಗರ್ ಇಳಿಯುತ್ತೆ ನೋವುಗಳೆಲ್ಲ ಮಾಯವಾಗುತ್ತೆ ಎಂದು. ಅದನ್ನು ಕೇಳಿ ನಾನು ನಮ್ಮ ಯಜಮಾನರು ಅಲ್ಲಿಗೆ ಹೋದೆವು. ರೂ. ನಾಲ್ನೂರು ಕೊಟ್ಟು ಅವರ ಕ್ಲಬ್ಬಿಗೆ ಮೆಂಬರ್ ಆದೆವು. ಮೆಂಬರ್ ಆದರೆ ಯಾವಾಗ ಬೇಕಾದರೂ ಹೋಗಬಹುದು. ತುಂಬಾ ದೊಡ್ಡ ದೊಡ್ಡ ಜನ ಬರುತ್ತಾರೆ. ನಾನು ಪ್ರಮಾಣ ಮಾಡಿ ಹೇಳುತ್ತೇನೆ. ಒಂದೇ ವಾರದಲ್ಲಿ ಶುಗರ್ 200ಕ್ಕೆ ಇಳಿಯಿತು. ಕೈಕಾಲು ಸಡಿಲವಾಗಿ ನಡೆಯಲು ಸುಖವಾಯಿತು. ಹತ್ತು ದಿನದಲ್ಲಿ ಐದು ಕೆ.ಜಿ ಇಳಿದಿದ್ದೇನೆ. ಕಾಲಿನ ಅಡಿಯ ಉರಿ ಈಗ ಇಲ್ಲ. ಡಾಕ್ಟರ್ ಚಾರ್ಜ್ ಏನೂ ಇಲ್ಲ. ಅವರದ್ದು ಸಮಾಜಕ್ಕೊಂದು ಸರ್ವೀಸ್. ಬೆಳಗ್ಗೆ ಹೋದ ಕೂಡಲೇ ಜೂಸ್ ಕೊಡುತ್ತಾರೆ. ವ್ಯಾಯಾಮ ಮಾಡಿಸುತ್ತಾರೆ. ಮತ್ತೆ ಆಗಾಗ ಕುಡಿಯಲು ಡಯೆಟ್ ಪುಡಿ ಕೊಡುತ್ತಾರೆ. ಎಲ್ಲಾ ನ್ಯೂಟ್ರೀಶನ್ ಅದರಲ್ಲೇ ಇದೆ. ಕುಡಿದರೆ ಹಸಿವೆನೂ ಕಡಿಮೆಯಾಗುತ್ತೆ. ಮನೆಗೆ ತಂದು ಹಾಲಿನಲ್ಲಿ ಹಾಕಿ ಚೆನ್ನಾಗಿ ಶೇಕ್ ಮಾಡಿ ಕುಡಿದರೆ ಆಯಿತು. ಶೇಕ್ ಮಾಡಲು ಬಾಟ್ಲು ಕೂಡಾ ಅವರೇ ಕೊಡುತ್ತಾರೆ. ದಿನಕ್ಕೆ ರೂ. 135 ಮಾತ್ರ ಖರ್ಚು. ನಾವು ಈಗ ಒಂದು ಬ್ರೇಕ್ಫಾಸ್ಟ್ಗೆ ಅಷ್ಟು ಖರ್ಚು ಮಾಡೋದಿಲ್ಲವೇ? ಹಣ ಖರ್ಚಾದರೆ ಏನಾಯಿತು ಆರೋಗ್ಯವಂತರಾಗಿರಬಹುದಲ್ಲ. ನೀವೂ ನಿಮ್ಮ ಯಜಮಾನರನ್ನು ಕರೆದುಕೊಂಡು ಹೋಗಿ. ಆರೋಗ್ಯ ಸುಧಾರಿಸುತ್ತೆ. ನಾನು ಗ್ಯಾರಂಟಿ ಕೊಡುತ್ತೇನೆ. ಬೇಕಾದರೆ ನಮ್ಮ ಯಜಮಾನರು ಕರೆದುಕೊಂಡು ಹೋಗುತ್ತಾರೆ.’
ಅವಳು ಮಾತಾಡುತ್ತಲೇ ಇದ್ದಳು. ನನಗೆ ಮೇಲಿನ ಮಾತುಗಳು ನೆನಪಿಗೆ ಬರುತ್ತಿದ್ದುವು.
ಹಣಮಾಡಲು ಆರೋಗ್ಯ ಕಳಕೊಳ್ಳುತ್ತೇವೆ
ಆರೋಗ್ಯ ಪಡೆಯಲು ಹಣ ಕಳಕೊಳ್ಳುತ್ತೇವೆ!
ಸಾವೇ ಇಲ್ಲವೇನೋ ಎಂದು ಬದುಕುತ್ತೇವೆ.
ಸಾಯುವಾಗ ನಾವು ಬದುಕಿಯೇ ಇಲ್ಲವೇನೋ ಎನ್ನುವಂತೆ ಸಾಯುತ್ತೇವೆ!
ಸಾವನ್ನು ಮುಂದೂಡಲು ಹೀಗೆ ಏನೇನೋ ಚಿಕಿತ್ಸೆಗಳ ಮೊರೆ ಹೋಗುತ್ತೇವೆ. ಚಿಕೆತ್ಸೆ ಮಾಡಬಾರದು ಎಂದು ನಾನು ಹೇಳುವುದಿಲ್ಲ. ತಾತ್ಕಾಲಿಕ ಶಮನಕ್ಕಾದರೂ ಚಿಕಿತ್ಸೆಗಳು ಬೇಕೇ ಬೇಕು.
ಆದರೆ, ವಯಸ್ಸಾದ ಮೇಲೆ ಬರುವ ಖಾಯಿಲೆಗಳು, ಕೈಕಾಲು ನೋವುಗಳು ಗುಣ ಪಡಿಸುವಂತವುಗಳಲ್ಲ. ಉಪಯೋಗಿಸಿ ಉಪಯೋಗಿಸಿ ಸವೆದು ಹೋದ ಮೆಶೀನುಗಳಂತೆ ಈ ದೇಹವಾಗಿರುತ್ತೆ. ಇದ್ದಷ್ಟು ದಿನ ಸಾಧ್ಯವಾದಷ್ಟು ಉಪಯೋಗಿಸುವುದು. ಹೆದರದೆ, ಹೆಚ್ಚು ತಲೆಕೆಡಿಸಿಕೊಳ್ಳದೆ ಎಲ್ಲ ನೋವುಗಳೊಡನೆ ಬದುಕಲು ಕಲಿತರೆ ಅದೇ ಮದ್ದು. ವಯಸ್ಸಾದ ಮೇಲೆ ಯಾವುದೇ ಮದ್ದಿನ ಶಕ್ತಿಗಿಂತ ಮನಸ್ಸಿನ ಶಕ್ತಿ ಮುಖ್ಯ. ಇದ್ದಷ್ಟು ದಿನ ಆ ದಿನಕ್ಕಾಗಿ, ಆ ಕ್ಷಣಕ್ಕಾಗಿ ಮಾತ್ರ ಬದುಕುವುದೆಷ್ಟು ಚೆನ್ನ! ವಾಸ್ತವವಾಗಿ ಸಾವನ್ನು ಮುಂದಕ್ಕೆ ತಳ್ಳುವ ಮದ್ದುಗಳು ಇವತ್ತಿನ ಹಿರಿಯ ನಾಗರಿಕರ ಜೀವನದ ಸಂಕಷ್ಟಗಳಿಗೆ ಪ್ರಮುಖ ಕಾರಣ ಎಂದು ನನಗನಿಸುತ್ತಿರುತ್ತದೆ. ಸಾವು ಮುಂದಕ್ಕೆ ಹೋಗುತ್ತೆ. ಸಮಸ್ಯೆಗಳು ಹೆಚ್ಚುತ್ತವೆ. ಆದರೆ? ಅವುಗಳನ್ನು ಎದುರಿಸುವ ಶಕ್ತಿ ಕಡಿಮೆಯಾಗಿರುತ್ತೆ.
ನಾವೆಲ್ಲಾ ಚಿಕ್ಕವವರಿರುವಾಗ ಐವತ್ತು ದಾಟಿದವರೆಲ್ಲ ಮುದುಕರು. ಅರುವತ್ತು ದಾಟಿದರೆ ದೀರ್ಘಾಯುಷಿಗಳು! ಇವತ್ತು ಅರುವತ್ತು ಬಿಟ್ಟು ಎಪ್ಪತ್ತೂ ಏನೂ ಅಲ್ಲ. ಎಲ್ಲ ಅನುಕೂಲತೆಗಳಿದ್ದು, ಆರೋಗ್ಯ ಚೆನ್ನಾಗಿದ್ದು, ಕೈಕಾಲು ಗಟ್ಟಿಯಾಗಿದ್ದರೆ ಎಂಭತ್ತಾದರೂ ಚಿಂತಿಲ್ಲ. ಆದರೆ ಆರೋಗ್ಯವೂ ಕೆಟ್ಟು ಮಲಗಿದಲ್ಲೇ ಇದ್ದಾಗಲೂ ಸಾವನ್ನು ಮುಂದೂಡುವ ಮದ್ದುಗಳು ಯಾಕೆ? ಯಾವ ಘನ ಕಾರ್ಯ ಸಾಧಿಸಲು ಇಂಥ ಜೀವನ?
ಸುತ್ತಲೂ ಎಷ್ಟೋ ಹಿರಿಯರನ್ನು ನೋಡುತ್ತೇವೆ. ಇಬ್ಬರೂ ದುಡಿದು ತಮ್ಮ ಅನುಕೂಲತೆಗಳ ಬಗ್ಗೆ ಸ್ವಲ್ಪವೂ ಯೋಚಿಸದೆ ಮಕ್ಕಳಿಗೆ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟು ಬೆಳೆಸಿರುತ್ತಾರೆ. ಮಕ್ಕಳು ದೊಡ್ಡವರಾಗುತ್ತಲೇ ನಿವೃತ್ತರೂ ಆಗುತ್ತಾರೆ. ಕೈಗೆ ಸಿಗುವ ಹಣದಲ್ಲಿ ಮನೆಕಟ್ಟಲು, ಕಾರು ತೆಗೆದುಕೊಳ್ಳಲು, ಮಕ್ಕಳ ಮದುವೆ ಮಾಡಲು ಹೀಗೆ ಮಾಡಿದ ಎಲ್ಲಾ ಸಾಲಗಳನ್ನೂ ತೀರಿಸಿ ಬರಿಗೈಯಲ್ಲಿ ಮನೆಯಲ್ಲಿ ಕೂರುತ್ತಾರೆ. ಹೆತ್ತವರಿಂದ ಎಲ್ಲವನ್ನೂ ಪಡೆದ ಮಕ್ಕಳು ಅವರನ್ನು ಅವರಷ್ಟಕ್ಕೇ ಬಿಟ್ಟು ತಮ್ಮ ತಮ್ಮ ದಾರಿ ಹಿಡಿದು ಹೋಗುತ್ತಾರೆ. ಅವರಿಗೆ ಇಷ್ಟವಾದವರನ್ನು ಮದುವೆಯಾಗುತ್ತಾರೆ. ಅಪ್ಪ ಅಮ್ಮನ ಬೆಚ್ಚಗಿನ ಗೂಡು ಬಿಟ್ಟು ಹೊರಹಾರುತ್ತಾರೆ. ಹೆತ್ತವರ ಬಗ್ಗೆ, ಅವರ ಅನುಕೂಲತೆಗಳ ಬಗ್ಗೆ ಮಾನಸಿಕ ತುಮುಲಗಳ ಬಗ್ಗೆ, ಮುಖ್ಯವಾಗಿ ಅವರ ಒಂಟಿತನದ ಬಗ್ಗೆ ಅವರಿಗೆ ಯೋಚನೆಯಿಲ್ಲ. ಯೋಚನೆ ಇದ್ದರೂ ಅವರ ಬಿಡುವಿಲ್ಲದ ಜೀವನದಲ್ಲಿ ಕಾಳಜಿವಹಿಸಲು ಸಮಯವಿಲ್ಲ. ಇದು ಈಗಿನ ಕೌಟುಂಬಿಕ ವ್ಯವಸ್ಥೆ. ಹೆಚ್ಚಿನ ಹಿರಿಯ ನಾಗರಿಕರಿಗೆ ಇದುವೇ ಜೀವನ. ಒಪ್ಪಿಕೊಳ್ಳದೆ ವಿಧಿಯಿಲ್ಲ.
ಯಾವ ಹಿರಿಯ ನಾಗರಿಕನಿಗೂ ಕೌಟುಂಬಿಕವಾಗಿ ಯಾ ಸಾಮಾಜಿಕವಾಗಿ ಸುಖವಿಲ್ಲ, ರಕ್ಷಣೆಯಿಲ್ಲ. ಒಂದೋ ಆರೋಗ್ಯ ಸರಿ ಇರೋದಿಲ್ಲ. ಒಂದೋ ಮಕ್ಕಳು ಜೊತೆಗಿರೋದಿಲ್ಲ. ಒಂದೋ ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆಗಳಲ್ಲಿ ಮಕ್ಕಳ ಜೀವನವೂ ಸರಿಯಾಗಿರುವುದಿಲ್ಲ. ಕೆಲವೊಮ್ಮೆ ಮಕ್ಕಳು ವೈರಿಗಳೂ ಆಗುವುದೂ ಇದೆ. ಕಳ್ಳರ, ಕೊಲೆಗಡುಕರ ದೃಷ್ಟಿಯೂ ಯುವ ಪೀಳಿಗೆಯವರಿಂದ ದೂರವಾಗಿ ವಾಸಿಸುತ್ತಿರುವ ಈ ಹಿರಿಯ ನಾಗರಿಕರ ಮೇಲೆ!
ಇತ್ತೀಚೆಗೆ ನನ್ನ ಚಿಕ್ಕಮ್ಮ ಫೋನಿಸಿದ್ದರು. ಅವರಿಗೆ ಈಗ ಎಂಭತ್ತು ವರುಷ. ‘ನನಗೆ ಏನೂ ಕೂಡೋದಿಲ್ಲ. ಕಾಲು ತುಂಬಾ ನೋವು. ನಡೆಯಲೇ ಕಷ್ಟವಾಗುತ್ತದೆ. ಡಾಕ್ಟರ ಹತ್ತಿರ ಹೋದರೆ ಅವರು ಹೇಳುತ್ತಾರೆ, ನಾನು ಮದ್ದು ಕೊಡುತ್ತೇನೆ ಆದರೆ ನಿಮ್ಮ ಯಾವ ಖಾಯಿಲೆಯೂ ಮದ್ದಿನಿಂದ ಗುಣವಾಗುವುದಿಲ್ಲ. ಯಾವ ನೋವೂ ಕಡಿಮೆಯಾಗೋದಿಲ್ಲ. ನೀವು ಅದರೊಡನೆ ಬದುಕಬೇಕು ಎಂದು.’
ಅದಕ್ಕೆ ನಾನಂದೆ, ‘ಚಿಕ್ಕಮ್ಮ, ಡಾಕ್ಟರು ಹೇಳುವುದು ನಿಜ. ಇನ್ನು ನಿಮ್ಮ ಯಾವುದೇ ಖಾಯಿಲೆ ಗುಣವಾಗುವುದಿಲ್ಲ. ನೋವುಗಳೂ ಹಾಗೇ ಇರುತ್ತವೆ. ನಾನು ಈಗಲೇ (ಅರುವತ್ತೈದು ವರ್ಷಕ್ಕೆ) ಇದನ್ನು ಒಪ್ಪಿಕೊಂಡು ಬಿಟ್ಟಿದ್ದೇನೆ. ನೋವುಗಳು ನಮ್ಮ ಸಂಗಾತಿಗಳು ಎಂದು ಭಾವಿಸಿದ್ದೇನೆ. ಇನ್ನು ನಾವು ಯಾಕೆ ಬದುಕಬೇಕು ಎಂದೂ ಯೋಚಿಸುತ್ತಿರುತ್ತೇನೆ. ನಮ್ಮಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ಭೂಮಿಗೆ ಭಾರ ಅಷ್ಟೇ. ವಯಸ್ಸಾದವರು ಸತ್ತರೆ ಚಿಕ್ಕವರಿಗೆ ಭೂಮಿಯಲ್ಲಿ ಇರಲು ಜಾಗವಾದರೂ ಸಿಕ್ಕೀತು. ಮೊದಲೇ ನಮ್ಮ ಜನಸಂಖ್ಯೆ ಜಾಸ್ತಿ’
ಅದಕ್ಕೆ ಅವರಂದ ಮಾತು, ‘ಹೌದು ನೀನು ಹೇಳುವುದು ನಿಜ. ಆದರೆ ಯಾರಿಗೂ ಸಾಯಲಿಕ್ಕೆ ಮನಸ್ಸಿಲ್ಲ. ನೀನು ಹೇಳುತ್ತಿರುವುದು ಸರಿಯೆಂದು ಗೊತ್ತಿದ್ದರೂ ನನಗೇ ಮನಸ್ಸಿನೊಳಗೆ ಒಂದು ಥರಾ ಕಸಿವಿಸಿ ಆಗುತ್ತದೆ. ನನ್ನ ಜವಾಬ್ದಾರಿ ಇನ್ನೂ ಮುಗಿದಿಲ್ಲ. ಏನೂ ಸರಿಯಿಲ್ಲದ ನನ್ನ ಮಗ ಮೊದಲು ಸಾಯಬೇಕು. ಆ ಮೇಲೆ ನನ್ನ ಸರದಿ! ಈಗಲೇ ಸಾಯಲು ನನಗೆ ಮನಸ್ಸಿಲ್ಲ.’
ಅವರ ಮಾತು ಕೇಳಿ, ಎಂಭತ್ತನೇ ವರುಷಕ್ಕೂ ಜವಾಬ್ದಾರಿ ಮುಗಿದಿಲ್ಲವೆಂದು ಸಾವನ್ನು ದೂರ ಇರಿಸುವ ಕಾತರ ಇರುವ ಚಿಕ್ಕಮ್ಮ ಬದುಕಿದ್ದಾದರೂ ಯಾವಾಗ? ಎನ್ನುವ ಪ್ರಶ್ನೆ ನನ್ನ ಮುಂದೆ ನಿಂತಿತ್ತು. ಜೀವನದಲ್ಲಿ ಅವರು ಅನುಭವಿಸದ ಕಷ್ಟಗಳಿಲ್ಲ. ಮಧ್ಯ ವಯಸ್ಸಲ್ಲಿ ಗಂಡನನ್ನು ಕಳಕೊಂಡಿದ್ದಾರೆ. ಇಪ್ಪತ್ತು ವರುಷದ ಮಗಳನ್ನು ಅಪಘಾತದಲ್ಲ ಕಳಕೊಂಡು ಮೂವತ್ತು ವರುಷಗಳು ಕಳೆದಿವೆ. ಐವತ್ತೆರಡು ವರುಷದ ಮಗಳನ್ನು ಎಂಟು ವರುಷಗಳ ಹಿಂದೆ ಕಳಕೊಂಡಿದ್ದಾರೆ. ಈಗ ಸ್ಪಾಸ್ಟಿಕ್ ಮಗನಿಗೆ ಐವತ್ತಾರು ವರುಷ. ಅವನು ಸಾಯದೆ ತಾನು ಸತ್ತರೆ ಅವನನ್ನು ನೋಡಿಕೊಳ್ಳುವವರಾರು ಎನ್ನುವ ಆತಂಕ, ಸಾವನ್ನು ದೂರ ಇಡುವ ಕಾತರ!
ಆದರೆ ಒಂದು, ಇಷ್ಟೆಲ್ಲ ಕಾತರಗಳ ಮಧ್ಯೆಯೂ ಕೆಲವು ಕ್ಷಣಗಳಲ್ಲಿಯಾದರೂ ‘ಬದುಕು’ವುದನ್ನು ಅವರು ಮರೆತಿಲ್ಲ. ಎಲ್ಲ ನೋವುಗಳನ್ನೂ ಬದಿಗೊತ್ತಿ ನಗುತ್ತಾ, ನಗಿಸುತ್ತಾ ಇರುವುದು ಅವರಿಗೆ ಗೊತ್ತು. ಅವರು ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಡನೆ ಕನೆಕ್ಟ್ ಆಗುವ ರೀತಿ ಅದ್ಭುತ! ಹಿರಿಯರಿಗೂ ಅವರು ಆಪ್ತರು ಕಿರಿಯರಿಗೂ ಆಪ್ತರು! ಹೀಗಾಗಿ ಇವತ್ತಿಗೂ ಅವರು ಮಾನಸಿಕವಾಗಿ ಸ್ವಸ್ಥರು. ಇಂಥವರು ಎಷ್ಟು ಜನರಿರಬಹುದು? ಇಂಥವರೊಡನೆ ಮಾತಾಡಿದರೆ ಮಾತಾಡಿದವರ ಕಾತರಗಳು ಮಾಯವಾಗುತ್ತವೆ. ಎಲ್ಲ ನೋವುಗಳ ಮಧ್ಯೆಯೂ ಕೊನೆಯ ಕೆಲವು ಕ್ಷಣಗಳನ್ನಾದರೂ ಖುಷಿಯಾಗಿ ಬದುಕಬೇಕು ಎಂದು ಅನ್ನಿಸುತ್ತದೆ.
ಜವಾಬ್ದಾರಿಗಳು, ಅವುಗಳನ್ನು ನಿರ್ವಹಿಸುವ ಕಾತರಗಳು ಎಲ್ಲರ ಜೀವನದಲ್ಲೂ ಇದ್ದುದೇ. ಆದರೆ ಈ ಎಲ್ಲ ಕಾತರಗಳು ‘ಬದುಕು’ವುದನ್ನು ಮರೆಸಬಾರದು. ಇಡೀ ಜೀವನವನ್ನು ‘ಬದುಕುವುದು’ ಸಾಧ್ಯವಾಗದಿದ್ದರೂ ಮಧ್ಯೆ ಮಧ್ಯೆ ಕೆಲವು ಕ್ಷಣಗಳನ್ನಾದರೂ ಎಲ್ಲ ಕಾತರಗಳನ್ನು ಬದಿಗೊತ್ತಿ ಖುಷಿಯಿಂದ ಬದುಕಬಹುದಲ್ಲ?
ಸಾವು ಹೊಸಲಿನಾಚೆ ಬಂದು ನಿಂತಿರಬಹುದು. ಅದು ಹೊಸಲು ದಾಟಿ ಒಳ ಬರಲು ಇನ್ನೂ ಕೆಲವು ಕ್ಷಣಗಳಿರುತ್ತವೆ. ಆ ಕ್ಷಣಗಳನ್ನಾದರೂ ನಮ್ಮದೇ ಕ್ಷಣಗಳು ಎನ್ನುವಂತೆ ಖುಷಿಯಿಂದ ಅನುಭವಿಸಬಹುದಲ್ಲ? ಹೀಗೆ ಮಾಡಲು ಸಾಧ್ಯವಾದರೆ ಮಾತ್ರ ಹಿರಿಯ ನಾಗರಿಕರು ಎಲ್ಲ ಕಾತರಗಳ ಒತ್ತಡಗಳಿಂದ ಮುಕ್ತರಾಗಿ ಇದ್ದಷ್ಟು ದಿನ ಸುಖವಾಗಿ ನಗುನಗುತ್ತಾ ಬದುಕಬಹುದು!






chennaagide baraha bhaava.. badukuvaagale saayuttaa badukuvudu eshtondu himse alwaa..
usha amma … tumba ishtavaythu lekhana …
adbhutha baraha