ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿಶ್ಚಂದ್ರಾಚಿ ಫ್ಯಾಕ್ಟರೀ..

ನಮ್ಮ ಕಡೆ ಮದುವೆಗೆ ಹೆಣ್ಣು ನೋಡುವುದನ್ನು ಚಟ ಮಾಡಿಕೊಂಡ ಗಂಡುಗಳಿಗೆ ಕುಟುಂಬದವರು, ಊರವರು ಹಿಲಾಲು ಹಿಡಿಯುವುದಿದೆ. ನಿನಗೆ ಬೇಕಾದಂತಹ ಹೆಣ್ಣನ್ನು ಒಂದೋ ಮಣ್ಣ ಮುದ್ದೆಯಲ್ಲಿ ಹೊಸದಾಗಿ ಮಾಡಬೇಕು ಇಲ್ಲವೇ ಫ್ಯಾಕ್ಟರಿಯಲ್ಲಿ ಆರ್ಡರ್ ಮಾಡಿ ತರಬೇಕು, ಎಂದು.

ಕರ್ನಾಟಕದ ಲೋಕಾಯುಕ್ತ ಹುದ್ದೆಗೆ ನೇಮಕಾತಿ ಪ್ರಹಸನ ಕೂಡ ಈಗ ಇಂತಹದೇ ಒಂದು ಹಾದಿಯ ಮೂಲಕ ಸಾಗುತ್ತಿದೆ. ರಾಜ್ಯ ಸರಕಾರ ಕಳುಹಿಸಿಕೊಟ್ಟ ಎಲ್ಲ ಹೆಸರುಗಳನ್ನೂ ಘನತೆವೆತ್ತ ರಾಜ್ಯಪಾಲರು ಸರಕಾರಕ್ಕೆ ವಾಪಸ್ ಮಾಡುತ್ತಿದ್ದಾರೆ. 2011ರಲ್ಲಿ, ಜ| ಶಿವರಾಜ್ ಪಾಟೀಲ್ ಅವರು ಅನಧಿಕೃತ ನಿವೇಶನದ ವಿಚಾರದಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದ ಸಂದರ್ಭದಲ್ಲಿ, ಅದಾಗಿ ಒಂದೂವರೆ ವರ್ಷದ ಬಳಿಕ ಆಗಿನ ರಾಜ್ಯಪಾಲರಾಗಿದ್ದ ಎಚ್ ಆರ್ ಭಾರದ್ವಾಜ್ ಅವರು, ಜ| ವೈ ಭಾಸ್ಕರ ರಾವ್ ಅವರನ್ನು 2013 ಫೆಬ್ರವರಿಯಲ್ಲಿ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದರು.

ಆದರೆ ಜ| ಭಾಸ್ಕರ ರಾವ್ ಕೂಡ ಭ್ರಷ್ಟಾಚಾರದ ಆಪಾದನೆಗೆ ಸಿಲುಕಿ, 2015 ಡಿಸೆಂಬರ್ ವೇಳೆಗೆ ರಾಜೀನಾಮೆ ನೀಡಬೇಕಾಯಿತು. ಅಲ್ಲಿಂದೀಚೆಗೆ ಆ ಪೀಠ ಖಾಲಿಯಾಗಿಯೇ ಉಳಿದಿದೆ.  ಆ ನಡುವೆ, 2016  ಮೇ ತಿಂಗಳಲ್ಲಿ ರಾಜ್ಯ ಸರ್ಕಾರವು ಪ್ರಸ್ತಾಪಿಸಿದ್ದ ಜ| ಎಸ್ ಆರ್ ನಾಯಕ ಅವರ ಹೆಸರನ್ನು ಆಗ ಹೊಸದಾಗಿ ರಾಜ್ಯಪಾಲರಾಗಿ ಬಂದಿಳಿದಿದ್ದ ವಜೂಬಾಯಿ ವಾಲಾ ಅವರು ತಿರಸ್ಕರಿಸಿದ್ದರು. ಅದಾದ ಬಳಿಕ ಈಗ ಮೊನ್ನೆ ಜ| ವಿಶ್ವನಾಥ ಶೆಟ್ಟಿಯವರ ಹೆಸರು ರಾಜಭವನದಿಂದ ಸರಕಾರಕ್ಕೆ ವಾಪಸಾಗಿದೆ.

ಹಾಗೆ ನೋಡಿದರೆ, 1986ರಿಂದೀಚೆಗೆ ಕರ್ನಾಟಕಕ್ಕೆ ಜ| ಎ. ಡಿ. ಕೌಶಲ್, ಜ|ರವೀದ್ರನಾಥ್ ಪೈನೆ, ಜ| ಅಬ್ದುಲ್ ಹಕೀಂ ಎಂಬ ಲೋಕಾಯುಕ್ತರು ಆಗಿಹೋಗಿದ್ದಾರೆ. ಹಾಗಂತ ಯಾರೂ ಅದನ್ನೆಲ್ಲ ನೆನಪಿಟ್ಟುಕೊಂಡಿಲ್ಲ. ಆದರೆ ಜ| ಎನ್. ವೆಂಕಟಾಚಲ (2001-2006) ಮತ್ತು ಜ| ಸಂತೋಷ್ ಹೆಗ್ಡೆ (2006-2010 ಜೂನ್) ಅವರು ಲೋಕಾಯುಕ್ತರಾದ ಬಳಿಕ, ಕರ್ನಾಟಕದಲ್ಲಿ ಅಂತಹದೊಂದು ಹುದ್ದೆ ಇದೆ ಎಂಬುದು ಬೆಳಕಿಗೆ ಬಂತು. ಜ| ಹೆಗ್ಡೆ ಅವರು 2011ರಲ್ಲಿ ಸಲ್ಲಿಸಿದ ಗಣಿಗಾರಿಕೆ ಹಗರಣದ ವರದಿ, ನೇರವಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆಗೆ ಕಾರಣವಾಗಿತ್ತು.

ಝೀರೋ ಗ್ರೌಂಡ್ ನಿಂದ ನೋಡಿದರೆ, ಯಾವುದೇ ಸರ್ಕಾರಿ, ಸಾಂವಿಧಾನಿಕ ಹುದ್ದೆಗೆ 100% “ಸರಿ ಇರುವ” ವ್ಯಕ್ತಿಗಳು ಸಿಗುವುದು ಈಗೀಗ ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ, ಸರ್ಕಾರವೋ, ಒಂದಿಷ್ಟು ಜವಾಬ್ದಾರಿಯುತ ವ್ಯಕ್ತಿಗಳೋ ಆಯ್ದು, ಆ ಹುದ್ದೆಯಲ್ಲಿ ಕುಳಿತ ವ್ಯಕ್ತಿ ತನ್ನ ಕರ್ತವ್ಯವನ್ನು ತನ್ನ ಪೀಠದ ಘನತೆಗೆ ತಕ್ಕಂತೆ ನಿಭಾಯಿಸದೇ ಹೋದರೆ, ಅದನ್ನು ಪ್ರಶ್ನಿಸಲು ಹಾದಿಗಳಿರುತ್ತವೆ ಮತ್ತು ಆ ವ್ಯಕ್ತಿಯನ್ನು ಅಂತಹ ಪೀಠದಿಂದ ಕೆಳಗಿಳಿಸುವುದಕ್ಕೆ ಹಾದಿಗಳೂ ಇರುತ್ತವೆ. ಒಂದುವೇಳೆ ಅಂತಹ ಹಾದಿಗಳು ಇಲ್ಲವೆಂದಾದಲ್ಲಿ, ಅಂತಹದೊಂದು ಹಾದಿಯನ್ನು ತೆರೆಯುವ ಎಲ್ಲ ಅಧಿಕಾರಗಳೂ ಶಾಸಕಾಂಗಕ್ಕೆ ಮತ್ತು ಸಾಂವಿಧಾನಿಕ ಪೀಠಾಧಿಪತಿ ಆಗಿರುವ ರಾಜ್ಯಪಾಲರಿಗಿವೆ.

ಲೋಕಾಯುಕ್ತಕ್ಕೆ ಸಂಬಂಧಿಸಿದಂತೆ, ಈ ರೀತಿಯ ಹಾದಿಗಳು ಈಗಾಗಲೇ ಅಸ್ತಿತ್ವದಲ್ಲಿವೆ ಎಂಬುದು ಈ ಹಿಂದಿನ ಲೋಕಾಯುಕ್ತ ಜ| ವೈ ಭಾಸ್ಕರ್ ರಾವ್ ಅವರ ಪ್ರಕರಣದಲ್ಲಿ ಲೋಕಮುಖಕ್ಕೂ ಕಂಡಿದೆ. ಆ ಪ್ರಕರಣದಲ್ಲಿ ಕಲಿತ ಪಾಠಗಳು ಸರ್ಕಾರಕ್ಕೂ, ರಾಜ್ಯಪಾಲರಿಗೂ ಈಗಿನ ಲೋಕಾಯುಕ್ತ ನೇಮಕದ ವೇಳೆ ಬಳಕೆಗೆ ಬರಬೇಕಿತ್ತು. ದುರದ್ರಷ್ಟವಶಾತ್ ಹಾಗಾಗಿಲ್ಲ.

ಈ ನಡುವೆ, ಭ್ರಷ್ಟಾಚಾರದ ವಿರುದ್ಧ ಅವಿರತ ಹೋರಾಟ ನಡೆಸುತ್ತಿರುವ ಸಮಾಜ ಸೇವಕರು ಎಂದು ಗುರುತಿಸಿಕೊಂಡಿರುವವರು, ಸರಕಾರವು ಪ್ರತೀಬಾರಿ ಲೋಕಾಯುಕ್ತಕ್ಕೆ ಹೆಸರೊಂದನ್ನು ಸೂಚಿಸಿದಾಗಲೂ, ಆ ಹೆಸರಿನ ವಿರುದ್ಧ ಒಂದಿಷ್ಟು ಆಧಾರ ಸಹಿತ ಆಪಾದನೆಗಳನ್ನು ತೂರಿಬಿಡುತ್ತಿದ್ದಾರೆ. ಇದು ಇನ್ನೊಂದು ಕೋನದಿಂದ ನೋಡಿದರೆ, ಲೋಕಾಯುಕ್ತ ನೇಮಕ ಆಗದಂತೆ ನೋಡಿಕೊಳ್ಳುವ ಆಟದ ಭಾಗದಂತೆ ಈಗೀಗ ಕಾಣಿಸತೊಡಗಿದೆ.

ವ್ಯವಸ್ಥೆ ತಲೆಯಿಂದ ಬುಡದ ತನಕ ಹದಗೆಟ್ಟಿದೆ, ಅದು ರಿಪೇರಿಯ ಹಂತ ದಾಟಿಹೋಗಿದೆ – ಎಲ್ಲವೂ ಸರಿ. ಆದರೆ, “ಅತ್ಯಂತ ಸೂಕ್ತ” ವ್ಯಕ್ತಿ ಇಲ್ಲದ ಸ್ಥಿತಿಯಲ್ಲಿ, ಇರುವುದರಲ್ಲಿಯೇ ಒಬ್ಬರನ್ನು ಆಯ್ದು ಕೂರಿಸಿ, ಅವರು ಹಾದಿ ತಪ್ಪದಂತೆ ಎಚ್ಚರದಿಂದ ಕಾವಲು ಕಾಯುವುದು ಪ್ರಜಾಸತ್ತೆಯಲ್ಲಿ ಸರಿಯಾದ ಮಾರ್ಗವೆನಿಸುತ್ತದೆ. ಹಾಗೆ ಮಾಡಲು ಅವಕಾಶ ಸಿಗದ ಪರಿಸ್ಥಿತಿ ಇದ್ದರೆ, ಅದನ್ನು ಬೇರೆಯೇ ರೀತಿ ಅರ್ಥೈಸಿಕೊಳ್ಳಬೇಕಾಗುತ್ತದೆ.

ರಾಜ್ಯದ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ‘ಲೋಕಾಯುಕ್ತ’ ಹುದ್ದೆ ಭರ್ತಿಯಾಗುವುದು ಬೇಡ, ತಮಗೆ ಅದರಿಂದ ಅಪಾಯ ಕಟ್ಟಿಟ್ಟಬುತ್ತಿ ಎಂಬುದಕ್ಕೆ  ಅವರದೇ ಆದ ಕಾರಣಗಳೂ, ದೃಷ್ಟಿಕೋನಗಳೂ ಇರಬಹುದು. ಈಗ ಲೋಕಾಯುಕ್ತದ ಶೀಘ್ರ ನೇಮಕಾತಿ ಆಗದಿರುವುದು, ಇಂತಹದೊಂದು ರಾಜಕೀಯ ಹುನ್ನಾರದ ಭಾಗವಾಗಿಯೇ ಸಾರ್ವಜನಿಕರಿಗೆ ಕಾಣಿಸತೊಡಗಿದೆ.

ಇನ್ನು ಸತ್ಯಹರಿಶ್ಚಂದ್ರರ ಫ್ಯಾಕ್ಟರಿಯಲ್ಲಿ ಮಾತ್ರ ಹೊಸ ಲೋಕಾಯುಕ್ತರು ಉತ್ಪಾದನೆ ಆಗುವುದು ಸಾಧ್ಯವೇನೋ!

‍ಲೇಖಕರು admin

20 January, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading