ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ನಿಯೋಗದ ಕಥೆ

ಸಂದಿಗ್ಧ

ಉಮೇಶ ದೇಸಾಯಿ

ಪ್ರವೇಶ ಮಾಡಿದ ರೂಮಿನಲ್ಲಿ ಅಷ್ಠು ಬೆಳಕಿರಲಿಲ್ಲ. ಕಿಟಕಿಗೆ ಗಾಢ ನೀಲಿ ಬಣ್ಣದ ಪರದೆ ಹಾಕಿದ್ದರು.ಸಾಲುಸಾಲಾಗಿ ನೆಲದ ಮೇಲೆ ರಬ್ಬರ ಶೀಟು ಹಾಕಲಾಗಿತ್ತು.
“ಅವರು ಹೆಂಗ ಮಕ್ಕೊಂಡಾರ..ಹಂಗ ನೀವೂ ಮಕ್ಕೊರ್ರಿ ಅರ್ಧಾತಾಸು ಅಲ್ಲಾಡಬ್ಯಾಡ್ರಿ..” ನರ್ಸು ಹೇಳಿ ಹೋದಳು. ಅವಾಗ ಮಂಗಲಾಗ ಗೊತ್ತಾಗಿದ್ದು ಇನ್ನೊಬ್ಬ ವ್ಯಕ್ತಿ ರೂಮಿನಾಗ ಇದ್ದಾರ ಅಂತ. ಆ ವ್ಯಕ್ತಿ ಹಾಸಿದ ಶೀಟ ಮ್ಯಾಲೆ ,ಸೊಟದ ಕೆಳಗ ದಿಂಬು ಇಟ್ಟುಕೊಂಡು ಗೋಡೆಗೆ ಎರಡೂ ಕಾಲು ಆನಿಸಿ ಮಲಗಿತ್ತು. ಸೀರಿ ತೊಡಿತನಾ ಏರಿಸಿಕೊಂಡು ನಿರ್ವಿಕಾರವಾಗಿ ಮಲಗಿದ ಅವಳನ್ನು ನೋಡಿ ಮಂಗಲಾಳಿಗೆ ಇರಿಸುಮುರಿಸಾತು.
“ಬರ್ರಿ ಅಕ್ಕಾರ ನಿಮಗ ಮೊದಲನೇ ಸಲಾ ಅಂತ ಕಾಣಸ್ತದ ಭಿಡೆ ಮಾಡಕೊಬ್ಯಾಡರಿ. ಬರ್ರಿ ಹಿಂಗ ಮಲಗರಿ.. ಆ ದಿಂಬ ನಿಮ್ಮ ಸೊಂಟದ ಕೆಳಗ ..ಹಂಗ ಮತ್ತ ಆ ಕಾಲು ಗೋಡೆಗೆ ಆನಸ್ರಿ..ಜೀಟ ತಗೊಳ್ಳಾವರಂಗ ಭಿಡೆ ಮಾಡಕೊಬ್ಯಾಡ್ರಿ ನಂಗೂ ಮೊದಲ ಸಲಾ ಹಿಂಗ ಆಗಿತ್ತು..”
ಪಟಪಟನೆ ಮಾತಾಡಿದವಳನ್ನೇ ನೋಡಿದಳು ಮಂಗಳಾ..ತನಗಿಂತ ಹತ್ತು ವರ್ಷ ಸಣ್ಣಾಕಿರಬೇಕು..ಈ ಪ್ರಯೋಗದಲ್ಲಿ ನುರಿತವಳಂತೆ ಮಾತಾಡುವ ರೀತಿ ವಿಚಿತ್ರ ಅನಿಸಿತು. ಅವಳ ಸಮೀಪ ಮಲಗಿ ಅವಳಾಡೋ ಮಾತು ಕೇಳುವ ಯೋಗ ಬಂದಿದ್ದಕ್ಕಾಗಿ ತನ್ನನ್ನು ಹಳಿದುಕೊಳ್ಳುವುದೋ ಅಥವಾ…
” ಅಕ್ಕಾರ ಇದು ನಿಮ್ಮದು ಮೊದಲನೇ ಸಲ ಏನು…” ಉತ್ತರವಾಗಿ ಮಂಗಲಾ ಗೋಣು ಆಡಿಸಿದಳು.
” ನಂದು ಇದು ಎರಡನೇ ಸಲಾರಿ..ಮೊದಲನೇದು ಹೆಣ್ಣು ಈ ಸಲ ಗಂಡ ಹುಟ್ಠಿದ್ರ ಸಾಕು ಅದಕ್ಕ ಡಾಕ್ಟರಿಗೆ ಮಜಬೂತ ಆದ ಗಂಡಿನ ಧಾತುನ ಹಾಕರಿ ಅಂತ ಹೇಳೇನಿ..” ತನ್ನ ಮಾತಿಗೆ ತಾನೇ ಕಿಸಕ ಎಂದು ನಕ್ಕವಳನ್ನು ಆಶ್ಚರ್ಯದಿಂದ ನೊಡಿದಳು…
” ಅಂದ್ರ ಮೊದಲನೇದು ಹಿಂಗ ಆಗಿತ್ತೇನು..”
” ಹೂಂನರಿ..ಏನು ಮಾಡೂದ್ರಿ ಗಂಡಗ ತಾಕತ್ತಿಲ್ಲ ಅತ್ತಿದು ಬಲವಂತ ಅದ ಗಂಡಮಗಾ ಬೇಕಂತ..ಅದಕ್ಕ ಮತ್ತ ತಯಾರಾದೆ ನೋಡ್ರಿ ನಮ್ಮೂರು ಕುಸುಗಲ್ಲ ನನ್ನ ಹೆಸರು ಹನಮವ್ವರಿ..”
ಅಕಿ ಮಾತನ್ಯಾಗ ಕಪಟ ಇರಲಿಲ್ಲ.ಅವಳ ನಿಭರ್ಿಡೆತನ ತನಗೆ ಅಸಾಧ್ಯವಾದದ್ದು ಇದು ಮಂಗಲಾಗೆ ಅನಿಸಿದ ವಿಷಯ. ಕದ್ದುಮುಚ್ಚಿ ದವಾಖಾನಿಗೆ ಬಂದು ಸೇರಿದ್ದಾತು ಇವರೂ ರಜಾ ಹಾಕ್ಯಾರ. ಹಿಂದಕ ಇಂಥಾದ್ದೊಂದ ರೂಢಿ ಇತ್ತಂತ .
ಸ್ವಂತ ಗಂಡನ ಹುಡುಕ್ಯಾಡಿ ಶೂರ ಗಂಡಸರನ್ನು ಪುಸಲಾಯಿಸಿ ಕರಕೊಂಡು ಬರತಿದ್ದನಂತ. ಮಹಾಭಾರತ ನಿಂತಿದ್ದು ಇಂಥಾ ನಿಯೋಗ ಅನ್ನೋ ಪದ್ಧತಿಯಿಂದ ಅಂತ.ಎಂಟು
ದಿನದಿಂದ ಗಂಡ ಬರೇ ಇದನ್ನ ಹೇಳತಿದ್ದ.ನಾ ಈಗಿನ ಈ ಪ್ರಯೋಗಕ್ಕ ತಯಾರಾಗಿದ್ದು ಇವರ ಇಂಥಾ ಬ್ರೇನ ವಾಶಿಂಗನಿಂದನ. ಹಂಗ ಮನಸನ್ಯಾಗ ನನಗೂ ಆಶಾ ಇದ್ದವಲ್ಲ.
“ಮದಿವಿ ಆಗಿ ಎಷ್ಟ ವರ್ಷ ಆತರಿ ನಿಮದು..”
“ಏಳು ಮುಗದಾವ …”
“ತಡಾ ಆಗಿ ಲಗ್ನ ಆಗೈತಲ್ರಿ..ಇರಲಿ ಬಿಡ್ರಿ ಛಲೋ ಕೆಲ್ಸ ಮಾಡೀರಿ ಇಲ್ಲ ಅಂದ್ರ ಕೊರಕ್ಕೋತ ಕೂಡಬೇಕು..”
“ಇದು ಮಾಡೋದು ಛಲೋ ಅನಸತದೇನು ನಿಂಗ ಹಿಂಗ ಬ್ಯಾರೆ ಗಂಡಸಿಂದು ನಮ್ಮೊಳಗ …” ಮಂಗಲಾ ತಡವರಿಸಿದಳು.
“ನೋಡ್ರಿ ಅಕ್ಕಾರ ನಾ ಕಲತಾಕಿ ಅಲ್ಲ..ಭಾಳ ವಿಚಾರ ಮಾಡೂದ್ರಾಗ ಏನೈತ್ರಿ ಹಳ್ಳಿಯೊಳಗ ನೋಡತೇವಿ..ಗಂಡಗ ಕಸುವು ಇಲ್ಲ ಅಂದಾಗ ಅಲ್ಲಿ ಇಲ್ಲಿ ಹೋಗಿ ಹಾದಿ ತಪ್ಪೂಕಿಂತಾ
ಅವನ ಒಪ್ಪಿಗಿ ತಗೊಂಡ ಹಿಂಗ ಪ್ರಯೋಗ ಮಾಡೋದು ಬೇಸೈತಿ..ಅದರಾಗ ಈ ಡಾಕ್ಟರರ ಕೈಗುಣ ಛಲೋ ಅದರಿ ನೋಡರಿ ಬೇಕಾದ್ರ ನಿಮಗೂ ಛಲೋ ಆಕ್ಕೈತಿ..”
ಅವಳ ಸಮಜಾಯಿಷಿ ಮಂಗಲಾಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರಲಿಲ್ಲ. ನರ್ಸ ಬಂದು ಟೈಮ ಆತು ಅಂತ ಹೇಳಿ ಹನುಮವ್ವಗ ಕರಕೊಂಡು ಹೋದಳು.ಹೋಗುವಾಗ ಮತೊಮ್ಮೆ ಹನುಮವ್ವ ಛಲೋ ಆಗಲಿ ಎಂದು ಹೇಳೋದು ಮರೀಲಿಲ್ಲ.ಮಂಗಲಾಳಿಗೆ ಸ್ವಲ್ಪ ನಿರಾಳ ಆತು.ಏಕಾಂತ ಬೇಕಾಗಿತ್ತು. ತನ್ನೊಳಗಿನ ತುಮುಲಗಳಿಗೆ ಉತ್ತರ ಹುಡುಕಲು
ನಿಧಾನವಾಗಿ ಕಣ್ಣು ಮುಚ್ಚಿದಳು.

***

ಕನ್ನಡಿ ಆಗಾಗ ಮಂಗಲಾಳಲ್ಲಿ ಉಸುರಿದ್ದ ಸತ್ಯ ಇದು. ತನ್ನ ಅಕ್ಕಂದಿರ, ವೈನಿಗಳ ರೂಪ ತನಗಿಲ್ಲ ಅಂತ. ಇಬ್ಬರು ಅಕ್ಕಂದಿರ , ಅಣ್ಣಂದಿರ ಬೆನ್ನಿಗೆ ಬಿದ್ದವಳು. ಬುದ್ದಿ ತಿಳಿದಾಗಿನಿಂದ ಮನೆಯಲ್ಲಿ ಬರಿ ಮದುವೆ, ಕುಬುಸ ಬಾಣಂತನಗಳ ಗದ್ದಲ. ಅವ್ವ ಆಗಾಗ ಹೇಳತಿದ್ಲು ಹೊರಸು ಖಾಲಿಯಾಗಿ ಉಳಿಯುತ್ತಲೇ ಇರಲಿಲ್ಲ ಅಂತ. ತಂದೆಯದು ಬಟ್ಟೆ ಅಂಗಡಿ
ಅದೇ ವ್ಯವಹಾರದಲ್ಲಿ ಅಣ್ಣಂದಿರೂ ಕೈ ಗೂಡಿಸಿದ್ದರು.ಪಿಯುಸಿಯಲ್ಲಿ ಮಾರ್ಕ್ಸ್ ಚೆನ್ನಾಗಿ ತಗೆದ ಮಂಗಲಾ ಧಾರವಾಡದಲ್ಲಿ ಇದ್ದು ಓದುವುದಾಗಿ ಹೇಳಿದಾಗ ತಂದೆ ಖುಷಿಯಿಂದ
ಒಪ್ಪಿದರು. ಧಾರವಾಡದ ಹಾಸ್ಟೆಲ ವಾಸ ಕರ್ನಾಟಕ ಕಾಲೇಜಿನ ವಾತಾವರಣ ಮಂಗಲಾ ಅದರಲ್ಲಿ ಮುಳುಗಿಹೋದಳು.ಸಹಪಾಠಿಗಳು ಸಿನೇಮಾ ಹೊಟಲ ಅಂತ ಸುತ್ತಾಡಿದರ
ಮಂಗಲಾ ಲೈಬ್ರರಿಯಲ್ಲಿ ವೇಳೆ ಕಳೆಯುತ್ತಿದ್ದಳು. ಕನ್ನಡ ಸಾಹಿತ್ಯ ಅವಳ ನೆಚ್ಚಿನ ವಿಶಯ ಅನುಕೂಲಕರ ಧಾರವಾಡದ ವಾತಾವರಣ….ಡಿಗ್ರಿ ಮುಗಿಸಿದವಳಿಗೆ ಎಂಎ ಸೀಟು ಸಿಕ್ಕಿತ್ತು
ಮುಂದಿನ ಗುರಿಯತ್ತ ಅವಳು ಸಾಗಿದ್ದಳು. ಅವ್ವಳ ಗೊಣಗಾಟ ಅಪ್ಪನ ಪ್ರೋತ್ಸಾಹದ ಮುಂದೆ ಸೊರಗಿತ್ತು. ಎಂಎ ಮುಗಿಸಿದವಳಿಗೆ ತನ್ನದೇ ಊರಿನ ಕಾಲೇಜಿನಲ್ಲಿ ಲೆಕ್ಚರರ
ಕೆಲಸ ಸಿಕ್ಕಿತ್ತು.ಮೆಚ್ಚಿನ ವೃತ್ತಿ..ಉತ್ಸಾಹದಿಂದ ಪಾಠ ಹೇಳುತ್ತಿದ್ದಳು.
ಕನ್ನಡಿ ಮಾತ್ರ ಅದೇ ಸತ್ಯ ಉಸುರುತ್ತಿತ್ತು. ವಾರಿಗೆಯವರೆಲ್ಲ ಬಾಣಂತನಕ್ಕೆ ತವರುಮನಿಗೆ ಬಂದು ಕೂಸುಎತ್ತಿಕೊಂಡು ಹೋಗುತ್ತಿದ್ದರು.ಮನೆಯಲ್ಲಿ ಅವ್ವಳ ಗೊಣಗಾಟ
ಲಗೂನ ಲಗ್ನ ಮಾಡಕೊ ಅಂತ ..ಪಿಎಚಡಿ ಪ್ರಬಂಧಕ್ಕೆ ಮನ್ನಣೆ ದೊರೆತಾಗ ಮಂಗಲಾ ಡಾಕ್ಡರ ಮಂಗಲಾ ಆದಳು.ಮಹಾಂತೇಶ ಇವಳನ್ನು ನೋಡಿದ್ದು ಯಾರದೋ
ಬಳಗದವರ ಮದುವೆಯಲ್ಲಿ…ಪ್ರಸ್ತಾಪ ಬಂದಾಗ ಅಪ್ಪ ನಿನಗ ಬಿಟ್ಟದ್ದು ಅಂತ ಮಂಗಲಾಳ ಮ್ಯಾಲ ಬಿಟ್ಟರು.ನೋಡಲು ಸಾಧಾರಣ ರೂಪು ಸ್ವಲ್ಪ ದಪ್ಪನ ಅನಬಹುದಾದ
ಶರೀರ ಅವನ ಜೊತೆ ಮಾತಾಡಿದಾಗ ಪ್ರಾಮಾಣಿಕ ಅನಿಸ್ತು.ಮನಬಿಚ್ಚಿ ಮಾತಾಡಿಕೊಂಡ್ರು…ಕಡಿ ಮಗಳ ಮದವಿ ಸಡಗರದಿಂದ ಮಾಡಿಕೊಟ್ಟ ಮಂಗಲಾಳ ತಂದೆ ನಿರಾಳವಾಗಿ ಉಸರುಬಿಟ್ರು.ಹುಬ್ಬಳ್ಳಿಯ ಕಾಲೇಜಿನ್ಯಾಗ ಹೊಸ ಕೆಲಸ ದೊರೆತ ಮಂಗಲಾ ಹುಟ್ಟಿದೂರು ಬಿಟ್ಟಳು.

ಯಾವಾಗ ಯಾರು ಸುರು ಮಾಡಿದ್ರೋ ಗೊತ್ತಿಲ್ಲ ಅತ್ತಿ ಒಟಗುಟ್ಟೋದು ಕಿವಿಗೆ ಬಿತ್ತು..ಮೂರುವರಶ ಮುಗದ್ರೂ ಹೊಸಾಸುದ್ದಿ ಇಲ್ಲ ಅಂತ ಊರಿಗೆ ಹೋದಾಗ ಅವ್ವಳೂ
ಇದ ಮಾತು ಹೇಳಿದ್ಲು.ಗುರುತಿರೋ ಲೇಡಿ ಡಾಕ್ಟರ ಕಡೆ ಹೋಗಿದ್ಡಾತು. ಏನೇನೋ ಟೆಸ್ಟ ಮಾಡಿದ ಡಾಕ್ಟರು ಹೇಳಿದರು ಎಲ್ಲಾ ನಾರ್ಮಲ ಅದ ಆದ್ರ ಈಗಿನ ಕಾಲದಾಗ
ಗಂಡಸರದೂ ಟೆಸ್ಟ ಜರೂರಿ ಅದ..ಬೇಕಾದ್ರ ಹುಬ್ಬಳ್ಳಿಯೊಳಗ ಇರೋ ಡಾಕ್ಟರ ಕಡೆನೂ ಚೆಕ ಮಾಡಸಬಹುದು ಅಂತ ಹೇಳಿ ತಮ್ಮ ಪರಿಚಯದ ಡಾಕ್ಟರಗೆ ಚೀಟಿ ಕೊಟ್ರು.
ಗಂಡನ ಹತ್ತಿರ ಈ ವಿಷಯ ಅಳುಕುತ್ತಲೇ ಹೇಳಿದಳು ಮಂಗಲಾ ಊರಿಂದ ಬಂದಮೇಲೆ. ಮಹಾಂತೇಶ ಗಾಬರಿಯಾದ ಹಾಗೆ ಮಾಡಿದ.ನಾನು ಆರಾಮ ಇದ್ದೇನೆ ನನಗೆ ಯಾಕೆ
ಟೆಸ್ಟು ಇದು ಅವನ ವಾದ.ಮಂಗಲಾ ಅವನಲ್ಲಿ ವಿಶ್ವಾಸ ತುಂಬಲು ಪ್ರಯತ್ನಪಟ್ಟಳು. ಮಹಾಂತೇಶ ಈ ವಿಷಯದಲ್ಲಿ ಹಟಮಾಡೋದು ಯಾಕೆ ಇದು ಮಂಗಲಾಳಿಗೆ ತಿಳಿಯದ
ವಿಷಯ. ಕೊನೆಗೆ ಸೋತು ಅತ್ತೆ ಮಾವರ ಮುಂದೆ ತಾನು ಊರಲ್ಲಿ ಡಾಕ್ಟರ ಕಂಡಿದ್ದು ಮತ್ತು ಅವರು ಸೂಚಿಸಿದ ಉಪಾಯದ ಬಗ್ಗೆ ಗಂಡನ ಹಟದ ಬಗ್ಗೆ ಹೇಳಿದಳು.
ಇದು ಕೆಲಸ ಮಾಡಿತು ಮಹಾಂತೇಶ ಒಪ್ಪಿಕೊಂಡ. ಹೊಸ ಅಧ್ಯಾಯದ ಶುರುವಾತು ಇದು ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲ.
 
ಟೆಸ್ಟರಿಪೊರ್ಟ ಬಂದಿತ್ತು. ವೀರ್ಯಾಣು ಸಂಖ್ಯಾ ಕಮಿ ಅವ ಮತ್ತು ಚಲನಶೀಲತಾನ ಇಲ್ಲ… ಡಾಕ್ಟರ ಹೇಳಿದರು..ಗಂಡಗ ಗುಳಿಗಿ ಬರದು ಕೊಟ್ಟರು.ತಿಂಗಳ ನಂತರ ಬರಲು
ಹೇಳಿದ್ರು.ತಿಂಗಳ ಆದಮ್ಯಾಲ ಮಂಗಲಾಳನ್ನು ಒಬ್ಬಾಕಿನ ಕರದು ಹೇಳಿದ್ರು.
“ನೋಡವಾ ನಿನ್ನ ಗಂಡನಿಂದ ನಿನಗ ಮಕ್ಕಳ ಕೊಡೋದು ಸಾಧ್ಯ ಇಲ್ಲ..ನಿಮ್ಮದು ಒಪ್ಪಿಗೆ ಇದ್ರ ಹೇಳರಿ..ಯಾರದರೇ ಡೋನರದು ಇಂಜಕ್ಟ ಮಾಡತೇನಿ ಈಗೀಗ ಇದು
ಕಾಮನ ಆಗೇದ..”
ಮಂಗಲಾ ವಿಹ್ವಲಗೊಂಡಳು.ಬ್ಯಾರೆ ಗಂಡಸಿನ ಜೀವಕಣದಿಂದ ನಾ ಬಸಿರಾಗೋದು ಬ್ಯಾಡ..ಅಂದು ರಾತ್ರಿ ಗಂಡಗ ಅಪ್ಪಿಕೊಂಡು ಅವನ ಕಿವ್ಯಾಗ ಇದ ಮಾತು ಹೇಳಿದಳು.
ಮಹಾಂತೇಶನೂ ತಲೆ ಆಡಿಸಿದ್ದ.
 
ತಿಂಗಳುಗಳು ಉರುಳತಿದ್ದವು.ಬ್ಯಾರೆ ಡಾಕ್ಟರ ಕಡೆನೂ ಹೋಗಿಬಂದದ್ದಾತು ಅವರು ಕೊಟ್ಟ ಔಷಧಸಹ ಅಪೇಕ್ಷಿತ ಪರಿಣಾಮ ಕೊಡಲಿಲ್ಲ.ಈ ನಡುವೆ ಅವರು ಇವರು ಹೇಳಿದ್ರು
ಅಂತ ಪುಣ್ಯಕ್ಷೇತ್ರ, ತೀರ್ಥಯಾತ್ರೆ ಮುಗದವು.ಯಾರೋ ಹೇಳಿದ್ರು ಅಂತ ಯಾವುದೋ ಆಶ್ರಮದಾಗ ಎರಡ ದಿನಾ ಇದ್ದು ಸೂರ್ಯಉದಯಕ್ಕಿಂತ ಮೊದಲು ಆ ಸ್ವಾಮಿ
ಕೊಟ್ಟ ಪ್ರಸಾದ ತಿಂದದ್ದಾತು.ಎಲ್ಲಾದಕ್ಕೂ ನಿರಾಶಾನ ಫಲಿತಾಂಶ ಅಂತ ಭೇಟಿಯಾತು.

***

ಅರ್ದತಾಸು ಆಗಿರಬೇಕು..ನರಸ ಬಂದು ಎಬ್ಬಿಸಿದ್ಲು.ಅಸ್ತವ್ಯಸ್ತತೆಯನ್ನು ಸರಿಪಡಿಸಿಕೊಂಡು ಹೊರಬಂದಳು.ಮಹಾಂತೇಶ ಹಾಲ್ನಲ್ಲಿ ಟಿವಿ ನೋಡುತ್ತ ಕುಳಿತಿದ್ದ.
ಇಬ್ಬರೂ ಡಾಕ್ಟರಿಗೆ ಭೇಟಿ ಆದರು.
“ನಾಳೆನೂ ಬರಬೇಕಾಗತದ..ಒಂದಸಲಾಕ್ಕ ಸಕ್ಸಸ್ ಆಗೂದು ಇರತಾವ ನಾ ರಿಸ್ಕ ತಗೋಳುದಿಲ್ಲ….” ಡಾಕ್ಟರ ಊಟಕ್ಕೆ ಹೊರಡಲು ಎದ್ದರು. ಗಂಡನ ಹಿಂದೆ ಸ್ಕೂಟರ್ಹಿಂದೆ
ಕೂತಾಗ ಅದೇನೋ ಅಳುಕು ಭಾದಿಸುತಿದೆ ಅನಿಸಿತು ಮಂಗಲಾಗೆ.ಮಹಾಂತೇಶ ನಿರ್ವಿಕಾರನಾಗಿದ್ದ.ಅವನೇ ಈ ಹಾದಿಯಲಿ ನಡೆ ಅಂದವ..ದಾರಿ ತೋರಿಸಿದವ .

***

ಯಾಕೆ ನಾನು ಇವರ ಮಾತಿಗೆ ಒಪ್ಪಿಕೊಂಡೆ..ಈ ಪ್ರಶ್ನೆ ಅವಳನ್ನು ಕಾಡುತ್ತಲೇ ಇತ್ತು. ಏನೋ ಹೇಳಲಾಗದ್ದು..ಇದುವರೆಗಿನ ಅನುಭವಕ್ಕೆ ಹೊರತಾದದು..ಪರಪುರುಶನ
ಧಾತು ತನ್ನೊಳಗೆ ಪ್ರವೇಶಿಸಿದೆ..ಮುಂದೆ ಅದು ಫಲವಾಗಲಿದೆ..ಬಸಿರಿಗೂ ಅದೇ ಕಾರಣವಗಲಿದೆ…ಈ ವಿಧಾನ ಸರಿಯೇ..ಹಾಗೆ ನೋಡಿದರೆ ಏನೂ ಅರಿಯದ ಹನುಮವ್ವ
ಇಷ್ಟುಸುಲಭವಾಗಿ ಬದಲಾವಣೆಗೆ ಹೊಂದಿಕೊಂಡಿದ್ದಾಳೆ..ನನಗೇಕೆ ಈ ತೊಳಲಾಟ…ಇವರು ಎಲ್ಲ ಹೇಳಿದ್ದರು ಕದ್ದುಮುಚ್ಚಿ ಏನೂ ಇಲ್ಲ.ನಾನೂ ತಯಾರಾಗಿದ್ದೆ..ಅದು
ನಿಜವೇ..ನನ್ನಲ್ಲಿ ಏಳುವ ಪ್ರಶ್ನೆ ನೋಡಿದರೆ ನಾನು ಇದಕ್ಕೆ ಮಾನಸಿಕವಾಗಿ ತಯಾರಾಗಿರಲಿಲ್ಲವೆ….ಇವರು ಒಡ್ಡಿದ ಪ್ರಲೋಭನೆಗಳಿಗೆ ಬಲಿಯಾದೆ ಎಂದು ಹೇಳಬಹುದೇನೋ
ಇವರಾಡಿದ ಸಕ್ಕರೆ ತುಂಬಿದ ಮಾತುಗಳಿಗೆ ಮರುಳಾದ..
 
“ಮಂಗಲಾ ನಾ ನಿನಗ ಮಗು ಕೊಡಲಾರೆ..ಈ ವಿಷಯ ನಮ್ಮಿಬ್ಬರಲ್ಲೇ ಇರಲಿ..ನನಗೂ ಆಶಾ ಅವ ನೀ ಬಸರಾಗಬೇಕು..ನಿನ್ನ ಉಬ್ಬಿದ ಹೊಟ್ಟಿ ನೋಡಿ ನಾ ಖುಶಿಪಡಬೇಕು
ನೀ ಕುಬಸ ಸೀಮಂತ ಅಂತ ನಲಿಯುವಾಗ ನಿನ್ನ ಹೊಳಿಯುವ ಛಂದ ನಾ ನೋಡಬೇಕು..ನೀ ಇದಕ್ಕ ಒಪ್ಪಿದ್ರ ಎಲ್ಲಾ ಸಾಧ್ಯ ಆಗತದ..”
ಮಾತಿನ್ಯಾಗ ಮರುಳ ಮಾಡಿದರು.ಗಂಡಸೂರಿಗೆ ಈ ಕಲೆಗಾರಿಕೆ ಒಲಿದಿರುತ್ತದೆ..ಅಂತೆಯೇ ಯುಗಗಳಿಂದ ಇವರ ಪ್ರಭುತ್ವ ಇದೆ..ನನ್ನ ಪ್ರತಿಭಟನೆಯಲ್ಲಿ ಮೊನಚಿರಲಿಲ್ಲ.
ಮರಮರ ಅಂದಂತಿತ್ತು..ಗಂಡ ಚಾಣಾಕ್ಷ ಯಾವ ನಾಡಿ ಹಿಡಿಯಬೇಕೋ ಅದನ್ನೇ ಮೀಟಿದ್ದ.
 
“ನೋಡು ನಿನಗೂ ಆಶಾ ಇರತಾವ..ಮಗು ಆಗುವುದರಿಂದ ಹೆಂಗಸಿಗೆ ಪರಿಪೂರ್ಣತಾ ಬರತದ..ನಿಂಗ ಹಂಬಲ ಅವ ನೀ ಅವನ್ನ ಮುಚ್ಚಿ ಇಟಗೊಂಡಿ..ಹೊಸಾ ಸೀರಿ
ಕುಬಸಾ ಸೀಮಂತ..ಆ ರೂಪದಾಗ ನೀ ಬಹಳ ಛಂದ ಕಾಣಸತಿ..ನೋಡು ಮನಿಯ ಹಿರಿಯರಿಗೆ ಗೊತ್ತಾಗುವುದಿಲ್ಲ..ಕುಡಿ ನಮ್ಮದ ಅಂತ ತಿಳೀತಾರ ಮೇಲಾಗಿ ಇದು
ಝಟಾಪಟಾ ಆಗುವ ಕೆಲಸ..ನಾ ಡಾಕ್ಟರಗೆ ಭೆಟ್ಟಿ ಆಗಿದ್ದೆ..ಆರೋಗ್ಯವಂತ ಡೋನರನ ಧಾತುನ ಕೇಳೋಣು..”
 
ನವಿರಾದ ಮಾತುಗಳು. ಯಾವ ಹೆಣ್ಣೂ ಅಕಿ ಎಷ್ಟಕಲತಾಕಿ ಇದ್ರೂ ಮರಳಾಗಬೇಕು.ಅಂತರಂಗದ ತಿದಿಯನ್ನೇ ಒತ್ತಿದ್ದ.ಹೌದು ನನಗೂ ಆಶಾ ಇದ್ದವು..ಅಕ್ಕ ವಹಿನಿಯರ ಸಡಗರ ನೆನಪಾದವು.ಇಂಥಹ ಸಂಭ್ರಮ ಯಾವಾಗ ಅಂತ ಕೇಳಿಕೊಂಡಿದ್ದು ಸುಳ್ಳ ಅಲ್ಲ.ಗಂಡನಿಂದ ಅದು ಆಗದ್ದು ಎಂದು ಕೇಳಿ ಕಮರಿಹೋದ ಬಯಕೆಗಳು ಮತ್ತ
ಚಿಗುರಾಗ್ಯಾವ.ಈ ಬಯಕಿ ಮುಂದ ಎಲ್ಲ ಗೌಣ ಅನಿಸಿತು.ಮಾಡೂದ್ರಿಂದ ಆಗೋ ಪರಿಣಾಮ ಏನು ಲಾಭ ನಷ್ಟ ಏನು ಲೆಕ್ಕ ಹಾಕಿದರ ತಕ್ಕಡಿ ಲಾಭದ ಕಡೆ ವಾಲತದ.
ಆದರೂ ಮನದಾಗ ಅಳುಕಿದ್ದವು.ಡಾಕ್ಟರ ಜೊತೆ ಮಾತಾಡಬೇಕು..ಮುಖ್ಯವಾಗಿ ಇಂಥಾ ಧಾತು ಸಿಗತಾವ ಎಲ್ಲಿಂದ ಅಂತ ಕೇಳಬೇಕು.ಡಾಕ್ಟರ ಉತ್ತರಾ ಕೊಟ್ಟಿದ್ದರು.
 
“ಮಂಗಲಾ ಇದು ನಮ್ಮ ಪ್ರೊಫೆಶನಲ್ ಸಿಕ್ರೇಟು..ಯಾರಿಗೂ ಸಹಸಾ ಹೇಳೂದಿಲ್ಲ ನೀ ಕಲತಾಕಿ ತರ್ಕಬದ್ಧ ವಿಚಾರ ಮಾಡತಿ ಅನ್ನೋದು ನನಗ ಗೊತ್ತು. ಕೆಲ ಗಂಡಸರು
ಆರೋಗ್ಯವಂತರಿರತಾರ..ಕೆಲವರು ರೊಕ್ಕದ ಸಲುವಾಗಿನೂ ಇಂಥ ದಾನ ಕೊಡಲಿಕ್ಕೆ ತಯಾರಿರತಾರ.ಅವರ ವೀರ್ಯ ಶೇಖರಿಸಿ ಸ್ಟೋರ್ ಮಾಡಿಡತೇವಿ.ಈಗೀಗ ಗಂಡಸಿಗೆ
ಮಗು ಕೊಡೋ ಶಕ್ತಿ ಕಮಿಆಗೇದ..ಅಂಥಾವ್ರಿಗೆ ಈ ಸ್ಟೋರ ಮಾಡಿದ್ದು ಅವರೂ ಒಪ್ಪಿದರ ಕೊಡತೇವಿ..”
 
ವಿವರಣೆ ಅಷ್ಟು ಸಮಂಜಸ ಅನಿಸಲಿಲ್ಲ..ಮುಖ್ಯವಾಗಿ ಪರಪುರುಶನ ವೀರ್ಯ ಪಡೆಯುವುದು ಒಂದು ರೀತಿಯಲ್ಲಿ ಅವನ ಸಂಗ ಮಾಡಿದಂತೆಯೇ ಅಲ್ಲವೇ.. ಇದೇ ವಿಚಾರ
ಪ್ರಶ್ನಿಸಿದೆ.
” ನಾ ಮೊದಲ ಹೇಳಿದೆ ನೀ ಕಲಸುವ ಲಾಜಿಕ ಇಲ್ಲಿ ನಡೂದಿಲ್ಲ.ನೀ ಅನ್ನೋದು ಖರೆ ಆದರ ಸಾಯನ್ಸ ಇಷ್ಟು ಮುಂದಹೋಗೇದ..ಇದೊಂದು ರೀತಿ ಅವಶ್ಯಕತಾದ ಪ್ರಶ್ನಿ
ನಿನ್ನ ಬಯಕಿ ಪೂರಸಲಿಕ್ಕೆ ಅಂಗಡಿಗೆ ಹೋಗಿ ಸಾಮಾನು ತರತಿ..ಇದೂ ಒಂಥರಾ ಹಂಗ ಹಾಂ ಇಲ್ಲಿ ನಾವಿದ್ದೇವಿ ನಿಮಗ ಇದು ಛಲೋ ಇದು ಬ್ಯಾಡ ಅಂತ ಹೇಳಲಿಕ್ಕೆ..
ಒಂದವೇಳೆ ನಿನ್ನ ಗಂಡಗ ಆ ಶಕ್ತಿ ಇದ್ರ ನೀ ಇವೆಲ್ಲ ವಿಚಾರ ಮಾಡತಿರಲಿಲ್ಲ..ಅಥವಾ ನೀ ಅಂಗಡಿಗೆ ಹೋಗೂ ಜರೂರು ಇರಲಿಲ್ಲ..ಇದು ಎಲ್ಲ ಕಡೆ ಕಾಮನ್ ಆಗೇದ
ನಮ್ಮ ಮಹಾಭಾರತ ನಿಂತಿದ್ದ ಈ ಪದ್ಧತಿಮ್ಯಾಲೆ..ಬಹಳ ವಿಚಾರ ಮಾಡಬೇಡ ತರ್ಕ ಕುತರ್ಕ ಆಗಬಾರದು ನೋಡು….”
 
ವ್ಯವಹಾರಿಕವಾಗಿ ಮಾತಾಡಿದ್ರೂ ತಥ್ಯ ಇತ್ತು ಮಾತಲ್ಲಿ.ಇಲ್ಲಿ ಎಲ್ಲಾನೂ ಮಾರಾಟಕ್ಕವ… ಹಿಂದ ಇಂಥ ಪದ್ಧತಿ ಇದ್ದವು ಅಂತ.ಎಲ್ಲಿ ತನ್ನ ಅಣ್ಣನ ಹೆಂಡತಿ ಮೊದಲ ಹಡೀತಾಳೋ
ಎಲ್ಲಿ ಸಿಂಹಾಸನಕ್ಕ ಸಂಚಕಾರ ಬರತದೋ ಅಂತ ಹೇಳಿ ತನಗ ಶಕ್ತಿ ಇರಲಿಲ್ಲಾಂದ್ರೂ ಕಾಡಿ ಬೇಡಿ ಪರಪುರುಷರನ್ನು ಹೆಂಡತಿ ಮಗ್ಗಲಿಗೆ ತಂದಿದ್ದನಂತ ಆ ಪಾಂಡು..
ಆ ಕುಂತಿ ಜಗಾದಾಗ ನಾ ಇದ್ದೇನಿ ವಿಧಾನ ಬದಲಾಗೇದ ಅಷ್ಟ… ಆ ಪಾಂಡುನ ಮಕ್ಕಳಿಗೆ ಪಾಂಡವರು ಅಂತ ಯಾಕ ಕರದರೋ.ಅವನ ಮಕ್ಕಳಿಗೆ ಎಲ್ಲ ಗೊತ್ತಿತ್ತು.ಆ ಕುಂತಿಗೂ
ಸಂದಿಗ್ಧತೆ ಕಾಡಿರಬಹುದೇ..

***

ಪಕ್ಕದಲ್ಲಿ ಶಾಂತವಾಗಿ ಮಲಗಿದ ಗಂಡನನ್ನೇ ನೋಡುತ್ತಿದ್ದಳು.ಎಲ್ಲ ತಲ್ಲಣ ಗೊಂದಲಗಳು ನನಗೇ ಯಾಕೆ..ಈ ತಂಪು ರಾತ್ರಿಗಳಲಿ ಬೇಯುವ ಶಿಕ್ಷೆ ನನಗೇ ಯಾಕೆ..
ಹಿಂದೆ ಎಂದೋ ಓದಿದ ಚುಟುಕಿನ ಸಾಲು ನೆನಪಾದವು..
 
ಕೆಲವೊಮ್ಮೆ ಸ್ಥಿತಿಯ ಬಗ್ಗೆ
ಇದ್ದುದನ್ನು ಹೊದ್ದಿಕೊಳ್ಳದ
ನನ್ನ ಬಗ್ಗೆ ನನಗೇ
ಬೇಸರವಿದೆ..!!

***

 

‍ಲೇಖಕರು G

4 September, 2014

4 Comments

  1. shammi

    bhaala chand baradirri…nija hennin manasinyaagin tolalaata yaargu tilivaltu!! bhaal chalo aiti kate…

  2. Vitthal Kulkarni

    BhaaLa choloada kathi… Tarkada vishaya. Nimma dristikonakka cholo anastu…
    Dhanyavada sir…

  3. Guruprasad Kurtkoti

    ಮಸ್ತ್ ಬಂದದ ಕಥಿ! ಆವಾಗ ಆಪದ್ಧರ್ಮ ಅಂತಿದ್ರು, ಈಗ ಆಪರೇಶನ್ ಅಂತಾರ! ಖರೆ ಹೇಳಬೇಕು ಅಂದ್ರ ಕಾಲ ಬದ್ಲಾಗಿಲ್ಲ.

  4. ashok kumar valaduir

    NICE narration sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading