ಇಂಗ್ಲಿಷಿನಿಂದ: ಜೆ ವಿ ಕಾರ್ಲೋ
ಮೂಲ: ಗೇಯಸ್ ಪೆಟ್ರೊನಿಯಸ್
ಎಫೆಸಿಸ್ ನಗರದ ಈ ಹರೆಯದ ಹೆಣ್ಣುಮಗಳು ಮಹಾ ಪತಿವ್ರತೆಯೆಂದು ಹೆಸರಾಗಿದ್ದಳು. ಅಯ್ಯೋ ವಿಧಿವಿಲಾಸವೇ! ಅವಳ ಗಂಡ ತೀರಿಕೊಂಡ. ಎದೆ ಬಡಿದುಕೊಳ್ಳುತ್ತಾ ಕೂದಲು ಕೆದರಿಕೊಂಡು ವಿಲಾಪಿಸುತ್ತಾ ಅವಳು ಶವಯಾತ್ರೆಯಲ್ಲಿ ಭಾಗವಹಿಸುತ್ತಾಳೆಂದು ಎಲ್ಲರೂ ಊಹಿಸಿಕೊಂಡಿದ್ದು ಸಹಜವಾಗಿಯೇ ಇತ್ತು. ಶವಯಾತ್ರೆಯುದ್ದಕ್ಕೂ ಭಾಗವಹಿಸಿದ್ದೇ ಅಲ್ಲದೆ ಮೃತ ಗಂಡನನ್ನು ಹಿಂಭಾಲಿಸಿ ಈ ಹೆಣ್ಣುಮಗಳು ನೆಲಅಂತಸ್ತಿನ ಗೋರಿಯನ್ನೂ ಹೊಕ್ಕಿದ್ದು ನೆರೆದಿದ್ದವರೆಲ್ಲರ ಹುಬ್ಬೇರಿಸುವಂತೆ ಮಾಡಿತು. ಗಂಡನ ಹೆಣದ ಮೇಲೆ ಹೊರಳಾಡಿ ವಿಲಾಪಿಸುತ್ತಾ ಆಕೆ ಕೆಲವು ದಿನಗಳನ್ನು ಗೋರಿಯೊಳಗೇ ಕಳೆದಳು. ಅವಳ ಹೆತ್ತವರಾಗಲಿ, ಅಣ್ಣ-ತಮ್ಮಂದಿರಾಗಲಿ, ಅಥವಾ ನಗರದ ಹಿರಿಯರಾಲಿ ಅವಳನ್ನು ಗೋರಿಯಿಂದ ಹೊರತರಲು ಶಕ್ಯರಾಗಲಿಲ್ಲ. ಅವಳು ಹೊಟ್ಟೆಗಿಲ್ಲದೆ ಹಸಿವಿನಿಂದ ಖಂಡಿತಾ ಸತ್ತುಹೋಗುತ್ತಾಳೆಂದು ಅವರು ಗಾಬರಿಗೊಂಡಿದ್ದರು. ಕೊನೆಗೆ, ಬೇರೆ ದಿಕ್ಕುಕಾಣದೆ ಅವರೆಲ್ಲಾ ಅವಳ ಗುಲಾಮ ಸೇವಕಿಯೊಡನೆ ಬಿಟ್ಟು ಹೊರಟುಹೋದರು. ಗುಲಾಮ ಸೇವಕಿಯಾದರೋ, ಆಗಿಂದಾಗ ಮಂಕಾಗುತ್ತಿದ್ದ ದೀಪವನ್ನು ಉರಿಸುತ್ತಾ ತನ್ನ ಯಜಮಾನ್ತಿಯ ಜತೆಯಲ್ಲಿ ಇದ್ದುಬಿಟ್ಟಳು.
ಅದೇ ಸಮಯದಲ್ಲಿ ಆ ಪ್ರಾಂತದ ರಾಜ್ಯಪಾಲ ಕೆಲವು ಕುಖ್ಯಾತ ದರೋಡೆಕೋರರನ್ನು ಆ ಗೋರಿಯ ಸನಿಹದಲ್ಲೇ ಶಿಲುಬೆಗೇರಿಸಲು ಆಜ್ಞೆಯಿತ್ತನು. ದರೋಡೆಕೋರರ ಮನೆಯವರು ಹೆಣಗಳನ್ನು ಕದ್ದು ವಿಧಿವತ್ತಾಗಿ ಅವುಗಳ ಶವಸಂಸ್ಕಾರವನ್ನು ಮಾಡುವುದನ್ನು ತಡೆಯಲು ಆ ಜಾಗಕ್ಕೆ ಒಬ್ಬ ಸೈನಿಕನನ್ನು ಕಾವಲಿಗೆ ನೇಮಿಸಲಾಯಿತು. ಆ ರಾತ್ರಿ ಪಹರೆಯಲ್ಲಿದ್ದ ಸೈನಿಕನಿಗೆ ಸನಿಹದ ಗೋರಿಯೊಳಗಿನಿಂದ ಮಂದ ಬೆಳಕಿನ ಜೊತೆಗೆ ಹೃದಯವಿದ್ರಾವಕವಾಗಿ ಬಿಕ್ಕುತ್ತಾ ಅಳುವ ಸದ್ದು ಕೇಳಿಸಿ ಅವನು ಕುತೂಹಲಗೊಂಡ. ಅವನು ಮೆಲ್ಲಗೆ ಬಂದು ಗೋರಿಯೊಳಗೆ ಇಣುಕಲು ಒಂದು ಸುಂದರವಾದ ತರುಣಿಯನ್ನು ಕಂಡು ಅದು ಖಂಡಿತವಾಗಿಯೂ ಒಂದು ಹೆಣ್ಣಿನ ರೂಪದ ಪ್ರೇತವೆಂದು ತಿಳಿದು ಅಘಾತಗೊಳ್ಳುತ್ತಾನೆ. ಕ್ರಮೇಣ, ಅವಳ ಕಣ್ಣುಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಅಶ್ರುಗಳು, ಮುಖದ ಮೇಲೆ ಉಗುರುಗಳಿಂದ ಪರಚಿಕೊಂಡು ಮಾಡಿಕೊಂಡಿರುವ ಗಾಯಗಳು ಮತ್ತು ಬಗಲಲ್ಲೇ ಇರುವ ಹೆಣವನ್ನು ನೋಡಿ, ಆಕೆ ಗಂಡನನ್ನು ಕಳೆದುಕೊಂಡು ರೋಧಿಸುತ್ತಿರುವ ಹರೆಯದ ಹೆಂಡತಿ ಎಂದು ತೀಮರ್ಾನಕ್ಕೆ ಬರುತ್ತಾನೆ. ಸಂಕಟಪಡುತ್ತಾ ಸೈನಿಕ ತನ್ನ ಊಟದ ಬುತ್ತಿಯನ್ನು ಹಿಡಿದುಕೊಂಡು ಗೋರಿಯನ್ನು ಪ್ರವೇಶಿಸಿ ರೋಧಿಸುತ್ತಿರುವ ಅವಳಿಗೆ ಕೊಡುತ್ತಾ, ‘ನೋಡಮ್ಮ, ನೀನು ಈ ರೀತಿ ಉಪವಾಸ ಬಿದ್ದು ಏನೂ ಪ್ರಯೋಜನವಿಲ್ಲ. ರೋಧಿಸಿ ಏನು ಸಾಧಿಸಿದಂತಾಗುತ್ತದೆ? ನೀನು ಬದುಕಬೇಕು. ನಾವು ಕೂಡ ಒಂದಲ್ಲ ಒಂದು ದಿನ ಸಾಯಲೇ ಬೇಕು ತಾನೆ?’ ಎಂದು ಮೃದುವಾಗಿ ಸಂತೈಸಿದ. ಅವಳ ಅಳು ಕಡಿಮೆಯಾಗಲಿಲ್ಲ. ಆದರೂ ಅವನು ಬಿಡಲೊಲ್ಲ. ಇದನ್ನೆಲ್ಲಾ ಮೌನವಾಗಿ ನೋಡುತ್ತಿದ್ದ ಗುಲಾಮ ಹೆಂಗಸು ಸೈನಿಕನ ಮುಂದೆ ಕೈಯೊಡ್ಡಿದಳು. ಅವಳು ಹಸಿದು ಕಂಗಾಲಾಗಿದ್ದಳು. ಸೈನಿಕನ ಬುತ್ತಿಯೊಳಗಿನಿಂದ ಅರ್ಧದಷ್ಟನ್ನು ಗಬಗಬನೆ ತಿಂದು ಹಾಕಿದಳು. ದ್ರಾಕ್ಷಾರಸವನ್ನು ಹೀರಿದಳು. ಅನ್ನ ಮತ್ತು ಮದಿರೆ ಉದರದೊಳಗೆ ಇಳಿಯುತ್ತಿದ್ದಂತೆ ಗುಲಾಮ ಹೆಂಗಸಿಗೆ ಚೈತನ್ಯ ತುಂಬಿ ಬಂದಿತು. ಆಕೆಯೂ ಸೈನಿಕನ ಪರವಹಿಸುತ್ತಾ ಯಜಮಾನತಿಗೆ ಪರಿಪರಿಯಾಗಿ ಬೇಡಿಕೊಂಡಳು. ‘ಕಾಲಕ್ಕೆ ಮುನ್ನವೇ ಸಾಯಲು ಹೊರಟಿರುವುದು ಮೂರ್ಖತನ. ನಿನ್ನ ಅಳು ಸತ್ತು ಹೋಗಿರುವ ನಿನ್ನ ಗಂಡ ಕೇಳಿಸಿಕೊಳ್ಳುತ್ತಿದ್ದಾನೆ ಎಂದು ಕೊಂಡಿರುವೆಯಾ? ಒಂದು ವೇಳೆ ಅವನು ಕೇಳಿಸಿ ಕೊಂಡಿದ್ದೇ ಆದಲ್ಲಿ ನಿನಗೆ ಇಲ್ಲಿಂದ ಹೊರಟು ಹೋಗಿ ಸಾಯುವವರೆಗೂ ಚೆನ್ನಾಗಿ ಬದುಕು ನಡೆಸು ಎಂದೇ ಹೇಳುತ್ತಿದ್ದ.’ ಎಂದಳು ತನ್ನ ಸ್ಥಾನವನ್ನು ಮರೆತು!

ಕೊನೆಗೂ ಆ ಹರೆಯದ ವಿಧವೆ ಇವರ ಒತ್ತಡಕ್ಕೆ ಮಣಿದು ಸೈ ಎಂದಳು. ದೀರ್ಘ ಕಾಲದ ಜ್ವರ ಬಿಟ್ಟು ಮೈ ಹಗುರವಾದಂತೆ ಅವಳು ಹೊಟ್ಟೆ ತುಂಬಾ ಗಬಗಬನೆ ತಿಂದು ಹಾಗೆಯೇ ಸೈನಿಕನ ಬೆಚ್ಚನೆಯ ಅಪ್ಪುಗೆಯಲ್ಲಿ ನಿದ್ದೆ ಹೋದಳು. ಸೈನಿಕನೂ ಕೂಡ ಕಟ್ಟುಮಸ್ತಾದ ಯುವಕನಾಗಿದ್ದು ಸ್ಪುರದ್ರೂಪಿಯಾಗಿದ್ದ. ಸಹಜವಾಗಿಯೇ ಅವರಿಬ್ಬರ ಮಧ್ಯೆ ಅನುರಾಗ ಬೆಳೆಯಿತು. ಗುಲಾಮ ಸೇವಕಿ ತಿಳುವಳಿಕೆಯ ನಗು ಬೀರಿ ಅಲ್ಲಿಂದ ಹೊರಟುಹೋದಳು.
ಕತೆ ಎತ್ತ ಸಾಗುತ್ತಿದೆ ಎಂದು ನಿಮಗೆ ಈಗಾಗಲೇ ಅರ್ಥವಾಗಿರುವುದರಿಂದ ಮತ್ತೂ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ವಿಧವೆ ಮತ್ತು ಸೈನಿಕ ಆ ರಾತ್ರಿಯನ್ನು ಒಟ್ಟಿಗೆ ಕಳೆದರು. ಮರು ದಿನ ಮತ್ತು ಮತ್ತು ಅದರ ಮರು ದಿನವೂ ಅವರು ಹೊರಗೆ ಬರಲಿಲ್ಲ. ಆ ಕಡೆಗೆ ಬಂದವರು ವಿಧವೆಯ ರೋಧನೆಯನ್ನು ಕೇಳದೆ ಅವಳು ಗಂಡನ ಜೊತೆಯಲ್ಲೇ ಸತ್ತು ಹೋಗಿರಬೇಕೆಂದುಕೊಂಡರು. ಮೂರನೆಯ ದಿನ, ಶಿಲುಬೆಗೇರಿಸಿದ್ದ ದರೋಡೆಕೋರರೊಬ್ಬನ ಮನೆಯವರು ಬಂದು ನೋಡಿದಾಗ ಅಲ್ಲಿ ಕಾವಲಿದ್ದ ಸೈನಿಕನು ಇಲ್ಲದಿದ್ದದ್ದು ನೋಡಿ ಆ ದರೋಡೆಕೋರನ ಶವವನ್ನು ಇಳಿಸಿ ವಿಧಿವತ್ತಾಗಿ ಶವ ಸಂಸ್ಕಾರ ಮಾಡಲು ಕೊಂಡೊಯ್ದರು.
ನಾಲ್ಕನೆಯ ದಿನ ಮುಂಜಾನೆ ಸೈನಿಕನು ಎದ್ದು ಹೋಗಿ ನೋಡಿದಾಗ ಒಂದು ಶಿಲುಬೆ ಖಾಲಿಯಿದ್ದದ್ದು ನೋಡಿ ದಿಗಿಲು ಬೀಳುತ್ತಾನೆ. ಈ ಸಂಗತಿ ಹೊರಗೆ ಗೊತ್ತಾದರೆ ಆ ಶಿಲುಬೆಯನ್ನು ತಾನು ಏರಬೇಕಾಗುವುದೆಂದು ನೆನೆದು ನಡುಗುತ್ತಾನೆ. ಶಿಲುಬೆ ಏರಿ ಸಾಯುವುದಕ್ಕಿಂತ ತನ್ನ ಖಡ್ಗದಲ್ಲೇ ಹತನಾಗುವುದು ಮೇಲೆಂದು ಅವನು ನಿರ್ಧರಿಸುತ್ತಾನೆ.
ನಡೆದ ಸಂಗತಿಯನ್ನೆಲ್ಲಾ ವಿಧವೆಗೆ ವಿವರಿಸಿ ಸೈನಿಕ ಅವಳ ಗಂಡನ ಪಕ್ಕದಲ್ಲೇ ತನ್ನ ಮೃತದೇಹಕ್ಕೂ ಸ್ವಲ್ಪ ಜಾಗ ಕೊಡಲು ಕೇಳಿಕೊಂಡ.
‘ಇದೆಂತಾ ಪಜೀತಿಗೆ ತಂದಿಟ್ಟೆಯಪ್ಪ ದೇವರೇ! ನಾನು ಪ್ರೀತಿಸಿದ ಎರಡು ವ್ಯಕ್ತಿಗಳ ಶವಗಳನ್ನು ಎದುರಿಗಿಟ್ಟುಕೊಂಡು ನಾನು ತಾನೆ ಹೇಗೆ ಬದುಕಲಿ!’ ಎಂದು ಆ ವಿಧವೆ ಗೋಳೋ ಎಂದು ಅಳಲು ಶುರುವಿಟ್ಟುಕೊಂಡಳು. ಕೊನೆಗೆ ಸಾವರಿಸಿಕೊಳ್ಳುತ್ತಾ, ‘ಜೀವಂತ ವ್ಯಕ್ತಿಯನ್ನು ಸಾಯಗೊಡುವುದಕ್ಕಿಂತ ಸತ್ತ ವ್ಯಕ್ತಿಯನ್ನೇ ಉಪಯೋಗಿಸುವುದು ಒಳಿತು.’ ಎಂದುಕೊಂಡು ತನ್ನ ಮೃತ ಗಂಡನ ದೇಹವನ್ನು ತೆಗೆದುಕೊಂಡು ಹೋಗಿ ಖಾಲಿ ಬಿದ್ದಿದ್ದ ಶಿಲುಬೆಗೇರಿಸಲು ತನ್ನ ಹೊಸ ಪ್ರಿಯಕರನಿಗೆ ಕೇಳಿಕೊಂಡಳು. ಹೀಗೆ ಸೈನಿಕ ತನ್ನ ತಲೆಯನ್ನು ಉಳಿಸಿಕೊಂಡ. ಆದರೂ. ನಗರದ ಕೆಲವು ಜನ, ‘ಈ ವಿಧವೆಯ ಸತ್ತ ಗಂಡ ಅದ್ಯಾವ ಮಾಯದಲ್ಲಿ ಶಿಲುಬೆಗೇರಿದನಪ್ಪ!’ ಎಂದು ಆಶ್ಚರ್ಯಪಟ್ಟರು.
****
(ಗೇಯಸ್ ಪೆಟ್ರೊನಿಯಸ್ (ಕ್ರಿ.ಶ. 26-66) ರೋಮನ್ ದೊರೆ ನೀರೊ ಆಪ್ತನಾಗಿದ್ದು ತನ್ನ ವಿಡಂಬನಾತ್ಮಕ ಕಾದಂಬರಿ Satyricon ನಿಂದ ಪ್ರಸಿದ್ದನಾಗಿದ್ದಾನೆ. ಈ ಕಾದಂಬರಿ ನೀರೋ ಕಾಲದ ಮೇಲ್ವರ್ಗದ ಜನರ ರೀತಿ ನೀತಿಗಳನ್ನು ವಿಡಂಬನಾತ್ಮಕವಾಗಿ ನಿರೂಪಿಸುತ್ತದೆ. ಚಕ್ರವರ್ತಿ ನೀರೊನ ಹತ್ಯೆಯ ಸಂಚಿನ ಆರೋಪಕ್ಕೆ ಗುರಿಯಾಗಿ, ಮರಣದಂಡನೆಯನ್ನು ಎದುರುನೋಡುತ್ತಾ ಕೂರುವ ಬದಲು ತನ್ನ ಕೈನರಗಳನ್ನು ತಾನೇ ಕತ್ತರಿಸಿಕೊಂಡು ರಕ್ತಸ್ರಾವದಿಂದಾಗಿ ಸಾಯುತ್ತಾನೆ.)






ಬದುಕಿನ ಏರಿಳಿತಗಳನ್ನು ಮತ್ತು ಮಾನವ ಜೀವಿಗಳ ಮೈಮನಗಳ ನೆಂಟಿನ ಬಗೆಯನ್ನು ಅತ್ಯಂತ ಸಂಕೀರ್ಣವಾಗಿ ಚಿತ್ರಿಸಿರುವ ಕಲಾಕೃತಿ .