ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.
ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.
ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.
ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಅಂಕಣ – 5
ಬ್ರಾಂಡಿ ಶಾಪು ಜನರ ಗದ್ದಲದಿಂದ ʻಗಿಜಿ ಗಿಜಿʼಎನ್ನಲು ಶುರುವಾಯಿತು. ಮಾಮೂಲಿನಂತೆ ಸಂಜೆ ಆರೂವರೆಗೆ ಸ್ನೇಹಿತರೊಂದಿಗೆ ಕುಡಿಯಲು ಕುಳಿತಿದ್ದ ಗೋಪಾಲೇಗೌಡರು ತನ್ನ ಜುಬ್ಬದ ಎಡಮುಂಗೈ ತೋಳನ್ನು ಸರಿಸಿ ಮುಂಗೈಯನ್ನೊಮ್ಮೆ ಸಣ್ಣಗೆ ಅಲುಗಿಸಿ ಕೈಗಡಿಯಾರ ನೋಡುತ್ತಾ ʻಓ, ಟೈಮಾಯ್ತುʼ ಅಂದುಕೊಂಡರು. ಗ್ಲಾಸಿನ ತಳದಲ್ಲಿದ್ದ ಕೊನೆಯ ಗುಟುಕು ರಮ್ಮನ್ನು ನಾಲಿಗೆಗೆ ಸುರಿದುಕೊಂಡು ಸ್ನೇಹಿತರಿಗೆ ವಿದಾಯ ಹೇಳಿ ಹೊರಡಲು ಅನುವಾದರು.
ಅದು ಅವರ ಮಾಮೂಲಿ ದಿನಚರಿ, ಅವರು ಕೈಗಡಿಯಾರ ನೋಡಿಕೊಂಡರೂ ಆ ಮಬ್ಬುಗತ್ತಲಲ್ಲಿ ಅಂಕಿಗಳು ಸರಿಯಾಗಿ ಕಂಡವೋ ಇಲ್ಲವೋ! ಆದರೆ ಅವರಿಗೆ ಶಾಪಿನೊಳಗಿನ ವಾತಾವರಣದಿಂದ ಗಂಟೆ ಏಳೂವರೆ ದಾಟಿದೆ ಎಂದು ಸ್ಪಷ್ಟವಾಗಿತ್ತು. ಗೋಪಾಲೇಗೌಡರು ಈ ಸಣ್ಣ ಪಟ್ಟಣದಂತಹಾ ಹೋಬಳಿ ಕೇಂದ್ರದ ಇದೇ ಬ್ರಾಂಡಿ ಶಾಪಿನ ಬೀದಿಯ ಕೆಳಗಿರುವ ಮಂಡಲ ಪಂಚಾಯಿತಿಯಲ್ಲಿ ಐದುವರ್ಷ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಕೈಬಾಯಿ ಶುದ್ದವಾಗಿಟ್ಟುಕೊಂಡು ಕೆಲಸ ಮಾಡಿದ ಅವರನ್ನು ಈಗಲೂ ಮೆಚ್ಚುವ ಜನರಿದ್ದಾರೆ.
ಕೇವಲ ಮೆಂಬರ್ ಆಗಿದ್ದ ಕೆಲವರು ಅಪಾರ ಆಸ್ತಿ ಮಾಡಿಕೊಂಡಿರುವ ಉದಾಹರಣೆಯಿರುವಾಗ ಈತ ಹೊಸದಾಗಿ ಯಾವುದೇ ಆಸ್ತಿ ಪಾಸ್ತಿ ಮಾಡದೇ, ಇರುವಪಿತ್ರಾರ್ಜಿತ ಆಸ್ತಿಯಲ್ಲೇ ತೃಪ್ತಿಪಟ್ಟುಕೊಂಡಿದ್ದ. ದರಿಂದ ಮನೆಯಲ್ಲಿ ಮಗ ಸೊಸೆಗೆ ಇರುಸುಮುರುಸಾಗಿತ್ತು.
ಅರವತ್ತು ದಾಟಿದರೂ ಈಗಲೂ ಚಟುವಟಿಕೆಯಾಗಿರಲು ಇಷ್ಟಪಡುವ ಜೀವ. ಬೆಳಗ್ಗೆ ರೊಟ್ಟಿ ತಿಂದು ಕೊಟ್ಟಿಗೆಯ ಎತ್ತುಗಳನ್ನು ಹೊಡೆದುಕೊಂಡು ಹೋಗಿ ಕಾಫಿತೋಟದ ತಗ್ಗಿನಲ್ಲಿರುವ ಗದ್ದೆಯ ಬದುವಿನಲ್ಲಿ ಮೇಯಲು ಕಟ್ಟಿ ಮಧ್ಯಾಹ್ನದವರೆಗೂ ತೋಟದಲ್ಲಿ ಕೈಲಾದ ಸಣ್ಣಪುಟ್ಟ ಕೆಲಸ ಮಾಡುತ್ತಾರೆ.
ಮಧ್ಯಾಹ್ನ ಎತ್ತುಗಳಿಗೆ ನೀರುಕುಡಿಸಿ ಮೇವಿರುವ ಕಡೆ ನೆರಳಿಗೆ ಕಟ್ಟಿ ಬದಲಾಯಿಸಿ ಕಟ್ಟಿ ಮನೆಗೆ ಬಂದು ಮದ್ಯಾಹ್ನದ ಊಟ ಮುಗಿಸಿ ಒಂದು ಹತ್ತು ನಿಮಿಷ ವಿಶ್ರಾಂತಿ ಪಡೆಯುತ್ತಾರೆ. ನಂತರ ಕೈಕಾಲು ಮುಖ ತೊಳೆದು ಜುಬ್ಬಾ ಪೈಜಾಮ ಧರಿಸಿ, ಕನ್ನಡಕ ತೆಗೆದು ಮೇಲಿನ ಜೇಬಿನಲ್ಲಿರಿಸಿಕೊಂಡು ನಾಲ್ಕು ಕಿಲೋಮೀಟರ್ ದೂರದ ಹೋಬಳಿ ಕೇಂದ್ರದ ಕಡೆ ನಡೆಯುತ್ತಾರೆ. ಈಚೀಚೆಗೆ ಅವರಿಗೆ ಸಣ್ಣದಾಗಿ ಮರೆವು ಶುರುವಾಗಿದೆ. ಕೆಲಬಾರಿ ಎದುರಿಗೆ ಸಿಕ್ಕ ಹಳೆಯ ಸ್ನೇಹಿತರ ಹೆಸರನ್ನೇ ಮರೆತು ಪೇಚಾಡುತ್ತಾರೆ. ಒಮ್ಮೊಮ್ಮೆ ಅರ್ಧದಾರಿಯಿಂದ ಹಿಂದಕ್ಕೆ ಬಂದು ಮರೆತು ಹೋದ ಕನ್ನಡಕವನ್ನು ತೆಗೆದುಕೊಂಡು ಹೋಗುವುದೂ ಉಂಟು.
ಪೇಟೆಯಲ್ಲಿ ಅವರಿಗಾಗಿಯೇ ಅವರದೇ ವಯೋಮಾನದ ಗೆಳೆಯರು ಕಾಯುತ್ತಿರುತ್ತಾರೆ. ಕೆಲಹೊತ್ತು ಪೇಪರ್ ಓದುವುದು, ಅದರಲ್ಲಿನ ಮುಖ್ಯ ಸುದ್ದಿಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸುವುದು, ನಂತರ ಸಣ್ಣ ಮೊತ್ತಕ್ಕೆ ಪಂದ್ಯ ಕಟ್ಟಿಕೊಂಡು ಜಾಕ್‌ಪಾಟ್ ಆಡುವುದು, ಕೊನೆಯಲ್ಲಿ ಗೆದ್ದವರು ರಮ್ ಪಾರ್ಟಿ ಕೊಡಿಸುವುದು…..ಹೀಗೆ ನಡೆಯುತ್ತಿರುತ್ತದೆ.
ಏನೇ ಆದರೂ ಸಂಜೆ ನಿಖರವಾಗಿ ಏಳೂವರೆಗೆ ಪೇಟೆಯಿಂದ ಹೊರಟುಬಿಡುತ್ತಾರೆ. ಕಾರಣ ಅವರು ಎಂಟೂವರೆಗೆಲ್ಲಾ ಮನೆಯಲ್ಲಿರಬೇಕಾದುದು ನಿಯಮ. ದಿನವೆಲ್ಲಾ ತೋಟಗದ್ದೆಯಲ್ಲಿ ದುಡಿದು ದಣಿದ ಮಗಸೊಸೆ ಇವರಿಗಾಗಿ ಎಷ್ಟು ಹೊತ್ತು ಕಾಯುತ್ತಾ ಕೂರುತ್ತಾರೆ! ಒಂಬತ್ತು ಗಂಟೆಗೆಲ್ಲಾ ಅಗುಣಿ ಹಾಕಿ ಬಿಡುತ್ತಾರೆ, ಹೀಗೆಯೇ ಒಂದೆರಡು ಬಾರಿ ಸ್ವಲ್ಪ ತಡವಾಗಿ ಬಂದು ಅವರು ಎತ್ತುಗಳ ಕೊಟ್ಟಿಗೆಯಲ್ಲೇ ಮಲಗಬೇಕಾಗಿ ಬಂದಿತ್ತು.
ಗೋಪಾಲೇಗೌಡರು ಬ್ರಾಂಡಿ ಶಾಪಿನಿಂದ ಹೊರಬಂದರು. ಚೌಕದಂತ ಸ್ಥಳದಲ್ಲಿ ಪ್ರಖರವಾದ ವಿದ್ಯುದ್ವೀಪಗಳ ಬೆಳಕು ಕಣ್ಣು ಕುಕ್ಕಿದಂತಾಯ್ತು. ಕ್ಷಣ ನಿಂತು ಸುಧಾರಿಸಿಕೊಂಡು ಪಕ್ಕದ ಗೂಡಂಗಡಿಯಲ್ಲಿ ಎರಡು ಸಿಗರೇಟ್ ಕೊಂಡರು. ಒಂದನ್ನು ಹತ್ತಿಸಿಕೊಂಡು ರೂಢಿಯಂತೆ ಜುಬ್ಬದ ಕೇಳಜೇಬಿಗೆ ಕೈಹಾಕಿ ಸಣ್ಣ ಟಾರ್ಚನ್ನು ಕೈಯಲ್ಲಿ ಹಿಡಿದುಕೊಂಡು ಹೆಜ್ಜೆ ಹಾಕತೊಡಗಿದರು. ಸಿಗರೇಟ್ ಸೇದಿ ಮುಗಿಯುವ ವೇಳೆಗೆ ಜನವಸತಿಯ ಪ್ರದೇಶ ದಾಟಿದ್ದರು. ಆ ಸಣ್ಣ ಟಾರು ರಸ್ತೆ ಅಲ್ಲಿಂದ ಕಾಫಿ ತೋಟದ ಒಳಗೆ ಮುಂದುವರೆಯುತ್ತಿತ್ತು.
ವಾತಾವರಣ ಕಬ್ಬಗಾಗಿದ್ದು ಅರಿವಾಗಿ ಟಾರ್ಚ್ ಗುಂಡಿ ಒತ್ತಿ ಅದರ ಕಿರುಬೆಳಕಿನಲ್ಲಿ ರೂಢಿಯಂತೆ ಹೆಜ್ಜೆ ಹಾಕತೊಡಗಿದರು.
ಅರವತ್ತು ವರ್ಷಗಳ ಕಾಲ ಆ ದಾರಿಯಲ್ಲಿ ತಿರುಗಾಡಿದ್ದ ಅವರಿಗೆ ಅದುವರೆಗೂ ಯಾವದೇ ದೆವ್ವ ಪೀಡೆಯ ಅನುಭವವಾಗದೇ ಇದ್ದರೂ, ಕಾಲ ಕೆಳಗೆ ಕತ್ತಲಲ್ಲಿ ಹರಿದಾಡಬಹುದಾದ ಹುಳುಹುಪ್ಪಟೆಗಳ ಭಯ ಕಾಡುತ್ತಿದ್ದುದ್ದು ಸುಳ್ಳಲ್ಲ. ಕಾಡು ಕಳೆದು ಮಂಟಿ ಇಳಿದು ರಸ್ತೆ ಊರಿನ ಬಳಿ ತಗ್ಗಿಗೆ ಇಳಿಯುವಾಗ ಬಲಕ್ಕೆ ಊರ ಸ್ಮಶಾಣ. ಅದನ್ನು ದಾಟುವಾಗ ಮಾತ್ರ ಮೈಯ ರಕ್ತ ಭಯದಿಂದ ಬಿಸಿಯೇರುತ್ತಿದ್ದುದ್ದರಿಂದ ಅದನ್ನೊಂದು ದಾಟಿಕೊಳ್ಳೂವುದು ಅವರಿಗೆ ಮುಖ್ಯವಾಗಿತ್ತು.
ತೋಟದಿಂದ ಹೊರಬಂದರು. ಸರಸರನೆ ಮಂಟಿ ಇಳಿದರು. ತಗ್ಗಿನಲ್ಲಿ ಬಲಕ್ಕಿದ್ದ ಸ್ಮಶಾಣದ ಕಡೆಗೆ ದೃಷ್ಟಿ ಹಾಯಿಸದೇ ಮುನ್ನಡೆದರು.
ತಿರುವು ದಾಟಿದರೆ ಮತ್ತೊಂದು ಸಣ್ಣ ಮಂಟಿ. ಅದರ ಓರೆಯಲ್ಲಿ ಹರಿವ ರಸ್ತೆ ಇನ್ನೊಂದು ಪಾಶ್ವಕ್ಕೆ ಬಂದಾಗ ತಗ್ಗಿನಲ್ಲಿ ತನ್ನೂರಿನ ಮಿಣುಕು ದೀಪಗಳನ್ನು ಕಂಡು ಮನಸ್ಸಿನಲ್ಲಿ ಖುಷಿ ಆವರಿಸಿತು. ಇನ್ನೇನು ಅರ್ಧ ಕಿಲೋಮೀಟರೂ ಇಲ್ಲ ಮನೆ ತಲುಪಲು!
ಜುಬ್ಬದ ಮೇಲು ಜೇಬು ತಡಕಿದರೆ, ಉಳಿದಿದ್ದ ಸಿಗರೇಟು ಕೈಗೆ ಸಿಕ್ಕಿತು. ʻಮನೆಯಲ್ಲಿ ಸೇದಲಾಗುವುದಿಲ್ಲ, ಅಷ್ಟರಲ್ಲಿ ಇಲ್ಲೇ ಸೇದಿಕೊಂಡುಬಿಡೋಣʼ ಎಂದುಕೊಳ್ಳುತ್ತಾ ಸಿಗರೇಟು ತುಟಿಗಿಟ್ಟು ಹತ್ತಿಸಲು ಬೆಂಕಿ ಕಡ್ಡಿ ಗೀರಿದರು. ಉಹುಂ! ಕಡ್ಡಿ ಆರಿಹೋಯಿತು. ಮತ್ತೊಂದು ಕಡ್ಡಿ ಗೀರಿದರು. ಅದೂ ಆರಿಹೋಯಿತು. ಆ ಬೆಟ್ಟದೋರೆಯಲ್ಲಿ ಎದುರುಗಡೆಯಿಂದ ಗಾಳಿ ಬೀಸಿ ಬರುತ್ತಿದ್ದುದರ ಅರಿವಾಗಿ ಕ್ಷಣ ಕೈ ತಡೆದರು. ಈ ರೀತಿ ಆದರೆ ಸಿಗರೇಟು ಹತ್ತಿಸಿಕೊಳ್ಳಲು ಆಗುವುದಿಲ್ಲ ಎಂದುಕೊಳ್ಳುತ್ತಾ ಗಾಳಿಯ ವಿರುದ್ದ ದಿಕ್ಕಿಗೆ ನಿಂತುಕೊಂಡರು. ಬೀಸುವ ಗಾಳಿಗೆ ಬೆನ್ನು ಅಡ್ಡವಾಗಿದ್ದರಿಂದ ಕಡ್ಡಿಯ ಬೆಂಕಿ ಸರಾಗವಾಗಿ ಸಿಗರೇಟಿಗೆ ತಾಕಿ ಹತ್ತಿಕೊಂಡಿತು.
ಗೌಡರು ಖುಷಿ ಖುಷಿಯಾಗಿ ನಿಂತಲ್ಲೇ ಎರಡು ದಂ ಎಳೆದರು. ʻಇನ್ನು ಸ್ವಲ್ಪವೇ ಹೊತ್ತು ಮನೆ ತಲುಪಲುʼ ಎಂದುಕೊಳ್ಳುತ್ತಾ ದಂ ಎಳೆಯುತ್ತಲೇ ದಾರಿ ಸವೆಸತೊಡಗಿದರು.
ಸಿಗರೇಟು ಸುಡುತಿತ್ತು. ದಾರಿಯೂ ಸವೆಯುತ್ತಿತ್ತು. ಖುಷಿ ಖುಷಿಯಾಗಿ ಗೋಪಾಲೇಗೌಡರು ನಡೆಯುತ್ತಲೇ ಇದ್ದರು. ತಲೆತಗ್ಗಿಸಿ ಬಿರಬಿರನೆ ನಡೆಯುತ್ತಿದ್ದ ಅವರಿಗೆ ಬಹಳ ದೂರ ನಡೆದ ಅನುಭವವಾಗತೊಡಗಿತು. ತಲೆಯೆತ್ತಿ ಸುತ್ತಾ ನೋಡಿದರು. ಎದುರಿಗೆ ಅರ್ಧ ಮೈಲಿ ದೂರದಲ್ಲಿ ಝಗಮಗಿಸುವ ವಿದ್ಯುತ್ ದೀಪಗಳ ಬೆಳಕು!
ಮತ್ತೆ ಹೋಬಳಿ ಕೇಂದ್ರದ ಕಡೆಗೆ ಹಿಂತಿರುಗಿ ಬಂದಿರುವುದು ಅರಿವಾಗಿ ತಟ್ಟನೆ ಹೆಜ್ಜೆ ತಡೆದು ನಿಂತರು.
ಇದೇಕೆ ಹೀಗಾಯಿತು?
ನಿಂತಲ್ಲೇ ಕೆಲಕಾಲ ಯೋಚಿಸಿದರು. ಎದುರು ಗಾಳಿಯ ಅಡಚಣೆಯಿಂದ ಸಿಗರೇಟು ಹತ್ತಿಸಿಕೊಳ್ಳಲು ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದ್ದು ಹೊಳೆಯಿತು. ʻಈ ರಾತ್ರಿ ಎತ್ತಿನ ಕೊಟ್ಟಿಗೆಯೇ ಗತಿʼ ಎಂದು ಹಲುಬುತ್ತಾ ಮತ್ತೆ ಹಳ್ಳಿಯ ದಿಕ್ಕಿಗೆ ತಿರುಗಿ ನಿಂತರು. ದಿಕ್ಕನ್ನು ಮತ್ತೊಮ್ಮೆ ಖಚಿತ ಮಾಡಿಕೊಂಡು ನಡಿಗೆ ಶುರುಮಾಡಿದರು.






0 Comments