ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ’ಚಿಲ್ಲರೆ’ ಕಥೆ

ಚಿಲ್ಲರೆ-ತ-ರಂಗ

– ಮಧುಸೂದನ್ ಎಚ್ ಎಮ್

ನಾಕಾಣೆಗೆ, ಅಲ್ಲ ಇಪ್ಪತ್ತೈದು ಪೈಸೆಯ ನಾಣ್ಯಕ್ಕೆ ಬೆಲೆ ಇಲ್ಲದಂತೆ ಚಲಾವಣೆ ಸ್ಥಗಿತವಾಗಿ ಅದರ ಫಲದಿಂದ ಎಪ್ಪತ್ತೈದು ಪೈಸೆಯು ಬಿದ್ದು, ಅದೆಷ್ಟು ಐವತ್ತು ಪೈಸೆ-ಒಂದು ರೂಪಾಯಿಗಳು ಎದುರಿನಲ್ಲಿದ್ದ ಶಾಲೆಯ ಮಕ್ಕಳ ಕಿಸೆಯಿಂದ ಶ್ರೀರಂಗ ಐಯ್ಯಂಗಾರ್ ಬೇಕರಿಗೆ ಹಾಜರಾಗಿತ್ತೊ?
ಆ ಐಯ್ಯಂಗಾರರು, ಶಾಲೆಯ ತಿರುವಿನಲ್ಲಿದ್ದ ದೇವಸ್ಥಾನದ ಖಜಾಂಚಿ, ಸ್ಕೂಲಿನಲ್ಲೆ ಇದ್ದ ಚರ್ಚ್ ನ ಗುಮಾಸ್ತ – ಎಲ್ಲರೂ ನೂರು ರೂಪಾಯಿಯ ಚಿಲ್ಲರೆಯನ್ನು ಐದು ರೂಪಾಯಿ ಕಮಿಶ್ಶನಿಗೆ, ಇಡೀ ಏರಿಯಾದ ಅಂಗಡಿಗಳಿಗೆ ಡಿಸ್ಟಿಬುಟರ್ ಆಗಿದ್ದ ಒಬ್ಬನಲ್ಲಿ ಮಾರುತ್ತಿದ್ದರು. ಈ ವಿಷಯವನ್ನು ಅನೇಕ ಹೈಸ್ಕೂಲು ಮಕ್ಕಳಿಗೆ ವ್ಯವಹಾರ ಜಾಣತನದ ಪಾಠವೆಂಬಂತೆ ಹೇಳಿದ್ದೂವುಂಟು. ಆಗೆಲ್ಲಾ ಫೈನ್ ಕಟ್ಟದಿದ್ದವರು, ಇತರರನ್ನು ನಗೆಪಾಟಲು ಮಾಡಲು ಆಸಕ್ತರಾಗುತ್ತಿದ್ದರು. ಏಕೆಂದರೆ ಪಿ.ಟಿ.ಮಾಸ್ತರ್ ವಸೂಲಿಯನ್ನು ಗುಮಾಸ್ತನಲ್ಲಿಯೆ ಜಮಾ ಮಾಡುತ್ತಿದ್ದರಲ್ಲ!
“ಈ ವಿತರಕ ಮುಂದೆ ಚಿಲ್ಲರೆಗಳನ್ನು ಏನು ಮಾಡುತ್ತಾನೆ?” ಎಂಬ ಪ್ರಶ್ನೆ ಮಿಂಚಿ ಮಾಯವಾಗಿ ಬಿಡುತ್ತಿತ್ತು. ಆದರೆ ಪೋಲೀಸರ ಭಯ ಗುಡುಗಾಗುತ್ತಲೇ ಇರಲಿಲ್ಲ. ಅವನು ಅವನ್ನು ಎರಡು ರೂಪಾಯಿ ಲಾಭಕ್ಕೆ ಮಾರಿಕೊಳ್ಳುತ್ತಿದ್ದ ಎಂಬುದಾಗಿ ಹರಟಿದ ಮಾತು ಸತ್ಯಕ್ಕೆ ಹತ್ತಿರವಾದುದ್ದಾಗಿತ್ತೇನೊ?

ವ್ಯಾನು, ಆಟೋಗಳು ಮಕ್ಕಳನ್ನು ತುಂಬಿಕೊಂಡು ಹಿಂದಿರುಗಿಯಾಗಿತ್ತು. ಪೋಷಕರ ಜೊತೆ ಮೋಟರ್ ಏರಿ, ಸೊಂಟ ಹಿಡಿದು, ಹ್ಯಾಂಡಲ್ ಮೇಲೆ ಮುಖವಿಟ್ಟು ಕೂತು, ಸೈಕಲ್ ಪೆಡಲ್ ಮಾಡುತ್ತಾ ಹೋಗುತ್ತಿದ್ದರು ಅನೇಕರು, ಇನ್ನುಳಿದ ಕೆಲವರು ನಡೆದು ಮನೆಯೆಡೆಗೆ ಸಾಗಿದಂತೆಲ್ಲಾ ಅವರಿಗೆ ದಾರಿ ಹತ್ತಿರತ್ತಿರವಾದರೆ, ಕಾಣುವವನಿಗೆ ಏರಿಯಾ ವಿಸ್ತರಿಸುತ್ತಾ ಹೋಗುತ್ತದೆ. ಒಬ್ಬೊಬ್ಬರನ್ನು ಕೇಂದ್ರವಾಗಿಸಿದ್ದರೂ ಒಂದೊಂದು ಕಥೆ ಊಹಿಸಬಹುದು. ಏಕೆಂದರೆ ಅನುಭವದ ಪುನರಾವರ್ತನೆ ಊಹೆಗೆ ಪೂರಕವಾಗೇ ಇರುತ್ತದೆ, ಸರ್ಕಾರಿ ನೌಕರಿಯಂತೆ.
ಬ್ಯಾಗ್ಗಳೇ ರೆಕ್ಕೆಯಾಗಿ ಮಾರ್ಪಾಡಾಗಿದ್ದವೆಂಬಂತೆ ಬೇಕರಿ ಕಿಕ್ಕಿರಿದದ್ದು; ಪ್ಲಮ್-ಹನಿ-ಪ್ಲೇನ್-ಚಾಕ್ಲೇಟ್ ತರತರದ ಕೇಕ್ಗಳು, ರೋಲ್ಗಳು, ಸ್ಯಾಂಡ್ವಿಚ್, ಪಫ್, ದಿಲ್ಖುಷ್, ದಿಲ್ಪಸಂದ್, ಬೆಣ್ಣೆ-ಕೊಬ್ಬರಿ ಬಿಸ್ಕತ್ತುಗಳು, ಖಾರದ ರೊಟ್ಟಿ, ವಿಚಿತ್ರ ಬಣ್ಣಾಕಾರದ ಖಾರ-ಸ್ವೀಟ್ಗಳು, ಸಿಹಿ-ಸಾಲ್ಟ್-ಸಪ್ಪೆ-ಖಾರದ ಬ್ರೆಡ್, ಬನ್ ಇತ್ಯಾದಿ ತರೋವಾರಿ ತಿನಿಸುಗಳ ಗಮ್ ಎಂಬೋ ಸುವಾಸನೆ ನೆನೆದಷ್ಟು ನೀರೂರುತಿತ್ತು. ಗುಜು ಗುಜು ಕಾರಂಜಿ ನಿಧಾನವಾಗಿ ವಾತವರಣದಲ್ಲಿ ಅಡಗಿಯಾಗಿತ್ತು.
ಅಂದು ಶನಿವಾರ, ಶಾಲೆಯಲ್ಲಿ ವಿಶೇಷ ಪ್ರಾರ್ಥನೆಯಿತ್ತು- “ಬೈಬಲ್ ಪಠಣ ಮತ್ತು ರೊಟ್ಟಿ ಚೂರು ಹಂಚುವ ಕಾರ್ಯಕ್ರಮ”. ಐಯ್ಯಂಗಾರರ ಬೇಕರಿಯಿಂದಲೆ ರೊಟ್ಟಿ ಸರಬರಾಜಾಗುತ್ತಿದ್ದುದು.
ಮುಗ್ಧ ಏಳನೇ ತರಗತಿಯ ಇಬ್ಬರು ಹುಡುಗರು, ತಮ್ಮ ಪಕ್ಕದ ಸಾಲಿನಲ್ಲಿದ್ದ ಏಂಜಲ್ಳನ್ನು ಅನುಕರಿಸುತ್ತಿದ್ದರು, ದೊಡ್ಡ ಅಸೆಂಬ್ಲಿಯಲ್ಲಿ ಪುಟ್ಟ ಪೋರತೆ ಘಟಿಸಿ ಹೋಯಿತು. ಇಬ್ಬರ ತುಂಟತನ ಕೈಯಲ್ಲಿದ್ದ ಬೈಬಲ್ ಪುಸ್ತಕದ ಹಾಳೆಯೊಂದನ್ನು ಹರಿದುಬಿಟ್ಟಿತು.
ಭಯ-ಭಕ್ತಿ ಒಟ್ಟಿಗೆ ಸಂಚಯಗೊಂಡು, ಪ್ರಕರಣದಲ್ಲಿ ಶಿಕ್ಷಕರಿಂದ ತಪ್ಪಿಸಿಕೊಂಡರೂ ದೇವರ ಹಚ್ಛೆಯಂಥ ಅರಿವು ಬಿಡಲಿಲ್ಲ. ಮನೆಗೆ ನಡೆದು ಹೋಗುವಾಗ, ರಸ್ತೆ ಬದಿಯಲ್ಲಿ-ಕಾಲಿ ಸೈಟುಗಳಲ್ಲಿ ಮೇಯುತಿದ್ದ ಹಸು ಎಮ್ಮೆಗಳನ್ನು ಮುಟ್ಟಿ ಮುಟ್ಟಿ ನಮಸ್ಕರಿಸುತ್ತ, ಅಂಗಡಿಗಳಲ್ಲಿ ನೇತುಬಿಟ್ಟಿದ್ದ ನಾಣ್ಯಾಲಂಕೃತ ಪಟಗಳಿಗೆ, ಮರಗಳನ್ನು ಸ್ಪಶರ್ಿಸುತ್ತಾ, ಅದರಡಿ ಬಿದ್ದಿರುತ್ತಿದ್ದ ಮುರಕಲು ವಿಗ್ರಹ, ಫ್ರೇಮ್ ಗಾಜು ಒಡೆದ ದೈವಪಟಗಳಿಗೆ ನಮಿಸಿ ಅಲ್ಲೆ ಇರುತ್ತಿದ್ದ ವೃದ್ಧರ ಗುಂಪಿಗೆ, ದಾರಿ ಹೋಕ ಮುದುಕ ಹಿರಿಯರಿಗೂ (ಕೆಲವರು ತಿರುಕ ಹುಚ್ಚರಿದ್ದರೂ) ಮನಸ್ಸಿನಲ್ಲಿಯೇ ಕ್ಷಮೆಯ ಬೇಡಿಕೆ ಸಲ್ಲಿಸುತ್ತಾ ಮುನ್ನಡೆದರು. ದೇವಸ್ಥಾನಕ್ಕೆ ಬೀಗ ಹಾಕಿದ್ದರಿಂದ ಸಂಜೆ ಬರುವುದಾಗಿ ದೇವರಲ್ಲಿ ಹೇಳಿ ಹೋಗಿದ್ದರು.
ಜೋಗು ರಸ್ತೆಯಲ್ಲಿ ವಿರುದ್ಧವಾಗಿ ಸೈಕಲ್ ಮೇಲೆ ಯಾರೋ ಸವಾರಿ ಮಾಡುತ್ತಿದ್ದಾನೆ, ಆಗಸದಲ್ಲಿ ಸೂರ್ಯನನ್ನು ಮೋಡ ಮುಚ್ಚಿದ್ದು ಅವನಿಗೆ ಹಿತವೆನಿಸಿರಬೇಕು. ದೇವಸ್ಥಾನದ ಎದುರಿಗಿರುವ ಮುನಿಸಿಪಲ್ ಪಾರ್ಕ್ ನ ಅಂಚುಗಳಲ್ಲಿ ಗುಲ್ಮೋಹರ್ ಹೂಗಳು ತುಂಬಿ ತುಳುಕುತ್ತಿದ್ದರೆ, ಒಳಗಡೆ ಹಳದಿ ಹೂವುಗಳು ಕಂಗೊಳಿಸುತ್ತಿವೆ. ಮರೆಯಾದ ಬೆಂಚೊಂದರ ಮೇಲೆ ಬೇರೆ ಬೇರೆ ಏರಿಯಾದ
ತರುಣ-ತರುಣಿಯರಿಬ್ಬರು ಪರಸ್ಪರ ತೊಡಗಿರಲು, ಹಂಚಿಹೋದ ಬೆಂಚುಗಳ ಮೇಲೆ ಒಂದಿಬ್ಬರು ಮಲಗಿದ್ದಾರೆ. ಮುಖ್ಯ ಹಾದಿಯ ತುದಿಯಲ್ಲಿದ್ದ ಚರಂಡಿಯ ಪಕ್ಕ ಮೊಬೈಲ್ ನೆಟ್ವರ್ಕಿನ ಟವರ್ಗಾಗಿ ಗುಂಡಿ ತೋಡುತ್ತಿರುವ ಕೂಲಿ ಆಳುಗಳ ಪರಿವಾರ ಸುಧಾರಿಸಿಕೊಂಡು, ಬುತ್ತಿ ಬಿಚ್ಚಿ ಉಣ್ಣುತ್ತಿದ್ದಾರೆ. ಸಿಟಿ ಬಸ್ಸುಗಳು ಚಲಾವಣೆಯಲ್ಲಿತ್ತು. ಪೊದೆ ಬೆಳೆದು ನಿಂತಿದ್ದ ಎರಡು ಖಾಲಿ ನಿವೇಶನಗಳ ನಡುವೆಯಿದ್ದ ರಸ್ತೆಯ ಮೇಲೆ ಮುಂಗಸಿಗಳೆರಡು ಪುಳಪುಳನೆ ಹರಿದುಹೋಯಿತು. ಜೇಬು, ಪಸರ್ು, ಡ್ರಾಯರ್ಗಳಲ್ಲಿ ಕೈಚೆಲ್ಲಿದ ಚಿಲ್ಲರೆ ನಾಣ್ಯಗಳಂತೆ ಇವೆಲ್ಲಾ ಅನಾವರಣಗೊಂಡಿವೆ.
ವಿವಿಧಾಂತರದ ಉದ್ಯೋಗದಲ್ಲಿದ್ದ ಇಬ್ಬರು, ಕುಡಿದ ನಂತರ, ಸಹಪಾಠಿ-ಗೆಳಯರಾಗಿದ್ದರೂ ಸಹ ಚಹಾಕ್ಕೆ ಹಣ ನೀಡುವಾಗ, ಒಬ್ಬನ ಪರ್ಸ್ ನ ಮಡಿಕೆ ಬಿಚ್ಚಿದಾಗ 500 ರೂಗಳ ನೋಟುಗಳಿಂದ ತುಂಬಿತ್ತು. ಅಂಗಡಿಯವನು ಮುಖ-ಮುಖ ನೋಡುತ್ತಿದ್ದನ್ನು ಕಂಡು ಮತ್ತೊಬ್ಬ ಬೆಳಗ್ಗೆ ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ ತನ್ನ ಕೋಣೆಯಲ್ಲಿರುವ ಟೇಬಲ್ ಡ್ರಾಯರ್ನಿಂದ ಜೇಬಿಗೆ ತುರುಕಿಕೊಂಡು ತಂದಿದ್ದ ಚಿಲ್ಲರೆ ದುಡ್ಡು ತೆಗೆದುಕೊಟ್ಟ. ಅವನು ಒಂದು 500 ರೂರರ ನೋಟಿಗೆ ನೂರರ ಚಿಲ್ಲರೆ ಮಾಡಿಸಿದ, ಪೇರಿಸಿಕೊಳ್ಳುತ್ತ ಹೊರಟರು. ಮರುನಿಮಿಷದಲ್ಲಿ ಕೂಲಿಯಾಳೊಬ್ಬ ಬೆರಳುಗಳ ಮಧ್ಯದಿಂದ ಮೋಟುಬೀಡಿಯನ್ನು ತಡವಿ, ಹಿಂದಿನಿಂದ ನಡೆದು ಬಂದು, ಬೆನ್ನು ತಟ್ಟಿ, ಮುಖ್ಯರಸ್ತೆಯ ಬದಿಯಲ್ಲಿ ಕಾಲು ಹಾದಿಯ ಮೇಲೆ ಚಹಾದ ನಶೆ ಏರಿದಂತೆ ತುರಾಡುತ್ತಿದ್ದ ನೂರು ರೂಪಾಯಿಯ ಗಾಂಧಿ ನೋಟೊಂದನ್ನು ಬೆಟ್ಟುಮಾಡಿ ತೋರಿಸಿ, “ನೀವೆಂತದೊ ಬಿಳಿಸ್ಕಂಡ್ರಿ”, ಎನ್ನುತ್ತಾ ಅವರನ್ನು ದಾಟಿದ್ದ.
ಸೂರ್ಯ ಜಾರುತ್ತಿದ್ದ ದಿಕ್ಕಿನಲ್ಲಿ ಮುಖ್ಯ ಹಾದಿಯ ಜೋಗನ್ನು ಏರಿ ಸಿಟಿ ಬಸ್ಸೊಂದು ಚಾಲ್ತಿಯಲ್ಲಿರುವಂತೆ ನಿಂತಿತು. ಈ ಆಸಾಮಿ ಇಳಿದವನು, ಪಾಸ್ ನವೀಕರಣ ಮಾಡಿಸಲು ಮರೆತದ್ದು ನೆನಪಾಗಿ ಕಂಡಕ್ಟರನಲ್ಲಿ ಬಾಕಿಯಿದ್ದ ಎರಡು ರೂಪಾಯಿಗಳನ್ನು ಕೇಳಿದ.
ಟಿಕೆಟ್ ಹರಿದುಹಾಕುತ್ತಾ- “ನಿಮ್ಮ ಹತ್ರ ಎಷ್ಟಿದೆ ಚೇಂಜು?”
ಜೇಬು ತದಕಿ- “ಒಂದೊಂದು ರೂಪಾಯಿದು, ಎರಡು.”
“ಕೊಡಿಯಿಲ್ಲಿ” ಎಂದು ಕಸಿದುಕೊಳ್ಳುತ್ತಾ, ಎರಡು, ಎರಡು ರೂಪಾಯಿ ನಾಣ್ಯಗಳನ್ನು ಹಸ್ತಾಂತರಿಸಿ ಬಸ್ಸನ್ನು ಏರಿದ. ಬಾಗಿಲು ತನ್ನ ತಾನೆ ಹಾಕಿಕೊಂಡಿತು.
ಸ್ಪೆಷಲ್ ಸೆಷನ್ನಲ್ಲಿ ಷೇರು ಮಾರುಕಟ್ಟೆ ಇನ್ನು ತನ್ನ ದಿನದ ಏರಿಳಿತವನ್ನು
ನಿಲ್ಲಿಸಿರಲಿಲ್ಲ. ಕೈಗಡಿಯಾರದಲ್ಲಿ ಸಮಯ ನೋಡಿದವನೆ, ಬೇಕರಿಯ ಮಹಡಿ ಹತ್ತಿ ದಲ್ಲಾಳಿಯ ಆಫೀಸ್ ಹೊಕ್ಕಿದ. ಅದೃಷ್ಟವನ್ನು ಉಪಯೋಗಿಸಲು ಅದೇ ತಾನೆ ತುಲನೆ ಹಾಗು ವಿಮರ್ಶನಾತ್ಮಕವಾಗಿ ಆಯ್ಕೆಯಾದ ಸ್ಟಾಕ್ಗೆ ಸಂಬಂಧಪಟ್ಟಂತೆ ಕೊಳ್ಳುವ-ಮಾರುವ ದರಗಳನೊಳಗೊಂಡ ಒಂದೇ ಆರ್ಡರನ್ನು ದಲ್ಲಾಳಿಯ ಮೂಲಕ ಸಬ್ಮಿಟ್ ಮಾಡಿ, ಹರಟೆಗೆ ಜಾರಿದರು. ಮಾತಿನ ಮಧ್ಯದಲ್ಲಿ-
“ಬೈಕ್ ಓಡಿಸ್ತಾಯಿದಿರಿ ಅನ್ತಿಟ್ಕೊಳ್ಳಿ, ನಾಕಣೆ ರಸ್ತೇಲ್ಬಿದ್ದಿದ್ದು ಕಂಡ್ರೆ,
ನಿಲ್ಸಿ ಎತ್ಕೊಳೊದಕ್ಕೆ ಹೋಗ್ತೀರ ಹೇಳಿ?”
ಪೇಚು ನಗೆ.
“ಪ್ರತಿಫಲವಾಗಿ ಸಿಗೋ ಆ ನಾಣ್ಯದ ಬೆಲೆಗಿಂತ ಅದನ್ನ ತಗೋಳಕ್ಕೆ ಹಾಕೋ ನಿಮ್ಮ ಶ್ರಮನೇ ಹೆಚ್ಚಾಗಿರುತ್ತೆ. ಅದೇ ನೂರೂಪಾಯಿ ಗಾಂಧಿ ನೋಟ್ ಆಗಿದ್ರೆ
ಒಪ್ಕೊಬಹುದು, ಅಲ್ವೇನ್ರೀ?”
“ಯಾರ್ ಬಿಡ್ತಾರೆ ಸರ್ ಸಿಕ್ಕರೆ!”
ಜೋರಾಗಿ ನಗುವರು.
ಎಲೆಕ್ಟ್ರಾನಿಕ್ ಬ್ಯಾಂಕಿಂಗ್ನಲ್ಲಿ ವ್ಯವಹರಿಸುವಾಗ ಸೂಕ್ಷ್ಮ ಪ್ರಮಾಣದ ಚಿಲ್ಲರೆ ಹಣ ಸೋರಿಕೆಯಾಗುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಾ, ಪಾಯಿಂಟ್-ದಶಮಾಂಶ ವ್ಯತ್ಯಾಸದಲ್ಲಿ ಒಂದು ಇನ್ಟ್ರಾ-ಡೇ ವಹಿವಾಟನ್ನು ಬಾಜಿ ಕಟ್ಟಾಡುವ ಪೂರ್ವಾಪರ ಚರ್ಚೆ ಮಾಡುತ್ತಾ ಸಂಭವಾಸಂಭವಗಳ ತಕ್ಕಡಿಯನ್ನು ಬಾರಿಸುತ್ತಿದ್ದರು.
ಆ ಇಬ್ಬರು ಹುಡುಗರು ಹಿಂದೆ-ಮುಂದಿನ ಕ್ರಾಸ್ನ ತಮ್ಮ್ತಮ್ಮ ಮನೆಗಳಲ್ಲಿದ್ದರು.
“ಕಡಲೆ-ಕಾಯಿ…” ಎಂದು ಕೂಗುತ್ತ ಸೈಕಲ್ ತಳ್ಳುವನೊಬ್ಬ ಮೊದಲನೆ ಕ್ರಾಸಿಗೆ ಬಂದ.
“ಕಡ್ಲೆ-ಪುರಿ…” ಎಂದು ಕೂಗುವವನು ಎರಡನೇ ಕ್ರಾಸ್ನಲ್ಲಿದ್ದ. ಈ ಪ್ರದೇಶದಲ್ಲಿ ಇಬ್ಬರಿಗೂ
ಕೆಲ ಕ್ಷಣಗಳ ಮುಂಚೆಯಷ್ಟೆ ಆರಂಭಿಸಿದ್ದ ತಮ್ಮ ವ್ಯಾಪಾರದ ಮೊದಲನೆ ಬೋಣಿ ಈಡುಮಾಡಲಿರುವ ಸನ್ನಿವೇಶವನ್ನು ದಿವ್ಯದೃಷ್ಟಿಯಿಂದ ಮುಂಗಾಣುವ ಹಂಗು ಬೇಕಿರಲಿಲ್ಲ.
ಆ ಇಬ್ಬರ ತಾಯಂದಿರು ಆಕಳಿಸುತ್ತಾ ಬಾಗಿಲು ತರೆದು, ಹತ್ತತ್ತು ರೂಪಾಯಿಗೆ ಹಸಿಗಡಲೆ ಹಾಗು ಪುರಿಯನ್ನು ಬಂದಷ್ಟು ಸೇರು ಕೊಂಡು, ಚೌಕಾಸಿ ಮಾತುಗಳನ್ನು ಅಳೆದು-ಸೋಸಿ ದುಡ್ಡು ಕೊಡುವಷ್ಟೊತ್ತಿಗೆ ಕೈಯಲ್ಲಿ ನೂರು-ನೂರರ ನೋಟು!
ಹುಡುಗರು ಕೈ-ಬಾಯಿಯಾಡಿಸುತ್ತಿದ್ದರೂ, ಅವರು “ಚಿಲ್ಲರೆ ಕೊಡಿಯಮ್ಮ” ಎಂದು ಅಂಗಿಯ ಎಲ್ಲಾ ಜೇಬುಗಳನ್ನು ಹಿಸುಕುತ್ತಾ ಗೋಗರೆದರು.
ಒಬ್ಬರ ಹಿಂದೆ ಒಬ್ಬರು ಓಡುತ್ತಾ ಬೇಕರಿ ಬಳಿ ಧಾವಿಸಿ, ಒಂದೇ ಕಾಲದಲ್ಲಿ – “ಚಿಲ್ಲರೆ ಕೊಡಿ” ಎನ್ನುತ್ತಾ ನೂರರ ನೋಟು ಹಿಡಿದ ಸಣ್ಣ ಕರಗಳನ್ನು ಒಟ್ಟಿಗೆ ಚಾಚಿದಾಗಲೆ, ತಮ್ಮನ್ನು ಗುರುತಿಸಿಕೊಂಡದ್ದು. ಅವರಿಬ್ಬರಿಗೆ ಈ ಪ್ರಜ್ಞಾವಲಯವನ್ನು ಹತ್ತಿಕ್ಕುವಂತಹ ವೇಗದ ಸಂವಹನೆಯಿಂದ ಹೊಳೆದದ್ದು ಪರಿಚಯದ ಖಾತರಿ ಇತ್ಯಾದಿ ಬೆಳಗಿನ ಪ್ರಕರಣಗಳಲ್ಲ. ಬದಲಾಗಿ “ಯಾರು ಮೊದಲು ಚಿಲ್ಲರೆ ತರುತ್ತಾರೆ?” ಎಂಬ ಸೃಜನತನದ ಚೈತನ್ಯಮಯ ಚಿಲುಮೆ ಉಕ್ಕಿಸುವಂತಿದ್ದ ಆಟದ
ಆವಿಷ್ಕಾರ. ಇಬ್ಬರಿಗೂ, ಬಂಧ ಮುರಿದು ಕೊಡುವುದು ಐಯ್ಯಂಗಾರರಿಗೆ ಸಂಕಟವಾಗಿ, ಇದರಿಂದ ನುಸುಳಿಕೊಳ್ಳಲು, ಚಿಲ್ಲರೆಗಳನ್ನು ಬಾಂಗ್ಲದೇಶಕ್ಕೆ ಬ್ಲೇಡ್ಗಳನ್ನಾಗಿ
ಮಾರ್ಪಡಿಸಲು ರಫ್ತು ಮಾಡುತ್ತಾರಂತೆ ಎಂಬಿತ್ಯಾದಿಯಾಗಿ ಕಥೆ ಬಿಚ್ಚಿಡುವಷ್ಟರಲ್ಲಿ, ಬೇರೆ ಇತರೆ ಅಂಗಡಿಗಳಲ್ಲಿಗೆ ದಿಕ್ಕಾಪಾಲಾಗಿ ಓಡಹತ್ತಿದ್ದರು.
ಚಿನಿವಾರ ಮಂಡಿ, ಚಹಾ ಅಂಗಡಿ, ಅಂಗಡಿ ಪೆಟ್ಟಿಗೆ, ತಳ್ಳೊ ಗಾಡಿ, ಆಟೋ ಸ್ಟ್ಯಾಂಡ್, ಸಿಡಿ ಹಾಗು ಮೊಬೈಲ್ ಸೆಂಟರ್, ಬಟ್ಟೆ ಮಳಿಗೆ, ಕಟ್ಟಿಂಗ್, ಸೈಕಲ್ ಶಾಪ್, ಚಿಪ್ಸ್ ಅಂಗಡಿ, ಪಾನಿಪುರಿ ಗಾಡಿ, ಚಮ್ಮಾರ, ದಜರ್ಿ, ಇಸ್ತ್ರಿ, ಅಕ್ಕಸಾಲಿಗರ ದುಖಾನು, ಗ್ಯಾರೇಜ್, ಎಲೆಕ್ಟ್ರಿಕ್ ರಿಪೇರಿ, ಫೋಟೊ ಸ್ಟುಡಿಯೋ, ಸೈಬರ್ ಕಫೆ, ಸ್ಟೇಷನರಿ, ತರಕಾರಿ ಅಂಗಡಿ, ಪ್ರಾವಿಷನ್ ಸ್ಟೋರ್, ಫ್ಯಾನ್ಸಿ ಸ್ಟೋರ್ – ಹೀಗೆ ಸಿಕ್ಕವರಲ್ಲಿ ಇದ್ದ ಸಾಧ್ಯತೆಗಳಲೆಲ್ಲಾ ಪ್ರಯತ್ನಿಸಿ ಚಿಲ್ಲರೆ ಮಾಡಿಸಿದ ನೋಟುಗಳನ್ನು ಕೂಡಿಸಿಕೊಂಡು ಇನ್ನೇನು ಬಾಗಿಲು ತೆರೆಯುತ್ತಿದ್ದ ದೇವಸ್ಥಾನದ ಬಳಿ ಒಂದೆರಡು ನಿಮಿಷಾಂತರದಲ್ಲಿ ಇಬ್ಬರು ಅಭಿಮುಖವಾದರು. ಮೊದಲಿಗೆ ದೇವರಲ್ಲಿ ಬೆಳಗಿನ ಅವಾಂತರಕ್ಕೆ ಅನುಗುಣವಾಗಿ ನಿವೇದನೆಗಳನ್ನು ತಿಳಿಸಿಬಿಟ್ಟರು. ನಿರಾಳ ಮನಸ್ಸಿನಿಂದ ಚಿಲ್ಲರೆ ನೋಟುಗಳ ಪರಾಮರ್ಶೆ ಯಲ್ಲಿ ತೊಡಗಿದರು. ಒಬ್ಬನ ಬಳಿ ಎರಡು ಬರಬಾದಾದ ನೋಟುಗಳು ಬಂದುಬಿಟ್ಟಿದ್ದವು. ಪೂಜಾರಿಯನ್ನು ಬದಲಿಗಾಗಿ ಕೇಳಿಯೇ ಬಿಟ್ಟರಲ್ಲ! ಆತ ಮಂದಹಾಸ ಕಾಂತಿಯನ್ನು ಇವರಿಬ್ಬರ ಬಿಂಬದಂತೆ ಅವರೆದುರಿಗೇ ಬೀರುತ್ತಾ, ಮಂಗಳಾರತಿ ತಟ್ಟೆಯಲ್ಲಿ ಕೈಯಾಡಿಸುತ್ತಾ; ಒಮ್ಮೆ ಪುಡಿಗಾಸುಗಳನ್ನು ಮತ್ತೊಮ್ಮೆ ಅವನ ಕೈಯ್ಯಲಿದ್ದ ಚಿಂದಿ ನೋಟುಗಳನ್ನು, ತಲೆಯಾಡಿಸುತ್ತಾ… ಲೆಕ್ಕಮಾಡುತ್ತಾ… ನೋಟದಲ್ಲಿ ಮಗ್ನವಾಗಿರುವಲ್ಲಿಗೆ- ಆ ಇಬ್ಬರು ಹುಡುಗರಲ್ಲಿ ಪ್ರತಿಫಲನಾಕರ್ಷಕ ಮಾರ್ಗವಾಗಿ ‘ಚಿಲ್ಲರೆ ನೋಟುಗಳನ್ನು ಪುನಃ ಒಂದು ನೋಟು ಮಾಡುವ’ ತಮ್ಮ ಆಟದ ಪರಮಾತ್ಮ ಸ್ವರೂಪ ದರ್ಶನವಾಗಿಬಿಟ್ಟಿತು.
ಹೀಗೆ “ನೋಟನ್ನು ಚಿಲ್ಲರೆ ಮಾಡುವ, ಚಿಲ್ಲರೆಯನ್ನು ನೋಟು ಮಾಡುವ” ಪರಿಯಾಟ ಪುನರಾವರ್ತನೆಯ ಜಾಡುಹಿಡಿಯುವುದರಲ್ಲಿತ್ತು. ಗೆಲುವು-ಸೋಲಿನ ಪ್ರಾಮುಖ್ಯತೆಯನ್ನು ಹೊಸ ತುಂಟಾಟದ ಉತ್ಸಾಹ, ಉಲ್ಲಾಸ, ಆನಂದಗಳು ಮರೆಮಾಚಿಬಿಡುತ್ತಿದ್ದವು.
ಇತ್ತ ವ್ಯಾಪಾರಿಗಳು ಸ್ವಲ್ಪ ಕಾದು ತದನಂತರ ಬರುವುದಾಗಿ ತೆರಳಿದ್ದವರಿಗೆ, ಪಕ್ಕದ ಏರಿಯಾದಲ್ಲಿ ಹುಡುಗರು ಮುಖಾಮುಖಿಯಾಗಿ ತಮ್ಮ ಹತ್ತತ್ತು ರೂಪಾಯಿಗಳನ್ನು ಪಡೆಯುವಲ್ಲಿಗೆ, ಈ ಪೋರರಿಗೆ ಮನೆಯೆಡೆಗೆ ನಡೆವ ತುತರ್ು ಜ್ಞಾಪಕವಾಗಿ ಪುನಃ ಭಯಭಕ್ತಿ ಜಾಗೃತವಾಗಿ ಹಿಂದಿರುಗಲಾರಂಬಿಸಿದರು.
ಇಪ್ಪತೈದು ಪೈಸೆಯ ನಾಣ್ಯವೊಂದು ದಾರಿ ಬದಿಯಲ್ಲಿ ಒಬ್ಬನಿಗೆ ಕಂಡಿತು. ಕಣ್ಣರಳಿಸುತ್ತ ಕೈಗೆ ತೆಗೆದುಕೊಳ್ಳುತ್ತಿರವುದನ್ನು ನೋಡಿ, ಇನ್ನೊಬ್ಬ ಹೇಳಿದ-“ಯಾರೊ ಬೀಳ್ಸ್ಕೊಂಡು ಹೋಗಿದಾರೆ ಕಣೋ, ಅವರಿಗೆ ನೆನಪಾಗಿ ವಾಪಸ್ ಹುಡುಕೊಂಡು ಬರ್ತಾರೆ, ಅದು ನಮ್ಮದಲ್ಲವಲ್ಲ ಬಿಡೋ”- ಹೀಗೆ ಹೇಳಲು ಅವನಿಗೆ ಭಕ್ತಿಭಾವಗಳು ಪ್ರೇರೆಪಿಸಿರಲು ಸಾಕು ಎಂಬ ಕಾರಣವನ್ನು ಸುಲಭವಾಗಿ ಹಚ್ಚಿಬಿಡಬಹುದು. ಆದರೆ ವರ್ತನೆಯ ಬೇರುಗಳು ಅರಿವಿಗೂ ಅಜ್ಞಾತವಾದ ನಿಗೂಢ ಅಸಂಗತ.
ಅವರ ಕ್ರಿಯೆಯ ಅರಿವೂ ಇಲ್ಲದ ಮುಗ್ಧ ಪ್ರತಿಕ್ರಿಯೆಗಳು ಮುಕ್ತತೆಯನ್ನು ಪ್ರತಿನಿಧಿಸುತ್ತಿದ್ದವು.
ಮರಳಿ ಇಡುವಾಗ ಅದು ಮೊದಲಿದ್ದ ಜಾಗದ ಖಚಿತತೆಯ ಬಗ್ಗೆ ಸಣ್ಣ ತುಂಟತನದ ವಾದ ಮಾಡುತ್ತಾ, ಮರುಕ್ಷಣದಲ್ಲಿ ಅದರ ಯಥಾಸ್ಥಿತಿಯನ್ನು ತಲುಪಿಸಿದ್ದರು.
ನಡೆಯುತ್ತಿರುವಂತೆ-“ಅಲ್ವೊ, ಇನ್ಯಾರೊ ತಗೋತಾರಪ್ಪ?”
“ಅವರಿಗೆ ಪಾಪ ಬರುತ್ತೆ.”
“ಹಾಗಾದ್ರೆ ನಮಗೆ ಪುಣ್ಯ..?”
“ಈಗ ಪುಣ್ಯ ಬರಲ್ಲ, ಯಾಕೆಂದ್ರೆ ಬೆಳಗ್ಗೆ ಮಾಡಿದ್ದಕ್ಕೆ ಇದು ಸರಿಹೋಯ್ತು.”
“ಅಬ್ಬ! ಹೌದಲ್ವ?”
ಸಮಾಧಾನದ ಮಂದಹಾಸ ಮುಖಾರವಿಂದವನ್ನು ಅರಳಿಸುತ್ತಿದ್ದಂತೆ,
ಮುಂದೆ ಮುಂದೆ ಹೆಜ್ಜೆ ಹಾಕ ಹತ್ತಿದರು.
“ಏ..! ನಾವು ಏನು ಮಾಡ್ಲೇ ಇಲ್ವಲ್ಲ. ಎಲ್ಲಿತ್ತೊ ಅಲ್ಲೆ ವಾಪಸ್ ಇಟ್ವಿ ಅಷ್ಟೆ, ಅಲ್ವ?”
ಅಷ್ಟರಲ್ಲಿ ಒಬ್ಬನ ತಾಯಿ ತನ್ನ ಪತಿಗೆ ಫೋನಾಯಿಸಿದಾಗ ದಲ್ಲಾಳಿಯ ಆಫೀಸಿನಲ್ಲಿದ್ದ ಆಸಾಮಿ, ಷೇರು ಮಾರುಕಟ್ಟೆ ಮುಗಿದು ಒಂದುವರೆ ತಾಸಾಗಿದ್ದರೂ ನೆಟ್ವಕರ್್ ಮತ್ತು ಸೈಟ್ ಮೈನ್ಟೆನೆನ್ಸ್ ತೊಂದರೆಗಳಿಂದಾಗಿ ತಾನು ಒಡ್ಡಿದ್ದ ಆರ್ಡರ್ ಸ್ಟೇಟಸ್ ತಿಳಿಯುವ ಕಾತುರಾಂತಂಕದಲ್ಲಿದ್ದವನು, ಮೊಬೈಲ್ನಲಿ ್ಲ ಕಾಲ್ ಪಿಕ್ ಮಾಡಿದವನೇ ಆತಂಕವನ್ನು ಪೂರ್ಣ ಪ್ರಮಾಣವಾಗಿ ಒಪ್ಪಿಕೊಂಡು ರಸ್ತೆಗೆ ಧಾವಿಸಿ ಹುಡುಕಲಾರಂಭಿಸಿದ. ಇಬ್ಬರು ತಾಯಂದಿರೂ ಇತರೆ ಅಂಗಡಿಗಳತ್ತ ಮಕ್ಕಳಿಗಾಗಿ ಪೇಚಾಡುತ್ತಿರುವಲ್ಲಿಗೆ..;
ಗುಂಡಿ ತೋಡುತ್ತಿದ್ದ ಆಳುಗಳ ಕುಟುಂಬದ ಮುಖಂಡನಿಗೆ ಮೇಸ್ತ್ರಿ ಆತುರಾತುರವಾಗಿ ಮಿಕ್ಕೆಲ್ಲರ ದಿನಗೂಲಿಯನ್ನು ಸೇರಿಸಿ ಒಟ್ಟಿಗೆ ನೀಡಿದ್ದರಿಂದ, ಚಾನಾಹೀನಿ ಮಾಡಿಕೊಂಡು ಬಂದ ಅವನನ್ನು ಪರಿವಾರದವರು ತಾರಾಮಾರಿ ತಾರಕಕ್ಕೇರಿಸುತ್ತಿದ್ದಲ್ಲಿಗೆ..;
ಸ್ಟೋರ್ ರೂಮಿನಲ್ಲಿ ಮೆಂಬರುಗಳ ಮೀಟಿಂಗ್ ನಡೆಯುತ್ತಿದ್ದು, ಒಳಗೆ ಮಹಿಳಾ ಸಮಾಜದವರು “ದಯಮಾಡೋ ರಂಗ…” ಎಂದು ಭಜಿಸುತ್ತಿದ್ದರೆ, ಭಟ್ಟರು ದೇವಸ್ಥಾನದ ಹೊರಗೆ ಹೊಸ ಕಾರಿನ ಪೂಜಾರ್ಚನೆಯ ಮಂತ್ರ ಪಠಿಸುತ್ತಿರುವಲ್ಲಿಗೆ..;
ರಸ್ತೆಯ ಮೇಲೆ ತರುಣ-ತರುಣಿ ಬೈಕ್ ಸವಾರಿಯಲ್ಲಿರುವಲ್ಲಿಗೆ..;
ಗುಮಾಸ್ತ ಸ್ವಿಚ್ ಒತ್ತುತ್ತಿದ್ದಂತೆ ಗೋಪುರದ ಕೆಂಪು ಶಿಲಬೆ, ಇತ್ಲಗೆ ಬೀದಿ ದೀಪಗಳು ಟಪ-ಪಟ ಹತ್ತಿಕೊಳ್ಳುತ್ತಿರುವಲ್ಲಿಗೆ..;
ಭಿಕ್ಷುಕನ ಬಳಿಯಿಂದ ಹಾದವನಂತೆ ಕಂಡ ಡಿಸ್ಟ್ರಿಬ್ಯುಟರ್ ಬೇಕರಿಯೆಡೆಗೆ ಬಂದು ಆಚೆ ನಿಂತು, ಐಯ್ಯಂಗಾರರು ಒಳಗಿನಿಂದ ಇನ್ನೇನು ಚಿಲ್ಲರೆ ಪ್ಯಾಕಟ್ಗಳಿಂದ ಭತರ್ಿ ತುಂಬಿದ್ದ ಚೀಲವನ್ನು ಕೈ ಬದಲಾಯಿಸಬೇಕು- ಈ ಇಬ್ಬರು ಹುಡುಗರು ಬೇಕರಿಯ ತಿರುವಿನಿಂದ ಮುಖ್ಯರಸ್ತೆಯನ್ನು ದಾಟುತ್ತಿರುವಲ್ಲಿಗೆ ತಿರುಗಿ, “ಏ!..”
ಎನ್ನುವಷ್ಟರಲ್ಲಿಗೆ..;
ಬೇಕರಿಯ ಪಕ್ಕದ ಮನೆಯ ಯಜಮಾನರು ವಾಕಿಂಗ್ ಮುಗಿಸಿ ಗೇಟ್ ತೆಗೆದು, ಕುತ್ತಿಗೆ ಪಟ್ಟಿಯ ಕೈ ಬಿಟ್ಟಿದ್ದೆ ತಡ, ನಾಯಿ ಕಾಂಪೌಂಡಿನ ಸುತ್ತಲ್ಲಿದ್ದ ಹೂ-ಶೋ ಗಿಡಗಳ ಸಂದಿಯಲ್ಲಿ ಬಂದು ಸೇರಿಕೊಂಡಿದ್ದ ಮುಂಗಸಿಯನ್ನು ಹಿಮ್ಮೆಟ್ಟಿದೊಡನೆಯೇ ಅದು ಕಾಂಪೌಂಡನ್ನು ಹತ್ತಿ ಹೌಹಾರಿದ್ದು ಐಯ್ಯಂಗಾರರ ಕಾಸಿನ ಚೀಲವನ್ನು ಗಾಳಿಗೆ ದೂಡುತ್ತಾ ರಸ್ತೆಗೆ ನೆಗೆದು, ಹೊರಳಿ, ಚರಂಡಿಯನ್ನು ದಾಟಿ ಇನ್ನೊಂದು ಖಾಲಿ ಕಾರ್ನರ್ ಸೈಟ್ ಸೇರಿಕೊಂಡಿತು.
ನುಗ್ಗಿ ಸವರಿಕೊಂಡು ಹೋದ ರಭಸಕ್ಕೆ ಬಿಡಿಗಾಸಿನ ಪ್ಯಾಕಟ್ಗಳು ಝೇಂಕರಿಸುತ್ತಾ ಬಿರಿದು ನಾಣ್ಯಗಳೆಲ್ಲಾ ಚಿಮ್ಮುತ್ತಾ ನೀರಿನ ಬುಗ್ಗೆಯ ತರ್ಜುಮೆಯಾಗಿ
ರೂಪಾಂತರಗೊಂಡಂತಹ ನಿಶ್ಶಬ್ಧ ಚಲನಚಿತ್ರ ಇನ್ನೇನು ಭೂಸ್ಪರ್ಶದಿಂದ ಹೊರಡಿಸಲಿರುವ ರೋಲ್ಲಿಂಗ್ ಸ್ಟೋನ್ನಂತಹ ಲೈವ್ ಕಾನ್ಸರ್ಟ್ ನ ಗುಂಗಿನ ಅಲೆಗಳು ಹೆಡ್ ಬ್ಯಾಂಗ್ ಮಾಡಿಸುವುದರಲ್ಲಿತ್ತು…
ಮನಸ್ಸಿನ ಚಿಲ್ಲರೆತನದ ಶಬ್ಧ ತರಂಗಗಳು, ಆರ್.ಬಿ.ಐ. ಟಂಕಸಾಲೆಯ ಚಿಲ್ಲರೆ ಸರಬರಾಜು ವಹಿವಾಟಿನ ತೀಕ್ಷ್ಣ ವಿಕಿರಣಗಳರಿವಿಲ್ಲದೆ, ಒಂದಕ್ಕೊಂದು ಮೀರಿ ಮತ್ತೊಂದರ ಧ್ವನಿಯನ್ನು ತಮ್ಮ ತಮ್ಮ ಸ್ಥರ ಸ್ಥಾವರಗಳಿಗನುಗುಣವಾಗಿ ಬಾಡಿಸುತ್ತಿರುತ್ತವೆ. ಅಷ್ಟರ ನಡುವಿನಲ್ಲಿಯೇ ದೃಷ್ಟಿ ಸ್ಥಬ್ಧತೆಯಲ್ಲಿ ಅರಳಿರುತ್ತದೆ.
 

‍ಲೇಖಕರು G

26 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading