ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾರುವ ಎಲೆ ಆಕಾಶ ಸೇರಿತು…

ಪೂರ್ಣೇಶ್ ಮತ್ತಾವರ

ಗೋಡೆಯ ಮೇಲೆ ಎಲೆಯೊಂದು ಅಂಟಿರುವುದನ್ನು‌ ಕಂಡವನಿಗೇಕೋ ‘ಅದು ಹಾರುವ ಎಲೆ ಇರಬಹುದೇ?’ ಎನಿಸಿತು. ಒಡನೆಯೇ ಕ್ಯಾಮೆರಾ ಹಿಡಿದು ತಂದು, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ನೋಡಿದೆ. ಅದು ಹಾರುವ ಎಲೆಯೇ ಆಗಿತ್ತು!  ಅದರ ಹತ್ತಿರ ಸಾಗಿ ನೋಡಿದೆ. ಯಾವ ಪ್ರತಿಕ್ರಿಯೆಯೂ ಇಲ್ಲ. ಅದರ ಕೆಲ ಭಾಗಗಳೋ ಒಣಗುತ್ತಿರುವ ಎಲೆಯಲ್ಲಿನ ಕಂದು ಬಣ್ಣವನ್ನು ಆವರಿಸಿಕೊಂಡಂತಿದ್ದವು.

ಇದರಿಂದಾಗಿ ‌’ಈ ಹಾರುವ ಎಲೆ ಅದಾಗಲೇ ಜೀವ ಬಿಟ್ಟಿದೆ!’ ಎಂದು ಕೊಳ್ಳುತ್ತಾ ಕೈಯಲ್ಲಿ ಹಿಡಿದೆ. ಆಗಲೂ ಅದರಿಂದ ಯಾವ ಪ್ರತಿಕ್ರಿಯೆಯೂ ಇಲ್ಲ! ಕೆಳ ಬಿಡುವಾಗ ಮಾತ್ರ ಗಾಳಿಗೆ ಎಲೆ ಅಲ್ಲಾಡಿದಂತ ಸಣ್ಣ ಚಲನೆಯೊಂದನ್ನು ತೋರಿ ತಾನಿನ್ನು ಬದುಕಿರುವ ಮತ್ತು ಬದುಕಿರುವುದು ಇತರರಿಗೆ ತಿಳಿಯಬಾರದೆಂದು ನಟಿಸುತ್ತಿರುವ ಸುಳಿವು ನೀಡಿತು. ಸರಿ, ಅದರ ಮತ್ತಷ್ಟು ಫೋಟೋ ಕ್ಲಿಕ್ಕಿಸಿದೆ.

ನಂತರದಲ್ಲಿ ಮತ್ತೆ ಮೆತ್ತಗೆ ಕೈ ಮೇಲೆ ಏರಿಸಿ ‘ಇದು ಏನಾದರೂ ಹಾರಬಹುದಾ!?’ ಎಂದು ಯೋಚಿಸುತ್ತಿದ್ದೆ. ಆಗಲೇ, ವಿಸ್ಮಯಕಾರಿ ಎನಿಸುವಂತ ಸನ್ನಿವೇಶಯೊಂದಕ್ಕೆ ನಾನು ಸಾಕ್ಷೀಭೂತನಾಗುವಂತಾಯ್ತು! ಎಲೆಯ ನಡು ಮಧ್ಯದ ದಿಂಡಿನಂತಿದ್ದ ತನ್ನ ಹಾರು ರೆಕ್ಕೆಗಳನ್ನು ತೆರೆದ ಹಾರುವ ಎಲೆ ಬೆಂಕಿ ಹೊತ್ತಿಸಿದ ಕೂಡಲೇ ಹಾರುವ ರಾಕೆಟ್ ನಂತೆ ಸೊಯ್ಯನೇ ಮಿಂಚಿನ ವೇಗದಲ್ಲಿ ನನ್ನ ನಿರೀಕ್ಷೆಗೂ ಮೀರಿ ಮೇಲೇರಿತು.

ಹಾರುವ ಎಲೆ ಮೇಲೇರುವ ಸುಳಿವ ಮೊದಲೇ ಅರಿತಿದ್ದವರಂತೆ ಒಂದಷ್ಟು ಹಕ್ಕಿಗಳು ಒಡನೆಯೇ ಇದರ ಮೇಲೆ ದಾಳಿ ಮಾಡ ಬಂದವು. ಹಾರುವ ಎಲೆಯೋ ಅವುಗಳಿಂದ ತಪ್ಪಿಸಿ‌ಕೊಳ್ಳೊತ್ತಾ ಮತ್ತಷ್ಟು ಮೇಲೇರುತ್ತಾ ನೀಲ‌ ಗಗನದಲ್ಲಿ ಮರೆಯಾಯ್ತು! ಒಂದು ಕ್ಷಣ, ‘ಕರ್ವಾಲೋ’ದ ಕೊನೆಯಲ್ಲಿ ಹಾರುವ ಓತಿ ಮರೆಯಾಗುವ ದೃಶ್ಯ ನೆನಪಾಯ್ತು!

‍ಲೇಖಕರು Avadhi

9 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading