ಹೆಚ್ ಎನ್ ಗೆ ನಾಳೆ ೧೦೦ ವರ್ಷದ ಬರ್ತಡೇ ಸಂಭ್ರಮ.
ಅವರು ಮೇಲೆಲ್ಲೋ ನಗುತ್ತಿರಬಹುದು (ಸ್ವರ್ಗ, ನರಕ ಎಲ್ಲಾ ಅವರು ನಂಬುತ್ತಿರಲ್ಲಿಲ್ಲ) ಆದರೂ ಅವರೆಲ್ಲೋ ಇದ್ದಾರೆ ಎಂದುಕೊಂಡೇ ಅವರಿಗೆ ಬರ್ತಡೇ ವಿಷಸ್.
ಹೆಚ್ ಎನ್ ಉಪ್ಪಿಟ್ಟು ಮತ್ತು ನ್ಯಾಷನಲ್ ಕಾಲೇಜು
ಮೇಘನಾ ಸುಧೀಂದ್ರ
ನಮ್ಮನೆಯಲ್ಲಿ ಉಪ್ಪಿಟ್ಟು ಮಾಡಿದಾಗಲ್ಲೆಲ್ಲಾ ಚಿಕ್ಕವರಾದಾಗ ನಾವು ಅದನ್ನ ಕಾಂಕ್ರೀಟ್ ಎಂದು ಕರೆಯುತ್ತಿದ್ದೆವು. ಅದು ಯಾಕೋ ನಮಗೆ ರುಚಿಸಲೇ ಇಲ್ಲ. ಪ್ರತಿ ಬಾರಿ ಉಪ್ಪಿಟ್ಟು ಮಾಡಿದಾಗ ,ಮನೆಯಲ್ಲಿ ದೊಡ್ಡ ಜಗಳವೇ ಆಗುತ್ತಿತ್ತು.
ಆದರೆ ಅಮ್ಮ ಮಾತ್ರ ಯಾವಾಗಲೂ “ಹೆಚ್ ಎನ್ ಅಮೇರಿಕಾದಲ್ಲಿ ಇದ್ದಷ್ಟು ದಿವಸ ಬರೀ ಉಪ್ಪಿಟ್ಟು ಮಾಡಿಕೊಂಡು ತಿಂದಿದ್ದರಂತೆ, ನೋಡಿ ಅವರು ಪಿ ಎಚ್ ಡಿ ಮಾಡಿದ್ದಾರೆ, ಹೈಸ್ಕೂಲ್ ಓದುವ ನಿನಗೆ ಇಷ್ಟೆಲ್ಲಾ ಕೊಭ್ಭಿರಬಾರದು” ಎಂದು ಅಮ್ಮ ಬೈಯ್ಯುತ್ತಲೇ ಉಪ್ಪಿಟ್ಟನ್ನ ಬಾಯಿಗೆ ತುರುಕುತ್ತಿದ್ದಳು.
ಯಾರು ಈ ಹೆಚ್ ಎನ್ ಎಂದು ನಾನು ಯೋಚನೆ ಮಾಡುತ್ತಿರುವಾಗಲೇ ನಮ್ಮ ತಾತ ಒಂದು ಪುಸ್ತಕ ತಂದಿಟ್ಟರು “ಹೋರಾಟದ ಹಾದಿ – ಡಾ ಹೆಚ್ ನರಸಿಂಹಯ್ಯ” ಎಂದಿತ್ತು.
ಅವರ ಸಹಿ ಇರುವ ಪುಸ್ತಕ ಕಂಡು ನಾನು ಇವರು ದೊಡ್ಡ ಸಾಹಿತಿಗಳು ಅಂದುಕೊಂಡೆ. ನೋಡಿದರೆ ಮೊದಲ ಪುಟಗಳಲ್ಲೇ ನಾನೊಬ್ಬ ಸಾಮಾನ್ಯ ಫಿಸಿಕ್ಸ್ ಶಿಕ್ಷಕ ಎಂದು ಬರೆದುಕೊಂಡಿದ್ದರು. ಖಾದಿ ಬಟ್ಟೆ ಮಾತ್ರ ಹಾಕಿಕೊಂಡಿದ್ದ ಅವರ ವೇಷಭೂಷಣ ನನಗೆ ಇವರು ಹೋರಾಟಗಾರ ಎಂದು ಪರಿಚಯಿಸಿತು. ಆ ಪುಸ್ತಕ ಅವರ ಇಡೀ ಜೀವನ ನನಗೆ ಪರಿಚಯ ಮಾಡಿಸಿತು. ನಾನು ನ್ಯಾಷನಲ್ ಕಾಲೇಜಿಗೆ ಸೇರಬೇಕೆಂದು ನಿರ್ಧಾರ ಮಾಡಿದೆ. ಹಾಗೆ ಪಿಯೂಸಿಯಲ್ಲಿ ಸೇರಿಯೂ ಬಿಟ್ಟೆ. ನ್ಯಾಷನಲ್ ಕಾಲೇಜು ನನಗೆ ತೋರಿಸಿದ ಪ್ರಪಂಚ ಯಾವುದಕ್ಕೂ ಸರಿಸಾಟಿಯಾಗೋದಿಲ್ಲ.
ದಕ್ಷಿಣ ಬೆಂಗಳೂರಿನಲ್ಲಿ ಒಂದು ಪುಟ್ಟ ಶಾಲೆಯಲ್ಲಿ ಓದಿದ್ದ ನನಗೆ ನಾನೇ ರಾಜ ನಾನೇ ರಾಣಿ ಎಂಬ ಅಹಂ ಇತ್ತು. ಅಂದರೆ ಸಂಗೀತದಲ್ಲೂ ನನಗೇ ಪ್ರೈಝು, ಬರಹದಲ್ಲೂ ನನಗೇ ಪ್ರೈಝು ಆಮೇಲೆ ಗಣಿತದಲ್ಲೂ ನನಗೇ ೧೦೦ ಇರುತ್ತಿತ್ತು. ಪಿಯೂಸಿ, ಅವತ್ತು ಕ್ಲಾಸಿನಲ್ಲಿ ೧೦೮ ಜನ ವಿದ್ಯಾರ್ಥಿಗಳು. ಕ್ಲಾಸಿಗೆ ಬಂದ ಗಣಿತದ ಮೇಷ್ಟ್ರು “ಯಾರಿಗೆಲ್ಲಾ ಗಣಿತದಲ್ಲಿ ೧೦೦ ಬಂದಿದೆ ಕೈಯೆತ್ತಿ” ಎಂದರು ಅರ್ಧ ಕ್ಲಾಸು ಎದ್ದು ನಿಂತಿತು. ಅಲ್ಲಿಗೆ ನನ್ನ ಅಹಂ ಕಳೆದುಹೋಯಿತು. ಇನ್ನು ಸಂಗೀತ ಟ್ರೂಪಿಗೆ ಆಯ್ಕೆಯಾಗಿದ್ದು ಮೂರನೇ ಲಿಸ್ಟಿನಲ್ಲಿ, ನಾಟಕಕ್ಕಂತೂ ಲೈಟಿಂಗ್ ಮಾಡು ಎಂದು ಕಳಿಸುವಷ್ಟು ಜನ ಬಂದಿದ್ದರು. ಒಂದು ಪ್ರತಿಭಾವಂತರ ದಂಡು ಅಲ್ಲಿತ್ತು. ನಮಗೆ ಪಾಠ ಮಾಡುತ್ತಿದ್ದ ಎಲ್ಲರೂ ಹೆಚ್ ಎನ್ ಅವರ ಹೆಸರನ್ನು ಒಂದು ದಿನವಾದರೂ ಹೇಳಿಯೇ ಇದ್ದರು.
ಕಾಲೇಜಿನ ಎಲ್ಲಾ ಶಿಕ್ಷಕರ ಕೊಠಡಿಗೆ ಬಾಗಿಲು ಅರ್ಧವೇ ಇರುತ್ತಿತ್ತು, ವಿದ್ಯಾರ್ಥಿಗಳು ಯಾವಾಗಬೇಕಾದರೂ ಅವರನ್ನು ಬಂದು ಮಾತಾಡಿಸಬಹುದು ಎಂದು ಹೇಳಲು. ಇದು ಯಾಕೆ ಎಂದು ಕೇಳಿದಾಗ, ಹೆಚ್ ಎನ್ ಹಾಗೆ ಮಾಡುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದರು. ಈಗಲೂ ನ್ಯಾಷನಲ್ ಕಾಲೇಜಿನಲ್ಲಿ ಇಂಟಿಗ್ರೇಟೆಡ್ ಅಂತೇನೇನೋ ಐ ಐ ಟಿ ಕೋಚಿಂಗ್ ಇಲ್ಲ. ಮಕ್ಕಳು ಕ್ಲಾಸಿನಲ್ಲಿ ಕೂರಬಹುದು, ಇಲ್ಲಾ ಬಿ ವಿ ಜಗದೀಶ್ ಸೈನ್ಸ್ ಸೆಂಟರಿನಲ್ಲಿ ಕೂರಬಹುದು ಇಲ್ಲಾ ಹೆಚ್ ಎನ್ ಕಲಾಕ್ಷೇತ್ರದಲ್ಲಿ ಕೂರಬಹುದು. ಅಟೆಂಡೆನ್ಸ್ ಶಾರ್ಟೇಜ್ ಬೇರೆ ವಿಷಯ ಆದರೆ ಮಕ್ಕಳನ್ನ ಯಾವುದೇ ಕಾರಣಕ್ಕೂ ಎಲ್ಲೂ ಫೋರ್ಸ್ ಮಾಡೋದಿಲ್ಲ. ಇದೂ ಹೆಚ್ ಎನ್ ಅವರ ಕೊಡುಗೆ ಎಂದೂ ನಮ್ಮ ಶಿಕ್ಷಕರು ಹೇಳುತ್ತಿದ್ದರು.
ಎಲ್ಲಾ ವಿದ್ಯಾರ್ಥಿಗಳನ್ನ ಕಡ್ಡಾಯವಾಗಿ ಎಷ್ಟೇ ಮೇಧಾವಿಗಳಾಗಿದ್ದರೂ ಒಮ್ಮೆಯಾದರೂ ಸ್ಟೇಜು ಹತ್ತಿಸುವ ಕೆಲಸ ನಮ್ಮ ಕಾಲೇಜು ಮಾಡುತ್ತಿತ್ತು. ಅಂದರೆ ನಾಟಕದ ಸ್ಪರ್ಧೆ, ಸಂಗೀತ ಸ್ಪರ್ಧೆ ಇಲ್ಲಾ ಎಲೆಕ್ಯೂಷನ್ ಎಲ್ಲದಕ್ಕೂ ಫ್ಲಾಪ್ ಆದರೂ ಸರಿಯೇ ಸ್ಟೇಜು ಹತ್ತಲೇ ಬೇಕಿತ್ತು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹೆಚ್ ಎನ್ ಹಾಕಿಕೊಟ್ಟ ಹಾದಿಯದು.
ನನಗೆ ಹೆಚ್ ಎನ್ ಬಗ್ಗೆ ತುಂಬಾ ಗೌರವ ಅನ್ನಿಸೋದು ಅವರು ಮೂಢನಂಬಿಕೆಗಳನ್ನ ಯಾವುದೇ ಕಾರಣಕ್ಕೂ ಒಪ್ಪುತಿರಲ್ಲಿಲ್ಲ. ಪುಟ್ಟಪರ್ತಿ ಸಾಯಿಬಾಬಾ ಹತ್ತಿರ ಅಲ್ಲೇ ಹೋಗಿ ನೀವು ಪವಾಡ ಮಾಡುವುದು ನಿಜವೇ ಆದರೆ ನನಗೆ ನಿಂಬೆಹಣ್ಣು ಬೇಡ ಕುಂಬಳಕಾಯಿ ಕೊಡಿ ಎಂದು ತುಂಬಿದ ಸಭೆಯಲ್ಲಿ ಹೇಳಿದ್ದರು. ಅದು ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ ಎಂದು ಹೇಳುವ ಒಂದು ಉದಾಹರಣೆಯಷ್ಟೇ. ಈಗಲೂ ಅದು ನಮ್ಮನ್ನ ಕಾಯುವ ಒಂದು ವಾಕ್ಯ.
ಸಿಂಪ್ಲಿಸಿಟಿ ಅದೂ ಇದೂ ಭಾಷಣ ಮಾಡುವ ಎಲ್ಲ ಸೆಲೆಬ್ರಿಟಿಗಳು ಅವರಿದ್ದ ಹಾಗೆ ೧೦% ಇದ್ದುಬಿಟ್ಟರೆ ಅದಕ್ಕಿಂತ ದೊಡ್ಡ ಉಪಕಾರ ಇನ್ನೊಂದಿಲ್ಲ. ಈಗಲೂ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯರ ನೆಟ್ವರ್ಕ್ ತುಂಬಾ ಸ್ಟ್ರಾಂಗ್. ಬಾರ್ಸಾದಲ್ಲಿದ್ದರೂ, ಅಮೇರಿಕಾಗೆ ಹೋದರೂ ಇಲ್ಲಾ ಇಲ್ಲೇ ಕಾಡುಬೀಸನಹಳ್ಳಿಯಲ್ಲಿ ಬಂದರೂ ಒಬ್ಬರಾದರೂ ಸಿಗುತ್ತಾರೆ ಹರಟೆ ಕೊಚ್ಚಬಹುದು ಮತ್ತು ಒಂದು ರೀತಿಯ ಪ್ರೀತಿ ಸಿಕ್ಕೇ ಸಿಗುತ್ತದೆ. ಒಂದು ದೊಡ್ಡ ಸಿನಿಮಾ ತಾರೆ ಸಿಕ್ಕಾಗಲೂ ಅವರ ಹತ್ತಿರ ಮಾತಾಡೋವಾಗ, “ನೀನೂ ನ್ಯಾಷನಲ್ ಕಾಲೇಜಾ, ಯಾವ ಬ್ಯಾಚು” ಎಂದು ಕೇಳುವಷ್ಟು ಹತ್ತಿರ ಆಗಿಸುತ್ತದೆ ಈ ಕಾಲೇಜು. ಒಂದು ಕ್ರಿಕೆಟರ್ ಹತ್ತಿರ ಮಾತಾಡಿದಾಗಲೂ ಈ ಪ್ರಶ್ನೆ ಬಂದಿತ್ತು. ಮೊನ್ನೆ ಮೊನ್ನೆ ನನ್ನ ಹಳೇ ಆಫೀಸಿನ ದೊಡ್ಡ ಹುದ್ದೆಯಲ್ಲಿರುವ ಮನುಷ್ಯರ ಹತ್ತಿರ ಮಾತಾಡೋವಾಗ ಯಾವುದೋ ವಿಷಯಕ್ಕೆ ನ್ಯಾಷನಲ್ ಕಾಲೇಜೇ ನಮ್ಮಿಬ್ಬರ ಮಾತಿನ ಕೊಂಡಿಯಾಯಿತು.
ಇದು ನಮ್ಮ ಹೆಚ್ ಎನ್ ಹಾಕಿಕೊಟ್ಟ ಹಾದಿ. ಯಾವುದೇ ಕಾರಣಕ್ಕೂ ನಮ್ಮ ಜ್ಯೂನಿಯರ್ಸ್, ಸೀನಿಯರ್ಸನ್ನ ಮರೆಯದೇ ಇರಬಾರದು ಎಂದು. ಅವರು ಕಷ್ಟ ಪಟ್ಟು ಈ ಹಾದಿಯನ್ನು ತುಳಿದರು ನಾವೆಲ್ಲ ಇಷ್ಟಪಟ್ಟು ಈ ಹಾದಿಯಲ್ಲಿ ನಡೆಯುತ್ತಿದ್ದೇವೆ. ನಾನು ಅವರ ಕ್ಲಾಸಿನಲ್ಲಿ ಕೂತಿರದಿಲ್ಲಬಹುದು ಆದರೆ ಅವರು ಕಟ್ಟಿದ ಸಂಸ್ಥೆಗಳಾದ ಬೆಂಗಳೂರು ಸೈನ್ಸ್ ಫೋರಮ್, ಬಿ ವಿ ಜಗದೀಶ್ ಸೈನ್ಸ್ ಸೆಂಟರಿನ ಅದೆಷ್ಟೋ ಕ್ಲಾಸುಗಳಿಗೆ ಹೋಗಿ ಕೂತಿದ್ದೇನೆ ಅದೂ ನನ್ನ ಕಾಲೇಜಿನ ಐಡಿ ಕಾರ್ಡು ತೋರಿಸಿ. ಯಾವುದೇ ಮಗು ಅವರ ಕಾಲೇಜಿನಲ್ಲಿ ಓದಿದರೆ ಏನಾದರೂ ಒಂದು ಮಹತ್ತರ ಸಾಧನೆ ಮಾಡುವ ಹಾದಿಯನ್ನು ಹಾಕಿಕೊಟ್ಟು ತಾವು ಹಿನ್ನೆಲೆಯಲ್ಲಿ ನಿಂತು ನೋಡಿ ನಗುತ್ತಿರುವ ಹೆಚ್ ಎನ್ ಗೆ ನಾಳೆ ೧೦೦ ವರ್ಷದ ಬರ್ತಡೇ ಸಂಭ್ರಮ. ಅವರು ಮೇಲೆಲ್ಲೋ ನಗುತ್ತಿರಬಹುದು (ಸ್ವರ್ಗ, ನರಕ ಎಲ್ಲಾ ಅವರು ನಂಬುತ್ತಿರಲ್ಲಿಲ್ಲ) ಆದರೂ ಅವರೆಲ್ಲೋ ಇದ್ದಾರೆ ಎಂದುಕೊಂಡೇ ಅವರಿಗೆ ಬರ್ತಡೇ ವಿಷಸ್.
ಅವರಂತೆ ಮತ್ತೊಬ್ಬರು ಇರೋದಕ್ಕೆ ಸಾಧ್ಯವೇ ಇಲ್ಲ..
ತುಂಬಾ ಚೆನ್ನಾದ ಬರಹ