ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂಗೊಬ್ಬ ಕೆಂಪ್ಯಾನ ಕಥೆ

ಶರಣು ಹಂಪಿ

‘ಆಹ್ ಏನ್ ಚೆಂದ. ಇನ್ನು ನನ್ನ ಲೈಫ್ ಫುಲ್ ಕಲರ್ ಕಲರ್. ಬಣ್ಣದ ಬಣ್ಣದ ಚಿಟ್ಟೆಗಳಂಥ ಚೆಂದಚೆಂದನೆಯ ಹುಡುಗಿಯರು. ಬದುಕು ಬಂಗಾರ. ಮುತ್ತು ಕೊಡುವಂಥ, ಸುಯ್ ಎಂದು ಹೋಗುವ ನುಣ್ಣನೆಯ ನುಣಿಪಿನ ಟಾರು ರಸ್ತೆಗಳು. ಹೇ. ನಂದು ರಂಗ್ ರಂಗ್ ಬದುಕು ಬಿಡು. ನಾನು ಎಲ್ಲ ಬಸ್ಗಳ ಮಹಾರಾಜನಂತಹ ವೋಲ್ವಾ ಬಸ್ ಆಗಿದ್ದೇ ಸಾರ್ಥಕ’ ಎಂದು ಕೆಂಪ್ಯಾ ಅಂದುಕೊಳ್ಳುತ್ತಿತ್ತು.

ನನ್ನ ಹುಟ್ಟು ಬಸ್ ಆಗಿದ್ದೇ ಇನ್ನು ಒಳ್ಳೇದಾಯ್ತು. ಈ ಮನುಷ್ಯ ಜಾತೀನೋ. ಥೂ. ಬೇಡ್ವೇ ಬೇಡ. ಈಗಂತೂ ಆ ಜಾತಿಗೂ ಒಂದು ಬೆಲೇನೂ ಇಲ್ಲದಂತಾಗಿಬಿಟ್ಟಿದೆ. ಈಗಿನ ರಾಜಕಾರಣಿಗಳೋ ಬೇಡಬಿಡು ಬೈಯೋಕೆ ಮಾತುಗಳೇ ಇಲ್ಲ.
ಇದೀಗ ತಾನೆ ಬೆಂಗಳೂರಿನ ಟಾರು ರಸ್ತೆಯಲ್ಲಿ ಪಯಣ ಮಾಡುತ್ತಿದ್ದೇನೆ. ಆಹಾ ಅದೇನು ಪುಣ್ಯ ಮಾಡಿದ್ನೋ. ಇಷ್ಟು ಚೆಂದನೆಯ ರಸ್ತೆಯಲಿ ಇಡೀ ದೇಶದ ವಿವಿಧ ಬಗೆಯ ಜನರೆಲ್ಲ ನನ್ನ ಬಸ್ನಲ್ಲಿದ್ದಾರೆ. ಇಲ್ಲಿ ಕನ್ನಡಿಗರೆಂದೆನಿಸಿಕೊಂಡವರನ್ನು ಹುಡುಕೋದು ಕಷ್ಟ ಬಿಡು. ಇನ್ನುಳಿದಂತೆ ಎಲ್ಲರೂ ಇಲ್ಲಿಯೇ ಬಂದು ಝಂಡಾ ಹೂಡಿದೋರೆ. ಇಲ್ಲಿ ಕನ್ನಡ ಮಾತಾಡೋರನ್ ದುರ್ಬೀನ್ ಹಾಕಿಕೊಂಡು ಹುಡುಕಬೇಕು. ಅದರಲ್ಲೂ ನನ್ ಬಸ್ನಲ್ಲಿ ಎಲ್ಲರೂ ಫಾರಿನ್ಗುಟ್ಟಿದೋರು ಅನ್ನೋ ರೀತಿ ಇಂಗ್ಲಿಶ್ ಮಾತಾಡ್ತಾರೆ. ಅದೇನು ಇಂಗ್ಲಿಶ್ ಫ್ಲುಯೆನ್ಸ್ ಅಂತೀರಾ? ಬಹುಶಃ ಇಷ್ಟು ಚೆಂದನೆಯ ಇಂಗ್ಲಿಶ್ನ್ನ ಈ ಬ್ರಿಟೀಷರು ಮಾತಾಡಲಿಕ್ಕಿಲ್ಲ ಬಿಡಿ. ಎಲ್ಲರೊಳಗೊಂದು ನಾವು ಎನ್ನುವಂತೆ ಕರುನಾಡು ಬೆಂಗಳೂರು ಬೆಳಿದಿದೆ ಬಿಡಪ್ಪಾ. ಅದೇನಾದ್ರೂ ಆಗಲಿ ನಾನು ಮಾತ್ರ ಓಲ್ವಾ ಬಸ್ ಆಗಿ ಹುಟ್ಟಿದ್ದೇ ನನ್ನ ಸಾರ್ಥಕತೆಯೆಂದು ಸ್ನೇಹಿತರಾದ ಬಿಎಂಟಿಸಿ ಬಸ್ಗಳೊಂದಿಗೆ ತನ್ನ ಎಂದಿನ ಹಮ್ಮುಬಿಮ್ಮುನೊಂದಿಗೆ ರಾತ್ರಿ ಹರಟೆಯಲ್ಲಿ ಮಗ್ನನಾಗಿತ್ತು.
ಬೆಂಗಳೂರಿನಂತಹ ಬೆಂಗಳೂರಿನಲ್ಲಿ ಅದು ಫುಲ್ ಏಸಿಯಾಗಿ ಬಿಲ್ಡ್ ಆಗಿರುವ ವೋಲ್ವಾ ಬಸ್ ನಾನಾಗಿರುವುದು. ಅದರಲ್ಲಿ ಚೆಂದುಳ್ಳಿ ಚೆಲುವೆಯೆರೇ ಹೆಚ್ಚಾಗಿ ನನ್ನ ಬಸ್ನ್ನೇ ಕಾರಿಸಿರುವುದು. ಹೋ ಸುಪರ್ ಸುಪರ್ ಅಂತ ಹೆಚ್ಚುದ್ದು ಕುಣಿತ್ತಿತ್ತು. ಇನ್ನು ಪ್ರೇಮಿಗಳಿಗೆ ಅಚ್ಚುಮೆಚ್ಚಿನ ಬಸ್ ನಾನೇ ಗೊತ್ತಾ? ಎಂದು ರಾತ್ರಿ ಹೊತ್ತಿನಲ್ಲಿ ಹುಚ್ಚೆದ್ದು ‘ಕೆಂಪ್ಯಾ’ ಕುಣಿದಿದ್ದೇ ಕುಣಿದಿದ್ದು.
ಇದನ್ನು ನೋಡಿದ ಇನ್ನಿತರೆ ಮಾಮೂಲಿ ಬಸ್ನ ಸ್ನೇಹಿತರು ಇವನಿಗೆ ಜಾಸ್ತಿ ಕೊಬ್ಬು ಬಂದುಬಿಟ್ಟಿದೆ. ಯಾವನಾದ್ರೂ ಸರಿಯಾಗಿ ಗುದ್ದಿ, ಡಿಚ್ಚಿ ಕೊಟ್ಟು ಎಕ್ಸಿಡೆಂಟ್ ಮಾಡಿದ್ರೆ ಆಗ ಗೊತ್ತಾಗುತ್ತೆ. ‘ಮಗ ಸ್ಕ್ರಾಪ್ಆಗಿ ಮೂಲೆಗೆ ಬೀಳ್ತಾನೆ. ಆಗ ಇಲ್ಲಿ ಎಲ್ಲೋ ಪೀಣ್ಯನೋ ಮತ್ತೆಲ್ಲೋ ಕಡೆ ಹಾಕ್ತಾರಲ್ಲ ಆಗ ಗೊತ್ತಾಗುತ್ತೆ. ಬೊ… ನನ್ಮಗ್ನೆ ದಿನಾಲೂ ಏರ್ಪೋರ್ಟ್ ರೋಡ್, ಆಗಾಗ “ಜಯನಗರ, ಮಲ್ಲೇಶ್ವರಂಗೆ ಕಣ್ಣಾಕಿ ಬರ್ತಾನಲ್ಲ. ಅದಕ್ಕೆ ನನ್ಮಗನಿಗೆ ಕೊಬ್ಬು ಎಂದು ಕೆಂಪ್ಯಾನ ದೋಸ್ತ್ ಬಿಎಂಟಿಸಿಯ ಡಬಲ್ ಡೋರ್ ಬಸ್ ‘ಸೀನ’ ತನ್ನ ಇತರೆ ಸ್ನೇಹಿತರೊಂದಿಗೆ ಪಿಸುಪಿಸು ಮಾತಾಡಿ ಕೊಳ್ಳುತ್ತಿದ್ದ.
‘ಜಾಸ್ತಿ ಉರಿಬೇಡ್ವೋ ಮಗ. ಎಗರಾಡಿದೋನು ಜಂಬ ಕೊಚ್ಚಿಕೊಂಡೋನು ಬಹಳ ದಿನ ಇಂಗೆ ಇರಂಗಿಲ್ಲ ಅಮ್ಮಣ್ಣಿ. ಒಳ್ಳೆ ಮದುವಣಗಿತ್ತಿಯಂತೆ ನುಲುತಿದ್ಯಾ. ಯಾವಾಗಲೂ ಒಂದೇ ರೀತಿ ಕಾಲ ಇರೋದಿಲ್ಲ ಎಂದು ಕೆಂಪ್ಯಾಗೆ ಡಕೋಟ ಬಸ್ನ ಡಾನಣ್ಣ ಕಾಮೆಂಟ್ ಮಾಡ್ತಿದ್ದ. ಆದ್ರೆ ಇದೆಲ್ಲವನ್ನು ಕೇಳೋ ಸ್ಥಿತಿಯಲ್ಲಿ ಕೆಂಪ್ಯಾ ಇದ್ದಿಲ್ಲ.
‘ಹೊಟ್ಟಹುರಿ ನನ್ಮಕ್ಕಳೆ ನಿಮಗೆ. ನಾನು ತುಂಬಾ ಸೆಕ್ಸಿಯಾಗಿರೋದು. ನನ್ನ ಬಸ್ನ ಸ್ಪೆಷಾಲಿಟಿ ಏನು ಅಂತ ನಿಮಗೆ ಗೊತ್ತಿಲ್ಲೋ ಕಣ್ರೋ. ಸಿಎಂ, ಹೋಮ್ ಮಿನಿಸ್ಟರ್ ಸಹ ನನ್ನ ಬಸ್ಲ್ಲೇ ಕೂತಿದ್ದಾರೆ. ನೀವೆಲ್ಲ ಹಾದಿಬೀದಿಲಿ ಹೋಗು ಜನರೆಲ್ಲ ಕರೆಕೊಂಡು ಹೋಗೋ ಮಾಮೂಲಿನವರು. ನಾನು ಚೆಂದುಳ್ಳಿ ಚೆಲುವ. ಫುಲ್ ಎಸಿಯಲ್ಲಿ ನಗರದ ಪ್ರಮುಖ ರಸ್ತೆಗಳು, ಪ್ರಮುಖ ಸ್ಥಳಗಳಿಗೆ ಹೋಗೋನು ನಾನು. ಐ ಎಮ್ ದಿ ಬೆಸ್ಟ್ ಯು ನೊ’ ಎಂದೇ ಜಂಬ ಕೊಚ್ಚಿಕೊಳ್ಳುತ್ತಿತ್ತು.
ಇವನಿಷ್ಟೆ. ಇವನಿಗೇನು ಬುದ್ದಿ ಹೇಳಿದ್ರೂ ಕೇಳೋಲ್ಲ. ಆಕಾಶದಲ್ಲಿ ಹಾರೋಡನ್ನ ಕೆಳಗೆ ಬಾರೋ ಅಂದ್ರೆ ಯಾರಾದ್ರೂ ಬರ್ತಾರ. ಹಾಳಾಗಿ ಹೋಗ್ಲಿ ನಾಳೆ ಮತ್ತೆ ಬೆಳಗ್ಗೆ ಎದ್ದೇಳಬೇಕು. ಈಗಲೇ ಲೇಟಾಯ್ತು. ಮಲಗ್ರೋ. ಅದೇ ಬಾಣಸವಾಡಿ, ಪೀಣ್ಯ, ಯಶವಂತಪುರಕ್ಕೆ ಹೀಗೆ ನಮ್ಮ ನಮ್ಮ ರೌಂಡ್ಸ್ಗಳಿಗೆ ಹೋಗಬೇಕು. ಬೆಳಗ್ಗೆ ಬೇರೆ ನಮ್ಮ ಡ್ರೈವರ್ ಸಾಬ್ ಬಂದ್ ಒಂದೇಸಮನೆ ನಮ್ಮ ಬಾಗೆ ಬೀಗ ಹಾಕಿ ಒಂದೇ ಸಮನೆ ನಾವು ಸ್ಟಾರ್ಟ್ ಆಗೋವರೆಗೂ ಕಿರ್ರ್ ಅನ್ನಿಸುತ್ತಾನೆ. ನಾವ್ ಬಂಡ್ ನನ್ನ ಮಕ್ಳು ಬೇರೊಬ್ಬರು ನೂಕಿದರೇ ನಾವು ಚಾಲೂ ಆಗೋರು. ಅಲ್ಲಿಯವರೆಗೂ ನಿದ್ರೆಂದ ಎದ್ದೇಳೋರಲ್ಲ. ನಮ್ಮ ನಿದ್ರೆಯೇ ಮುಗಿದಿರೋಲ್ಲ. ಎದ್ದು ಮೈಗೆಲ್ಲ ನೀರು ಹಾಕಿ ಸ್ನಾನ ಮಾಡಿಸ್ತಾನೆ. ನಮ್ಮ ಮೂತಿನಂತೂ ಪೇಪರ್ನಿಂದ ಒಂದೇ ಸಮನೆ ತಿಕ್ಕಿ ತಿಕ್ಕಿ ನಿದ್ರೆನೇ ಹಾಳ್ ಮಾಡಿಬಿಡ್ತಾನೆ. ಬೆಳಗ್ಗೆ ಡಿಪೋದಿಂದ ಕರೆದುಕೊಂಡೂ ಹೋದ್ರೂ ನಾನ್ಸ್ಟಾಪ್ ಎಂಬಂತೆ ಸಾವಿರಗಟ್ಟಲೆ ಜನರನ್ನು ಅಲ್ಲಿಂದ ಇಲ್ಲಿಂದ – ಇಲ್ಲಿಂದ ಅಲ್ಲಿಗೆ ಕರೆದುಕೊಂಡೇ ಹೋಗೋದೇ ಆತು. ನಮಗೂ ರೆಸ್ಟ್ ಕೊಡಬೇಕು ಅನ್ನೋ ಕಾಮನ್ಸೆನ್ಸ್ ಇಲ್ಲ. ಅದೆಷ್ಟೋ ಪ್ರಾಬ್ಲಂ ಇದ್ರೂ ರುಯ್ ಎಂದು ಓಡುತ್ತಿರಬೇಕು. ಅಷ್ಟಕ್ಕೂ ನಾವೆಲ್ಲ ಕಂಡೀಷನ್ನಲ್ಲಿ ಇಲ್ಲದೋರು. ಯಾವಾಗಲೋ ಒಂದು ಸಾರಿ ನಮ್ಮನ್ನು ಸರ್ವಿಸಿಂಗ್ ಮಾಡಿಸಿದರೆ ಇನ್ನೇನ್ ಆಗ್ತೀಯೋ ಎಂದು ಅಲವತ್ತುಕೊಳ್ತಾ ವಿಶಾಲವಾದ ಬಸ್ ಡಿಪೋದಲ್ಲಿ ನಿದ್ರೆಗೆ ಜಾರಿದವು ಬಸ್ಗಳು.
ಆದ್ರೆ ಕೆಂಪ್ಯಾ ಇನ್ನುಳಿದವರೆಲ್ಲ ನಿದ್ರೆಗೆ ಜಾರಿದ್ರೂ ಒಳ್ಳೆ ಫಿಗರ್ ಹುಡುಗಿ ತನ್ನ ನೋಡಿ ಲವ್ ಮಾಡ್ತಿದಾಳೇನೋ ಎಂಬಂತೆ ಅಲ್ಲಿಯೇ ಗಂಗ್ನಂ ಸ್ಟೈಲ್ನಲ್ಲಿ ಡ್ಯಾನ್ಸ್ ಮಾಡಲು ಟ್ರೈ ಮಾಡ್ತಿದಾನೆ. ಫುಲ್ ಜೂಮ್ಲ್ಲಿದ್ದ ಕೆಂಪಗಿರುವ ಕೆಂಪ್ಯಾಗೆ ತನ್ನನ್ನು ತಾನೇ ಮುಟ್ಟಿಕೊಂಡು ಹೋ ಎಂದು ನಾಚಿಕೊಂಡು ‘ಐ ಅಮ್ ಸೆಕ್ಸೀ’ ‘ಐ ಅಮ್ ದ ಬ್ಯೂಟಿಫುಲ್ ಫಿಗರ್’ ಅಂತ ಹುಚ್ಚೆದ್ದು ಕುಣೀತಿದ್ದ.
ಒಂದಿನ

ದಸರಾ ಹಬ್ಬದ ವಿಶೇಷ. ಆಯುಧ ಪೂಜೆಂದಾಗಿ ಕೆಂಪ್ಯಾ ಫುಲ್ ಕೆಂಪುಕೆಂಪಾಗಿ ಕಾಣ್ತಿದ್ದ. ಆತನ ಡ್ರೈವರ್ ಫಾರಿನ್ನಲ್ಲಿ ಸ್ನಾನ ಮಾಡಿಸುವಂತೆ ಮಿಷನ್ ಮೂಲಕ ದೊಡ್ಡ ಬ್ರಷ್ಗಳ ಸ್ನಾನ ಮಾಡಿಸಿದ್ದ. ಆದರೆ ಅದೇ ಡಿಪೋದಲ್ಲಿದ್ದ ಇನ್ನುಳಿದವರಿಗೆ ಅವರವರ ಡ್ರೈವರ್ಗಳು ಪೇಪರ್ ಹಾಕಿ ಅವರ ಮೂತಿನ ಒಂದೇ ಸಮನೆ ತೊಳಿತಿದ್ದರು. ಒಳ್ಳೆ ಎಮ್ಮೆಗಳಿಗೆ ರಸ್ತೆಲಿ ನಿಲ್ಲಿಸಿ ನೀರು ಉಗ್ಗುವಂತೆ ಮಾಡುತ್ತಿದ್ದರು. ಕೆಂಪ್ಯಾ ಅದಾಗಿತಾನೆ ಫ್ರೆಶ್ಶಾಗಿ ಸ್ನಾನ ಮಾಡಿ ಹೊರಬಂದವನಿಗೆ ವಿಶೇಷವಾದ ಪೂಜೆಯನ್ನು ಆತನ ಡ್ರೈವರ್, ಕಂಡೆಕ್ಟರ್ ಸಾಹೆಬ್ರು ಸಲ್ಲಿಸಿದ್ದರು. ಬಿಳಿಯಂಗಿ ಹಾಕಿಕೊಂಡದ್ದ ಅವರು ತನ್ನ ಸೇವಕರೇನೋ ಎಂಬಂತೆ ಕೆಂಪ್ಯಾಗೆ ಪೂಜಾ ವಿಧಿವಿಧಾನಗಳ ಮೂಲಕ ಕೈಕಂಕರ್ಯಗೊಂಡಿದ್ದರು.
ಡ್ಯೂಟಿ ಸಂಜೆ ಹೊತ್ತಿಗೆ ಮುಗಿಬೇಕಾಗಿತ್ತು. ಕೆಂಪ್ಯಾ ಡ್ರೈವರ್ ಮೆಹಮೂದ್ ಅವರ ಮಗಳಿಗೆ ಹುಷಾರಿಲ್ಲ ಅಂತ ಹೇಳಿ ಬಂದಿದ್ದಿಲ್ಲ. ಅಂದು ಡ್ಯೂಟಿಗೆ ನನ್ನ ಮೇಲೆ ಸವಾರಿ ಮಾಡಲು ಮತ್ತೊಬ್ಬ ಬಿಎಂಟಿಸಿ ಡಬಲ್ ಡೋರ್ ಬಸ್ ಡ್ರೈವರ್ ಶಂಕರಪ್ಪ ಬಂದಿದ್ದ. ಅವನ್ ಹೆಸರನ್ನು ಕೇಳಿದ್ರೆ ಇವನೇನು ನನ್ನ ಓಡಿಸ್ತಾನೆ. ಇವನ್ಯಾಕ್ ಬಂದನಪ್ಪ ನನ್ನ ಡ್ರೈವ್ ಮಾಡಲು ಅಂತ ಮುಖ ಹಿಂಡಿದ.
ಡಬಲ್ಡೋರ್ ಡ್ರೈವರ್ ಶಂಕರಪ್ಪ ಕೆಂಪ್ಯಾ ಹತ್ರ ಬರುತ್ತಿದ್ದಂತೆ ಒಂದೇ ಸಮನೆ ಗಮ್ ಅನ್ನೋ ವಾಸನೆ ಹೊಡಿತಿತ್ತು. ರಾತ್ರಿ ಕುಡಿದ ವಾಸನೆ ಇನ್ನು ಗಮ್ ಅಂತ್ತಿತ್ತು. ಈಗಲೂ ಕುಡಿದಾದೇನೋ ಅನ್ನೋ ರೀತಿ ವಾಸನೆ ಬರುತ್ತಿತ್ತು. ಯರ್ರಾಬಿರ್ರಿ ಸವಾರಿ ಮಾಡೋದ್ರಲ್ಲಿ ಎಕ್ಸ್ಪರ್ಟ್ ಆಗಿರುವ ಈತನಿಗೆ ನನ್ನಂತ ಐಶಾರಾಮಿ ಓಲ್ವಾ ಬಸ್ ಕೊಡೋದಕ್ಕೆ ಡಿಪೋ ಮ್ಯಾನೇಜರ್ ಕರಿಬಸಪ್ಪ ಅದ್ಹೇಗೆ ಒಪ್ಪಿಕೊಂಡ. ಇಂಥವನ್ನೆಲ್ಲ ಒಂಚೂರು ತಿಳಿದುಕೊಳ್ಳಬೇಕು. ಹೊಸ ಟೆಕ್ನಾಲಜಿ ಗೊತ್ತಿಲ್ಲದೇ ಇರೋ ಡ್ರೈವರ್ಗಳೆಲ್ಲ ನನ್ನ ಸವಾರಿ ಮಾಡೋಹಾಗಾಯ್ತು ಅಂತ ಕೆಂಪ್ಯಾ ಹಣಿ ಹಣಿ ಬಡಕೊಂಡ.
ಏನ್ ಮಾಡೋಕಾಗುತ್ತೆ. ನಮ್ಮ ಮೆಹಮೂದ್ ಸಾಹೇಬ ಇದ್ದಿದ್ರೆ ಅದೆಷ್ಟು ಚೆಂದ ಓಡಿಸ್ತಿದ್ದ. ಗೇರ್ನ್ನು ಮೆಲ್ಲಗೆ ಹಾಕಲೋ ಬೇಡ್ವೋ ಎಂಬಂತೆ ಹಾಕುತ್ತಿತ್ತು. ಇದೊಂದು ದಿನ ಹೇಗೋ ಸಹಿಸಿಕೊಳ್ಳೋಣ. ನಾಳೆ ನಮ್ಮ ಮೆಹಮೂದ್ ಸಾಹೆಬ್ ಬರ್ತಾನಲ್ಲ ಅಂತ ಕೆಂಪ್ಯಾ ತೆಪ್ಪಗಾದ.
ಶಂಕರಪ್ಪ ಚಾವಿ ಹಾಕಿ, ನನ್ನ ಕೀಯನ್ನು ಜೋರಾಗಿ ಹಿಂಡಿದ. ಒಂದೇ ಹೊಡೆತ, ರ್ರಿ.. ರ್ರಿ… ಅಂತ ಸ್ಟಾರ್ಟ್ ಆದೆ. ಇದನ್ನೇ ನಯವಾಗಿ ಸ್ಟಾರ್ಟ್ ಮಾಡಬೋದಿತ್ತು. ಇವಯ್ಯನಿಗೆ ನನ್ನಂತ ಎಸಿ ಕೋಚ್ ಓಲ್ವೋ ಬಸ್ ಓಡಿಸೋದು ಇದೇ ಮೊದಲು ಅನಿಸುತ್ತೆ. ಅದಕ್ಕೆ ನನ್ನ ಮಾಮೂಲಿ ಡಬಲ್ ಡೋರ್ ಬಸ್ ಅಂದುಕೊಂಡು ಕಿವಿ ನೋವಾಗುವಂತೆ ಚಾಲೂ ಮಾಡ್ತಾನೆ, ಯ್ಯೂಸ್ಲೆಸ್ ಫೆಲೋ ಡ್ರೈವರ್ ಅಂತ ಮನಸಲ್ಲೇ ಕೆಂಪ್ಯಾ ಬೈದುಕೊಂಡ.
ಡ್ರೈವರ್ ಶಂಕರಪ್ಪ ಇದೇ ಮೊದಲ ಬಾರಿಗೆ ಎಸಿ ಬಸ್ ಹತ್ತೋ ಭಾಗ್ಯ ಬಂತಲ್ಲ ಅನ್ನೋ ಖುಗೆ ರೊರ್ ರೊಯ್ ಎಕ್ಸ್ಲೆಟರ್ ಕೊಟ್ಟು ಡಿಪೋ ತುಂಬ ಒಂದು ರೌಂಡ್ ನನ್ನ ಮೈಮೂಳೆ ಎಲ್ಲ ಫ್ರೀ ಆಗೋ ಹಾಗೆ ಓಡಿಸಿದ. ಬಲು ಖುಪಟ್ಟ ಶಂಕರಪ್ಪ ಈ ದಿನಕ್ಕಾಗಿ ಅದೆಷ್ಟುದಿನ ಟ್ರೈ ಮಾಡಿದ್ದೆ. ಪ್ರತಿದಿನ ಇದನ್ನೇ ಓಡಿಸಿದರೆ ನನ್ ಲೈಫು ಸಾರ್ಥಕವಾಗುತ್ತೆ ಅಂತ ಶಂಕರಪ್ಪ ಅಂದುಕೊಳ್ತಾ ನಾನೇನ್ ಆಕಾಶದಲ್ಲಿ ಡ್ರೈವ್ ಮಾಡುತ್ತಿದ್ದೇನೇನೋ ಅನ್ನುವಂತೆ ಡಿಪೋರಲ್ಲಿ ರೌಂಡ್ ಹೊಡಿತಿದ್ದ. ಇದನ್ನು ಓಡಿಸಲು ನಾನು ಡಿಪೋ ಮ್ಯಾನೇಜರ್ಗೆ ಲಂಚ ಕೊಟ್ಟು ಡ್ಯೂಟಿ ಹಾಕಿಸಿಕೊಂಡ ವಿಷಯ ಯಾರಿಗೂ ಗೊತ್ತಿಲ್ಲ. ಇನ್ನೊಂದಷ್ಟು ಕೊಟ್ಟು ಇದೇ ಬಸ್ನ್ನು ನಾನೇ ಪರಮ್ನೆಂಟ್ ಮಾಡಿಕೊಳ್ಳಬೇಕು. ಇಲ್ಲಾಂದ್ರೆ ಅದೇ ಕಿತ್ತೋಗಿರೋ ಡಬಲ್ ಡೋರ್ ಬಸ್ನ್ನು ಡ್ರೈವ್ ಮಾಡ್ತಿದ್ರೆ ಅದೇನೋ ಬೇಜಾರು, ಬಲು ಬೋರು, ಥೂ ಒಂದು ಬಸ್ಸಾ ಅಂತ ಆಗ ಶಂಕ್ರಪ್ಪನಿಗೆ ಅಂದನಿಸಿತು.
ಇದೇನಪ್ಪಾ ಒಂದೇ ಸಮನೆ ಡಿಪೋದಲ್ಲಿ ಯರ್ರಾಬಿರ್ರಿ ಡ್ರೈವ್ ಮಾಡ್ತಾನೆ, ಇನ್ನು ಹೊರಗೆ ಹೋದ್ರೆ ಈತ ನನ್ನ ಇನ್ನು ಹೆಂಗ್ ಬೇಕಾದ್ರೆ ಹಂಗೆ ಡ್ರೈವ್ ಮಾಡ್ತೇನೇನೋ ದೇವ್ರೆ ಮಂಜುನಾಥ ಈತನಿಂದ ನನ್ನ ಕಾಪಾಡಪ್ಪ. ನಾನು ಇನ್ನೇನೋ ಆಸೆ ಇಟ್ಟುಕೊಂಡಿದೀನಿ. ನಂಗೀನ್ನೂ ಮದುವೆಯಾಗಿಲ್ಲ. ಒಳ್ಳೆ ಫಿಗರ್ ರೀತಿ ಕೆಂಪ್ ಕೆಂಪಗಿರುವ ನಾನು ಇನ್ನು ಲೈನ್ ಹೊಡೆದು ಎಂಜಾಯ್ ಮಾಡಬೇಕಾಗಿದೆ. ಈತನ ಡ್ರೈವಿಂಗ್ ನೋಡ್ತಿದ್ರೆ ನಂಗೇನೋ ಇವತ್ತೇ ಸ್ಕ್ರಾಪ್ ಆಗೋ ಲಕ್ಷಣಗಳು ಕಾಣ್ತಿವೆ ಅಂತ ಕೊಂಚ ಭಯದಲ್ಲಿಯೇ ಕೆಂಪ್ಯಾ ದೇವರಲ್ಲಿ ಮನನ ಮಾಡಿಕೊಳ್ಳುತ್ತಿದ್ದ.
ಅಂತೂ ಡಿಪೋದಿಂದ ಕೆಂಪ್ಯಾನ ಕರಕಂಡು ಡ್ರೈವ್ ಮಾಡ್ತಾ ಹೊರಬಂದ. ಪಕ್ಕದವರಿಗೆ ಗೊತ್ತಾಗದೇ ಇರುವ ರೀತಿಯ ಸೌಂಡ್ ಸಿಸ್ಟ್ಮ್ ಇದ್ದ ನನ್ನನ್ನು ನಿಮಿಷಕ್ಕೊಂದು ಬಾರಿಯಂತೆ ಸೌಂಡ್ ಹಾರ್ನ್ ಮಾಡುತ್ತಿದ್ದ. ಎರಡೆರಡು ಸ್ಟೈಲ್ನ ಹಾರ್ನ್ಗಳನ್ನು ಖುಖುಂದಲೇ ಜನರು, ಟ್ರಾಫಿಕ್ ಇಲ್ಲದಿರೋ ಟ್ರೈಮಲ್ಲೂ ಬಾರಿಸುತ್ತಿದ್ದ. ಇದು ಕೆಂಪ್ಯಾನಿಗೆ ಸಿಟ್ಟುಬರ್ತಿತ್ತು. ಅದ್ಯಾವ್ ಸೀಮೆ ಡ್ರೈವರ್ ಅದಾನ್ಲೇ ಇವನು ಅಂತ ಬೈಕೊಳ್ತಿದ್ದ.
ಮೆಜೆಸ್ಟಿಕ್ನ ಬಿಎಂಟಿಸಿ ಬಸ್ಸ್ಟ್ಯಾಂಡ್ನತ್ರ ಬರುತ್ತಿದ್ದಂತೆ ‘ಹಾಹಾ ರಂಗು ರಂಗೂ ಬಣ್ಣದ ಹುಡಿಗೀರು, ಸ್ಲೀವ್ಲೆಸ್ ಹೆಣ್ಣೈಕ್ಳು, ಅವರ ಹಿಂದೆ ಪಡ್ಡೆಹುಡಗರು, ಕೆಲಸಕ್ಕೆ ಹೋಗೋ ಹುಡುಗಿಯಂತಹ ಆಂಟೀರು ಎಲ್ಲರೂ ನನ್ ನಿಲ್ಲೋ ಜಾಗದಲ್ಲಿ ಕಾಯುತ್ತಿದ್ದರು. ಹಾ ಮೆಲ್ಲಕ್ ನನ್ನ ಇಲ್ಲಿಗೆ ನಿಲ್ಲಿಸೋ ನನ್ ಸ್ಟಾಪ್ ಇಲ್ಲಿಯೇ ಐತೆ ಅನ್ನೋ ಹಂಗೆ ಕೆಂಪ್ಯಾ ಒದರ್ತಿದ್ರೆ. ಆದ್ರೆ ಇದೆಲ್ಲ ಆ ಹೊಸಬ ಡ್ರೈವರ್ ಶಿವಣ್ಣನಿಗೆ ಅದೆಲ್ಲಿ ಗೊತ್ತಾಗಬೇಕು, ಕನ್ಫ್ಯೂಸ್ ಆಗಿ ಆ ಸ್ಟಾಪ್ ಬಿಟ್ಟು ಮುಂದಿನ ಸ್ಟಾಪ್ನಲ್ಲಿ ನಿಲ್ಲಿಸಿದ.
ಪಾಪಾ ದಿನಾ ನನ್ ಬಸ್ಗೆ ಹೋಗೋರೆಲ್ಲ, ಅವರೆಲ್ಲ ನಡೆದ್ರೆ ಪಾದ ಸವಿತಿದಾನೇನೋ ಎಂಬಂತೆ ನನ್ನನ್ನು ಹಾಗೂ ಡ್ರೈವರ್ನನ್ನು ಬೈದುಕೊಳ್ತಾ ಹೆಜ್ಜೆ ಹಾಕ್ತಾ ನನ್ನ ಬಸ್ ಹತ್ತಿದರು.
‘ಏನಯ್ಯಾ ಡ್ರೈವರ್ ಅಷ್ಟು ದೂರ ನಿಲ್ಸಿತಿಯಾಲ್ಲ, ನಿಂಗೆ ಗೊತ್ತಿಲ್ಲವಾ ಹಿಂದೆಯೇ ನಿಲ್ಲಿಸೋದು’ ಅಂತಂದಾಗ ದಡಬಡಾಸಿದ ಡ್ರೈವರ್ ಶಿವಣ್ಣ ‘ಸ್ವಾರಿ ಸಾರ್’ ಅಂತಂದ. ಇದು ನನಗೆ ಬಾಳ ಶೇಮ್ ಆತು. ಆಗಲೇ ಬಡಕೊಂಡೆ, ನಿಂಗೆ ನನ್ನ ಮಾತ್ ನಿಂಗೆ ಅರ್ಥವಾಗಲ್ಲ, ನಾನೇನ್ ಮಾಡಲಿ ಹೇಳು ಅಂತ ಕೆಂಪ್ಯಾ ಮತ್ತೊಮ್ಮೆ ಡ್ರೈವರ್ಗೆ ಬೈದುಕೊಂಡ.
‘ಹಾ ರೈಟ್’ ಅಂತ ನಮ್ಮ ಎಂದಿನಾ ಕಂಡೆಕ್ಟರ್ ಸೋಮಣ್ಣ ಹೇಳುತ್ತಿದ್ದಂತೆ ಕಸಕ್ ಅಂತ ಎಕ್ಸ್ಲೇಟರ್ ಬಿಟ್ಟು, ಕುದೆರಿ ಓಡಿಸೋಂಗ ರುಯ್ ರುಯ್ ಅಂತ ಓಡಿಸ್ತ. ಒಂದುಕ್ಷಣ ಹಿಂದೆಹೋಗಿ ಮುಂದೆ ಬಂದ ಪ್ರಯಾಣಿಕರೆಲ್ಲ ‘ಇವನ್ಯಾನ್ ಅಡ್ಡಕಸಬಿ ಡ್ರೈವರ್ ಇದ್ದಾಂಗ್ ಇದಾನಲ್ಲ, ಹೊಸಬ ಇರಬೇಕು ಅಂತನಿಸುತ್ತೆ, ಇವನ ಬಸ್ನಾಗ ಬರಬಾರದಿತ್ತು’ ಅಂತ ಹೇಳಿದರು. ಹುಡುಗಿರು ಇದನ್ನೇ ಎಂಜಾಯ್ ಅನ್ನೋಹಾಗೇ ‘ಹೋ ಎಷ್ಟು ಹಾರಿಬಲ್ ಡ್ರೈವ್ ಇದು, ಆದ್ರೆ ಡಿಫರೆಂಟಾಗಿದೆ ಡ್ರೈವಿಂಗ್’ ಅಂತ ಕಾಲೇಜು ಕನ್ಯೆಯರು ಹೇಳುತ್ತಿದ್ದರೆ, ಇನ್ಕಲೆವ್ರು ಹುಡುಗೀರು ನಂಗೂ ಇದಕ್ಕೂ ಸಂಬಂಧವಿಲ್ಲವೆನ್ನುವಂತೆ ಫೋನ್ನ ಸಂಭಾಷಣೆಯಲ್ಲಿ ತಲ್ಲೀನರಾಗಿದ್ದರು.
ಅದರಲ್ಲೂ ಸ್ಲೀವ್ಲೆಸ್ ಹುಡುಗಿಯೊಬ್ಬಳು ‘ವೇರ್ ಆರ್ ಯೂ ಡಿಯರ್, ಐಯಮ್ ವೇಟಿಂಗ್ ದೇರ್ ಅಟ್ ಲಾಂಗ್ ಟೈಮ್ ಯು ನೋ. ಐ ವಾಂಟ್ ಎ ಗೋಲ್ಡ್ ರಿಂಗ್. ಓಕೆ ಸ್ವೀಟ್ ಹಾರ್ಟ್ ಬೈ’ ಅಂತ ಫೋನ್ಗೆ ಮುದ್ದಿಟ್ಟು ಹೇಳುತ್ತಿದ್ದ ಕೇಳಿ ಕೆಂಪ್ಯಾ ಇನ್ನಷ್ಟು ಕೆಂಪಾದ.
ಕಾರ್ಪೋರೇಷನ್ ದಾಟಿ ಮುನ್ನಗ್ಗಿಸುತ್ತಿದ್ದ ನನ್ನನ್ನು ಹಾಯಾಗಿ ಮುನ್ನಡೆಯುತ್ತಿದ್ದೆ. ಅದ್ರೆ ನಿಜಕ್ಕೂ ಅಡ್ಡಕಸಬಿ ಎನ್ನುವಂತೆ ಯರ್ರಾಬಿರ್ರಿಯಾಗಿ ಸ್ಟಿಯರಿಂಗ್ನ್ನು ತಿರುಗಾಡಿಸ್ತಿದ್ದ. ಹೊಸ ಟೆಕ್ನಾಜಲಿಯ ಸ್ಟಿಯರಿಂಗ್ ಅನ್ನೋದು ಮರೆತು ತನ್ನ ಹಳೇ ಡಬಲ್ ಡೋರ್ಬಸ್ ಎನ್ನುವಂತೆ ಟರ್ನ್ಗಳಲ್ಲಿ ತಿರುಗಿಸುತ್ತಿದ್ದ. ‘ಹೇ ವಾಟ್ ಮ್ಯಾನ್ “ಗೆ, ಜಾತ್ರಿಗೆ ಹೋಗೋ ಲಾರಿ ರೀತಿ ಡ್ರೈವ್ ಮಾಡ್ತಿದಿ, ಡ್ರೈವಿಂಗ್ ಬರ್ತಾದ ಇಲ್ವಾ’ ಅಂತ ಅಲ್ಲಿಯ ಸ್ಲಿಮ್ಮಾಗಿ, ಟ್ರಿಮ್ಮಾಗಿದ್ದ ಅಜ್ಜ ಕೂಗಿದ.
ಕಂಡೆಕ್ಟರ್ ‘ಸಾರಿ ಸರ್’ ತನ್ನ ನಗುಮುಖದಲ್ಲೇಳಿ, ನಮ್ಮ ಮಹಮೂದ್ ಡ್ರೈವರ್ ಬರದೇಇದ್ದಕ್ಕೆ ಇನ್ನೇನೈತೋ ಇವತ್ತು, ಇವನು ನೋಡಿದ್ರೆ ಕೆತಬತಾ ಡ್ರೈವ್ ಮಾಡ್ತವನೆ, ಎಲ್ಲೋ ಇಕ್ತಾನೆ ಅನ್ನೋಹಾಗೆ ಕಾಣಸ್ತಿದೆ ಅಂತಂದುಕೊಂಡು ಪ್ರಯಾಣಿಕರಿಗೆ ಟಿಕೆಟ್ ಕೊಡ್ತಿದ್ದ.
ಹೋ ಇವನ ಡ್ರೈವಿಂಗ್ ನಂಗೆ ಹಿಡಿಸ್ತಿಲ್ಲ, ಅದೇನ್ ಹಿಂಗಿದಾನೆ ಮನುಷ್ಯ ಎಂದೂ ಎಸಿ ಓಲ್ವೋ ಬಸ್ ಕಂಡೋನಿಲ್ಲವೋ ಎನ್ನುವ ಹಂಗೆ ಓಡಿಸ್ತಿದಾನೆ, ಪಾಪಾ ಆ ಪಕ್ಕದ ಗಾಡಿಯನಿಗೆ ಕೊನೆಗೂ ಟಚ್ ಮಾಡಿಬಿಟ್ಟ. ಪುಣ್ಯಕ್ಕೆ ಏನ್ ಆಗಲಿಲ್ಲ, ಹೊರಗಡೆ ಕೂಗ್ತಿದ್ದ. ಒಳಗಡೆ ಯಾರಿಗೂ ಅದು ಗೊತ್ತಾಗಲಿಲ್ಲ. ಇನ್ನೇನ್ ಮಾಡ್ತಾನೋ ಈ ಮನುಷ್ಯ ಸುರಕ್ಷಿತವಾಗಿ ಸಂಜಿಗಿ ಡಿಪೋ ಮುಟ್ಟಿದ್ರೆ ಸಾಕಪ್ಪ ಮಂಜುನಾಥ ಅಂತ ದೇವರ ಮೊರೆಗೆ ಕೆಂಪ್ಯಾ ಹೋಗಿದ್ದ.
ನಿಮ್ಹಾನ್ಸ್ ದಾಟಿ ಯರ್ರಾಬಿರ್ರಿ ನನ್ನನ್ನು ಮುನ್ನುಗ್ಗಿಸುತ್ತಿದ್ದ ಡ್ರೈವರ್ ಶಂಕ್ರಣ್ಣ ಹೇ ಇಂಥ ಡ್ರೈವಿಂಗ್ ನನ್ನ ಜನ್ಮದಲ್ಲಿಯೇ ಮಾಡಿಲ್ಲ ಎಂಬ ಖುಯಲ್ಲಿ ಇನ್ನಷ್ಟು ಎಕ್ಸ್ಲೆಟರ್ ಒತ್ತಿದ. ಯಪ್ಪಾ ಇದೇನ್ ಹಿಂಗೊಡಿತಾನೆ, ಡೇಂಜರ್ ಡ್ರೈವಿಂಗ್ ಇದು, ಹಿಂಗೆ ಹೊಡಿದರೆ ನಾನು ಬದುಕೋದೂ ಕಷ್ಟ ಅಂತಂದುಕೊಳ್ಳುವಷ್ಟರಲ್ಲಿಯೇ
ದಪ್ ಅನ್ನೋ ದೊಡ್ಡ ಶಬ್ದ ಕೇಳಿಸ್ತು. ಯಪ್ಪೋ ಅನ್ನೋ ನೋವಿನ ಶಬ್ದ, ಏನೋ ಮಾಡ್ತಿದನಲ್ಲಪೋ ಇವನು ಅಂತಂದುಕೊಳ್ಳುವಷ್ಟರಲ್ಲಿಯೇ ಮುಂದಿದ್ದ ಬಸ್ ದಡಲ್ ಅಂತ ದೊಡ್ಡ ಸದ್ದಿನೊಂದಿಗೆ ಕೆಳಗೆ ಬಿತ್ತು.
ಡ್ರೈವರ್ ಶಂಕ್ರಣ್ಣ ಮೈಯೆಲ್ಲ ನೀರು ಹರಿತ್ತಿತ್ತು, ಎದೆ ಫುಲ್ ಸ್ಪೀಡಲ್ಲಿ ಹೊಡೆದುಕೊಳ್ಳುತ್ತಿತ್ತು. ಒಳಗಿದ್ದವರು ಆ, ಓ ಮೈ ಗಾಡ್ ಅಂತ ಜೋರಾಗಿ ಚೀರುತ್ತಿದ್ದರು. ಒಬೊಬ್ಬರು ಒಂದೊಂದು ಕಡೆ ಮುದಿರಿಕೊಂಡಿದ್ದರು, ಒಳಗಡೆ ಗಾಜು ಪುಡಿಪುಡಿಯಾಗಿತ್ತು, ಮುಖಕ್ಕೆ ಅಡ್ಡ ಇಟ್ಟ ಪರಿಣಾಮ ಗಾಜಿನ ಚೂರುಗಳು ಅವರ ದೇಹಕ್ಕೆಲ್ಲ ಸಣ್ಣದಾಗಿ ಬಡಿದಿದ್ದವರು. ಕಂಡೆಕ್ಟರ್ ತಲೆಯಲ್ಲಿ ರಕ್ತ ಸುರಿತ್ತಿತ್ತು, ಕೆಂಪ್ಯಾ ಒಂದು ಸೈಡ್ ನುಜ್ಜುಗುಜ್ಜಾಗಿದ್ದ, ಮುಂದೆ ಸ್ವಲ್ಪ ಮುಖ ಒತ್ತರಿಸುವಂತೆ ಕಂಡಿತ್ತು. ಆದ್ರೆ ಎದುರಿಗದ್ದ ವಾಹನಕ್ಕೆ ಮಾತ್ರ ದಪ್ ಅಂತ ಗುದ್ದಿದ ಪರಿಣಾಮ ಮಾಮೂಲಿ ಬಿಎಂಟಿಸಿ ಬಸ್ ದೊಪ್ ಅಂತ ಬಿದ್ದೇಬಿಟ್ಟಿತ್ತು.
ಪುಣ್ಯಕ್ಕೆ ಸಮಯೋಚಿತವಾಗಿ ಯೋಚಿಸಿದ ಶಂಕ್ರಣ್ಣ ಅಂಗೇ ಗಾಡಿ ಸ್ಟಾರ್ಟ್ ಮಾಡಿ ಸ್ವಲ್ಪ ಹಿಂದಕ್ ತಗಂಡ, ಸೈಡ್ ಮೂಲಕ ಸ್ವಲ್ಪ ದೂರದಲ್ಲಿ ಮುಂದೆ ನಿಲ್ಲಿಸಿದ್ದ.
ಬಿಎಂಟಿಸಿ ಬಿದ್ದ ಎಫೆಕ್ಟ್ಗೆ ಅಲ್ಲಿಯೆ ಬಿಎಂಟಿಸಿಯ ಟ್ಯಾಂಕರ್ ಸೋರಿದ್ದ ಪರಿಣಾಮ ದಗ್ ಅಂತ ಬೆಂಕಿ ಹತ್ತಿಕೊಂಡುಬಿಡ್ತು, ಅಷ್ಟರಲ್ಲಾಗಲೇ ಜನರು ಹೊರಗೆ ಬಂದಿದ್ದರು. ಕೆಂಪ್ಯಾ ಬಸ್ನಲ್ಲಿ ಅಮ್ಮಾ, ಮಮ್ಮ, ಡ್ಯಾಡಿ, ಓ ಗಾಡ್ ಅಂತ ಚೀರುತ್ತಿದ್ದರು. ಅಲ್ಲಿಗೆ ಸೌಂಡ್ ಮಾಡ್ತಾ ಆಂಬುಲೆನ್ಸ್ ಅಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ಕರೆದುಕೊಂಡರು. ಇಷ್ಟೆಲ್ಲ ಆದ್ರೂ ಡ್ರೈವರ್ ಶಂಕರಣ್ಣ ಜೀವದಿಂದ ಪಾರಾಗಿದ್ದ, ದೊಡ್ಡ ಮಟ್ಟದ ಗಾಯಗಳಾಗಿದ್ದವು. ಮುಖದಲ್ಲಿ, ಎದೆಗೆ ತಲಿಗೆ ಸಣ್ಣ ಗಾಜುಗಳು ಚುಚ್ಚಿದ್ದವು.
ಎಲ್ಲರನ್ನೂ ಆಂಬುಲೆನ್ಸನವರು ಎತ್ತಿಹಾಕಿಕೊಂಡರು ಹೋದರು ಕೆಂಪ್ಯಾನ್ ಹಾಗೂ ಬೆಂಕಿಯಲ್ಲಿ ನಂದಿಹೋಗುತ್ತಿರುವ ಡಕೋಟಾ ಬಿಎಂಟಿಸಿ ಬಸ್ನ್ನ.
ಮೂರ್ಛೆ ಹೋಗಿದ್ದ ಕೆಂಪ್ಯಾನಿಗೆ ನನ್ ಕತೆ ಮುಗಿತೂ ಅಂತ ತೆಪ್ಪಗೆ ದೂರದಲ್ಲಿ ನಿಂತಿದ್ದ. ಇದನ್ನು ನೋಡಿದ ಎಲ್ಲ ಬಿಎಂಟಿಸಿ ಬಸ್ಗಳು ಅಯ್ಯೋ ದೇವ್ರೆ ಎಂಥಾ ಕೆಲಸವಾಯ್ತಲ್ಲಪ್ಪ, ಪುಣ್ಯಕ್ಕೆ ಯಾರಿಗೇನ್ ಆಗಿಲ್ಲ, ಆದ್ರೆ ನಮ್ಮ ಡಕೋಟಾ ಬಸ್ ವೆಂಕ್ಯಾ ಹೊಂಟನಲ್ಲಪಾ ಅಂತ ವ್ಯಥೆಪಟ್ಟರು. ಆದ್ರೆ ಕೆಂಪ್ಯಾನ ಸ್ಥಿತಿನಾ ನೋಡಿ ಬಿಎಂಟಿಸಿ ಸೀನಾ, ದೊಡ್ಡಣ್ಣ, ಪೀಣ್ಯಾ ಗೋಪಿ ಎಲ್ಲರು ಮುಸಿಮುಸಿ ನಗುತ್ತಿದ್ದರು. ಮಗನೇ ಉರಿದೋರಿಗೆ ಅರ್ಧ ಹೋಳಿಗೇನೇ ಗೊತ್ತಾ ಅಂತ ನೋಡಿ ನಗುತ್ತಿದ್ದರು.
ಅಲ್ಲಿವರೆಗೆ ಮೂರ್ಛೆ ಬಿದ್ದಿದ್ದ ಕೆಂಪ್ಯಾ ಸ್ವಲ್ಪ ಸುಧಾರಿಸಿಕೊಂಡು, ‘ಮುಗಿತು ನನ್ನ ಲೈಫ್ ಮುಗಿತೂ, ನಾನು ಏನ್ ಆಗಬಾರದು ಅಂದುಕೊಂಡಿದ್ನೋ ಅದೇ ಆಗೈತೆ, ಈ ದರಿದ್ರನನ್ ಮಗ ಶಿವಣ್ಣ ನನ್ನ ಲೈಫ್ ಬರಬಾದ್ ಮಾಡ್ದ. ಎಲ್ಲರ್ ಮುಂದೆ ಬಾಳ ಜಂಬ ಕೊಚ್ಚಿಕೊಳ್ತಿದ್ದೆ. ಈಗ ನನ್ ಕೀಟಲ್ ಮಾಡ್ತಾರೆ, ಇನ್ನು ಕಷ್ಟವಿದೆ, ನಂಗೆ ಆ ಮೊದಲಿನ ಲೈಫ್ ಸಿಗಲ್ಲಪ್ಪೋ ಅಂತಂದುಕೊಂಡ.
ರಸ್ತೆಲಿ ಸೈಡಲ್ಲಿ ಸ್ಕ್ರಾಪ್ ಆಗಿ ಉಳಿದ ಕೆಂಪ್ಯಾನ ನೋಡಿ ಎಲ್ಲ ಬಿಎಂಟಿಸಿ ಬಸ್ನೋರು ‘ಇವನ ಕತೆ ಮುಗಿತೂ’ ಅಂತಂದುಕೊಳ್ಳುತ್ತಿದ್ದರು. ಕೆಂಪ್ಯಾ ಬಳಿಗೆ ಬಂದ ಕೆಲ ಬಿಎಂಟಿಸಿ ಬಸ್ ಡ್ರೈವರ್ ಕೆಂಪ್ಯಾನನ್ನ ನೋಡಿ, ಬಾಳೇನ್ ಸ್ಕ್ರಾಪ್ ಏನ್ ಆಗಿಲ್ಲ, ಗ್ಲಾಸ್ ಹೆಡಲೈಟ್, ಮುಂದೆ ಸ್ವಲ್ಪ ಶೇಪ್ ಚೇಂಜ್ ಆಗಿದೆ. ಸೈಡಿನ ಬಾಡಿ ಸ್ವಲ್ಪ ರಿಪೇರಿ ಮಾಡಿದ್ರೆ ಮತ್ತೆ ಓಡಿಸ್ಬೋದು, ಇಂಜಿನ್ಗೆ ತೊಂದರೆಯಾಗಿಲ್ಲ ಅಂತ ಮಾತಾಡಿಕೊಳ್ಳುತ್ತಿದ್ದ ಮಾತು ಕೇಳಿ ಕೆಂಪ್ಯಾ ಬೆಂಡಾಗಿದ್ದ ಮುಖ ಸ್ವಲ್ಪ ಅರಳಿತು.
ಅಲ್ಲಿಗೆ ಆಗಮಿಸಿದ ಡಿಪೋ ಮ್ಯಾನೇಜರ್ ಹೌವ್ ಇಸ್ ಕಂಡೀಷನ್ ಅಂತಂದಾಗಿ ಅಲ್ಲಿದ್ದ ಟೆಕ್ನಿಯನ್ ಸ್ಕ್ರಾಪ್ ಆಗಿದೆ. ಈಗಲೇ ಏನ್ ಹೇಳಕ್ ಆಗಲ್ಲ, ನೋಡಿ ಹೇಳಬೇಕು ಅಂತ ಹೇಳಿದ್ದು ಕೆಂಪ್ಯಾನನ್ನು ಮತ್ತೆ ಚಿಂತಿಗೀಡು ಮಾಡಿತು.
ಇಂಥ ಸ್ಥಿತಿಗೆ ಕಾರಣರಾದ ಡ್ರೈವರ್ ಶಿವಣ್ಣ ಆಸ್ಪತ್ರೆಲಿ ಹಾಯಾಗಿ ಚಿಕಿತ್ಸೆ ತಗಂಡು ನಿದ್ರೆಗೆ ಜಾರಿದ್ದ. ಲೋ ಶಿವಣ್ಣ ನಿನ್ ಬಿಡಲ್ಲ ಕಣೋ, ನನ್ನ ಲೈಫ್ ಗೋತಾ ಹೊಡಿಯಂಗ್ ಮಾಡಿಬಿಟ್ಯಲ್ಲೋ ಅಂತ ಬಡಬಡಿಸುತ್ತಿದ್ದ.
ವಿರಾಜಮಾನವಾಗಿ ರಸ್ತೆಲಿ ಹಮ್ಮುಬಿಮ್ಮಿನ ಮೂಲಕ ಹೋಗುತ್ತಿದ್ದ ಕೆಂಪ್ಯಾನನ್ನು ಇನ್ನೊಂದು ವೆಹಿಕಲ್ ಕೊಂಡಿ ಹಾಕಿ ಎತ್ತಿಹಾಕಿಕೊಂಡು ಹೋಗುತ್ತಿದ್ದ ದೃಶ್ಯ ನೋಡಿಕ್ ಆಗಲಿಲ್ಲ. ನೋಡಿದ್ರೆ ನಗಾಡ್ತಿದಾರೆ ಅನ್ನೋದಕ್ಕೆ ಕಣ್ಣುಮುಚ್ಚಿಕೊಂಡು ಸುಮ್ಮನೆ ಕೂತಿದ್ದ. ರಸ್ತೆಯುದ್ದಕ್ಕೂ ಹೋಗಿಬರೋ ಬಸ್ಗಳ ದೋಸ್ತ್ಗಳೆಲ್ಲ ‘ಲೋ ಮಗ ಕೆಂಪ್ಯಾ, ನಿಂದಿಷ್ಟೇ ಕಣೋ ಯೂ ಆರ್ ಸ್ಕ್ರಾಪ್ ಪೀಸ್’ ಅಂತನ್ನುವ ಮಾತು ಕಿವಿಯಲ್ಲಿ ಗುನಿಗುನಿಸುತ್ತಿತ್ತು.
ಮತ್ತೊಂದು ದಿನ
ಡಿಪೋದಲ್ಲಿ ಕರ್ಕಶ ಶಬ್ದ. ಕೆಂಪ್ಯಾನ ದೇಹದ ಭಾಗಗಳನ್ನು ಒಂದೊಂದಾಗಿ ರಿಪೇರಿ ಮಾಡುತ್ತಿದ್ದರು. ಅಲ್ಲಿಯ ಜನರು ಇದೊಂದು ನಿರ್ಜೀವ ವಸ್ತುವಂತೆ ವಿವಿಧ ಶಬ್ದಗಳ ಮೂಲಕ ಹೊಡಿತಿದ್ದರು. ಸ್ವಲ್ಪ ನೋಡಿಕೊಂಡು ರಿಪೇರಿ ಮಾಡ್ರೋ ಅಂತ ಕೆಂಪ್ಯಾ ಹೇಳುತ್ತಿದ್ದ ಮಾತುಗಳು ಅವರಿಗೆ ಕೇಳಿಸುತ್ತಿದ್ದಿಲ್ಲ. ಪುಣ್ಯಕ್ಕೆ ಎಲ್ಲನೂ ರಿಪೇರಿ ಮಾಡುತ್ತಿದ್ದಾರಲ್ಲ ಅಷ್ಟು ಪುಣ್ಯ ಅಂದುಕೊಂಡು, ಅವರೆಲ್ಲ ಕೊಡುತ್ತಿದ್ದ ಹಿಂಸೆಯನ್ನು ಪ್ರೀತಿಂದಲೇ ಅನುಭವಿಸಲು ಮುಂದಾದ.
ಅಂದು ರಾತ್ರಿ ಅಲ್ಲಿಗೆ ಬಂದ ಬಿಎಂಟಿಸಿ ಸೀನಾ, ದೊಡ್ಡಣ್ಣ, ಕಾರ್ಪೋರೇಷನ್ ಮಂಜಾ ಎಲ್ಲರೂ ಕೆಂಪ್ಯಾನ ಮುಂದೆ ‘ಏನೋ ಮಗಾ ಹೆಂಗೈದಿ, ಉರಿಬೇಡಲೋ ಅಂತಂದ್ವಿ. ನೀ ಕೇಳಿದಿಯಾ? ಅನುಭವಿಸು. ಈಗ ನೋಡು, ಮುಂದಿನ ವಾರ ನಿಂಗೆ ಒಂದು ಕೆಟ್ಟ ಸರ್ಪ್ರೈಸ್ ಇದೆಯಪ್ಪಾ, ಹೋಗಿ ಹೋಗಿ ನೀನು ಅದಕ್ ಸೆಲೆಕ್ಟ್ ಆಗುತ್ತೀ ಅಂದುಕೊಂಡಿರಲಿಲ್ಲ. ಆ ಬಾನಸವಾಡಿ ಬಿಎಂಟಿಸಿ ಡ್ರೈವರ್ ಮಾತಾಡಿಕೊಳ್ತಿದ್ನಂತೆ ಆವಾಗ ಗೊತ್ತಾತು ನಿನ್ನ ವಿಷ್ಯ. ನಿಂಗೆ ಮುಂದಿನ ವಾರದಿಂದ ಇನ್ನು ಕೆಟ್ಟ ಗಳಿಗೆ ಇದೆಲೇ ಮಗ ಅಂತ ಹೇಳಿದ ಮಾತು ಕೇಳಿ ಚೇತರಿಕೆಯ ಮೂಡಲಿದ್ದ ಕೆಂಪ್ಯಾ ದಿಗಿಲು ಬಡಿದಂಗಾತು.
ಆದ್ರೆ ಇವರು ನನ್ನ ಹೊಟ್ಟಿಕಿಚ್ಚು ಪಟ್ಟು ಹೀಗೆ ಹೇಳ್ತದಾರೆ, ಡಿಪೋ ಮ್ಯಾನೇಜರ್ ಹೇಳಿದಾನೆ, ಮತ್ತೆ ಬೆಂಗಳೂರಲ್ಲಿ ಓಡಿಸಬೇಕು ಅಂತ ಹೇಳಿದನ್ ಕೇಳಿಸಿಕೊಂಡು ಸ್ವಲ್ಪ ಸಮಾಧಾನದಿಂದ, ಕೆಂಪ್ಯಾನ ಬಿಎಂಟಿಸಿ ದೋಸ್ತ್ಗಳು ಹೇಳಿದ್ದ ಮಾತನ್ನು ಕಿ”ಗಿ ಹಾಕಿಕೊಳ್ಳದೇ ನಾನು ಸೂಪರ್ ಆಗಿ ರೆಡಿಯಾಗ್ತೀನಿ ಅಂತ ಅದೇ ಯೋಚನೆಯಲ್ಲಿ ನಿದ್ರೆಗೆ ಜಾರಿದ.
ಮಗದೊಂದು ದಿನ
ಒಳ್ಳೆ ಸಕ್ಕರೆ ನಿದ್ರೆಯಲ್ಲಿದ್ದ ಕೆಂಪ್ಯಾನನ್ ಡಿಪೋದ ರೂಮಿನ ಬಾಗಿಲು ತೆಗೆದರು. ಕತ್ತಲೆಯಲ್ಲಿ ನಿದ್ರೆಗೆ ಜಾರಿದ್ದವನಿಗೆ ಸೂರ್ಯನ ಬೆಳಕು ನೋಡಿ ಕೆಂಪ್ಯಾ ಕಣ್ ಕಣ್ ಬಿಟ್ಟ. ಇವತ್ತು ಡ್ಯೂಟಿಗೆ ಜಾನ್ ಆಗಬೇಕು ಅಂತನಿಸುತ್ತೆ ಅಂತಂದುಕೊಂಡು ಎಚ್ಚರಗೊಂಡ.
ಕೈಲಿ ಚಾವಿ ತಗಂಡು ಬರುತ್ತಿದ್ದ ಡ್ರೈವರ್ ಮೆಹಮೂದ್ ಆಗಿದ್ದಿಲ್ಲ. ತನ್ನ ಲೈಫ್ನಲ್ಲಿಯೇ ಈತನನ್ನ ನೋಡಿಲ್ಲವಲ್ಲಾ ಅಂತ ಯೋಚಿಸುತ್ತಿದ್ದಂತೆ ಇನ್ನು ಹತ್ತಿರ ಬಂದ ಆ ವ್ಯಕ್ತಿ ನನ್ನ ಮೇಲೆ ಹತ್ತಿ ಕೈಲಿದ್ದ ಚಾವಿನ ಹಾಕಿ ಬಾಗೆ ಹಾಕಿ ತಿರುವಿ ರುರ್… ರುರ್… ಅಂತ ಶುರುಮಾಡಿದ್ದ. ಎಕ್ಸ್ಲೆಟರ್ನ್ನು ತನ್ನ ಕಾಲ ಮೂಲಕ ಜೋರಾಗಿ ಒದ್ದಿದ್ದ. ರುರ್… ಅನ್ನೋ ಶಬ್ದ ಇನ್ನು ಶಬ್ದ ಜೋರಾತು, ಸ್ವಲ್ಪ ಬಿಟ್ಟು ಬಿಟ್ಟು ತನ್ನ ಆ ಡ್ರೈವರ್ ತನ್ನ ಕಾಲ್ ಮೂಲಕ ಒಂದೇ ಸಮನೆ ಎಕ್ಸ್ಲೆಟರ್ ಒತ್ತುತ್ತಿದ್ದ.
ಡಿಪೋದ ಅಕೌಂಟ್ ಜಾಗ ಹತ್ತಿರ ಕರೆದುಕೊಂಡ ಬಂದ ಆ ಡ್ರೈವರ್ ನನ್ನ ಅಲ್ಲಿಯೇ ನಿಲ್ಲಿಸಿ, ಒಳಹೋದ. ಅರ್ಧ ಗಂಟೆ ಹೋದ ಮೇಲೆ ಏನೇನೋ ತನ್ನ ಚೀಲದಲ್ಲಿ ತುರಿಕಿಕೊಂಡು ಡಿಪೋ ಮ್ಯಾನೇಜರ್ಗೆ ನಮಸ್ಕರಿಸಿ ಅಲ್ಲಿಂದ ಕಾಲ್ಕಿತ್ತ.
ಡಿಪೋ ಮ್ಯಾನೇಜರ್ ಕೈ ಮಾಡಿದರು. ಎಂದೂ ಅವರಿಗೆ ಕೈ ಮಾಡದವರು ಅಂದು ನನ್ನ ನೋಡಿ ಕೈ ಮಾಡಿದರು. ಈ ವಿದಾಯ ನನಗೋ, ಆ ಡ್ರೈವರ್ಗೋ ಅಂತ ಯೋಚನೆಯಲ್ಲಿ ತೊಡಗಿಕೊಂಡ. ಎಲ್ಲವನ್ನು ಸುಮ್ಮನೆ ವೀಕ್ಷಣೆ ಮಾಡುತ್ತಿದ್ದ ಕೆಂಪ್ಯಾನಿಗೆ ಏನಾಗುತ್ತಿದೆ ಅನ್ನುಷ್ಟರಲ್ಲಿಯೇ ಬಿಎಂಟಿಸಿ ಬಸ್ ಸ್ಟಾಂಟ್ ಹತ್ತಿರ ಬರುತ್ತಿತ್ತು. ಇದನ್ನು ನೋಡಿ, ಹೋ ಹೊಸಬ ಕಂಡೆಕ್ಟರ್ ಇರಬೇಕು, ಅದಕೆ ಈತನನ್ನು ನೋಡಿಲ್ಲ. ನನ್ನ ಸ್ಟ್ಯಾಂಡ್ ಹತ್ರ ಹೋಗ್ತಾನೆ ಬಿಡು ಅಂತಂದುಕೊಂಡ.
ಆದ್ರೆ ಅತ್ತ ಹೋಗಲೇ ಇಲ್ಲ. ಹಾಗೆಯೇ ರಾಜ್ಕುಮಾರ್ ರಸ್ತೆ ಮೂಲಕ ಹೊರಗೆ ಬಂದುಬಿಟ್ಟ. ಸ್ಪೀಡಲ್ಲಿ ಇದ್ದ ಆ ಡ್ರೈವರ್ನಿಗೆ ಖುತ್ತು, ನವರಂಗ ಟಾಕೀಸ್ ಹತ್ರ ಒಬ್ಬ ವ್ಯಕ್ತಿ ಹತ್ತಿದ.
‘ಆತ ಏನೋ ಕರಿಯಪ್ಪ ಇಷ್ಟು ಬೇಗ ಬಸ್ ತಗಂಡ ಬಂದ್ ಬಿಟ್ಟಿ, ಭಾರೀ ಸ್ಪೀಡ್ ಬಿಡಪ್ಪ, ಹೊಡಿದಿಯಲ್ಲೋ ಚಾನ್ಸ್’ ಅಂತಂದ. ‘ಹೂಂ ಕಣೋ ನಮ್ಮ ಬಳ್ಳಾರಿ ಡಿಪೋಗೆ ಈ ಬಸ್ ಸಿಕ್ತಿರೋದು, ಅದರಲ್ಲೂ ನನಗೆ ಈ ಬಸ್ ಸಂಡೂರ್ ಟ್ರಿಪ್ಗೆ ಸಿಗ್ತಿರೋದು ಬಾಳ ಖುಯಾಗ್ತೆ ನೋಡು ಅಂದ. ಇದನ್ನು ಕೇಳಿಸಿಕೊಂಡ ಕೆಂಪ್ಯಾ ‘ಹೋ ನನ್ನ ಹೊರಗಾಕಿದ್ರು. ಅಲ್ಲಿಗೆ ಮುಗಿತು ಕತೆ ನಂದು. ಆರಾಮ್ ದೊಡ್ ದೊಡ್ಡ ಟಾರು ರಸ್ತೆಲಿ ಓಡಾಡುತ್ತಿದ್ದ ನಾನು ಆ ದೂಳ್ ಊರನಾಗ ದಿನಾ ಸಾಯೋದಾ, ಥತ್ ಅಲ್ಲೇ ನಾನು ಬೆಂಕಿಗಾಹುತಿಯಾಗಬಾರದಿತ್ತಾ’ ಅಂತ ಬೇಸರಿಸಿಕೊಂಡ.
ಹೊರಗೆ ಶಿರಾದಲ್ಲಿ ಮಧ್ಯಾಹ್ನ ಊಟಕ್ಕೆ ಕೂತಿದ್ದ ನನ್ನ ಹೊಸ ಡ್ರೈವರ್ ಮತ್ತೊಮ್ಮೆ ಅವನ ದೋಸ್ತ್ ಬಹುಶಃ ಕಂಡಕ್ಟರ್ ಇರಬೇಕು ಅಂದುಕೋತೀನಿ ಅಂದುಕೊಂಡ. ಹಾಗಾದ್ರೆ ನನಗೆ ಎಸಿ ಹಾಕೋದು ಮುಂದೆ ನಿಲ್ಲಿಸುತ್ತಾರೆ ಅನ್ನಿಸುತ್ತೆ, ಒಳಗಡೆ ಒಂದೇ ಒಂದು ದೂಳೂ ಹೋಗದೆ ಚೆನ್ನಾಗಿದ್ದ ನನ್ನನ್ನು ಆ ಧೂಳ್ ನಾಡಿಗೆ ಕಳಿಸಿಬಿಟ್ಟಿದಾರೆ, ಪಾಪಿ ನನ್ಕ್ಳು. ನನ್ನ ಲೈಫ್ ಹೀಗೆ ಹಾಳಾಗಿ ಹೋಗ್ತದೆ ಅಂತ ನನ್ನ ಕನಸಿಮನಸಿನಲ್ಲೂ ಅಂದುಕೊಂಡಿದ್ದಿಲ್ಲ ಎಂದು ಮಮ್ಮಲ ಮರಗಿತು.
ಬಳ್ಳಾರಿ ಎಂಬ ಬಿಸಿಲೂರು ತಲುಪಿದಾಗ ರಾತ್ರಿಯಾಗಿತ್ತು, ಡಿಪೋದಲ್ಲಿ ಬಂದ ಕೂಡಲೇ ಅಲ್ಲಿದ್ದ ಲೋಕಲ್ ಬಸ್ ದೋಸ್ತ್ಗಳು ಇದ್ಯಾವುದಲೇ ಹೊಸ ಬಸ್ ಬಂದೈತೆ, ನೋಡೋಣ ಅಂತ ಎಲ್ಲರೂ ಅಲ್ಲಿಗೆ ಆಗಮಿಸಿದರು.
ಏನೋ ದೋಸ್ತ್ ಯಾವ ಟ್ರಿಪ್ಪು ನಿಂದು ಅಂದುಕೂಡಲೇ ‘ಸಂಡೂರು’ ಅಂದ ಕೆಂಪ್ಯಾ.
ಹ.. ಹ.. ಹ.. ಹ… ಅಂತ ನಗ್ತಾ ಸತ್ತೋದಿಲೇ ತಮ್ಮಾ, ಮೊದಲೇ ನೀ ಕೆಂಪ್ ಕೆಂಪ್ಗೈದೀ, ಇನ್ನು ಕೆಂಪ್ಗಾಗತೀ ಅಂದ. ಇನ್ನು ಒಳ್ಳೆಯದಾ, ಈಗೆಲ್ಲ ರೋಡು ಮಾಡಿಸಿದರಂತೆ ಅಲ್ವಾ ಅಂತ ಕೆಂಪ್ಯಾ ಕೇಳಿದ ಪ್ರಶ್ನೆಗೆ ಅಲ್ಲಿಯ ಲೋಕಲ್ ಬಸ್ನೋನು ‘ನಾಳೆ ಹೋಗ್ತಿಯಲ್ಲಾ, ಗೊತ್ತಾಗ್ತೈತೆ, ಅಲ್ಲಿಗೆ ಹೋದೋರು ವಾಪಾಸ್ ಅವತ್ತೇ ಬರ್ತಾರಾ ಅನ್ನೋದೇ ಗ್ಯಾರಂಟಿ ಇರಲ್ಲ ಅಂತ ಮತ್ತೊಮ್ಮೆ ಪೆಕ ಪೆಕನೆ ನಕ್ಕ. ಅಲ್ಲಿದ್ದ ಇನ್ನುಳಿದ ಬಸ್ನೋರು ಅಯ್ಯೋ ಬೆಂಗಳೂರು ಕೆಂಪ್ಯಾ ಅಂತ ನಗಲು ಶುರುಮಾಡಿದರು.
ಸದಾ ದಿಮಾಕಿನಿಂದ ಇನ್ನೊಬ್ಬರ ಮುಂದೆ ಜಂಭ ಕೊಚ್ಚಿಕೊಳ್ಳುತ್ತಿದ್ದವನು ಇದೇ ಮೊದಲ ಬಾರಿಗೆ ಸೊಕ್ಕುದಿಮಾಕುಗಳಿಂದ ಹೊರಬಂದು, ಎಲ್ಲರಂತೆ ನನಗೂ ಈಗ ಕಷ್ಟಬಂದಿದೆ. ಬದುಕಬೇಕು ಅನ್ನೋಹಾಗೆ ಸುಮ್ಮನಿದ್ದ. ಮಾಡಿದುಣ್ಣೋ ಮಹರಾಯ ಅಂತ ದೊಡ್ಡೋರು ಹೇಳಿದ ಮಾತು ನೆನಪಾಗಿ ಆತು ಅದೇನಾಗುತ್ತೆ ಅನುಭವಿಸಬೇಕು ಇನ್ನು ನನ್ನ ಕರ್ಮಭೂಮಿ ಬಳ್ಳಾರಿನಿ ಅಂತ ನಿರ್ಧರಿಸಿ ಮಲಗಿದ.
ದೂಳಿನ ದಿನ

ಇಲಿಯ ಬಿಸಿಲು ಕೇವಲ ಮನುಷ್ಯರನ್ನು ಮಾತ್ರವಲ್ಲ ಬದಲಾಗಿ ಬಸ್ಗಳನ್ನು ಕಾವೇರುವಂತೆ ಮಾಡಿ ‘ನೀರು, ನೀರು’ ಎನ್ನುವಂತೆ ಮಾಡಿ, ಎಲ್ಲಿ ಬೇಕೆಂದರಲ್ಲಿ ಬಸ್ಗಳು ಕಾಲೆತ್ತಿ ರಸ್ತೆ ಬಗಲಲ್ಲಿಯೇ ನಿಂತಿರುತ್ತಿದ್ದ ದೃಶ್ಯಕಂಡುಬರುತ್ತಿತ್ತು. ಬೆಳಗ್ಗಿ ಬೆಳಗ್ಗಿನೇ ಕೆಂಪ್ಯಾನ ಅಂತೂ ಇಂತೂ ಹದಿನೈದು ಕಿಲೋಮೀಟರ್ ದಾಟುವಷ್ಟರಲ್ಲಿಯೇ ಏದುರಿಸಿಬಿಡುತ್ತಿದ್ದ. ಬಾಗಿಲು ಕಿಟಿಕಿಗಳನ್ನು ಅರ್ಧ ತೆಗೆದಿದ್ದರಿಂದ ಅಲ್ಲಿದ್ದ ಧೂಳು ಒಳಗೆ ಬಂದಿತ್ತು. ಒಂಚೂರು ತೊಂದರೆಯಾಗದ ಕೆಂಪ್ಯಾ ಒಣಧೂಳಿನಿಂದ ತುಂಬಿಕೊಂಡಿದ್ದ. ಅಲ್ಲಿ ಪ್ರಯಾಣ ಮಾಡುತ್ತಿದ್ದ ಕುಟುಂಬಗಳೇ, ಮಕ್ಕಳೋ ದೇವರಿಗೆ ಪ್ರೀತಿ. ಸಣ್ಣಪಾಪು ಅಲ್ಲಿಯೇ ನಿಂತು ಸಿಂಗಲ್ ಕಾರಂಜಿ ರೀತಿ ಉಚ್ಚೆ ಹೊಯ್ದೆಬಿಟ್ಟ. ದೂರದಲ್ಲಿದ್ದ ಕಂಡೆಕ್ಟರ್ ಹಂಗೆಲ್ಲ ಬಸ್ನ್ಯಾಗ ಉಚ್ಚು ಹೊಯ್ಸ್ಬಾರದಮ್ಮ ಅಂತಂದು ಮುಂದೆ ಹೆಜ್ಜೆ ಹಾಕಿದ್ದು ನೋಡಿ ಕೆಂಪ್ಯಾನಿಗೆ ಫುಲ್ ರಾಂಗಾದ. ಮೇಲೆ ಬಿಸಿಲಿನ ಧಗೆಗೆ ಸುಡುತೈತೆ, ಒಳಗೆ ಮಕ್ಕಳು ಜೇಷ್ಟೆ ಮೂಲಕ ಎದೆ ಧಗೆ ಉರಿತೈತೆ. ಇನ್ನು ಅಕ್ಕಪಕ್ಕದ ಕಿಟಿಕಿ ಮೂಲಕ ವಣ ಧೂಳು ಒಳಗೆ ತುಂಬಿಕೊಳ್ಳುತ್ತಿರುವುದು ಕಂಡು ತಲೆಕಡೋದು ಬಾಕಿತ್ತು.
ಅಯ್ಯೋ ದೇವ್ರೆ ಒಳ್ಳೆ ಫೂಲ್ ಏಸಿ ಕೋಚ್ನಲ್ಲಿ ಚೆಂದನೆಯ ಹುಡುಗಿಯರು, ಆಂಟಿಗಳು, ಏನ್ ಡಿಸ್ಟರ್ರ್ಬ್ ಮಾಡದ ಸಿಟಿಜನ್ರನ್ನು ಹೊತ್ತೊಯ್ಯುತ್ತಿದ್ದ ನಾನು ಇಂಥ ಪ್ರಯಾಣಿಕರನ್ನು ಕರೆದುಕೊಂಡು ಹೋಗ್ತಿರೋದ ಕಂಡು ಮರಗಿದ.
ಬಳ್ಳಾರಿ ಹೇಗಿದೆ ಅನ್ನೋದನ್ನು ನಾನು ನನ್ನ ಎಸಿ ಲಗ್ಸುರಿ ಬಸ್ ಫ್ರೆಂಡ್ಸ್ ಕೇಳಿ ಕೆಂಪ್ಯಾ ಅಲ್ಪಸ್ವಲ್ಪ ತಿಳಿಕೊಂಡಿದ್ದ. ಅಲ್ಲಿ ರಸ್ತೆಗಳು ಹಾಳಾಗಿರೋದು, ಇನ್ನು ಆ ಸಂಡೂರು ಅನ್ನೋದು ರಸ್ತೆ ಎಲ್ಲಿ ಐತಿ ಅನ್ನೋ ಹಾಗೆ ಇರೋದು, ಅಲ್ಲಿ ಡ್ರೈ”ಂಗ್, ಬಸ್ ಹೋಗೋದು ಅಂದ್ರೆ ಅದೊಂದು ದೊಡ್ಡ ಶಿಕ್ಷೆಯೇ ಸರಿ ಅಂತ ಹೇಳಿದ್ದು ನೆನಪಾತು.
ನಾನು ಬ್ಯಾಡ ಬ್ಯಾಡ ಅಂತ ಬಡೊಕೊಂಡೆ, ಆ ಡ್ರೈವರ್ ಶಂಕ್ರಣ್ಣ ನನ್ ಸ್ಕ್ರಾಪ್ ಮಾಡಿ, ತಾನೂ ಸಸ್ಪೆಂಡ್ ಆಗಿ ಮನೆಗೆ ಕೂತಿದಾನೆ. ನನ್ನ ಬಾಳ್ ಹಾಳಿ ಮಾಡಿ ಮನಿಗೆ ಕುಂತಿರೋ ಅವನಿಗೆ ಇನ್ನೇನ್ ಬೈಯಾಕ್ ಆಗ್ತದೇ ಎಲ್ಲ ನನ್ ಕರ್ಮ ಅಂತ ಮುಂದಿನ ಕೆಟ್ಟ ದಿನಗಳನ್ನು ಎದುರುನೋಡಲಾರದೇ ಚಿಂತೆಯಲ್ಲಿ ತೊಡಗಿದ.
ತೋರಣಗಲ್ ಎಂಬ ಕೈಗಾರಿಕೆಗಳ ಊರು ಬರುತ್ತಿದ್ದಂತೆ ಅಲ್ಲಿದ್ದ ಕಾಂಕ್ರೀಟ್ ರಸ್ತೆಯನ್ನು ನೋಡಿ ಕೆಂಪ್ಯಾ ಫುಲ್ ಸಂತಸದ ಮೂಡಲ್ಲಿದ್ದ. ಹೇ ನನ್ನ ಎಲ್ಲರೂ ಹೆದರಿಸಿಬಿಟ್ಟಿದ್ದಾರೆ. ಅದೆಷ್ಟು ವರುಷದ ಹಿಂದೆ ಇದ್ದ ಪರಿಸ್ಥಿತಿ ಈಗಲೂ ಇದೆ ಎಂದು ಗಾಬರಿ ಹುಟ್ಟಿಸಿಬಿಟ್ಟಿದ್ದಾರೆ. ರಸ್ತೆ ನೋಡಿದ್ರೆ ಎಷ್ಟು ಚೆನ್ನಾಗಿದೆ ಅಕ್ಕಪಕ್ಕದಲ್ಲಿ ಮರುಗಳೂ ಇವೆಯಲ್ಲ ಅಂತಂದುಕೊಳ್ಳುತ್ತಿದ್ದಂತೆ ತೋರಣಗಲ್ ಸಿಟಿ ಹೋತು, ಮುಂದೆ ಎದುರಿಗಿದ್ದ ರಸ್ತೆ ನೋಡಿ ಕೆಂಪ್ಯಾ ಅವಕ್ಕಾದ. ಎದುರಿಗೆ ಬರುತ್ತಿದ್ದ ಕೆಂಪು ಸಿಟಿ ಬಸ್ ಒಂದೇ ಮಗ್ಗಲಲ್ಲಿ ಬರುತ್ತಿದ್ದೆಯೇನೋ ಎಂಬಂತೆ ಬರುತ್ತಿದ್ದು, ಇಡೀ ರಸ್ತೆಯಲ್ಲ ಧೂಳು ಎಬ್ಬಿಸಿತ್ತು, ಮುಂದೆ ಈ ಬಸ್ವೊಂದು ಬಿಟ್ಟರೆ ಏನ್ ಬರ್ತಿದೆ ಅನ್ನೋದು ಗೊತ್ತಾಗಲ್ಲ ಅಷ್ಟು ಧೂಳು ಆಕಾಶದಲ್ಲಿ ಹಬ್ಬಿರೋದು ನೋಡಿ ಮೂರ್ಛೆ ಬರೋಹಾಗಾತು.
ಅಯ್ಯೋ ದೇವ್ರೆ ಇದೇನ್ ರಸ್ತೆನಾ ಏನ್ ಕತೆ, ಎಷ್ಟು ವರುಷಗಳಾದ್ವೋ ಇಲ್ಲಿ ರಸ್ತೆ ಮಾಡಿ ಅಂತಂದುಕೊಳ್ಳುತ್ತಿದ್ದಂತೆ ಅಲ್ಲಿಯ ದೊಡ್ಡ ಗುಂಡಿಗೆ ಮೇಲೆ ಹೋದಾಗ ದೊಪ್ ಅನ್ನೋ ಶಬ್ದ ಕೇಳಿಸಿತು, ದಡ್ ಅಂತ ಶಬ್ದ ಮಾಡಿಕೊಳ್ಳದೇ ದಡಗ್ ಎಂದು ಮತ್ತೆ ಇನ್ನೊಂದು ಗುಂಡಿಗೆ ಬಿದ್ದು, ಎದ್ದು ಕುಂಟಿಕೋತ ಮುಂದೆ ಸಾಗುತ್ತಿತ್ತು.
ಅಮ್ಮಾ ದೇವ್ರೆ ನಾನು ಬದುಕೋಲ್ಲಪ್ಪೋ ಇದರಲ್ಲಿ ದಿನಾ ಪ್ರಯಾಣ ಮಾಡೋದು, ನಾನ್ ಸತ್ತಂಗ್ ಬಿಡೋ ಅಂತಂದುಕೊಳ್ತು. ಮೊದಲ ಚಿಕ್ಕ ದಾರಿ ಒಂದು ವಾಹನ ೨೦ ಕಿಲೋಮೀಟರ್ ಸ್ಪೀಡ್ಲ್ಲಿ ಹೋಗೋದೇ ಕಷ್ಟ. ಇನ್ನು ನಲವತ್ತರ ಮೇಲೆ ಒಂದರ ಹಿಂದೊಂದು ಆರು ಗಾಲಿ, ಹತ್ತು ಗಾಲಿ, ಹದಿನಾಲ್ಕು, ಹದಿನಾರು, ಹದಿನೆಂಟು ಗಾಲಿ ಲಾರಿಗಳು ಸುಯ್ ಸುಯ್ ಅಂತ ಓಡುತ್ತಿದ್ದವು. ಇವರೆಲ್ಲ ಕೈಲಿ ಜೀವ ಅಲ್ಲ ತಮ್ಮ ಜೀವವನ್ನು ದೇವರ ಬಳಿ ಇಟ್ಟುಬಂದಿರ್ತಾರೆ. ಒಂದು ಟ್ರಿಪ್ ಹೋಗಿ ಬಂದ ಮೇಲೆ ನಮ್ಮ ಜೀವ ಇನ್ನು ಬದುಕಿದ್ಯಲ್ಲಾ ಅಂತ ಮನೆಗೆ ಹೋಗ್ತಾರೆ ಅನ್ನೋಹಾಗೆ ಸ್ಪೀಡಲ್ಲಿ ಅವರು ಹೋಗುತ್ತಿದ್ದರು.
ಒಂದೊಂದೇ ಊರಲ್ಲಿ ಉಸ್ಸಪ್ಪಾ ಅಂತ ದೀರ್ಘ ಉಸಿರುಬಿಟ್ಟು, ಬದುಕಿದ್ಯಾ ಬಡಜೀವಿ ಎಂಬಂತೆ ಸ್ವಲ್ಪ ಸುಧಾರಿಸಿಕೊಂಡು ಹೋಗುತ್ತಿದ್ದ ಕೆಂಪ್ಯಾಗೆ ತನ್ನ ಹೊಸ ಡ್ರೈವರ್ ಎಕ್ಸ್ಲೆಟರ್ ಒತ್ತುತ್ತಿದ್ದಂತೆ ಬಸ್ ತುಂಬ ಕೂತಿದ್ದ ಪಿಟಿಪಿಟಿ ಅಂತ ಕೂತಿದ್ದ ಜನರನ್ನು ಹೊತ್ತುಕೊಂಡು ಹೋಗೋದು ಅಷ್ಟು ಸುಲಭವಾಗಿದ್ದಿಲ್ಲ. ಈ ಕಡಿಗೆ ಮೊದಲೇ ಬಸ್ ಬರೋದಿಲ್ಲ. ಬಂದ ಬಸ್ ಮತ್ತೆ ಅವತ್ತೇ ರಾತ್ರಿ ವಾಪಾಸ್ ಹೋಗುತ್ತೆ ಅನ್ನೋದು ದೇವರಿಗೆ ಪ್ರೀತಿ ಅನ್ನೋಹಾಗಿತ್ತು.
ಯಪ್ಪಾ ನನ್ ಕೈಲಿ ಆಗಲ್ಲ ಅನ್ನೋ ಹಾಗೆ ದೇಹದ ಎಲ್ಲ ಪಾರ್ಟ್ಗಳು ತುಂಬ ಲೂಸಾಗಿ ಮುಂದೆ ಹೆಜ್ಜೆ ಇಡೋದು ಕಷ್ಟವಾಗಿತ್ತು, ಡ್ರೈವರ್ ಎಕ್ಸ್ಲೆಟರ್ ಒತ್ತಿದರೂ ಕೆಂಪ್ಯಾ ಮುಂದೆ ಹೋಗುತ್ತಿದ್ದಲ್ಲ. ಇಡೀ ಬಾಡಿಯೆಲ್ಲ ಫುಲ್ ಹೀಟಾಗಿತ್ತು. ದೇಹದಲ್ಲಿ ಒಂದಂಶವೂ ನೀರಿಲ್ಲ. ಕೇವಲ ಡೀಸೆಲ್ ಒಂದೆ ಇತ್ತು. ಮೈ ಒಳಗೆ ಹಚ್ಚಿದ್ದ ಗ್ರೀಸ್ ತಟ ತಟ ಅಂತ ಕೆಳಗಿಳಿತ್ತಿತ್ತು. ಮೇಲೆ ಬಿರು ಬಿಸಿಲು ಕೆಂಡಕಾರುತ್ತಿತ್ತು.
‘ಗಾಡಿ ಹೀಟಾಗೈತೆ ನೀರು ಹಾಕಬೇಕು’ ಅಂತ ಡ್ರೈವರ್ ಹೇಳಿದಾಗ, ಅಲ್ಲಿದ್ದ ಪ್ರಯಾಣಿಕರು ನೋಡೋದು ದೊಡ್ಡ ಗಾಡಿದ್ದಂಗೈತೆ, ಇಗೆ ಗಾಡಿ ಹೀಟಾಗ್ತೈತಾ, ಇದ್ಯಾವ ಬಸ್ ಬಿಡು, ನಮ್ಮೂರಿಗೆ ಬಸ್ ಕಳಿಸೋದಕ್ಕಿಂತ ಆ ಟಿಪ್ಪರ್ರಂತ ಲಾರಿ ಕಳಿಸೋದು ಒಳ್ಳೇದು ಅನ್ನೋ ಹೆಂಗಸಿನ ಮಾತು ಕೇಳಿ ಕೆಂಪ್ಯಾನಿಗೆ ತಲೆ ತಿರುಗಿತು.
ಲಾರಿಗಳು ಮನುಷ್ಯರನ್ನು ಹೊತ್ತುಕೊಂಡು ಹೋಗಲಿಕ್ಕೆ ಲಾಯಕ್ಕು ಅನ್ನೋ ಅವಳ ಮಾತು ಅಲ್ಲಿ ನಿಜಕ್ಕೂ ಸರಿಯಾಗಿತ್ತು. ಆದ್ರೆ ಲಾರಿಲಿ ಸಾಮಾನು ಸರಬರಾಜು ಮಾಡಲಿಕ್ಕೆ ಮಾತ್ರ ಅಂದುಕೊಂಡಿದ್ದ ‘ಕೆಂಪ್ಯಾ’ನಿಗೆ ಅಲ್ಲಿಯ ಸ್ಥಿತಿ ಕಂಡು ಶಾಕ್ ಆದ.
ನೀರು ಹಾಕಿ ಎಷ್ಟೆಲ್ಲ ಪ್ರಯತ್ನಿಸಿದರೂ ಕೆಂಪ್ಯಾ ಮುಂದೆ ಹೆಜ್ಜೆ ಇಡುತ್ತಿದ್ದಿಲ್ಲ. ಏನೋ ಕೆಟ್ಟೋಗೈತೆ ಅನಿಸುತ್ತೆ, ಬೇರೆ ಬಸ್ಗೆ ಹೋಗ್ರಿ ಅಂತ ಡ್ರೈವರ್ ಹೇಳಿದ ಕೂಡಲೇ
ಅಲ್ಲಿದ್ದ ಜನರೆಲ್ಲ ‘ಥೋ ಇದೆಂಥ ದರಿದ್ರ ಬಸ್ ಬಿಟ್ಟರೋ ಅಂತ ಉಗಿತಿದ್ರು, ಥತ್ ಇದ್ಯಾವದು ಬಸ್ಸಲ್ಲೇ ಬೆಂಗಳೂರಿಂದ ಹೊಸ ಬಸ್ ತಂದ್ರೂ ಈ ಸಂಡೂರ್ ರಸ್ತೆ ಹಣೆಬರಹಕ್ಕೆ ಎಲ್ಲವೂ ಅಂಗೆ ನಿಂತುಕೊಂಡುಬಿಡ್ತವೆ, ನಮ್ಮ ಕರ್ಮ ಅಂತ ಹೊಸಬ ಡ್ರೈವರ್ ಅಲ್ಲಿಯ ಇದ್ದ ಅಂಗಡಿಗೆ ಹೋಗಿ ಟೀ ಕುಡಿದು ಸಿಗೆರೇಟ್ ಸೇದಿ ಒಂದು ನಾಲ್ಕು ಜನರನ್ನು ಕರಕಂಡುಬಂದ.
ಅಲ್ಲಿಯೇ ಪಕ್ಕದಲ್ಲಿದ್ದ ಗ್ಯಾರೇಜ್ಗೆ ಕೆಂಪ್ಯಾನನ್ನ ತಳ್ಳಿದರು. ಹಂಗೋ ಹೆಂಗೋ ಅಲ್ಲಿಗೆ ಸೇರಿದ ಮೇಲೆ ಅಲ್ಲಿಯೇ ಇದ್ದ ಇನ್ನು ನಾಲ್ಕೈದು ಬಸ್ಗಳ ನೋಡಿ, ಕೆಂಪ್ಯಾ ಅಚ್ಚರಿ ವ್ಯಕ್ತಪಡಿಸಿದ.
‘ಅಯ್ಯೋ ನೀನು ಬಂದ್ಯಾ ಗುರು, ಬಾ ನಮ್ಮದೆಲ್ಲ ಸೇಮ್ ಪ್ರಾಬ್ಲಂ’ ಇಲ್ಲಿ ನೆಟ್ಟಗೆ ಒಂದು ದಿನ ನಾವು ರೌಂಡ್ ಹೊಡಿಲಿಕ್ಕಾಗಲ್ಲ, ಅಷ್ಟು ಕೆಟ್ಟ ದರಿದ್ರ ರಸ್ತೆದು, ಆ ಮಿನಿಸ್ಟರ್ಗಳೆಲ್ಲ ರಸ್ತೆಗೆಂತ ಇಟ್ಟದ್ದ ಕೋಟಿ ಕೋಟಿ ಹಣ ಅದೆಲ್ಲ ಇಟ್ಟಕಂಡು ಹಾಳಾಗ್ತಾರೋ, ಹೋಗ್ಲಿ ಬಾ ಅಂತ ಕರೆದರು.
ಕೆಂಪ್ಯಾ ಮಾತಾಡ್ತಾ, ನಮ್ಮ ಬೆಂಗಳೂರಿ ಕಡೆ ಮೇನ್ ರೋಡ್ಲ್ಲಿ ಒಂದೆರಡು ಗುಂಡಿ ಬಿದ್ದರೆ, ಕೂಡಲೇ ರಸ್ತೆ ರಿಪೇರಿ ಕೆಲಸ ಮಾಡ್ತಾರೆ, ದಿನಾ ರಾಜ್ಯದ ಮುಖ್ಯಮಂತ್ರಿಂದ ಹಿಡಿದು ಕಾರ್ಪೋರೇಟರ್ ವರೆಗೆ ಓಡಾಡ್ತಾರೆ. ಬೇಗ ರಿಪೇರಿಯಾಗ್ತದೆ, ಆದ್ರೆ ಇಲ್ಲಿ ಯಾರ ಬರಬೇಕು. ಪ್ರತಿನಿಧಿಗಳು ಇದ್ದರೂ ಇಲ್ಲಿ ಅಡ್ಡಾಡಲ್ಲಬಿಡು, ಅಂತ ಸ್ಥಿತಿದೆಯಲ್ಲವಾ ಅಂತಂದ.
ಅಲ್ಲಿದ್ದವರು ಅಯ್ಯೋ ಬಿಡು ಅದೆಲ್ಲ ಕೇಳಲೇಬೇಡ. ರಸ್ತೆ ಪಕ್ಕದಲ್ಲಿಯೇ ಇರುವ ಮಕ್ಕಳು ಮೇಲೆ ಹಾರಾಟ ಮಾಡುತ್ತಿದ್ದ ಏರೋಪ್ಲೇನ್ನನ್ನು ನೋಡದೇ ತನ್ನ ಪಾಡಿಗೆ ಆಟವಾಡುತ್ತವೆ. ಇಲ್ಲಿ ಯಾರೂ ಮಕ್ಕಳಿಗೆ ಏರೋಪ್ಲೇನ್ ಕ್ರೇಜ್ ಇಲ್ಲ. ದಿನಾ ಎಲಿಕಾಪ್ಟರ್, ಏರೋಪ್ಲೇನ್ ಓಡಾಡ್ತಿದ್ರೆ ಇನ್ನೆಲ್ಲಿಂದ ಕೂತೂಹಲ ಬರಬೇಕು. ವಾಕಿಂಗ್ಗೂ ಇಲ್ಲಿಯ ಗಣಿಧಣಿಗಳು ಏರೋಪ್ಲೇನ್ ಬಳಿಸ್ತಾರೆ, ಇಲ್ಲಿಯ ಧಣಿಯ ಮಗಳೊಬ್ಬಳು ದಿನಾ ಬೆಂಗಳೂರಿನ ಶಾಲೆಗೆ ಹೆಲಿಕಾಪ್ಟರ್ ಬಳಸ್ತಾಳೆ ಅಂದ್ರೆ ಲೆಕ್ಕ ಹಾಕಿ ಮಾತು ಕೇಳಿ ಕೆಂಪ್ಯಾ ಶಾಕ್ಆಗಿಬಿಟ್ಟ.
ಹೌದು ಅನಿಸುತ್ತೆ, ಬೆಂಗಳೂರಿನಲ್ಲಿ ಆಕಾಶದಲ್ಲಿ ಮೇಲೆ ವಿಮಾನಗಳು ಹಾರಾಟವಾಡುತ್ತಿದ್ದರೆ ಮಕ್ಕಳು ಕಣ್ಣೆತ್ತಿ ನೋಡ್ತಾರೆ, ಆದ್ರೆ ಇಲ್ಲಿ ಪ್ರತಿದಿನ, ಗಂಟೆಗೊಂದು ಓಡಾಡುತ್ತಿದ್ದರೆ ಯಾರೂ ತಾನೆ ನೋಡ್ತಾರೆ ಅವರಿಗೆ ಎಲಿಕಾಪ್ಟರ್ ಇಂಟರೆಸ್ಟಿಂಗ್ ಅಲ್ಲವೇ ಅಲ್ಲವಾಗಿದೆ ಅನ್ನೋ ವಿಚಾರ ಕೆಂಪ್ಯಾನಿಗೆ ಮನವರಿಕೆಯಾಗತೊಡಗಿತು. ಸಂಜೆ ಹೊತ್ತಿಗೆ ಹಂಗೋ ಹೆಂಗೋ ಕೆಂಪ್ಯಾ ರೆಡಿಯಾಗಿದ್ದು, ಶುರುಮಾಡಿದಾಗ ಗುರ್ಗುರ್ ಅಂತ ಗುರಾಸುತ್ತಿದ್ದ. ಇದನ್ನು ಕಂಡು ಖುಯಾದ ಆ ಹೊಸಬ ಡ್ರೈವರ್ ಗಾಡಿ ತಗಂಡ ಬಳ್ಳಾರಿಗೆ ವಾಪಾಸ್ ಹೋಗಿಬಿಡಾಣ. ಅಲ್ಲಿ ಫುಲ್ ರಿಪೇರಿ ಮಾಡಿಸೋಣ. ಸದ್ಯಕ್ಕೆ ಸಾಕು ಅಂತ ಶುರುಮಾಡಿದ.
ಇವತ್ತು ಗಾಡಿ ಶುರುವಾಗಲ್ಲ ಅನ್ನೋ ಕಾರಣಕ್ಕೆ ಹೊಸಬ ಡ್ರೈವರ್ ಚೆನ್ನಾಗಿ ಕುಡಿದಿದ್ದ. ಇವತ್ತು ಕುಡಿದಿದಾನೆ ಅನ್ನೋ ವಾಸನೆ ಬರುತ್ತಿದ್ದಂತೆ ಲೋ ನೀ ಕುಡಿದಿದಿಯಾ ಬಿಟ್ಟುಬಿಡೋ ಎಂದು ಕಿರುಚಿದ. ಬೇಡಲೋ ಈಗಲೇ ನಾನು ಸಾಕಷ್ಟು ನೊಂದಿದೀನಿ, ಸ್ಕ್ರಾಪ್ ಆಗಿ ಇಲ್ಲಿಗೆ ಬಂದೀನಿ ಇನ್ನು ಮತ್ತೆಲ್ಲಿ ಗುದ್ದಬೇಡವೋ ಅಂತ ಕೂಗುತ್ತಿದ್ದ. ಆದ್ರೆ ಆ ಮಾತು ಆ ಹೊಸ ಡ್ರೈವರ್ಗೆ ಕೇಳುತ್ತಿದ್ದಿಲ್ಲ.
ಕೆಂಪ್ಯಾ ಗಾಡಿ ಶುರುವಾದ ಖುಗೆ ಸಂತಸದಿಂದಲೇ ಎಕ್ಸ್ಲೆಟರ್ ಜೋರಾಗಿ ಒತ್ತಿದ.
ಲೋ ಬೇಡವೋ ಬೇಡವೋ ಅಂದು, ಕುಡಿದ ಮಬ್ಬುನಲ್ಲಿ ಗಾಡಿ ಯರ್ರಾಬಿರ್ರಿ ಒಡೆಯಲು ಶುರುಮಾಡಿದ. ಬಸ್ನಲ್ಲಿದ್ದ ಕಂಡೆಕ್ಟರ್, ಏ ಡ್ರೈವರ್ ಮೆಲ್ಲಕ್ ಹೋಗೋ ಹೆಂಡ್ರುಮಕ್ಳು ಮನ್ಯಾಗೆ ಕಾಯ್ತಾ ಇದಾರೆ ಅಂದ. ಇವುಗಳನ್ನು ಕೇಳಿಸಿಕೊಳ್ಳದ ದಿಕ್ಕಿನಲ್ಲಿದ್ದ ಹೊಸಬ ಡ್ರೈವರ್ ಮತ್ತದೇ ಸ್ಪೀಡಿನಲ್ಲಿ ತಗ್ಗುದಿನ್ನೆಗಳು ಎನ್ನದೇ ಎಕ್ಸ್ಲೆಟರ್ ಇನ್ನು ಜಾಸ್ತಿನೇ ಒತ್ತಿದ್ದ.
ಬಾಳ ಸ್ಪೀಡಲ್ಲಿ ಹೋಗುತ್ತಿದ್ದನ್ನು ನೋಡಿ ಕೆಂಪ್ಯಾ ನಂದಿನ್ನು ಇದೇ ಕೊನೆ ಇಲ್ಲಿ ನಾನು ಸಾಯೋದು ಗ್ಯಾರಂಟಿ ಎಂದುಕೊಳ್ಳುವಷ್ಟರಲ್ಲಿ ಬೆಟ್ಟದ ಒಂದು ತಿರುವಿನಲ್ಲಿ ಜೋರಾಗಿ ಡ್ರೈವ್ ಮಾಡುತ್ತಿದ್ದ ಹೊಸ ಡ್ರೈವರ್ರಿಗೆ ಎದುರಿಗೆ ಯಾವುದೇ ವಾಹನ ಬಂದದ್ದು ನೆನಪಾಗಿ ಎಡಕ್ಕೆ ತಿರುಗಿದ, ಕೆಳಗಡೆ ಪ್ರಪಾತ, ಹಳ್ಳ. ಬಸ್ನಲ್ಲಿದ್ದ ಎಲ್ರೂ ಮೂರ್ಚೆ ಹೋಗಿದ್ದರು.
ಯಾರಿಗೂ ಎಚ್ಚರವಾಗಲೇ ಇಲ್ಲ, ಎಚ್ಚರವಾದಾಗ ಜುಳು ಜುಳು ನೀರು ಹರಿಯುತ್ತಿತ್ತು, ಅದರ ಮೇಲೆ ಕೆಂಪ್ಯಾ ಅರ್ಧದಷ್ಟು ನೀರಿನಲ್ಲಿಯೇ ಮುಳುಗಿತ್ತು, ಇನ್ನರ್ದ ಮೇಲಿತ್ತು, ಅಲ್ಲಿ ಕೆಂಪನೆಯ ಗಿಳಿಗಳು ಕೆಂಧೂಳಿನಲ್ಲಿ ಮಿಂದೆದ್ದ ಚಿವುಗುಡುತ್ತಿದ್ದವು, ಕೆಂಪ್ಯಾ ಎಚ್ಚರಗೊಂಡು ಮೇಲೆ ಕಣ್ಣುಹಾಸುತ್ತಾನೆ ಮೇಲೆ ನನ್ನಂತ ಅನೇಕ ಬಸ್ಗಳು ಪ್ರಾಣವನ್ನು ಕೈಲಿ ಹಿಡಿದುಕೊಂಡು ಮೆಲ್ಲಗೆ ಓಡಾಡುತ್ತಿದ್ದವು. ಅಲ್ಲಿ ಸೈಟಿಂಗ್ಗೆ ಬಂದಿದ್ದ ಬೆಂಗಳೂರಿನ ಗುಂಪು ಕೆಂಪ್ಯಾನ ಸ್ಥಿತಿಯ ಫೋಟೋ ತೆಗಿತಿದ್ದರೂ ಅದರಲ್ಲಿ ಒಬ್ಬರ ಫೋನಿನಲ್ಲಿ ‘ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಣಿ, ಹದ್ದಾಗಿ ಕುಕ್ಕಿತಲ್ಲೋ ನಿನ್ನ ಹದ್ದಾಗಿ ಕುಕ್ಕಿತಲ್ಲೋ’ ಅನ್ನೋ ಹಾಡು ಬರುತ್ತಿತ್ತು.
ಕೆಂಪ್ಯಾ ಒಂದು ಸಾರಿ ತಿರುಗಿ ತನ್ನ ಸುತ್ತ ನೋಡಿದ, ನಕ್ಕ. ಗಹಗಹಿಸಿ ನಕ್ಕ.
 
 

‍ಲೇಖಕರು avadhi

3 October, 2013

10 Comments

  1. MANJUNATH DOLLIN

    ಕಥೆ,ಕಲ್ಪನೆ ಅದ್ಭುತ , ಬಸ್ಸಿಗೂ ಒಂದು ಜೀವ-ಭಾವ ಕಲ್ಪಿಸಿ,ಅದರದೇ ಭಾವನೆಗಳನ್ನು ಧ್ವನಿಸುವ ಹಾಗೆ ಬರೆದದ್ದು ಸುಂದರವಾಗಿದೆ, ನಿರೂಪಣಾ ಶೈಲಿ ಚೆನ್ನಾಗಿದೆ . ವಾಸ್ತವದ ವ್ಯಂಗ್ಯ ,ವಿಡಂಬನೆ ಎಲ್ಲವೂ ಇದೆ.

    • sharanu hampi

      ಕತೆ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು…

    • sharanu hampi

      ಧನ್ಯವಾದಗಳು ಸರ್.

  2. Latha Puttaswamy

    Hmmmmm…….. awesome imagination. slight spelling mistakes.
    All the best Sharan <3

    • sharanu hampi

      ಧನ್ಯವಾದಗಳು. ಅಕ್ಷರ ದೋಷಗಳನ್ನು ಮುಂದೆ ಸರಿಮಾಡಿಕೊಳ್ಳಲಾಗುವುದು. ಧನ್ಯವಾದಗಳು.

  3. srujan

    ಶರಣು ಕಥೆ ಅದ್ಭುತ. ನಿನ್ನ ಬೇರೆ ಕಥೆಗಳಿಂದ ಭಿನ್ನವಾಗಿದೆ. ಹೊಸತನದ ಕಥೆ .ಕಂಗ್ರಾಟ್ಸ್

    • sharanu hampi

      ಸಮಯ ಬಿಡುವು ಮಾಡಿಕೊಂಡು ಕತೆ ಓದಿದ್ದು ಸಂತಸ ತಂದಿತು. ಧನ್ಯವಾದಗಳು.

  4. Veeresh Dani

    ಶರಣು ನಿನ್ನ ಕಥೆಗೆ ನಮ್ಮ ಶರಣು.
    ಕೆಎಸ್ಆರ್ ಟಿಸಿ ಬಸ್ಸ್ ಗಳ ಬದುಕಿನ ಕಲ್ಪನೆ ನಿಜಕ್ಕೂ ಅದ್ಬುತ್. ಕಥೆ ತುಂಬಾ ಚೆನ್ನಾಗಿದೆ. ಖುಷಿಯಾತ್ತು. ಜೊತೆಗೆ ನಿನ್ನ ಕತೆಯನ್ನ ಜಿ ಎನ್ ಮೋಹನ್ ಸರ್ ಗುರುತಿಸಿ ಪ್ರಕಟಣೆ ಮಾಡಿದ್ದು ಮತ್ತಷ್ಟೂ ಖುಷಿಯಾಗುವ ವಿಚಾರ. ಗುಡ್ ಲಕ್ & ಕಂಟಿನ್ಯೂ.

    • sharanu hampi

      ಧನ್ಯವಾದಗಳು ‘ದಾನಿ’ಗಳೇ.. ಕತೆ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading