ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆಮನೆ ರಾಜಶೇಖರ ಓದಿದ ‘ಲೋಕರೂಢಿಯ ಮೀರಿ’

ಸಮಚಿತ್ತದ ಸಂಶೋಧನೆ

ಹಳೆಮನೆ ರಾಜಶೇಖರ

ಎ. ಎನ್.‌ ಮೂರ್ತಿರಾಯರು ಕನ್ನಡ ನಾಡಿನಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸಿದ ಧೀಮಂತರು. ದೇವರ ಅಸ್ತಿತ್ವ ಕುರಿತ ಅವರ ಚಿಂತನೆ ನಾಡಿನಲ್ಲಿ ಹೊಸ ಜಿಜ್ಞಾಸೆಯನ್ನು ಹುಟ್ಟು ಹಾಕಿತು. ದೇವರ ಹೆಸರಲ್ಲಿ ದಂದೆ ಮಾಡುತ್ತಿದ್ದ ಕರ್ಮಠವಾದಿಗಳಿಗೆ ವೈಚಾರಿಕತೆಯ ಅಂಕುಶವೂ ಆಯಿತು. ಇದು ನಂಬಿಕೆಯನ್ನು ಭಂಜನೆಗೊಳಿಸುವದಿಲ್ಲ. ಪ್ರಕೃತಿದತ್ತವಾದ ಬದುಕನ್ನು ಒಳಗೊಳ್ಳುವ, ಮೌಢ್ಯವನ್ನು ಹಸನುಗೊಳಿಸುವ, ಸಾಮರಸ್ಯವನ್ನು ಬಿತ್ತುವ ಚಿಂತನೆ. ಇವರ ಪ್ರವಾಸ ಕಥನ, ಅನುವಾದ, ಪ್ರಬಂಧಗಳು, ವೈಚಾರಿಕ ಬರಹಗಳು- ಚರಿತ್ರೆ, ಪುರಾಣ, ಪರಂಪರೆಯನ್ನು ನೋಡುವ ಹೊಸ ಬಗೆಯನ್ನು ಕಾಣಿಸಿದವು.

ದೈನಂದಿನ ಬದುಕಿನ ದಂದುಗದ ಬವಣೆಗಳನ್ನು ಒಳಗೊಳ್ಳದ ಚಿಂತನೆಗೆ ಅರ್ಥವಿಲ್ಲವೆಂಬ ಖಚಿತ ನಿಲುವು ಇವರದು. ಪ್ರಾಮಾಣಿಕ ನೈತಿಕ ನೆಲೆಯಲ್ಲಿ ನಿಂತು ತತ್ವಜ್ಞಾನ, ದೇವರು, ಧರ್ಮ, ಆಧ್ಯಾತ್ಮ,  ರಾಜಕಾರಣ, ರಾಷ್ಟ್ರ, ಸಮಾಜ, ಚರಿತ್ರೆ, ಪರಂಪರೆಯನ್ನು ನೋಡುತ್ತಾರೆ. ಅವರ ಒಟ್ಟು ಚಿಂತನೆ ಎಲ್ಲಾ ಕಾಲದ ಬೆಳಕಾಗಿ ನಮಗೆ ಕಾಣುತ್ತದೆ. ʻಒಳ್ಳೆಯ ಸಂಗೀತ ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ನಾನು ನನ್ನದೆಲ್ಲವನ್ನು ಬಿಟ್ಟು ವಿಶ್ವದಲ್ಲಿ ಒಂದಾಗಿಸುವ ಸಂಗೀತ ಅದ್ಭುತ. ಇದು ಆಧ್ಯಾತ್ಮʼ ಎಂದು ಆಧ್ಯಾತ್ಮವನ್ನು ವ್ಯಾಖ್ಯಾನಿಸುತ್ತಾರೆ. ಅವರ ಬರಹಗಳು ವಿಶ್ವಾತ್ಮಕ ಒಳತಿನ ಸಾಮರಸ್ಯವನ್ನು ಧ್ವನಿಸುತ್ತವೆ. ಜಾತ್ಯಾತೀತ ಪ್ರಜಾಪ್ರಭುತ್ವದ ಆಶಯವನ್ನು ಹೊಂದಿವೆ. 

ಚೇತನ ಸೋಮೇಶ್ವರ ಅವರು ವಾಸ್ತವದ ನೆಲೆಯಲ್ಲಿ ನಿಂತು ಎ. ಎನ್.‌ ಮೂರ್ತಿರಾಯರ  ಸಮಗ್ರ ಬರಹಗಳನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ಮಾಡಿದ್ದಾರೆ. ಅವರ ಇಡೀ ವ್ಯಕ್ತಿತ್ವ, ಸಾಹಿತ್ಯ ದರ್ಶನವನ್ನು ‘ಲೋಕ ರೂಢಿಯ ಮೀರಿ’ ಕೃತಿ ಕಟ್ಟಿಕೊಡುತ್ತದೆ. ಸಿದ್ದ ಮಾದರಿಯ ಸಂಶೋಧನಾ ಚೌಕಟ್ಟನ್ನು ಒಡೆದು ಹೊಸ ಮಾದರಿಯ ಸಂಶೋಧನಾ ವಿಧಾನವನ್ನು ಈ ಕೃತಿ ಕಟ್ಟಿಕೊಡುತ್ತದೆ. ಮಾಹಿತಿ ಜೋಡಣೆಯೇ ಸಂಶೋಧನೆ ಎಂಬ ವಿಧಾನದಿಂದ ಈ ಅಧ್ಯಯನ  ಹೊರ ಬಂದಿದೆ.

ಮಾಹಿತಿಯನ್ನು ಖಚಿತ ನಿಲುವುಗಳಿಂದ ವಿಶ್ಲೇಷಣೆಗೆ ಒಡ್ಡುವ ವಿಧಾನವನ್ನು ಅನುಸರಿಸಿದೆ. ಎ.ಎನ್.‌ ಮೂರ್ತಿರಾಯರ ಬರಹಗಳನ್ನು ಸಮಗ್ರ ದರ್ಶನ ಮಾಡುವುದರ ಜೊತೆಗೆ ವಾಸ್ತವದ ಬಿಕ್ಕಟ್ಟುಗಳನ್ನು ಕುರಿತು ಈ ಕೃತಿ ಗಂಭೀರವಾಗಿ ಯೋಚಿಸುತ್ತದೆ. ಉಗ್ರ ವೈಚಾರಿಕ ನೆಲೆಯಿಂದ ಇವರ ಬರಹಗಳನ್ನು ನೋಡುವುದಿಲ್ಲ. ಮಾನವೀಯ ವೈಚಾರಿಕ ಬಿತ್ತಿಯಲ್ಲಿ ಅವರ ಬರಹಗಳನ್ನು ನೋಡುತ್ತದೆ. ಹೀಗಾಗಿ ಈ ಕೃತಿ ಪರಂಪರೆ, ಚರಿತ್ರೆ, ಧರ್ಮ, ಸಂಪ್ರದಾಯ, ಸಂಸ್ಕೃತಿಯ ಜೊತೆ ಮುಖಾಮುಖಿಯಾಗುತ್ತದೆ.

ಸಾಮರಸ್ಯದ ಅನುಸಂಧಾನದ ಮೂಲಕ ಎ.ಎನ್.‌ ಮೂರ್ತಿ ರಾಯರ ಬರಹಗಳನ್ನು ಶೋಧಿಸುತ್ತದೆ. ಅವರ ಸಮಗ್ರ ಚಿಂತನೆಯನ್ನು ಮನಗಾಣಿಸುತ್ತಾ ಪ್ರಸ್ತುತಗೊಳಿಸುತ್ತದೆ.ʻಮೂರ್ತಿರಾವ್‌ ಅವರ ವ್ಯಕ್ತಿತ್ವ ಮತ್ತು ಬರಹಗಳನ್ನು ಅನೇಕ ಅಂಶಗಳು ಪ್ರಭಾವಿಸಿವೆ. ಮೂರ್ತಿರಾಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಬಹುಮುಖಿಯಾಗಿವೆ. ಅವರ ವ್ಯಕ್ತಿತ್ವ ಮತ್ತು ಸಾಧನಗಳ ಪ್ರೇರಕಾಂಶಗಳು ಹಲವು.

ಮೂರ್ತಿರಾವ್‌ ಅವರ ಬಹುಭಾಷಾ ಜ್ಞಾನ, ಪರಂಪರೆಯ ಒಲವು, ಆಧುನಿಕ ನಿಲುವು, ಸಂಗೀತಾಭಿರುಚಿ, ನಿಸರ್ಗ ಪ್ರೇಮಗಳು ಅವರ ವಿಶಷ್ಟ ವ್ಯಕ್ತಿತ್ವವನ್ನು ರೂಪಿಸಿವೆ. ಸಮೃದ್ಧ ಶೈಕ್ಷಣಿಕ ವಾತಾವರಣ ಅವರ ಬರಹಗಳ ಅನನ್ಯೆತೆಗೆ ಮೂಲ ನೆಲೆಯಾಗಿವೆ. ಅಂತೆಯೇ ಅವರ ಬದುಕು ಬರಹಗಳ ಸಂಬಂಧವನ್ನು ವಿವೇಚಿಸಿದಾಗ ಕೃತಿಗಳಿಗೂ ಕೃತಿಕಾರನಿಗೂ ಇರುವ ಅಂತಃಸಂಬಂಧ ಸ್ಪಷ್ಟವಾಗುತ್ತದೆ. ಮೂರ್ತಿರಾವ್‌ ಅವರ ಸದಭಿರುಚಿ, ಸಮೃದ್ಧ ಬಾಲ್ಯ, ಸರಳತೆಯ ಒಲವು, ವಿಮರ್ಶೆ-ಜಿಜ್ಞಾಸೆಗಳ ಮನೋವೃತ್ತಿ, ನವನಿರ್ಮಾಣಾಸಕ್ತಿ, ಪ್ರಮಾಣಿಕತೆ, ಸಮಾನತೆಯ ಹಂಬಲಗಳು ಅವರ ಬದುಕು ಹಾಗೂ ಬರಹಗಳ ಸ್ಥಾಯಿ ಗುಣಗಳಾಗಿವೆ.ʼ ಈ ಮೌಲ್ಯಗಳನ್ನೊಳಗೊಂಡ ಎ. ಎನ್‌ ಮೂರ್ತಿರಾಯರ ವ್ಯಕ್ತಿತ್ವ ಬರಹಗಳನ್ನು ಪಾರಂಪರಿಕ ಮತ್ತು ಆಧುನಿಕ ಅನುಸಂಧಾನದ ಮೂಲಕ ನೋಡಲಾಗಿದೆ. ಇದರಿಂದಾಗಿ ಕನ್ನಡದ ಮಾನವೀಯ ವೈಚಾರಿಕ ಹೆಜ್ಜೆಗಳು ಈ ಸಂಶೋಧನೆಯಲ್ಲಿ ದಾಖಲಾಗಿವೆ.

ಮನುಷ್ಯನೊಳಗೆ ಉಂಟಾದ ತಾರತಮ್ಯದ ವಿಪ್ಲವಗಳು, ಕೇಡುಗಳು ಅವುಗಳ ಪರಿಣಾಮ ಇಲ್ಲಿ ಮುಖ್ಯವಾಗಿ ಚರ್ಚಿಸಲಾಗಿದೆ. ಪ್ರತಿಷ್ಠೆಯ ಸೈದ್ಧಾಂತಿಕ ಸಮರ್ಥನೆಗಿಂತ ಭವಿಷ್ಯದ ಸ್ವಾಸ್ಥ್ಯಕ್ಕೆ ಬೇಕಾದ ಅಂತಃಕರಣದ ಸಾತ್ವಿಕ ದಾರಿಗಳನ್ನು ಈ ಕೃತಿ ಶೋಧಿಸುತ್ತದೆ. ವೈಚಾರಿಕ ದಾರಿದ್ರ್ಯ, ಅಸಮಾನತೆ, ಶೋಷಣೆ, ಪ್ರಭುತ್ವದ ದಬ್ಬಾಳಿಕೆಯನ್ನು ಹಲವು ಜ್ಞಾನ ಶಿಸ್ತುಗಳ ಮೂಲಕ ನೋಡುತ್ತದೆ. ಬಹುಶಿಸ್ತೀಯ ಅಧ್ಯಯನದ  ಮುಖೇನ ಎ.ಎನ್‌ ಮೂರ್ತಿರಾಯರ ಬರಹಗಳನ್ನು ಪ್ರವೇಶ ಮಾಡಲಾಗಿದೆ.

ಪ್ರತಿಯೊಂದು ಕೃತಿಯ ಶೋಧವು ಮಾನವಿಕಗ ಜ್ಞಾಶಿಸ್ತುಗಳ ಆಯಾಮಗಳನ್ನೊಳಗೊಂಡಿದೆ. ವ್ಯವಸ್ಥೆಯ ಕೇಡುಗಳೊಂದಿಗೆ ಸಂಘರ್ಷ ಮಾಡಿದ ಸಮಾಜ ಸುಧಾಕರ ಚಿಂತನೆಗಳನ್ನು ಎ.ಎನ್‌ ಮೂರ್ತಿರಾಯರ ಬರಹಗಳೊಂದಿಗೆ ಚರ್ಚಿಸಲಾಗಿದೆ. ಹೀಗಾಗಿ ಈ ಸಂಶೋಧನೆಯು ಹೊಸ ಸಂಶೋಧಕರು ಹಿಡಿಯಬೇಕಾದ ದಾರಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹರಿತವಾದ ಭಾಷೆಯಿಂದಾಗಿ ಎಲ್ಲಯೂ ಗೊಂದಲವುಂಟುಮಾಡದೆ ಈ ಕೃತಿ ಓದಿಸಿಕೊಂಡು ಹೋಗುತ್ತದೆ. ಅತ್ಯತ್ತಮ ಕವಿಯಾಗಿರುವ ಚೇತನ ಸೋಮೇಶ್ವರ ಸಂಶೋಧನಾ ಬರವಣಿಗೆ ಕಾವ್ಯಮಯವಾಗಿದೆ. ವಿಚಾರಗಳು  ಮನಮುಟ್ಟುತ್ತವೆ. ವಿಮರ್ಶೆಯ ಪರಿಭಾಷೆಯಿಂದ ಬಳಲದೆ ಸಂವಹನಗುಣವನ್ನು ಹೊಂದಿದೆ. 

ಈ ಕೃತಿಯಲ್ಲಿ ಹನ್ನೊಂದು ಭಾಗಗಳಿವೆ. ಎ.ಎನ್.‌ ಮೂರ್ತಿಯಾಯರ ಸಂಸ್ಕೃತಿ, ಜಾತಿ, ಮತ–ಧರ್ಮ-ಆಧ್ಯಾತ್ಮ, ಸ್ವಾತಂತ್ರ್ಯ, ದೇವರು, ಪರಂಪರೆ ಮತ್ತು ಆಧುನಿಕತೆ, ಮಹಿಳೆ, ಭಾಷೆ-ಶಿಕ್ಷಣ, ಸಾಹಿತ್ಯ ಕಲೆ. ಮಾನವೀತೆಯ ಕುರಿತ ಚಿಂತನೆಗಳನ್ನು ಪ್ರಧಾನವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. 

ʻಗಂಡಸರೇ ಗುಲಾಮರಾಗಿದ್ದಾಗ ಮಹಿಳೆಯ ಸ್ಥಿತಿ ಹೇಗಿತ್ತು? ಮಹಿಳೆಯರು ಗುಲಾಮರ ಗುಲಾಮರಾಗಿದ್ದರು. ನನ್ನ ತಿಳಿವಳಿಕೆಯ ಪ್ರಕಾರ ಮಹಿಳೆಯರು ತುಚ್ಛ-ಗುಲಾಮಸ್ಥಿತಿಯಿಂದ ಮದುವೆಯಂತಹ ಸ್ಥಿತಿಗೆ ಬರಲು ಲಕ್ಷಾಂತರ ಯುಗಗಳೇ ಕಳೆದಿರಬೇಕು. ನಾನು ಮದುವೆಯನ್ನು ಮಾನವರ ಅತ್ಯಂತ ಪವಿತ್ರವಾದ ಸಂಸ್ಥೆಯೆಂದು ಪರಿಗಣಿಸುತ್ತೇನೆ. ಕುಟುಂಬ ಸಂಬಂಧವಿಲ್ಲದೆ ಜೀವಿಸಲು ತಕ್ಕುದಾದ ಬದಲಿ ವ್ಯವಸ್ಥೆ ಇನ್ನೊಂದಿಲ್ಲ. ಪ್ರತಿಯೊಂದು ಒಳ್ಳೆಯ ಸರ್ಕಾರ ಒಳ್ಳೆಯ ಕುಟುಂಬಗಳಿಂದಾಗಿದೆ.

ಕುಟುಂಬವನ್ನು ನಾಶಮಾಡುವ ಯಾವುದೇ ಕ್ರಮ, ಅದು ಶುದ್ಧ ಪೈಶಾಚಿಕವಾದುದು. ನಾನು ಮದುವೆಯಲ್ಲಿ ವಿಶ್ವಾಸವುಳ್ಳವನು. ಮದುವೆ ಎಂಬ ಸಂಸ್ಥೆಯನ್ನು ತಿರಸ್ಕರಿಸುವ ಉದ್ದಕೂದಲಿನ ಪುರುಷರ ಮತ್ತು ಮೋಟು ಕೂದಲಿನ ಸ್ತ್ರೀಯರ ಅಭಿಪ್ರಾಯಗಳನ್ನು ನಾನು ಅತ್ಯಂತ ತಿರಸ್ಕಾರದಿಂದ ಕಾಣುತ್ತೇನೆ. ನಾನು ಈ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ ಮತ್ತು ಇಲ್ಲಿ ಹೇಳಲು ಇಷ್ಟಪಡುತ್ತೇನೆ. ಪುರುಷನು ಹೊಂದಿರಬಹುದಾದ ಮಹತ್ವಾಕಾಂಕ್ಷೆ ಯಾವುದೆಂದರೆ ಒಬ್ಬ ತೇಜಸ್ವಿಯಾದ ಮಹಿಳೆಯ ಪ್ರೇಮಕ್ಕೆ ಅರ್ಹವಾಗುವ ರೀತಿಯಲ್ಲಿ ಬದುಕುವುದು ಮತ್ತು ತನ್ನ ಹೃದಯ ಮತ್ತು ಬುದ್ಧಿಗಳನ್ನು ಉತ್ತಮಪಡಿಸಿಕೊಳ್ಳುವುದಾಗಿದೆ.

ಒಬ್ಬ ಹುಡುಗಿಯು ಹೊಂದಿರಬಹುದಾದ ಉತ್ಕಟಾಕಾಂಕ್ಷೆ ಯಾವುದೆಂದರೆ ಒಬ್ಬ ಉಜ್ವಲವಾದ ಪುರುಷನ ಪ್ರೇಮ ಮತ್ತು ಗೌರವಕ್ಕೆ ಪಾತ್ರಳಾಗುವ ರೀತಿಯಲ್ಲಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವುದಾಗಿದೆ. ಇದು ನನ್ನ ವಿಚಾರ. ಎಂಬ ಇಂಗಾರಸಾಲ್‌ ವಿಚಾರದಲ್ಲಿ ಎ.ಎನ್.‌ ಮೂರ್ತಿರಾಯರು ನಂಬಿಯುಳ್ಳರಾಗಿದ್ದರು. ಕುಟುಂಬ-ಸಮಾಜ-ರಾಷ್ಟ್ರ ಪರಸ್ಪರ ಅಂತರ್‌ ಸಂಬಂಧ ಹೊಂದಿದವು. ಇವುಗಳ ನಡುವಿನ ಸಾಮರಸ್ಯದ ಜಾತ್ಯಾತೀತ ಹೆಣಿಗೆಯೇ ಸಂಸ್ಕೃತಿ ಎಂಬುದಾಗಿ ಪ್ರತಿಪಾದಿಸುತ್ತಾರೆ. ಹಲವು ಸಂಸ್ಕೃತಿಗಳನ್ನು ಗೌರವಿಸಿ, ಪರಸ್ಪರ ಅರಿತುಕೊಂಡು ಬಹುತ್ವದ ಸಮ್ಮಿಲನದಲ್ಲಿ ಮಾನವ ಮುನ್ನಡೆಯವದೆ ಶ್ರೇಷ್ಠವಾದ ಸಂಸ್ಕೃತಿ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. 

‘ವಿಶ್ವ ಮಾನವತೆಯ ಆಶಯವನ್ನು  ಸ್ವೀಕರಿಸುವ ಮೂರ್ತಿರಾಯರು ಅದನ್ನು ಸಾಧಿಸುವ ಬಗೆಯನ್ನು ಗಾಢವಾಗಿ ಚಿಂತಿಸಿದವರು. ಅವರ ಪ್ರಕಾರ, ನಮ್ಮ ದೇಶ, ನಮ್ಮ ಮತ, ನಮ್ಮ ಭಾಷೆ ನಮ್ಮ ಸಂಸ್ಕೃತಿ-ಈ ನಮ್ಮಗಳೆಲ್ಲವೂ ನಮ್ಮ ವ್ಯಕ್ತಿತ್ವದ ವಿಸ್ತರಣಗಳು (extensions of our personality) ಕೆಳಮಟ್ಟದಿಂದ ನೋಡಿದರೆ ಅವು ಒಂದೊಂದೂ, ಸ್ವಾರ್ಥದಿಂದ ಮೇಲೇರುವ ಪ್ರಯತ್ನದಲ್ಲಿ ನಾವು ಸಾಧಿಸಿದ ಪಟ್ಟಿಗಳು. ಮೇಲಿನಿಂದ ನೋಡಿದರೆ ಅವು ನಮ್ಮತನದ ವಿಸ್ತರಣಗಳು: ‘ನಮ್ಮತನದ ಹೊರಗಿರುವ ಶಾಂತಿಗಳಲ್ಲ, ವಿಶ್ವಸಂಸ್ಕೃತಿಗೆ ನಮ್ಮ ಕಾಣಿಕೆಯನ್ನು ಕೊಡಬೇಕಾದರೆ ನಮ್ಮನ್ನು ನಾವು ಉತ್ತಮರಾಗಿಸಿಕೊಳ್ಳಬೇಕು. ಆದ್ದರಿಂದ, ಸ್ವಾರ್ಥಕ್ಕೆ ಸ್ಥಾನವೇ ಇಲ್ಲ ಎನ್ನುವಂತಿಲ್ಲ. ಅದು ಎಲ್ಲೆ ಮೀರಿ ಹೋಗದಂತೆ ನೋಡಿಕೊಳ್ಳಬೇಕು. (ಸಂಜೆಗಣ್ಣಿನ ಹಿನ್ನೋಟ’, ಪುಟ 479, 1990).

ವ್ಯಕ್ತಿತ್ವ ಹಂತಹಂತವಾಗಿ ವಿಸ್ತರಿಸುತ್ತಲೇ ವ್ಯಾಪಕತೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಂಸ್ಕೃತಿಯ ಅನಿವಾರ್ಯತೆಯನ್ನು ಅವರು ಗುರುತಿಸುತ್ತಾರೆ. ಸಂಸ್ಕೃತಿ-ಸಾಹಿತ್ಯಗಳ ಅಂತಃ ಸಂಬಂಧವನ್ನು ವಿಶ್ಲೇಷಿಸುತ್ತಾರೆ. ಉತ್ತಮ ಸಾಹಿತ್ಯ ಉತ್ತಮ ಸಂಸ್ಕೃತಿಗೆ ಕಾರಣೀಭೂತ ಎಂದು ಅವರ ಅಭಿಪ್ರಾಯ. ಆಂತಯೇ ಸಾಹಿತ್ಯ ಘನವಾಗಬೇಕಾದರೆ ಸಂಸ್ಕೃತಿಯ ಘರ್ಷಣೆ ಅಗತ್ಯವೆಂದು ಅವರ ಅಂಬೋಣ. ‘ಸಂಕಟವನ್ನು ವಾಸ್ತವ ಜೀವನದಲ್ಲಿ ನೋಡುವುದು ಕಷ್ಟ ಅನುಭವಿಸುವುದು ಮತ್ತೂ ಕಷ್ಟ. ಆದರೆ ಘನವಾದ ಸಹಿತ್ಯ ನಮ್ಮ ಮೇಲೆ ವಿಚಿತ್ರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಜೀವನದಲ್ಲಿ ಸಹ್ಯವಲ್ಲದ್ದು ಯಾವುದೋ ಗಾರುಡಿಯಿಂದ ಸಾಹಿತ್ಯದಲ್ಲಿ ಸಹ್ಯ ಮಾತ್ರವಲ್ಲ, ಪ್ರಿಯವೂ ಆಗುತ್ತದೆ. ಷೇಕ್ಸ್ ಪಿಯರ್‌ನ ರುದ್ರನಾಟಕಗಳನ್ನು, ಸೀತಾಪರಿತ್ಯಾಗದ ಕರುಣಕಥೆಯನ್ನು ಜನರು ಮತ್ತೆ ಮತ್ತೆ ಓದಿ ಕಣ್ಣೀರು ಕರೆದು ಒಂದು ಬಗೆಯ ಆನಂದವನ್ನು ಅನುಭವಿಸುತ್ತಾರೆ… ಸಂಸ್ಕೃತಿ ಬೆಳೆಯಬೇಕಾದರೆ ಈ ಬಗೆಯ ಪರಿಣಾಮ ಉಂಟಾಗಬೇಕು’ (ಮೂರ್ತಿರಾವ್ ಸಾಹಿತ್ಯ ಮತ್ತು ಸತ್ಯ, ‘ಪುಟ 84-85 (82)’ ಎಂದು ಅವರು ಭಾವಿಸುತ್ತಾರೆ. 

ಸಾಹಿತ್ಯ ಸಂಸ್ಕೃತಿಗಿರುವ ನಂಟನ್ನು ಇವರು ಶೋಧಿಸುತ್ತಾರೆ. ಈ ವಿಶ್ಲೇಷಣೆ ಮಾಡುವಾಗ ಕನ್ನಡದ ಒಟ್ಟು ಸಂಸ್ಕೃತಿ ಚಿಂತನೆಯನ್ನು ಚರ್ಚೆ ಮಾಡುತ್ತಾರೆ.

ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮೂರ್ತಿರಾಯರ ವಿಚಾರಗಳನ್ನು ಚರಿತ್ರೆಯ ಚಲನೆಯಲ್ಲಿ ಅಧ್ಯಯನ ಮಾಡುತ್ತಾರೆ. ಇದರಿಂದಾಗಿ ದೇವರು, ಧರ್ಮ, ಜಾತಿ, ರಾಜಕಾರಣ, ಸಮಾಜ, ಸಾಹಿತ್ಯ ಕುರಿತ ಚಿಂತನೆಗಳು ವಾಸ್ತವವನ್ನು ಪುನರಾವಲೋಕನ ಮಾಡಲು ಪ್ರೇರೇಪಿಸುತ್ತವೆ. ಸಮಾಜಕ್ಕೆ ಕೇಡನ್ನುಂಟುಮಾಡುವ ಸಂಗತಿಗಳನ್ನು ವಿರೋಧಿಸುತ್ತಲೇ ಬಂದ ಮೂರ್ತಿರಾಯರು ಉಳ್ಳವರಿಂದ ಎದುರಿಸಿದ ಬಿಕ್ಕಟ್ಟುಗಳನ್ನು ಪರಂಪರೆಯ ಬಿತ್ತಿಯಲ್ಲಿ ವಿಶ್ಲೇಷಿಸುತ್ತಾರೆ.

ಎ.ಎನ್. ಮೂರ್ತಿರಾಯರ ಸೃಜನಶೀಲತೆಯನ್ನು ವಾಸ್ತವೀಕರಿಸುವ ಮುಖ್ಯ ಅಧ್ಯಯನ ಇದಾಗಿದೆ. ವಾಸ್ತವದ ಸ್ಥಿತಿ-ಗತಿಯನ್ನು ಅವಲೋಕನ ಮಾಡದ ಸಂಶೋಧನೆ ಕೇವಲ ಮಾಹಿತಿ ನೀಡುವ ಯಂತ್ರವಾಗುತ್ತದೆ. ಅದೇ ಮಾಹಿತಿಯನ್ನು ವಾಸ್ತವದ ಸಮಸ್ಯೆಗಳ ಜೊತೆ ಸಂಯೋಗಿಸಿ ನೋಡಿದಾಗ ಅನೇಕ ವಿಚಾರಗಳ ಸೃಷ್ಟಿಗೂ ಕಾರಣವಾಗುತ್ತದೆ. ಸಮಾಜವನ್ನು ಸಮಾನವಾಗಿ ವೈಜ್ಞಾನಿಕ, ವೈಚಾರಿಕ ಅರಿವಿನಿಂದ ಕಟ್ಟಲು ಸಾಧ್ಯವಾಗುತ್ತದೆ. ಇಂತಹ ಮಹತ್ವದ ಒಳನೋಟಗಳನ್ನು ಈ ಕೃತಿ ಒಳಗೊಂಡಿದೆ.

ಈ ಕೃತಿಯ ವಿನ್ಯಾಸ ಉತ್ಕೃಷ್ಟವಾಗಿದೆ. ಒಳಪುಟಗಳ ಜೋಡಣೆಯು ಸೊಗಸಾಗಿದೆ. ಮುಖಪುಟ ಹೊಸತನದಿಂದ ಕೂಡಿದೆ. ಕನ್ನಡ ಪ್ರಕಟಣೆಯಲ್ಲಿ ಈ ಪುಸ್ತಕ ಚೆಂದ ಅಪರೂಪ. ಹೊಸದಾಗಿ ಸಂಶೋಧನೆ ಮಾಡುವವರಿಗೆ ಒಳ್ಳೆಯ ಆಕರ ಗ್ರಂಥವಾಗುತ್ತದೆ. ಪ್ರತಿಯೊಬ್ಬರು ಓದಬೇಕಾದ ಗ್ರಂಥಾಲಯದಲ್ಲಿ ಇರಬೇಕಾದ ಅಧ್ಯಯನ ಗ್ರಂಥವಿದು. ಇಂತಹ ಒಳ್ಳೆಯ ಪುಸ್ತಕವನ್ನು ಪ್ರಕಟಿಸಿದ ಬಹುರೂಪಿ ಪ್ರಕಾಶನಕ್ಕೆ, ಎ.ಎನ್. ಮೂರ್ತಿರಾಯರನ್ನು ಮರು ರೂಪಿಸಿ ನಮ್ಮ ಕಾಲಕ್ಕೆ ಕರೆ ತಂದ ಚೇತನ ಸೋಮೇಶ್ವರ ಅವರಿಗೆ ಅಭಿನಂದನೆಗಳು. 

‍ಲೇಖಕರು Admin

22 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading