ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆಯ ಕಾವ್ಯದ ಅಭ್ಯಾಸ ಒಂದು ಸಾಧನ, ಅನಿವಾರ್ಯವಲ್ಲ – ಪ್ರತಿಭಾ ನಂದಕುಮಾರ್

ನಿನ್ನೆ ಶರತ್ ಚಕ್ರವರ್ತಿ  ’ಕಮ್ಮಟದಲ್ಲಿ ನಿಜಕ್ಕೂ ನಡೆದದ್ದೇನು?’ ಎನ್ನುವ ಲೇಖನ ಬರೆದಿದ್ದರು.

ಅದರಲ್ಲಿ ಅವರು ಎತ್ತಿದ ಪ್ರಶ್ನೆಗಳ ಬಗ್ಗೆ ಪ್ರತಿಭಾ ನಂದಕುಮಾರ್ ಪ್ರತಿಕ್ರಯಿಸಿದ್ದು ಹೀಗೆ :

ಪ್ರತಿಭಾ ನಂದಕುಮಾರ್

ಚರ್ಚೆ ಎಲ್ಲ ಆಲೋಚನೆಗಳ ವಿನಿಮಯಕ್ಕೆ ದಾರಿ. ಕಾಜಾಣ ಕಮ್ಮಟದಲ್ಲಿ ಚರ್ಚೆ ನಡೆಯಿತು ಅಂದರೆ ಅದು ಶುಭ ಸೂಚನೆಯೆ ಹೊರತು ರೆಕ್ಕೆ ಮುರಿದುಕೊಂಡ ಹಾಗಲ್ಲ. ಹಾಗೆ ನೋಡಿದರೆ ನನಗೂ ಕಮ್ಮಟ ಅನೇಕ ಸತ್ಯಗಳಿಗೆ ಕಣ್ಣು ತೆರೆಸಿತು. ಅದಕ್ಕೆ ನಾನು ಕಾಜಾಣಕ್ಕೆ ಅತ್ಯಂತ ಆಭಾರಿ ಆಗಿದ್ದೇನೆ. ಯಾರಾದ್ರೂ ಕಮ್ಮಟ ವಿಫಲ ಅಂದುಕೊಂಡರೆ ಅವರಿಗಿಂತ ಮೂರ್ಖರು ಬೇರೆ ಇಲ್ಲ. ಒಂದು ಕಮ್ಮಟ ಹೀಗೆಯೇ ದ್ವಂದ್ವಗಳನ್ನು ಅನುಮಾನಗಳನ್ನು ಹೊರಹಾಕಿಸಬೇಕು. ಅದು ಬೆಳವಣಿಗೆಯ ಕುರುಹೇ ಹೊರತು ಬೇರೆ ಅಲ್ಲ. ಇಂದಿನ ಹುಡುಗರು ಕಾವ್ಯವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಎಂದು ಕಂಡುಕೊಂಡಿದ್ದೆ ನನಗೆ ಥ್ರಿಲ್ ಕೊಟ್ಟಿತು ಯಾಕೆಂದರೆ ಇದು ದೃಶ್ಯ ಮಾಧ್ಯಮದ ಯುಗ. ಕುಪ್ಪಳಿಯಿಂದ ಹಿಂದಿರುಗಿದ ಮೇಲೆ ನಾನು ಚೇತನಾಗೆ ಮೆಸೇಜ್ ಮಾಡಿ ನಾನು ಮತ್ತು ಜಯಂತ್ ಕಾಯ್ಕಿಣಿ ಸೇರಿ ಒಂದು ಕಮ್ಮಟ ಮಾಡುವ ಒಂದು ಸೂಚನೆಯನ್ನು ಕೊಟ್ಟೆ. ಯಾಕೆಂದರೆ ಕಾಜಾಣ ಬಳಗ ಕಾವ್ಯದ ಬಗ್ಗೆ ಗಂಭೀರ ಕಾಳಜಿ ಇಟ್ಟುಕೊಂಡಿದೆ ಅನ್ನುವುದೇ ಎಲ್ಲರು ಸಂಭ್ರಮಿಸಬೇಕಾದ ಸಂಗತಿ. ಕಾಜಾಣ ವಿನಾಟೀಕೆಗಳನ್ನು ಪಕ್ಕಕ್ಕಿಟ್ಟು ಹೀಗೆ ತನ್ನ ಚಟುವಟಿ ಕೆಗಳನ್ನು ಮುಂದುವರಿಸಲಿ. ನಾವು ನಿಮ್ಮೊಂದಿಗಿದ್ದೇವೆ.

ಸತ್ಯಗಳಿಗೆ ಕಣ್ಣು ತೆರೆಸಿತು ಅಂದರೆ – ಆಧುನಿಕ ಕನ್ನಡ ಕಾವ್ಯ ಹಳೆಯ ಕಾವ್ಯದ ಪರಂಪರೆಯ ಮುಂದುವರಿಕೆ ಅಂತ ನಾನು ತಿಳಿದುಕೊಂಡಿಲ್ಲ. ನಮ್ಮಲ್ಲಿ ಇನ್ನೂ ಯುವ ಕವಿಗಳಿಗೆ ಪಂಪ ಕುಮಾರವ್ಯಾಸರನ್ನು ಓದಿ ಅಂತ ಹೇಳುತ್ತಿದ್ದಾರೆ ಅನ್ನುವುದು ಗೊತ್ತಿರಲಿಲ್ಲ. ನಮ್ಮ ಕಾಲಕ್ಕೇ ಅದೆಲ್ಲಾ ಹೋಗಿಬಿಟ್ಟಿತ್ತು. ಹಾಗಾಗಿ ನಾವು ಇಂದಿನ ಪೀಳಿಗೆಯ ಕವಿಗಳ ಜೊತೆ ಕಾವ್ಯದ ಬಗ್ಗೆ ಮಾತಾಡುವಾಗ ಪಂಪ ಕುಮಾರವ್ಯಾಸರನ್ನು ತರಲೇ ಬಾರದು. ಹೇಗೆಂದರೆ ಇಂದಿನ ಯಾವ ಯುವ ಇಂಗ್ಲಿಷ್ ಕವಿಗೂ ಯಾರೂ ಮೊದಲು ಶೇಕ್ಸ್ಪಿಯರ್ ಓದಿಕೊಂಡು ಆಮೇಲೆ ಕವನ ಬರಿ ಅಂತ ಹೇಳುವುದಿಲ್ಲ. ಹಳೆಯ ಕವಿಗಳನ್ನು ಓದಿ ಅಂತ ಹೇಳಲೇ ಬೇಕಾದರೆ ಆಧುನಿಕ ಕವಿಗಳಾದ ಗಂಗಾಧರ ಚಿತ್ತಾಲ, ಅಡಿಗ, ಎ ಕೆ ರಾಮಾನುಜನ್, ತಿರುಮಲೇಶ್ ಮುಂತಾದವರನ್ನು ಸೂಚಿಸಬೇಕೆ ಹೊರತು ಕುಮಾರವ್ಯಾಸನನ್ನು ಅಲ್ಲ. ಅವರಿಗಿದ್ದ ತುರ್ತುಗಳೇ ಬೇರೆ ಇಂದಿನವರ ತುರ್ತುಗಳೇ ಬೇರೆ. ಅಲ್ಲದೆ ಯಾವ ಕವಿಗೂ ಇವತ್ತು ನೀನು ಕನ್ನಡ ಕಾವ್ಯ ಪರಂಪರೆಯ ಮರಿಯಾಗಿ ಅದನ್ನು ಮುಂದುವರಿಸುವ ಜವಾಬ್ದಾರಿ ಇದೆ ಅಂತ ಹೇಳಲೇ ಬಾರದು. ಅದನ್ನೇ ನಾನು ಕಮ್ಮಟದಲ್ಲಿ ಹೇಳಿದ್ದು – ಕನಸಿನಲ್ಲಿ ಬರೆಯುವ ಕಾರ್ಪೆಂಟರ್ ಗೆ ಪರಂಪರೆಯ ಕಾವ್ಯದ ಮುಂದುವರಿಕೆಯಾಗಿ ಬರಿ ಅಂದರೆ ನ್ಯಾಯವಾ? ನನ್ನನ್ನು ಕೇಳಿದರೆ ಒಂದೆ ಒಂದು ಕವನವನ್ನೂ ಓದದೆಯೆ ಒಬ್ಬ ಹುಡುಗ ಅಥವಾ ಹುಡುಗಿ ತನ್ನದೇ ಭಾವನೆಗಳನ್ನು ಸುಂದರವಾಗಿ ಹೇಳಿದರೆ ಅದಕ್ಕೆ ನನ್ನ ಪೂರ್ಣ ಸ್ವಾಗತವಿದೆ. ಬರೆಯುವವರಿಗೆ ಹಳೆಯ ಕಾವ್ಯದ ಅಭ್ಯಾಸ ಒಂದು ಸಾಧನವೇ ಹೊರತು ಅನಿವಾರ್ಯವಲ್ಲ.
 

‍ಲೇಖಕರು G

11 February, 2014

3 Comments

  1. Prabhakar Nimbargi

    True. This applies even to other forms of literature too.

  2. ಬಿ. ಆರ್. ಸತ್ಯನಾರಾಯಣ

    ಈ ಲೇಖನದ ನಿಮ್ಮೆಲ್ಲಾ ಅಭಿಪ್ರಾಯಗಳು ಸತ್ಯ. ಆದರೆ ಎಲ್ಲಿಯವರೆಗೆ?
    ನೀವು ಒಬ್ಬ “ಕೇವಲ” ಬರಹಗಾರನಾಗಿರುವವರೆಗೆ, ನೀವು ಹೇಳಿದ್ದೆಲ್ಲಾ ಸತ್ಯ!
    ಆದರೆ ನೀವು ಒಬ್ಬ ಭಾಷಣಕಾರನಾದಾಗ, ವಿಮರ್ಷಕನಾದಾಗ, ಇನ್ನೊಬ್ಬರ ಕಾವ್ಯದ ಬಗ್ಗೆ ಮಾತನಾಡುವಾಗ, ಸಾಹಿತ್ಯ ಸಂಸ್ಕೃತಿಯ ಮಾತು ಬಂದಾಗ ನಿಮಗೆ ಪರಂಪರೆಯ ಅರಿವಿರಬೇಕಾಗುತ್ತದೆ.
    ನೀವು ಸುಮ್ಮನೆ ಬರೆದುಕೊಂಡಿರುವುದಾದರೆ ಆಗ ಇದ್ಯಾವುದರ ಅಗತ್ಯವೂ ಇರುವುದಿಲ್ಲ. ನೀವು ಬರೆದಿದ್ದರಲ್ಲಿ ಗಟ್ಟಿಯಾದುದು ನಿಲ್ಲುತ್ತದೆ, ಜೊಳ್ಳು ತೊಲಗುತ್ತದೆ!
    ಮೇಲಿನ ಸಾಲುಗಳು ವಸ್ತಾರೆಯವರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಹಾಕಿದ್ದು.
    ಮುಂದುವರೆದು ಹೇಳುವುದಾದರೆ, “ಹಳೆಯ ಕವಿಗಳನ್ನು ಓದಿ ಅಂತ ಹೇಳಲೇ ಬೇಕಾದರೆ ಆಧುನಿಕ ಕವಿಗಳಾದ ಗಂಗಾಧರ ಚಿತ್ತಾಲ, ಅಡಿಗ, ಎ ಕೆ ರಾಮಾನುಜನ್, ತಿರುಮಲೇಶ್ ಮುಂತಾದವರನ್ನು ಸೂಚಿಸಬೇಕೆ ಹೊರತು ಕುಮಾರವ್ಯಾಸನನ್ನು ಅಲ್ಲ. ” ಎಂಬ ನಿಮ್ಮ ಸಾಲುಗಳು ಆಘಾತಕಾರಿಯಾಗಿವೆ ಎಂದಷ್ಟೇ ಹೇಳಬಲ್ಲೆ. ಹೌದು ಕುಮಾರವ್ಯಾಸನಿಗಿದ್ದ ತುರ್ತುಗಳೇ ಬೇರೆ. ಇದೇ ಮಾನದಂಡ ನೀವು ಸೂಚಿಸಿರುವ ಕವಿಗಳಿಗೂ ಅನ್ವಯವಾಗುತ್ತದೆ ಅಲ್ಲವೆ? ಅವರಿಗಿದ್ದ ತುರ್ತುಗಳೆ ಬೇರೆ. ಈಗ ೀ ಕ್ಷಣದಲ್ಲಿ ಬರೆಯಲು ಕುಳಿತಿರುವ ಕವಿಗೆ ಇರುವ ತುರ್ತುಗಳೆ ಬೇರೆ ಅಲ್ಲವೆ?
    ಇನ್ನು ಇಂತಿಂಥ ಕವಿಗಳನ್ನು ಓದಿ ಎಂದು ಹೇಳುವವರ ಮನಸ್ಥಿತಿ ಎಷ್ಟು ಪರಿಶುದ್ಧ ಎನ್ನುವ ಪ್ರಶ್ನೆ ಬರುತ್ತದೆ. ಆತನ ಹೀಗೆ ಹೇಳುವವರ ಒಲವು ನಿಲುವುಗಳೇನು? ಆತನ ಗ್ರಗಹಿಕೆಗಳೇನು? ಪೂರ್ವಾಗ್ರಹಗಳೇನು? ಅಡಿಗರಿಗಿಂತ ಹಿಂದಿನ ಬೇಂದ್ರೆ ಬೇಡವೆ? ಮುಂದಿನ ಲಂಕೇಶ್ ಬೇಡವೆ? ಬೇಂದ್ರೆಯವರಿಗಿಂತ ಸ್ವಲ್ಪವೇ ಹಿಂದಿನವನಾದ ಮುದ್ದಣ್ಣ ಏಕೆ ಬೇಡ? ಜಿ.ಎಸ್.ಎಸ್. ಬೇಡವೆ? ಇಂತಹ ಸಮಸ್ಯೆಗಳೆಲ್ಲಾ ಹುಟ್ಟಿಕೊಳ್ಳುತ್ತವೆ. ಅದರ ಬದಲು ನಿಮಗೆ ಬರೆಯಬೇಕೆನ್ನಿಸಿದರೆ ಬರೆಯಿರಿ. ಹಿಂದಿನವರನ್ನು ಓದಬೇಕೆನ್ನಿಸಿದರೆ ಓದಿರಿ ಎಂದು ಸುಮ್ಮನಾಗಬಹುದೆ ಹೊರತು. ಕುಮಾರವ್ಯಾಸನನ್ನು ಮತ್ಯಾರನ್ನೊ ಓದಬೇಡಿ. ಇಂತಿಂತವರನ್ನೇ ಓದಿ ಎಂದು ಹೇಳದಿರುವುದೇ ಒಳ್ಳೆಯದು.

  3. mankavi143@gmail.com

    ನಂದಕುಮಾರ ಅವರ ಅಭಿಪ್ರಾಯ ಒಪ್ಪುತ್ತೇನೆ. ಯಾರಿಗೂ ಒತ್ತಾಯ ಬೇಡ ಅವರಿಗೆ ತಿಳಿದು ಇಷ್ಟವಾದರೆ ಓದಿಕೊಳ್ಳಲ್ಲಿ ಅನ್ನುವುದು ನನ್ನ ಅಭಿಪ್ರಾಯ ಕುಮಾರ ವ್ಯಾಸನೆ ಆಗಲಿ ಇಂದಿನ ಕವಿಗಳೆ ಆಗಲಿ ಅದು ಓದುಗನಿಗೆ ಬಿಟ್ಟಿದ್ದು ನಂದಕುಮಾರ ಅವರ ಕವಿತೆಗಳನ್ನು ಕೇಳುವಾಗ ಇದ್ದ ಕಿವಿಗಳು ಬೇಗೂರು ಸರ್ ಓದಿದಾಗ ಇರಲಿಲ್ಲ ಕಾರಣ ಇಷ್ಟೆ ಅವು ಸ್ವಲ್ಪ ಅರ್ಥ ತಡವಾಗಿ ಆದವು ಬೇಕು ಬೇಡ ಎನ್ನುವುದು ಓದುಗ ನಿರ್ಧರಿಸಲು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading