ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಗಂಗಳ ಸಂಬಳ..  

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – 6

ಆ ಮಲೆನಾಡಿನ ಕುಗ್ರಾಮದಲ್ಲಿ ಅವನು ಅದೆಲ್ಲಿಂದ ಅವತರಿಸಿದನೊ ಯಾರಿಗೂ ತಿಳಿಯದು.

ಒಂದು ದಿನ ಬೆಳಕು ಹರಿಯುವ ವೇಳೆಗೆ ಊರ ಸೇದುವ ಬಾವಿಯ ಮುಂದಿನ ಹಲಸಿನ ಮರದ ಕಟ್ಟೆಯಲ್ಲಿ ಪ್ರತ್ಯಕ್ಷನಾಗಿದ್ದ.

ಎತ್ತರದ ಆಳು, ಬಲಿಷ್ಟ ಮೈಕಟ್ಟು ಬೆಳೆದ ಕೂದಲು, ಗಡ್ಡ ಮೀಸೆ, ಹರಿದು ಜೂಲಾದ ಬಟ್ಟೆ ಧರಿಸಿದ್ದ ಕಡುಕಪ್ಪು ಬಣ್ಣದ ಅವನು ನೀರು ಸೇದಲು ಬಾವಿಗೆ ಬಂದ ಹೆಂಗಸರನ್ನು ಮಿಕಿ ಮಿಕಿ ನೋಡುತ್ತಾ ಕುಳಿತಿದ್ದ. ಅಗಂತುಕನನ್ನು ಕಂಡು ಬೆದರಿದ ಹೆಂಗಸರು ಮನೆಗೆ ಬಂದು ಸುದ್ದಿ ಮುಟ್ಟಿಸಿದರು.

ಆಗಿನ ಕಾಲಕ್ಕೆ ಊರ ಜನ ವ್ಯವಸಾಯದ ವಿಚಾರದಲ್ಲಿ ಸ್ವಯಂ ಪರಿಪೂರ್ಣರಾಗಿದ್ದರು. ಕುಟುಂಬದ ಸದಸ್ಯರೇ ಎಲ್ಲಾ ಕೆಲಸಗಳನ್ನು ತಮ್ಮ ತಮ್ಮಲ್ಲೇ ಹಂಚಿಕೊಂಡು ಮಾಡಿಕೊಳ್ಳುತ್ತಿದ್ದರು. ವಯಸ್ಸಾದ ಗಂಡಸರು ದನ ಮೇಯಿಸಿದರೆ ಮುದುಕಿಯರು ಮಕ್ಕಳನ್ನು ನೋಡಿಕೊಂಡು ಮನೆಯೊಳಗಿನ ಕೆಲಸಕ್ಕೆ ನೆರವಾಗುತ್ತಿದ್ದರು. ಮಗ ಸೊಸೆಯರು ವ್ಯವಸಾಯದ ಸಂಪೂರ್ಣ ಜವಾಬ್ದಾರಿ ಹೊರುತ್ತಿದ್ದರು.

ಇನ್ನು ಶಾಲೆಗೆ ಹೋಗುವ ಮಕ್ಕಳು ಬೆಳಗ್ಗೆ ಸಂಜೆ ತಂದೆತಾಯಿಯರಿಗೆ ನೆರವಾದರೆ , ರಜಾ ದಿನಗಳಲ್ಲಿ ಹಿರಿಯರ ಸರಿಸಾಟಿಯಾಗಿ ಗದ್ದೆ ತೋಟಗಳಲ್ಲಿ ದುಡಿಯುತ್ತಿದ್ದರು. ಹಾಗಾಗಿ ಹೊರಗಿನ ಆಳುಗಳನ್ನು ನೆಚ್ಚಿ ಕೂರಬೇಕಾದ ಪ್ರವೇಯವೇನೂ ಇರಲಿಲ್ಲ. ದೊಡ್ಡ ದೊಡ್ಡ ವ್ಯವಸಾಯದ ಕೆಲಸಗಳಲ್ಲಿ ಊರವರು ಪರಸ್ಪರ ಮುಯ್ಯಾಳು ಮಾಡಿಕೊಂಡು ಕೃಷಿ ಕೆಲಸ ನಿಭಾಯಿಸುತ್ತಿದ್ದರು. ಜಾಸ್ತಿ ಹಿಡುವಳಿ ಹೊಂದಿದ್ದ ಒಂದೆರಡು ಕುಟುಂಬಗಳು ದನ ಕಾಯಲು ಆಳು ಕರೆಸಿಕೊಳುತ್ತಿದ್ದರು ಅಷ್ಟೇ.

ಹೊರಗಿನ ಅಪರಿಚಿತ ಜನರನ್ನು ಅಷ್ಟಾಗಿ ಕಾಣದಿದ್ದ ಜನ ಕೂತೂಹಲಭರಿತರಾಗಿ ಬಾವಿಯ ಕಟ್ಟೆಯ ಬಳಿಗೆ ಗುಂಪು ಗುಂಪಾಗಿ ಬಂದಿದ್ದರು. ಕೆಲವರು ಅವನು ಹುಚ್ಚನಿರಬಹುದು ಎಂದುಕೊಂಡರು. ಇನ್ನು ಕಳ್ಳ ಹೇಗಿರುತ್ತಾನೆ ಎಂದು ನೋಡಿರದಿದ್ದ ಜನ ಅವನು ಎಲ್ಲಿಂದಲೋ ಬಂದ ಕಳ್ಳನಿರಬಹುದು ಎಂದು ತರ್ಕಿಸಿದರು.

ಯಾರು ನೀನು?…ಯಾವೂರವನು?… ಇಲ್ಲಿಗೇಕೆ ಬಂದೆ? ಎಂದು ಹಲವಿಧವಾಗಿ ಪ್ರಶ್ನಿಸಿ ನೋಡಿದರು. ಯಾವುದಕ್ಕೂ ಉತ್ತರವಿಲ್ಲ. ಅಲ್ಲ, ಅವನು ಹುಚ್ಚನೂ ಅಲ್ಲ ಕಳ್ಳನೂ ಅಲ್ಲ: ಸ್ವಲ್ಪ ಮಂದಬುದ್ದಿಯವನು ಎಂಬುದು ಅವರಿಗೆ ತಿಳಿದು ಹೋಯಿತು. ಅವನ ರಟ್ಟೆಯ ಉಬ್ಬಿದ ಸ್ನಾಯುಗಳನ್ನು ನೋಡಿದರು. ಅವನು ಚಿಕ್ಕಂದಿನಿಂದಲೇ ಮನೆ ತೊರೆದವನಿರಬಹುದು. ಬೆಳೆಯುತ್ತಾ ಎಲ್ಲೋ ಯಾವುದೋ ಪೇಟೆಯ ಹೋಟೆಲಿನಲ್ಲಿ ಹಿಟ್ಟು ರುಬ್ಬುತ್ತಾ ಹೊಟ್ಟೆ ತುಂಬಾ ತಿಂದು ಬೆಳೆದಿರಬಹುದು. ಎಂದು ಜನ ಅವರವರಲ್ಲೇ ಮಾತಾಡಿಕೊಂಡರು.

ಅನುಕೂಲಸ್ಥ ಜನ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಇಟ್ಟುಕೊಂಡರೆ ಹೇಗೆ? ಎಂದು ಯೋಚಿಸಿದರು. ಆ ಬಗ್ಗೆ ಹೆಂಗಸರೊಂದಿಗೆ ಚರ್ಚಿಸಿದರು. ಅಯ್ಯೋ ಅವನು ಯಾರೋ? ಯಾವ ದೇಸದವನೋ ಏನೋ? ಅವನ ಹೆಂಗೆ ನಂಬದು. ಮನೇಲಿ ಬೇರೆ ಬೆಳೆದ ಹೆಣ್ಣುಮಕ್ಕಳಿದ್ದಾರೆ. ಎಂದು ಹೆಂಗಸರು ಅನುಮಾನ ವ್ಯಕ್ತಪಡಿಸಿದರು.

ಬಹಳ ಹೊತ್ತು ಚರ್ಚಿಸಿದ ಊರವರು ಅವನಿಗೆ ನೀನು ಇಲ್ಲಿರುವುದು ಬೇಡ. ಸಂಜೆಯೊಳಗೆ ಊರು ಬಿಟ್ಟು ಹೋಗು.ಎಂದು ಫರ್ಮಾನು ಹೊರಡಿಸಿ ತಮ್ಮ ತಮ್ಮ ಗದ್ದೆ ತೋಟದ ಕೆಲಸಕ್ಕೆ ಹೊರಟುಹೋದರು.

ಕೊಣವೇಗೌಡ ಅವನನ್ನೇ ತದೇಕಚಿತ್ತನಾಗಿ ನೋಡುತ್ತಾ ಕೆಲಕಾಲ ನಿಂತಿದ್ದವನು ನಂತರ ಅವನೂ ಹೊರಟು ಹೋಗಿದ್ದ.

ಸಂಜೆಯಾಯಿತು, ತೋಟಗದ್ದೆಯಿಂದ ಬಂದ ಜನ ನೋಡಿದರು. ಈ ಊರು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದವನಂತೆ ಅವನು ಅದೇ ಕಟ್ಟೆಯ ಮೇಲೆ ಕುಳಿತೇ ಇದ್ದ. ಜನರಿಗೆ ಏನು ಹೇಳಬೇಕೆಂದು ತೋಚಲಿಲ್ಲ. “ಈ ಕರಿಯ ಏನೂ ಊರು ಬಿಟ್ಟು ಹೋಗೋ ಹಂಗೆ ಕಾಣುತ್ತಿಲ್ಲ ಎಂದುಕೊಂಡರು. ಹೆಸರೇ ತಿಳಿಯದಿದ್ದ ಅವನಿಗೆ ಊರ ಜನ ಒಂದು ಹೆಸರನ್ನು ಕೊಟ್ಟಿದ್ದರು.

ಬೆಳಗ್ಗೆ ನೋಡಿಕೊಂಡರಾಯಿತು ಎಂದು ಜನ ಅಲ್ಲಿಂದ ಚದುರಿಹೋದರು.

ಕೊನೆಯಲ್ಲಿ ಕೊಣವೇಗೌಡ ಬಂದು ನೋಡಿದ. ಆ ಕರಿಯ ಕಟ್ಟೆಯ ಮೇಲೆ ಪ್ರತಿಷ್ಟಾಪಿಸಿದ ವಿಗ್ರಹದಂತೆ ಕುಳಿತೇ ಇದ್ದ… ಅವನ ಒಳಗಿನ ಆಸೆ ಚಿಗುರಿತು…..

ಅವನ ನಿಜ ಹೆಸರು ಕೊಣವೇಗೌಡ ಅಂತ ಅಲ್ಲ. ಊರಲ್ಲಿ ಅವನೊಬ್ಬ ಅಪ್ಪಟ ಜಿಪುಣ. ʻಇವನು ಕೀತ ಬೆಳಿಗ್ಗೆ ಉಚ್ಚೆ ಹುಯ್ಯುವವನಲ್ಲʼ ಎಂದು ಅವನ ಬಗ್ಗೆ ಒಂದು ನಾಣ್ಣುಡಿಯೇ ಹುಟ್ಟಿಕೊಂಡಿತ್ತು ಊರಿನಲ್ಲಿ. ಕೊಣವೇಗೌಡನ ಕತೆ ಎಂಬ ಜಿಪುಣನ ಕುರಿತ ಜನಪದ ಹಾಡು ಕೇಳಿದ್ದ ಊರವರು ಅವನನ್ನು’ ‘ಕೊಣವೇಗೌಡ’ ಎಂಬ ಅಡ್ಡ ಹೆಸರಿನಿಂದ ಕರೆಯತೊಡಗಿದ್ದರು. ಹಾಗಾಗಿ ಅವನ ನಿಜವಾದ ಹುಟ್ಟು ಹೆಸರು ಏನೆಂಬುದೇ ಈಗಿನ ಪೀಳಿಗೆಯವರಿಗೆ ತಿಳಿದಿರಲಿಲ್ಲ.

ಅವನ ಮನೆಯಲ್ಲಿದ್ದವರು ಗಂಡ ಹೆಂಡತಿ ಮತ್ತು ಎರಡು ಮಕ್ಕಳು. ದನಕರು ನೋಡಿಕೊಳ್ಳುತ್ತಾ ವ್ಯವಸಾಯದ ಕೆಲಸದಲ್ಲೂ ಕೈ ಜೋಡಿಸುತ್ತಿದ್ದ ಅವನ ಎಂಬತ್ತೈದು ವರ್ಷ ತುಂಬಿದ ಅಪ್ಪ ಕೆಲ ತಿಂಗಳ ಹಿಂದಷ್ಟೇ ತೀರಿ ಹೋಗಿದ್ದ. ಶಾಲೆಗೆ ಹೋಗುವ ಅವನ ಮಕ್ಕಳು ಸರಿಯಾಗಿ ಮಾತು ಕೇಳುತ್ತಿರಲಿಲ್ಲ. ಹಾಗಾಗಿ ಅವನಿಗೆ ಜಮೀನು ಕೆಲಸ ನಿಭಾಯಿಸುವುದು ಬಹಳ ಕಷ್ಟವಾಗುತ್ತಿತ್ತು. ಊರವರು, ನೆಂಟರಿಷ್ಟರು, ಒಬ್ಬ ಆಳು ಇಟ್ಟುಕೊಳ್ಳುವಂತೆ ಅವನಿಗೆ ಸಲಹೆ ನೀಡಿದ್ದರು.

ಆಳಿಗೆ ಮುಂಗಡ ಹಣ ಕೊಟ್ಟು ಕರೆತರಬೇಕು. ತಿಂಗಳು ತಿಂಗಳು ಸಂಬಳ ಕೊಡಬೇಕು. ಹೊಟ್ಟೆ ತುಂಬ ಅನ್ಬ ಇಕ್ಕಬೇಕು. ಕಿಸೆಯಿಂದ ಹಣ ತೆಗೆಯುವ ಬಾಬತ್ತು ಜಿಪುಣನಾದ ಅವನಿಗೆ ಹಿಡಿಸದಾಗಿತ್ತು…

ʻಇವನೇನೂ ಸಂಬಳ ಕೇಳಲಾರ ಎರಡು ಹೊತ್ತು ಅನ್ನ ಹಾಕಿದರೆ ಸಾಕು. ದಿನಕ್ಕೆ ಎರಡಾಳು ಕೆಲಸ ತೆಗೆಯಬಹುದುʼ ಯೋಚಿಸಿದ ಅವನು ಆ ಕರಿಯನನ್ನು ಕಟ್ಟೆಯಿಂದ ಎಬ್ಬಿಸಿ ಮನೆಗೆ ಕರೆದೊಯ್ದ.

ಬಚ್ಚಲು ಮನೆಯ ಹಂಡೆಯಲ್ಲಿ ನೀರು ಕಾಯುತ್ತಿತ್ತು. ಮೈ ತೊಳೆದುಕೊಳ್ಳಲು ಹೇಳಿದ. ಅವರಪ್ಪ ತೊಡುತ್ತಿದ್ದ ಹಳೆಯ ಖಾಕಿ ಚಡ್ಡಿ, ಅಂಗಿ ಹಾಗೂ ಟೊಪ್ಪಿಯನ್ನು ಕೊಟ್ಟು ತೊಟ್ಟುಕೊಳ್ಳಲು ಹೇಳಿದ. ಹಸಿದಿದ್ದ ಅವನಿಗೆ ಗಂಗಳ ತುಂಬಾ ಅನ್ನ ಇಕ್ಕಿದ. ಹಸಿದ ನಾಯಿಯಂತೆ ಗಬಗಬನೆ ತಿಂದ. ಅವನಿಗೆ ನೆಮ್ಮದಿಯಾಯಿತು. ಅಲ್ಲಿಯೇ ಬಚ್ಚಲು ಮನೆಯ ಮೂಲೆಯಲ್ಲಿದ್ದ ಹರಕು ಚಾಪೆಯ ಮೇಲೆ ಮುದುಡಿ ಮಲಗಿ ನಿದ್ದೆಹೋದ.

ಮರುದಿನದಿಂದಲೇ ಅವನು ಕೊಣವೇಗೌಡನ ನಿಷ್ಠಾವಂತ ಸೇವಕ.

ಬೆಳಗಾಗೆದ್ದು ಗದ್ದೆಗೆ ಹೋಗಿ ಎರಡು ಹೊರೆಯಷ್ಟು ಹುಲ್ಲು ಕುಯ್ದು ಒಬ್ಬನೇ ಹೊತ್ತು ತರುತ್ತಿದ್ದ. ಕೊಟ್ಟಿಗೆಯ ಸಗಣಿ ತೆಗೆದು ತಿಪ್ಪೆಗೆ ಹಾಕುತ್ತಿದ್ದ. ಎರಡು ಗಂಗಳ ಅನ್ನ ಇಕ್ಕಿಸಿಕೊಂಡು ಕರುಳು ತುಂಬಾ ತಿನ್ನುತ್ತಿದ್ದ. ದನ ಹೊಡೆದುಕೊಂಡು ಕಾಡಿಗೆ ಹೋದರೆ ಸಂಜೆ ವಾಪಾಸು ಬರುವಾಗ ಎರಡು ಹೊರೆಯಷ್ಟು ಸೌದೆ ಹೊತ್ತು ಬರುತ್ತಿದ್ದ.

ಮಧ್ಯಾಹ್ನ ಹಸಿವಾದಾಗ ಬಿಳುವನ ಹಲಸಿನ ಹಣ್ಣೋ ಬಕ್ಕೆಯ ಹಲಸಿನ ಹಣ್ಣೋ, ಜೀರಕೆ ಹಣ್ಣೋ, ಹುಳ್ಳೀ ಹಣ್ಣೋ, ಕಾಡಿನಲ್ಲಿ ದೊರೆಯುವ ನೂರಾರು ಬಗೆಯ ಹಣ್ಣುಗಳಲ್ಲಿ ಯಾವುದು ಸಿಕ್ಕಿದರೆ ಅದು, ಬೈನೆಕಂದು ಈಚಲು ಕಂದಿನ ತಿರುಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ.

ಪಕ್ಕದ ಮನೆಯ ಹೈಸ್ಕೂಲ್ ಓದುವ ಹುಡುಗ ರಾಜ ಅವನಿಗೆ ಪರಿಚಯವಾಗಿದ್ದ. ಶನಿವಾರ ಭಾನುವಾರ ಅವನು ಕರಿಯನೊಂದಿಗೆ ದನ ಹೊಡೆದುಕೊಂಡು ಕಾಡಿಗೆ ಹೋಗುತ್ತಿದ್ದ. ಕಾಡಿನಲ್ಲಿ ಕರಿಯ ಅವನಿಗೆ ಹಣ್ಣುಹಂಪಲು ಅರಣ್ಯಜನ್ಯ ತಿನಿಸುಗಳನ್ನು ಹೊಟ್ಟೆ ತುಂಬುವಷ್ಟು ತಿನ್ನಿಸುತ್ತಿದ್ದ . ಮಧ್ಯಾಹ್ನ ಹೊಳೆಯಲ್ಲಿ ಕಲ್ಲೇಡಿ, ಕಲ್ಲುಚೊಟ್ಟನ ಮೀನುಗಳನ್ನು ಹಿಡಿದು ಸುಟ್ಟು ತಿನ್ನಿಸುತ್ತಿದ್ದ. ರಾಜ ತನ್ಬ ಮಧ್ಯಾಹ್ನದ ಬುತ್ತಿಯನ್ನು ಕರಿಯನಿಗೇ ಕೊಟ್ಟುಬಿಡುತ್ತಿದ್ದ. ಈ ರೀತಿಯಾಗಿ ಅವರಿಬ್ಬರಲ್ಲಿ ಸ್ನೆಹ ಭಾವ ಬೆಳೆದಿತ್ತು.

ಯಾರೊಂದಿಗೂ ಹೆಚ್ಚು ಮಾತನಾಡದ ಕರಿಯ ರಾಜನೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ. ರಾಜನು ಅವನ ಅದುವರೆಗಿನ ಖಾಸಗಿ ಬದುಕಿನ ವಿಷಯದ ಬಗ್ಗೆ ಕೆಣಕಿ ಕೆಣಕಿ ಕೇಳುತ್ತಿದ್ದ. ಕರಿಯನು ನೆನಪಾದಷ್ಟು ಹೇಳುತ್ತಿದ್ದ.

ಎರಡಾಳಿನ ಕೆಲಸ ಮಾಡುತ್ತಿದ್ದ ಕರಿಯನಿಗೆ ದಿನಕ್ಕೆ ಎರಡು ಹೊತ್ತು ಅನ್ನ ಹಾಕುವುದೇನೂ ಅಂತಹಾ ಜಿಪುಣನಾದ ಕೊಣವೇಗೌಡನಿಗೂ ಹೊರೆಯಾಗಿ ತೋರುತ್ತಿರಲಿಲ್ಲ.

ಕೆಲಸ ಹಗುರಾಗಿ ಅವನೂ ಬಿಡುವಾಗಿ ತಿರುಗಾಡುವ ಹಾಗಾಗಿದ್ದ. ಕೊಟ್ಟಿಗೆ ಹಟ್ಟಿ ಕೆಲಸ ತಪ್ಪಿದ್ದರಿಂದ ಅವನ ಹೆಂಡತಿಯೂ ತಲೆ ಮೈ ಅಚ್ಚುಕಟ್ಟು ಮಾಡಿಕೊಂಡು ತಿರುಗಾಡುವಂತಾಗಿದ್ದಳು.

ಯಾತಕ್ಕು ಬೇಡ ಎಂದು ನಿರಾಕರಿಸಿದ ವ್ಯಕ್ತಿಯೂ ಯಾರಾದರೊಬ್ಬರಿಗೆ ನೆಮ್ಮದಿ ನೀಡಬಲ್ಲವನಾಗಿರುತ್ತಾನೆ. ಊರವರಿಗೂ ಇದರ ಅರಿವಾಯಿತು. ತಾವು ಕೈಚೆಲ್ಲಿದ ಅವಕಾಶವನ್ನು ಬಳಸಿಕೊಂಡು ಕೊಣವೇಗೌಡ ಲಾಭ ಮಾಡಿಕೊಳ್ಳುತ್ತಿರುವುದು ಕಂಡು ಊರ ಜನ ಹೊಟ್ಟೆ ಕಿಚ್ಚು ಪಡತೊಡಗಿದರು.

ಕರಿಯನನ್ನು ತಮ್ಮತ್ತ ಸೆಳೆದುಕೊಳ್ಳಲು ಹಲವರು ಹಲವಾರು ತರ ಪ್ರಯತ್ನಿಸಿ ನಿರಾಶರಾದರು.

ಹಸಿದು ಕಂಗೆಟ್ಟು ಬಂದು ಕೂತಿದ್ದಾಗ ಕರೆದು ಆಶ್ರಯ ನೀಡಿದ ಮನೆ. ಕರುಳು ತುಂಬುವಂತೆ ದಿನಕ್ಕೆ ಎರಡು ಹೊತ್ತು ಅನ್ನ ನೀಡುವ ಮನೆ.. ನೆಮ್ಮದಿಯ ನಿದ್ದೆಗೆ ಕಾರಣವಾದ ಮನೆ. ಅದಕ್ಕಿಂತ ಇನ್ನೇನು ಬೇಕು! ಕರಿಯ ಆ ಮನೆಗೆ ಎರಡು ಬಗೆಯದಾದ. ಊರವರ ಆಮಿಷಗಳನ್ನೆಲ್ಲ ದೂರ ಸರಿಸಿದ.

ಪುಕ್ಸಟ್ಟೆ ಗೇಯಿಸಿಕೊಳ್ಳುತ್ತಿದ್ದ ಕೊಣವೇಗೌಡನ ಬಗ್ಗೆ ಕರುಬುವುದು ಬಿಟ್ಟು ಊರವರಿಗೆ ಬೇರೇನು ಹೊಳೆಯಲಿಲ್ಲ. ಸಂಜೆ ಬಿಡುವಿನ ವೇಳೆ ಕಟ್ಟೆಯಲ್ಲಿ ಕುಳಿತ ಜನ ಇದೇ ವಿಚಾರ ಮಾತಾಡುವಂತಾಯಿತು.

‘ಎಂತಾ ಕೆಲಸ ಅಗಿ ಹೋಯಿತು? ನಮಗೆ ಗೊತ್ತಾಗ್ದೆ ಹೋಯ್ತಲ್ಲ ನಮ್ಮ ಮಂಕು ಬುದ್ದಿಗೆ ಯಾವುದರಲ್ಲಿ ಹೊಡಕೊಳ್ಳಬೇಕು? ಸುಬ್ಬೇಗೌಡ ಹಲುಬಿದ.

‘ಪುಕ್ಸಟ್ಟೆ ದಿನಕ್ಕೆ ಎರಡಾಳು ಕೆಲ್ಸ ಮಾಡಿಸಿಕೊಳ್ತಾನಲ್ಲ ‘ ಎಂದ ಮರೀಗೌಡ.

‘ಯಾಕೆ …ಕೊಡದಿಲ್ವ ಸಂಬ್ಳವಾ,’ ಎಂದ ಮಾತಿನಲ್ಲಿ ಚತುರನಾದ ಸಿದ್ದೇಗೌಡ.

ತಮಗೆ ಗೊತ್ತಿಲ್ಲದ ಸುದ್ದಿ ಯಾವುದಪ್ಪಾ. ಕೊಣವೇಗೌಡ ಅದೇನು ಸಂಬ್ಳ ಕೊಡ್ತ ಇದ್ದಾನು ಎಂದು ಮಿಕ್ಕವರು ತಲೆ ಕೆರೆದುಕೊಂಡರು.

‘ಅದೇನ್ ಸಂಬಳ ಮಾರಾಯ’ ಎಂದು ಮರೀಗೌಡ ಸಿದ್ದೇಗೌಡನ ಮುಖ ನೋಡಿದ.

ಎರಡು ಹೊತ್ತುತಿನ್ಬದಿಲ್ವ ಅದೇ…

ಗಂಗಳ ಸಂಬಳ!

ಸಿದ್ದೇಗೌಡನ ಮಾತಿನ ಚಟಾಕಿಗೆ ಮಿಕ್ಕವರು ಹೋ ಎಂದು ಬಾಯಿ ತೆರೆದು ನಕ್ಕರು.

ಭಾನುವಾರ ಬಂತು ಪಕ್ಕದ ಮನೆಯ ಕರಿಯನೊಂದಿಗೆ ಕಾಡಿಗೆ ಹೋಗಿದ್ದ ರಾಜ. ಊರವರೆಲ್ಲಾ ಅಷ್ಟೊಂದು ಆಮಿಷ ಒಡ್ಡುತ್ತಿದ್ದರೂ ಹಠ ಹಿಡಿದವನಂತೆ ಪಟ್ಟು ಬಿಡದೆ ಕೊಣವೇಗೌಡನ ಮನೆಯಲ್ಲಿ ಕುಳಿತು ಪುಕ್ಕಟ್ಟೆ ದುಡಿಯುವ ಕರಿಯನ ಬಗ್ಗೆ ಅವನಿಗೆ ಕೂತೂಹಲ ಕಾಡುತ್ತಿತ್ತು. ಕೊಣವೇಗೌಡ ಏನೋ ದೊಡ್ಡ ಆಮಿಷವನ್ನೇ ಒಡ್ಡಿರಬಹುದು ಎಂದು ಯೋಚಿಸುತ್ತಿದ್ದ.

ಎನೋ ಮಾರಾಯ ಇಷ್ಟೆಲ್ಲಾ ಅವಕಾಶ ಇದ್ರೂ ಕೊಣವೇಗೌಡನ ಮನೇಲಿ ಪುಕ್ಸಟ್ಟೆ ಗೆಯ್ತಿಯಾ ನೀನು. ಅಂತದ್ದೇನು ಮಾಡಿಕೋಡ್ತೀನಿ ಅಂತಾ ಹೇಳಿದಾರಾ ಅವ್ರ? ಎಂದು ಕೇಳಿಯೇಬಿಟ್ಟ.

ʻಅದೆಲ್ಲಾ ನಿಂಗೆ ಗೊತ್ತಾಗದಿಲ್ಲ ಬುಡುʼ ಎಂದ ಕರಿಯ.

ʻಅರೆ ಇದೇನಿದು ಹಿಂಗ್ ಹೇಳ್ತಾನೆ ಇವ್ನುʼ ರಾಜನ ಕುತೂಹಲ ಹೆಚ್ಚಾಯಿತು. ʻಮದುವೆ ಗಿದುವೆ ಮಾಡ್ತೀವಿಂತಾ ಹೇಳಿದರೇನಾʼ ಎಂದ.

ʻಏಯ್ ನನ್ಗೆಂತಾ ಮದ್ವೆ ಬುಡುʼ ಎಂದು ಕರಿಯ ಹುಡುಗನ ಕೂತೂಹಲಕ್ಕೆ ತಣ್ಣೀರೆರಚಿದ.

ರಾಜನ ಮನಸ್ಸು ತಡೆಯದಾಯಿತು. ಅಂತಹಾ ಜಿಪುಣ ಕೊಣವೇಗೌಡ ಎಂತಹಾ ಆಶ್ವಾಸನೆ ಕೊಟ್ಟು ಈ ಮಂದ ಬುದ್ದಿಯವನನ್ನು ಮರುಳು ಮಾಡಿರಬಹುದು ಎಂದುಕೊಳ್ಳುತ್ತಲೇ ಮತ್ತೆ ಒತ್ತಾಯಮಾಡಿದ.

ʼಯಾರಿಗೂ ಹೇಳ್ಬೆಡಾಂತ ಹೇಳಿದಾರೆ ಗೌಡ್ರುʼ ಕರಿಯ ನಾಚುವವನಂತೆ ಹೇಳಿದ.

ʻಇರ್ಲಿ ಬಿಡು ಕರಿಯ, ನನಗೆ ಹೇಳಬಾರದಾ? ನಾನು ಯಾರಿಗೆ ಹೇಳ್ತೀನಿʼ ರಾಜ ಕೂತೂಹಲ ತಣಿಸಿಕೊಳ್ಳಲೇಬೇಕು ಎಂಬ ಹಠದಿಂದ ಕೇಳಿದ.

ಕೊನೆಗೂ ರಾಜನ ಮಾತಿಗೆ ಮಣಿದು ಕರಿಯ ಬಾಯ್ಬಿಟ್ಟ.

ʻಸಾಯವವರೆಗೂ ಅವರ ಮನೇಲೇ ಗೇದ್ರೆ ಒಂದೆಕರೆ ತ್ವಾಟ ಬಿಟ್ಕೊಡ್ತೀನಿ ಅಂತಾ ಹೇಳಿದಾರೆʼ.

ರಾಜನಿಗೆ ಅಚ್ಚರಿಯಾಯಿತು. ಕೊಣವೇಗೌಡನ ಚಾತುರ್ಯದ ಬಗ್ಗೆ ತಲೆಕೆಡಿಸಿಕೊಂಡು ಯೋಚಿಸತೊಡಗಿದ. ಹಿಂದೆ ಮುಂದೆ ಯಾರೂ ಇಲ್ದ ಇವನು ಸತ್ತ ಮೇಲೆ ತ್ವಾಟ ಯಾರಿಗೆ? ಎಂದು ತಲೆ ಕೆರೆದುಕೊಳ್ಳತೊಡಗಿದ.

‍ಲೇಖಕರು Admin

29 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading