ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ..

ನೆನಪು 15.

ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ

ಯಾರನ್ನೂ ಆತ ತಾದಾತ್ಮ್ಯದಿಂದ ಆಲಿಸುತ್ತಿದ್ದ. ಹೊಸ ಅಂಶ ಸಿಕ್ಕಿದರೆ ತಕ್ಷಣ ನೋಟ್ ಮಾಡಿಕೊಳ್ಳುತ್ತಿದ್ದ. ಅವರ ಮಾತು ಬರಹಗಳಲ್ಲಿ ಒಂದು ಹೊಸ ಅಂಶ ಸಿಕ್ಕರೂ ಸಾಕು ಅವರನ್ನು ಮತ್ತೆ ಮತ್ತೆ ಆಲಿಸುತ್ತಿದ್ದ. ಅವರ ಸಂಪರ್ಕದಿಂದ ಎಂದೂ ಆಚೆ ಬರುತ್ತಿರಲಿಲ್ಲ. ಅವನಿಂದ ಅವರಿಗೊಂದು ಮೆಚ್ಚುಗೆಯ ಪೋಸ್ಟ್ ಕಾರ್ಡ್ ಹೋಗುವುದು ಗ್ಯಾರಂಟಿ.

ಇದಕ್ಕೊಂದು ಸಣ್ಣ ಉದಾಹರಣೆ ಕೊಡಬಹುದಾದರೆ ಕುಮಟಾದ ಎಂ.ಜಿ. ಹೆಗಡೆಯವರೊಂದಿಗಿನ ಆತನ ಸ್ನೇಹ. ಅಣ್ಣನಿಗೂ ಅವರಿಗೂ ಬಹುಶಃ 35-40 ವರ್ಷದ ಅಂತರ ಇರಬಹುದು. ಸುಮ್ಮನೆ ಕುಮಟಾದಲ್ಲಿ ಓದು, ಪಾಠ ಮಾಡ್ಕೋತಾ ಇದ್ದ ಡಾ. ಎಂ. ಜಿ. ಹೆಗಡೆಯವರ ಭಾಷಣವನ್ನು ಒಮ್ಮೆ ಕೇಳಿದ ನಂತರ ಅಣ್ಣ ಅವರ ಕಡೆ ಹೆಚ್ಚೆಚ್ಚು ಗಮನ ಹರಿಸಿದ.

ಅದರಲ್ಲೂ ಕುಮಟಾದ ವಿಚಾರವಾದಿ ಪ್ರಾಚಾರ್ಯರಾದ ಪ್ರೊ. ಎಸ್. ಆರ್. ನಾರಾಯಣರಾವ್ ಅವರ ವಿದ್ಯಾರ್ಥಿ ಅಂದ ಮೇಲಂತೂ ಕೇಳಬೇಕೆ? ಆಮೇಲೆ ಅವನ ಜೀವನದ ಅಂತ್ಯದವರೆಗೂ ಅವರೊಂದಿಗಿನ ಸ್ನೇಹ ಅಪೂರ್ವವಾದದ್ದು, ಅರ್ಥಪೂರ್ಣವಾದುದು. ಅವರೊಂದಿಗೆ ಕನಿಷ್ಠ ತಿಂಗಳಿಗೆ ಎರಡು ಭೇಟಿ ಇದ್ದೇ ಇರುತ್ತಿತ್ತು. ಆ ಮಧ್ಯೆ ಒಂದಿಷ್ಟು ಪತ್ರ ವ್ಯವಹಾರ; ವಾರಕ್ಕೆ ಎರಡು ಫೋನು. “ನೀವೆಲ್ಲಾ ಊಟ ಮಾಡಿ. ಎಂ.ಜಿ ಹೆಗಡೆಯವರ ಫೋನಿರಬೇಕು. ಒಂದು ತಾಸಾದರೂ ಮುಗಿಯುವುದಿಲ್ಲ.” ಎಂದು ಅಕ್ಕ ನಮಗೆ ಹೇಳುತ್ತಿದ್ದಳು.

ಯಾವುದೇ ಹೊಸ ಪುಸ್ತಕ ಓದಲಿ, ಹೊಸ ಲೇಖನ ಬರೆಯಲಿ ಅದನ್ನೆಲ್ಲಾ ಹಿಡಿದುಕೊಂಡು ಕುಮಟಾಕ್ಕೆ ಹೋಗುತ್ತಿದ್ದ. ಅದೂ ಎಂ.ಜಿ.ಯವರ ಸಮಯ ಕೇಳಿಕೊಂಡು. ಸಾಮಾನ್ಯವಾಗಿ ಅವರು ಸೇರುತ್ತಿದ್ದುದು ಕುಮಟಾ ರೈಲ್ವೇ ನಿಲ್ದಾಣದ ಹಿಂಬದಿಗೆ. ಹಲವು ಬಾರಿ ನಾನೂ ಅಣ್ಣನೊಂದಿಗೆ ಹೋಗಿದ್ದಿದೆ. “ಅವರು ಯಾವುದೋ ಒಂದು ಹೊಸ ಪುಸ್ತಕ ಓದಿದ್ದಾರಂತೆ. ಅದರ ಬಗ್ಗೆ ಚರ್ಚಿಸ್ತೇವೆ. ನೀನೂ ಬಂದುಬಿಡು” ಎಂದು ನನ್ನನ್ನೂ ಕರೆದುಕೊಂಡು ಹೋಗಿದ್ದಿದೆ. ಮಾತಾಡ್ತಾ ಮಾತಾಡ್ತಾ ಹಲವು ಕಾರ್ಯಕ್ರಮಗಳ ರೂಪು ರೇಷೆ ಅಲ್ಲಿಯೇ ಸಿದ್ಧವಾಗುತ್ತಿತ್ತು.

ಒಮ್ಮೊಮ್ಮೆ ಎಂ.ಜಿ.ಯವರು ಬಹು ನಿಷ್ಠುರವಾಗಿ ವಿಮರ್ಶೆ ಮಾಡುತ್ತಿದ್ದರು. ಇಡೀ ಲೇಖನವನ್ನೇ ಹೊಸದಾಗಿ ಬರೆಯಲು ಹೇಳುತ್ತಿದ್ದರು. ಅವರು ಹೇಳಿದ್ದು ಸರಿ ಕಂಡರೆ ಕೆಲವು ಬಾರಿ ಅಣ್ಣ ಇಡೀ ಲೇಖನವನ್ನೇ ಹೊಸದಾಗಿ ಬರೆದದ್ದೂ ಇದೆ.
ಅವರು ಬರೆದ ಒಂದು ಪತ್ರ ಹೀಗಿತ್ತು:

ಪ್ರೀತಿಯಿಂದ ಆರ್ ವಿ ಯವರಿಗೆ
ನಮಸ್ಕಾರಗಳು.

ಸಿಕ್ಕಾಪಟ್ಟೆ busy. ಅದು as usual  ಅಂತ ನೀವು ಹೇಳ್ತೀರಿ.
‘ಸೂರ್ಯ’ ಕುರಿತ ಬರಹ ಓದಿದೆ ಮತ್ತೊಮ್ಮೆ
ಅದೇ ಈಗಾಗ್ಲೇ ಹೇಳಿದಂತೆ ನಿಮ್ಮ ಓದಿನ ಕ್ರಮದ ಕುರಿತು ನೀವೇ ನಾಲ್ಕು ಸಾಲು
ಶುರುವಿನಲ್ಲೇ ಹೇಳುವುದು ಅಗತ್ಯ
ಆಮೇಲೆ ಕಾದಂಬರಿಯಲ್ಲಿ ಆಶಯದ ಮೇಲೆ ಸಾಕಷ್ಟು ಒತ್ತು ಬಿದ್ದಿದೆ.
ಆದರೆ ಅದರ ಕಲಾತ್ಮಕತೆ ಹಿನ್ನೆಲೆಗೆ ಸರಿದಿದೆ. ಹೀಗಾಗಿ imbalence ಆಗಿದೆ. ಇದನ್ನೇ
ಓದಿ ಹೊಸದಾಗಿ ಬರೆದರೆ ಒಳ್ಳೆಯದೆನಿಸುತ್ತದೆ.
ಪ್ರೀತಿಯಿಂದ,
ಎಂ.ಜಿ.

ಕೆಲವೊಮ್ಮೆ ಹೀಗೆ ಅವರಿಂದ ಪತ್ರ ಬಂದಾಗ “ನೀವು ಹೇಳಿದ್ದು ಸರಿ; ಆದರೆ ನಾನು ಹೊಸದಾಗಿ ಬರೆಯಲಾರೆ” ಎಂದು ಹೇಳಿದ್ದೂ ಇದೆ. “ಇವರು ಹತ್ತು ವರ್ಷ ಮೊದಲೇ ನನಗೆ ಸಿಕ್ಕಬೇಕಾಗಿತ್ತು. ಅದರ ಮಜವೇ ಬೇರಾಗುತ್ತಿತ್ತು. ಈಗ ಅವರು ಹೇಳಿದ್ದನ್ನು ಪೂರ್ತಿ ರೂಢಿಸಿಕೊಳ್ಳಲಾರೆ.” ಎಂದು ಆಗಾಗ ಅಣ್ಣ ಹೇಳುವುದು ಇತ್ತು.

ಒಮ್ಮೆ ಅವರು ಆತನ ಮಕ್ಕಳ ನಾಟಕವಾದ “ಬೆಳಕಿನ ಕಡೆಗೆ” ಕುರಿತು ವಿಮರ್ಶೆ ಬರೆಯುತ್ತಾ “…ಕತೆಯಲ್ಲಿ ಮಾಡಿಕೊಂಡ ಅರ್ಥಪೂರ್ಣ ಬದಲಾವಣೆಗಳು, ನಾಟಕ ಒಳಗೊಳ್ಳುವ ಸಮಕಾಲೀನ ಆಶಯಗಳು, ರಂಗತಂತ್ರದ ನಾವಿನ್ಯ- ಈನಾಟಕದ ಯಶಸ್ಸಿಗೆ ಕಾರಣವಾಗಿವೆ. ಕನ್ನಡದ ಅತ್ಯುತ್ತಮ ಮಕ್ಕಳ ನಾಟಕಗಳಲ್ಲಿ ಇದು ಒಂದು” ಎಂದು ಬರೆದ ನಂತರ ಅದರಲ್ಲಿರುವ ಅಕ್ಷರ ತಪ್ಪಿನ ಕುರಿತು ಗಮನ ಸೆಳೆದು “ಇದರಲ್ಲಿ ಪ್ರತಿ ಪುಟಕ್ಕೆ ಸರಾಸರಿ ಆರರಂತೆ ಮುದ್ರಣ ದೋಷವಿದೆ…..ಕರಡು ತಿದ್ದುವ ಕನಿಷ್ಟ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರೆ ಅಕ್ಷರ ದೋಷ ನಿವಾರಿಸಬಹುದಾಗಿತ್ತು.” ಎಂದು ಕಟುವಾಗಿಯೇ ಬರೆದಿದ್ದರು. ಅದಕ್ಕೆ ಇವರ ಉತ್ತರ ಹೀಗಿತ್ತು:

ಆರ್.ವಿ
25-2-96

ಪ್ರಿಯ ಎಂ.ಜಿ,

ಬೆಳಕಿನ ಕಡೆಗೆ ಪುಸ್ತಕದ ವಿಮರ್ಶೆ ಓದಿದೆ.
ಚೆನ್ನಾಗಿದೆ. ಮತ್ತು ವಿಷ್ಟುರವಾಗಿ ಬೆರೆದಿದ್ದೀರಿ. ನಿಮ್ಮ ದೃಷ್ಟಿಕೋನ ಸರಿಯಾಗಿದೆ. ಕೃತಜ್ಞತೆ.
ಅದರಲ್ಲಿಯ ದೋಷಗಳು -ನೀವು ಗುರುತಿಸಿದ್ದು- ಅರಿಯಾಗಿದೆ. ಅಲ್ಲಿಯ ಒಂದುಕಡೆಯ ವಾಕ್ಯ ರಚನೆ
“ಏನೂ ಬರೋದಿಲ್ಲ’ ‘ಖಂಡಿತ ಅವನೇ’ ಇದರ ಬಗ್ಗೆ ನಿಮ್ಮ ಸ್ಪಷ್ಟನೆ ಸರಿಯಾಗಿದೆ. ಇದು ಮಾತ್ರ ಪುರಾಣ
ಇತಿಹಾಸದ ಬೆರಕೆ ಈ ಎರಡು ನನ್ನ ಗಮನಕ್ಕೆ ಬಂದಿರಲಿಲ್ಲ.

ಉಳಿದ ತಪ್ಪುಗಳು ನನಗೆ ತಿಳಿದಿತ್ತು. ನಾನಾಗಿ ಯಾಕೆ ಹೇಳುವುದು ಎಂದು ಸುಮ್ಮನಿದ್ದೆ. ಕೊನೇ
ವಾಕ್ಯವಂತೂ ತುಂಬಾ ಮಾರ್ಮಿಕ.
ನನ್ನ ಇಲ್ಲಿಯವರೆಗಿನ ಪುಸ್ತಕದಲ್ಲೂ ಮುದ್ರಣದಿಂದಾಗುವ ಇಂಥ ತಪ್ಪು ತಪ್ಪಲೇ ಇಲ್ಲ! ‘ಪಾಪಿ ಹೋದಲ್ಲಿ
ಮೊಣಕಾಲ ನೀರು’ ಎನ್ನುತ್ತಾರಲ್ಲ ಹಾಗೆ. ಮಕ್ಕಳ ಪುಸ್ತಕದಲ್ಲಿ ತಪ್ಪು ಮುದ್ರಣ ಅಕ್ಷಮ್ಯ.
ವಂದನೆ

ತಮ್ಮ ವಿಶ್ವಾಸಿ,
ಆರ್.ವಿ

ಹೀಗೆ ತನ್ನ ತಪ್ಪನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುವವ ಅಪರೂಪದ ಗುಣ ಅವನದು. ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ

ಅಣ್ಣನೊಂದಿಗೆ ಚರ್ಚಿಸುವುದಕ್ಕಾಗಿಯೇ ಎಂ. ಜಿ ಯವರೂ ಹಲವು ಪುಸ್ತಕಗಳನ್ನು ಓದಿದ್ದೂ ಇದೆ. “ಆರ್.ವಿ ಯವರಲ್ಲದಿದ್ದರೆ ನಾನು ಹಲವು ಪುಸ್ತಕಗಳನ್ನು ಓದುತ್ತಲೇ ಇರಲಿಲ್ಲ. ಅವರಿಂದ ನನಗೆ ಹಲವು ಲಾಭಗಳಾಗಿದೆ. ಪ್ರಗತಿಶೀಲ ಸಾಹಿತ್ಯದ ಓದನ್ನು ನಾನು ಗಂಭೀರವಾಗಿ ಮಾಡಿದ್ದೇ ಆರ್.ವಿಯವರೊಂದಿಗೆ” ಎಂದು ಇತ್ತೀಚೆಗೆ ಅವರು ಹೇಳುತ್ತಿದ್ದರು.

ಆಗ ಅಣ್ಣ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿದ್ದ. ಡಾ.ಬರಗೂರು ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರಿಗೆ ಎಂ.ಜಿ. ಯವರನ್ನು ಪರಿಚಯಿಸಿದ. ಎಂ.ಜಿ.ಯವರನ್ನು ಇಟ್ಟುಕೊಂಡು ಹಲವು ವಿಚಾರ ಸಂಕಿರಣ ನಡೆಸಿದ. ವಾರ್ಷಿಕ ವಿಮರ್ಶಾ ಸಂಕಲನದ ಸಂಪಾದಕರನ್ನಾಗಿಸಿದ. ಎಂ.ಜಿ. ಹೆಗಡೆ ಉತ್ತರ ಕನ್ನಡದ ಮಾರ್ಕ್ಸ್ವಾದಿ ಚಿಂತಕರೆಂದು, ಅವರನ್ನು ಸಂಘಟನೆಗೂ, ಕಾರ್ಯಕ್ರಮಗಳಿಗೂ ಅತಿ ಹೆಚ್ಚು ಬಳಸಿಕೊಳ್ಳಲು ನಮಗೆ ಸೂಚಿಸಿದ. ಅವಕಾಶ ಸಿಕ್ಕಲ್ಲೆಲ್ಲ ರಾಜ್ಯದ ವಿವಿಧೆಡೆ ಎಂ.ಜಿ.ಯವರನ್ನು ವಿಚಾರ ಸಂಕಿರಣ ಇತ್ಯಾದಿಗಳಿಗೆ ಕಳುಹಿಸಲು ತೊಡಗಿದ. ಈ ಕಾರಣಕ್ಕಾಗಿ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಿದೆ.

“ನಾನು ಓದುತ್ತಾ ಬರೆಯುತ್ತಾ ಆರಾಂ ಆಗಿದ್ದೆ. ಆದರೆ ಆರ್.ವಿ.ಯವರು ನನ್ನನ್ನು ತಂದು ಈ ಭಾಷಣ ಇತ್ಯಾದಿಗಳಿಗೆ ದೂಡಿದರು” ಎಂದು ಎಂ.ಜಿ.ಯವರು ಪ್ರೀತಿಯಿಂದ ಅಣ್ಣನನ್ನು ನೆನಪಿಸಿಕೊಳ್ಳುತ್ತಾರೆ. ಅವರಿಗೂ ಅವನೆಂದರೆ ತೀರಾ ಪ್ರೀತಿ, ಗೌರವ. ಅಣ್ಣ ಏನೇ ಕಳುಹಿಸಿದರೂ ಓದಿ ಒಂದೆರಡು ದಿನದಲ್ಲಿ ಪ್ರತಿಕ್ರಿಯಿಸುತ್ತಿದ್ದರು. ಅಣ್ಣನ ಪುಸ್ತಕ ಬಿಡುಗಡೆ ಮತ್ತು ಅವನ ಕುರಿತು ಒಂದು ವಿಚಾರ ಸಂಕಿರಣವನ್ನು ಕುಮಟಾ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಅಡಿ ಸಂಘಟಿಸಿದರು.

ಅಣ್ಣ ಉ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾದಾಗ ಡಾ. ಎಂ.ಜಿ.ಯವರು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದರು. ಇಡೀ ಸಮ್ಮೇಳನ ಗೋಷ್ಠಿಯನ್ನು ಅರ್ಥಪೂರ್ಣವಾಗಿ ರೂಪಿಸಿ ಸಮ್ಮೇಳನ ಮುಗಿಯುವವರೆಗೂ ಜೊತೆಗಿದ್ದು ಅದ್ಭುತ ಯಶಸ್ಸನ್ನು ತಂದು ಕೊಟ್ಟರು. ಆಮೇಲೆ ಸಾಹಿತ್ಯ ಪರಿಷತ್ತಿನ ಸಂಪರ್ಕವನ್ನೇ ಬಿಟ್ಟರು.

“ಆರ್.ವಿ.ಯವರನ್ನು ಅಧ್ಯಕ್ಷರನ್ನಾಗಿಸಿ, ಆ ಸಮ್ಮೇಳನವನ್ನು ಅವಿಸ್ಮರಣೀಯಗೊಳಿಸುವುದು ನನ್ನ ಆಶಯ ಮತ್ತು ಕರ್ತವ್ಯವಾಗಿತ್ತು. ಹಾಗಾಗಿ ಅದನ್ನು ಮಾಡಿಸಿದೆ. ಮುಂದೆ ಅಲ್ಲಿ ನನಗೇನು ಕೆಲಸ?” ಎಂದು ಅಲ್ಲಿಂದ ಈಚೆ ಬಂದರು. “ಆರ್.ವಿ ಯವರು ನನ್ನನ್ನು ಮನೆಯವರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಬರವಣಿಗೆಯ ಹಲವು ಯೋಜನೆಯನ್ನು ಹಾಕಿಕೊಂಡಿದ್ದೆವು. ಅದು ಪೂರೈಸಲೇ ಇಲ್ಲ. ಓದಿನ ಮಧ್ಯೆ ಹೊಸತೇನಾದರೂ ಕಂಡರೆ ಕುಣಿದಾಡುವಷ್ಟು ರೋಮಾಂಚನಗೊಳ್ಳುತ್ತಿದ್ದರು. ಅವರು ಇನ್ನಷ್ಟು ವರ್ಷ ಬದುಕಬೇಕಿತ್ತು.” ಎಂದು ಎಂ. ಜಿ ನೆನಪಿಸಿಕೊಳ್ಳುತ್ತಾರೆ.

ಅಣ್ಣ ಮಣಿಪಾಲದಲ್ಲಿ ತೀವ್ರ ಅನಾರೋಗ್ಯದಲ್ಲಿ ಇದ್ದ ಸಂದರ್ಭ. ಹೆಚ್ಚು ಯೋಚನೆ ಮಾಡುವುದಾಗಲೀ ಬರೆಯುವುದಾಗಲೀ ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗೆ ನಾನು, ಮಾಧವಿ, ಇನ್ನಕ್ಕ, ಯಮುನಾ ಎಲ್ಲರೂ ಕುಳಿತಾಗ ಎಂ.ಜಿ.ಯವರ ಸುದ್ದಿ ಬಂತು. ಆತ ಆಗ ಕಣ್ಣರಳಿಸಿ ಕೇಳುತ್ತಿದ್ದ. ನಾನೆಂದೆ “ಅಣ್ಣ, ಆ ಎಂ.ಜಿ.ಯವರಿಗೆ ಸ್ವಲ್ಪ ಅಹಂ ಇದೆ ಅಂತ ಕೆಲವರು ಹೇಳುತ್ತಿರುತ್ತಾರೆ. ಕಾರ್ಯಕ್ರಮಕ್ಕೆ ಕರೆದರೆ ಬರುವುದಿಲ್ಲ. ಯಾರ ಬಗ್ಗೆ ಮಾತನಾಡಲು ಕೊಟ್ಟರೂ ಸ್ವಲ್ಪ ಖಾರವಾಗಿ ಮಾತನಾಡುತ್ತಾನೆ. ಅವರ ವಾದವನ್ನೇ ಒಪ್ಪಬೇಕು ಅನ್ನುತ್ತಾರೆ. ನನಗೂ ಹಾಗೇ ಅನ್ನಿಸ್ತದೆ. ನಿಂಗ್ ಹಾಗೆ ಅನ್ನಿಸುವುದಿಲ್ಲಾ?” ಅಂತ ಅವನನ್ನು ರೇಗಿಸಲು ಪ್ರಯತ್ನಿಸಿದೆ.

ಆಗ ಆತ ಸಿಟ್ಟಾಗದೇ “ಅವರ ಬುದ್ಧಿವಂತಿಕೆಗೆ ಅಹಂ ತುಂಬಾ ಇರಬೇಕಾಗಿತ್ತು. ಆದ್ರೆ ಸ್ವಲ್ಪವೇ ಇದೆ. ಅಷ್ಟು ಇರಬೇಕು. ಹಾಗೆ ಇರೋದಕ್ಕೆ ಅವರಿಗೆ ಯೋಗ್ಯತೆ ಇದೆ” ಎಂದು ಹಾವಭಾವ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ. ನಾವೆಲ್ಲಾ ಮನಸ್ಸಿನಲ್ಲೇ ನಕ್ಕೆವು. ಅಣ್ಣ ತೀರಿಕೊಂಡಾಗ “ಸಹಯಾನ” ಎನ್ನುವ ನೆನಪಿನ ಪುಸ್ತಕವನ್ನು ಸಂಪಾದಿಸಿಕೊಟ್ಟರು. ಈಗಲೂ ಎಂ. ಜಿ ಹೆಗಡೆಯವರು ತಂದೆಯವರ ಮೇಲೆ ತೋರಿಸುತ್ತಿದ್ದ ಪ್ರೀತಿಯನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ನಮ್ಮ ದುಷ್ಟಕೂಟದ ಮಾರ್ಗದರ್ಶಕರಾಗಿ ಪ್ರೀತಿ ಪಾತ್ರರಾಗಿದ್ದಾರೆ.

ಎಂ.ಜಿ.ಯವರು ಅಂತಲ್ಲ, ಕೇಶವ ಶರ್ಮ, ಜಯಂತ ಕಾಯ್ಕಿಣಿ, ಚಿಂತಾಮಣಿ ಕೊಡ್ಲಕೆರೆ, ಡಾ. ಮಾಧವಿ ಭಂಡಾರಿ ಉಡುಪಿ, ಪ್ರಕಾಶ ಕಡಮೆ, ಸುನಂದಾ, ಕೃಷ್ಣ ನಾಯಕ ಹಿಚ್ಕಡ, ಕನ್ನಿಕಾ ಹೆಗಡೆ, ಕಿರಣ, ಶ್ರೀಪಾದ, ತಮ್ಮಣ್ಣ ಬೀಗಾರ, …… ಹೀಗೆ ಹಲವರನ್ನು ಆತ ಪ್ರೀತಿಯಿಂದ ಪ್ರೋತ್ಸಾಹಿಸಿದ.

ಆತ ಹೀಗೆ ಅವರ ಬರಹ ಪತ್ರಿಕೆಯಲ್ಲಿ ಬಂದರೆ ಸಾಕು, ಓದಿ ಮೆಚ್ಚುಗೆಯ ಸಾಲುಗಳು ಪೋಸ್ಟ್ ಕಾರ್ಡನಲ್ಲಿ ಅವರಿಗೆ ಹೋಗುತ್ತಿದ್ದವು. ಹೆಣ್ಣು ಮಕ್ಕಳು ಸ್ವಲ್ಪ ಬರೆದರೂ ಸಾಕು; ಸಾಮಾನ್ಯವಾದ ಒಂದು ಕೃತಿ ಬಂದರೂ ಸಾಕು. ಅವರೆಲ್ಲಾದರೂ ಒಂದೇ ಒಂದು ಭಾಷಣ, ಲೇಖನ ಇದ್ದರೂ ಸಾಕು ಅವನ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಒಂದು ಕಾರ್ಡ್ ಬರೆದು ಅಥವಾ ಫೋನ್ ಮೂಲಕ ಪ್ರೋತ್ಸಾಹಿಸುತ್ತಿದ್ದ.

ಅವನಿಗೆ ಲೇಖಕರ ವಯಸ್ಸು ಮುಖ್ಯ ಆಗಲಿಲ್ಲ. ಅವರ ಕಾಳಜಿ, ಬದುಕಿನ ಬಗೆಗೆ ಅವರಿಗಿರುವ ಶ್ರದ್ಧೆಯೇ ಮುಖ್ಯವಾಗಿತ್ತು.
“ಹೊಸ ಆಲೋಚನೆಗಳು ವಿಶ್ವದ ಎಲ್ಲಿಂದಲೇ ಬಂದರೂ ಅದನ್ನು ಸ್ವೀಕರಿಸಬೇಕು” ಎನ್ನುವ ಆಶಯ ನಮ್ಮ ಪ್ರಾಚೀನ ಗ್ರಂಥದಲ್ಲಿಯೇ ಇದೆ ಎಂದು ಸೋ ಕಾಲ್ಡ್ ಹಿಂದೂ ಮುಖಂಡರೆನ್ನಿಸಿಕೊಂಡವರು (ಹಾಗೆ ತಮಗೆ ತಾವೇ ಕರೆದುಕೊಳ್ಳುವವರು) ಬೊಬ್ಬೆ ಹೊಡೆಯುತ್ತಿರುತ್ತಾರೆ.

ಆದರೆ ತಮ್ಮ ಬದುಕಿನಲ್ಲಿ ಎಂದೂ ಇದನ್ನು ಅಳವಡಿಸಿಕೊಂಡಿರುವುದಿಲ್ಲ. ಆದರೆ “ಹೊಸ ಆಲೋಚನೆಗಳು ವಿಶ್ವದ ಎಲ್ಲಿಂದಲೇ ಬಂದರೂ ಅದನ್ನು ಸ್ವೀಕರಿಸಬೇಕು” ಎನ್ನುವ ಅರಿವು ಯಾವತ್ತೂ ವೇದಗಳನ್ನೂ, ಉಪನಿಷತ್ತನ್ನೂ ಒಳಗೊಂಡಂತೆ ಪ್ರಾಚೀನ ಗ್ರಂಥಗಳನ್ನು ವಿಮರ್ಶಾತ್ಮಕವಾಗಿಯೇ ನೋಡುವ ಅಣ್ಣ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಒಂದು ಶ್ರೇಷ್ಠ ಗುಣ. ಇದು ವೇದ-ಉಪನಿಷತ್ತನ್ನು ಓದಿ ರೂಢಿಸಿಕೊಂಡಿದ್ದಲ್ಲ. ಅವನಲ್ಲಿರುವ ಗುಣ ಕಾಕತಾಳೀಯವಾಗಿ ಅಲ್ಲಿಯೂ ಅದು ಇತ್ತು.

‍ಲೇಖಕರು avadhi

30 June, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading