ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ಇರಬೇಕಿತ್ತು ಸರ್ ನೀವು…

ಶ್ರೀಪಾದ ಭಟ್

ಡಿ. ಎಸ್. ನಾಗಭೂಷಣ ನಿಧನರಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಡಿ. ಎಸ್. ಎನ್ ಜೊತೆಗೆ ಚರ್ಚೆ, ಸಂವಾದ ಜಗಳ ಸಾಮಾನ್ಯ ಸಂಗತಿಯಾಗಿತ್ತು. ಅವರು ಸಿಕ್ಕಾಗಲೆಲ್ಲ ಸಣ್ಣ ಮಟ್ಟದ ವಾದ ಮಾಡದೇ ಹೋದರೆ ನನಗೆ ಭಣ ಭಣ ಎನಿಸುತ್ತಿತ್ತು. ಆದರೆ ಅವರನ್ನು ಭೇಟಿಯಾಗಿ ಅನೇಕ ವರ್ಷಗಳಾಗಿದ್ದವು.

ಎಪ್ಪತ್ತರ ದಶಕದ ನಮ್ಮ ಬಾಲ್ಯದ ದಿನಗಳಲ್ಲಿ ಆಕಾಶವಾಣಿಯಲ್ಲಿದ್ದ ಡಿ. ಎಸ್. ಎನ್ ಓದುತ್ತಿದ್ದ ಪ್ರದೇಶ ಸಮಾಚಾರ ಜನಪ್ರಿಯವಾಗಿತ್ತು.

ಹಾಗೆಯೇ ಲೋಹಿಯಾ, ಕುವೆಂಪು, ಜಿಎಸ್ ಎಸ್, ಗಾಂಧಿ ಕುರಿತ ಅವರ ಆಳವಾದ ಓದು, ಗ್ರಹಿಕೆ ಮತ್ತು ವಿಚಾರ ಮಂಡನೆ ಬೆರಗುಗೊಳಿಸುತ್ತಿತ್ತು. ಪ್ರತಿಭಾವಂತ ಲೇಖಕ. ವಸ್ತುನಿಷ್ಠವಾಗಿ ಬರೆಯುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಡಿ. ಎಸ್. ಎನ್

he is one of the best reader.
1990ರಲ್ಲಿ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ನೆಪದಲ್ಲಿ ಲೇಖಕರಿಗೆ ತುಮಕೂರಿನಲ್ಲಿ ಒಂದು ಅಭಿನಂದನೆ, ಚರ್ಚೆ ಗೋಷ್ಠಿಯಿತ್ತು. ನಾನು ಮೊದಲ ಬಾರಿಗೆ ಡಿ. ಎಸ್. ಎನ್ ರನ್ನು ಮಾತನಾಡಿಸಿದ್ದು ಅಲ್ಲಿ. ಆ ಸಮಾರಂಭಕ್ಕೆ ಬರಲು ಒಪ್ಪಿಕೊಂಡು ನಂತರ ಕೈ ಕೊಟ್ಟ ಲಂಕೇಶ್ ರನ್ನು ಶರ್ಟಿನ ತೋಳು ಮೇಲೇರಿಸಿಕೊಳ್ಳುತ್ತಾ ಟೀಕಿಸುತ್ತಿದ್ದ ಆ ದೃಶ್ಯ ನಿನ್ನೆ, ಮೊನ್ನೆ ನಡೆದಂತಿದೆ. ಆದರೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಂದರ್ಭದಲ್ಲಿ ಚಂಡಿ ಹಿಡಿದು ಹಠದಿಂದ ವರ್ತಿಸುವ ಅವರ ಇನ್ನೊಂದು ಮುಖ ಅನೇಕ ಸಂದರ್ಭಗಳಲ್ಲಿ ಎದುರುಗಿರುವವರನ್ನು ಪರಚುತ್ತಿತ್ತು, ಗಾಯಗೊಳಿಸುತ್ತಿತ್ತು.

ತನ್ನದೇ ಸತ್ಯ ಎಂಬ ಧೋರಣೆ ಜಗಳಗಳಿಗೆ ಕಾರಣವಾಗಿದ್ದು ಲೆಕ್ಕವೇ ಇಲ್ಲ ನಾವು ಸ್ನೇಹಿತರು ‘ಇದೊಂದು ವಿಷಯದಲ್ಲಿ ಡಿ.ಎಸ್.ಎನ್ ಪ್ರಬುದ್ದರಾಗಿದ್ದರೆ ಎಷ್ಟು ಚಂದ’ ಎಂದು ಬೇಸರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಬದುಕು ಹಾಗೆಲ್ಲಾ ಚೆಂದವಾಗಿ ಇರಲು ಬಿಡುವುದಿಲ್ಲ.

ಡಿ. ಎಸ್. ಎನ್ ರವರಿಗೆ ಈ ಫೋಟೋ ತೋರಿಸಿ ಹೀಗೆ ಇರಬೇಕಿತ್ತು ಸರ್ ನೀವು ಎಂದು ಎಷ್ಟೋ ಬಾರಿ ಹೇಳಬೇಕೆಂದುಕೊಂಡಿದ್ದೆ. ಹೇಳಲಿಲ್ಲ.

ತಮ್ಮ ಬದುಕಿನ ಪಯಣ ಮುಗಿಸಿ ಎದ್ದು ನಡೆದ
ಡಿ. ಎಸ್. ಎನ್ ಗೆ ನಮನಗಳು

‍ಲೇಖಕರು Admin

19 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading