ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಸಿರಿನ ಗಾಣಕೆ ಉಸಿರನು ತು೦ಬಿ…

ಕುವೆ೦ಪು ಮತ್ತು ಹಸಿರ ಹಕ್ಕಿಯ ಮಾತುಕತೆ

-ಬೇಲೂರು ರಘುನ೦ದನ್

ಚಿರನಿದ್ರೆಯಲ್ಲಿದ್ದ

ಕವಿಯೊ೦ದಿಗೆ

ಹಸಿರಹಕ್ಕಿಯ

ಮಾತುಕತೆ

ರವಿಯ ಉದಯಕೆ

ಶುಭದ ಉದಯವ ಹೇಳಿ

ಗುರು ಗಾರುಡಿಗನಿಗೆ

ಹಸಿರಹಕ್ಕಿಯು ಮಾಡಿತು

ಮನಸ್ಕಾರ!

ನಮಿಸಿದ ಹಕ್ಕಿಯ

ಹಾಡಿಗೆ ಪಾಡಿಗೆ

ಆಟಕೆ ನೋಟಕೆ

ಹಾರುವ ಕಲೆಗೆ

ಪ್ರೀತಿಯ ಸೆಲೆಗೆ

ಕವಿಯೂ ಮಾಡಿದ

ನಮಸ್ಕಾರ!

.

ಊರು ಊರಲಿ

ಹಾರುತ ಹಾರುತ

ಕಣಿವೆಯ ದಾಟಿ

ಝರಿಯನು ನೋಡಿ

ಗಿರಿಯನು ಕ೦ಡು

ಕಾಳನು ಹೆಕ್ಕಿ

ಹುಳವನು ಕುಕ್ಕಿ

ತು೦ಬದ ಒಡಲಿನ ಸ೦ಸ್ಕಾರ!

ಕವಿಯನು ಕ೦ಡು

ಜಗವನೂ ಕ೦ಡು

ಮನಸೂ ಒಡಲು

ನಡೆಯು ನುಡಿಯು

ಎಲ್ಲವು ಹಸುರಿನ ಆಕಾರ!

ಬದುಕನು ಕೊಡುವ

ಹಸಿರಿನ ಮಡಿಲಿಗೆ

ಎ೦ದಿತು ಹಕಿಯು

ನೀನೆ ಹಸಿರಿನ ನೇತಾರ!

.

ಹಕ್ಕಿಯ ಮಾತಿಗೆ

ಕವಿಯೂ ಹೇಳಿದ

ಹಾರುವೆ ನೀನು

ನಿನ್ನಯ ಕಣ್ಣಿಗೆ

ನೋಟದ ದಾಟಿಗೆ

ಬಾಳುವ ರೀತಿಗೆ

ನೀಡುವ ನೀತಿಗೆ

ಜಗವೇ ನಿನ್ನಯ

ಮನೆ ಕಾಣಾ!

ಏರೆನು ನಾನು

ಹಾರೆನು ನಾನು

ಪಡೆದ ಪಟ್ಟಿಕೆ

ರಟ್ಟೆಯ ತಟ್ಟಿ

ಭುವಿಯನೆ ಮೆಟ್ಟಿ

ಹೇಳುವ, ಹಾಡುವ

ಮನುಜನ ಮನಸಿನ

ಪುಟ್ಟ ಪುಟ್ಟ ಕಣವೇ ನಾನು

ನೀನೆ ಜಗದ

ಋಷಿ ಕಾಣಾ!

.

ಹಸಿರಿನ ಗಾಣಕೆ

ಉಸಿರನು ತು೦ಬಿ

ರಸವನು ತೆಗೆದ

ಗಾಣಿಗ ನೀನು

ವಿಶ್ವದ ಮತಕೆ

ಮನುಜನ ಪಥವ

ಬೆಳಗು ಹಸಿರಿನ

ಕೊಡುಗೈ ನೀನು!

ನನ್ನಯ ಕೊರಳಿಗೆ

ಕೊಳಲನು ಕೊಟ್ಟು

ನನ್ನಯ ದನಿಯ

ಜಗಕೆ ಸಾರಿದ

ಸಾರಥಿ ನೀನು!

ನಮ್ಮಯ ನಾಡಿಗೆ

ಕನ್ನಡದೂರಿಗೆ

ಕೀರುತಿ ನೀನು

ಎ೦ದಿತು ಹಕ್ಕಿ

ಹಾಡಿತು ಹಕ್ಕಿ

ಕುಣಿಯಿತು ಹಕ್ಕಿ

 

ನೀನು ಹೇಳಿದ

ವಿಶ್ವ ತತ್ವವ

ಊರು ಊರಿಗೆ

ಕೇರಿ ಕೇರಿಗೆ

ದೇಶ ದೇಶಕೆ

ಹಾರುತ ಹಾರುತ

ಹೊತ್ತು ತಿರುಗುತ

ಹ೦ಚೇ ಹ೦ಚುವ

ಸೇವಕ ನಾನು!

ನಿನ್ನಯ ಕ೦ಡು

ನಿನ್ನೊಡೆ ಉಲಿದು

ಶೂನ್ಯದ ಬಾಳು

ಪೂರ್ಣವೆ ಆಯ್ತು

ಹಸಿರಿನ ಹಕ್ಕಿ

ಮತ್ತೆ ಹೇಳಿತು

ದಿಟಕೂ ನೀನೆ

ಹಸಿರಿನ ಮಗ ಕಾಣಾ!

ನಿನ್ನಯ ಮಾತಿನ

ಋಣವೇ ನನಗೆ

ಜಗ ಕಾಣಾ!

ಯುಗ ಕಾಣಾ!

 

‍ಲೇಖಕರು G

30 December, 2012

3 Comments

  1. Mohan V Kollegal

    ಏರೆನು ನಾನು
    ಹಾರೆನು ನಾನು
    ಪಡೆದ ಪಟ್ಟಿಕೆ
    ರಟ್ಟೆಯ ತಟ್ಟಿ
    ಭುವಿಯನೆ ಮೆಟ್ಟಿ
    ಹೇಳುವ, ಹಾಡುವ
    ಮನುಜನ ಮನಸಿನ
    ಪುಟ್ಟ ಪುಟ್ಟ ಕಣವೇ ನಾನು
    ನೀನೆ ಜಗದ
    ಋಷಿ ಕಾಣಾ! – ಒಳ್ಳೆಯ ಕವಿತೆ… ನಾವೆಲ್ಲರೂ ‘ಹಸಿರ ಹಕ್ಕಿ’ಯಾಗಬೇಕು. 🙂

  2. Sunil Rao

    tumbaa channagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading