
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.
ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.
‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.
ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.
ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.
ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.
8
ನಾನು ಬೆದರಿದ ಗುಬ್ಬಚ್ಚಿಯಂತೆ ತರಗತಿಯ ಮೂಲೆಯಲ್ಲಿ ಮುದುಡಿ ಕುಳಿತಿರುತ್ತಿದ್ದುದು ಅರ್ಧ ವರ್ಷವಷ್ಟೇ. ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ನಾನು ಗಣಿತವೊಂದನ್ನುಳಿದು ಮಿಕ್ಕೆಲ್ಲ ವಿಷಯಗಳಲ್ಲಿ ಬಹುತೇಕ ಎಲ್ಲಾ ಹುಡುಗರಿಗಿಂತಲೂ ಮುಂದಿದ್ದದ್ದು ಎಲ್ಲರ ಕಣ್ಣರಳಿಸಿತ್ತು. ಮಠದಲ್ಲಿ ಒಂದು ವಿಶೇಷತೆ ಇತ್ತು. ಮುದ್ದೆ ಉಂಡು ಮೈ ಬೆಳಸಿಕೊಳ್ಳುವವರು ಬಹು ಸಂಖ್ಯಾತರಾದರೆ. ಓದಿನಲ್ಲಿ ಆಸಕ್ತಿವಹಿಸಿ ತಮ್ಮ ಪ್ರತಿಭೆ ತೋರುತ್ತಿದ್ದವರು ಬಹಳ ಕಡಿಮೆ ಜನ. ಅಂತವರ ಕಡೆಗೆ ವಿಶೇಷವಾಗಿ ಎಲ್ಲರ ಗಮನ ಹರಿಯುತ್ತಿತ್ತು.
ಮಠದಲ್ಲಿ ಊಟ ಮಾಡಿಕೊಂಡು ತುಮಕೂರಿನ ಕಾಲೇಜಿಗೆ ಹೋಗಿ ಬರುತ್ತಿದ್ದವರ ಪೈಕಿ ಇಬ್ಬರು ಹುಡುಗರಿದ್ದರು. ಒಬ್ಬ ಸಿದ್ದಗಂಗಾ ಸೈನ್ಸ್ ಕಾಲೇಜಿಗೆ ಹೋಗುತ್ತಿದ್ದ ಬಿ.ತಿಮ್ಮೇಗೌಡ, ಇನ್ನೊಬ್ಬ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಆರ್.ಎಸ್.ಹುಚ್ಚಾಚಾರಿ. ತೀರಾ ಕಡು ಬಡುತನದ ಕುಟುಂಬದಿಂದ ಬಂದಿದ್ದ ಅವರು ಶ್ರದ್ಧೆಯಿಂದ ಓದಿ ಅವರವರ ಕಾಲೇಜಿಗೇ ಮೊದಲಿಗರಾಗಿದ್ದರು.
ಪರೀಕ್ಷೆಯಲ್ಲಿ ಪ್ರತಿಯೊಂದು ವಿಷಯದಲ್ಲೂ ಶೇಕಡಾ ತೊಂಬತ್ತಕ್ಕೂ ಹೆಚ್ಚು ಅಂಕಗಳನ್ನು ಗಳಿಸುತ್ತಾರೆಂದು ಕೇಳಿ ನಾವೆಲ್ಲಾ ಅಚ್ಚರಿ ಪಡುತ್ತಿದ್ದೆವು. ಅವರನ್ನು ಮುಖತಃ ನೋಡಲು ಕುತೂಹಲಿತರಾಗಿ, ಬಹುತೇಕ ಹುಡುಗರು ಬಿಡುವಿನ ವೇಳೆ ಅವರ ಕೊಠಡಿಯ ಮುಂದೆ ಠಳಾಯಿಸುತ್ತಿದ್ದುದನ್ನು ಕಾಣಬಹುದಾಗಿತ್ತು. ಹಾಗೇ ನಮ್ಮ ಸ್ನೇಹಿತರೊಂದಿಗೆ ನಾನೂ ಹೋಗುತ್ತಿದ್ದೆ. ನನ್ನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಅವರಿಗೆ ಕ್ರಮೇಣ ನನ್ನ ಪರಿಚಯವೂ ನಿಕಟವಾಗಿಯೇ ಆಗಿತ್ತು. ಬಿ.ವಿ. ಮಲ್ಲಿಕಾರ್ಜುನಯ್ಯ ಎಂಬ ನಮ್ಮ ವಿಜ್ಞಾನ ಉಪಧ್ಯಾಯರು ʼಚೆನ್ನಾಗಿ ಓದು. ಡಾಕ್ಟರಾಗಬಹುದುʼ ಎಂದು ನನಗೆ ಹುರಿದುಂಬಿಸಿದಾಗ ಮಿಕ್ಕ ಹುಡುಗರು ʼಹೋʼ ಎಂದು ಒಕ್ಕೊರಲಿನಲ್ಲಿ ಕೂಗುತ್ತಿದ್ದರು.

ʼನೀವೂ ಏನೂ ಕಡಿಮೆಯಿಲ್ಲ ಬಿಡಿ. ಕಾಂಪೌಂಡರಾದರೂ ಆಗಬಹುದುʼ ಎಂದು ಅವರಿಗೆ ತಮಾಷೆ ಮಾಡುತ್ತಿದ್ದರು.ಇಂಗ್ಲಿಷ್ ಅಧ್ಯಾಪಕ ಜಿ.ವಿ. ವೆಂಕಟಸುಬ್ಬಯ್ಯ ಇನ್ನು ಒಂದು ಹೆಜ್ಜೆ ಮುಂದು ಎಂಬಂತೆ ನನ್ನನ್ನು ಬೋರ್ಡ್ ಬಳಿಗೇ ಕರೆಯುತ್ತಿದ್ದರು. ತನ್ನ ಕೈಯ ಸೀಮೆಸುಣ್ಣ ಹಾಗೂ ಡಸ್ಟರ್ ನನ್ನ ಕೈಗೆ ಕೊಟ್ಟು ಏಕವಚನ ಪದ ಹೇಳಿ ಅವುಗಳಿಗೆ ಬಹುವಚನ ಬರೆಸುತ್ತಿದ್ದರು.ಒಂದು ವರ್ತಮಾನ ಕಾಲ ಪದ ಕೊಟ್ಟು ಅದಕ್ಕೆ ಭೂತಕಾಲ ಹಾಗೂ ಭವಿಷತ್ಕಾಲದ ಪದಗಳನ್ನು ನಾನೇ ಯೋಚಿಸಿ ಬರೆಯುವಂತೆ ಮಾಡುತ್ತಿದ್ದರು.ಕೊನೆಗೆ ʼಡೆರೆಕ್ಟ್ ಸ್ಪೀಚ್ʼ ಇರುವ ವಾಕ್ಯ ಬರೆದು ಅದರ ʼಇಂಡೈರೆಕ್ಟ್ ಸ್ಪೀಚ್ʼ ಬರೆಯಲು ಹೇಳುತ್ತಿದ್ದರು. ನಾನು ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸುವಾಗ ಇಡೀ ತರಗತಿಯೇ ಸ್ತಂಭೀಭೂತವಾದಂತೆ ನಿಶ್ಶಬ್ಧವಾಗಿ ಕುಳಿತು ಬಿಟ್ಟಿರುತ್ತಿತ್ತು. ಶಾಲೆಯ ನಂತರ ಕೆಲವರು ಮುಜುಗರವಾಗುವಷ್ಟು ಹೊಗಳಿದರೆ, ಹೊಟ್ಟೆಕಿಚ್ಚಿನ ಕೆಲವರು ಅನಾವಶ್ಯಕ ಛೇಡಿಸುತ್ತಿದ್ದರು. ಅಂತೂ ನನ್ನ ವಿಷಯ ಹುಡುಗರ ಬಾಯಲ್ಲಿರುವಂತೆ ಆಯಿತು.ಬರು ಬರುತ್ತಾ, ನಾನು ಬರೆದ ಪತ್ರಗಳ ಮುಖೇನ, ರಜಾದಲ್ಲಿ ಮಿತ್ತರು ಮಲೆನಾಡು ನೋಡುವ ನೆಪದಲ್ಲಿ ನಮ್ಮೂರಿಗೆ ಬಂದಿದ್ದಾಗ ಈ ವಿಚಾರ ಚರ್ಚೆಯಾಗಿ ಪ್ರಸಿದ್ಧಿ ಪಡೆದುಕೊಂಡುಬಿಟ್ಟಿತ್ತು.
ನಮ್ಮ ಅಪ್ಪನಂತೂ, ತನ್ನ ಮಗನ ಪ್ರತಿಭೆಯ ವಿಚಾರವನ್ನು ಸಿಕ್ಕ ಸಿಕ್ಕ ನೆಂಟರಲ್ಲಿ, ಸಂತೆಯ ದಿನ ಸಿಕ್ಕ ಆಪ್ತರಲ್ಲಿ ಹೊಗಳಿಕೊಂಡು ಸಂಭ್ರಮಿಸುತ್ತಿದ್ದರು.ನಮ್ಮದು ಹೇಳಿಕೇಳಿ ರೈತಾಪಿ ಕೆಲಸ ಮಾಡಿಕೊಂಡು, ಆ ಮಲೆನಾಡಿನ ಕೊಂಪೆಯಲ್ಲಿ ಬದುಕು ನಡೆಸುತ್ತಿದ್ದ ಬಹುತೇಕ ಶೂದ್ರ ಕುಟುಂಬಗಳೇ ಇದ್ದ ಪ್ರದೇಶ. ಆಗಿನ ಕಾಲಕ್ಕೆ ಬಹುಸಂಖ್ಯಾತರು ಅನಕ್ಷರಸ್ಥರೇ ಎಂದರೆ ಅತಿಶಯೋಕ್ತಿಯೇನಲ್ಲ. ಆ ಇಡೀ ಹೋಬಳಿಗೆ ಇದ್ದುದು ಒಂದೇ ಒಂದು ಬ್ರಾಹ್ಮಣ ಕುಟುಂಬ. ಪೌರೋಹಿತ್ಯ ಮಾಡಿಕೊಂಡು ಬದುಕು ನಡೆಸುತ್ತಿದ್ದವರು. ಹೋಬಳಿ ಕೇಂದ್ರದಲ್ಲಿದ್ದ ದೇವಸ್ಥಾನದ ಅರ್ಚಕರು. ಅವರು ಸಂಸ್ಕೃತ ಪಂಡಿತರೆಂದು ಹಿರಿಯರು ಮಾತಾಡಿಕೊಳ್ಳುತ್ತಿದ್ದರು. ಜತೆ ಜತೆಗೇ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು.
ಹಳ್ಳಿಯ ಜನರೇ ಏಕೆ, ನಮ್ಮ ಹೈಸ್ಕೂಲ್ ಅಧ್ಯಾಪಕರೂ ಸಹಾ ಅವರ ಹೆಸರು ಕೇಳಿ ಬೆರಗಾಗುತ್ತಿದ್ದರು. ಅಂತಹಾ ಪಂಡಿತರ ಕಿವಿಗೂ ನನ್ನ ಬಗೆಗಿನ ಜನರ ಪ್ರಶಂಶೆಯ ಮಾತು ತಲುಪಿತ್ತು. ನಾನು ಕನ್ನಡ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳಲ್ಲಿ ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯುತ್ತಿದ್ದುದು ನಿಜವಾದರೂ, ಅದೊಂದು ಸಾಮಾನ್ಯವಾದ ವಿಷಯದ ಬಗೆಗಿನ ಅತಿ ಪ್ರಶಂಸೆಯ ಮಾತುಗಳು ನನ್ನನ್ನು ಮುಜುಗರಕ್ಕೀಡು ಮಾಡುತ್ತಿದ್ದವು. ಇಷ್ಟೆಲ್ಲಾ ಇದ್ದಾಗ್ಯೂ ನನಗೆ ಹಿಡಿಸದ ವಿಷಯವೊಂದಿತ್ತು. ಅದು ಗಣಿತ! ಅದರಲ್ಲೂ ʼಆಲ್‌ಜೀಬ್ರಾʼ ಎಂದರೆ ಬೆಚ್ಚಿ ಬೀಳುವಂತಾಗುತ್ತಿತ್ತು. ಅದನ್ನು ನಾನು ಹೈಸ್ಕೂಲಿನಲ್ಲಿದ್ದಾಗಲೇ ಗುರುತಿಸಿದ್ದರು.
ಶ್ರೀಪಾದಸ್ವಾಮಿ ಎಂಬ ವಿಜ್ಞಾನ ಮಾಸ್ಟರು. ಅವರು ಆಗ ತಾನೇ ಬಿಎಸ್‌ಸಿ ಮುಗಿಸಿ ನೇರವಾಗಿ ನಮ್ಮ ಹೈಸ್ಕೂಲಿಗೆ ವಿಜ್ಞಾನ ಅಧ್ಯಾಪಕರಾಗಿ ಬಂದಿದ್ದರು. ಗಣಿತದ ಬಗ್ಗೆ, ಅದರಲ್ಲೂ ಆಲ್‌ಜೀಬ್ರಾದ ಬಗ್ಗೆ ನಮಗಿದ್ದ ಭಯ ಕಂಡು ʼಆಲ್ ಜೀಬ್ರಾ ಅಂದ್ರೆ ಅದೊಂತರ ಕೋಬ್ರಾ ಇದ್ದ ಹಾಗೆ. ಭಯ ಬಿದ್ರೆ ನಮ್ಮನ್ನು ಹೆದರಿಸಿ ಓಡಿಸುತ್ತೆ. ಧೈರ್ಯದಿಂದ ಎದುರಿಸಿದರೆ ಅದೇ ಹೆದರಿ ಓಡುತ್ತೆʼ ಎಂದು ನಮಗೆ ಧೈರ್ಯ ತುಂಬುತ್ತಿದ್ದರು. ಅವರು ಕಾಲೇಜು ಓದುತ್ತಿದ್ದಾಗ ಅವರ ಸಹಪಾಠಿಗಳು ಆಲ್‌ಜೀಬ್ರಾವನ್ನು ಗೇಲಿ ಮಾಡಲು ಸೃಷ್ಟಿಸಿ ಹೇಳುತ್ತಿದ್ದ ನುಡಿಗಟ್ಟನ್ನು ನಮಗೆ ತಮಾಷೆಯ ದಾಟಿಯಲ್ಲಿ ಹೇಳುತ್ತಿದ್ದರು. “ಆಲ್ ಜೀಬ್ರಾ ಈಸ್ ಎ ಕೋಬ್ರಾ! ವಿಚ್ ಮೇಕ್ಸ್ ಗಾಂಡ್ ಗಾಬ್ರ” ಅಂತ. ಅದೇನೇ ಆದರೂ ಗಣಿತ ಹಾಗೂ ಆಲ್ ಜೀಬ್ರಾ ಬಗೆಗಿನ ಗಾಬರಿ ನನ್ನಲ್ಲಿ ಹಾಗೆಯೇ ಉಳಿದುಹೋಗಿತ್ತು. ಸಿದ್ದಗಂಗೆಯ ಶಾಲೆಯಲ್ಲೂ ಸಹಾ ಗಣಿತದ ಅಧ್ಯಾಪಕರು ಇದನ್ನು ಗುರುತಿಸಿ, ಚೆನ್ನಾಗಿ ಅಭ್ಯಾಸ ಮಾಡಬೇಕೆಂದು ಬುದ್ದಿವಾದ ಹೇಳುತ್ತಿದ್ದರು.ಗಣಿತ ಕಲಿತು ಯಾವುದೇ ಪರೀಕ್ಷೆಯಲ್ಲಿ ಪಾಸು ಮಾಡಲು ನನ್ನಿಂದ ಸಾಧ್ಯವೇ ಇಲ್ಲವೋ ಏನೋ ಎಂಬ ಭಾವನೆ ಬೇರೂರಿ, ಆ ವಿಷಯ ಕುರಿತೇ ಒಂದು ಬಗೆಯ ʼಹೇವರಿಕೆʼ ಉಂಟಾಗಿತ್ತು.
ಹನ್ನೊಂದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅದೇಕೋ ಗಣಿತವೇ ಮೊದಲಿಗೆ ಬಂದಿತ್ತು. ನನ್ನ ಬಗ್ಗೆ ತಿಳಿದಿದ್ದ ನಿಕಟವರ್ತಿಗಳು ಹುರಿದುಂಬಿಸಿ ಕಳಿಸಿದ್ದರು. ಇದೊಂದು ಚೆನ್ನಾಗಿ ಬರೆದು ಬಂದರೆ ಮುಂದೆ ಯಾವುದರಲ್ಲೂ ತೊಂದರೆಯಿಲ್ಲ ಎಂದು ಧೈರ್ಯ ತುಂಬಿ ಕಳಿಸಿದ್ದರು.ಪ್ರಶ್ನೆ ಪತ್ರಿಕೆಯನ್ನು ಕಣ್ಣೆದುರು ಹಿಡಿದು ನೋಡಿದ ಕೂಡಲೇ ನನಗೆ ʼಕೋಬ್ರಾʼ ಕಂಡಂತೆ ಆಗಿತ್ತು. ಕಲಿತದ್ದೂ ಮರೆತು ಹೋದಂತೆ ಎನಿಸತೊಡಗಿತು. ಧೈರ್ಯ ತಂದುಕೊಂಡು ಉತ್ತರ ಬರೆಯ ತೊಡಗಿದೆ.ಕಡಿಮೆ ಅಂಕಗಳಿದ್ದ ಸಣ್ಣ ಸನ್ಣ ಲೆಕ್ಕಗಳನ್ನು ಬಿಡಿಸತೊಡಗಿದೆ. ಅರ್ಧ ವೇಳೆ ಕಳೆದಿತ್ತು. ಎಣಿಸಿನೋಡಿದೆ. ಕೇವಲ ನಲವತ್ತು ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಿತ್ತು.
ಇನ್ನು ಮುಂದೆ ಬರೆಯಲು ಸಾಧ್ಯವಿಲ್ಲವೆನಿಸಿತು. ʼಈಗಾಗಲೇ ಬರೆದಿರುವುದರಲ್ಲಿ ಎಷ್ಟು ತಪ್ಪುಗಳಿದಾವೋ… ಪಾಸು ಮಾಡುವುದು ನನ್ನಿಂದ ಸಾಧ್ಯವಿಲ್ಲʼ ಎಂದು ಕೊಂಡು ಅರ್ಧ ಗಂಟೆ ಮುಂಚೆಯೇ ಉತ್ತರ ಪತ್ರಿಕೆ ಕೊಟ್ಟು ಹೊರಬಂದು ಮಾಮೂಲಿ ಹೋಗುತ್ತಿದ್ದ ಸಣ್ಣ ಬೆಟ್ಟದ ಒಂದು ಬಂಡೆ ಆಶ್ರಯಿಸಿ ಕುಳಿತು ಚಿಂತಿಸತೊಡಗಿದೆ.ಶಿವರುದ್ರ ಶೆಟ್ಟಿ ಗಾಬರಿಯಿಂದ ಹುಡುಕಿಕೊಂಡು ಬಂದ. ʼಯಾಕೋ ಇಲ್ಲಿ ಬಂದು ಹೀಗೆ ಕೂತಿದಿಯಾ? … ಯಾಕೆ ಗಣಿತ ಪರೀಕ್ಷೆ ಬರೆಯಲಿಲ್ವಾ? ಎಂದ. ʼಸರಿಯಾಗಿ ಬರೆಯೋಕೆ ಆಗ್ಲಿಲ್ಲʼ ಎಂದೆ. ʼಸರಿ ಬಿಡು, ನಾಳೆ ಪರೀಕ್ಷೆಗಾದ್ರೂ ಓದಿ ತಯಾರಾಗು…. ಪರೀಕ್ಷೆ ಪಾಸಾಗ ಬ್ಯಾಡ್ವಾʼ ಎಂದ. ʼಪರೀಕ್ಷೆ ಎಲ್ಲಿ ಪಾಸಾಗುತ್ತೆ? ಒಂದ್ ಸಬ್ಜೆಕ್ಟಲ್ಲಿ ಫೇಲ್ ಆದ್ರೂ ಫೇಲೇ ಅಲ್ವಾ? ʼ ಎಂದು ನಿರಾಸೆಯಿಂದ ಹೇಳಿದೆ.ನೀನೊಂತರ ಪುಕ್ಕಲ “ಫೇಲಾಗುತ್ತೆ ಅಂತ ಅದೆಂಗೆ ಅಷ್ಟು ಕರಾರುವಕ್ಕಾಗಿ ಹೇಳ್ತೀಯಾʼ? ಎಂದ. ಇನ್ನೇನು ಮತ್ತೆ? ನಾನು ಬರ್ದಿರೋದೆ ನಲುವತ್ತು ನಂಬರಿಗೆ… ಅದರಲ್ಲೂ ಎಷ್ಟು ತಪ್ಪೋ? ಎಂದೆ…ಗಣಿತ ಅಂದ್ರೆ ಬೇರೆ ವಿಷಯದಂಗಲ್ಲ. ಎಷ್ಟು ಲೆಕ್ಕ ಕರೆಕ್ಟಾಗಿರುತ್ತೋ… ಅಷ್ಟು ಮಾರ್ಕು ಕರೆಕ್ಟಾಗಿ ಬರುತ್ತೆ. ನೀನು ಬರ್ದಿರದ್ರಲ್ಲಿ ಹತ್ತು ಮಾರ್ಕಿನ ಲೆಕ್ಕ ತಪ್ಪೇ ಆಗಿದ್ರೂ ಮೂವತ್ತು ಬಂದು ಪಾಸಾಗ್ತಿಯಾ ನಡಿ…. ನಾಳೆಯದು ಚೆನ್ನಾಗಿ ಓದಿಕೋ ಎಂದು ನನ್ನನ್ನು ರೂಮಿನ ಕಡೆ ಕರೆ ತಂದು ಧೈರ್ಯ ತಂಬಿ ತನ್ನ ರೂಮಿಗೆ ಹೋದ.
ಬೋರೇಗೌಡನ ಮಾತೂ ಅದೇ ಧಾಟಿಯಲ್ಲಿತ್ತು. ಎಲ್ಲಾ ಪೇಪರ್‌ಗಳನ್ನು ಬರೆದೆ. ಬೇಸಿಗೆ ರಜಾ ಬಂತು. ಮತ್ತೆ ಮಲೆನಾಡ ಮಡಿಲಿಗೆ ಹೋಗುವ ಸಂಭ್ರಮ.ನಮ್ಮ ಹಳ್ಳಿಯಿಂದ ಕಾಲೇಜಿಗೆ ಹೋದವರಲ್ಲಿ ನಾನು ಎರಡನೆಯವನು. ಮನೆಯ ಕಡೆ ಸ್ವಲ್ಪ ಸ್ಥಿತಿವಂತರಾಗಿದ್ದ ಈರೇಗೌಡ ,ನನಗಿಂತ ಒಂದು ವರ್ಷ ಮೊದಲೇ ಕಾಲೇಜು ಸೇರಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಮೊದಲ ಬಿಎಸ್‌ಸಿ ಓದುತ್ತಿದ್ದ.ರಜದ ಆರಂಭದ ದಿನಗಳಲ್ಲಿ ನಮಗೆ ಬಿಡುವೇ ಬಿಡುವು. ಕಾಡು ಮೇಡು ಅಲೆದವು. ಹಣ್ಣು ಹಂಪಲು ಸವಿದೆವು. ಹೊಳೆ, ಅಬ್ಬಿಯಲ್ಲಿ ಮಿಂದೆವು.ಈ ಎಲ್ಲಾ ಸಂತಸದ ಕ್ಷಣಗಳ ನಡುವೆ ನಾನು ಒಮ್ಮೊಮ್ಮೆ ಅನ್ಯ ಮನಸ್ಕನಾಗಿರುತ್ತಿದ್ದುದನ್ನು ಈರೇಗೌಡ ಗಮನಿಸಿದ್ದ. ಒಮ್ಮೆ ಕೇಳಿಯೇ ಬಿಟ್ಟ.ನಾನು ಬರೆದ ಪರೀಕ್ಷೆಯ ಬಗ್ಗೆ, ಗಣಿತದಲ್ಲಿ ಸರಿಯಾಗಿ ಬರೆಯದೇ ಇರುವುದರಿಂದ ಪಿಯುಸಿ ಪಾಸಾಗುವ ಬಗ್ಗೆ ಸಂಶಯ ಇರುವುದರ ಬಗ್ಗೆ ಹೇಳಿದೆ. ಅದಕ್ಕೆ ಅವನು ʼಹಾಗೇನೂ ಆಗಲಾರದು. ನೀನು ಫೇಲಾಗ್ತಿಯಾ ಎಂದರೆ ಯಾರು ನಂಬುತ್ತಾರೆ. ಇರ್ಲಿ ಬಿಡು. ಆ ವಿಚಾರ ಈಗ್ಯಾಕೆ ತಲೆ ಕೆಡಿಸಿಕೊಳ್ಳುವುದು. ಧೈರ್ಯವಾಗಿರುʼ ಎಂದು ಹೇಳಿದ್ದ.
ಊರಲ್ಲಿ ಆ ದಿನ ಸಂಬ್ರಮ. ಊರ ದೇವಾಲಯದ ಭಗ್ನವಾಗಿದ್ದ ವಿಗ್ರಹವನ್ನು ಹೊಸದಾಗಿ ಮಾಡಿಸಿ ಮರು ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮ. ಊರ ಜನರಷ್ಟೇ ಅಲ್ಲದೆ ಊರಿಂದ ಹೊರಕ್ಕೆ ಮದುವೆಯಾಗಿ ಹೋಗಿದ್ದ ಹೆಣ್ಣು ಮಕ್ಕಳು, ಆಪ್ತೇಷ್ಟರೂ ಹಿಂದಿನ ದಿನವೇ ಬಂದು ಊರೇ ಸಂಭ್ರಮದಿಂದ ಗಿಜಿಗುಡುತ್ತಿತ್ತು.ಅಂದಿನ ಕೇಂದ್ರ ಬಿಂದು ಪುರೋಹಿತರು. ಅದುವರೆಗೆ ಗತ್ತಿನಿಂದ ಮೆರೆಯುತ್ತಿದ್ದ ಊರ ಹಿರಿಯ ಗೌಡರುಗಳೂ ಅವರ ಹಿಂಬಾಲಕರಂತೆ ಬಾಲ ಮುದುರಿಕೊಂಡ ಬೆಕ್ಕಿನೋಪಾದಿಯಲ್ಲಿ ತಿರುಗಾಡುತ್ತಿದ್ದರು.ಅವರ ಮಧ್ಯೆ ಕುಳಿತ ಪುರೋಹಿತರು ಪೂಜೆಯ ಸಿದ್ಧತೆಯ ವಿಧಿ ವಿಧಾನಗಳಲ್ಲಿ ತೊಡಗಿದ್ದರು. ನಾನು ಅವರನ್ನು ಸಮೀಪದಿಂದ ಕOಡಿದ್ದು ಅದೇ ಮೊದಲು.ರಜಾಕ್ಕೆ ಬಂದಾಗಲೇ ಅಪ್ಪ ಹೇಳಿದ್ದರು. ʼಐನಾರು ನಿನ್ನ ಜೊತೆ ಮಾತಾಡಬೇಕಂತೆ ….ನಿನ್ನ ಮಗ ಯಾರು, ಅವನು ರಜಾಕ್ಕೆ ಬಂದಾಗ ನನ್ನತ್ರ ಕಳ್ಸು… ಅವನ ಇಂಗ್ಲಿಷ್ ಪಾಂಡಿತ್ಯ ನಾನೂ ಸ್ವಲ್ಪ ನೋಡ್ತಿನಿ ಅಂದಾರೆ.. ಒಂದ್ಸಲ ಹೋಗಿ ಬಾʼ ಅಂತ . ನನಗ್ಯಾಕೋ ಹೋಗುವ ಮನಸ್ಸಾಗಿರಲಿಲ್ಲ…ನಮಗೆ ಕೂರಲು ಸಮೀಪದಲ್ಲೆಲ್ಲೂ ಜಾಗವಿರಲಿಲ್ಲ. ನಾನೂ ಈರೇಗೌಡನೂ ಕೂರಲು ಎದುರು ದಿಬ್ಬದ ಕಡೆ ಹೋಗಲು ಅರ್ಚಕರ ಬಳಿ ಜನರ ಮುಂದಿದ್ದ ಇಕ್ಕಟ್ಟಿನ ಜಾಗದಲ್ಲಿ ದಾಟಿ ಹೋಗಲು ಹೆಣಗಾಡುತ್ತಿದ್ದೆವು.

ನನ್ನ ಹೈಸ್ಕೂಲಿನ ಸಹಪಾಠಿಯೊಬ್ಬ ʼನಾಗರಾಜ ಇಲ್ಲಿ ಜಾಗ ಇದೆ ಬಾʼ ಎಂದು ಜೋರಾಗಿ ಕೂಗಿದ. ಪುರೋಹಿತರು ತಲೆಯೆತ್ತಿ ನನ್ನನ್ನು ನೋಡಿದರು.ʼಓ ನೀನೇ ಏನೋ ಗುರುಶಾಂತಗೌಡನ ಮಗ! ಎನ್ನುತ್ತಾ ನನ್ನ ಮುಖವನ್ನೇ ದಿಟ್ಟಿಸಿದರು. ಆ ಪಂಡಿತರ ಮುಂದೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಲಿಲ್ಲ. “ಹೂಂ” ಎನ್ನುತ್ತಾ ಮುಜುಗರದಿಂದ ನಿಂತುಕೊಂಡೆ.ʼನೀನು ಇಂಗ್ಲಿಷಲ್ಲಿ ಬಹಳಾ ಬ್ರಿಲಿಯೆಂಟ್ ಅಂತೆ… ನಿನ್ನ ಬ್ರಿಲಿಯನ್ಸಿ ಅಷ್ಟು ನೋಡಬೇಕಲ್ಲ…ʼ ಎನ್ನುತ್ತಾ ನನ್ನನ್ನು ನೋಡಿ ಸುತ್ತ ಕುಳಿತವರನ್ನೊಮ್ಮೆ ಅವಲೋಕಿಸಿದರು. ಅವರೆಲ್ಲರೂ ಯಾವುದೋ ಪರೀಕ್ಷೆಗೆ ಸಿದ್ಧರಾದವರಂತೆ ಗಂಭೀರವಾಗಿ ಮತ್ತಷ್ಟು ಶಿಸ್ತಿನಿಂದ ಕುಳಿತುಕೊಂಡರು. ಅಷ್ಟು ಜನರ ಮಧ್ಯೆ ನಿಂತು ನಾನು ಒಂದು ಬಗೆಯ ಸಭಾಕಂಪನದಿಂದ ಸಣ್ಣಗೆ ಬೆವರತೊಡಗಿದೆ.
ʼನಾನು ಕೆಲವು ಪ್ರಶ್ನೆ ಕೇಳ್ತೀನಿ. ಇಂಗ್ಲಿಷ್‌ನಲ್ಲಿ ಸರಿಯಾಗಿ ಉತ್ತರ ಕೊಡ್ತೀಯಾʼ ಎಂದರು. ಇವರು ಯಾಕೋ ನನ್ನನ್ನು ಸಿಲುಕಿಸಿಕೊಂಡು ಸೋಲಿಸಲು ನೋಡುತ್ತಿದ್ದಾರೆ ಎನಿಸಿ ಮುಜುಗರವಾಯಿತು. ಉಗುಳು ನುಂಗಿಕೊಳ್ಳುತ್ತಾ ನಿಂತೆ.ʼಹೂಂ ಸರಿನಾʼ ಎಂದರು.ಏನು ಕೇಳಿ ಬಿಡುತ್ತಾರೋ ಎಂದು ತಬ್ಬಿಬ್ಬಾದೆ. ಆದರೆ ನನಗೆ ಗೊತ್ತಿರುವ ಇಂಗ್ಲಿಷ್ ಕೇಳಿದರೆ ಉತ್ತರಿಸಬಲ್ಲೆ ಎಂದು ಧೈರ್ಯ ತಂದುಕೊಳ್ಳುತ್ತಾ ಸಣ್ಣಗೆ ನನಗೆ ಮಾತ್ರ ಕೇಳುವಂತೆ ಕೆಮ್ಮಿಕೊಂಡು ಉತ್ತರ ಹೇಳಲು ಸಿದ್ಧನಾಗಿ ನಿಂತೆ.ʼನೋಡಿ ಇವನು ಇಂಗ್ಲಿಷಿನಲ್ಲಿ ಏಕವಚನ, ಬಹುವಚನ, ಸ್ತ್ರೀಲಿಂಗ, ಪುಲ್ಲಿಂಗ, ವರ್ತಮಾನಕಾಲ, ಭೂತಕಾಲ ಎಲ್ಲಾ ಪಟಪಟನೆ ಹೇಳ್ತಾನಂತೆʼ ಎನ್ನುತ್ತಾ ನೆರೆದ ಜನರ ಮುಖಗಳನ್ನೆಲ್ಲಾ ಅವಲೋಕಿಸಿದರು.
ನೆರೆದವರೆಲ್ಲಾ ಅವರ ಮುಂದಿನ ಪರೀಕ್ಷಾ ಕ್ರಮವನ್ನು ಅನುಮೋದಿಸುವವರಂತೆ ತಲೆದೂಗಿದರು. ಅಪ್ಪ ದೂರದಲ್ಲಿ ನಿಂತು ಹೆಮ್ಮೆಯಿಂದ ನೋಡುತ್ತಿದ್ದರು. ಅರ್ಚಕರು ನನ್ನೆಡೆಗೆ ತಿರುಗಿ ʼನೀನು ಡೈರೆಕ್ಟ್ ಸ್ಪೀಚ್‌ಗೆ ಇಂಡೈರೆಕ್ಟ್ ಸ್ಪೀಚನ್ನು ಬೋರ್ಡ್ ಮೇಲೆ ಸರಾಗವಾಗಿ ಬರೆದು ತೋರಿಸ್ತಿಯಂತೆʼ ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕೇಳಿದರು. ನನಗೇಕೋ ಅವರ ಮಾತಿನಲ್ಲಿ ವ್ಯಂಗ್ಯ ತುಂಬಿದ್ದಂತೆನಿಸಿತು.ʼಈಗ ನಾನು ಸಿಂಪಲ್ಲಾಗಿ ಮೂರೇ ಪದದ ಕನ್ನಡ ಹೇಳ್ತೀನಿ… ಅದನ್ನು ಇಂಗ್ಲಿಷಿನಲ್ಲಿ ಹೇಳುʼ ಎಂದರು.ಅವರ ಪ್ರಶ್ನೆ ಏನಿರುತ್ತೋ ಎಂದು ಎದೆ ಹೊಡೆದುಕೊಳ್ಳತೊಡಗಿತು. ಆದರೂ ಧೈರ್ಯವಹಿಸಿ ನಿಂತೆ ಅವರ ಪ್ರಶ್ನೆಯ ಬಾಂಬ್ ಬಿತ್ತು.ʼನಾನು ಸಕಲೇಶಪುರಕ್ಕೆ ಹೋಗಿದಿದ್ದರೆ! ….ಹೇಳು ಇಂಗ್ಲಿಷ್‌ನಲ್ಲಿʼ ಇವರೇಕೋ ನನ್ನನ್ನು ಸೋಲಿಸಲೇಬೇಕೆಂದು ಪಣತೊಟ್ಟಿರಬಹುದೇ? ಈ ಪ್ರಶ್ನೆಯಲ್ಲಿ ಅಂತಹಾ ಏನೋ ತಂತ್ರ ಇರಬಹುದೇ? ಎಂದು ಕ್ಷಣ ಯೋಚಿಸಿದೆ. ಮತ್ತೆ ಸಾವರಿಸಿಕೊಂಡು ಆಲೋಚಿಸಿ ಹೇಳಿದೆ.
ʼಇಫ್ ಐ ವೆಂಟ್ ಟು ಸಕಲೇಶಪುರʼ
ಅವರು ತಡ ಮಾಡಲಿಲ್ಲ ʼನಿನಗ್ಯಾರು ಇಂಗ್ಲಿಷ್ ಹೇಳಿ ಕೊಟ್ಟವ್ನುʼ ಎಂದರು. ಅವರು ಸಾಧಿಸಬೇಕಾದದ್ದನ್ನು ಸಾಧಿಸಿದ ಖುಷಿ ಇದ್ದಂತಿತ್ತು ಅವರ ಮಾತಿನಲ್ಲಿ.ಮತ್ತೆ ಪ್ರೇಕ್ಷಕರೆಡೆಗೆ ತಿರುಗಿದರು. ʼಇದೇ ನೋಡಿ ಇವನ ಇಂಗ್ಲಿಷ್ ಪಾಂಡಿತ್ಯ!ʼ ಎಂದು ವ್ಯಂಗ್ಯ ವಾಡಿದರು. ಜನ ಒಮ್ಮೆಲೇ ನಕ್ಕರು. ʼಇಫ್ ಐ ಹ್ಯಾಡ್ ಬೀನ್ ಟು ಸಕಲೇಶಪುರ್ ‘ಎಂದು ಹೇಳಬೇಕಾಗಿತ್ತು. ಎಂದರು.ಅಷ್ಟು ಜನರ ಮಧ್ಯೆ ನಿಂತು ಅವಮಾನಿತನಾದವನಂತೆ ನಾನು ಜಲ್ಲನೆ ಬೆವೆತೆ. ಇನ್ನೇನು ನೆಲಕ್ಕೆ ಕುಸಿಯಬಹುದು ಎನಿಸಿತು. ಅಷ್ಟರಲ್ಲಿ ಈರೇಗೌಡ ನನ್ನ ಕೈ ಹಿಡಿದುಕೊಂಡು ಮನೆಯ ಕಡೆ ದಿಕ್ಕಿಗೆ ನಡೆದ.ಮನೆಗೆ ಬಂದ ಅಪ್ಪ ʼಐನೋರಿಗೆ ಅಷ್ಟು ಸಣ್ಣ ಪ್ರಶ್ನೆಗೆ ಉತ್ತರ ಹೇಳಕಾಗ್ಲಿಲ್ವ ನಿಂಗೆ? ಎಲ್ಲಾರೆದುರಿಗೆ ನಂಗೆಷ್ಟು ಅವಮಾನ?’ ಎಂದರು.ನಿಮಗೆಲ್ಲ ಅವಮಾನ… ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಅಂತಾರಲ್ಲ ಹಾಗೆ ಇದು… ನನಗೆ ಕೇಳಿದ್ರೆ ನಾನೂ ಹೇಳ್ತಿರ್ಲಿಲ್ಲʼ ಎಂದು ಸಮಜಾಯಿಸಿ ಹೇಳಿದ ಈರೇಗೌಡ. ನಾನು ಬಹಳ ನೊಂದುಕೊಂಡದ್ದು ಈರೇಗೌಡನಿಗೆ ಗೊತ್ತಾಗಿತ್ತು. ಬೆಳಗಾಗೆದ್ದು ನಿಸರ್ಗ ಸೌಂದರ್ಯದ ನಡುವಿನ ಎತ್ತರದ ದೇವರ ಬೆಟ್ಟದ ನೆತ್ತಿಗೆ ಕರೆದುಕೊಂಡು ಹೋದ. ಮಧ್ಯಾಹ್ನದವರೆಗೂ ಆ ಎತ್ತರದ ಬೆಟ್ಟದ ತುದಿಯಲ್ಲಿ ಕುಳಿತು ಮನತಣಿಸಿಕೊಂಡು ಹಿಂತಿರುಗಿದೆವು.ಮಠಕ್ಕೆ ಹೋಗಿದ್ದ ಅಲ್ಲಿಯೇ ಹತ್ತಿರದ ಹಳ್ಳಿಯ ನನ್ನ ಸಹಪಾಠಿಯಿಂದ ಕಾಗದ ಬಂದಿತ್ತು.ಪಬ್ಲಿಕ್ ಪರೀಕ್ಷೆಯಲ್ಲಿ ಪಾಸಾಗಿದ್ದೆ. ಗಣಿತದಲ್ಲಿ ಮೂವತ್ತೆರಡು ಅಂಕ ಬಂದಿದ್ದರೆ ಮಿಕ್ಕ ವಿಷಯಗಳಲ್ಲೆಲ್ಲಾ ಐವತ್ತರ ಮೇಲೆ.
ಮಂಕು ತುಂಬಿದ್ದ ನಮ್ಮ ಮನೆ ಮನಗಳಲ್ಲಿ ಸಂಭ್ರಮ ತುಂಬಿಕೊಂಡಿತು.
। ಇನ್ನು ಮುಂದಿನ ವಾರಕ್ಕೆ ।






0 Comments