ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿತವಾಗಲಿ ಮೂರು ಗಂಟೆ..

ಸದಾಶಿವ್ ಸೊರಟೂರು

ದಾವಣಗೆರೆ ಬಿಸಿಲಿಗೆ ಈಗ ಹರೆಯ. ಬೆಳ್-ಬೆಳಗ್ಗೆಯ ಕುಣಿಯಲು ಆರಂಭಿಸುತ್ತದೆ.‌ ಬಿಸಿ‌ನೀರಿನಲಿ‌ ಮಿಂದು ಕ್ರೀಮ ಬಳಿದುಕೊಂಡು ಬಂದ ಪೋರ ಪೋರಿಯರ ಹಣಿಯ ಮೇಲಿಂದ ಜಿನುಗುತ್ತಿದ್ದ ಬೆವರು ಘಮ್ ಎನ್ನುವ ಕ್ರೀಮನ್ನು ನುಂಗುತ್ತಿತ್ತು. ಅವರ ಕೈಯಲ್ಲಿ ಪರೀಕ್ಷೆ ಬರೆಯಲು ಹೊರಟ ಹತ್ಯಾರಗಳಿದ್ದವು. ವ್ಯವಸ್ಥೆ ಪರೀಕ್ಷೆಯನ್ನು ಯುದ್ಧಕ್ಕೂ, ಮಕ್ಕಳನ್ನು ಸೈನಿಕರಿಗೂ, ಅವರ ಬರೆಯುವ ಪೆನ್ನು ಪೆನ್ಸಿಲ್ ಇತ್ಯಾದಿಗಳನ್ನು ಕೊಲ್ಲುವ ಹತ್ತಾರಗಳಿಗೆ ಹೋಲಿಸಿ, ಕ್ಷಣ ಕ್ಷಣಗಳಕೂ ಹೆದರಿಸಿ ಎಳೆ ಮನಸ್ಸನ್ನು ಇಷ್ಟಿಷ್ಟೆ ಕೊಲ್ಲುತ್ತದೆ. 

ನಾನು ಬಸ್ಸ ಹತ್ತಿ ಕಿಟಕಿ ಬಳಿ ಸೀಟು ಹಿಡಿದು ಕೂತಿದ್ದೆ. ನನಗೆ ಪರೀಕ್ಷೆ ಹಾಲ್ ನಲ್ಲಿ‌ ಮಕ್ಕಳನ್ನು ಕಾಯುವ ಡ್ಯೂಟಿ ಇತ್ತು. ಅವರ ತಲ್ಲಣಗಳನ್ನು ನೋಡಿ ನೋಡಿ ಆ ಮೂರು ಗಂಟೆಗಳಲಿ ನಮಗೇ ಬದುಕಿನ ಬಗ್ಗೆ ಬೇಸರವೇ  ಮೂಡುತ್ತದೆ. ಮಕ್ಕಳೆಷ್ಟು ಪರೀಕ್ಷೆಗಳಿಗೆ ಶಾಪ ಹಾಕುತ್ತಾರೊ ನೀವೆ ಊಹಿಸಿ. ಮುಂದಿನ ಸ್ಟಾಪ್ ನಲ್ಲಿ ಮತ್ತೆ ಒಂದಿಂಡು ಹುಡುಗ-ಹುಡುಗಿಯರು‌ ಹತ್ತಿದರು. ತುಂಬಾ ಗಂಭೀರವಾಗಿ ಕೂತಿದ್ದರು. ನಿತ್ಯ ಹಕ್ಕಿಗಳ ಕಲರವದಂತೆ ವಟಗುಡುತ್ತಾ ಇಡೀ ಬಸ್ಸನ್ನೇ ಕಿನ್ನರ ಲೋಕವಾಗಿಸುತ್ತಿದ್ದ ಮಕ್ಕಳು ಇವತ್ತು ಎಲ್ಲೊ ಕಳೆದು ಹೋದವರಂತೆ ಆತಂಕದಲ್ಲಿದ್ದರು. ಮುಂದಿನ ಸ್ಟಾಪ್ ನಲ್ಲಿ ಮತ್ತಷ್ಟು ಮಕ್ಕಳು ಹತ್ತಿದರು. ಅವರೂ‌ ಕೂಡ ಮನೆಯಿಂದಲೇ ಗಂಭೀರತೆಯನ್ನು ತೊಟ್ಟು ಬಂದವರಂತೆ ಇದ್ದರು. ಇಡೀ ಬಸ್ಸಿ‌ನ ವಾತಾವರಣ ವಿಲಕ್ಷಣವಾಗಿತ್ತು. 

ನಿತ್ಯ ಈ ಸ್ಕೂಲ್ ಮಕ್ಕಳ ಗಲಾಟೆ, ಕೀಟಲೆಗಳಿಂದ ಸಿಡಿಮಿಡಿಗೊಳ್ಳುತ್ತಿದ್ದ  ಕಂಡಕ್ಟರ್ ಮಕ್ಕಳ ಗಂಭೀರತೆ, ಅವರ ಕಣ್ಣಿನಲ್ಲಿನ ಪರೀಕ್ಷಾ ಆತಂಕ ಕಂಡು ಚಡಪಡಿಸಿದ.  ಲೋಚಗುಟ್ಟಿದ. ಏನ್ ಸರ್ ಮಕ್ಕಳಿಗೆ ನೀವು ಪರಿ ಹೆದರಿಸೋದ ಅವರನ್ನ ನೋಡಿ‌ ಪಾಪ ಅನಿಸಿತಿದೆ ಅಂದ. ನಾನು ಕಂಡಕ್ಟರ್ ಗೆ ಪರಿಚಯ. ನಿತ್ಯ ಶಾಲೆಗೆ ಅದೇ ಬಸ್ಸಿನಲಿ ಪಯಣ. ಆ ಮಕ್ಕಳೂ ಕೂಡ ನಿತ್ಯದ ನಮ್ಮ ಸಹಪಯಣಿಗರೆ. ನಿತ್ಯದ ಪಯಣಕ್ಕೂ ಇಂದಿನ ಪಯಣಕ್ಕೂ ತುಂಬಾನೇ ಬದಲಾವಣೆ ಇತ್ತು. ಅವರು ನನ್ನ ಸ್ಟೂಡೆಂಟ್ ಅಲ್ಲದೆ ಇದ್ದರು ನಾನು ಕೂಡ ನನ್ನ ಸ್ಟೂಡೆಂಟ್ ಗಳಿಗೆ ಈ ಪರಿಯೆ ಹೆದರಿಸಿರುತ್ತೇನೆ ಅಂತ ಕಂಡಕ್ಟರ್ ಭಾವಿಸಿದಂತಿತ್ತು. ಅದು ಅವರ ತಪ್ಪಲ್ಲ. ಪೋಷಕರನ್ನು, ಈ ಮೇಷ್ಟ್ರುಗಳನ್ನು ಪರೀಕ್ಷಾ ದೃಷ್ಟಿಯಲ್ಲಿ ಮಕ್ಕಳು ಎಂದಿಗೂ ಕ್ಷಮಿಸುವುದಿಲ್ಲ. 

ಎಂದಿನಂತೆ ಬಸ್ಸಿನ ವಾತಾವರಣವನ್ನು ಗಲಗಲಗೊಳಿಸಲು ಕಂಡಕ್ಟರ್ ಹೆಣಗತೊಡಗಿದ.  ಮಕ್ಕಳನ್ನು ರೇಗಿಸಿದ. ಮಕ್ಕಳು ನಗು ಖರ್ಚು ಮಾಡಲು ಹಿಂದೆ ಮುಂದೆ ನೋಡಿದರು. ಕಂಡಕ್ಟರ್ ಮೊದಲೇ ಸಿದ್ದನಾಗಿ ಬಂದಿರುವನಂತೆ ತೋರಿದ. ಬಸ್ಸಿನ ತನ್ನ ಮೇಲಿನ ಡಿಕ್ಕಿಯಿಂದ ಎರಡು ಚಾಕಲೇಟ್ ಬಾಕ್ಸ್ ಗಳನ್ನು ಹೊರತೆಗೆದ. ಪ್ರತಿಯೊಬ್ಬರಿಗೂ ಎರಡೆರಡು‌ ನೀಡಿದ. ಸಿಹಿ ತಿಂದು ಖುಷಿಯಾಗಿರಿ ಅಂದ. ಬರೋದನ್ನ ನೀಟಾಗಿ ಬರೀರಿ ಸಾಕು, ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಪರೀಕ್ಷೆಯೇನು ಬದುಕಲ್ಲ ಅಂದ.

ತಿನ್ನಿ ತಿನ್ನಿ ಇಲ್ಲೆ ತಿನ್ನಿ ಅಂತ ಹಿತವಾದ ತಾಕೀತು ಮಾಡಿದ. ಮಕ್ಕಳು ಕವರ್ ಕಳಚಿ ಬಾಯಿಗೆ ಚಾಕಲೇಟ್ ತುಂಬಿಕೊಂಡರು. ಪರೀಕ್ಷೆಯ ಸಂಕಟದಿಂದ ಸ್ವಲ್ಪವೇ ಪಾರಾದಂತೆ ಕಂಡರು. ‘ಮಾಸ್ಟ್ರೇ ಬನ್ನಿ ಮಕ್ಕಳಿಗೆ ಏನಾದ್ರೂ ಹೇಳಿ..’ ಅಂತ ಬಲವಂತ ಮಾಡಿದರು. ಬಸ್ಸಿನಲ್ಲೂ ಪಾಠನಾ? ಒಮ್ಮೆ ದಿಗಿಲುಗೊಂಡೆ. ಪರೀಕ್ಷೆ, ಮಾರ್ಕ್ಸ್, ಹಾಗೆ ಬರೀರಿ, ಹೀಗೆ ಬರೀರಿ ಅಂತ ಹೆದರಿಸಬೇಡಿ ಮತ್ತೆ?.. ಅಂತ ಕಿವಿಯಲ್ಲಿ ಉಸಿರಿದರು. 

ನಾನು ಎದ್ದು ಬಸ್ಸಿ‌ನ ಮುಂಭಾಗ ಬಂದು ನಿಂತೆ. ಏಳೆಂಟು ಜ‌ನ ಬೇರೆ ಪ್ರಯಾಣಿಕರನ್ನು ಬಿಟ್ಟರೆ. ಇಡೀ ಬಸ್ಸು ಮಕ್ಕಳಿಂದ ತುಂಬಿತ್ತು. ಪರೀಕ್ಷೆಯ ಬಗ್ಗೆ ನಾನು ಒಂದೂ ಮಾತು ಆಡಲಿಲ್ಲ. ಒಂದಷ್ಟು ‌ಜೋಕಗಳಿಂದ ನಗಿಸಿದೆ. ಬಸ್ಸಿನೊಳಗಿ‌ನ ಬಿಗಿ ವಾತಾವರಣ ಈಗ ತೆಳುವಾಗ ತೊಡಗಿತು. ಮಕ್ಕಳು ಮಾತು‌ ಬಿಚ್ಚತೊಡಗಿದ್ದರು. ಅವರನ್ನು ಒಂದಷ್ಟು ನಗಿಸಿ.. ಸುಮ್ಮನೆ ‌ಒಂದು ವಿಷ್ ಮಾಡಿ ಬಂದು ಕೂತೆ. ಅಷ್ಟರಲ್ಲೇ ಅವರು ಇಳಿಯುವ ನಿಲ್ದಾಣ ಬಂದಿತ್ತು. ಎಲ್ಲರೂ ಇಳಿಯಲು ಅನುವಾದರು. ನನಗೂ ಕಂಡಕ್ಟರ್ ಗೂ ಥ್ಯಾಂಕ್ಸ್ ಹೇಳಿದರು.

ಬಸ್ಸು ಇಳಿದು ನಿಂತು ಬೈ‌ ಹೇಳಿದರು. ಅವರ ದನಿಯಲ್ಲಿ ಒಂದು ಕಳೆಯಿತ್ತು, ಬಿಡುಗಡೆಯಿತ್ತು. ಮಕ್ಕಳು ಹೀಗೆ ಖುಷಿಯಾಗಿರಲಿ ದೇವರೇ ಅಂತ ಒಂದು ಮನವಿಯನ್ನು ದೇವರಿಗೆ ಎಸೆದೆ.  ಅವರನ್ನು ಇಳಿಸಿದ ಬಸ್ಸು ಹೊರಟಿತು. ಅವರು ಹಚ್ಚಿಕೊಂಡಿದ್ದ ಕ್ರೀಮಿನ ವಾಸನೆ ಇನ್ನೂ ಉಳಿದಿತ್ತು. ಅವರ ನಗು ಇನ್ನೂ ಬಸ್ಸಿನೊಳಗೆ ಅಲೆದಾಡುತ್ತಿತ್ತು. ಮುಂದಿನ ಸ್ಟಾಪಿನಲಿ ನಾನು ಇಳಿಯಲು ಸಿದ್ದನಾದೆ. ಅವರ ಆ ಮೂರು ಗಂಟೆಗಳು ಅವರು ಬಳಿದುಕೊಂಡ ಕ್ರೀಮು, ಪೌಡರಿನಂತೆ ತುಂಬಾ ಹಿತವಾಗಿರಲಿ ಎಂದು ಮನಸ್ಸಿನಲೇ ಆಶಿಸುತ್ತಾ ಬಸ್ಸಿನ ಬಾಗಿಲ ಬಳಿ ನಿಂತೆ.. 

‍ಲೇಖಕರು Admin

30 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading