ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.
ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.
ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.
ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಅಂಕಣ – 7
ಆಗಿನ ಕಾಲಕ್ಕೆ ಆ ಹೋಬಳಿ ಕೇಂದ್ರದಲ್ಲಿ ಮಾತ್ರ ಒಂದು ಮಾಧ್ಯಮಿಕ ಶಾಲೆ ಇದ್ದದ್ದು.ಸುತ್ತಮುತ್ತಲ ಊರ ಮಕ್ಕಳೆಲ್ಲಾ ಕಾಡೊಳಗೆ ದಾರಿ ಸವೆಸಿ ಅಲ್ಲಿಗೆ ಶಾಲೆ ಕಲಿಯಲು ಬರಬೇಕಾಗಿತ್ತು. ಅಂದು ಶನಿವಾರ ಆ ಊರಲ್ಲಿ ವಾರದ ಸಂತೆ, ಶಾಲಾ ಮಕ್ಕಳಿಗಂತೂ ಅದು ಸಂಭ್ರಮದ ದಿನ. ವಾರವಿಡೀ ಯಾವುದೇ ಮನರಂಜನೆಯಿಲ್ಲದೆ ಸಪ್ಪೆಯೆನಿಸುತ್ತಿದ್ದ ಅವರಿಗೆ ಸಂತೆಯ ದಿನ ಏನಾದರೂ ವಿಶೇಷ ನೋಡಸಿಗುತ್ತಿತ್ತು.
ರೈತ ಜನರೂ ಅಂದು ಸಂತೆಯ ನೆಪಮಾಡಿಕೊಂಡು ಅಲ್ಲಲ್ಲಿ ಸುಳಿದಾಡುತ್ತಿದ್ದರು. ಅವರವರಲ್ಲೇ ಪಂದ್ಯ ಏರ್ಪಡುವುದು ರೂಡಿ. ಪಗಡೆ, ಚೌಕಾಬಾರ(ಕವಡೆ) , ಲಗೋರಿ, ಹೀಗೆ. ದೀಪಾವಳಿ ಕಾಲದಲ್ಲೂ ಒಮ್ಮೊಮ್ಮೆ ದೊಂಬರ ಆಟ, ಕೋತಿ ಕುಣಿತ, ಈ ಪ್ರದರ್ಶನಗಳು ಏರ್ಪಟ್ಟು ವಿಶೇಷ ಸಂಭ್ರಮಕ್ಕೆ ಕಾರಣವಾಗುವುದೂ ಉಂಟು.
ಗೌರಿ ಹಬ್ಬದ ಕಾಲದಲ್ಲಾದರೆ ಕಾಯಿಜೂಜು ವಿಶೇಷ. ತೆಂಗಿನಕಾಯಿಯನ್ನು ನೆಟ್ಟಗೆ ನಿಲ್ಲಿಸಿ ದೂರದಿಂದ ಕಲ್ಲಿನಲ್ಲಿ ಹೊಡೆಯುವುದು, ಟಗರಿನ ಪಂದ್ಯದಂತೆ ಕಾಯಿಗಳನ್ನು ಪರಸ್ಪರ ಕುಟ್ಟುವುದು, ಇಂತಹಾ ದೇಸಿ ಪಂದ್ಯಗಳು ಜನರನ್ನ ಮನರಂಜಿಸುತ್ತವೆ
ಮದ್ಯಾಹ್ನದ ವೇಳೆಗೆ ಸಂತೆ ಮುಗಿಯುವುದರಿಂದ ಈ ಎಲ್ಲಾ ಸ್ಪರ್ಧೆಗಳು ಬೆಳಗ್ಗೆ ಎಂಟರ ಒಳಗೆ ಆರಂಭವಾಗಿ ಸಂತೆಯ ಗೌಜು ಶುರುವಾಗುವ ವೇಳೆಗೆ ಮುಗಿಯುತ್ತವೆ. ಹಾಗಾಗಿ ಹಳ್ಳಿಗಾಡಿನ ಶಾಲಾ ಮಕ್ಕಳೂ ಪಂದ್ಯಗಳನ್ನು ನೋಡಿಕೊಂಡೇ ಅಂದಿನ ʻಮಾರ್ನಿಂಗ್ ಕ್ಲಾಸ್ʼಗೆ ಹೋಗುತ್ತಾರೆ.
ನಾಲ್ಕು ರಸ್ತೆಗಳು ಸೇರುವ ಅಂಗಡಿ ಬೀದಿಯ ಚೌಕದಂತಹ ಆ ಸ್ಥಳದಲ್ಲಿ ಅಂದು ಜನ ಸ್ವಲ್ಪ ಹೆಚ್ಚಾಗಿಯೇ ಸೇರಿದ್ದರು. ಇವತ್ತೆನೋ ಬಹಳ ವಿಶೇಷವಾದದ್ದೇ ಇರಬಹುದು ಎಂದುಕೊಳ್ಳುತ್ತಾ ಮಕ್ಕಳೂ ಜನಸಂದಣಿಯ ಮಧ್ಯ ನುಸುಳಿ ಮುಂದೆ ಬಂದು ನಿಂತು ನೋಡತೊಡಗಿದರು.
ಶುಭ್ರವಾದ ಬಿಳಿ ಶರ್ಟು, ಬಿಳಿ ಪೈಜಾಮ ಧರಿಸಿದ್ದ ಎತ್ತರ ನಿಲುವಿನ ಆಳು, ಮಲ್ಲೇಗೌಡ ಅವರ ಗಮನ ಸೆಳೆದ. ಪಂದ್ಯದಲ್ಲಿ ಅವನಿದ್ದರೆ ಏನಾದರೂ ಸ್ವಾರಸ್ಯವಿರುತ್ತದೆ ಎಂದು ಅವರು ಕುತೂಹಲಗೊಂಡು ಅವರವರಲ್ಲೇ ಪಿಸುಗುಡತೊಡಗಿದರು.
ಹೈ ಜಂಪೋ, ಲಾಂಗ್ ಜಂಪೋ, ಖೊಖೊನೋ ಯಾವುದೋ ಪೇಟೆಯ ಆಟದ ಸ್ಪರ್ಧೆ ಇರಬಹುದೇ ಎಂದು ಗೆಸ್ಸಿಂಗ್ ನಡೆಯತೊಡಗಿತು.
ಪೇಟೆಯ ಮುಖವನ್ನೇ ನೋಡದ ಮಲೆನಾಡ ಕೊಂಪೆಯ ಆ ಜನರ ಮಧ್ಯೆ, ಹೈಸ್ಕೂಲು ಓದಲು ಪೇಟೆಗೆ ಹೋಗಿದ್ದ ಅವನು ಮೂರು ವರ್ಷ ಮಣ್ಣು ಹೊತ್ತರೂ ಎಸೆಸ್ಸೆಲ್ಸಿ ಪಾಸು ಮಾಡಲು ಆಗಿರಲ್ಲಿಲ್ಲ. ಆದರೆ ಪೇಟೆಯ ನಯ ನಾಜೂಕು ಕಲಿತು ಬಂದಿದ್ದ ಅವನು ಹಳ್ಳಿಯ ಜನರ ನಡುವೆ ತಾನು ಬಹಳ ಕಲಿತು ಬಂದಿರುವವನು ಎಂಬಂತೆ ತೋರಿಸಿಕೊಳ್ಳುತ್ತಿದ್ದ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ದಿನ, ಊರ ಮಾಧ್ಯಮಿಕ ಶಾಲೆಯ ಮುಖ್ಯೋಪಾದ್ಯಾಯರು ಭಾವುಟ ಏರಿಸಿ ಮಕ್ಕಳಿಂದ ಹಾಡು ಹೇಳಿಸಿ ಕಳಿಸುತ್ತಿದ್ದುದ್ದನ್ನು ತಿಳಿದಿದ್ದ ಅವನು ಆ ದಿನ ಶಾಲೆಗೆ ಹೋಗಿ ಹೆಡ್ಮಾಸ್ಟರನ್ನು ಪುಸಲಾಯಿಸಿ ಅಂಗಡಿ ಬೀದಿಯಲ್ಲಿ ಮಕ್ಕಳ ಮೆರವಣಿಗೆ ಮಾಡಿಸುತ್ತಿದ್ದ. ಅವನು ಭಾರತ್ ಮಾತಾಕಿ ಜೈ, ಮಹಾತ್ಮಗಾಂಧಿಕಿ ಜೈ, ಎಂದರೆ ಮಕ್ಕಳು ಒಕ್ಕೊರಲಿನಿಂದ ಜೈ ಎಂದು ಕೂಗುವುದನ್ನು ಅಂಗಡಿ ಬೀದಿಯ ಜನ ವಿಸ್ಮಯದಿಂದ ನೋಡುತ್ತಿದ್ದರು. ಅಷ್ಟೇ ಅಲ್ಲ. ಗಣಪತಿ ಪೂಜೆ, ಸರಸ್ವತಿ ಪೂಜೆಯ ದಿನವೂ ಶಾಲೆಗೆ ಹೋಗಿ ವಿದ್ಯಾಗಣಪತಿಕಿ ಜೈ ಅನ್ನಿಸಿ ಅಲ್ಲಷ್ಟು ಜನಪ್ರಿಯನಾಗಿ ಬರುತ್ತಿದ್ದ.
ಸಂಜೆಯ ವೇಳೆಗೆ ತನ್ನ ಮನೆಯ ಆಸುಪಾಸಿನಲ್ಲಿದ್ದ ಮಾಧ್ಯಮಿಕ ಶಾಲೆಯ ದೊಡ್ಡ ಮಕ್ಕಳನ್ನು ಕಲೆಹಾಕಿಕೊಂಡು ಸಣ್ಣ ಸಣ್ಣ ಕಥೆಗಳು, ಗಾದೆಗಳನ್ನು ಹೇಳಿ ರಂಜಿಸುತ್ತಿದ್ದ. ಅವರ ಮುಂದೆ ಒಗಟುಗಳನ್ನು ಒಡ್ಡಿ ಬಿಡಿಸಲು ಹೇಳಿ, ಅವರು ತಲೆ ಕೆರೆದುಕೊಂಡು ಪೇಚಾಡುವುದು ನೋಡಿ ಖಷಿಪಡುತ್ತಿದ್ದ, ನಂತರ ಆ ಒಗಟನ್ನು ತಾನೇ ಅತೀ ಸುಲಭದಲ್ಲಿ ಬಿಡಿಸಿ ಅವರನ್ನು ಚಕಿತಗೊಳಿಸುತ್ತಿದ್ದ.
ರೂಢಿಯಲ್ಲಿದ್ದ ಒಗಟುಗಳಲ್ಲದೆ ಒಮ್ಮೊಮ್ಮೆ ತಾನೇ ಒಗಟನ್ನು ಸೃಷ್ಟಿ ಮಾಡಿ ಹೇಳಿ ಮಕ್ಕಳನ್ನು ತಬ್ಬಿಬ್ಬುಗೊಳಿಸುತ್ತಿದ್ದ. ಕೆಲವೇಳೆ ಅವನ ಮಾತೇ ಒಗಟಿನಂತೆ ಅವರಿಗೆ ಗೋಚರವಾಗುತ್ತಿತ್ತು.
ಒಂದು ದಿನ ಮಕ್ಕಳನ್ನು ಕಟ್ಟೆಯ ಮೇಲೆ ಕೂರಿಸಿಕೊಂಡು ‘ಇವತ್ತು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಸರಿಯಾಗಿ ಉತ್ತರ ಹೇಳಬೇಕು’ ಎಂದಿದ್ದ. ಇವನೇನು ಕೇಳಿಬಿಡುತ್ತಾನಪ್ಪಾ ಎಂದು ಮಕ್ಕಳು ಪಿಳಿ ಪಿಳಿ ಕಣ್ಣು ಬಿಡತೊಡಗಿದರು. ನಿಮಗೆ ಗೊತ್ತಿರೊ ಪ್ರಶ್ನೆನೇ ಕೇಳ್ತಿನಿ ನಿಜವಾದ ಉತ್ತರ ಹೇಳಬೇಕು ಎಂದ. ಮಕ್ಕಳು ತಲೆ ಆಡಿಸಿದರು.
‘ನೀವು ಯಾವಾತ್ತಾದರೂ ನಿಮ್ಮ ಕೈಲಿ ಮೊಲೆ ಹಿಡಿದಿದ್ದೀರಾ ಹೇಳಿ,’ ಎಂದ.
ಇದೆಂತಾ ಪ್ರಶ್ನೆ! ಇದು ದೊಡ್ಡವರ ವಿಚಾರ. ನಾವೆಲ್ಲಾದರೂ ಹೆಂಗಸರ ಮೊಲೆ ಹಿಡಿದಿದ್ದೀವಾ?
ಅವರಿಗೆ ಮುಜುಗರವಾಯಿತು. ನಾಚಿಕೆಯಿಂದ ತಲೆ ತಗ್ಗಿಸಿದರು.
‘ನೋಡಿದ್ರಾ ನಿಜ ಹೇಳಕೆ ಅಂಜ್ತಾ ಇದೀರಿ’ ಎಂದು ಮತ್ತೆ ಅವರನ್ನು ಕೆಣಕಿದ.
‘ಇಲ್ಲ ಇಲ್ಲ ಮಲ್ಲಪ್ಪಣ್ಣ ನಾವು ಸತ್ಯವಾಗ್ಲೂ ಯಾವ ಹೆಂಗಸಿನ ಮೊಲೆನೂ ಮುಟ್ಟಿಲ್ಲ. ಬೇಕಾದ್ರೆ ಪ್ರಮಾಣ ಮಾಡ್ತೀವಿ’ ಎಂದರು ಮೆಲುದನಿಯಲ್ಲಿ.
ʻಯಾಕಪ್ಪಾ ಸುಳ್ಳು ಹೇಳ್ತೀರಿ?ʼ ಎಂದ ಮಲ್ಲೇಗೌಡ. ಹುಡುಗರು ಇನ್ನಷ್ಟು ತಬ್ಬಿಬ್ಬಾದರು.
ʻಮಗುವಾಗಿದ್ದಾಗ ಎದೆ ಹಾಲು ಕುಡಿಯಲು ನಿಮ್ಮ ಅವ್ವನ ಮೊಲೆ ಹಿಡಿದಿಲ್ವಾ!ʼ ಎನ್ನುತ್ತಾ ಮಲ್ಲೇಗೌಡ ಕುಹಕದ ನಗೆ ಬೀರುತ್ತಾ ಹುಡುಗರ ಮುಖ ನೋಡಿದ.
ಒಗಟಿನ ಬಲೆಯೊಳಗೆ ಸಿಲುಕಿಕೊಂಡಿದ್ದ ಅವರು ಸದ್ಯ ಬಚಾವಾದೆವು ಎಂದುಕೊಳ್ಳುತ್ತಾ ಒಬ್ಬರ ಮುಖ ಒಬ್ಬರು ನೋಡಿಕೊಂಡಿದ್ದರು.
ಮಾತುಕತೆಯಲ್ಲಷ್ಟೇ ಅಲ್ಲ. ಮಲ್ಲೇಗೌಡ ಹೂಸು ಬಿಡುವುದರಲ್ಲೂ ನಿಪುಣ. ಅದರಲ್ಲೂ ಮಕ್ಕಳನ್ನು. ಪೇಚಿಗೆ ಸಿಲುಕಿಸಿ ನಗೆ ಉಕ್ಕಿಸುತ್ತಿದ್ದ. ಯಾವುದಾದರೂ ಒಬ್ಬ ಹುಡುಗನಿಗೆ ಒಂದು ಬೆರಳುಕೊಟ್ಟು ಯಾಕೋ ನಟಿಕೆ ಬರ್ತಾ ಇಲ್ಲ. ಸ್ವಲ್ಪ ಜೋರಾಗಿ ಎಳಿ. ಎನ್ನುತ್ತಿದ್ದ. ಪಾಪ ಅಮಾಯಕ ಹುಡುಗ ಜೋರಾಗಿ ಎಳೆಯುತ್ತಿದ್ದಂತೆ ಹಿಂದಿನಿಂದ ‘ಪಟಾರ್’ ಎಂದು ಸದ್ದು ಹೊರಡಿಸಿ ಆ ಹುಡುಗ ಮುಜುಗರದಿಂದ ಓಡಿ ಹೋಗುವಂತೆ ಮಾಡುತ್ತಿದ್ದ.
ಪಟಾಕಿ ಹಬ್ಬದ ಸಮಯದಲ್ಲಂತೂ ಅವನ ಮೋಜು ನೋಡಬೇಕು. ʻನೋಡಿ ನೋಡಿ ಆ ಕಡೆ ಆಟಂ ಬಾಂಬ್ ಹೊಡಿತಾ ಇದಾರೆ. ಎಲ್ಲಾ ಕಿವಿ ಮುಚ್ಕಳಿ’ ಅನ್ನುತ್ತಿದ್ದ. ಎಲ್ಲಾ ಕಿವಿ ಮುಚ್ಚಿಕೊಂಡದ್ದು ನೋಡಿ ‘ ಡಮಾರ್’ ಎಂದು ಹೂಸಿನ ಬಾಂಬ್ ಹಾಕಿ ಬಿಡುತ್ತಿದ್ದ.
ಎದುರಿಗೆ ‘ಮಲ್ಲಪ್ಪಣ್ಣ’ ಎನ್ನುತ್ತಿದ್ದರೂ ದೂರದಲ್ಲಿ ಕಾಣಿಸಿಕೊಂಡಾಗ ಹುಡುಗರು ‘ಹೂಸು ಮಲ್ಲೇಗೌಡ’ ಎಂದು ಗೇಲಿ ಮಾಡುತ್ತಿದ್ದರು.
ಅಂತೂ ಹುಡುಗರು ಅವನ ಬಗ್ಗೆ ಒಂದು ಬಗೆಯ ಭಯಮಿಶ್ರಿತ ಗೌರವ ಇಟ್ಟುಕೊಂಡಿದ್ದು ಸುಳ್ಳಲ್ಲ.
ಊರ ದೊಡ್ಡವರ ಮಧ್ಯೆ ಇದ್ದಾಗಲೂ ಮಲ್ಲೇಗೌಡ ತನ್ನ ಮಾತುಗಾರಿಕೆ ಹಾಗೂ ನಡವಳಿಕೆಗಳಿಂದ ಸಂಚಲನ ಮೂಡಿಸಿ ಬಿಡುತ್ತಿದ್ದ.
ದೀಪಾವಳಿಯ ಕಾಲದಲ್ಲಿ ಒಂದು ತಿಂಗಳು ಊರಿಗೆ ಟೆಂಟ್ ಸಿನಿಮಾ ಬರುತ್ತಿತ್ತು. ಟೆಂಟ್ ನಲ್ಲಿ ಹೆಚ್ಚಿನ ಅಂಶ ಎಂ ಜಿ ಆರ್ನ ತಮಿಳು ಸಿನಿಮಾಗಳು, ಜತೆಗೆ ಒಂದೆರಡು ರಾಜ್‍ಕುಮಾರ್ ಸಿನಿಮಾ ತೋರಿಸುತ್ತಿದ್ದರು. ಆಗೆಲ್ಲಾ ಸಿನಿಮಾದ ಬಗ್ಗೆ ತನಗೆ ಅಪಾರ ಜ್ಞಾನ ಇರುವುದಾಗಿ ತೋರಿಸಿಕೊಳ್ಳುತ್ತಿದ್ದ. ತಾನು ಮದ್ರಾಸಿಗೆ ಹೋಗಿರುವುದಾಗಿಯೂ ಎಂ ಜಿ ಆರ್ ಮುಂತಾದವರನ್ನು ಕಣ್ಣಾರೆ ನೋಡಿರುವುದಾಗಿಯೂ ಹೇಳಿ ಜನ ಕಣ್ಣು ಬಾಯಿ ಬಿಟ್ಟುಕೊಂಡು ಕೇಳುವಂತೆ ಮಾಡಿಬಿಡುತ್ತಿದ್ದ.
ʻರಾಜ್ ಕುಮಾರ್ ಹೆಂಗವ್ನೆ ಗೊತ್ತಾ? ಬೆರಳಿಂದ ಮಿಡುದ್ರೆ ರಕ್ತ ಚಿಮ್ಮಬೇಕು ಹಂಗವ್ನೆ’ …ಅವ್ನು ಸಿನಿಮಾ ತೆಗೆಯುವಾಗ ಅವನ ಜೊತೆ ನಿಂತ್ ಕಂಡು ನೋಡಿದೀನಿ’ ಎಂದು ಹೇಳಿ ಚಕಿತಗೊಳಿಸುತ್ತಿದ್ದ. ಇನ್ನೂ ಮುಂದುವರೆದು ನಾನೂ ಮದ್ರಾಸಿಗೆ ಹೋಗಿ ಸಿನಿಮಾಕ್ಕೆ ಸೇರ್ತೀನಿ.ರಾಜ್ ಕುಮಾರ್ ಹೇಳಿ ಕಳುಸ್ತೀನಿ ಬಾ ಅಂತಾ ಹೇಳಿದಾನೆ’ ಎಂದು ಹೇಳಿ ನಂಬಿಸುತ್ತಿದ್ದ….
ಅಂತಹಾ ಮಲ್ಲೇಗೌಡ ಭಾಗವಹಿಸಬಹುದಾದ ಪಂಥ ಯಾವುದು ಎಂದು ಜನ ಕಾತುರದಿಂದ ನಿರೀಕ್ಷಿಸುತ್ತಿದ್ದರು.
ʻಈವತ್ತು ಹೂಸು ಬಿಡುವ ಸ್ಪರ್ಧೆ…. ಈಗ ಇನ್ನೇನು ಸ್ಪರ್ಧೆ ಆರಂಭʼವಾಗುತ್ತೆ ಎಲ್ಲರೂ ಸಾವಕಾಶದಿಂದ ಸಹಕರಿಸಬೇಕುʼ ಎಂದು ಅನೌನ್ಸ್ ಮಾಡತೊಡಗಿದರು.
ಜನರೆಲ್ಲಾ ಕಣ್ಣಗಲಿಸಿ, ಕಿವಿ ನಿಮಿರಿಸಿ[a1] ನಿಂತುಕೊಂಡರು .
ಐದು ಜನ ಸ್ಪರ್ಧೆಗಳು ಎದುರು ಬಂದು ನಿಂತರು. ಮಲ್ಲೇಗೌಡನೇ ಪಂಥದಲ್ಲಿ ಗೆಲ್ಲುತ್ತಾನೆಂದು ಜನ ಗುಸು ಗುಸು ಮಾತಾಡಿಕೊಂಡರು. ಮಲ್ಲೇಗೌಡನೂ ಇನ್ನೇನು ಪಂಥದಲ್ಲಿ ಗೆದ್ದೇ ಬಿಟ್ಟಿದ್ದೇನೆ ಎಂಬಂತೆ ಬೀಗುತ್ತಾ ನಿಂತಿದ್ದ. ಹೂಸುವುದರಲ್ಲಿ ನಿಪುಣನಾಗಿದ್ದ ಅವನು ಸಕಲ ಸಿದ್ಧತೆಯೊಂದಿಗೇ ಬಂದಿದ್ದ.
ರಾತ್ರಿ ಹುರಿಗಡಲೆ ಯಥೇಚ್ಛವಾಗಿ ತಿಂದಿದ್ದ. ಸ್ಪರ್ಧೆಯ ವೇಳೆ ಹೂಸಿಗೆ ತೊಂದರೆಯಾಗಬಾರದೆಂದು ಬೆಳಿಗ್ಗೆ ಮಲವಿಸರ್ಜನೆ ಮಾಡದೆ ಬಂದಿದ್ದ. ಅಷ್ಟು ಜನರ ಮಧ್ಯೆ ಮತ್ತೊಮ್ಮೆ ಪ್ರಸಿದ್ಧಿಹೊಂದುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂದುಕೊಂಡಿದ್ದ.
ಮೊದಲ ಮೂರು ಜನ ಒಬ್ಬೊಬ್ಬರಾಗಿ ತುಂಬಿದ ಸಭೆಯ ಮುಂದೆ ನಿಂತುಕೊಂಡರು. ಅವರ ಮುಖದಲ್ಲಿ ನಾಚಿಕೆ ಆವರಿಸಿತ್ತು. ಬರಿದೇ ಮುಕ್ಕಿದರು. ಯಾವುದೇ ಸಣ್ಣ ಸದ್ದೂ ಮಾಡದೇ ಹೊರಟು ಹೋದರು.
ನಾಲ್ಕನೆಯದಾಗಿ ಪುಟ್ಟಲಿಂಗ ಬಂದ. ಅವನೂ ಸ್ಪರ್ಧೆ ಗೆಲ್ಲಲು ಸಾಕಷ್ಟು ಸಿದ್ದತೆಯೊಂದಿಗೆ ಬಂದಿದ್ದ. ಆದರೆ ಅವನು ಅಂತಹಾ ಎಕ್ಸ್ ಪರ್ಟ್ ಏನಲ್ಲ. ಹಠ ಮಾಡಿ ನಿಂತು ಮುಕ್ಕಿರಿದ. ಮೆಲ್ಲಗೆ ‘ ಪುಂಯ್’ ಎಂದು ಸದ್ದು ಹೊರಟಿತು. ಅವನ ಪ್ರಯತ್ನ ಸಾಲದು ಎಂದು ಜನರಿಗೆ ಅನ್ನಿಸಿತು. ಬಹುಮಾನ ಮಲ್ಲೇಗೌಡನಿಗೇ ಎಂದು ಜನ ಗೆಸ್ ಮಾಡುತ್ತಾ ಉಸಿರು ಬಿಗಿಹಿಡಿದು ನಿಂತರು.
ಶುಭ್ರವಾದ ಬಿಳಿ ಪೈಜಾಮ ಹಾಗೂ ಅಂಗಿಯಲ್ಲಿ ಮಿರಿಮಿರಿ ಮಿಂಚುತ್ತಿದ್ದ ಮಲ್ಲೇಗೌಡ ಮುಂದೆ ಬಂದು ನಿಂತಾಗ ಜನ ಕರತಾಡನ ಮಾಡಿದರು.ಅವನಿಗೆ ಹುಮ್ಮಸ್ಸು ಬಂದಿತು. ನೆರೆದ ಜನಕ್ಕೆಲ್ಲಾ ಕೇಳುವಂತೆ ‘ಢಂ’ ಎಂದು ಹೂಸು ಬಿಡಬೇಕು ಎಂದುಕೊಳ್ಳುತ್ತಾ ಒಮ್ಮೆಗೇ ಜೋರಾಗಿ ಒತ್ತಡ ಹಾಕಿದ.
ಜನ ಕೋವಿಯ ಗುಂಡಿನಂತಹಾ ಶಬ್ದ ಕೇಳಲು ಕಿವಿಯಗಲಿಸಿ ನಿಂತರು.
‘ಭಡ್’ ಎಂದು ಸದ್ದಾಯಿತು. ಮಲ್ಲೇಗೌಡನ ಮುಖದಲ್ಲಿ ಹೆಮ್ಮೆಯ ಬದಲು ಗಲಿಬಿಲಿ ಮೂಡಿತು. ಹಿಂಬದಿ ಒದ್ದೆಯಾಗಿ ಬಿಳಿ ಪೈಜಾಮ ಹಳದಿ ಬಣ್ಣ ತಾಳತೊಡಗಿತು. ಅವನು ಎರಡು ಕೈಗಳನ್ನು ಹಿಂಬದಿಗೆ ತಂದು ಒತ್ತಿ ಹಿಡಿದು ಸಂದಣಿಯಲ್ಲಿ ನುಸುಳಿ ಗಲ್ಲಿ ನುಗ್ಗಿ ಓಡತೊಡಗಿದ.
ಕೋವಿಯ ಸಿಡಿಗುಂಡಿನಂತಹಾ ಸದ್ದು ಕೇಳಲು ಕಾತುರರಾಗಿ ನಿಂತಿದ್ದ ಜನರಿಗೆ ನಿರಾಸೆಯಾಯಿತು.
ಪುಟ್ಟಲಿಂಗನಿಗೆ ಬಹುಮಾನ ಬಂದಿದೆʼ ಎಂದು ವ್ಯವಸ್ಥಾಪಕರು ಪ್ರಕಟಪಡಿಸದರು.
ಜನ ಗುಜು ಗುಜು ಎನ್ನುತ್ತಾ ಚದುರಿ ಹೋದರು.






0 Comments