ಸಣ್ಣ ಕಥೆ
ಪ್ರಸನ್ನ ಸಂತೇಕಡೂರು
ಹಾಲಜ್ಜಿ ಸದಾ ಭತ್ತ, ಕಬ್ಬು, ಅಡಿಕೆ ತೋಟಗಳಿಂದ ಕಂಗೊಳಿಸುವ ನಮ್ಮೂರಿನ ಹಿರಿಯ ಜೀವ. ವಯಸ್ಸು ತೊಂಬತ್ತೋ, ನೂರೋ ಇರಬೇಕು ಆ ಗಣಿತದ ಲೆಕ್ಕವಿಟ್ಟವರು ಯಾರು ಬದುಕಿಲ್ಲ. ಸುಮಾರು ನಾಲ್ಕೂವರೇ ಅಡಿ ಎತ್ತರ, ಸುಕ್ಕುಗಟ್ಟಿದ ಮುಖ, ಎಲೆ,ಅಡಿಕೆ,ಹೊಗೆಸೊಪ್ಪಿನಿಂದ ಸವೆದು ಕೆಂಪಾದ ಹಲ್ಲುಗಳು, ಟಿಬೆಟಿಯನ್ನರ ಹಾಗೆ ಒಳಗೆ ಹೋದ ಚಿಕ್ಕ ಕಣ್ಣುಗಳು, ಕೈಯಲ್ಲಿ ಯಾವುದೋ ಕಾಲದ ಎರಡು ಹಿತ್ತಾಳೆ ಬಳೆಗಳು, ಹಣೆಯಲ್ಲಿ ಕುಂಕುಮವಿಡುವ ಜಾಗದಲ್ಲಿ ಹಳೇ ಗಾಯದ ಗುರುತು, ಅರ್ಧ ನೆರೆತ ತಲೆ ಕೂದಲು. ಇದು ಹಾಲಜ್ಜಿಯ ಸೌಂದರ್ಯ. ಹಾಲಜ್ಜಿಗೆ ತನ್ನವರು ಯಾರು ಇಲ್ಲ. ಅವಳು ಎಲ್ಲಿಂದ ಬಂದವಳು, ಯಾವಾಗ ಬಂದವಳು, ಯಾರಿಗೋಸ್ಕರ ಬಂದವಳು, ಯಾರು ತಿಳಿದಿಲ್ಲ. ಅವಳದೆನ್ನುವುದು ಏನು ಇಲ್ಲ. ಅವಳ ಅಸ್ತಿ ಎಂದರೆ ಅವಳು ಇರುವ ಚಿಕ್ಕ ಗುಡಿಸಲು, ಅದರೊಳಗೆ ಕೆಲವು ಪಾತ್ರೆಗಳು, ಹಳೆಯ ಸೀರೆಗಳು, ಮಲಗುವ ಈಚಲು ಮರದ ಒಂದು ಚಾಪೆ, ಒಂದು ದಿಂಬು ಮಾತ್ರ. ನಮ್ಮೂರಿನಿಂದ ದುಮ್ಮಳ್ಳಿಗೆ ಹೋಗುವ ಕಲ್ಲು, ಮಣ್ಣಿನ ದಾರಿಯಲ್ಲಿರುವ ಊರ ಕೆರೆ ಏರಿ ಪಕ್ಕದಲ್ಲಿನ ನಿದಿಗೆ ಸಾಹುಕಾರರ ಅಡಿಕೆ ತೋಟ ಕಾಯುವುದು, ತೋಟದಲ್ಲಿನ ತೆಂಗಿನ ಗರಿಯಲ್ಲಿ ಕಸಬರಿಕೆ ಮಾಡಿ ಮಾರುವುದು ಇವಳ ಕಾಯಕ. ಆಗೊಮ್ಮೆ, ಈಗೊಮ್ಮೆ ಬಿದ್ದ ಅಡಿಕೆ ಸುಲಿದು ಭಟ್ಟರ ಅಂಗಡಿಗೆ ಕೊಟ್ಟು ತನ್ನ ಹೊಟ್ಟೆಗೆ ಬೇಕಾದ ದಿನಸಿ ಕೊಳ್ಳುವುದು ವಾಡಿಕೆ. ಪ್ರತಿದಿನವೂ ಕೋಳಿ ಕೂಗುವುದಕಿಂತ ಮುಂಚೆಯೇ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ ಆ ದಿನಕ್ಕೆ ಬೇಕಾದ ಮುದ್ದೆ, ಅನ್ನವನ್ನ ಮಾಡಿಕೊಂಡು ತೋಟಕ್ಕೆ ಹೊರಟರೇ ಮತ್ತೆ ತನ್ನ ಗುಡಿಸಲಿಗೆ ಬರುತ್ತಿದ್ದುದು ಸಂಜೆ ಸೂರ್ಯಾಸ್ತವಾದ ನಂತರವೇ.
ರಾತ್ರಿ ಕುಡಿಯಲು ಒಂದು ಸಾರಾಯಿ ಪ್ಯಾಕೆಟ್, ಒಂದು ರಾಗಿ ಮುದ್ದೆ, ಸ್ವಲ್ಪ ಅನ್ನ ಮತ್ತು ಸಾರು, ರಾತ್ರಿ ಸುಖ ನಿದ್ರೆ, ಇದು ಹಾಲಜ್ಜಿ ಪ್ರಪಂಚ. ಬೆಳಿಗ್ಗೆ ತೋಟಕ್ಕೆ ಬಂದು ಒಂದು ಸುತ್ತು ತೋಟವನ್ನೆಲ್ಲ ಸುತ್ತಿ ಅಡಿಕೆ, ಅಡಿಕೆ ಹಾಳೆ, ಬಿದ್ದ ತೆಂಗಿನ ಕಾಯಿಯನ್ನೆಲ್ಲ ತಂದು ತೋಟದಲ್ಲಿರುವ ತನ್ನ ಗುಡಿಸಲಿಗೆ ಹಾಕಿ ಕೂತರೇ ಆಯ್ತು ಗಿಳಿ, ಕೋಗಿಲೆ ಮತ್ತು ಕಾಜಾಣಗಳ ಸುಗಮ ಸಂಗೀತದಲ್ಲಿ ಮುಳುಗಿ ಅಡಿಕೆ ಸುಲಿಯುವದರಲ್ಲಿ ಲೀನವಾಗುತ್ತಾಳೆ, ಮತ್ತೆ ಮೇಲೇಳುವುದು, ಹತ್ತು ಗಂಟೆಗೋ, ಹನ್ನೊಂದಕ್ಕೋ. ಸೂರ್ಯ ನೆತ್ತಿಯ ಮೇಲೆ ಬರುವ ಸಮಯಕ್ಕೆ ದನ ಕಾಯೋ ಹುಡುಗರೇನಾದರು ಬಂದು ದನಗಳನ್ನ ಅವಳ ತೋಟಕ್ಕೆ ಬಿಟ್ಟರೇ ಸಾಕು ಅವಳ ಬಾಯಿಯಿಂದ ಕರ್ಕಶ ಸಂಸ್ಕೃತವಾಹಿನಿಯೊಂದು ಯಾವುದೇ ಅಡೆತಡೆಗಳಿಲ್ಲದೆ ಬರುತಿತ್ತು. “ಯಾರೋ ಅವ್ನು ನನ್ನ ಹಾಟ್ ಗಳ್ಳ ನನ್ನ ತೋಟದಾಗೆ ದನ ಬೀಡನು”? ಈ ವಾಕ್ಯ ಆ ಭಾರೀ ಹಳೆಯ ತೋಟದ ಮರಗಳಿಗೆ ಬಡಿದು ಪ್ರತಿಧ್ವನಿಸುತಿತ್ತು. ಹೊಸಬರೇನಾದರೂ ಈ ಧ್ವನಿಯನ್ನೇನಾದರೂ ಕೇಳಿಸಿ ಕೊಂಡರೆ ಯಾವುದೋ ಭೂತದ್ದೋ, ದೆವ್ವದ್ದೋ ಕೂಗೆಂದು ಭಯದಿಂದ ಓಡಿಹೋಗುವ ಸಂಭವವೇ ಜಾಸ್ತಿ. ಅವಳ ಬಾಯಿಗೆ ಹೆದರಿ ಯಾರು ಆ ತೋಟದ ಕಡೆಗೆ ಮುಖ ಹಾಕುತಿರಲಿಲ್ಲ. ಕೋತಿಗಳೇನಾದರೂ ತೋಟಕ್ಕೆ ನುಗ್ಗಿದರೆ ತನ್ನ ವಿಚಿತ್ರ ಕೂಗಿನಿಂದ ಮತ್ತು ಹಳೆಯ ಡಬ್ಬವನ್ನ ಬಡಿಯುವುದರ ಮೂಲಕ ಅವುಗಳಿಗೆ ದುಸ್ವಪ್ನವಾಗಿ ಕಾಡುತ್ತಿದ್ದಳು. ಯಾವುದೇ ಮಳೆ, ಚಳಿ, ಬಿಸಿಲುಗಳಲ್ಲೂ ತೋಟಕ್ಕೆ ಹೋಗುವುದನ್ನ ಬಿಡುತ್ತಿರಲಿಲ್ಲ. ಅವಳು ಹುಟ್ಟಿರುವುದೇ ತೋಟ ಕಾಯೋದಕ್ಕೆ, ತೋಟ ಇರುವುದೇ ಇವಳಿಗೋಸ್ಕರ ಅನ್ನುವಷ್ಟರ ಮಟ್ಟಿಗೆ ಬದುಕುತ್ತಿದ್ದಳು. ನಿದಿಗೆ ಸಾಹುಕಾರರ ತಾತನ ಕಾಲದಿಂದಲೂ ಹಾಲಜ್ಜಿ ಈ ತೋಟ ಕಾಯುತ್ತಿರುವುದರಿಂದ ಇದಕ್ಕೇ “ಹಾಲಜ್ಜಿ ತೋಟ” ವೆಂದೇ ಜನ ಕರೆಯುವುದು.
ಹಾಲಜ್ಜಿಗೆ ತನ್ನ ಕೆಲಸದಲ್ಲಿ ಸ್ವಲ್ಪ ವಿಶ್ರಾಂತಿ ಬೇಕಾದಾಗ ತನ್ನ ತೋಟಕ್ಕೆ ಅಂಟಿಕೊಂಡಿರುವ ಕೆರೆ ಏರಿಗೆ ಬಂದು ಅಲ್ಲಿರುವ ನಾನ್ನೂರು, ಐನ್ನೂರು ವರ್ಷಗಳಷ್ಟು ಹಳೆಯದಾದ, ಹತ್ತು ಜನರು ತಬ್ಬಿ ಹಿಡಿದರು ಸಿಗದ ದೈತ್ಯಾಕಾರದ, ಮುಗಿಲೆತ್ತರದ ಮಾವಿನಮರದ ಬುಡದಲ್ಲಿ ಕೂತು ಕೆರೆಯನ್ನ ವೀಕ್ಷಿಸುವಳು. ಅಲ್ಲಿರುವ ಮೀನು, ಬೆಳ್ಳಕ್ಕಿ, ನೀರುಕೋಳಿ, ನಾಮಕೋಳಿಗಳನ್ನ ದಿಟ್ಟಿಸುವಳು. ಕೆಲವೊಮ್ಮೆ ಎಲ್ಲಿಂದಲೋ ಬರುವ ದೊಡ್ಡ ಗಾತ್ರದ ಪಕ್ಷಿಗಳು ಇವಳಿಗೆ ಪ್ರಶ್ನಾರ್ಥಕ ಚಿನ್ಹೆಯಾಗಿರುತ್ತಿದ್ದವು. ದಿಗಂತದ ಅಂಚಿನಲ್ಲಿ ಬಹುದೂರದಲ್ಲಿ ಕಾಣುವ “ಬಿಳಿಕಲ್ಲುಗುಡ್ಡ”ದತ್ತ ನೋಡುತ್ತಾ ಕೂರುವಳು. ಮಾವಿನ ಮರದ ಮೇಲಿಂದ ಗಿಳಿಗಳು, ಅಳಿಲುಗಳು, ಕೋತಿಗಳು ಬೀಳಿಸುವ ಕಾಯಿಗಳನ್ನ, ಹಣ್ಣುಗಳನ್ನ ಆಯ್ದು ಒಂದು ಚೀಲಕ್ಕೆ ಹಾಕುವಳು. ಈ ಹಳೇ ಮಾವಿನ ಮರದ ವಿಶೇಷವೆಂದರೆ ಇದರ ಕಾಯಿಗಳು ಬಲು ಹುಳಿ, ಹಣ್ಣುಗಳು ಅಷ್ಟೇ ಸಿಹಿ!. ಈ ಬೃಹತ್ ಮಾವಿನ ಮರವನ್ನ ಯಾರಿಂದಲೂ ಹತ್ತಲು ಸಾಧ್ಯವಾಗಿಲ್ಲ. ಕಲ್ಲಿನಿಂದಲೋ, ಕೋಲಿನಿಂದಲೋ ಮಾತ್ರ ಮಾವಿನ ಕಾಯಿಯನ್ನ ಉದುರಿಸಬೇಕು. ಎಷ್ಟೋ ಸಲ ದನ ಕಾಯುವ ಹುಡುಗರು ಹಾಲಜ್ಜಿ ಕಾಣದ ಸಮಯ ನೋಡಿ ಕಲ್ಲಲ್ಲಿ ಮಾವಿನ ಕಾಯಿಗೆ ಹೊಡೆಯುವರು, ಹಾಲಜ್ಜಿ ಕಂಡದ್ದೆ ತಡ ಓಡುವರು. ಇಂತ ಹಾಲಜ್ಜಿಗೆ ಒಬ್ಬಳು ಗೆಳತಿಯಿದ್ದಳು, ಅವಳು ಚೋವ್ಕ್ಲಿಬಾಯಿ. ಚೋವ್ಕ್ಲಿಬಾಯಿ ದುಮ್ಮಳ್ಳಿಯ ಲಂಬಾಣಿ ಹ್ಯಾಡಿ, ವಯಸ್ಸಿನಲ್ಲಿ ಹಾಲಜ್ಜಿಗಿಂತ ಸ್ವಲ್ಪ ಚಿಕ್ಕವಳು ಆದರೂ ಬೆನ್ನುಬಾಗಿ ಬಿದಿರಿನ ದೊಣ್ಣೆಯಿಡಿದು ಓಡಾಡುತ್ತಾಳೆ.
ಚೋವ್ಕ್ಲಿಬಾಯಿಗೆ ಇಬ್ಬರೂ ಹೆಣ್ಣು ಮಕ್ಕಳು ಒಬ್ಬ ಮಗ. ಹೆಣ್ಣು ಮಕ್ಕಳು ಮದುವೆಯಾಗಿ ಆಯನೂರಿನ ಹತ್ತಿರ ಯಾವುದೋ ತಾಂಡಾದಲ್ಲಿದ್ದಾರೆ. ಮಗನಿಗೂ ಮದುವೆಯಾಗಿದೆ, ಸೊಸೆ ಘಾಟಿ ಹೆಂಗಸು, ಅತ್ತೆ ಕಂಡರೆ ಆಗದು. ಮೊಮ್ಮಕ್ಕಳನ್ನ ಚೋವ್ಕ್ಲಿಬಾಯಿ ಹತ್ತಿರ ಮಾತಾಡುವದಕ್ಕೂ ಬಿಡೋದಿಲ್ಲ. ಮಗ ಹನುಮನಾಯ್ಕ ಹೆಂಡತಿ ಗುಲಾಮ. ಚೋವ್ಕ್ಲಿಬಾಯಿ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕು. ಕೈಲಾಗದೆ ಇತ್ತೀಚೆಗೆ ಭೀಕ್ಷೆ ಬೇಡುವ ಕಾಯಕಕ್ಕಿಳಿದ್ದಿದ್ದಾಳೆ. ಒಂದು ಹಳೆಯ ಚೀಲ, ಪಾತ್ರೆ, ಲೋಟ ಮತ್ತು ತಟ್ಟೆಯಿಡಿದು ನಮ್ಮೂರಿಗೆ ಬಂದು ಭೀಕ್ಷೆ ಬೇಡಿ ಬಂದುದ್ದರಲ್ಲಿ ದುಮ್ಮಳ್ಳಿಗೆ ಹಿಂದಿರುಗುತ್ತಾಳೆ. ಚೋವ್ಕ್ಲಿಬಾಯಿ ದುಮ್ಮಳ್ಳಿಯಿಂದ ನಮ್ಮೂರಿಗೆ ಬರಬೇಕಾದರೆ ನಮ್ಮೂರ ಕೆರೆಏರಿಮೇಲೆ ಹಾಲಜ್ಜಿ ತೋಟದ ಪಕ್ಕದಲ್ಲಿಯೇ ಬರಬೇಕು. ಹಾಲಜ್ಜಿ ತೋಟಕ್ಕೆ ಬರುವ ವೇಳೆಗಾಗಲೇ ಚೋವ್ಕ್ಲಿಬಾಯಿ ಎರಡು ಮೈಲಿ ನೆಡೆದು ಸುಸ್ತಾಗಿರುತ್ತಾಳೆ. ಚೋವ್ಕ್ಲಿಬಾಯಿ ಹಾಲಜ್ಜಿ ತೋಟಕ್ಕೆ ಬರುವ ವೇಳೆಗಾಗಲೇ ಹಾಲಜ್ಜಿ ಮಾವಿನಮರದ ಬುಡಕ್ಕೆ ಬಂದು ಕೂರುವಳು. ಇಬ್ಬರು ಕುಳಿತು ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚಿನ ಪರಂಗಿಯವರ ಮತ್ತು ತದನಂತರದ ದಿನಗಳ ಗತಕಾಲದ ಘಟನೆಗಳನ್ನೆಲ್ಲಾ ಮೆಲುಕು ಹಾಕುತ್ತಾ ಸಮಯ ಕಳೆಯುವರು. ಸ್ವಲ್ಪ ಸಮಯದ ನಂತರ ಚೋವ್ಕ್ಲಿಬಾಯಿ ತನ್ನ ಆ ದಿನದ ಕಾಯಕ್ಕಕ್ಕೇ ಹೊರಡುವಳು. ಊರಲೆಲ್ಲಾ ತಿರುಗಿ ತನ್ನ ತುತ್ತಿನ ಚೀಲವನ್ನ ತುಂಬಿಸಿಕೊಳ್ಳುವಳು.
ಕೆಲವೊಮ್ಮೆ ಚೋವ್ಕ್ಲಿಬಾಯಿ ಮನೆಮುಂದೆ ಭಿಕ್ಷೆಗೆ ಬಂದರೆ ಕೇರಿಯೊಳಗಿನ ಚಿಕ್ಕಮಕ್ಕಳೆಲ್ಲಾ ಅವಳ ಲಂಬಾಣಿ ವೇಷವನ್ನ ನೋಡಿ “ಹ್ಯಾಡಿ, ಹ್ಯಾಡಿ, ಬುಲ್, ಬುಲ್. ನಾನ್ ಬರ್ತಿನ್, ನಿಲ್, ನಿಲ್” ಎಂದು ಹಾಡುತ್ತವೆ. ಚೋವ್ಕ್ಲಿಬಾಯಿಗೆ ಮಕ್ಕಳ ಹಾಡನ್ನ ಕೇಳಿ ಕೆಲವೊಮ್ಮೆ ಖುಷಿಯಾಗುತ್ತದೆ, ಮತ್ತೆ ಕೆಲವು ಸಲ ಕೋಪ ಬರುತ್ತೆ. ಕೋಪಬಂದಾಗ ತನ್ನ ಬಿದಿರಿನ ದೊಣ್ಣೆಯಿಂದ ಮಕ್ಕಳನ್ನ ಗದರಿಸುತ್ತಾಳೆ. ಮತ್ತೆ ಹಿಂದಿರುಗುವಾಗ ಭಟ್ಟರ ಅಂಗಡಿಯಲ್ಲಿ ತನ್ನ ಭಿಕ್ಷೆಯ ಬಿಡಿಗಾಸಿನಲ್ಲಿ ತನ್ನ ಗೆಳತಿಗೆ ಎಲೆ,ಹೊಗೆಸೊಪ್ಪು ಕೊಂಡು ಬರುವಳು. ನಂತರ ಗೆಳತಿಯರಿಬ್ಬರು ಕುಳಿತು ಮಾತಿಗಾರಂಭಿಸುವರು, ಅದೇ ಸಮಯಕ್ಕೆ ಮೀನು ಹಿಡಿಯುವ ಕಿಳ್ಳೇಕ್ಯಾತರ ಹೆಂಗಸರು ಬಂದು ಕುಳಿತು ತಮ್ಮ ಮತ್ಸ್ಯಗಂಧದಿಂದ ಆ ಸಭೆಯಲ್ಲೆಲ್ಲಾ ಸುವಾಸನೆ ಬೀರುವರು. ಮುಸ್ಸಂಜೆಗೆ ಜಕಾತಿ ಮೀನು ಹಿಡಿಯಲು ಬರುವನು. ಜಕಾತಿ ನಮ್ಮೂರಿನ ನಡುವಯ್ಯಸ್ಸಿನ ವ್ಯಕ್ತಿ. ಹೆಂಡತಿ ಮಕ್ಕಳೆಲ್ಲಾ ಇದ್ದಾರೆ. ಎಲ್ಲಾ ಜಾತಿಯ ಮೀನುಗಳ ಹೆಸರು ಗೊತ್ತಿರುವ ಮೀನು ಪ್ರಿಯ. ಮೀನು ಹಿಡಿದು ತಿನ್ನುವುದು ಅವನಿಗೆ ಹವ್ಯಾಸ. ತನ್ನ ಕೆಲಸದ ವೇಳೆ ಬಿಡುವು ಸಿಕ್ಕಾಗ ಸಂಜೆಗೆ ಹಾಲಜ್ಜಿ ತೋಟದ ಮಾವಿನ ಮರದ ಕೆಳಗಡೆ ಬಾಳೆದಿಂಡಿನಿಂದ ತೆಪ್ಪ ಮಾಡಿ ಕೆರೆಗೆ ಇಳಿದು ಮೀನು ಹಿಡಿಯುವನು. ಬೇಜಾರಾದಾಗ ಈ ಮಹಿಳಾ ಸಭೆಯಲ್ಲಿ ಹಾಜರಾಗುವುದು ಅಭ್ಯಾಸ. ಆ ವೇಳೆಗಾಗಲೇ ಸೂರ್ಯ ಪಡುವಣಕ್ಕೆ ಹೊರಟಿರುವುದ ನೋಡಿ ದನ ಕಾಯುವ ಹುಡುಗರೆಲ್ಲಾ ಮನೆ ಕಡೆಗೆ ಹೊರಡಲು ತಮ್ಮ ದನ, ಎಮ್ಮೆ ಗಳಿಗೆಲ್ಲ ಕೆರೆಗೆ ಇಳಿಸುವರು. ಹಕ್ಕಿಗಳೆಲ್ಲಾ “ದೇವರು ರುಜು ಮಾಡಿದ” ರೀತಿ ಗೂಡು ಸೇರಲು ಹಾರುವವು. ಕಿಳ್ಳೇಕ್ಯಾತರ ಗಂಡಸರು ತಮ್ಮ ತಮ್ಮ ಡಾಂಬರಿನ ತೆಪ್ಪವನ್ನಾ ತಲೆಮೇಲೆ ಹೊತ್ತುತಂದು, ಕೆರೆ ಏರಿಯ ಪಕ್ಕದಲ್ಲಿರುವ ಮಾವಿನಕೊಪ್ಪಲಲ್ಲಿರುವ ಗುಡಿಸಲುಗಳ ಹತ್ತಿರ ಹಾಕಿ ಯಾವುದೋ ದಿಕ್ಕಿನಿಂದ ಸೆಳೆವ ಸಾರಾಯಿ ವಾಸನೆಯ ಜಾಡು ಹಿಡಿದು ನೆಡೆವರು. ಇದು ಎಷ್ಟೋ ವರ್ಷಗಳಿಂದ ನೆಡೆದುಕೊಂಡು ಬಂದ ಪರಾವರ್ತಿತ ಪ್ರತಿಕ್ರಿಯೆ.
ಹಾಲಜ್ಜಿಗೆ ಸೋಮವಾರ ಬಂತೆಂದರೆ ಮಹಾನ್ ದೈವಭಕ್ತಿ. ಅಂದು ತೋಟಕ್ಕೆ ಬರುವಾಗಲೇ ಕೆರೆಯಲ್ಲಿ ಸ್ನಾನ ಮಾಡಿ ಮಡಿಬಟ್ಟೆ ಉಟ್ಟು ನಮ್ಮೂರ ದೇವತೆ ದೊಣ್ಣೆ ಕೆಂಚಮ್ಮನ ಗದ್ದಿಗೆಗೆ, ಕರಿಬಸಜ್ಜಯ್ಯಂಗೆ, ಹಾಲಸಿದ್ದಪನಿಗೆ ನಮಿಸಿ. ಈಶ್ವರನ ಗುಡಿಗೆ ಪೂಜೆ ಮಾಡಿ. ಪಕ್ಕದ ತೋಟದಲ್ಲಿರುವ ಬ್ರಹ್ಮದೇವರಿಗೆ ಪೂಜಿಸುತ್ತಾಳೆ. ಈ ಬ್ರಹ್ಮದೇವರಿಗೆ ಪೂಜಿಸುವುದು ಹಾಲಜ್ಜಿ ಮಾತ್ರ! ಅಲ್ಲಿರುವುದು ಬ್ರಹ್ಮನ ವಿಗ್ರಹವಲ್ಲ, ಅದು ಯಾವುದೋ ಮಾಸ್ತಿಗಲ್ಲೋ, ವೀರಗಲ್ಲೋ. ಕೆಲವರು ಅದನ್ನ ಬ್ರಹ್ಮರಾಕ್ಷಸನ ಮಟ್ಟಿ ಎಂದು ಕರೆಯುತ್ತಾರೆ. ಹಾಲಜ್ಜಿಗೆ ಈ ವಿಗ್ರಹ ಸಾಕ್ಷಾತ್ ಸೃಷ್ಟಿಕರ್ತ ಬ್ರಹ್ಮ ದೇವನದೆ ಎಂಬ ನಂಬಿಕೆ. ಹಾಲಜ್ಜಿಗೆ ಮತ್ತೊಬ್ಬಳು ಇಷ್ಟದೇವತೆ ಅವಳು “ಕೆರೆಕೋಡಿ ಚೌಡಮ್ಮ”. ಕೆರೆಕೋಡಿ ಚೌಡಮ್ಮಳನ್ನು ಹಾಲಜ್ಜಿ ಏಕವಚನದಲ್ಲೇ ಮಾತನಾಡಿಸುವುದು. ಚೌಡಮ್ಮನ ದೇವಸ್ಥಾನ ನಮ್ಮೂರಿನ ಕೆರೆಯ ಇನ್ನೊಂದು ಕೋಡಿಯಲ್ಲಿದೆ. ಹತ್ತಿ ಮರದ ಬುಡದಲ್ಲಿರುವ ಚಿಕ್ಕ ಕಲ್ಲುಗುಂಡಿನ ಗುಡಿ. ಯಾರಾದರೂ ಹಣಕಾಸಿನ ವ್ಯವಹಾರದಲ್ಲಿ ಹಣವನ್ನ ಹಿಂದಿರುಗಿಸದಿದ್ದಾಗ, ತೋಟ, ಮನೆಗಳಿಗೆ ಕಳ್ಳರ ಕಾಟವಿದ್ದಾಗ, ಮದುವೆ,ಮಕ್ಕಳಾಗದಿದ್ದಾಗ ಮತ್ತು ಯಾವುದೋ ಕಾಯಿಲೆ ಬಂದಾಗ ಚೌಡಮ್ಮನಿಗೆ ಹೇಳಿಕೊಂಡು ತಮ್ಮ ಕಾರ್ಯವಾದಾಗ ಪೂಜಿಸಿ ಕೋಳಿ ಬಲಿಕೊಡುವುದು, ನಂತರ ಕೋಳಿ ಕಾಲು ಮತ್ತು ತಲೆಯನ್ನ ಹತ್ತಿ ಮರಕ್ಕೆ ಕಟ್ಟುವುದು ರೂಡಿ. ಹಾಲಜ್ಜಿಗೆ ಇವುಗಳ ಯಾವುದೇ ಕಾಟವಿಲ್ಲದಿದ್ದರು ವರ್ಷಕೊಮ್ಮೆ ಚೌಡಮ್ಮನಿಗೆ ಪೂಜಿಸಿ ಕೋಳಿಯನ್ನ ಬಲಿ ಕೊಟ್ಟು, ಪೂಜಿಸಿ ಅಲ್ಲಿಯೇ ಕೋಳಿ ಸಾರು ಮತ್ತು ಅನ್ನ ಮಾಡಿ ಚೋವ್ಕ್ಲಿಬಾಯಿ ಮತ್ತು ಆ ವೇಳೆಗೆ ಬೇರೆ ಯಾರಾದರೂ ಬಂದರೆ ಅವರ ಜೊತೆ ಊಟಮಾಡುವುದು ಅವಳ ಸಂಪ್ರದಾಯ.
ಹಾಲಜ್ಜಿನ ಹುಡುಕಿಕೊಂಡು ಯಾರ್‍ಯಾರೋ ವಿಶ್ವವಿಧ್ಯಾನಿಲಯಗಳ ಪ್ರೊಫೆಸ್ಸರ್‌ಗಳು, ವಿದ್ಯಾರ್ಥಿಗಳು, ವಿದೇಶಿ ಯಾತ್ರಿಕರು ಬರುತ್ತಾರೆ. ಹಾಲಜ್ಜಿ ಅವರನ್ನೆಲ್ಲಾ ಹಾಳು ಬಿದ್ದ ಹಳೇ ದೇಗುಲಗಳು, ಬಾವಿಗಳು, ಹಳೇ ವಿಗ್ರಹಗಳನ್ನೆಲ್ಲ ತೋರಿಸುತ್ತಾಳೆ, ಅವರು ಏನೇನೋ ಬರೆದುಕೊಳ್ಳುತ್ತಾರೆ. ಕೊನೆಗೆ ಹೊರಡುವಾಗ ಹಾಲಜ್ಜಿಗೆ ಐವತ್ತೋ, ನೂರೋ ಕೈಗಿಡುತ್ತಾರೆ. ಇದೆ ರೀತಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸಂಶೋಧನೆಗೆಂದು ಬಂದ ಪರಂಗಿ ಹೆಂಗಸೊಬ್ಬಳು ಹಾಲಜ್ಜಿ ಜೊತೆ ಫೋಟೋ ತೆಗೆಸಿಕೊಂಡು ತನ್ನ ದೇಶಕ್ಕೆ ಹೋದ ಮೇಲೆ ಆ ಫೋಟೋಗೆ ಕಟ್ಟು, ಗಾಜು ಹಾಕಿಸಿ ಹಾಲಜ್ಜಿಗೆ ಕಳಿಸಿದ್ದಾಳೆ. ಆ ಫೋಟೋ ಬಗ್ಗೆ ಮಾತನಾಡುವುದೇ ಹಾಲಜ್ಜಿಗೆ ಒಂದು ಹೆಮ್ಮೆ. ಹಾಲಜ್ಜಿಯೊಬ್ಬಳಿಗೆ ಮಾತ್ರ ನಮ್ಮೂರಿನ ಯಾವ ಮೂಲೆಯಲ್ಲಿ ಏನಿದೆ ಎಂದು ತಿಳಿದಿರುವುದು. ನಮ್ಮೂರಿಗೆ ಸಾವಿರವರ್ಷಗಳಿಗಿಂತ ಅಧಿಕ ಇತಿಹಾಸವಿದೆ. ಹಾಲಜ್ಜಿಗೆ ಇತಿಹಾಸದ ಬಗ್ಗೆ ಜ್ಞಾನವಿಲ್ಲ, ಇತಿಹಾಸವೇನೆಂದರೆ ತಿಳಿದ್ದಿಲ್ಲ. ಆದರೆ ಇತಿಹಾಸದ ಕುರುಹುಗಳಿಗೆ ಮತ್ತು ವರ್ತಮಾನಕ್ಕೆ ಸಾಕ್ಷಿಯಾಗಿದ್ದಾಳೆ. ನಮ್ಮೂರು ಸುಮಾರು ನಲವತ್ತು ವರ್ಷಗಳ ಹಿಂದೆ ತೋಟಗಳ ಹತ್ತಿರವೇ ಕೆರೆಗೆ ಅಂಟಿಕೊಂಡೇ ಇತ್ತು. ಆಗ ನಲವತ್ತೋ, ಐವತ್ತೋ ಮನೆಗಳಿದ್ದವು. ಕೆರೆಯ ಪಕ್ಕದಲ್ಲಿಯೇ ಅರಳೀಕಟ್ಟೆ ಇತ್ತು. ಸಂಜೆ ಊರಿನ ಗಂಡಸರೆಲ್ಲ ಅರಳಿಕಟ್ಟೆ ಮೇಲೆ ಕುಳಿತು ಹರಟೆಯೊಡೆಯುತ್ತಿದ್ದರು. ಯುವಕರೆಲ್ಲಾ ಗರಡಿಮನೆಯಲ್ಲಿ ದಸರೆಗೆ ಕುಸ್ತಿ ಅಭ್ಯಾಸ ಮಾಡುತ್ತಿದ್ದರು.
ನಮ್ಮೂರಿನಲ್ಲಿ ಓದಿದವರು ಒಬ್ಬರೋ, ಇಬ್ಬರೋ ಇದ್ದರು. ಭತ್ತ, ರಾಗಿ, ತರಕಾರಿಗಳನ್ನ ಮಾತ್ರ ಬೆಳೆಯುತ್ತಿದ್ದರು. ಇದು ಮಳೆಯನ್ನೇ ಅವಲಂಬಿಸಿತ್ತು. ಅಡಿಕೆಗೆ ಮಾತ್ರ ಕೆರೆಯ ನೀರು ಸಾಕಾಗುತ್ತಿತ್ತು. ನಮ್ಮೂರಿನ ಕೆರೆಯನ್ನ ತಲಕಾಡು ಗಂಗರ ದಂಡನಾಯಕ ಚಾವುಂಡರಾಯ ಕಟ್ಟಿಸಿದನೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ನಮ್ಮೂರಿನ ಗದ್ದೆ ಬಯಲುಗಳಲ್ಲಿ ಸಿಕ್ಕಿರುವ ಜೈನ ತೀರ್ಥಂಕರರ ವಿಗ್ರಹಗಳು, ಬಾಹುಬಲಿಯ ಮೂರ್ತಿಗಳು, ಹಳೆಗನ್ನಡದ ಶಾಸನಗಳು, ಶಿವ, ವಿಷ್ಣುವಿನ ವಿಗ್ರಹಹಗಳು, ಮಾಸ್ತಿಗಲ್ಲುಗಳು, ವೀರಗಲ್ಲುಗಳು, ಲಿಂಗಮುದ್ರೆಕಲ್ಲುಗಳು. ವಿಜಯನಗರದ ಮತ್ತು ಕೆಳದಿ ಅರಸರ ಕಾಲದಲ್ಲಿ ನಮ್ಮೂರು ಒಂದು ವ್ಯಾಪಾರ ಕೇಂದ್ರವಾಗಿತ್ತು. ಸುಮಾರು ಇನ್ನೂರು, ಮುನ್ನೂರು ವರ್ಷಗಳಿಗಿಂತ ಹಳೆಯ ಕುಡಿಯುವ ನೀರಿನ ಬಾವಿಗಳ ಸುತ್ತಳತೆ ಕೇವಲ ಎರಡೂವರೆ ಅಡಿ! ಆಳ ನೂರು ಅಡಿಗಳಿಗಿಂತ ಅಧಿಕ. ಭಾವಿಯ ಸುತ್ತ ಕಲ್ಲಿನಿಂದ ಕಟ್ಟಿದ ಗೋಡೆ. ಅಷ್ಟು ಚಿಕ್ಕ ಸುತ್ತಳತೆ ಇರುವ ಬಾವಿಗೆ ಆಳ ತೋಡುವಾಗ ಇಳಿದವರು ಯಾರು? ಕಲ್ಲಿನ ಗೋಡೆ ಕಟ್ಟಿದವರು ಯಾರು ಮತ್ತು ಹೇಗೆ? ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಆಧುನಿಕತೆಯ ಯಾವುದೇ ಆಡಂಬರಗಳಿಲ್ಲದೆ ನೈಸರ್ಗಿಕವಾಗಿ ಜನ ಜೀವನ ಸಹಬಾಳ್ವೆಯಿಂದ ನೆಡೆದಿತ್ತು. ಈ ರೀತಿ ಶಾಂತವಾಗಿದ್ದ ನನ್ನೂರಿನ ಚಿತ್ರಣವೇ ಬದಲಾಗಿದ್ದು ಆಧುನಿಕತೆಯ ಅಭಿವೃದ್ದಿ ಮಂತ್ರದ ಹೊಡೆತಕ್ಕೆ ಸಿಕ್ಕಾಗ! ಸರ್ ಎಂ ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಕಾರ್ಖಾನೆಗಳನ್ನ ಸ್ಥಾಪಿಸಿದರು. ನಂತರ ಭದ್ರಾನದಿಗೆ ಮೀರ್ಜಾಇಸ್ಮಯಾಲ್ ರವರು ಅಣೆಕಟ್ಟು ಕಟ್ಟಿಸಿದರು.
ಭದ್ರಾನದಿ ಯೋಜನೆಯಿಂದ ನಮ್ಮೂರಿಗೆ ನೀರು ಹರಿಯಿತು. ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಯಿತು. ಊರು ಸ್ಥಾನಪಲ್ಲಟಗೊಂಡು ಸುಮಾರು ಒಂದು ಮೈಲು ದೂರಕ್ಕೆ ಹೋಯಿತು. ಹಳೆಯ ಮನೆಗಳು, ದೇವಾಲಯಗಳು ಕಾಲದ ಹೊಡೆತಕ್ಕೆ ಸಿಕ್ಕು ಪಳೆಯುಳಿಕೆಗಳಾದವು. ಆ ಜಾಗದಲ್ಲೆಲ್ಲಾ ಭತ್ತ, ಕಬ್ಬು ಮತ್ತು ಅಡಿಕೆಗಳು ಬೆಳೆಯಲಾರಂಬಿಸಿದವು, ಈಗ ಅಲ್ಲಿ ಉಳಿದಿರುವುದು ಕೆಲವು ದೇವಾಲಯಗಳು ಮತ್ತು ಊರಿನ ಸಾಹುಕಾರರ ಭಾರಿ ಹಳೆಯ ಮನೆ. ಆ ಮನೆಯ ಸುತ್ತ ಅಡಿಕೆ ತೋಟಗಳಿದ್ದು ಕಾಡಿನ ಮಧ್ಯದ ಒಂಟಿ ಮನೆಯ ರೀತಿ ಇದೆ. ಹಗಲಿನಲ್ಲಿಯೇ ಜನ ಆ ಮನೆ ಹತ್ತಿರ ಹೋಗಲು ಭಯ ಬೀಳುತ್ತಾರೆ. ಭಾರಿ ಗಾತ್ರದ ಎರಡು ಗೂಬೆಗಳು ಮಾತ್ರ ಆ ಮನೆಯಮೇಲೆ ಯಾವಾಗಲು ಕುಳಿತು ವಿಚಿತ್ರವಾಗಿ ಕೂಗುತ್ತವೆ, ಈ ಗೂಬೆಗಳ ಜೊತೆ ನೆಲಗುಮ್ಮಾವೊಂದು ಸ್ಪರ್ಧೆಗಿಳಿದು ಕಿರುಚುತ್ತದೆ. ಆ ಮನೆಯ ಹಿಂಬಾಗದಲ್ಲಿ ಒಂದು ಸುಂದರವಾದ ಹೂ ತೋಟವಿದೆ. ಹಾಲಜ್ಜಿ ಮಾತ್ರ ಯಾವುದೇ ಭಯವಿಲ್ಲದೆ ತನ್ನ ಸೋಮವಾರದ ಪೂಜೆಗೆ ಹೂಗಳನ್ನು ಈ ತೋಟದಿಂದಲೇ ಕಿತ್ತು ತರುವಳು. ಇತಿಹಾಸ ಮತ್ತು ವರ್ತಮಾನದ ಕೊಂಡಿಯಾಗಿ ಮತ್ತು ಅದಕ್ಕೆ ಸಾಕ್ಷಿಯಾಗಿ, ಆಧುನಿಕ ಜಗತ್ತಿನ ಯಾವುದೇ ಜಂಜಾಟವಿಲ್ಲದೆ ಹಾಲಜ್ಜಿ ಜೀವನ ಶಾಂತ ರೀತಿಯ ನದಿಯ ಹಾಗೇ ಸಾಗುತಿತ್ತು.
ಈ ವರ್ಷ ನಮ್ಮೂರಿನ ಜನರಿಗೆಲ್ಲಾ ಏನೋ ಒಂದು ರೀತಿ ಸಡಗರ, ಅದಕ್ಕೇ ಕಾರಣ ಮಾರಿ ಜಾತ್ರೆ. ನಮ್ಮೂರಿನಲ್ಲಿ ಬೇರೆ ಹಬ್ಬಗಳು ಎಷ್ಟು ಬಂದರು ಮಾರಿ ಜಾತ್ರೆಯಷ್ಟು ಜೋರಾಗಿರುವುದಿಲ್ಲ. ನಮ್ಮೂರಿನ ಮಾರಿ ಹಬ್ಬಕ್ಕೂ ಮತ್ತೂರಿನ ಮಾರಿ ಹಬ್ಬಕ್ಕೂ ಸಂಬಂಧವಿದೆ. ಮತ್ತೂರಿನಲ್ಲಿ ಮಾರಿ ಹಬ್ಬವನ್ನ ಮಾಡಿದರೆ ಮಾತ್ರ ನಮ್ಮೂರಿನಲ್ಲಿ ಮಾರಿ ಹಬ್ಬ ಮಾಡುವುದು. ಈ ಮಾರಿಹಬ್ಬಕ್ಕೆ ಒಂದು ದೊಡ್ಡ ಕಥೆಯೇ ಇದೆ. ಹೀಗೆ ಇನ್ನೂರು ವರ್ಷಗಳ ಹಿಂದೆ ಭೀರಪ್ಪನೆಂಬ ನಮ್ಮೂರಿನ ಯುವಕನೊಬ್ಬ ಐದು ಮೈಲುಗಳು ದೂರದ ಮತ್ತೂರಿಗೆ ಮಾರಿಹಬ್ಬ ನೋಡಲು ಹೋಗಿದ್ದ. ಸಾಮಾನ್ಯವಾಗಿ ಮತ್ತೂರಿನ ಮಾರಿ ಹಬ್ಬ ಮೂರು ವರ್ಷಕ್ಕೊಮ್ಮೆ ನೆಡೆಯುತ್ತದೆ. ಅದು ಮೂರು ದಿನಗಳ ಹಬ್ಬ. ಮೊದಲನೆ ದಿನ ಬ್ರಾಹ್ಮಣರು ಮತ್ತು ಇತರೆ ಸಸ್ಯಹಾರಿಗಳು ಪೂಜಿಸುವ ದಿನ. ಎರಡನೆ ದಿನ ತಿನ್ನುಉಣ್ಣುವ ಮಾಂಸಹಾರಿಗಳ ಪೂಜಿಸುವ ದಿನ. ಮೊದಲದಿನದ ಮಧ್ಯರಾತ್ರಿಯಲ್ಲಿ ಮಾರಿಗೆ ಬಿಟ್ಟ ಕೋಣವನ್ನ ಬಲಿ ಕೊಡುತ್ತಾರೆ. ಆಗ ಕೋಣವನ್ನ ಬಲಿ ಕೊಟ್ಟಾಗ ಚಿಮ್ಮುವ ರಕ್ತವನ್ನ ಆ ಊರಿನ ಮಣ್ಣಿನಲ್ಲಿಯೇ ಮುಚ್ಚುತ್ತಾರೆ. ಆ ರಕ್ತದ ಒಂದು ಹನಿಯನ್ನೂ ಬೇರೆ ಊರಿನ ವ್ಯಕ್ತಿಗಳು ತೆಗೆದುಕೊಂಡು ಹೋಗುವಾಗಿಲ್ಲ. ಕೋಣವನ್ನ ಕಡಿಯುವುದನ್ನೇ ಕಾಯುತ್ತಿದ್ದ ನಮ್ಮೂರಿನ ಭೀರಪ್ಪ ಯಾರಿಗೂ ಕಾಣದ ಹಾಗೆ ಜಿಂಕೆಯ ಹಾಗೇ ಚಂಗನೆ ಜಿಗಿದು ರಕ್ತಸಿಕ್ತವಾಗಿದ್ದ ಮತ್ತೂರಿನ ಆ ಮಣ್ಣನ್ನ ಕೈಯಲ್ಲಿ ಹಿಡಿದು ನಮ್ಮೂರ ಕಡೆ ಓಡಿದ.
ಆ ಸಮಯದಲ್ಲಿ ಇದನ್ನು ನಿರೀಕ್ಷಿಸದ ಮತ್ತೂರಿನ ಜನ ಕತ್ತಿ, ದೊಣ್ಣೆಗಳನ್ನ ಹಿಡಿದು ಭೀರಪ್ಪನ ಹಿಂದೆಯೇ ಓಡಿಸಿಕೊಂಡು ಬಂದರು. ಭೀರಪ್ಪ ಮತ್ತೂರು ಕೆರೆ ಏರಿಯ ಮೇಲೆ ಅಡಿಕೆ ತೋಟಗಳೊಳಗೆ ತಪ್ಪಿಸಿಕೊಂಡು ನಮ್ಮೂರಿನ ಗಡಿಯೊಳಕ್ಕೆ ಇನ್ನೇನು ನುಸುಳಬೇಕು ಅನ್ನುವಷ್ಟರಲ್ಲಿ ನೆಲಕ್ಕೆ ಬಿದ್ದ. ತಕ್ಷಣವೇ ತನ್ನ ಕೈಲಿದ್ದ ರಕ್ತದ ಮಣ್ಣನು ನಮ್ಮೂರಿನ ಗಡಿಯೊಳಕ್ಕೆ ಎಸೆದ. ಮತ್ತೂರಿನ ಜನ ಭೀರಪ್ಪನನ್ನು ಬಿಡದೆ ಕೊಂದರು. ಅಂದಿನಿಂದ ಪ್ರತಿ ಮೂರುವರ್ಷಕೊಮ್ಮೆ ನಮ್ಮೂರಿನಲ್ಲಿ ಮಾರಿ ಜಾತ್ರೆ ನೆಡೆಯುತ್ತದೆ. ನಮ್ಮೂರಿನ ಮಾರಿಯನ್ನ ಗೇರು ಮರದ ಕಾಂಡದಿಂದ ಕೆತ್ತಿ ಸುಂದರವಾದ ಮಾರಮ್ಮನನ್ನ ಮಾಡಿ ವಸ್ತ್ರಾಭರಣಗಳಿಂದ ಸಿಂಗರಿಸಿ ಆಚರಿಸುತ್ತಾರೆ. ಒಂದು ತಿಂಗಳು ಮುಂಚೆಯೇ ಮಾರಿಗೆ ಬೇಕಾದ ಗೇರು ಮರವನ್ನ ಉಂಬಳೆಬೈಲು ಕಾಡಿನಿಂದ ಹಿರಿಕಿರಿಯರೆನ್ನದೆ ಹೋಗಿ ಕಡಿದು ತರುತ್ತಾರೆ. ಮತ್ತೂರಿನಲ್ಲಿ ಆಚರಿಸಿದ ಹಾಗೆಯೇ ನಮ್ಮೂರಿನಲ್ಲೂ ಆಚರಿಸುವುದು, ಆದರೆ ಕೋಣನ ಬದಲು ಕುರಿಯ ಟಗರನ್ನ ಮೊದಲ ಬಲಿಯಾಗಿ ಕೊಡುತ್ತಾರೆ, ನಂತರ ಮೇಕೆ, ಆಡು, ಕೋಳಿಗಳನ್ನ ಬಲಿಕೊಡುತ್ತಾರೆ. ಮೊದಲ ಟಗರಿನ ರಕ್ತವನ್ನ ಪರವೂರಿನವರು ಮುಟ್ಟುವ ಆಗಿಲ್ಲ. ಹಬ್ಬದ ಆಚರಣೆಯೆಲ್ಲಾ ಮುಗಿದ ಮೇಲೆ ಮಾರಿಯನ್ನ ಭೀರಪ್ಪ ಎಸೆದ ಮಣ್ಣು ಬಿದ್ದ ಜಾಗದಲ್ಲಿರುವ ಗೇರು ಮರಗಳ ಮಧ್ಯದಲ್ಲಿರುವ ಮಾರಿ ಗದ್ದಿಗೆಗೆ ಕಣ್ಣು ಕಟ್ಟಿ ಬಿಡುತ್ತಾರೆ. ಮತ್ತೆ ಮೂರುವರ್ಷದ ನಂತರ ಮಾರಿಹಬ್ಬ, ಅದು ಮತ್ತೂರಿನವರು ಮಾಡಿ ಮುಗಿಸಿದ ಹದಿನೈದು ದಿನಗಳ ನಂತರ. ಮತ್ತೂರಿನವರು ಕಳೆದ ಐದು ವರ್ಷಗಳಿಂದ ಹಬ್ಬವನ್ನು ಆಚರಿಸಿರಲಿಲ್ಲ. ಆದ್ದರಿಂದ ನಮ್ಮೂರಿನಲ್ಲೂ ಹಬ್ಬ ನೆಡೆದಿರಲಿಲ್ಲ. ಈ ವರ್ಷ ಅವರು ಹಬ್ಬವನ್ನ ಆಚರಿಸುತ್ತಿರುವುದೇ ನಮ್ಮೂರಿನ ಜನಕ್ಕೆ ಸಂತೋಷ. ನಮ್ಮೂರಿನ ಹಿರಿಯರೆಲ್ಲಾ ಗೇರು ಮರ ತರಲು ರೆಡಿಯಾಗುತ್ತಿದ್ದಾರೆ. ಈ ವಿಷಯ ಗಾಳಿಯಲ್ಲಿ ತೇಲಿಬಂದು ಹಾಲಜ್ಜಿ ಕಿವಿಗೆ ಹೇಗೆ ಬಿತ್ತೋ ತಿಳಿಯದು ಅವಳ ಖುಷಿಗೆ ಪಾರವೇ ಇಲ್ಲ.
ನಮ್ಮೂರ ಮಾರಿ ಹಬ್ಬಕ್ಕೆ ಸುತ್ತಮುತ್ತಲ ಹಳ್ಳಿ ಜನರೆಲ್ಲಾ ಬರುತ್ತಾರೆ. ಶಿವಮೊಗ್ಗ, ಭದ್ರಾವತಿ, ತರೀಕೆರೆ, ಲಕ್ಕವಳ್ಳಿ, ಬೀರೂರು, ಕಡೂರು, ಹೊನ್ನಾಳಿ, ಶಿಕಾರಿಪುರಗಳಲ್ಲದೆ ಬೆಂಗಳೂರು, ಮದ್ರಾಸುಗಳಿಂದಲೂ ನೆಂಟರುಗಳು ಬರುವುದುಂಟು. ಊರಿಗೆ ಊರೇ ಮಾವಿನ ತೋರಣ, ಸುಣ್ಣ, ಬಣ್ಣ, ಕೆಮ್ಮಣ್ಣು ಗಳಿಂದ ಸಿಂಗಾರಗೊಂಡು ಒಳ್ಳೆ ಮದುವಣಗಿತ್ತಿಯ ರೀತಿ ಕಂಗೊಳಿಸುತ್ತಿರುತ್ತದೆ. ಊರು ತುಂಬಾ ಗಿಜಿ ಗಿಜಿ, ಜನವೋ ಜನ. ಇತ್ತೀಚೆಗೆ ಮೈಕ್‌ಸೆಟ್ ಗಳ ಅಬ್ಬರ, ಚಿಕ್ಕಮಕ್ಕಳಿಗೆ ಜಾತ್ರೆಯಲ್ಲಿ ಸಿಗುವ ಸಿಹಿ ತಿಂಡಿಗಳು, ಆಟದ ಸಾಮಾನುಗಳು, ಗೊಂಬೆ ಕುಣಿತ, ಕರಡಿ ಕುಣಿತ, ಕುದುರೆ ಆಟ, ಚಿಕ್ಕ ಜಾಯಂಟ್ ವೀಲ್, ಬಲೂನ್ ಗಳ ಸಂಭ್ರಮವೋ ಸಂಭ್ರಮ. ಯುವಕ, ಯುವತಿಯರಿಗೆ ತಮ್ಮ ಗೆಳೆಯ, ಗೆಳತಿಯರನ್ನು ಕೂಡಿ ನಲಿಯುವ ಸಡಗರ. ದೊಡ್ಡವರಿಗೆ ಹಬ್ಬದ ಮೃಷ್ಟಾನ್ನ ಭೋಜನ, ಹೊಸ ಬಟ್ಟೆಗಳಲ್ಲಿ ಮಿಂಚುವ ಖುಷಿ. ಈ ದೃಶ್ಯಗಳನ್ನ ನೋಡಿ ಆನಂದಿಸುವುದೇ ಹಾಲಜ್ಜಿಗೆ ಪರಮಾನಂದ. ಹಾಲಜ್ಜಿಯ ಆನಂದಕ್ಕೆ ಇನ್ನೊಂದು ಕಾರಣ ತನ್ನ ವಾರಿಗೆಯ ಹಳೆಯ ಮುದುಕ,ಮುದುಕಿಯರೇನಾದರೂ ಸುತ್ತಮುತ್ತಲ ಊರುಗಳಲ್ಲಿ ಬದುಕಿದ್ದರೆ ಮಾರಿ ಹಬ್ಬ ನೋಡಲು ಬರುತ್ತಾರೆ ಅವರನ್ನ ಕಂಡು ಕ್ಷೇಮ ಸಮಾಚಾರಗಳನ್ನ ವಿಚಾರಿಸಬಹುದೆಂದು. ವಯ್ಯಸ್ಸಾದವರಿಗೆ ಭವಿಷ್ಯತ್ ಕಾಲದಲ್ಲಿ ಆಸಕ್ತಿ ಇರುವುದಿಲ್ಲ, ಅವರಿಗೆ ತಮ್ಮ ಭೂತಕಾಲದಲ್ಲಿ ಬದುಕುವುದೆಂದರೆ ಬಲು ಖುಷಿ. ಒಟ್ಟಿನಲ್ಲಿ ಚಿಕ್ಕಮಕ್ಕಳಿಗೆ ಮಾರಿಹಬ್ಬ ಕೊಡುವಷ್ಟೇ ಖುಷಿಯನ್ನ ಹಾಲಜ್ಜಿಗೂ ಕೊಟ್ಟಿತು. ಈ ಸಲದ ಮಾರಿಹಬ್ಬ ಪ್ರತಿಸಲಕ್ಕಿಂತ ವಿಜೃಂಭಣೆಯಿಂದ ನೆಡೆಯಿತು ಮತ್ತು ಊರಿನ ಜನರೆಲ್ಲಾ ಸಂತೋಷಪಟ್ಟರು. ಒಂದು ವಾರ ಪೂರ್ತಿ ಊರಲ್ಲಿ ಯಾರ ಬಾಯಲ್ಲಿ ನೋಡಿದರು ಮಾರಿ ಹಬ್ಬದ ಮಾತೇ ಮಾತು.
ಈ ಸಲ ಮಾರಿಹಬ್ಬವೇನೋ ವಿಜೃಂಭಣೆಯಿಂದ ನೆಡೆಯಿತು ಆದರೆ ಹಾಲಜ್ಜಿಗೆ ಏನೋ ಒಂದು ರೀತಿ ಅಸಮಾಧಾನ. ಅದಕ್ಕೆ ಕಾರಣ ಹಾಲಜ್ಜಿಯ ವಾರಿಗೆಯವರಾರು ಕಾಲನಿಮಿತ್ತ ಬಂದಿರಲಿಲ್ಲ. ಹರಿಗೆಯ ಹಳದಜ್ಜ ಕಾಲನವಶಕ್ಕೆ ಕಾಲವಾಗಿದ್ದ. ಚಿಲಕಾದ್ರಿಹಳ್ಳಿಯ ಕಾಳಜ್ಜಿಗೆ ನೆಡೆಯಲು ಆಗದು. ಇಸ್ಲಾಪುರದ ಕೆಂಚಣ್ಣನಿಗೆ ಕಣ್ಣು ಕಾಣಿಸುತ್ತಿಲ್ಲ. ಮಲ್ಲವಗೊಪ್ಪದ ಮಲ್ಲಜ್ಜಿಗೆ ಯಾರೂ ಕರೆದುಕೊಂಡು ಬರಲಿಲ್ಲ. ಚೋವ್ಕ್ಲಿಬಾಯಿಗೆ ಇತ್ತೀಚೆಗೆ ಯಾವುದೋ ಹೆಸರಿಲ್ಲದ ಕಾಯಿಲೆ. ಹಾಲಜ್ಜಿಗೆ ತೋಟಕ್ಕೆ ಬಂದರು ಏನನ್ನು ಮಾಡಲು ಮನಸ್ಸಿಲ್ಲ. ಇಷ್ಟುವರ್ಷ ಸುಧೀರ್ಘ ಜೀವನದಲ್ಲಿ ಹಾಲಜ್ಜಿಗೆ ಎಂದೂ ಈ ರೀತಿ ಆಗಿರಲಿಲ್ಲ. ಸುಮ್ಮನೆ ಮಾವಿನ ಮರದ ಕೆಳಗೆ ಬಂದು ಯೋಚಿಸುತ್ತಾ ಕುಳಿತಳು. ತನ್ನ ಜೀವನದ ಘಟನೆಗಳೆಲ್ಲಾ ಕಣ್ಣಿನ ಮುಂದೆ ಬರಲಾರಂಬಿಸಿದವು.
ಹತ್ತುವರ್ಷಕ್ಕೆ ಮದುವೆ, ಹನ್ನೊಂದಕ್ಕೆ ವಿಧವೆ. ಇದ್ದ ಅಪ್ಪ, ಅಮ್ಮ, ಅಣ್ಣ ಮಹಾ ಮಾರಿ ಪ್ಲೇಗ್ ಗೆ ಬಲಿ. ಈ ಊರಿಗೆ ಅಷ್ಟು ದೂರದಿಂದ ಬಂದು ನೆಲೆಸಿದ್ದು, ಎಲ್ಲಾ ಕನಸ್ಸಿನ ಹಾಗೇ ನೆಡೆದು ಹೋದದ್ದು. ಈ ರೀತಿ ಕುಳಿತ ಹಾಲಜ್ಜಿಗೆ ಮಾವಿನ ಮರದ ಮೇಲಿನ ಒಂಟಿ ಗೂಬೆಯೊಂದು ತನ್ನ ಹಗಲುಗುರಡು ಕಣ್ಣುಗಳಿಂದ ತಿನ್ನುವ ಹಾಗೆ ನೋಡುತಿತ್ತು. ಹಾಲಜ್ಜಿಗೆ ಇದ್ದಕಿದ್ದ ಹಾಗೇ ಎಲ್ಲಾ ಬದಲಾದ ಹಾಗೆ ಕಾಣಿಸಲಾರಂಭಿಸಿತು. ಸದಾ ಹಸಿರಿನಿಂದ ಕೂಡಿದ್ದ ನಮ್ಮೂರ ತೋಟಗಳ ಸಾಲು ಹಾಲಜ್ಜಿಗೆ ಮರುಭೂಮಿಯ ಹಾಗೆ ಸುಡುವ ಹಾಗಾಯಿತು. ಊರ ಹೆಂಗಸರು, ಅವರ ಉಡುಗೆ ತೊಡುಗೆಗಳೆಲ್ಲಾ ಬದಲಾದವು. ಎಲ್ಲಾ ಹೆಂಗಸರೂ ಟೀವಿ ಮುಂದೆ ಸಮಯ ಕಳೆಯಲಾರಂಭಿಸಿದರು. ಇತ್ತೀಚೆಗೆ ಕಿಳ್ಳೇಕ್ಯಾತರು ಯಾವುದೋ ಬೇರೆ ಊರಿನ ಕೆರೆಗೆ ಹೋದರು. ನಮ್ಮೂರಿನ ಕೆರೆಗೆ ಅದೇನೋ ಅಂತರಗಂಗೆ ಬೆಳೆದು ಸುಂದರವಾದ ತಾವರೆ, ನೈದಿಲೆಗಳೇ ಕಾಣದಾದವು. ಕೆರೆಯ ನೀರು ಹಾಲಜ್ಜಿ ಸ್ನಾನ ಮಾಡಿದರೆ ಕಡಿಯಲಾರಂಭಿಸಿತು, ಮೈಮೇಲೆ ಗುಳ್ಳೆಗಳಾದವು. ಅಡಿಕೆಗೆ ಬಂಗಾರದ ಬೆಲೆ ಬಂತು. ಸಕ್ಕರೆ ಕಾರ್ಖಾನೆ ನಸ್ಟದಲ್ಲಿ ನೆಡೆಯಲಾರದೆ, ರೈತರಿಗೆ ಹಣವೂ ಇಲ್ಲದೆ ನಿಂತು ಹೋಯಿತು. ಅಡಿಕೆ ಬೆಳೆದವರ ಕೈಯಲ್ಲಿ ಗಾಂಧಿ ನೋಟುಗಳು ಓಡಾಡಲು ಆರಂಭಿಸಿದವು. ರೈತರು ತಮ್ಮ ಕಬ್ಬಿನ ಗದ್ದೆಯನ್ನೆಲ್ಲಾ ಅಡಿಕೆ ತೋಟ ಕಟ್ಟಿದರು. ಕಬ್ಬಿನ ಗದ್ದೆಯಲ್ಲಿದ್ದ ಕಾಡು ಹಂದಿಗಳು, ಕಾಡು ಬೆಕ್ಕುಗಳು, ನರಿಗಳು ದಿಕ್ಕಾಪಾಲಾದವು. ಗದ್ದೆ ಮಾರಿಸುವ, ಅಡಿಕೆ ಚೇಣಿ ಕೊಡಿಸುವ ದಲ್ಲಾಳಿಗಳು ಜಾಸ್ತಿಯಾದರು. ಊರಲೆಲ್ಲಾ ಕುರುಡು ಕಾಂಚಾಣ ತನ್ನ ರಾಕ್ಷಸ ರೂಪದಿಂದ ಕುಣಿಯಲಾರಂಭಿಸಿತು.
ಈ ರೀತಿ ಬದಲಾದ ಕಾಲಕ್ಕೆ ಹಾಲಜ್ಜಿ ಹೊಂದಿಕೊಳ್ಳಲು ಕಷ್ಟವಾಯಿತು. ಅಂದೊಂದು ದಿನ ರಾತ್ರಿ ಊರಿನಲ್ಲಿರುವ ಕರುವೊಂದು ಕಾಣೆಯಾಯಿತು. ನಂತರದ ದಿನಗಳಲ್ಲಿ ಕುರಿಗಳು, ಮೇಕೆಗಳು ಕಾಣೆಯಾದವು. ಜನರೆಲ್ಲಾ ಭಯಭೀತರಾದರು, ಕೆಲವರು ರಾತ್ರಿಹೊತ್ತು ಯಾವುದೋ ವಿಚಿತ್ರ ಪ್ರಾಣಿ ಕೂಗುತ್ತೆ ಅಂದರು. ಮತ್ತೆ ಕೆಲವರು ಚಿರತೆಯನ್ನೋ, ಹುಲಿನೋ ಕೆರೆಯ ಪಕ್ಕದಲ್ಲಿ ನೋಡಿದೆವು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಲೆಕ್ಕಿನಕೊಪ್ಪ, ಹಾಲ್ಲಕ್ಕೊಳ್ಳಿ, ಯರಗನಾಳು ಗಳಲ್ಲಿ ಅರಣ್ಯರೋಧನವಾಯಿತು. ಕಾಡು ಪ್ರಾಣಿಗಳೆಲ್ಲಾ ಆಹಾರವಿಲ್ಲದೆ ಊರಿಗೆ ದಾಳಿಯಿಟ್ಟವು. ಹಾಲಜ್ಜಿಗೂ ಜನ ಕತ್ತಲಾಗುವ ಮುಂಚೆ ಗುಡಿಸಲ ಸೇರಿಕೊ ಎಂದು ಸಲಹೆ ಕೊಟ್ಟರು. ಹಾಲಜ್ಜಿಗೂ ನವಿಲುಗಳು, ನರಿಗಳು, ಕಾಡು ಹಂದಿಗಳೆಲ್ಲಾ ತೋಟದ ಹತ್ತಿರವೇ ಕಾಣಲ್ಪಟ್ಟವು. ಹಾಲಜ್ಜಿಗೆ ಕಾಡು ಪ್ರಾಣಿಗಳ ಭಯವೇನು ಇಲ್ಲ. ಹಾಲಜ್ಜಿಯ ಆತಂಕಕ್ಕೆ ಕಾರಣ ಇನ್ನೊಂದು, ನೆನ್ನೆ ಜಕಾತಿ ಮೀನು ಹಿಡಿದು ಕೆರೆ ಏರಿಯ ಮೇಲೆ ಬಂದಾಗ ಹಾಲಜ್ಜಿಯನ್ನು ಕಂಡು ” ಏನವ್ವೋ ಹಾಲವ್ವೋ ಒಂದು ಸ್ವಲ್ಪ ಅಡಿಕೆ ಎಲೆ ಕೊಡು” ಅಂದ. ಹಾಗೇ ಮಾತನಾಡುತ್ತಾ ನಿದಿಗೆ ಸಾಹುಕಾರ್ರು ತೋಟ ಮಾರಾತರಂತೇ ಅಂತ ಹಾಲಜ್ಜಿ ಕಿವಿಗೆ ಹುಳ ಬಿಟ್ಟ. ಹಾಲಜ್ಜಿಗೂ ತೋಟಕ್ಕೂ ಬಿಡಿಸದ ಬಂಧ, ಹಾಲಜ್ಜಿ ತನ್ನ ಜೀವನದ ಬಹಳಷ್ಟು ಆಯಸ್ಸನ್ನು ಈ ತೋಟದಲ್ಲೇ ಕಳೆದಿರುವುದರಿಂದ ಒಮ್ಮೆಗೆ ಪ್ರಾಣವೇ ಹೋದಂತಾಯಿತು ಜಕಾತಿಯ ಮಾತು ಕೇಳಿ.
ಹಾಲಜ್ಜಿಗೆ “ಉಳುವವನೆ ಹೊಲದೊಡೆಯ” ಕಾನೂನು ಗೊತ್ತಿಲ್ಲ, ಲೋಹಿಯಾ, ಗೋಪಾಲ ಗೌಡ್ರು ಮೊದಲೇ ಗೊತ್ತಿಲ್ಲ. ಹಾಲಜ್ಜಿಗೆ ಆ ಕಾನೂನಿನ ಅಗತ್ಯವೂ ಇಲ್ಲ. ಅಡಿಕೆಯ ಬೆಲೆ ಗಗನಕ್ಕೇರಿದ ಮೇಲೆ ನಮ್ಮೂರ ಎಲ್ಲಾ ತೋಟದ ಸಾಹುಕಾರರುಗಳು ಪಂಚಾಯತಿ ಸೇರಿ ಒಂದು ನಿರ್ಧಾರಕ್ಕೆ ಬಂದರು. ಅದು ಹಾಲಜ್ಜಿ ತೋಟವನ್ನು ಸೇರಿ ಎಲ್ಲಾ ತೋಟಗಳಿಗೂ ಒಬ್ಬ ಗಟ್ಟಿ ಮುಟ್ಟಾದ ವ್ಯಕ್ತಿಯನ್ನ ಕಾಯಲು ಬಿಡುವುದು. ಅವನು ರಾತ್ರಿ ಹಗಲು ಎರಡು ಹೊತ್ತು ಯಾರು ಅಡಿಕೆ ಮತ್ತು ತೆಂಗಿನ ಕಾಯಿಯನ್ನ ಕದಿಯದ ಹಾಗೆ ಯಾರನ್ನು ತೋಟದ ಒಳಗೆ ಬಿಡದ ಹಾಗೆ ನೋಡಿಕೊಳ್ಳುವುದು. ಅದು ಹೇಗೋ ಹಾಲಜ್ಜಿ ಕಿವಿಗೆ ಬಿದ್ದು ಅವಳನ್ನ ಹೀಗಾಗಲೇ ಸುಡುತ್ತಿರುವ ಚಿಂತೆಗೆ ತುಪ್ಪ ಹಾಕಿದಾಗಾಯಿತು. ತನ್ನನ್ನೆಲ್ಲಿ ತೋಟ ಕಾಯುವುದನ್ನ ನಿಲ್ಲಿಸುತ್ತಾರೆಂಬ ಭಯ ಕಾಡಲಾರಂಭಿಸಿತು. ಈ ಸಲ ಅಡಿಕೆ ಕೀಳಲು ಸಾಹುಕಾರರು ಬಂದಾಗ ತನ್ನ ಅಳಲನ್ನು ಹೇಳಿಕೊಳ್ಳಬೇಕು ಎಂದು ನಿರ್ಧರಿಸಿದಳು. ಊರಿನಲ್ಲಿರುವ ಹಿರಿಯರೆಲ್ಲರಿಗೂ ಹಾಲಜ್ಜಿಯ ಬಗ್ಗೆ ಗೌರವ, ತೋಟದ ಸಾಹುಕಾರರಿಗೂ ಹಾಲಜ್ಜಿಯ ಬಗ್ಗೆ ಪ್ರೀತಿ. ಈ ವಯಸ್ಸಿನಲ್ಲಿ ಅವಳನ್ನೇನು ತೋಟ ಕಾಯಲು ಬರಬೇಡವೆಂದು ಹೇಳುವುದಿಲ್ಲ. ಅವರಿಗೂ ಗೊತ್ತು ಹಾಲಜ್ಜಿಗೆ ಸುಮ್ಮನೆ ಗುಡಿಸಲಲ್ಲಿ ಕೂರಲು ಆಗುವುದಿಲ್ಲವೆಂದು, ಅವಳಿಗೆ ಎಷ್ಟು ದಿನ ಇಷ್ಟವೋ ಅಷ್ಟು ದಿನ ಬರಲಿ ಎಂದು ಸುಮ್ಮನಿದ್ದಾರೆ.
ಅದೊಂದು ಮೇ ತಿಂಗಳ ಸಾಯಂಕಾಲ, ಮುಂಗಾರು ಮೋಡಗಳು ಕಾರ್ಮೋಡಗಳಾಗಿ ಭಾರಿ ಮಳೆಯ ಸೂಚನೆಯನ್ನ ಕೊಟ್ಟವು. ಹಾಲಜ್ಜಿ ತೋಟದಿಂದ ಬೇಗ ಬೇಗ ಊರ ಕಡೆಗೆ ಹೆಜ್ಜೆ ಹಾಕಿದಳು. ಇನ್ನೇನು ಈಶ್ವರನ ಗುಡಿಯ ಹತ್ತಿರ ಬರಲು ಹುಲಿಯೊಂದು ರಸ್ತೆಯನ್ನ ದಾಟಿ ಅರಳಿ ಮರದ ಕಡೆ ಹೋಯಿತು. ಹುಲಿ ತನ್ನ ಕಡೆ ಬರಲಿಲ್ಲ ಎಂಬ ಸಮಾಧಾನದಿಂದ ಹಾಲಜ್ಜಿಗೆ ಆ ಇಳಿವಯ್ಯಸ್ಸಿನಲ್ಲೂ ಹೋದ ಜೀವ ಬಂದ ಹಾಗಾಯಿತು. ಬಡಪಾಯಿ ಜೀವ ಉಳಿಯಿತು ಎಂದು ಬೇಗ ಬೇಗ ಹೆಜ್ಜೆ ಇಟ್ಟು ಗುಡಿಸಲ ಸೇರಿದಳು. ಅಂದು ಕುಡಿಯಲೇಕೋ ಸಾರಾಯಿ ಬೇಡದಾಯಿತು. ಬೆಳ್ಳಿಗ್ಗೆ ಮಾಡಿದ ಅನ್ನ, ನೆನ್ನೆ ಮಾಡಿದ ತಂಗಳು ಸೊಪ್ಪಿನ ಸಾರು ಇತ್ತು. ಸಂತೋಷದಿಂದ ಹೊಟ್ಟೆ ತುಂಬಾ ಊಟ ಮಾಡಿದಳು. ತನ್ನ ಹಳೇ ಚಾಪೆಯನ್ನ ಹಾಸಿದಳು, ದಿಂಬನು ಹಾಕಿ ಯಾರೋ ಕೊಟ್ಟ ಹಳೆಯದಾದ ಕಂಬಳಿಯನ್ನ ಹೊದ್ದು ಮಲಗಿದಳು. ಸುಖನಿದ್ರೆಯಲ್ಲಿ ತೇಲಲಾರಂಭಿಸಿದಳು, ಯಾವುದೋ ಕನಸ್ಸಿನ ಲೋಕದಲ್ಲಿ ಜಾರಿದಳು.
ಇದ್ದಕ್ಕಿದಂತೆ ಕನಸ್ಸಿನಲ್ಲಿ ಹುಲಿಯೊಂದು ಅಟ್ಟಿಸಿಕೊಂಡು ಬಂತು, ತಕ್ಷಣ ಮಾಯವಾಯಿತು. ಮತ್ತೇ ಯಾರೋ ಮೂರು ಜನ, ಇಬ್ಬರು ಸೇವಕರ ರೀತಿ ಹಗ್ಗ ಹಿಡಿದ್ದಿದ್ದಾರೆ, ಇನ್ನೊಬ್ಬ ದೈತ್ಯಾಕಾರದ, ಭಾರಿ ಮೀಸೆಯ ಯಮನ ಹಾಗೇ ಕೋಣನ ಮೇಲೆ ಕುಳಿತ ವ್ಯಕ್ತಿ. ಕೋಣನ ಮೇಲೆ ಕುಳಿತ ವ್ಯಕ್ತಿ ತನ್ನ ಒರಟು ಧ್ವನಿಯಿಂದ ” ಲೇ ಮುದುಕೀ, ಇನ್ನೆಷ್ಟು ದಿನ ಇದೆ ಊರಲ್ಲಿ ಇರಬೇಕು ನೀನು? ಬಾ ನಮ್ಮ ಜೊತೆ ನಮ್ಮೂರಿಗೆ ಹೋಗೋಣ” ಎಂದು ಆಜ್ಞೆ ಮಾಡಿದ. ಹಾಲಜ್ಜಿಗೆ ಭಯದ ಯಾವುದೇ ಲಕ್ಷಣವಿಲ್ಲದೆ ಆಯ್ತು ನಿಮ್ಮ ಜೊತೆ ಬರಲು ನಾನು ಸಿದ್ಧ ಎಂದು ಹೊರಟೆ ಬಿಟ್ಟಳು. ಹಾಲಜ್ಜಿಯ ಧೈರ್ಯವನ್ನು ಕಂಡು ಯಮನ ರೀತಿ ಇದ್ದ ಆ ವ್ಯಕ್ತಿ ಭಯಬಿದ್ದು ತನ್ನ ಸೇವಕರನ್ನ ಕರೆದುಕೊಂಡು ಓಡಿದ. ಅವರು ಎಷ್ಟೇ ವೇಗವಾಗಿ ಓಡಿದರು ಹಾಲಜ್ಜಿ ತನ್ನ ಸಂಸ್ಕೃತವಾಹಿನಿಯಿಂದ ಬೈದು ಅವರನ್ನ ಅಟ್ಟಿಸಿಕೊಂಡು ಓಡಿದಳು. ಅವರು ಬಿಳಿಕಲ್ಲಗುಡ್ಡದ ಮೇಲೆ ಓಡಿದರು, ಅಲ್ಲಿಗೂ ಹೋದಳು. ಅವರು ತಪ್ಪಿಸಿಕೊಂಡು ಮತ್ತೆ ಕೆಮ್ಮಣ್ಣು ಗುಂಡಿ, ಬಾಬಾಬುಡ್ಡನಗಿರಿ ಮೇಲಿಂದ ಮುಳ್ಳಯ್ಯನ ಗಿರಿ ಮೇಲೆ ಹೋದರು, ಅವಳು ಅಲ್ಲಿಗೂ ಬಿಡದೆ ಹೋದಳು. ಅವಳ ಕಾಟವನ್ನ ತಡೆಯದೆ ಅವರು ಮುಳ್ಳಯ್ಯನ ಗಿರಿಯಿಂದ ದಿಗಂತಕ್ಕೆ ಹಾರಿದರು. ಹಾಲಜ್ಜಿ ಅವರನ್ನೇ ಹಿಂಬಾಲಿಸಿಕೊಂಡು ಎಲ್ಲೋ ಮೋಡದಲ್ಲಿ ಮರೆಯಾದಳು.
ಮಧ್ಯರಾತ್ರಿ ನಮ್ಮೂರಿನಲ್ಲಿ ಧಾರಾಕಾರ ಮಳೆ. ಆ ಮಳೆಗೆ ಎಷ್ಟೋ ಮನೆಗಳು ಸೋರಿದವು, ಗೋಡೆಗಳು ಬಿದ್ದವು. ಕೆರೆ ತುಂಬಿತು. ಹಾಲಜ್ಜಿ ಗುಡಿಸಲು ಸೋರಿ ಎಲ್ಲಾ ಕಡೆ ನೀರು ಹರಿಯಿತು. ಹಾಲಜ್ಜಿ ಚಿರನಿದ್ರೆಗೆ ಜಾರಿ ಸ್ವಲ್ಪ ಹೊತ್ತಾಗಿತ್ತು. ಹಾಲಜ್ಜಿ ಸಾಯುವುದಕ್ಕೂ ಅದೇ ವೇಳೆಯಲ್ಲಿ ತೋಟದ ಪಕ್ಕದ ಹಳೆಯ ಮಾವಿನ ಮರವು ಮಳೆ ಗಾಳಿಗೆ ಬೀಳುವುದಕ್ಕೂ ಒಂದೇ ಆಯಿತು. ಯಾಕೋ ಆ ಮರಕ್ಕೂ ಹಾಲಜ್ಜಿ ಯನ್ನ ಬಿಟ್ಟು ಬದುಕಲು ಇಷ್ಟವಿಲ್ಲದೆ ಹಾಲಜ್ಜಿಯ ಜೊತೆಲೇ ಇಹಲೋಕ ಯಾತ್ರೆಮಾಡಿತು. ಬೆಳಿಗ್ಗೆ ಎದ್ದಾಗ ಹಾಲಜ್ಜಿಯ ಗುಡಿಸಲು ಬಿದ್ದುಹೋಗಿತ್ತು. ಕೆಲವರು ಹಾಲಜ್ಜಿಯ ದೇಹವನ್ನ ಹೊರಗಡೆ ತೆಗೆದು ಒಂದು ಚಾಪೆಯ ಮೇಲೆ ಮಲಗಿಸಿದರು. ಊರ ಹಿರಿಯರು ಎಲ್ಲಾ ಸೇರಿ ನಿದಿಗೆ ಸಾಹುಕಾರರಿಗೂ ಹೇಳಿ ಕಳುಹಿಸಿದರು. ಸುತ್ತಮುತ್ತಲ ಹಳ್ಳಿಗಳಿಗೆಲ್ಲಾ ವಿಷಯ ತಲುಪಿತು. ಚೋವ್ಕ್ಲಿಬಾಯಿ ತನ್ನ ಕಾಯಿಲೆಯನ್ನು ಲೆಕ್ಕಿಸದೇ ತನ್ನ ಗೆಳತಿಯನ್ನ ಕೊನೆಯ ಬಾರಿಗೆ ನೋಡಲು ಬಂದಳು. ಊರಿನ ಜನರೆಲ್ಲಾ ಸೇರಿ ಹಾಲಜ್ಜಿಗೆ ಕೊನೆಯ ಸ್ನಾನ ಮಾಡಿಸಿ, ಹೂವುಗಳಿಂದ ಅಲಂಕರಿಸಿದರು. ಜಕಾತಿ ಇನ್ನೂ ಕೆಲವರು ಸೇರಿ ಬಿದಿರಿನ ಚಟ್ಟವನ್ನ ಕಟ್ಟಿದರು. ಆದರೆ ಹಾಲಜ್ಜಿಯನ್ನ ಎಲ್ಲಿ ಮಣ್ಣು ಮಾಡುವುದು ಎಂದು ಎಲ್ಲಾ ಯೋಚಿಸುತ್ತಿರುವಾಗ ಸಾಹುಕಾರರು ತೋಟದಲ್ಲೇ ಮಣ್ಣು ಮಾಡಲು ಹೇಳಿದರು. ತೋಟದ ಒಂದು ಮೂಲೆಯಲ್ಲಿ ಮಣ್ಣು ಮಾಡಿದರು. ಮಣ್ಣು ಮಾಡಿದ ಒಂದು ವಾರಕ್ಕೆ ಚೋವ್ಕ್ಲಿಬಾಯಿಯು ಹಾಲಜ್ಜಿಯನ್ನು ಹುಡುಕಿಕೊಂಡು ಹೊರಟಳು. ಹಾಲಜ್ಜಿ ಸತ್ತ ನಂತರ ಊರಲ್ಲಿ ಬಹಳಷ್ಟು ಬದಲಾವಣೆಗಳಾದವು.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಬದುಕಿದ್ದ ಹಾಲಜ್ಜಿ ಇಂದು ನೆನಪು ಮಾತ್ರ. ಹಾಲಜ್ಜಿ ನಮ್ಮೂರಿನ ನೆಲದಲ್ಲಿ ಬದುಕಿದ್ದಕ್ಕೆ ಇಂದು ಯಾವ ಸಾಕ್ಷಿಯೂ ಇಲ್ಲ. ಅವಳ ಸಮಾಧಿಯು ತೋಟದ ಮಣ್ಣಿನಲ್ಲಿ ಮಣ್ಣಾಗಿ ಹೋಗಿದೆ. ತುಂಗೆಯಲ್ಲಿ ಬಹಳಷ್ಟು ನೀರು ಹರಿದು ಶಿವಮೊಗ್ಗ ಮಹಾ ನಗರವಾಗಿದೆ. ನಮ್ಮೂರಿನ ಸಮೀಪವೇ ವಿಮಾನ ನಿಲ್ದಾಣವು ಬರುತ್ತಿದೆ. ವರ್ತುಲ ರಸ್ತೆಗಳು ಸದಾ ಹಸಿರುಗಳಿಂದ ತಂಪನ್ನು ನೀಡುತಿದ್ದ ನಮ್ಮೂರಿನ ಕತ್ತಿಗೆ ಹಾಕಿದ ನೇಣು ಹಗ್ಗಗಳಾಗಿ ಮಾರ್ಪಟ್ಟಿವೆ. ಮಹಾನಗರ ತನ್ನ ರಾಕ್ಷಸ ಬಾಹುಗಳಿಂದ ಸುತ್ತ ಮುತ್ತಲಿನ, ಹಳ್ಳಿ, ಗದ್ದೆ, ಕೆರೆ, ತೋಟಗಳನ್ನ ತನ್ನ ಒಡಲಲ್ಲಿ ನುಂಗಿ ಕೊಳ್ಳುತ್ತಿದೆ. ಅಮೇರಿಕದಲ್ಲಿ ಓಡಾಡುವಾಗ ಸದಾ ಕೊಬ್ಬು, ಸಕ್ಕರೆ ಕಾಯಿಲೆ, ಹೃದಯದ ಕಾಯಿಲೆಗಳಿಂದ ನರಳುವ ವಯ್ಯಸ್ಸಾದ ಮುದುಕ, ಮುದುಕಿಯರನ್ನ ಕಂಡಾಗ ತನ್ನ ಅಷ್ಟು ಸುಧೀರ್ಘ ಜೀವನದಲ್ಲಿ ಎಂದೂ ಆಸ್ಪತ್ರೆಯ ಮುಖವನ್ನೇ ನೋಡದ ಹಾಲಜ್ಜಿ ಜ್ಞಾಪಕಕ್ಕೆ ಬರುತ್ತಾಳೆ. ಹಾಲಜ್ಜಿಯ ಆರೋಗ್ಯದ ರಹಸ್ಯ ಇಂದಿಗೂ ರಹಸ್ಯವಾಗಿಯೇ ಇದೆ. ಅದಕ್ಕೋಸ್ಕರವೇ ಈ ಸಲ ನಮ್ಮೂರಿಗೆ ಹೋದಾಗ ಹಾಲಜ್ಜಿಯನ್ನ ಹುಡುಕಿಕೊಂಡು ಅವಳ ತೋಟದಕಡೆ ಹೊರಟೆ. ಮಾವಿನ ಮರವಿದ್ದ ಜಾಗದಲ್ಲಿ ಕುಳಿತು ಕೆರೆಯನ್ನ ನೋಡಿದೆ. ಕೆರೆಯೇ ಇಲ್ಲದ ಹಾಗೇ ಅಂತರಗಂಗೆ ಬೆಳೆದು ನಿಂತಿದೆ. ದೂರದಲ್ಲಿ “ಬಿಳಿಕಲ್ಲು ಗುಡ್ಡ” ವನ್ನ ನೋಡಿದೆ, ಇನ್ನೆಲ್ಲಿ ಬಿಳಿಕಲ್ಲು ಗುಡ್ಡ? ಅಲ್ಲಿ ಮಾನನ ತನ್ನ ದುರಾಸೆಯಿಂದ ಗುಡ್ಡವನ್ನೇ ಬೋಳು ಮಾಡಿದ್ದಾನೆ. ಮನಸ್ಸು ಏಕೋ ಅಳುತ್ತಾ ಹಾಲಜ್ಜಿ ತೋಟದೊಳಕ್ಕೆ ಇಳಿಯಿತು. ಹಾಲಜ್ಜಿ ಓಡಾಡಿದ ಜಾಗವನ್ನೆಲ್ಲ ಒಂದು ಸುತ್ತು ಓಡಾಡಿ ಬಂದೆ, ಇನ್ನೇನು ತೋಟದಿಂದ ಕೆರೆಯ ಏರಿಮೇಲೆ ಬರಲು ಹಾಲಜ್ಜಿಯ ಸಂಸ್ಕೃತ ವಾಹಿನಿಯ ಪ್ರತಿಧ್ವನಿ ಕಿವಿಗೆ ಅಪ್ಪಳಿಸಿತು.









Good start Prasanna, appreciate your writing, welcome to kannada kathaa loka!
Real amazing prasanna nange ondu kshana rudaya ninathanayithu karana E NINNA KATHE NAMMA BALYADALLI AVARA JOTHE HADU HODA DINAGALU OAHGE ONDU KSHANA KANEDURU BADU SAGITHU REALY AMAZING HATS OFF ALSO HA AJJIYANU ENU MAREYO HAGILLA ASTU HESARU MADIDALU HA THAIYI. ENU NINNALI NAMMA URU THUMBIKODIRUVA NINNA PREETHIGE SADA CHIRA RUNI DODDAVARU HELIDA HAGE ” NAMMA URU NAMAGE MELU” ALVA. THUMBA CHANIGDE THUMBA SANTHOSHA AYITHU.
Thank you Prakasha.
Thank you so much Babu.
Thank you very much Babu.
fantastic narration…. highly controlled description about Haalajji and other characters….yours writing is fresh… your intelligence in writing illustrates where you have made a documentary story to more lively. It seems Haalajji is with in us… good luck Prasanna… keep writing…
Thank you so much Giri.
Vry impressive story of my village thanks for ur kind information about santekadur brother
Thank you Manu.
Nijavaagaloo adbhuthavagide prasanna ! Neenu ishtu chennagi bareyabahudu endu eegale tilididdu.Ella kannige kattida haagide ! Ninna baraha munduvarisu . Ninage Olleyadagali…..
Thank you so much madam.
Thumba Chennagi bardideeya Prasanna. Ninna kelavu kavanagalannu maathra odidde, avoo thumbaane deep kavanagalu, adre inthaddu odirlilla..super, agaaga bareetha iru.
Thank you Chaya.
ಕಥೆ ಇಷ್ಟವಾಯಿತು. ಹಳ್ಳಿಯ ವಾತವರಣವನ್ನು ಬಹಳ ಸು೦ದರವಾಗಿ ಶಬ್ದಗಳಲ್ಲಿ ಇಳಿಸಿದ್ದೀರಿ. ಅಲ್ಲದೆ ಹಳ್ಳಿಯಲ್ಲಿ ಸಿಗುವ ಕೆ೦ಚಮ್ಮ, ಚೌಡಮ್ಮ ದೇವರುಗಳು. ಅವುಗಳಿಗೆ ಹಳ್ಳಿಯ ಜನ ಶ್ರಧ್ದೆ ಭಕ್ತಿಯಿ೦ದ ನಡೆದುಕೊಳ್ಳುವುದು.. ನಾನು ಹಳ್ಳಿಯಲ್ಲೆ ಬೆಳೆದಿರುವುದರಿ೦ದ ಇದೆಲ್ಲ ಬಹಳ ಆಪ್ಯಾಯಮಾನವಾಯಿತು…
Thank you Shruthi.
hello prasanna sir… nijwaaglu ondu olleya prayatna.. kathe chennagi moodi bandide..
Thank you Lohith.
Great story!!!!!!
very nice
thumbaa chennagi barediddeera Sir, excellent narration. My childhood in my village came my memories. Thank you for beautiful epiphany
Thank you Harish.
ALWAYS REMINENSSES ARE SWEETER THAN EXPERIENCE, WELL WRITTEN IN KANNADA, KEEP IT UP, CONGRADULATIONS DR PRASANNA
Thank you so much madam for your support and appreciation.
Prasanna, hmm kaadi odhidhakku sarthaka vaaythu, thumba sundaravagidhe nimma baraha, ee kathege nammannu naavu relate madkobahudhu, haage, ondhu round namma oore sutkondu bandhagaaythu…eeglu oorige hoodre, appa, amma nanna kaialli maarigadhuge poojena maadsdhe vaapas kalsalla…aagina, iddha vaathavarana eega badalaagiru vaathavarna thumba chenngi varnsidhira….tarikere, haagu suthamuthalina ooru keri yella adukege bele bandhmele, sihi neeri band mele heege innu halavu badlavane galanthu thunbane chennagi thilisidhira….hmm aadre ondhu sanna doubt, scientist aagi neevu better aa athava kathegaaranagi better aa antha, multi talented, hatts off, absolute wonderful command, articulte of kannada language! loved it..:) you are a pro…keep up the good work..
Thank you very much Shwetha. Yes, some time if we visit of our native places we recall lot of things and makes us very proud and happy. If you visit Shimoga now you will really see lot of changes. I like both Science and literature. Thank you once again for your support and appreciation as ever.
Nice
Thank you so much Paramesha.
Your story is very nice…..the richness of language is so amazing…gr8 and all the best..
Halli sogadina katha handara manamuttuvanthide haagu idu katha mantrikana antharaaladinda bandanthide.
Kathe thumba istavaayuthu prasanna,
Thanks,
Thippeswamy G
nice story bava
Really great.style of literature s nice. This wt happening because of modernisation… keep it up n good luck