ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಕಥೆಯಲ್ಲದ ಕಥೆ

ಅಕ್ಷರವೇ ಅನ್ನ

ನಾಗರಾಜನಾಯಕ ಡಿ ಡೊಳ್ಳಿನ

ನನ್ನ ಊರು ನವಿಲೂರು. ಈ ಊರು ಯಾವ ಜಿಲ್ಲೆ ಯಾವ ತಾಲ್ಲೂಕಿಗೆ ಸೇರಿದೆಎಂದು ನನಗೆ ಗೊತ್ತಿಲ್ಲ.ನವಿಲೂರಿನ ಬಗ್ಗೆ ಹೇಳಬೇಕೆಂದರೆ, ನಾನು ಅಲ್ಲಿ ಕಳೆದದ್ದು ಅಂದರೆ ವಾಸವಿದ್ದ ದಿನಗಳು ಕಡಿಮೆ. ಒಂದು ಮಾತ್ರ ಸ್ಪಷ್ಟವಾಗಿ ನೆನಪಿದೆ. ನವಿಲೂರಿನಲ್ಲಿ ಎತ್ತ ನೋಡಿದರು ನವಿಲುಗಳ ಸುಳಿವೇ ಇಲ್ಲ. ಎಕೆಂದರೆ ನಾವು ಚಿಕ್ಕವರಿದ್ದಾಗ ನವಿಲು ನೋಡುವ ಆಸೆಯನ್ನು ಹುಟ್ಟುಹಾಕಿದ್ದೇ ಈ ಹೆಸರು.
ನವಿಲೂರಿನಲ್ಲಿದದ್ದು ನಾನು ಹುಲಗಪ್ಪ ಅಪ್ಪ ಮಲಪ್ಪ ಅವ್ವ ಶಾಂತವ್ವ ಹಾಗೂ ಪ್ರೀತಿಯ ತಂಗಿ ಮಹಾದೇವಿ. ಇದು ನನ್ನ ಕುಟುಂಬ. ನಮ್ಮದೂ ಅಂತ ಆ ಊರಲ್ಲಿ ಹೇಳೊಕೆ ಎನು ಇರಲಿಲ್ಲ. ಇದದ್ದು ಪುಟ್ಟ ಗುಡಿಸಲು ಅಪ್ಪ ಹೇಳ್ತಿದ್ದ ಇದರಲ್ಲಿ ನಮ್ಮ ನಾಲ್ಕು ಜನ ಅಣ್ಣ ತಮ್ಮರ ಪಾಲು ಇದೆ. ಅಪ್ಪ ಅವ್ವ ಕಷ್ಟಪಟ್ಟು ದುಡಿದು ನಮ್ಮನ್ನು ಸಲಹುತ್ತಿದ್ದರು. ಮಧ್ಯಾಹ್ನ ಶಾಲೆಯಲ್ಲಿನ ಬಿಸಿಯೂಟವೇ ನಮಗೆ ಸಿಗುತ್ತಿದ್ದ ಭರ್ಜರಿ ಭೋಜನ. ಉಳಿದಂತೆ ಗಂಜಿ ನಮ್ಮ ಪಾಲಿನ ಅಮೃತವಾಗಿರುತ್ತಿತ್ತು. ಕಿತ್ತು ತಿನ್ನುವ ಬಡತನ ನಮ್ಮದಾಗಿತ್ತು. ಶಾಲೆಯಲ್ಲಿ ಉಟ ಕೊಡ್ತಿದ್ದರಿಂದ ಮತ್ತು ಸರ್ಕಾರಿ ಶಾಲೆಯಾಗಿರುವುದರಿಂದ ನನ್ನ ಶಾಲಾ ಜೀವನ ಮುಂದುವರೆದಿತ್ತು. ಹೀಗೆ ದಿನಗಳು ಕಳೆಯುತ್ತಿರುವಾಗ ಭೀಕರ ಬರಗಾಲ ಬಂದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಕೂಲಿ ಸಿಗುತ್ತಿರಲಿಲ್ಲ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನಮ್ಮ ಕೇರಿಯ ಜನರೆಲ್ಲಾ ಆಕಾಶದತ್ತ ಮುಖಮಾಡಿದರು. ನಾಳೆ ಹೇಗೆ ಎಂದು ಚಿಂತಿಸತೊಡಗಿದರು.

ಗ್ರಾಮ ದೇವತೆ ಹುಲಿಗೆಮ್ಮನಿಗೆ ಕುರಿ ಬಲಿಕೊಟ್ಟರು. ದೇವಿ ಮುನಿದಿದ್ದಾಳೆ ನಮ್ಮ ಕಷ್ಟ ಪರಿಹರಿಸು ಉರುಳು ಸೇವೆ ಮಾಡುತ್ತೇವೆ ಎಂದು ಪರಿಪರಿಯಾಗಿ ಬೇಡಿಕೊಂಡರು. ದಿನೇ ದಿನೇ ಕೆಲಸ ಹುಟ್ಟುವದು ಕಷ್ಟವಾಯಿತು. ಶೆಟ್ರು ಕಿರಾಣಿಯನ್ನು ಉದ್ರಿ ಕೊಡುವುದನ್ನು ನಿಲ್ಲಿಸಿದರು. ನಮಗೆ ಊರಲ್ಲಿ ಯಾರೂ ಸಾಲ ಕೊಡುತ್ತಿರಲಿಲ್ಲ. ಕೊಡುವಂಥ ಇಬ್ಬರು ಧಣಿಗಳು ಇದ್ದರು ಅವ್ರು ಹೊಲದಲ್ಲಿ ಬೆಳೆ ಇಲ್ಲಾ ಇನ್ನೆಲ್ಲಿ ರೊಕ್ಕ ಎಂದು ಸುಮ್ಮನಾದರು. ದಿನದಿಂದ ದಿನಕ್ಕೆ ನಮ್ಮ ಓಣಿ ಬಿಕೋ ಎನ್ನತೊಡಗಿತು. ಜನರೆಲ್ಲಾ ಬೆಂಗಳೂರು,ಗೋವಾ ಹಾಗೂ ಮಲೆನಾಡ ಕಡೆ ಕೆಲಸ ಹುಡುಕಿಕೊಂಡು ಹೊರಟರು. ನನ್ನ ಅಪ್ಪನು ನಮ್ಮನ್ನೆಲ್ಲಾ ಕರಕೊಂಡು ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಗೇ ಹೊರಟಿದ್ದು ಅಂತ ಸ್ವತ: ನಮ್ಮಪ್ಪನಿಗೆ ಗೊತ್ತಿರಲಿಲ್ಲ. ನಾವು ಹಾಗೆ ಬಂದು ನೆಲೆನಿಂತ ಜಾಗವೇ ಗಂಜೀಪುರ.
ಗಂಜೀಪುರ ನಮ್ಮ ಜೀವನಕ್ಕೆ ಅನ್ನಕೊಟ್ಟ ಊರು. ದಿಕ್ಕು ಗುರಿಗಳಿಲ್ಲದ ನಮ್ಮ ಜೀವನಕ್ಕೆ ದಿಕ್ಕು ತೋರಿದ ಊರು. ಹೀಗೆ ಬಂದ ನಾವು ಗ್ರಾಮ ದೇವತೆ ದ್ಯಾಮವ್ವದೇವಿಯ ಗುಡಿ ಹತ್ತಿರ ಟೆಂಟ್ ಹಾಕಿ ನೆಲೆಸಿದ್ದೆವು. ಊರಿನ ಜನರ ಬಳಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಕೂಲಿ ಕೆಲಸ ಪಡೆಯಲು ಅಪ್ಪ ಅವ್ವ ಶುರುಮಾಡಿದರು. ಮೊದಮೊದಲು ಅನುಮಾನದಿಂದ ನಮ್ಮನ್ನು ನೋಡಿದ ಊರಿನ ಜನ ದಿನಕಳೆದಂತೆ ಕೂಲಿ ನೀಡತೊಡಗಿದರು. ಅಪ್ಪ ಅವ್ವ ದುಡಿದು ಸಂಜೆ ಬರುತ್ತಿದ್ದರು. ನಾನು ಸಂಜೆಯವರೆಗೂ ತಂಗಿ ಮಹಾದೇವಿಯನ್ನು ನೋಡಿಕೊಂಡು ಟೆಂಟ್ ಬಳಿ ಇರಬೇಕಾಗಿತ್ತು. ಹೀಗೆ ದಿನಾಲು ಬೆಳಿಗ್ಗೆ ಶಾಲಾ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದರು. ಇದನ್ನು ನೋಡಿ ನನಗೆ ನನ್ನೂರಿನ ಶಾಲೆ, ಗೆಳೆಯರು, ಶಿಕ್ಷಕರು ನೆನಪಾಗುತ್ತಿತ್ತು. ಒಂದಿನ ಮುಂಜಾನೆ ಶಾಲೆಯ ಕಪೌಂಡಗೆ ನಿಂತು ನೋಡುತ್ತಿದ್ದೆ, ಪ್ರಾರ್ಥನೆ ಮುಗಿಸಿ ಕೊಠಡಿಗೆ ಹೋಗಿ ವಿದ್ಯಾರ್ಥಿಗಳು ಆಸೀನರಾದರು. ಮಕ್ಕಳು ಆಸೀನರಾದ ಸ್ವಲ್ಪ ಹೊತ್ತಿಗೆ ಶಿಕ್ಷಕರು ಕೊಠಡಿ ಪ್ರವೇಶಿಸಿ ಪಾಠಮಾಡಹತ್ತಿದರು.
ನಾನು ಶಾಲಾ ಮೈದಾನ ಪ್ರವೇಶಿಸಿದೆ ಮೈದಾನದ ಸುತ್ತಲೂ ತಂತಿ ಬೇಲಿ, ಬೇಲಿಗೆ ಹೊಂದಿಕೊಂಡು ಬಳ್ಳಿ ಬೆಳೆದಿತ್ತು. ಎಂಟು ಕೊಠಡಿಗಳನ್ನು ಹೊಂದಿದ್ದ ಆ ಶಾಲೆಯ ಮೈದಾನ ದೊಡ್ಡದಾಗಿರಲಿಲ್ಲ. ತಲಾ ನಾಲ್ಕು ಕೊಠಡಿಗಳನ್ನು ಎದರು ಬದರು ಕಟ್ಟಿಸಿದ್ದರು. ನಡುವಿನ ಜಾಗವೇ ಮಕ್ಕಳ ಪ್ರಾರ್ಥನೆ ಮತ್ತು ಆಟಕ್ಕೆ ಮೀಸಲು. ಶಾಲಾ ಕೊಠಡಿಗಳನ್ನು ಗಮನಿಸುತ್ತಿರುವಾಗ ನಾಲ್ಕನೇ ತರಗತಿ ಎಂದು ಬರೆದಿದ್ದ ಕೊಠಡಿಯತ್ತ ನೋಡಿದೆ. ತಂಗಿಯನ್ನು ಅಲ್ಲೆ ಧ್ವಜದ ಕಟ್ಟೆ ಹತ್ತಿರ ಆಡಲು ಬಿಟ್ಟು ನಾನು ನಾಲ್ಕನೇ ತರಗತಿಗೆ ಕೊಠಡಿ ಬಳಿಬಂದೆ. ಬಂದವನು ಕಿಟಕಿ ಬಳಿ ಕುಳಿತು ಒಳಗಡೆ ಪಾಠದತ್ತ ಕಿವಿಗೊಟ್ಟೆ. ಗುರುಗಳು ಒಳಗಡೆ ಸಕ್ಕರೆ ನಾಗಣ್ಣ ಪಾಠಮಾಡುತ್ತಿದ್ದರು. ಪಾಠ ಕೇಳುತ್ತಿದ್ದ ನನಗೆ ಶಾಲೆಯ ಮಧ್ಯಾಹ್ನದ ಊಟದ ಬೆಲ್ ಬಾರಿಸಿದಾಗ ಎಲ್ಲರೂ ಹೊರಗಡೆ ಬರತೊಡಗಿದರು. ಆಗ ನಾನು ತಂಗಿಯನ್ನು ಕರೆದುಕೊಂಡು ಮೈದಾನದಿಂದ ಹೊರನಡೆದೆ. ಅಂದು ನಾನು ಸಂಜೆಯವರೆಗೂ ಶಾಲೆಯ ಗುಂಗಿನಲ್ಲಿ ಇದ್ದೆ.
ಸಂಜೆ ಅಪ್ಪ ಬಂದು ಕುಳಿತಾಗ ಅಪ್ಪನ ಬಳಿ ಹೋಗಿ ಅಪ್ಪಾ ನಾನು ಶಾಲೆಗೆ ಹೋಗಲ್ಯಾ ಅಂತ ಕೇಳಿದೆ. ಅಪ್ಪ ಬೇಡ ನೀನು ಶಾಲೆಗೆ ಹೋದ್ರೆ ಮಹಾದೇವಿನಾ ನೋಡ್ಕೊಳ್ಳೊರು ಯಾರು ?. ಅಪ್ಪನ ಪ್ರಶ್ನೆಗೆ ನಾನು ತಂಗಿನೂ ಶಾಲೆಗೆ ಕಳಿಸು ಅವಳು ಒಂದನೇ ಇಯತ್ತೆಗೆ ಹೋಗಲಿ. ನಾವಿಬ್ರು ಕೂಡಿ ಶಾಲೆಗೆ ಹೋಗ್ತಿವಿ ಎಂದೆ. ನನ್ನ ಮಾತಿಂದ ಸಿಟ್ಟಿಗೆದ್ದ ಅಪ್ಪ ನಡಿಲೇ ಸಾಲಿನೂ ಬೇಡ ಏನು ಬೇಡ ಎಂದು ಬೈದ. ನಾನು ಸೀದಾ ಅವ್ವನ ಬಳಿ ಬಂದು ಅವ್ವಾ ನಾ ಶಾಲಿಗೆ ಹೊಕ್ಕೇನ್ ಬೇ ಅಂದೆ. ಅದಕ್ಕೆ ಅವ್ವಾ ಮಗನ ನಾವು ದುಡ್ಯಾಕ ಬಂದೋರು ಇವತ್ತು ಈ ಊರಾದ್ರೆ ನಾಳೆ ಇನ್ನೊಂದೂರು ನಮಗ್ಯಾಕ ಸಾಲಿ ಬೇಕು ಹೇಳು. ಮುಂದೆ ದೇವ್ರು ಕಣ್ಣಬಿಟ್ರೆ ನಮ್ಮೂರಿಗೆ ಹೋದವೆಂದರ ಆವಾಗ ಸಾಲಿಗೆ ಹೋಗುವಂತೆ ಎಂದು ಸಂತೈಸುವ ಮಾತನ್ನಾಡಿದಳು. ಕೋಪಗೊಂಡ ನಾನು ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಾ ಕುಳಿತ ನನಗೆ ನಿದ್ದೆ ಬಂದದ್ದು ಗೊತ್ತಾಗಿರಲಿಲ್ಲ. ಬೆಳಿಗ್ಗೆ ಎದ್ದು ಕುಳಿತ ನನಗೆ ಅವ್ವಾ ಎಳ ರಾತ್ರಿನೂ ಏನೂ ತಿಂದಿಲ್ಲಾ ಈಗರ ಎರಡು ರೊಟ್ಟಿನಾರ ತಿನ್ನು. ಅವ್ವನ ಮಾತಿಗೆ ಏನೂ ಮಾತನಾಡದೇ ಸುಮ್ಮನೆ ಕುಳಿತೆ. ಅಪ್ಪ-ಅವ್ವ ಕೂಲಿಗೆ ಹೋಗಿದ್ದೆ ತಡ ನಾನು ಹಸಿವಿನಿಂದ ಮನೆಯಲ್ಲಿದ್ದ ತಂಗಳ ರೊಟ್ಟಿ ತಿಂದು ಮುಗಿಸಿದ್ದೆ. ಶಾಲೆಗೆ ಕಳುಹಿಸುವುದಿಲ್ಲಾ ಎನ್ನುವ ಕೋಪಕ್ಕೆ ಹೀಗೆ ಮಾಡಿದ್ದೆ.
ಮಧ್ಯಾಹ್ನವಾಗಿತ್ತು ನಾನು ತಂಗಿಯನ್ನು ಕರೆದುಕೊಂಡು ಶಾಲೆಗೆ ಬಂದೆ. ತಂಗಿಯನ್ನು ಮೈದಾನದಲ್ಲಿ ಆಡಲು ಬಿಟ್ಟು .ನಾನು ನಾಲ್ಕನೇ ತರಗತಿಯ ಬಳಿಬಂದು ಪಾಠ ಕೇಳುತ್ತಾ ಕುಳಿತೆ. ತಂಗಿ ಇಂದು ಜೋರಾಗಿ ಅಣ್ಣಾ ಬಾ ಇಲ್ಲಿ ಮಣ್ಣಿನ್ಯಾಗ ಆಡೋಣ ಎಂದು ಜೋರಾಗಿ ಕೂಗಿದಳು. ಇವಳ ಕೂಗು ಪಾಠಮಾಡುತ್ತಿದ್ದ ಶಿಕ್ಷಕರಿಗೆ ಕೋಪ ತರಿಸಿತು. ಗುರುಗಳು ಬಾಗಿಲ ಬಳಿಬಂದು ಏ ಯಾರ್ ನೀವು ಇಲ್ಲೇನ್ ಗಲಾಟಿ ಮಾಡಕಹತ್ತೀರಿ ಎಂದು ಬೈದರು. ನಾನು ಹೆದರುತ್ತ ಸರ್ ನಾನು ಹುಲಗಪ್ಪ ಕಿಟಕಿಹತ್ರ ಕುಳಿತು ನಿಮ್ಮ ಪಾಠ ಕೇಳುತ್ತಿದ್ದೆ. ನನ್ನ ತಂಗಿ ಬಾಯಿ ಮಾಡಿದ್ಲು ಸರ್. ಗುರುಗಳು ಒಂದು ಕ್ಷಣ ನನ್ನ ನೋಡಿ. ಬರ್ರಿ ನನ್ನೊಂದಿಗೆ ಎಂದು ಮುಖ್ಯ ಶಿಕ್ಷಕರ ಕೊಠಡಿಯತ್ತ ನಡೆದರು. ಕೊಠಡಿಯಲ್ಲಿ ಪ್ರವೇಶಿಸಿ ನಿಮ್ಮದು ಯಾವ ಊರು ? ನಾನು ನಮ್ಮದು ನವಿಲೂರು ಸರ್. ನೀನು ಅಲ್ಲಿ ಶಾಲೆಗೆ ಹೋಗ್ತಿದ್ಯಾ ? ಹೂ ಸರ್ ನಾನು ಶಾಲೆಗೆ ಹೋಗ್ತಿದ್ದೆ. ಈವಾಗ ನಾಲ್ಕನೇ ತರಗತಿ ಪ್ರಾರಂಭವಾಯ್ತು, ಹಾಳದ್ದು ನಮ್ಮೂರಲ್ಲಿ ಬರಗಾಲ ಬಂತು ಸರ್. ದುಡಿಮೆ ಹುಡುಕಿಕೊಂಡು ಈ ಊರಿಗೆ ಬಂದ್ವಿ ಸರ್. ಇಲ್ಲೇ ದ್ಯಾಮವ್ವನ ಗುಡಿ ಹತ್ತಿರ ಟೆಂಟ್ ಹಾಕ್ಕೊಂಡು ಅದೇವ್ರಿ ಸರ್ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದೆ. ಗುರುಗಳು ನನ್ನ ನೋಡಿ ನಿನಗೆ ಶಾಲೆ ಅಂದ್ರೆ ಇಷ್ಟಾನಾ ಎಂದು ಕೇಳಿದರು. ಹೌದು ಸರ್ ನಾನು ಶಾಲಿಗೆ ಹೋಗ್ತಿನಿ ಕಳಿಸು ಅಂತ ನಿನ್ನೆ ರಾತ್ರಿ ನಮ್ಮಪ್ಪನ ಹತ್ತಿರ ಕೇಳಿದೆ. ನಿಮ್ಮಪ್ಪ ಏನಂದ್ರು ಎಂದು ಸರ್ ಕೇಳಿದರು ? ಏನಿಲ್ಲಾ ಸರ್ ಶಾಲೆ ಬೇಡ ಏನುಬೇಡ ಎಂದು ಬೈದು ಸುಮ್ಮನಾದರು. ಎಂದು ನಿರಾಶೆ ವ್ಯಕ್ತಪಡಿಸಿದೆ.

ನೀನು ಈ ಹಿಂದೆ ಶಾಲೇಲಿ ಕಲಿತ 3ನೇ ತರಗತಿಯ ಪದ್ಯಹೇಳು ಅಂದ್ರು. ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣಘನ ತೀರಿಸುವೆನೂ ಅದರ ಋಣ ಈ ಒಂದೇ ಜನ್ಮದಿ ಹಾಡನ್ನು ಹಾಡಿ ಮುಗಿಸಿದ್ದೆ. ಗುರುಗಳು ಈ ಹಾಡನ್ನು ಬರೆದವರು ಯಾರು ಅಂತ ಕೇಳಿದರು. ಸರ್ ಕವಿ ಚನ್ನವೀರ ಕಣವಿಯವರು. ಗುರುಗಳು ಖುಷಿಯಿಂದ ನಾಳೆಯಿಂದ ನೀನು ಕಿಟಕಿ ಬಳಿ ಕುತ್ಕೊಬೇಡ ಕೊಠಡಿ ಒಳಗಡೇ ಬಂದು ಕುಳಿತುಕೊ. ನಿಮ್ಮ ತಂಗಿನಾ ಒಂದನೇ ತರಗತಿಯಲ್ಲಿ ಕೂಡಿಸು. ಸರ್ ನನ್ನ ಬಳಿ ಪೆನ್ನು ಕಾಪಿ ಇಲ್ಲಸಾರ್. ಮೊದ್ಲು ಶಾಲೆಗೆ ಬಂದು ಕೂಡಪ್ಪಾ ಅಂತ ನಮ್ಮನ್ನು ಕಳುಹಿಸಿದರು. ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ನಾನು ಬೆಳಗಾದೊಡನೆ ಹಲ್ಲುಜ್ಜಿ, ಮುಖತೊಳೆದೆ. ಅಪ್ಪ,ಅವ್ವ ದುಡಿಮೆಗೆ ಹೊರಟೊಡನೆ ತಂಗಿಯೊಂದಿಗೆ ಶಾಲೆಗೆ ಹೊರಟೆ. ಅಪ್ಪನಿಗೆ ಗೊತ್ತಾದ್ರೆ ಕಳುಹಿಸಲ್ಲ ಅಂತ ಹೀಗೆ ಮಾಡಿದ್ದೆ. ತಂಗಿಗೂ ಶಾಲೆಯಲ್ಲಿ ಆಡಲು ಗೆಳೆಯರು ಸಿಗುತ್ತಾರೆ ಮತ್ತು ಮಧ್ಯಾಹ್ನ ಬಿಸಿಯೂಟ ಕೊಡ್ತಾರೆ ನೀನು ಹಠಮಾಡದೆ ಶಾಲೆಗೆ ಬರಬೇಕು ಅಂತ ಹೇಳಿದ್ದೆ. ಮೊದಮೊದಲು ಹಠಮಾಡಿದರೂ ಸಹ ನಂತರ ಹೊಂದಿಕೊಂಡಳು. ನಾನು ನಾಲ್ಕನೇ ತರಗತಿಯಲ್ಲಿ ಗೆಳೆಯರನ್ನು ಸಂಪಾದಿಸಿದೆ. ದಿನಾಲು ನನ್ನ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಮಾಸ್ತರು ನನಗೆ ನೋಟಬುಕ್,ಪೆನ್ನು ಕೊಟ್ಟಿದ್ರು. ಗುರುಗಳು ನಾಲ್ಕನೇ ತರಗತಿಗೆ ಕಿರುಪರೀಕ್ಷೆ ಇರಿಸಿದ್ದರು.
ಪರೀಕ್ಷೆ ಬರೆದು ಒಂದು ವಾರದ ನಂತರ ನನ್ನ ಕರೆದು ನೀನು ನಾಳೆ ನಿಮ್ಮಪ್ಪನನ್ನು ಶಾಲೆಗೆ ಕರೆದುಕೊಂಡು ಬಾ ಅಂತ ಹೇಳಿದರು. ನಾನು ಯಾಕೆ ಸಾರ್ ಅಂದಿದ್ದಕ್ಕೆ ಹೇಳಿದಷ್ಟು ಮಾಡು ಎಂದು ಹೊರನಡೆದರು. ನನಗೆ ಇಷ್ಟುದಿನ ಅಪ್ಪನಿಗೆ ತಿಳಿಸಿರಲಿಲ್ಲ ಈವಾಗ ಹೇಳಿದ್ರೆ ಏನ್ಮಾಡ್ತಾರೋ ಅನ್ನೋ ಹೆದರಿಕೆಯಿಂದ ಮನೆ ಸೇರಿದೆ. ರಾತ್ರಿ ಅಪ್ಪನಿಗೆ ಹೆದರುತ್ತ ಅಪ್ಪ ನಾಳೆ ನೀನು ಶಾಲೆಗೆ ಬರಬೇಕಂತೆ ಮಾಸ್ತರು ಹೇಳಿ ಕಳಸಿದ್ದಾರೆ ಅಂದದ್ದೇತಡ. ಅಪ್ಪ ಯಾಕಲೇ ನೀನು ಶಾಲಿ ಹುಡುಗ್ರು ಕೂಡ ಗುದ್ಯಾಡಿದ್ಯಾ ಏನ್ಮಾಡಿದ್ಯಲೇ ಅಂತ ಹೇಳುತ್ತ ಒಂದೇಟು ಹಾಕಿದ. ಇಲ್ಲ ಎಪ್ಪಾ ಎಂದು ನೆಡೆದಿದ್ದೆಲ್ಲಾ ಹೇಳಿದೆ. ಅಪ್ಪನ ಮುಖದಲ್ಲಿ ಸಿಟ್ಟು ಕಡಿಮೆಯಾಗಿರಲಿಲ್ಲ. ಮತ್ತೆ ಸಿಟ್ಟಿನಿಂದ ಹೊಡೆಯಲು ಬಂದ ಅವ್ವ ಬಿಡಿಸಿ ನಾವು ಬ್ಯಾಡ ಅಂತ ಹೇಳಿದ್ರು ಯಾಕ ಸಾಲಿಗೆ ಹೋದೆ ಎಂದು ಬೈದಳು. ರಾತ್ರಿಯಲ್ಲಾ ಹೀಗೆ ಮಾತಿನ ಚಕಮಕಿ ನಡೆದಿತ್ತು. ಕಳವಳದೊಂದಿಗೆ ಮಲಗಿದ ನಾನು ನಾಳೆ ಹೇಗೋ ಏನೋ ಎಂದು ಯೋಚಿಸುತ್ತಾ ಮಲಗಿದೆ.
ಬೆಳಿಗ್ಗೆ ಎದ್ದೆ ನಿನ್ನೆ ರಾತ್ರಿಯ ಸಿಟ್ಟು ಕಡಿಮೆಯಾಗಿತ್ತು, ಆದರೂ ಒಮ್ಮೊಮ್ಮೆ ಅಪ್ಪ ಬೈಯುತ್ತಿದ್ದ. ಶಾಲೆಯ ಸಮಯವಾಗುತ್ತಿದ್ದಂತೆ ಅಪ್ಪ ನನ್ನನ್ನು ತಂಗಿಯೊಂದಿಗೆ ಕರೆದುಕೊಂಡು ಶಾಲೆಯ ಕಡೆ ನಡೆದ. ನಾವು ಹೋಗುವುದರೊಳಗೆ ಪ್ರಾರ್ಥನೆ ಮುಗಿದಿತ್ತು. ನಾನು ನೇರವಾಗಿ ಕೊಠಡಿಗೆ ಹೋದೆ. ಮಾಸ್ತರು ಯಾಕೋ ಲೇಟು ಪ್ರೇಯರ್ಗೆ ಬಂದಿರಲಿಲ್ಲ ಎಂದು ಕೇಳಿದರು. ಸರ್ ನಮ್ಮಪ್ಪನ್ನ ಕರಕೊಂಡು ಬಂದೀನಿ ಎಂದು ಹೇಳಿದೆ. ಕೊಠಡಿಯಲ್ಲಿರುವ ಮಕ್ಕಳಿಗೆ ಮಗ್ಗಿ ಬಾಯಿಪಾಠ ಮಾಡುವಂತೆ ಹೇಳಿ, ನಮ್ಮನ್ನು ಮುಖ್ಯ ಶಿಕ್ಷಕರ ಕೊಠಡಿಯತ್ತ ಕರ್ಕೊಂಡು ನಡೆದರು. ಕೊಠಡಿಗೆ ಬಂದ ಮಾಸ್ತರು ನಮ್ಮಪ್ಪನಿಗೆ ನಿಮ್ಮ ಮಗಾ ತುಂಬಾ ಶ್ಯಾಣೆ ಅದಾನ ಅವನನ್ನು ಶಾಲೆಗೆ ಕಳುಹಿಸಿರಿ ಅಂದರು. ಇಲ್ಲ ಬುದ್ಧಿ ನಾವು ದುಡಿಮೆ ಹುಡುಕುತ್ತಾ ಹೋಗುವ ಜನ , ಇವತ್ತ ಇಲ್ಲೆ ನಾಳೆ ಎಲ್ಲಿರ್ತೀವೊ ಎಂದ ಅಪ್ಪ. ಆಗ ಮಾಸ್ತರು ಈಗ ಎಲ್ಲಾ ಕಡೆ ಶಾಲೆಗಳಿವೆ ನೀವು ಎಲ್ಲಿಗೆ ಹೋದರೂ ಶಾಲೆಗೆ ಕಳಿಸಬಹುದು ಎಂದರು. ಬೇಡ ಬುದ್ಧಿ ಇವನು ಶಾಲೆಗೆ ಹೋಗಿ ಏನಾಗ್ಬೇಕು. ಇನ್ನೊಂದೆರಡು ವರ್ಷಬಿಟ್ಟು ನನ್ಜೊತೆ ದುಡ್ಯಾಕ್ ಕರ್ಕೊಂಡು ಹೋಗ್ತಿನಿ. ನನಗೂ ಆಸರ ಆಗ್ತಾನ ಅಂತ ಅಪ್ಪ ಹೇಳಿದ.
ಅದಕ್ಕೆ ಮಾಸ್ತರು ಈ ಹುಡುಗನ್ನ ಕೂಲಿಗೆ ಕರ್ಕೊಂಡು ಹೋಗ್ತಿಯಾ?. ಯಾಕ ಅವನು ನಿಮ್ಮಂಗ ಬದುಕಿನುದ್ದಕ್ಕೂ ಕೂಲಿ ಮಾಡಿಯೇ ಬದುಕಬೇಕಾ. ಅವನಿಗೆ ಅಕ್ಷರವೇ ಅನ್ನವಾಗಲಿ. ವಿದ್ಯಾರ್ಥಿ ವೇತನವೂ ಸಿಗಲಿದೆ. ಅವನು ಓದಿ ನೌಕರಿ ಸೇರಿದ್ರೆ ನಿಮಗ ಅನುಕೂಲ. ಹೀಗೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಮಾಸ್ತರು ಅಪ್ಪನಿಗೆ ಪ್ರಶ್ನೆ ಕೇಳಿದರು. ನಮ್ಮ ಮನೆಯ ಹೆಸರು, ಯಾವ ಊರು ಎಂದು ಕೇಳುತ್ತಾ. ಅಪ್ಪ ಹೇಳಿದ್ದನ್ನು ಒಂದೆಡೆ ದಾಖಲಿಸಿಕೊಳ್ಳುತ್ತಾ, ಅಲ್ಮೇರಾ{ಕಪಾಟು}ದಲ್ಲಿದ್ದ ಮಕ್ಕಳಿಗೆ ಕೊಡುವ ಸಮವಸ್ತ್ರ ತೆಗೆದುಕೊಡುತ್ತಾ ಇಬ್ಬರನ್ನೂ ಶಾಲೆಗೆ ಕಳುಹಿಸಿ ಚೆನ್ನಾಗಿ ಓದಿಸಿ ಎಂದು ಅಪ್ಪನಿಗೆ ತಿಳಿಸಿದರು. ತಮ್ಮ ದಾಖಲಾತಿ ಪುಸ್ತಕದಲ್ಲಿ ತಂಗಿಯ ಹೆಸರನ್ನು ದಾಖಲಿಸಿಕೊಳ್ಳುತ್ತಾ ಇವನು ಓದಿದ ಶಾಲೆಯಿಂದ ವಗರ್ಾವಣೆ ಪತ್ರ ತಂದಿರುವಿರಾ ಎಂದರು. ಅಪ್ಪ ಹಂಗಂದ್ರ ಏನ್ರೀ ಎಂದು ಕೇಳಿದ. ಇವನನ್ನು ಶಾಲೆಗೆ ಕಳುಹಿಸಿದ್ದಕ್ಕೆ ನಿಮ್ಮ ಬಳಿ ದಾಖಲೆಗಳೇನಾದ್ರು ಅದಾವನ. ಅದೇನರಿ ನನಗೆ ಗೊತ್ತಾಗುವುದಿಲ್ಲ ಬುದ್ಧಿ ಎಂದು ಅಪ್ಪ ಅನ್ನುತ್ತಿರುವಾಗ, ನಾನು ಸರ್ ಮೂರನೇ ಇಯತ್ತ ಅಂಕಪಟ್ಟಿ ಐತಿ ಸರ್ ಎಂದೆ. ಸರಿ ನಾಳೆ ಬರುವಾಗ ಅದನ್ನು ತೆಗೆದುಕೊಂಡು ಬಾ ಅಂದ್ರು ಮಾಸ್ತರು.

ನಾನು ಮರುದಿನ ಶಾಲೆಗೆ ಹೋಗಿ ಗುರುಗಳಿಗೆ ತಲುಪಿಸಿದೆ. ಗುರುಗಳು ನನ್ನ ಕಡೆ ನೋಡುತ್ತಾ ನೋಡು ಹುಲಗಪ್ಪಾ ನಿನ್ನ ಬಳಿ ಯಾವ ದಾಖಲೆಗಳು ಇಲ್ಲ. ನಿನ್ನ ತಂಗಿಗೆ ಹೊಸ ಅಡ್ಮಿಶನ್ ಆಗಿರೋದ್ರಿಂದ ಆಯಿತು. ನಿಂದು ಹಳೆಯ ಶಾಲೆಯ ವರ್ಗಾವಣೆ ಪತ್ರಬೇಕು. ಆದರೆ ಅದು ನಿನ್ನ ಬಳಿ ಇಲ್ಲ. ನಿನ್ನ ಅಂಕಪಟ್ಟಿಯಲ್ಲಿರುವ ಹಳೆಯ ಶಾಲಾ ವಿಳಾಸಕ್ಕೆ ಪತ್ರ ಬರೆಯುತ್ತೇನೆ. ಅವರೇನಾದ್ರು ಉತ್ತರಿಸಿದ್ರೆ ನಿನ್ನ ಶಾಲಾ ಜೀವನಕ್ಕೆ ತೊಂದರೆ ಆಗುವುದಿಲ್ಲ. ಪತ್ರ ಬರೆದು ಈ ಪತ್ರವನ್ನು ನಿನ್ನ ಶಾಲಾ ವಿಳಾಸಕ್ಕೆ ಕಳಿಸುತ್ತೇನೆ ಎಂದು ಹೊರನಡೆದರು. ನಾನು ಅಂದಿನಿಂದ ಶಾಲೆಗೆ ತಂಗಿಯೊಂದಿಗೆ ಹೊರಟೆ. ಹೀಗೆ ನಮ್ಮ ಶಾಲಾ ಜೀವನ ನಡೆದಿತ್ತು. ನಾಲ್ಕನೇ ತರಗತಿಯ ವಾರ್ಷಿಕ ಪರೀಕ್ಷೆ ಬಂತು ಪರೀಕ್ಷೆ ಬರೆಯುವ ವೇಳೆಗಾಗಲೇ ನಾನೂ ಓದಿದ ಹಳೆಯ ಶಾಲೆಯ ಶಿಕ್ಷಕರು ನಮ್ಮ ಮಾಸ್ತರು ಹಾಕಿದ ಪತ್ರಕ್ಕೆ ಉತ್ತರಿಸಿದರು. ನನ್ನನ್ನು ನಾಲ್ಕನೇ ತರಗತಿ ಉತ್ತೀರ್ಣ ಎಂದು ದಾಖಲಿಸಿ, ಐದನೇ ತರಗತಿಯ ಪ್ರವೇಶಕ್ಕಾಗಿ ವರ್ಗಾವಣೆ ಪತ್ರ ಕಳುಹಿಸಿದ್ದರು. ಮಾಸ್ತರು ನನ್ನ ಕರೆದು ನೋಡು ನಿನ್ನ ವರ್ಗಾವಣೆ ಪತ್ರ ಬಂದಿದೆ. ನೀನು ಇನ್ಮುಂದೆ ನಮ್ಮ ಶಾಲೆಯ ಹುಡುಗ. ಎಂದು ಹೇಳುತ್ತಿದ್ದಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಮುಂದೆ ಗುರುಗಳ ಮಾರ್ಗದರ್ಶನದಿಂದ ಓದಿ ಪ್ರಾಥಮಿಕ ಶಿಕ್ಷಣ ಮುಗಿಸಿ ಅದೇ ಊರಿನ ಪ್ರೌಢ ಶಿಕ್ಷಣ ಪಡೆದೆ. ಅಲ್ಲಿ ನಾನು ಉತ್ಸಾಹದಿಂದ ಓದಿ ಹತ್ತನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದೆ.
ಹತ್ತನೇ ತರಗತಿಯ ನಂತರ ಗಂಜೀಪುರದಲ್ಲಿ ಓದಲು ಕಾಲೇಜುಗಳೀರಲಿಲ್ಲ. ದುಡಿಯಲು ಬಂದ ನಮಗೆ ಶಿಕ್ಷಣ ಕೊಟ್ಟ ಊರು ಅದಾಗಿತ್ತು. ಮುಂದೆ ಪಿ.ಯು.ಸಿ ಶಿಕ್ಷಣವನ್ನು ಪಡೆಯುವ ಹೊತ್ತಿಗೆ ನಮ್ಮ ತಂದೆಯವರು ಗೆಳೆಯರೊಂದಿಗೆ ಸೇರಿ ಕೊಪ್ಪಳದಲ್ಲಿ ನೆಲೆಯೂರಲು ನಿರ್ಧರಿಸಿದ್ದರು. ಕೊಪ್ಪಳದ ಸುತ್ತಮುತ್ತ ಕೈಗಾರಿಕೆಗಳು ಭಾಗ್ಯನಗರದ ಕೂದಲು ಉದ್ದಿಮೆಯ,ನೇಕಾರಿಕೆಯಲ್ಲಿ ದುಡಿಮೆ ಸಿಗುವುದೆಂದು ಇಲ್ಲಿಗೆ ಬಂದು ನೆಲೆಸಿದರು. ಭಾಗ್ಯನಗರದಲ್ಲಿ ಪಿ.ಯು.ಸಿ ಶಿಕ್ಷಣ ಪಡೆದನಾನು ಮುಂದೆ ಡಿ.ಇಡಿ ಯನ್ನು ಕೊಪ್ಪಳದಲ್ಲಿ ಮಾಡಿ ಮುಗಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ, ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ, ದೂರ ಶಿಕ್ಷಣದಿಂದ ಪದವೀಧರನಾದೆ. ನಂತರದಲ್ಲಿ ಕ.ರಾ.ಮು.ವಿ ಯಿಂದ ಬಿ.ಇಡಿ ಪದವಿ ಪಡೆದೆ. ನನ್ನ ಸೇವೆಗೆ ಅನ್ಯಾಯವೆಸಗದೆ ದುಡಿದು ಮಕ್ಕಳ ಕಲಿಕೆಯಲ್ಲಿರುವ ಸಂತೋಷವನ್ನು ಅನುಭವಿಸಿದೆ. ಪ್ರಾಥಮಿಕ ಶಾಲೆಯ 18{ಹದಿನೆಂಟು} ವರ್ಷಗಳ ಸೇವೆಯ ನಂತರ ಇದೀಗ ಮುಂಬಡ್ತಿಯಾಗಿ ಪ್ರೌಢಶಾಲಾ ಶಿಕ್ಷಕನಾಗಿದ್ದೇನೆ. ಈ ಕಳೆದ ಹದಿನೆಂಟು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆಯಾಯಿತು ಇಬ್ಬರು ಮಕ್ಕಳು ಸಂಸಾರ ಸೇರಿದ್ದಾರೆ. ಅಪ್ಪ, ಅವ್ವ ನ ಕೂದಲು ಬೆಳ್ಳಗಾಗಿದೆ. ಅವ್ವನ ಮುಖ ಬಾಡಿದೆ. ಇನ್ನು ತಂಗಿ ಮಹಾದೇವಿ ಬಿ.ಎಸ್ಸಿ ನರ್ಸಿಂಗ್ ಮುಗಿಸಿ ವೈದ್ಯಕೀಯ ಸಂಸ್ಥೆಯಲ್ಲಿ ಸೇವೆಯಲ್ಲಿದ್ದಾಳೆ. ಆಕೆಯ ಪತಿ ಮಾವ ರಮೇಶ ಕಾಲೇಜು ಉಪನ್ಯಾಸಕ ಹೀಗೆ ಇದು ನನ್ನ ಕೂಡು ಕುಟುಂಬ.
ಇಂದು ನಮ್ಮ ನಗುವಿಗೆ ಕಾರಣ ಅಂದು ಮಾನವೀಯತೆಯಿಂದ ಗುರುತಿಸಿ. ಈ ಬಡ ವಿದ್ಯಾರ್ಥಿಗೆ ಶಿಕ್ಷಣ ನೀಡಿ ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಮಾಸ್ತರು. ಅಕ್ಷರವೇ ಅನ್ನ ವೆಂದು ನುಡಿದು ನನ್ನ ಬಾಳಿಗೆ ಆಸರೆಯಾದ ಮಾಸ್ತರು. ನನ್ನ ಗುರು ಪ್ರೀತಿಯ ಅಶೋಕ ಗುರುಗಳಿಗು ಹಾಗೂ ಅಶೋಕ ಮಾಸ್ತರು ಹಾಕಿದ ಪತ್ರಕ್ಕೆ ಉತ್ತರ ಕೊಟ್ಟ ನನ್ನ ನವಿಲೂರಿನ ಶಾಲೆಯ ಶಿಕ್ಷಕರಿಗೂ ನಾನು ಋಣಿ. ಅಕ್ಷರವೇ ಅನ್ನವೆಂದು ತೊರಿಸಿಕೊಟ್ಟ ಗುರುಗಳಾದ ಅಶೋಕ ಸರ್ನ ಭೇಟಿಮಾಡಬೇಕೆಂಬುದು ನನ್ನ ಆಸೆ. ಗುರುಗಳು ಈಗ ನಿವೃತ್ತಿಯಾಗಿದ್ದಾರೆ. ನಿವೃತ್ತಿಯ ಜೀವನವನ್ನು ಧಾರವಾಡ ದಲ್ಲಿ ಕಳೆಯುತ್ತಿದ್ದಾರೆ. ಅಂತಹ ಮಾಸ್ತರು ನೂರ್ಕಾಲ ಬಾಳಲಿ ನನ್ನಂತ ನೂರಾರು ಮಾರ್ಗದರ್ಶನವಿಲ್ಲದ ಮಕ್ಕಳ ಜೀವನಕ್ಕೆ ದಾರಿಯಾಗಲಿ. ಅವರು ತೋರಿದ ಮಾನವೀಯತೆಗೆ ಇಂದು ನಾನಿಲ್ಲಿದ್ದೇನೆ. ನಾನು ನನ್ನ ಸೇವೆಯನ್ನು ಉಳಿದವರಿಗೆ ದಾರಿದೀಪವಾಗುವಂತೆ ಸೇವೆ ಸಲ್ಲಿಸುವುದು ನನ್ನ ಗುರಿ. ನನ್ನ ಜೀವನ ಮಾಸ್ತರು ಕಟ್ಟಿಕೊಟ್ಟ ಬುತ್ತಿ. ಯಾಕಂದ್ರೆ ಅಂದು ಮೇಷ್ಟ್ರು ನನ್ನನ್ನು ಕಾಳಜಿಯಿಂದ ಮಾತಾಡಿಸಿ ಹಳೆಯ ಶಾಲೆಗೆ ಪತ್ರ ಬರೆಯದಿದ್ದರೆ ನಾನಿಂದು ಕೂಲಿಯವನಾಗಿರತ್ತಿದ್ದೆ. ಮಾಸ್ತರು ತೋರಿದ ದಾರಿ, ನನ್ನ ಬಾಳ ಪಥದ ದಿಕ್ಕನ್ನೇ ಬದಲಿಸಿತು. ಅಕ್ಷರವೇ ಅನ್ನ ಕೊಡುತ್ತಿದೆ.
 

‍ಲೇಖಕರು G

19 May, 2015

4 Comments

  1. umavallish

    ಓದಿನಲ್ಲಿ ಆಸಕ್ತಿ ಇರುವಂತಹ ನಿಮ್ಮಂತವರು, ನಿಮ್ಮ ಹಾಗೂ ನಿಮ್ಮತಂಗಿಯ ಓದಿಗೆ ಪ್ರೋತ್ಸಾಹ,ನೀಡಿ ಸಹಾಯ ಹಸ್ತ ನೀಡಿದಂತಹ ಗುರುಗಳು, ಎರಡೂ, ಮೆಚ್ಚುವಂತಹ ವಿಷಯ.

    • ನಾಗರಾಜನಾಯಕ ಡಿ ಡೊಳ್ಳಿನ

      ಇದು ನನ್ನ ಮಿತ್ರ ಶರಣಪ್ಪನ ಜೀವನದಲ್ಲಿ ನಡೆದ ಕಥೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆದ ಘಟನೆಯನ್ನಾಧರಿಸಿದ ಕಥೆ.

  2. ಲಲಿತಾ ಸಿದ್ಧಬಸವಯ್ಯ

    nija , aksharave anna.

    • ನಾಗರಾಜನಾಯಕ ಡಿ ಡೊಳ್ಳಿನ

      ಧನ್ಯವಾದಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading