ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದ ಮೇಟಿಕುರ್ಕೆಯ ನಮ್ಮ ಅಜ್ಜಿ, ಮುತ್ತಜ್ಜಿಯರು !

ಎಂ ಆರ್ ಕಮಲ

ಅವರೆಲ್ಲ ನಮ್ಮ ಮೇಟಿಕುರ್ಕೆ ಮನೆಯಂಗಳದಲ್ಲಿ ಬೆಳೆದವರು. ನಾನು ಹುಟ್ಟುವ ಬಹಳ ವರ್ಷಗಳ ಮುಂಚೆ ಹುಟ್ಟಿದವರು. ಅವರಲ್ಲಿ ಕೆಲವರನ್ನು ನಾನು ನೋಡೇ ಇಲ್ಲ! ಅಕ್ಕಯ್ಯ' ಎಂದು ಸೇರಿಸಿಯೇ ಕರೆಯಬೇಕೆಂದು ಯಾರು ಯೋಚಿಸಿದರೋ!ಸಾತಕ್ಕಯ್ಯ, ಸೀತಕ್ಕಯ್ಯ, ಪಾತಕ್ಕಯ್ಯ, ಅಚ್ಚಕ್ಕಯ್ಯ, ಚಿನ್ನಕ್ಕಯ್ಯ, ಪೂರ್ಣಕ್ಕಯ್ಯ, ಲಕ್ಷ್ಮಕ್ಕಯ್ಯ ಹೀಗೆ.. ಬಾಲ್ಯದಲ್ಲಿ ಇವರ ಹೆಸರುಗಳನ್ನು ಹೇಳುವುದು ಒಂದು ವಿನೋದವೆ ಆಗಿತ್ತು. ಅವರೆಲ್ಲ ಶಾಲೆಗೆ ಹೋಗಿ ಕಲಿತಿದ್ದವರೇ. ಅಚ್ಚುಕಟ್ಟು, ಆತ್ಮವಿಶ್ವಾಸ, ಗಂಡಸರಿಗೆ ಹೆದರದೆ, ಅವರೊಂದಿಗೆ ಸರಿಸಮಾನವಾಗಿ ಜಗುಲಿಯಲ್ಲಿ ಕುಳಿತು ಹರಟೆ ಕೊಚ್ಚುವ ದಾಷ್ಟಿಕತೆ ಎಲ್ಲವು ಇದ್ದವರೇ. ಆ ಮನೆಯೇ ಹಾಗಿತ್ತು.

ಅಲ್ಲಿ ಬಡತನವಿತ್ತು ನಿಜ, ಆದರೆ ದೈಹಿಕ, ಮಾನಸಿಕ ಬಂಧನಗಳಿರಲಿಲ್ಲ. ಸಂಗೀತ, ಸಾಹಿತ್ಯ ಎಲ್ಲದರಲ್ಲೂ ಅಭಿರುಚಿಯಿದ್ದ ಈ ಹೆಣ್ಣುಮಕ್ಕಳು ತಮ್ಮ ಕಾಲಕ್ಕಿಂತ ಕಡಿಮೆಯೆಂದರೂ ಇನ್ನೂರು ವರ್ಷಗಳು ಮುಂದಿದ್ದರು. ಇವರಲ್ಲಿ ಅನೇಕರು ವಿಧವೆಯರಾಗಿದ್ದರೂ ಮಡಿ, ಮೈಲಿಗೆ, ಕೇಶಮುಂಡನ ಇತ್ಯಾದಿ ಯಾವ ಸಂಪ್ರದಾಯದ ಸಂಕೋಲೆಯಲ್ಲೂ ಇರಲಿಲ್ಲ.

ಆ ಮನೆಯ ಗಂಡಸರು ಊರಿಗೆ ಶಾಲೆ, ಆಸ್ಪತ್ರೆ, ರಸ್ತೆ, ತೋಟದ ಅಭಿವೃದ್ಧಿ (ಮುಖ್ಯವಾಗಿ ತೆಂಗು ಬೆಳೆ) ಇತ್ಯಾದಿಗಳಲ್ಲಿ ತೊಡಗಿಕೊಂಡು, ಊರು ಮತ್ತು ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಹೆಣ್ಣುಮಕ್ಕಳನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಕಳಿಸಿದ್ದರು. (ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯುವ ಆಸಕ್ತಿಯಿರುವಾಗ ನನ್ನ ತಂದೆ ಬದುಕಿಲ್ಲವಲ್ಲ ಎಂದು ನೋವಾಗುತ್ತದೆ.)

ನನಗೆ ಕೊಂಚ ಬುದ್ಧಿ ತಿಳಿಯುವ ಹೊತ್ತಿಗೆ ಹೆಚ್ಚು ನೋಡಿದ್ದು ಪಾತಕ್ಕಯ್ಯ' (ಹಿರಿಯ ಪತ್ರಕರ್ತರಾಗಿದ್ದ ದಿವಂಗತ ಗರುಡನಗಿರಿ ನಾಗರಾಜ ಅವರ ತಾಯಿ) ಮತ್ತು ಪೂರ್ಣಕ್ಕಯ್ಯ .ಪೂರ್ಣಕ್ಕಯ್ಯ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಾರಣ ಸರಿಯಾಗಿ ತಿಳಿದಿಲ್ಲ. ಅಂಗಳದಲ್ಲಿ ನನಗವರು ಅನೇಕ ಸ್ವಾತಂತ್ರ್ಯ ಗೀತೆಗಳನ್ನು ಹೇಳಿಕೊಟ್ಟಿದ್ದರು. ಎಷ್ಟಾದರೂ ಆಕೆಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಭಾಗವಹಿಸಿದ್ದವರು. ಅದರ ಬಗ್ಗೆ ಅರ್ಥವಾಗದ ಏನೇನೋ ವಿಷಯಗಳನ್ನು ಹೇಳುತ್ತಿದ್ದರು. ಒಂದಿಷ್ಟು ಬೆಂಕಿಯನ್ನು ಅಂಗಳದಲ್ಲಿ ಹಾಕಿ, `ಹಾಕು ಬೆಂಕಿಗೆ ಧಗ ಧಗ, ಬೆದರ್ ಬೆದರ್ ನಡುಗಿತು ಲಂಡನ್’ ಎಂದು ಸುತ್ತ ಕುಣಿಯುತ್ತ ನಮ್ಮನ್ನು ಕುಣಿಸುತ್ತಿದ್ದರು.

ವಿದೇಶಿ ವಸ್ತುಗಳನ್ನು ಬೆಂಕಿಗೆ ಹಾಕಿದ ಪುನರಭಿನಯವದು. (ಈ ಹಾಡು ಗೊತ್ತಿದ್ದವರು ದಯವಿಟ್ಟು ಹೇಳಿ) ಈ ಹೆಣ್ಣುಮಕ್ಕಳ ಲವಲವಿಕೆ, ನಿಷ್ಕಳಂಕ ಮಾತು, ಹರಟೆ, ಅಭಿರುಚಿಗಳೆಲ್ಲ ಯಾರೂ ಗುರುತಿಸದ, ಗಮನಿಸದ ಕಾಲದ್ದು. ಸ್ವಾತಂತ್ರ್ಯವನ್ನೇ ಕಟ್ಟಿಕೊಂಡು ಹುಟ್ಟಿದ ಈ ಹೆಣ್ಣುಮಕ್ಕಳ ಮನೆಯಲ್ಲಿ ಹುಟ್ಟಿ ಬೆಳೆದಿರುವ ಬಗ್ಗೆ ನನಗೆ ಸಂತಸವಿದೆ.

ಸುತ್ತಲಿನ ಕುತ್ಸಿತ ಮನಸ್ಸಿನ ವ್ಯಕ್ತಿಗಳು ತಮ್ಮ ಸಂಕುಚಿತ, ಅಸೂಯೆ, ದ್ವೇಷದ ಭಾವವನ್ನು ನಮ್ಮ ಮೇಲೆ ಹೇರಿ, ತಮ್ಮ ಸಣ್ಣತನದ ದೃಷ್ಟಿಕೋನದ ಸಂಕೋಲೆಯಲ್ಲಿ ಬಂಧಿಸಲು ನೋಡುತ್ತಾರೆ. ನಮ್ಮನ್ನು ಯಾರೂ ಬಂಧಿಸಲಾರರು. ಅದಕ್ಕೆಂದೂ ಅವಕಾಶ ಕೊಡುವುದಿಲ್ಲ. ಇದು ಹೆಣ್ಣುಮಕ್ಕಳಿಗೆ ಅರಿವಾದರೆ ದಿನನಿತ್ಯ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿಲ್ಲ. ನಿಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

‍ಲೇಖಕರು Admin

13 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading