ಲೇಖಕಿ ಪದ್ಮಲತಾ ಮೋಹನ್ ಅವರ ‘ವಿದ್ಯಾಸಾರಥಿ ಮತ್ತು ಮನೋಸಾರಥಿ’
ಈ ಕೃತಿಯನ್ನು ‘ನಿರಂತರ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಯ ಕುರಿತ ನಾಗರಾಜ ಇಳೆಗುಂಡಿ ಅವರ ಒಂದು ನೋಟ ಇಲ್ಲಿದೆ.
-ನಾಗರಾಜ ಇಳೆಗುಂಡಿ
ಭಾರತಕ್ಕೆ ‘ಯುವದೇಶ’ ಎಂಬ ಹೆಗ್ಗಳಿಕೆಯೂ ಇದೆ. ನಮಗೆ ಸ್ವಾತಂತ್ಯç ಲಭಿಸಿ ೭೮ ವರ್ಷಗಳು. ವ್ಯಕ್ತಿಯ ಆಯುಷ್ಯದಲ್ಲಿ ಇದು ಬದುಕಿನ ಇಳಿಸಂಜೆ ಎನ್ನಬಹುದಾದರೂ ದೇಶವೊಂದರ ಲೆಕ್ಕದಲ್ಲಿ ಇನ್ನೂ ಶೈಶವಾವಸ್ಥೆ ಎನ್ನಲಡ್ಡಿಯಿಲ್ಲ. ಇದೇನೇ ಇದ್ದರೂ, ಜನಸಂಖ್ಯೆಯ ವಯೋಮಾನ ದೃಷ್ಟಿಯಿಂದ ನೋಡಿದಾಗ ಭಾರತ ಹೆಚ್ಚು ಯುವಜನರಿಗೆ ನೆಲೆಯಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.೫೦ ಮಂದಿ ೨೫ರ ವಯೋಮಾನದ ಒಳಗಿನವರು. ಶೇ. ೬೫ ಮಂದಿ ೩೫ರ ವಯಸ್ಸಿನ ಒಳಗಿನವರು. ಅಂದರೆ, ಅಮೆರಿಕ ಸೇರಿದಂತೆ ಎಷ್ಟೋ ದೇಶಗಳ ಜನಸಂಖ್ಯೆಗಿAತ ನಮ್ಮಲ್ಲಿ ಯುವಜನರ ಸಂಖ್ಯೆ ಜಾಸ್ತಿ ಇದೆ.
ಒಂದು ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಿಗೆಯಿದೆ ಎಂದರೆ ಅಲ್ಲಿ ಉತ್ಪಾದಕತೆಯ ಅವಕಾಶವೂ ಹೆಚ್ಚು. ಅಂದರೆ ದುಡಿಯುವವರು ಹೆಚ್ಚಿಗೆಯಿರುತ್ತಾರೆ. ಅರ್ಥಾತ್ ದೇಶದ ಆರ್ಥಿಕತೆಗೆ ಇಂಬು ಸಿಗುತ್ತದೆ. ಕುಟುಂಬದಲ್ಲಿಯೂ ಹಾಗೇ ಅಲ್ಲವೆ? ಒಬ್ಬರೇ ದುಡಿಯುವ ಬದಲು ನಾಲ್ಕಾರು ಕೈಗಳು ಸೇರಿದರೆ ಆ ಕುಟುಂಬ ಬೇಗ ಏಳಿಗೆಯಾಗುತ್ತದೆ. ಯೌವನವೆಂದರೆ ಕಬ್ಬಿಣವನ್ನೂ ಬಗ್ಗಿಸಬಲ್ಲೆ ಎಂಬ ಉತ್ಸಾಹದ ಕನಸುಗಳು ಅರಳಿನಿಂತು ಮೈಮನಗಳನ್ನು ಹಿಗ್ಗಿಸುವ ಕಾಲ. ಹೀಗೆಂದೇ ಎಲ್ಲರಿಗೂ ಚಿರಯೌವನದ ಬಯಕೆ. ಮುಪುö್ಪ ಯಾರಿಗೆ ಬೇಕು? ‘ಎಲೆ ಮುಪ್ಪೆ ಸಾರತ್ತ/ಯೌವನವೆ ಬಾರಿತ್ತ’ (ಬಿಎಂಶ್ರೀಯವರ ‘ಇಂಗ್ಲಿಷ್ ಗೀತಗಳು’ – ಸಂಕಲನದ ಕವನವೊಂದರ ಸಾಲು) ಎಂಬುದು ಎಲ್ಲರ ಮನದಾಳ. ಆದರೆ ಕಾಲಚಕ್ರ ನಿಂತೀತೇ? ನೋಡನೋಡುತ್ತಿದ್ದಂತೆ ಬಾಲ್ಯ-ಯೌವನವೆಲ್ಲ ಕಳೆದು ಮುಪ್ಪು ಬಂದೇಬಿಡುತ್ತದೆ, ಅದು ಬೇರೆ ವಿಚಾರ.
ಯುವಜನರಲ್ಲಿ ಆದರ್ಶಗಳ ಕನಸು ಒಂದು ತೂಕ ಜಾಸ್ತಿಯೇ ಇರುತ್ತದೆ. ಸಮಾಜ, ಸರ್ಕಾರ ಮತ್ತು ವ್ಯವಸ್ಥೆಯಲ್ಲಿನ ಅಪಸವ್ಯಗಳನ್ನು ಕಂಡಾಗ ಸಹಜವಾಗಿ ಯುವಮನ ಕುದಿಯುತ್ತದೆ; ತನ್ನ ಕೈಲಿ ಅಧಿಕಾರವಿದ್ದಿದ್ದರೆ ಇಂಥದಕ್ಕೆಲ್ಲ ತಡೆ ಹಾಕುತ್ತಿದ್ದೆ ಎನಿಸುತ್ತದೆ. ‘ನಾನು ಪ್ರಧಾನಿಯಾದರೆ…’ ‘ನಾನು ಮುಖ್ಯಮಂತ್ರಿಯಾದರೆ…’ ಎಂಬ೦ತಹ ವಿಷಯದ ಭಾಷಣ ಅಥವಾ ಪ್ರಬಂಧ ಸ್ಪರ್ಧೆಯಲ್ಲಿ ಮಕ್ಕಳ ಒಕ್ಕಣೆಯಲ್ಲಿ ಆದರ್ಶಗಳ ಮೆರವಣಿಗೆಯೇ ಇರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ. ನಾವು ಕೂಡಾ ಹಾಗೆ ಬರೆದವರೇ ತಾನೆ!
ಯುವಜನರ ಸಂಖ್ಯೆ ಹೆಚ್ಚಿಗೆಯಿರುವುದು ದೇಶವೊಂದಕ್ಕೆ ಹೇಗೆ ಕೋಡು ಮೂಡಿಸುವ ವಿಚಾರವೋ, ಹಾಗೇ ಕೆಲ ಸಮಸ್ಯೆಗಳನ್ನೂ ಜೊತೆಗೆ ತರುತ್ತದೆ. ಮುಖ್ಯವಾಗಿ ಹೇಳುವುದಾದರೆ – ನಿರುದ್ಯೋಗ, ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಣೆ, ಬಾಲಕಾರ್ಮಿಕರು ಇತ್ಯಾದಿ. ಸರಿಯಾದ ಉದ್ಯೋಗ ಇಲ್ಲದಿದ್ದರೆ, ಅದರಿಂದಾಗುವ ನಕಾರಾತ್ಮಕ ಪರಿಣಾಮಗಳು ಅನೇಕ. ಹಾಗಂತ ಇವೆಲ್ಲ ಸಮಸ್ಯೆಗಳು ಎಂದುಕೊ೦ಡು ಯುವಜನರ ಮಹತ್ವವನ್ನು ಕಡೆಗಣಿಸಲಾದೀತೆ? ಪರಿಹಾರದತ್ತ ಸಮಾಜ ಹಾಗೂ ಸರ್ಕಾರಗಳ ಪ್ರಯತ್ನಗಳು ಜಾರಿಯಲ್ಲಿರಬೇಕು.

ಯುವಜನರ ಬಗ್ಗೆ ನಮ್ಮಲ್ಲಿ ಹೆಮ್ಮೆ ತುಳುಕುತ್ತಿರುವಾಗಲೇ, ಕಳವಳವೂ ಮೂಡುವುದಿದೆ. ಧೂಮಪಾನ, ಡ್ರಗ್ಸ್ ಸೇವನೆ, ಪ್ರೀತಿಪ್ರೇಮದ ಹೆಸರಲ್ಲಿ ಸ್ವೇಚ್ಛೆಯಿಂದ ವರ್ತಿಸುವುದು… ಇವನ್ನೆಲ್ಲ ಕಂಡಾಗ ಎತ್ತ ಸಾಗುತ್ತಿದೆ ನಮ್ಮ ಯುವಜನತೆ ಎಂದೆನಿಸುತ್ತದೆ. ಮಹಾನಗರಗಳ ಪ್ರತಿಷ್ಠಿತ ಶಾಲಾಕಾಲೇಜುಗಳ ಆಸುಪಾಸೇ ಡ್ರಗ್ಸ್ನಂತಹ ಅಪಾಯಕಾರಿ ವಸ್ತು ಸಿಗುತ್ತದೆ ಎಂಬ ವರದಿಗಳನ್ನು ನೋಡಿದಾಗ ಖೇದವೆನಿಸುತ್ತದೆ (ಎಲ್ಲರೂ ಹೀಗೆ ಅಂತಲ್ಲ). ಬೊಗಸೆಯಲ್ಲಿ ಭವ್ಯ ಭವಿಷ್ಯವನ್ನು ತುಂಬಿಕೊಳ್ಳಬೇಕಾದ ಯುವಕರು ಜಾರುಹಾದಿಯಲ್ಲಿ ಸಾಗುತ್ತಿದ್ದಾರಾ ಎಂಬ ಆತಂಕ ಆವರಿಸುತ್ತದೆ.
ಈ ಹಿನ್ನೆಲೆಯಲ್ಲಿಯೇ, ಯುವಜನರಿಗೆ ಸರಿಯಾದ ಮಾರ್ಗದರ್ಶನ ಅಗತ್ಯ ಎಂಬ ಮಾತು ಕೇಳಿಬರುವುದು. ಹರಿವ ನೀರಿಗೆ ಅಣೆಕಟ್ಟೆ ಕಟ್ಟಿದರೆ ಕೃಷಿ, ಕುಡಿಯುವ ನೀರು ಇತ್ಯಾದಿಗೆ ಬಳಸಬಹುದು. ಇಲ್ಲವಾದಲ್ಲಿ ನೀರು ಸುಮ್ಮನೆ ಹರಿದು ಸಾಗುತ್ತಿರುತ್ತದೆ. ನದಿಯೊಂದಕ್ಕೆ ಸಾಗರ ಗಮ್ಯ ಎಂಬುದು ನಿಜವಾದರೂ, ಆ ಪಯಣದಲ್ಲಿ ಎಷ್ಟು ಜನರ ಬದುಕನ್ನು ಪೊರೆವ ಮಡಿಲಾಯಿತು ಎಂಬುದು ಕೂಡ ಮುಖ್ಯವೇ.
ಯುವಶಕ್ತಿಯ ಬಗ್ಗೆ ಅಪಾರ ಭರವಸೆ, ವಿಶ್ವಾಸ ಹೊಂದಿದ್ದ ಸ್ವಾಮಿ ವಿವೇಕಾನಂದರು ಯುವ ಬದುಕಿನ ಸಾಧ್ಯತೆ-ಸಾರ್ಥಕತೆ ಬಗ್ಗೆ ವಿಸ್ತೃತವಾಗಿ ಚಿಂತನೆ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ. ‘ಇತರರಿಂದ ಉತ್ತಮವಾದ ಎಲ್ಲವನ್ನೂ ಕಲಿಯಿರಿ. ಅದನ್ನು ಸ್ವೀಕರಿಸಿ ನಿಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳಿ. ನೀವು ಅವರಾಗಬೇಡಿ’ ಎಂದು ವಿವೇಕಾನಂದರು ಹೇಳುತ್ತಾರೆ. ಇಲ್ಲಿನ ಧ್ವನಿ ಸ್ಪಷ್ಟ. ಉತ್ತಮಾಂಶ ಎಲ್ಲಿಂದ ಬಂದರೂ ಸ್ವಾಗತಿಸಬೇಕು. ಆದರೆ ನಾವೂ ಅವರಂತೆಯೇ ಆಗುತ್ತೇವೆ ಎಂಬ ಹಠ ಬೇಡ. ಏಕೆಂದರೆ ಪ್ರತಿ ವ್ಯಕ್ತಿಯೂ ವಿಭಿನ್ನ, ವಿಶಿಷ್ಟ. ಅವರವರ ಶಕ್ತಿ, ಇತಿಮಿತಿ ನೋಡಿಕೊಂಡು ಸಾಧನೆಯತ್ತ ಸಾಗಬೇಕು.
ಈ ೨೧ನೇ ಶತಮಾನದ ಕಾಲಘಟ್ಟದಲ್ಲಿ, ತಂತ್ರಜ್ಞಾನ ದಿನದಿನಕ್ಕೂ ಹೊಸ ಹೊಸ ಅವತಾರ ತಾಳುತ್ತಿರುವ ಸಮಯದಲ್ಲಿ, ಯುವಜನರು ತಪುö್ಪ-ಸರಿಗಳ ಗೊಂದಲದಲ್ಲಿ, ಯಾವುದು ಆಕಾರ – ಯಾವುದು ವಿಕಾರ ಎಂಬ ಸಾಂಸ್ಕೃತಿಕ ತಾಕಲಾಟದಲ್ಲಿರುವಾಗ, ಮೊಬೈಲ್ ಎಂಬ ಮಾಯೆಯಲ್ಲಿ ಸಿಲುಕಿರುವಾಗ ಸರಿಯಾದ ದಿಕ್ಕು ತೋರುವವರು ಬೇಕೇ ಬೇಕು. ಸೂಕ್ತ ಮಾರ್ಗದರ್ಶನ ಸಿಕ್ಕರೆ ಯುವಕರಿಂದ ದೊಡ್ಡ ಸಾಧನೆ ಸಾಧ್ಯ. ಇದರಿಂದ ಆಯಾ ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೆ ಹಾಗೂ ಒಟ್ಟಾರೆಯಾಗಿ ದೇಶಕ್ಕೂ ಪ್ರಯೋಜನವಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಿಸುವ ಕನಸು ನನಸಾಗುವಲ್ಲಿ ಯುವಜನರ ಪಾತ್ರ ಪ್ರಮುಖವಾದದ್ದು.
ಆ ನಿಟ್ಟಿನಲ್ಲಿ ನೋಡಿದಾಗ ಪದ್ಮಲತಾ ಮೋಹನ್ ಅವರ ‘ವಿದ್ಯಾಸಾರಥಿ’ ಕೃತಿಯ ಒಟ್ಟಾರೆ ಹೂರಣ ಗಮನ ಸೆಳೆಯುತ್ತದೆ. ಅವರು ಬರಹಗಾರ್ತಿಯಾಗಿರುವುದರ ಜೊತೆಗೆ ಉಪನ್ಯಾಸಕಿಯೂ ಆಗಿರುವುದರಿಂದ ವಿಷಯವನ್ನು ವೈವಿಧ್ಯಮಯ ಆಯಾಮಗಳಲ್ಲಿ ನೋಡಿ ವಿಶ್ಲೇಷಿಸಲು ನೆರವಾಗಿದೆ. ವಿದ್ಯಾರ್ಥಿಗಳ ಜೊತೆಗೆ ಸತತವಾಗಿ ಒಡನಾಡುವವರು ಹಾಗೂ ಅವರಿಗೆ ಪಾಠ ಮಾಡುವವರು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಚೆನ್ನಾಗಿ ಅರಿಯಬಲ್ಲರು. ಮನೆಯಲ್ಲಿ ಅಪ್ಪ ಅಮ್ಮನ ಬಳಿ ಹೇಳಲಾಗದ್ದನ್ನು ಮಕ್ಕಳು ಶಿಕ್ಷಕರ ಬಳಿ ಹೇಳಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಚಲಿತವಾಗುತ್ತಿರುವ ಯುವ ಮನಸ್ಸುಗಳು, ಸಮಯ ನಿರ್ವಹಣೆ, ತಂಡದ ಕೆಲಸದ ಮನೋಭಾವ, ಮನೋಬಲ, ನೆನಪಿನ ಶಕ್ತಿ, ಕಲಿಕೆಯ ಜೊತೆ ಇರಬೇಕಾದ ಉತ್ತಮ ಹವ್ಯಾಸಗಳು, ಅಹಿಂಸೆ, ಉತ್ತಮ ಜೀವನಶೈಲಿಗೆ ಪುಸ್ತಕ ಓದಿ, ಸಾಮಾನ್ಯ ಜ್ಞಾನ ಅಸಾಮಾನ್ಯವಾದದ್ದು, ಬದುಕಿಗೆ ಮಾತಿನ ಕೌಶಲ ಅಗತ್ಯ, ಗುರಿ ನಿರ್ಧಾರವೇ ಸಾಧನೆಯ ಮೂಲ, ಶಿಕ್ಷಕ ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಇತ್ಯಾದಿ ಶೀರ್ಷಿಕೆಗಳೇ ಲೇಖನದ ಆಶಯವನ್ನು ಕಟ್ಟಿಕೊಡುವಂತಿವೆ. ಶಿಕ್ಷಕರು ಹಾಗೂ ಪಾಲಕರ ಪಾತ್ರದ ಬಗ್ಗೆಯೂ ಲೇಖಕಿ ಗಮನ ಸೆಳೆಯುತ್ತಾರೆ. ಶಿಕ್ಷಣವೆಂಬುದು ವಿದ್ಯಾರ್ಥಿ-ಶಿಕ್ಷಕ-ಪಾಲಕರನ್ನು ಒಳಗೊಂಡ ತ್ರಿಮುಖ ಹೊಂದಿದೆ ಎಂಬ ನೆಲೆಯಲ್ಲಿ, ಶಿಕ್ಷಕರು ಹಾಗೂ ಪಾಲಕರಿಗೂ ಹೊಣೆಗಾರಿಕೆ ಇರುತ್ತದೆ. ಈ ಪಾತ್ರಧಾರಿಗಳಲ್ಲಿ ಯಾರು ತಾಳ ತಪ್ಪಿದರೂ ಒಟ್ಟಾರೆ ವ್ಯವಸ್ಥೆ ಮೇಲೆ ದುಷ್ಪರಿಣಾಮ ಆಗುತ್ತದೆ ಎಂಬ ಕಳಕಳಿ ಇಲ್ಲಿದೆ.
ಲೇಖಕಿ ಉಪನ್ಯಾಸಕಿಯಾಗಿರುವುದರಿಂದ ಹರೆಯದ ಮಕ್ಕಳ ಚಿತ್ತವೃತ್ತಿಯನ್ನು ಅರ್ಥಮಾಡಿಕೊಂಡು ಬರೆಯುವಲ್ಲಿ ಅನುಕೂಲವಾಗಿದೆ. ಇಂದಿನ ಯುವಜನರು ಉತ್ತಮ ಹುದ್ದೆ, ಹಣ ಇದ್ದರೂ ಯಾಕೆ ಜೀವನದಲ್ಲಿ ವೈಫಲ್ಯ ಅನುಭವಿಸುತ್ತಾರೆ? ಎಂಬ ಪ್ರಶ್ನೆ ಹಾಕಿಕೊಂಡು ತಮ್ಮದೇ ರೀತಿಯಲ್ಲಿ ಉತ್ತರವನ್ನೂ ಹುಡುಕುತ್ತಾರೆ.
ಕೆಲವೊಮ್ಮೆ ಶಿಕ್ಷಕಿಯಾಗಿ ಮಕ್ಕಳಿಗೆ ಸಲಹೆ ಸೂಚನೆ ನೀಡುವ ಅವರು, ಒಮ್ಮೊಮ್ಮೆ ಆತ್ಮೀಯವಾಗಿ ಕಿವಿಮಾತು ಹೇಳುತ್ತಾರೆ; ಕಾಳಜಿ ತೋರಿಸುತ್ತಾರೆ. ಮನೆಯಲ್ಲಿ ಅಮ್ಮ ಅಥವಾ ಸೋದರಿಯರು ಹೇಳುವ ಮಾತಿನಲ್ಲಿ ಅಕ್ಕರೆಯ ಜೊತೆಗೆ ಎಚ್ಚರಿಕೆಯೂ ಇರುವುದರಿಂದ ಮನಸ್ಸಿಗೆ ನಾಟುತ್ತದೆಯಲ್ಲವೆ, ಹಾಗೆ. ಜೊತೆಗೆ, ಲೇಖಕಿ ಅಲ್ಲಲ್ಲಿ ಆಪ್ತಸಮಾಲೋಚಕಿಯ ಪಾತ್ರವನ್ನೂ ನಿರ್ವಹಿಸುತ್ತಾರೆ. ಒಟ್ಟಾರೆಯಾಗಿ ವಿದ್ಯಾರ್ಥಿ ಕೇಂದ್ರಿತ ಸಮಗ್ರ ನೋಟವೊಂದು ಇಲ್ಲಿ ಮೈದಾಳಿದೆಯೆನ್ನಬಹುದು. ವಿದ್ಯಾರ್ಥಿ ಜೀವನದಲ್ಲಿ ಹೇಗಿರಬೇಕು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ನಿರ್ವಹಿಸುವುದು ಹೇಗೆ, ಸೃಜನಶೀಲತೆಯನ್ನು ಬೆಳೆಸಿಕೊಂಡು ವ್ಯಕ್ತಿತ್ವವನ್ನು ಹಿಗ್ಗಿಸಿಕೊಳ್ಳುವುದು ಹೇಗೆ… ಇತ್ಯಾದಿ ಕಲಿಕೆಗೆ ಇಲ್ಲಿ ಸಾಕಷ್ಟು ‘ಪಾಠ’ಗಳಿವೆ.
ಟೂ ಇನ್ ಒನ್ ಎಂಬ ರೀತಿಯಲ್ಲಿದೆ ಈ ಕೃತಿ. ಒಂದೆಡೆ, ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡ ಬರಹಗಳಿದ್ದರೆ, ಇನ್ನೊಂದೆಡೆ, ಚಿಕ್ಕ ಕಥೆಗಳ ಮೂಲಕ ಸಂದೇಶಗಳನ್ನು ಹೇಳುವ ‘ಮನೋಸಾರಥಿ’ ಭಿನ್ನ ಭಿನ್ನ ಪರಿಕಲ್ಪನೆಯ ಬರಹಗಳಾಗಿವೆ. ಇವು ವಿಜಯವಾಣಿ ಪತ್ರಿಕೆಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾದಂಥವು. ವೈವಿಧ್ಯಮಯ ವೃತ್ತಿ, ಹಿನ್ನೆಲೆಯ ಲೇಖಕರು ಬರೆಯುವ ಈ ಅಂಕಣ ಬಹು ಜನಪ್ರಿಯವಾಗಿದ್ದು, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಒಡಲಲ್ಲಿ ಹುದುಗಿಸಿಕೊಂಡಿರುವ ಸಂದೇಶ ದೊಡ್ಡದು. ಹೀಗಾಗಿಯೇ ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಅಂಕಣವಾಗಿದೆ. ಕಥೆಗಳ ಮೂಲಕ ಮೌಲ್ಯಗಳನ್ನು, ನೀತಿತತ್ವಗಳನ್ನು ಸಾರುವ ಪರಂಪರೆ ನಮ್ಮಲ್ಲಿದ್ದು, ಅಂದು-ಇAದು-ಮುAದು ಸಹ ಇದೊಂದು ಸಶಕ್ತ ಮಾಧ್ಯಮವಾಗಿರುತ್ತದೆಂಬುದು ಖರೆ.
ಸಾಧುವಿನ ಬಳಿ ಇದ್ದ ಜಾದೂ ನಾಣ್ಯವನ್ನು ಬಯಸಿದ ವ್ಯಕ್ತಿಯೊಬ್ಬ ಅಂತಿಮವಾಗಿ ಶಾಂತಿ-ನೆಮ್ಮದಿ ಎಲ್ಲಿದೆ ಎಂಬುದರ ರಹಸ್ಯ ಅರಿಯುವ ಸಂದೇಶವನ್ನು ಹೊಂದಿರುವ ಕಥೆ ಈ ಸಂಕಲನದಲ್ಲಿದ್ದು, ಲೇಖಕಿ ಪದ್ಮಲತಾ ಅವರ ಕಥನಶೈಲಿಗೆ ಒಂದು ನಿದರ್ಶನ. ಮುಖ್ಯ ಸ್ಪರ್ಧೆಯ ಸಂದರ್ಭದಲ್ಲಿ ಚಿತ್ತಚಾಂಚಲ್ಯಕ್ಕೆ ಒಳಗಾದ ಸಮರ್ಥನೊಬ್ಬ ಸೋಲುವುದು, ನೆಲ್ಲಿಕಾಯಿ ತಿನ್ನುವಾಗ ಒಗರು ಅನಿಸಿದರೂ ನಂತರ ನೀರು ಕುಡಿಯುವಾಗ ಸಿಹಿ ಅನುಭವಕ್ಕೆ ಬರುವುದು, ಲೆಕ್ಕ ಬರುವುದಿಲ್ಲ ಎಂಬ ಕೀಳರಿಮೆಯ ವಿದ್ಯಾರ್ಥಿಯು ಶಿಕ್ಷಕರ ಪ್ರೋತ್ಸಾಹದಿಂದ ಆತ್ಮವಿಶ್ವಾಸ ಬೆಳೆಸಿಕೊಂಡು ಲೆಕ್ಕದಲ್ಲಿ ಸೈ ಎನಿಸಿಕೊಳ್ಳುವುದು – ಇವೆಲ್ಲ ಕಥೆಗಳು ಭಿನ್ನ ಭಿನ್ನ ಸಂದೇಶ ನೀಡುತ್ತ ಗಮನ ಸೆಳೆಯುತ್ತವೆ. ಇಂಥ ೧೬ ಕಥೆಗಳು ಈ ಕೃತಿಯಲ್ಲಿವೆ.
ಕಥೆ, ಕಾದಂಬರಿ, ಕವನಗಳಿಂದ ಗುರುತಿಸಿಕೊಂಡಿರುವ ಪದ್ಮಲತಾ ಅವರು ಈ ಕೃತಿಯ ಮೂಲಕ ತಮ್ಮ ಅಕ್ಷರ ವ್ಯವಸಾಯದ ಮತ್ತೊಂದು ಮಜಲನ್ನು ಅನಾವರಣಗೊಳಿಸಿದ್ದಾರೆ. ಭವಿಷ್ಯದಲ್ಲಿ ತಮ್ಮಿಂದ ಇನ್ನಷ್ಟು ಅಕ್ಷರಕೃಷಿ ನಿರೀಕ್ಷಿಸಬಹುದು ಎಂಬ ಸುಳಿವನ್ನೂ ನೀಡಿದ್ದಾರೆ.






0 Comments