ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹೂ ಮನೆ’ ಹೊಕ್ಕೆ..

ರೇಣುಕಾ ನಿಡಗುಂದಿ 

ನಾ ಗೇಟು ತೆಗೆದು ಒಳಕಾಲಿಡುವಾಗ ಹೇಮಕ್ಕ ತಮ್ಮ ಗಿಡದಾಗಿಂದ ಹಣ್ಣಿಗಿಡುವ ಮಾವಿನಕಾಯಿಗಳನ್ನು ಬಲು ಜತನದಿಂದ ಇಳಿಸುತ್ತಿದ್ದರು ಕೆಲಸದ ಹುಡುಗರಿಂದ. ಒಳಗ ನಡೀರಿ ಬಂದೆ ಎಂದು ಕೂಗಿ ಹೇಳಿದರು. ನಾ ಮೆಟ್ಟಿಲು ಹತ್ತುವ ಮೊದಲೇ ಓಡಿ ಬಂದ ‘ ಬೆಳ್ಳಿ’ ಯನ್ನು ಕಂಡು ನಾನು ತುಸು ಅಧೈರ್ಯಳಾಗತಿದ್ದಂತೆ ಬೆಳ್ಳಿ ಶಾಂತಳಾಗಿ ಮೆಲ್ಲಗೇ ಪರಿಚಿತರ ಸ್ನೇಹದಲ್ಲಿ ಮುಲುಕಾಡುತ್ತಿರುವಾಗಲೇ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ – ನಿಮ್ ಗುರುತಾ ಹಿಡಿದ್ಲ ನೋಡ್ರಿ’ ಬರ್ರಿ ಬರ್ರಿ ಎಂದು ಬರಮಾಡಿಕೊಂಡರು.

ಈ ‘ಹೂಮನೆ’ನೂ ನನಗ ತವರಿನ ನೆಲದಲ್ಲಿ ಬಲು ನೆಮ್ಮದಿಕೊಡುವ ಮನೆ. “ಸೀದಾ ಟ್ರೇನ ಇಳದ ನಮ್ ಮನೀಗೆ ಬಂದ ಬಿಡ್ರಿ..ನಮ್ ಕೂಡ ಎರಡದಿನ ಇದ್ದು ನಿಮ್ಮನೀಗೆ ಹೋಗ್ರಿ ‘ ಈ ಮಾತು ಯಾವಾಗಲೂ ಹೇಳತಾರ ನನ್ನ ಪ್ರೀತಿಯ ಪಟ್ಟಣಶೆಟ್ಟಿ ದಂಪತಿಗಳು. ನಾನೂ ಮರತಬಿಡತೇನಿ ಟ್ರೇನ ಇಳದ ಕೂಡಲೇ. ಮುಂದಿನ ಸಲ ಖರೇನ ಈ ಸ್ನೇಹಜೀವಿಗಳ ಕೂಡ, ಬೆಳ್ಳಿ ಕೂಡ ಎರೆಡದಿನ ಇದ್ದ ಬರಬೇಕಂತ ಭಾಳ ಮನಸೇತಿ.

ಎಷ್ಟೊಂದು ಮಾತು..ಹರಟೆಗಳ ನಡುವೆ ಹೇಮಾ ಪುಟಕ್ಕನೇ ಒಳಗೋಡಿ ಮಾವಿನ ಹಣ್ಣು ಹೆಚ್ಚಿ ತಂದು..ಎಲ್ಲಾನೂ ನಿನಗ, ನೀನ ತಿನಬೇಕು, ನಾವ ತಿಂದೇವಿ’ ಅಂದ್ರು. ನಾ ಆರಾಮಾಗಿ ಹಣ್ಣು ತಿನ್ನತಾ..ಮಾತಾಡತಾ ಕುಂತೆ. ಸಾಹಿತ್ಯ ಮೇಳ, ಸಧ್ಯದ ವಿದ್ಯಮಾನಗಳು, ಹೂ, ಸಮುದ್ರ, ಪುಸ್ತಕ ಪ್ರಕಾಶನ, ಪುಸ್ತಕಗಳ ಅನುವಾದ. , ಹತ್ಯೆಗೊಳಗಾದ ಕಲಬುರ್ಗಿ ಅವರು, ಪನ್ಸಾರೆ, ದಭೋಲಕರ…ಒಂದೇ ಎರಡೇ ಮಾತಾಡದ ಸುದ್ದಿ. ಹೂಮನೆಯಿಂದ ಹೊರಗೆ ಹೊರಡಬೇಕೆನಿಸೂದೇ ಇಲ್ಲ.

ಆಗಲೇ ಬಿಸಿಲಿನಲ್ಲಿ ಪಟಪಟ ಮಳೆ ಹನಿ ಉದರತೊಡಗಿತ್ತು. ಸಣ್ಣ ಮಕ್ಕಳಂಗ ಓಹ್ ಬಿಸಿಲೂ ಮಳಿನೂ ಕೂಡೇ ಬರಾತೇತಿ…ಎಲ್ಯರ ಕಾಮನಬಿಲ್ಲೂ ಮೂಡಿರಬೇಕು ಅಂದೆ. SPS ಸರ್ ಧಾರವಾಡದಾಗ ಎಲ್ಲಿ ನೋಡಿದರೂ ಕಟ್ಟಡಗಳೇ ನಿಂತಾವ. ಅವರ ಮನೀ ಎದುರೂ ಒಂದು ಮಹಾದೊಡ್ಡ ಬಿಲ್ಡಿಂಗ ನಿಂತಿದೆ. ಮೊದಲೆಲ್ಲ ಹೂಮನೆಯಿಂದ ರೈಲು ಹೋಗುವುದೂ ಕಾಣತಿತ್ತು.. ದೂರ ದೂರದ ಗುಡ್ಡಗಳೂ ಕಾಣತಿದ್ವು. ಈಗ ಏನೂ ಕಾಣದ ಕಾಂಕ್ರೀಟ್ ಕಾಡಾಗಿದೆ ಧಾರವಾಡ. ಯಾಲಕ್ಕಿ ಶೆಟ್ಟರ ತೋಟ ಅಂದ್ರ ನನಗಿನ್ನೂ ವಿಶಾಲವಾದ ಮಾವಿನತೋಟ ನೆನಪಿದೆ. ಈಗ ಮನೆ. ಬಂಗಲೆಗಳೇ ತುಂಬಿವೆ. ನನ್ನ ಮಗ ಜೆಎಸ್ಎಸ್ ಕಾಲೇಜಿನಲ್ಲಿ ಓದುವಾಗ ಹಂಚಿನಮನೀ ಕಡೆ ಟ್ಯೂಷನ್ ಹೋಗತಿದ್ದ ಈಗ ಹಂಚಿನಮನೀ ಕಾಲೇಜ್. ತಿಮ್ಮನಗೌಡ ಕಾಲೇಜ್ ಹುಟ್ಟಿಕೊಂಡಾವ.

ಮಾವಿನ ಹಣ್ಣು ತಿಂದು ಸಿಹಿಯಾದ ಬಾಯಿಗೆ ಖಾರದ ಪಾಪ್ ಕಾರ್ನ ಚೂಡಾ ಕೊಟ್ಟರು. ಅದೂ ಪ್ರೀತಿಯಲ್ಲಿ ಬಹಳವೇ ರುಚಿಯಾಗಿತ್ತು. ಮತ್ತೆ ಬೆಳ್ಳಿಯೊಡನೆ ಅಂಗಳಕ್ಕೆ ಬಂದರೆ ಹೇಮಾರ ಅಂಗಳದಲ್ಲಿ ‘ಮದನಮಸ್ತಿ’ ಹೂವಿನ ಗಿಡವಿದೆ. ಒಂದು ಹೂ ಕಿತ್ತುತಂದು ತೋರಿಸಿದರು ಹೇಮಾ. ಏ.ಕೆ. ರಾಮಾನುಜನ್ ಅವರ ಪದ್ಯ ಗದ್ಯ ಓದಿದವರಿಗೆ ಮದನಮಸ್ತಿ ಹೂವು ಕಾಡಿಯೇ ಕಾಡಿರುತ್ತದೆ. ಹಾಗೇ ಸುಮ್ಮನೇ ರಾಮಾನುಜನ್ ಬರೆದಾರೋ ನಿಜವಾಗಲೂ ಮದನಮಸ್ತೀ ಗಿಡವಿದೆಯೋ ಅನ್ನುವ ಆ ಕುತೂಹಲವೂ ತಣಿಯಿತು ಆ ಹೂವನ್ನು..ಅದರ ಮಂದ ಮಂದವಾಗಿ ರಿಸುವ ಘಮಲನ್ನು ಆಘ್ರಾಣಿಸಿ.

ಬೆಳ್ಳಿ ಯನ್ನು ಮುದ್ದಾಡಿದ್ದೆ ಮುದ್ದಾಡಿದ್ದು. ಅಲ್ಲಿ ನಿಂತು ಇಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡೆವು. ಹೊರಡುವ ಸಮಯ. ಈ ಸಂಭ್ರಮದಲ್ಲಿ ರಾಜಕುಮಾರ ಮಡಿವಾಳರ ಇರಬೇಕಿತ್ತು ಪಾಪ ಕೆಲಸದ ಮ್ಯಾಲ ಬೆಳಗಾವಿಗೆ ಹೋಗಬೇಕಾತು.

ಹೂಮನೆಯಿಂದ ಹೊರಟೆ..ಹೋಗಲೇಬೆಕಲ್ಲ ನಮ್ಮನೆಗೆ ಅನ್ನುವ ಅನಿವಾರ್ಯದಿಂದ. ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಬೆಳ್ಳಿಯನ್ನು ತಿರುಗಾಡಿಸಿಕೊಂಡು ನನ್ಙನ್ನು ಬಸ್ ಹತ್ತಿಸಿ ಬರಲು ಜೊತೆಗೆ ಹೆಜ್ಜೆಹಾಕಿದರು.

ಹೇಮಾ..ಮತ್ತೊಮ್ನೆ ಬಂದರ ನಮ್ ಕಡೆ ಇದ್ ಹೋಗು ಆರಾಮಾಗಿ ‘ ಎಂದು ನೆನಪಿಸುವುದನ್ನು ಮರೆಯಲಿಲ್ಲ. ಹೂ ನಿನ್ನನ್ನು ಬಹುವಾಗಿ ಮಿಸ್ ಮಾಡಿಕೊಂಡೆ. ಹೂ ಪಟ್ಟಣಶೆಟ್ಟಿ, ಸಮುದ್ರ ಸಿಗಲಿಲ್ಲ…ಒಂದೆರಡು ಪುಸ್ತಕಗಳನ್ನು ಎದೆಗವಚಿಕೊಂಡು ಬಂದೆ.

 

‍ಲೇಖಕರು avadhi

12 May, 2017

1 Comment

  1. Mallappa

    ರೇಣುಕಕ್ಕ, ಏ ಭಾಳ ಛಂದ ಬರದಿರಿ ಬಿಡ್ರಪಾ. ನಮಗೆ ಒಂದ ನಮೂನಿ ಧಾರವಾಡದಾಗ ಮಾತಾಡ್ತಾ ನಿಂತಂಗಾತ ನೋಡ್ರಿ. ಮಾವಿನ್ ಹಣ್ ನೀವ್ ತಿಂದ ನಮ ಬಾಯಾಗ್ ನೀರ ತರಸಿದ್ರಿ. ಖರೆ ಅದ ಧಾರವಾಡ ಎನ್ ಬಂತು ಎಲ್ಲಾ ಊರು ಕಾಂಕ್ರೀಟ್ ಕಾಡ ಆಗ್ಯಾವ. ಹಳಿವೆಲ್ಲಾ ಹಳಿ ಮಂದಿ ಜೊಡಿ ಮೂಲಿ ಹಿಡದಾವ.ಇರ್ಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading