ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು…!?

‘ಆಹಾ.. ಚಹಾ’ ಸರಣಿ

ಸುಧಾ ಚಿದಾನಂದಗೌಡ 

ಬಂದವರಿಗೆಲ್ಲ ಸತ್ಕರಿಸಿ ಕುಳ್ಳಿರಿಸಿ
ಗಟ್ಟಿಹಾಲಿಗೇನೇ ಚಹದಪುಡಿ, ಸಕ್ಕರೆ ಬೆರೆಸಿ
ಜೊತೆಗೆ ಘಮಕ್ಕಿರಲೆಂದು ಒಂದೇ ಏಲಕ್ಕಿ
ಚೂರೇ ಹಸಿಶುಂಠಿ ಬೆರೆಸಿ
ಹದವಾಗಿ ಕುದಿಯುತ್ತಿರುವುದ ನೋಡುತ್ತಾ ಕುದಿಯುತ್ತಿದ್ದೇನೆ
ನಾನು ನೀನು ಇನ್ನೂ ಮುಖಾಮುಖಿ ಚಹಾ ಹೀರಿಲ್ಲ..
ಹೊಸಸ್ಟೈಲಿನ ಕಪ್ಪುಸಾಸರು
ಚೆಂದದ ಟ್ರೇ ಉಪಚರಿಸುವ ಪರಿಗೆ ಎಲ್ಲರೂ ಫಿದಾ
ನಗುನಗುತಾ ಎಲ್ಲರಿಗು ಚಹಾ ಕೊಟ್ಟು ನೋಡುತ್ತ ಇದ್ದೇನೆ
ನಾನು ನೀನು ಇನ್ನೂ ಚಹಾಕ್ಕಾಗಿ ಎದುರುಬದುರು ಕುಳಿತಿಲ್ಲ
ಕೊತಕೊತಿಸುತ್ತೇನೆ ನೆನಪಿನಲ್ಲಿ ಸದಾ

ನೀನು ಕರೆದಿದ್ದೀ- ಕಿವಿಯಲಿ ಮಗನ ಕೂಗಿತ್ತು
ಮತ್ತೆ ಕುಕ್ಕರ್ ಕರೆಯುತ್ತಿತ್ತು
ನಾನೂ ಕರೆದಿದ್ದೆ- ನೀನೆಲ್ಲೋ ವಿಮಾನದಲ್ಲಿದ್ದೆ
ಅಥವಾ ಗೆಳೆಯನೊಡನೆ ಗ್ಲಾಸು ಹಿಡಿದಿದ್ದೆ

ಗಂಟಲುಬ್ಬತ್ತದೆ- ಆಸೆಯ ಕಟ್ಟೆಗೆ ಮೌನದ ಚೌಕಟ್ಟು
ಹೇಳು ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು..?!

‍ಲೇಖಕರು avadhi

11 March, 2017

3 Comments

  1. shama nandibetta

    ಗಂಟಲುಬ್ಬತ್ತದೆ- ಆಸೆಯ ಕಟ್ಟೆಗೆ ಮೌನದ ಚೌಕಟ್ಟು
    ಹೇಳು ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು..?!

    beautiful

  2. shrivatsadesai

    ನಾಳೆ ಮಾಡುವೆ ಮತ್ತೆರಡು ಚಹಾ.

    ಯಾರೂ ಬಂದಿಲ್ಲ, ಅವಳೂ ಇಲ್ಲ,
    ಎಂದಿನಂತೆ ಅವಳಿಗೆ ಬೇಕಾದ ಹಾಗೇ
    ಚಹಾ- ಅಲ್ಲ, ಅವಳಂದಂತೆ ’ಟೀ” ಮಾಡಿದ್ದೇನೆ
    ಅವಳದೇ ’ಮಗ್ಗು’ (ಇನ್ನೂ ಕಾದಿಟ್ಟಿದ್ದೇನೆ).
    ಟೀ ಬ್ಯಾಗಿಗೆ ಕುದಿಯುವ ಕೆಟಲ್ ಬಿಸಿನೀರು
    ’’ಒಂದೇ ಚಮಚ ಸಕ್ಕರೆ, ಗೋಲ್ದನ್ ಕಲರ್ ಬರುವಷ್ಟೇ ಹಾಲು”
    ನಿನ್ನ ಆಣೆ!
    ನಿನ್ನದೇ ಸಾಸರ್ ನಲ್ಲಿ ಬಿಸ್ಕತ್ತು
    ಎಂದಿನಂತೆ ಕಾಯುತ್ತಾ ಕುಳಿತಿರುವೆ ಟೇಬಲ್ ಬಳಿ.
    ಎದುರಿಗಿನ ನಿನ್ನ ಕುರ್ಚಿ ಖಾಲಿಯಾಗೇ ಇದೆ
    ಏಳು ವರ್ಷಗಳಿಂದ!
    ಎರಡು ಚಮಚ ಹಾಕಿದರೂ ನನ್ನ ’ಮಗ್’ ನ ಚಹಾ ಉಪ್ಪುಪ್ಪು!
    ಏಳು ವರ್ಷಗಳಾದರೇನು, ಕಣ್ಣೀರು ಬತ್ತಿಲ್ಲ!
    ಎಂದಿನಂತೆ ನಿನ್ನ ಪಾಲಿನದು ’ಸಿಂಕ್’’ಗೆ
    ನನ್ನ ಪಾಲಿಗೆ ಬರೀ ಸಿಹಿ-ಕಹಿ ನೆನಪು!
    ನಾಳೆ ಮಾಡುವೆ ಮತ್ತೆರಡು ಚಹಾ.

    ಶ್ರೀವತ್ಸ ದೇಸಾಯಿ (ಯು ಕೆ)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading