(ದಿಲಾವರ್ ರಾಮದುರ್ಗ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡ ಬರಹ)
ಹತ್ತು ವರ್ಷಗಳ ಹಿಂದೆ ‘ದಿಲ್’ ಪುಟ್ಟ ಗೂಡಲ್ಲಿ…
ದಿಲಾವರ್ ರಾಮದುರ್ಗ
ಹತ್ತು ವರ್ಷದ ಹಿಂದೆ ಎಂಥ ಸಂಭ್ರಮದಲ್ಲಿದ್ದೆ! ಅಮ್ಮ-ಅಪ್ಪ ಮತ್ತುಕುಟುಂಬದ ಎಲ್ಲರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದೆ. ಅವರೆಲ್ಲ ಬೇರೆಯದೇ ವಿಷಯ ಅಂದುಕೊಂಡು ಬಂದಿದ್ದರು. ಆಗ ನನ್ನದೊಂದು ಪುಟ್ಟ ರೂಂ ಇತ್ತು ಬಿಇಎಲ್ ಸರ್ಕಲ್ ಹತ್ತಿರದ ಮುತ್ಯಾಲ ನಗರದಲ್ಲಿ. ಬೆಳಿಗ್ಗೆ ಎಲ್ಲರನ್ನು ಆ ಪುಟ್ಟ ರೂಮಿನಲ್ಲಿ ಕೂಡಿ ಹಾಕಿದಂತಿತ್ತು ಅವತ್ತು. ಸಂಜೆ 5ರೊಳಗೆ ಎಲ್ಲ ರೆಡಿಯಾಗಿರುವಂತೆ ಹಕ್ಕೊತ್ತಾಯದಿಂದ ತಾಕೀತು ಮಾಡಿ ಹೋದವನು ಸಂಜೆ 6 ಗಂಟೆಯಾದರೂ ರೂಂ ಹತ್ತಿರಕ್ಕೂ ಸುಳಿಯಲಿಲ್ಲ. ತಮ್ಮ ಜಕೀರ್, ನಜೀರ್ ಮತ್ತು ಗೆಳೆಯ ರೊನಾಲ್ಡ್ ಯಾರದೋ ಕಾರಿನಲ್ಲಿ ಅವರನ್ನು ಸಂಜೆ 7ರಷ್ಟೊತ್ತಿಗೆ ಒಂದು ಸ್ಥಳಕ್ಕೆ ಕರೆತಂದರು.
* * *
ಗೆಳೆಯ ನರೇಶ್ ಮತ್ತು ಇತರ ಸ್ನೇಹಿತರು ಒಂದು ವಾರದಿಂದ ಕಾರ್ಯಕ್ರಮದ ಸಿದ್ಧತೆ ಮಾಡುತ್ತಲೇ ಇದ್ದೆವು. ರಂಗಗೆಳೆಯರ ನೆರವಿನಿಂದ ಒಂದಷ್ಟು ರಂಗಪರಿಕರಗಳನ್ನು, ಮಣ್ಣಿನ ಮಡಿಕೆಗಳನ್ನು, ಸುಣ್ಣ, ಬಣ್ಣ… ಕ್ಯಾಂಟರ್ ಒಂದರಲ್ಲಿ ತುಂಬಿಕೊಂಡು ಬಂದಿದ್ದೆವು. ಅದರಿಂದಲೇ ಪುಟ್ಟದಾದೊಂದು ಸುಂದರ ವೇದಿಕೆ ರೂಪಿಸಿದೆವು. ಇಡೀ ವೇದಿಕೆಯ ಪ್ರವೇಶಕ್ಕೆಂದು ತುಂಬ ಪುಟ್ಟದಾದ ಪ್ರವೇಶದ್ವಾರ ರೂಪಿಸಿದ್ದೆವು.
* * *
ವೇದಿಕೆಯ ಹತ್ತಿರದಲ್ಲಿ ಗೆಳೆಯ ಕಾರು ನಿಲ್ಲಿಸಿದ. ಅಮ್ಮ, ಅಪ್ಪ, ತಂಗಿಯರು, ತಮ್ಮಂದಿರು… ಎಲ್ಲರೂ ಇಳಿದು ಮುಖ ಮುಖ ನೋಡಿಕೊಳ್ಳತೊಡಗಿದ್ದರು.
ನನ್ನವ್ವ ಮತ್ತು ಅಪ್ಪ ಇದೆಲ್ಲ ನೋಡಿ ಮಗಾ ಹೇಳದೇ ಕೇಳದೇ ಹೀಗೆ ಮಾಡಿಬಿಟ್ಟನಲ್ಲ! ಯಾರು, ಎತ್ತ, ಏನು, ಹೇಗೆ… ಎನ್ನುವ ಸುಳಿವನ್ನೂ ನೀಡಲಿಲ್ಲ. ಕಡೇಪಕ್ಷ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಒಮ್ಮೆ ನಮ್ಮನ್ನು ಕೇಳಲಿಲ್ಲ ಎಂದು ಸೆಟಗೊಂಡುಬಿಟ್ಟರು. ಮೇಲೆ ಜುಬ್ಬಾ, ಪಂಚೆ, ಶಲ್ಯೆ ಹಾಕಿ ಭರ್ಜರಿಯಾಗಿ ನನ್ನನ್ನು ಸಜ್ಜುಗೊಳಿಸಿದ್ದ ನರೇಶ್. ಮದುಮಗನ ಗೆಟಪ್ ನಲ್ಲಿ ನಾನು ಆ ಸಣ್ಣ ಪ್ರವೇಶದ್ವಾರದಿಂದ ಹೊರ ಬಂದೆ. ನನ್ನವ್ವ ಮತ್ತು ಅಪ್ಪ ನನ್ನ ನೋಡಿ ಅಚ್ಚರಿಗೊಂಡರು. ಒಂದು ತರಹದ ಖುಷಿ ಮತ್ತು ಬೇಸರ ಅವರ ಮುಖದಲ್ಲಿತ್ತು. ಖುಷಿ ಅಂತೂ ಮಗಾ ಒಂದು ನಿರ್ಧಾರ ಮಾಡಿಬಿಟ್ಟನಲ್ಲ ಎನ್ನುವುದಕ್ಕೆ. ಬೇಸರ ನಮಗೊಂದು ಮಾತು ಹೇಳಲಿಲ್ಲವಲ್ಲಾ ಎನ್ನುವುದಕ್ಕೆ.
* * *

ನಾನು ಅಮ್ಮನ ಕೈಗೆ ಒಂದು ದೀಪ ಕೊಟ್ಟೆ. ಸಂಜೆಯಾದ್ದರಿಂದ ಕತ್ತಲಾಗುತ್ತಲಿತ್ತು. ಯಾವ ಒಂದೇ ಒಂದು ಲೈಟ್ ಕೂಡ ಹಾಕಿರಲಿಲ್ಲ. ಆ ಪುಟ್ಟ ಪ್ರವೇಶದ್ವಾರದೊಳಕ್ಕೆ ಪ್ರವೇಶ ಮಾಡುವಂತೆ ಅಮ್ಮನನ್ನು ಕೇಳಿಕೊಂಡೆ. ಕತ್ತಲು ಪವರ್ ಬರಲಿ ತಾಳು ಎಂದು ಹಿಂಜರಿದಳು. ಅಮ್ಮಾ ಒಳಕ್ಕೆ ನಡೀ ಎಂದು ಒತ್ತಾಯಿಸಿದೆ. ಪ್ರವೇಶ ಮಾಡುತ್ತಿದ್ದಂತೆ ಎದುರಿಗೇ ಒಂದಷ್ಟು ಮಡಿಕೆಗಳಿಂದ ಸುಂದರವಾಗಿ ಅಲಂಕಾರಗೊಂಡಿದ್ದ ದೀಪವನ್ನು ಬೆಳಗಿಸುವಂತೆ ಕೇಳಿಕೊಂಡೆ. ಆಕೆ ದೀಪ ಬೆಳಗಿದಳು. ಅದೇ ಸಮಯಕ್ಕೆ ಸರಿಯಾಗಿ ಎಲ್ಲಾ ಲೈಟ್ಸ್ ಆನ್! ಎದುರಿಗೇ ಸುಂದರವಾದ ವೇದಿಕೆ ಕಂಡೊಡನೆ ಆಕೆಯ ಕಣ್ಣುಗಳು ತುಂಬತೊಡಗಿದ್ದವು. ಕಾರ್ಯಕ್ರಮ ನಿರ್ವಹಣೆಯಲ್ಲಿದ್ದ ರಂಗ ಗೆಳೆಯ ದಯಾನಂದ ಶರ್ಮಾ, ‘ದಿಲ್ ಪುಟ್ಟ ಗೂಡಿಗೆ ಸುಂದರ ಪ್ರವೇಶ ಅಮ್ಮ ದೀಪ ಬೆಳಗುವ ಮೂಲಕ..’ ಎಂದು ಅನೌನ್ಸ್ ಮಾಡಿದ. ಅಮ್ಮಾ ನನ್ನದೇ ಶ್ರಮದಿಂದ ನಾನೊಂದು ಪುಟ್ಟ ಗೂಡು ಕಟ್ಟಿಕೊಂಡೆ. ಇದು ಗೃಹಪ್ರವೇಶ ಎಂದೆ. ಆಕೆ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಜೋರಾಗಿ ನನ್ನ ತಬ್ಬಿಕೊಂಡಳು. ಕಣ್ಣುಗಳು ತುಂಬಿಕೊಳ್ಳುತ್ತಲೇ ಇದ್ದವು. ಅಂದು ಬಂದವರೆಲ್ಲರಿಂದ ಒಂದೊಂದು ದೀಪ ಬೆಳಗಿಸಿದೆ. ಬಂದವರೆಲ್ಲ ಬೆಳಗಿದ ದೀಪಗಳನ್ನು ನನ್ನ ನತಂಗಿಯರಿಬ್ಬರೂ ಮನೆಯ ಕಂಪೌಂಡ್ ಮತ್ತು ಬಾಗಿಲು ಬಳಿ ಅಲಂಕರಿಸಿಟ್ಟರು.
* * *

ಹಿರಿಯ ಗೆಳೆಯ ಕಾಮ್ರೇಡ್ ಡಾ. ಸಿದ್ಧನಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಒಂದು ಕವಿಗೋಷ್ಠಿ ಏರ್ಪಾಡಾಗಿತ್ತು. ಕವಯತ್ರಿ ಎಚ್.ಎಲ್. ಪುಷ್ಪಾ, ವಿಶಾಲಾಕ್ಷಿ, ಸಿದ್ಧನಗೌಡರು ಸೇರಿದಂತೆ ಹಲವರು ಕಾವ್ಯವಾಚನ ಮಾಡಿದರು. ಆಮಂತ್ರಿತ ಸುಬ್ಬು ಹೊಲೆಯಾರ್ ಮತ್ತಿತರರು ಅಂದು ಬರಲಿಲ್ಲ. ಆಫೀಸಿನ ಡಿ.ಪಿ. ಪರಮೇಶ್ವರ, ಎಫ್. ಎಂ. ನಂದಗಾಂವ್ ಹಾಗೂ ನನ್ನ ನೆಚ್ಚಿನ ಮಮತಾ ಪ್ರಭು, ಗೆಳೆಯ ವಿಷ್ಣುಕುಮಾರ್, ನರೇಶ್, ಯಾದವ, ದೇವಾ, ಜ್ಯೋತಿ ಭಟ್, ಇನ್ನಿತರ ಹತ್ತಾರು ಗೆಳೆಯರು ಉಪಸ್ಥಿತರಿದ್ದರು. ಬರಲೇಬೇಕಾದವರು ಬರಲಿಲ್ಲ. ಆ ಬೆಸರವೂ ಇತ್ತು.
* * *
ಆ ಸಂಜೆಯ ರಂಗು ಕಾವ್ಯಗಳಿಂದ ಮತ್ತಷ್ಟು ರಂಗೇರಿತ್ತು. ನಂತರದಲ್ಲಿ ಮಧ್ಯರಾತ್ರಿಗಿಂತ ಹೆಚ್ಚಿನ ಸಮಯದವರೆಗೆ ಗಜಲ್ ಗೋಷ್ಠಿ ನಡೆಯಿತು. ಅದಿನ್ನೂ ರಂಗೇರಿಸಿತ್ತು. ಇಡೀ ರಾತ್ರಿ ಹಿಂದೂಸ್ತಾನಿ ಸವಿಯುವ ಬಯಕೆ ನಮ್ಮದಾಗಿತ್ತು. ಅಂದು ದೊಡ್ಡ ಗಾಯಕರೊಬ್ಬರನ್ನು ಹಿರಿಯ ರಂಗಕರ್ಮಿ ಕಪ್ಪಣ್ಣ ಅವರು ಗೊತ್ತು ಮಾಡಿದ್ದರು. ಅಷ್ಟು ದೊಡ್ಡ ಕಲಾವಿದರು ಇಷ್ಟು ಪುಟ್ಟ ಗೂಡು ಪ್ರವೇಶಕ್ಕೆ ಬೇಡ ಸರ್ ಎಂದೆ. ಆದರೂ ಅದೇ ಗಾಯಕರ ಒಂದಿಬ್ಬರು ಶಿಷ್ಯರು ಅಷ್ಟೇ ಉತ್ತಮ ಗಾಯಕರು. ಅವರು ಗಜಲ್ ಕಾರ್ಯಕ್ರಮ ನಡೆಸಿಕೊಟ್ಟರು. ಜತೆಯಲ್ಲಿ ಹಲವು ಬಗೆಯ ಉತ್ತರ ಕರ್ನಾಟಕ ಸ್ಪೇಶಲ್ ಊಟ, ಚಿಕನ್, ಮಟನ್ ಬಿರಿಯಾನಿ, ಕಬಾಬ್, ಸಲಾಡ್, ಸಿಹಿ… ಊಟದ ವ್ಯವಸ್ಥೆಯನ್ನೂ ಮಾಡಿದ್ದೆ. ರೋನಿ ಮತ್ತು ರೋಹಿಣಿ ಎಲ್ಲ ಉಸ್ತುವಾರಿ ನೋಡಿಕೊಂಡರು.
* * *
ಮಧ್ಯರಾತ್ರಿಯಿಂದ ಬೆಳಗಿನ ಜಾವದತನಕ ಗಜಲ್ ಮತ್ತು ಗುಂಡು ಪಾರ್ಟಿ ನಡೆಯಿತು. ಗೃಹಪ್ರವೇಶಕ್ಕೆ ಗುಂಡು ಪಾರ್ಟಿನಾ? ಎಂದವರು ಹಲವರು. ಗುಂಡುಪ್ರಿಯ ಗೆಳೆಯರೆಲ್ಲರೂ ಬೆಳಗಿನ ಜಾವದತನಕ ಗುಂಡು ಸವಿದರು. ನಾನು ಗಜಲ್ ಸವಿದೆ. ಅಂದಿನ ಆ ಕಾರ್ಯಕ್ರಮದ ರಸನಿಮಿಷಗಳನ್ನು ಸೆರೆಹಿಡಯಲು ಬರುವೆನೆಂದು ಕೈಕೊಟ್ಟ ಸುನೀಲ್ ಕುಮಾರ್ ಸುಧಾಕರ್, ಬಿ.ಎ. ಹುಣಸೀಕಟ್ಟಿ ಇಬ್ಬರನ್ನು ಎಷ್ಟು ಶಪಿಸಿದರೂ ಸಾಲದು. ಯಾರದೋ ಕ್ಯಾಮೆರಾ ಇವಷ್ಟೇ ಚಿತ್ರಗಳನ್ನು ಸೆರೆಹಿಡಿದಿದ್ದವು. ಅವು ನನ್ನ ಕೈಸೇರಿದ್ದು ಕೂಡ ಇತ್ತೀಚೆಗೆ.






ಅಬ್ಬಾ…ಎಂತಹ ಸುಂದರ ನಿರೂಪಣೆಗಳ ಹೃದಯಸ್ಪರ್ಶಿ….ಘಟನೆಗಳ ಗೊಂಚಲುಗಳು….ಎಲ್ಲ ಸೇರಿದಾಗ ದಿಲ್ ಸರ್ ಮನೆ ಸಂಪೂರ್ಣವಾಗಿ ಬೆಳಗಿತು…ಬೆಳಗುತ್ತಿದೆ…ಬೆಳಗುವುದು….ಧನ್ಯವಾದಗಳು ಮತ್ತು ಅಭಿನಂಧನೆಗಳು….
amana anvartha pada sfvrga..!chendada baraha..shubhavaagali