ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಲ್ಪ ಹೊತ್ತು ನೋಡುತ್ತಾ ಕುಳಿತರೆ…

ಪುರೂರವ

ಬೆಂಗಳೂರಿನ ಹಾದಿ ಬೀದಿಗಳಲ್ಲಿ ಕೆಲಸದ ನಿಮಿತ್ತ ತಿರುಗುತ್ತಾ, ಕ್ಲೈಂಟುಗಳನ್ನು ಮಾತಾಡಿಸಿ ಸೇಲು, ಡಿಮ್ಯಾಂಡು, ಸಪ್ಲೈಗಳಲ್ಲೇ ಮುಳುಗಿಹೋಗುವ ನನ್ನಂತ ಮಾರ್ಕೆಟಿಂಗ್ ಮಂದಿಗೆ ಸಂಜೆಯಾದೊಡನೆ ಪ್ರಶಾಂತ ಸ್ಥಳದಲ್ಲಿ ಕೂತು ಕೆಲಕಾಲ ಕಳೆದರೆ ಅದೇ ಸ್ವರ್ಗಸದೃಶ ಸಮಯವೆನ್ನಿಸದೇ ಇರದು. ಹಗಲು ಕೆಲಸದ ನಡುವೆ ಸಂಜೆ ಸಂಸಾರದಗೊಡವೆಗಳ ನಡುವೆ ಒಂದಷ್ಟು ಹೊತ್ತಾದರೂ ನನಗಾಗಿ ನಾನು ಕಳೆದುಹೋಗಬೇಕು ಎನ್ನುವಾಗ ನೆನಪಾಗುವುದು ಮನೆಯ ಬಳಿಯೇ ಇರುವ ಜೆಪಿ ಪಾರ್ಕು.

ಓರಾಯನ್ ಮಾಲು ಹತ್ತಿರವೇ ಇದ್ದರೂ ಉದ್ದೀಪನಗೊಳಿಸುವ ಸಂಗೀತ, ಹೊಸ ಹೊಸ ಶೈಲಿಯ ಉಡುಪುಗಳೊಂದಿಗೆ ಕಿಸುಗುಡುತ್ತಾ ಓಡಾಡುವ ಮಾದಕ ಹುಡುಗಿಯರು, ಇದುವರೆಗೂ ಎಲ್ಲಿಯೂ ಮೂಸಿದ ಅನುಭವವಾಗದೇ ಇರುವ, ಹಚ್ಚಿದವರು ಮಾರುದ್ದ ಇರುವಾಗಲೇ ಮೂಗಿಗಪ್ಪಳಿಸುವ ವಿವಿಧ ಸೆಂಟಿನ ವಾಸನೆಗಳು, ವಿಂಡೋ ಶಾಪಿಂಗ್ ಹೆಸರಲ್ಲಿ ಪುಕ್ಕಟೆ ತಿರುಗಾಡಲು ಮತ್ತು ನೋಡಲು ಬರುವ ಜನ, ಇಂದು ನೋಡಿ ಹೋದವರು ಮುಂದೊಂದು ದಿನವಾದರೂ ತಮ್ಮಲ್ಲಿರುವ ವಸ್ತುಗಳನ್ನು ಕೊಳ್ಳಲು ಬರದೇ ಇರರು ಎನ್ನುವ ಕಾನ್ಫಿಡೆನ್ಸಿನಲ್ಲಿರುವಂತೆ ಕಾಣುವ ಅಂಗಡಿಯವರು ಯಾರೂ ಕೂಡಾ ಪಾರ್ಕಿನಲ್ಲಿ ಕಾಣುವುದಿಲ್ಲ. ಪಾರ್ಕಿನಲ್ಲಿ ಕಾಣಸಿಗುವ ಪ್ರಪಂಚವೇ ಬೇರೆ ಅಲ್ಲಿನ ಅಪ್ಯಾಯಮಾನತೆ ಬೆಂಗಳೂರಿನ ಗಜಿಬಿಜಿಯಲ್ಲೆಲ್ಲೂ ಸಿಗದು.

ನಾನೇನು ದಿನವೂ ಪಾರ್ಕಿಗೆ ಹೋಗುವವನಲ್ಲ. ಎಂದೋ ಬೇಜಾರಾದಾಗ, ಕೆಲಸದಿಂದ ಬೇಗ ಬಂದ ದಿನ ಅಥವಾ ಮೈ ಜಡ್ಡುಗಟ್ಟಿ ಯಾಕೋ ನಾನು ಜಡವಾಗುತ್ತಿರುವೆನೇನೋ ಎನ್ನಿಸಿದ ದಿನ ಪಾರ್ಕಿಗೆ ತಪ್ಪದೇ ಹೋಗುವೆ. ಕಿವಿಗೆ ಇಯರ್ಫೋನನ್ನು ಸಿಕ್ಕಿಸಿ ಸಂಗೀತ ಕೇಳುತ್ತಾ ಪಾರ್ಕಿನ ನಡೆಯಲಿರುವ ಹಾಸಿನಗುಂಟಾ ಸಂಜೆ ಆರರ ಸುಮಾರಿಗೆ ನಡೆಯಲು ಶುರುವಿಕ್ಕಿಕೊಂಡರೆ ಕಿಲೋಮೀಟರುಗಳು ಹತ್ತು ಉರುಳಿದರೂ ಗೊತ್ತಾಗುವುದೇ ಇಲ್ಲ.

ಕೊನೆಗೆ ಸೆಕ್ಯುರಿಟಿಗಳ ವಿಜಲ್ ಸದ್ದೇ ಗಂಟೆ ಎಂಟೂವರೆಯಾದಮೇಲೆ ಎಚ್ಚರಿಸುವುದು. ನನ್ನಂತೆಯೇ ಅದೆಷ್ಟು ಜನರಿಲ್ಲಿ! ವಯಸ್ಸಾದ ಮೇಲೆ ಡಾಕ್ಟರುಗಳ ಸಲಹೆ ಮೇಲೆ ಬರುವವರು, ಮಕ್ಕಳೊಂದಿಗರು, ನವಜೋಡಿಗಳು, ಮದುವೆಯಾಗದಿದ್ದರೂ ಜನರ ಕಣ್ತಪ್ಪಿಸಿ ರೊಮ್ಯಾನ್ಸ್ ಮಾಡಲೆಂದೇ ಬರುವ ಜೋಡಿಗಳು, ಯಾರನ್ನೋ ಮೀಟಾಗಲು ಬಂದು ಕಾಯುವಂತಹವರು, ಬೊಜ್ಜು ಕರಗಿಸಲೆಂದೇ ಬರುವಂತಹವರು ಸ್ವಲ್ಪ ಹೊತ್ತು ನೋಡುತ್ತಾ ಕುಳಿತರೆ ಇದೇ ಒಂದು ಪ್ರಪಂಚವೆನಿಸಿಬಿಡುತ್ತದೆ. ಕಿವಿಗಡಚಿಕ್ಕುವ ಹಾರ್ನುಗಳ ಶಬ್ದಕ್ಕೆ ಪಾರ್ಕಿನಲ್ಲಿ ದಿಗ್ಬಂಧನ.

ನಾನಿರುವ ಕಂಪನಿಯಿಂದ ಬೇರೆ ಕಂಪನಿಗೆ ಸೇರಲು ಆಫರ್ ಲೆಟರ್ ಬಂದಾಗಿತ್ತು. ನನ್ನ ಈಗಿನ ಕಂಪನಿಗಿಂತಲೂ ಸೇರಲಿರುವ ಕಂಪನಿಯಲ್ಲಿ ಒಳ್ಳೆಯ ಸಂಬಳದ ಆಮಿಶವೂ ಸಿಕ್ಕಿತ್ತು. ಕಂಪನಿಯೂ ಚೆನ್ನಾಗಿದ್ದಿದ್ದರಿಂದ ಕೆಲ ಹಿತೈಶಿಗಳೂ ಕಂಪನಿ ಬದಲಾಯಿಸಿದರೆ ಇಂತಹ ಕಂಪನಿಗೇ ಬದಲಾಯಿಸಬೇಕು ಅಲ್ಲದೇ ಮತ್ತೆ ಮತ್ತೆ ಅಂತಹ ಒಳ್ಳೆಯ ಅವಕಾಶಗಳು ಸಿಗಲಾರವು ಎಂದು ಸಲಹೆ ನೀಡಿದ್ದರಿಂದ ಇದ್ದ ಕಂಪನಿಗೆ ರಿಸೈನ್ ಮಾಡಿ ನೋಟೀಸ್ ಪೀರಿಯಡ್ಡಿನಲ್ಲಿದ್ದೆ. ಸೇರಬೇಕಾದ ಕಂಪನಿಯ ಕೆಲಸದ ಪ್ರಸ್ತಾಪ ಪತ್ರದಲ್ಲಿದ್ದಂತೆ ನಾನು ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಿರಲಾಗಿ ಆಸ್ಪತ್ರೆಗೆ ಹೋಗಿ ರಕ್ತ, ಮಲ, ಮೂತ್ರದ ಸ್ಯಾಂಪಲ್ಲುಗಳನ್ನು ಕೊಟ್ಟು ಬಂದಿದ್ದೆ. ಮರುದಿನ ರಿಪೋರ್ಟುಗಳನ್ನು ನೋಡಿದ ಡಾಕ್ಟರು “ಎಲ್ಲಾ ನಾರ್ಮಲ್ಲಾಗೇ ಇದೀರಿ ಬಿಪಿ ಸ್ವಲ್ಪ ಜಾಸ್ತಿ ಆಗ್ತಿದೆ, ನಿಮ್ಮ ಕೆಲಸದ ನಡುವೆ ವ್ಯಾಯಾಮ, ವಾಕು ಶುರು ಮಾಡಿ ಎಂದು ಸಲಹೆ ನೀಡಿದ್ದರು. ಇದೀಗ ಮತ್ತೆ ಜೆಪಿ ಪಾರ್ಕಿಗೆ ದಿನನಿತ್ಯ ಭೇಟಿ ಕೊಡುವ ಅನಿವಾರ್ಯ ಡಾಕ್ಟರರ ಸಲಹೆ ಮೇರೆಗೆ ಬಂದೊದಗಿತ್ತು.

ಹೈದರಾಬಾದಿಗೆ ಹೋಗಿ ಹೊಸ ಕಂಪನಿ ಸೇರಲು ಇರುವ ಔಪಚಾರಿಕತೆಯನ್ನು ಮುಗಿಸಿ ಮರಳಿ ಬೆಂಗಳೂರಿಗೆ ಬಂದವನಿಗೆ ಸಂಜೆಯ ಸಮಯ ಪಾರ್ಕಿನಲ್ಲಿ ಕಳೆಯುವುದು ಹಿಂದೆಂದಿಗಿಂತಲೂ ಅಪ್ಯಾಯಮಾನವೆನಿಸಿತ್ತು. ಹೊಸ ಕೆಲಸದ ಜೊತೆ ಹೊಸ ಜವಾಬ್ದಾರಿಯ ನಡುವೆ ಬೆಳಗಿನ ಸಮಯ ದೇಹ ದಂಡಿಸಲು ಪ್ರಶಸ್ತ ಸಮಯವಾಗಿದ್ದರೂ ಎಂಟಕ್ಕೆಲ್ಲ ಮನೆ ಬಿಟ್ಟು ಕೆಲಸಕ್ಕೆ ಹೊರಡಬೇಕಾಗಿದ್ದರಿಂದ ಅನ್ನುವುದಕ್ಕಿಂತಲೂ ಬೆಳಿಗ್ಗೆ ಬೇಗ ಏಳಲಾಗದ ಸೋಮಾರಿತನದ ಕಾರಣವಾಗಿ ಸಂಜೆ ಮನೆ ಸೇರಿ ಮುಖ ತೊಳೆದು, ಕಾಫಿ ಹೀರಿ ಮನೆಬಿಟ್ಟರೆ ಹತ್ತು ನಿಮಿಷದ ನಡಿಗೆಯ ನಂತರ ಮುತ್ಯಾಲ ನಗರದಲ್ಲಿನ ಜೆಪಿ ಪಾರ್ಕಿನ ಹಿಂದಿನ ಗೇಟಿನ ಮೂಲಕ ಪಾರ್ಕೊಳಗೆ ಸೇರಿದರೆ ದಿನವು ನೋಡುತ್ತಿದ್ದರೂ ಹೊಸತಾಗಿ ನೋಡುತ್ತಿರುವೆನೇನೋ ಎಂಬಂತ ಅವ್ಯಕ್ತ ಭಾವ ಆವರಿಸಿಬಿಡುತ್ತದೆ.

ಎಂಬಿಎ ಮುಗಿಸಿ ಉದರ ನಿಮಿತ್ತ ಬೆಂಗಳೂರಿಗೆ ಬಂದು ಸುಮಾರು ಹತ್ತು ವರ್ಷಗಳಾಗಿರಬಹುದು. ಅಂದಿನಿಂದ ಇಂದಿನವರೆಗೂ ನಾನು ಸುಮಾರು ಎಂಟಕ್ಕೂ ಹೆಚ್ಚು ಬಾಡಿಗೆ ಮನೆಗಳನ್ನು ಬದಲಾಯಿಸಿದರೂ ಉಳಿದಿರುವುದು ಜೆಪಿ ಪಾರ್ಕಿನಿಂದ ಸುಮಾರು ಎರಡು ಕಿ.ಮೀಗಳ ಪರಿಧಿಯಲ್ಲೇ. ಈ ಪಾರ್ಕಿಗೆ ಹೊಂದಿ ಕೊಂಡಂತೆಯೇ ಮೋಹನ್‌ ಕುಮಾರ ನಗರದ ಸ್ಲಂ ಇದ್ದರೆ ಅದರ ಪಕ್ಕವೇ ಯಶವಂತಪುರದ ಸ್ಲಂ ಇರುವುದರಿಂದ ಸಾಕಷ್ಟು ಜನ ಈ ಏರಿಯಾಗಳಲ್ಲಿ ಮನೆ ಮಾಡಲು ಮೂಗು ಮುರಿಯುವುದೇ ಹೆಚ್ಚು ಅಂಥದ್ದರಲ್ಲಿ ಈ ಪಾರ್ಕಿನ ಮೇಲಿರುವ ಮೋಹದ ಮುಂದೆ ಸ್ಲಂ ನಲ್ಲಿ ಬೆಂಕಿ ಪೊಟ್ಟಣ ಗಾತ್ರದ ಜೋಪಡಿಗಳಲ್ಲಿರುವ ಜೀವಗಳು ನನಗೆ ಪಾರ್ಕಿನಲ್ಲಿನ ಕೆರೆಯ ಕ್ಯಾಟ್‌ ಫಿಶ್‌ಗಳ ರೀತಿ ಕಾಣುತ್ತವಷ್ಟೇ. ಪಾರ್ಕಿಗೆ ಬರುವವರು ಹಾಕುವ ಮಂಡಕ್ಕಿಗೋ, ಬಿಸ್ಕತ್ತು ಚಿಪ್ಸಿನ ಚೂರಿಗೋ ಕಾದು ಕುಳಿತು ಹಾಕುವ ಮೂರು ಚೂರನ್ನು ಹಿಡಿಯಲು ಹೋರಾಡುವ ನೂರಾರು ಕ್ಯಾಟ್‌ ಫಿಶ್‌ಗಳು ಸಾಮಾನ್ಯದವಲ್ಲ. ಕೆರೆಯೆಂದರೆ ಕೆರೆಯಲ್ಲ, ಸುತ್ತಲಿನ ಏರಿಯಾಗಳ ಸೀವೇಜು ನೀರಿನ್ನು ಕೆರೆಯ ಹೆಸರಿನಲ್ಲಿ ಒಂದೆಡೆ ಶೇಖರಿಸಿರುವುದಷ್ಟೇ.

ಏನೋ ಮಳೆಗಾಲದಲ್ಲಿ ಸುರಿಯುವ ನೀರು ಆ ಕೆರೆಯೆಂಬೋ ಕೆರೆಗೆ ಸೇರಿದಾಗ ಸೀವೇಜು ನೀರಿನ ವಾಸನೆ ಕಡಿಮೆಯಾಗಿ, ಕೊಕ್ಕರೆಗಳೂ ಅದೆಲ್ಲಿಂದಲೋ ವಲಸೆ ಬಂದು ಹಸಿರು ಪರಿಸರದ ನಡುವಿನ ಹುಳು ಹುಪ್ಪಟೆಗಳನ್ನು ಹಿಡಿದು ತಿಂದು ತಿನ್ನುತ್ತವೆಯಾದರೂ ನೀರಿನಲ್ಲಿನ ಕ್ಯಾಟ್‌ ಫಿಶ್‌ಗಳ ತಂಟೆಗೆ ಮಾತ್ರ ಹೋಗಲಾರವು. ಏಕೆಂದರೆ ಅವಕ್ಕೂ ಗೊತ್ತು, ತಪ್ಪಿ ಅವುಗಳ ಕೈಗೆ ಸಿಕ್ಕರೆ ತಮ್ಮನ್ನು ಪಿರ್ಹಾನ್ಹ ಮೀನುಗಳ ರೀತಿ ಗಬರಾಡಿ ತಮ್ಮನ್ನು ತಿನ್ನದಿರಲಾರವು ಎಂದು. ಇಲ್ಲಿನ ಸ್ಲಂ ನ ಜನರೂ ಅಷ್ಟೇ ತಮ್ಮ ಪಾಡಿಗೆ ತಾವಿದ್ದು ಕಂಡು ಕೇಳರಿಯದ ರೀತಿಯ ಕೆಲಸಗಳನ್ನು ಮಾಡಿಯಾದರೂ ನಿಯತ್ತಿನಿಂದ ದುಡಿದು ಐಶಾರಾಮಿ ಕಾರುಗಳಲ್ಲಿರುವಂತಹ ಸ್ಕೈ ರೂಫ್‌ ನ ಮೂಲಕ ಆಕಾಶ ಕಾಣುವಂತೆ ಇವರೂ ಅವರವರ ನಡುಮನೆಯಿಂದಲೇ ಕಾಣುವ ಆಕಾಶ ನೋಡುತ್ತಾ, ಥರಾವರಿ ಕನಸು ಕಾಣುತ್ತಾ ಹೊಟ್ಟೆ ಸವರುತ್ತಾ ಮಲಗಿದರೆ ಅವರವರ ಕನಸುಗಳಲ್ಲಿ ಅವರುಗಳು ಅಂಬಾನಿಗಳೇ ಸರಿ.

ಹತ್ತು ವರ್ಷಗಳ ಹಿಂದೆ ಇದೇ ಸ್ಲಮ್ಮುಗಳಲ್ಲಿ ನಮ್ಮ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರೇ ಹೆಚ್ಚಾಗಿ ಕಾಣಸಿಗುತ್ತಿದ್ದರಾದರೂ ತಮಿಳು ಮೂಲದವ ಎಮ್ಮೆಲ್ಲೆಯಾಗಿ ಆಯ್ಕೆಯಾದ ನಂತರ ಇದೀಗ ಎಲ್ಲಿ ನೋಡಿದರೂ ತಮಿಳು ಜನರನ್ನೇ ತಂದು ತುಂಬಿ ಈ ಸ್ಲಮ್ಮುಗಳು ಇದೀಗ ಮಿನಿ ತಮಿಳುನಾಡಿನಂತೆಯೇ ಬದಲಾಗಿರುವುದು ಸೂಕ್ಷ್ಮವಾಗಿ ಆಗು ಹೋಗುಗಳನ್ನು ಗಮನಿಸುವ ನನಗೆ ಚೆನ್ನಾಗಿ ಗೊತ್ತು.

ಈ ಬೆಂಗಳೂರೆಂಬ ಮಹಾನಗರದಲ್ಲಿ ಸಂಬಂಧಗಳು ಬೆಸೆದುಕೊಳ್ಳುವುದು ಎಷ್ಟರಮಟ್ಟಿಗೆ ಆಕ್ಸಿಡೆಂಟಲ್‌ ಎಂದರೆ ನನ್ನ ಹೆಂಡತಿ ನನ್ನ ಚಿಕ್ಕ ಮಗನನ್ನು ಕರೆದುಕೊಂಡು ಹೊರಗೆ ಹೋಗಿದ್ದಾಗ ಮಗನನ್ನೂ ಎತ್ತಿಕೊಂಡು ಜೊತೆಗೆ ಭಾರದ ಚೀಲವನ್ನೂ ಹಿಡಿದು ಏದುಸಿರುಬಿಡುತ್ತಾ ನಡೆಯುತ್ತಿದ್ದಳಂತೆ ಆಗ ಒಬ್ಬ ಹೆಂಗಸು ʼಕೊಡಕ್ಕಾ ನಾನು ಹಿಡಿದು ಬರುತ್ತೇನೆʼ ಎನ್ನುತ್ತಾ ಚೀಲ ಪಡೆದು ಲೋಕಾಭಿರಾಮವಾಗಿ ಮಾತನಾಡುತ್ತಾ ʼಅಕ್ಕ, ಯಾರಿಗಾದರೂ ಮನೆಗೆಲಸಕ್ಕೆ ಜನ ಬೇಕಾದರೆ ಹೇಳ್ತೀರಾ? ಈ ಲಾಕ್‌ ಡೌನ್‌ ಆಗಿ ತಾನು ಕೆಲಸಕ್ಕೆ ಹೋಗುತ್ತಿದ್ದ ಗಾರ್ಮೆಂಟ್ ಫ್ಯಾಕ್ಟರಿ ಬಂದಾಗಿದೆ, ಕರೋನಾಕ್ಕೆ ಹೆದರಿ ಯಾರು ಮನೆಗೆಲಸಕ್ಕೆ ಕರೆಯುತ್ತಿಲ್ಲ. ಡ್ರೈವರ್‌ ಕೆಲಸ ಮಾಡುವ ಗಂಡನೂ ಮನೆಯಲ್ಲೇ ಇರುವುದರಿಂದ ಕಷ್ಟವಾಗಿದೆʼ ಎಂದದ್ದನ್ನು ಕೇಳಿ ತಮ್ಮ ಮನೆಗೇ ನಾಳೆಯಿಂದ ಕೆಲಸಕ್ಕೆ ಬರುವಂತೆ ನನ್ನ ಹೆಂಡತಿ ಹೇಳಿ ಮನೆ ತೋರಿಸಿ ಕಳುಹಿಸಿದ್ದಳಂತೆ.

ಇದೀಗ ಅ ಹೆಣ್ಣುಮಗಳು ನಮ್ಮ ಮನೆಗೆ ಹೊಂದಿಕೊಂಡಿದ್ದಾಳೆ. ಕೆಲಸವೂ ಅಷ್ಟೇ ಸ್ವಚ್ಛ ಆಗೀಗ ʼಅಕ್ಕಾ ಮನೆಯಲ್ಲಿ ಮಧ್ಯಾಹ್ನಕ್ಕೆ ತಲೆ ಮಾಂಸ ಮಾಡ್ತಿದೀನಿ, ಅಣ್ಣಂಗೆ ತಂದು ಕೊಡ್ತೀನಿ ನಿಂಗೇನು ಬೇಕೋ ಮಾಡ್ಕೊಂಡಿರು ಸಾಕು ಎಂದು ಮೊಟ್ಟೆಯನ್ನೂ ತಿನ್ನದ ನನ್ನ ಹೆಂಡತಿ ಬಳಿ ಹೇಳಿ ನಂತರ ನನಗಾಗಿ ತಂದು ಕೊಡ್ತಾರೆ. ಅವರು ಮೂಲತಃ ರಾಯಚೂರಿನವರಂತೆ ಸುಮಾರು ಹದಿನೈದು ವರ್ಷಗಳ ಹಿಂದೆಯೇ ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದದ್ದಂತೆ. ನನ್ನ ಹೆಂಡತಿ ಅಪ್ಪಿ ತಪ್ಪಿ ಬೆಂಗಳೂರಿನ ಬಗ್ಗೆ ಆಕೆಯ ಮುಂದೆ ಏನಾದರೂ ಬೈದರೆ, ʼಬೆಂಗ್ಳೂರನ್ನ ಬೈಬೇಡಕ್ಕ, ಬರ ಅಂತ ಊರಿಂದ ಕೆಲಸ ಹುಡ್ಕೊಂಡು ಇಲ್ಲಿಗೆ ಗುಳೇ ಬಂದಾಗ ಕೆಲಸ ಕೊಟ್ಟು ಹೊಟ್ಟೆಗೆ ಹಿಟ್ಟಾಕಿದ್ದು ಬೆಂಗ್ಳೂರುʼ ಎಂದು ಅಭಿಮಾನದ ಜೊತೆ ನನ್ನ ಹೆಂಡತಿಯ ಮೇಲೆ ಹುಸಿ ಮುನಿಸು ತೋರುತ್ತಾಳೆ.

ಗಂಡ ಡ್ರೈವರ್‌ ಆದ್ರೂ ಆಗೀಗ ತಿಂಗ್ಳಿಗೆ ಒಂದೆರಡು ಸಲ ಎಣ್ಣೆ ಹಾಕೋದು ಬಿಟ್ರೆ ಯಾವ ಕೆಟ್ಟ ಅಭ್ಯಾಸ ಇಲ್ಲ ನೋಡು, ಆವನು ದುಡಿಯುವುದರ ಜೊತೆಗೆ ತಾನೂ ಗಾರ್ಮೆಂಟ್‌ ಕೆಲಸಕ್ಕೆ ಹೋಗಿ ಮೂರ್ನಾಲ್ಕು ಮನೇಲಿ ಕಸ ಮುಸುರೆ ಮಾಡಿ ಕಷ್ಟ ಪಡ್ತಿರೋದಕ್ಕೆ ಇದೀಗ ಆರ್ಸಾವ್ರದ ಬಾಡಿಗೆ ಮನೇಲಿದೀವಿ ಜೊತೆಗೆ ಮಗನನ್ನು ಇಂಗ್ಲೀಶ್‌ ಕಾನ್ವೆಂಟ್‌ ಒಂದರಲ್ಲಿ ಓದಿಸ್ತಿದೀನಿ ಅನ್ನೋವಾಗ ಆಕೆಯ ಕಣ್ಣಿನ ಹೊಳಪು ನೋಡಬೇಕು. ಆ ಕಣ್ಣ ಹೊಳಪಿನ ಮುಂದೆ ಜಗತ್ತಿನ ಯಾವ ಆಶಾ ಭಾವನೆಯೂ ದೊಡ್ಡದಲ್ಲ ಅನ್ನಿಸದಿದ್ದರೆ ಕೇಳಿ.

ಮೊನ್ನೆ ಮುಖ ಊದಿಸಿಕೊಂಡು ಬಂದವಳಿಗೆ ಏನಾಯ್ತು ಅಂತ ನನ್ನ ಹೆಂಡತಿ ಕೇಳಲಾಗಿ ಏನಿಲ್ಲಕ್ಕ ನಂಗೂ ಗಂಡಂಗೂ ಜಗಳ ಆಯ್ತು, ಅವ್ನು ಮಗನ್ನ ಈ ಕರೋನಾ ರಜಕ್ಕ ಊರಿಗೆ ಕಳಿಸೋಣ ಅಂತಾನೆ. ಊರಿಗೆ ಹೋದರೆ ಅಲ್ಲಿ ಶಾಲೆಗೆ ಹೋಗದ ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳ ಜೊತೆ ಸೇರಿ ಪೋಲಿ ಬಿದ್ದೋಗತಾನ ಅನ್ನೋ ಹೆದರಿಕೆಯಿಂದ ಕಳಿಸೋದು ಬೇಡ ಅಂತ ಪಟ್ಟು ಹಿಡಿದೆ ಅದಕ್ಕೇ ಈ ಜಗಳ, ಸರಿ ಹೋಗುತ್ತೆ ಬಿಡಕ್ಕಾʼ ಅಂದಳಷ್ಟೇ. ಇದೀಗ ಲಾಕ್‌ ಡೌನ್‌ ಸಮಯದಲ್ಲಿ ಎಲ್ಲಾ ನಾನ್‌ ವೆಜ್‌ ಹೋಟೆಲ್ಲುಗಳೂ ಮುಚ್ಚಿ ತಿನ್ನಲು ಚಡಪಡಿಸುವ ನನ್ನನ್ನೂ, ಮಕ್ಕಳನ್ನೂ ನೋಡಲಾಗದೆ ಆಕೆಯಿಂದ ನಾಟಿ ಶೈಲಿಯ ನಾನ್‌ ವೆಜ್‌ ಅಡುಗೆ ಮಾಡುವುದ ಕಲಿತು ನನ್ನ ಹೆಂಡತಿಯೂ ಥರಾವರಿ ಮಾಂಸದ ಅಡುಗೆ ಮಾಡಿ ನನಗೂ ಮಕ್ಕಳಿಗೂ ತಿನ್ನಲಿಕ್ಕುತ್ತಾಳೆ. ಆಕೆ ತಿನ್ನದಿದ್ದರೂ ʼಮಕ್ಕಳು ನೀವು ತಿಂದರೆ ಅದೇ ಖುಷಿ ಅನ್ನುತ್ತಾಳೆʼ.

ಮತ್ತೆ ಜೇಪಿ ಪಾರ್ಕಿನೆಡೆಗೇ ಬರೋಣ, ಒಮ್ಮೆ ಸ್ವಲ್ಪ ಹೊತ್ತು ವಾಕಿಂಗ್‌ ಮಾಡಿ ಜಾಸ್ತಿ ನಡೆಯುವ ಮನಸಿಲ್ಲದೇ ಅಲ್ಲೇ ಬೆಂಚಿನ ಮೇಲೆ ಕುಳಿತಿದ್ದೆ. ಪಕ್ಕದಲ್ಲೀ ಪಾರ್ಕಿನ ವಾಚ್‌ ಮೆನ್‌ ಒಬ್ಬರು ಬಂದು ಕುಳಿತರು. ಸುಮಾರು ಅರವತ್ತು ದಾಟಿದ ವಯಸ್ಸಿನವರು. ನಿಯಮಿತವಾಗಿ ಪಾರ್ಕಿಗೆ ಬರುತ್ತೇನಾದ್ದರಿಂದ ಅವರ ಮುಖ ಪರಿಚಯದ ಕಾರಣಕ್ಕೆ ಅವರೆಡೆ ನೋಡಿ ನಕ್ಕು ಹಾಗೇ ಕುಶಲೋಪರಿಯನ್ನು ವಿಚಾರಿಸಿದೆ. ʼಏನೋ ದಿನವೂ ಮನೆಗೆ ಬಂದು ಮಗನನ್ನು ಮಾತಾಡಿಸಿಕೊಂಡು ಹೋದರೇ ನೆಮ್ಮದಿ ಅಂದರುʼ. ʼಮಗನ ಮನೆಯೇ ಎಲ್ಲಿದೆ? ನಿಮ್ಮ ಮನೆಯಲ್ಲಿ ಯಾರ್ಯಾರು ಇರುವುದುʼ ಎಂದು ಕೇಳಲಾಗಿ ʼನಾನು ನನ್ನ ಹೆಂಡತಿʼ ಎಂದರು.

ಮತ್ತೆ ʼಮನೆಗೆ ಬಂದು ಮಗನನ್ನು ಮಾತಾಡಿಸಿ ಹೋಗುತ್ತೇನೆ ಅಂದಿರಲ್ಲ? ಮನೆ ಎಲ್ಲಿ?ʼ ಎಂದು ಪ್ರಶ್ನಾರ್ಥಕವಾಗಿ ನಾನು ಅವರನ್ನು ಕೇಳಲಾಗಿ, ಏನೊಂದೂ ಮರು ಉತ್ತರಿಸದೆ ಹಾಗೇಯೇ ಸಿಟ್ಟಿನಿಂದ ಎದ್ದು ಹೋದರು. ನನಗೆ ಕಸಿವಿಸಿಯೆನ್ನಿಸಿತು, ʼಅರೇ, ನಾನೇನಾದರೂ ಕೇಳಬಾರದ್ದನ್ನು ಕೇಳಿದೆನೇ? ಎಂದು ತಲೆ ಕೆರೆದುಕೊಳ್ಳುತ್ತಿರುವಾಗ ಅಲ್ಲಿ ಇನ್ನೊಬ್ಬ ವಾಚ್‌ ಮೆನ್‌ ಬಂದು ʼಸಾರ್‌, ಅವರ ಜೊತೆ ಹೆಚ್ಚು ಮಾತಾಡಲು ಹೋಗಬೇಡಿʼ ಎಂದರು. ʼಯಾಕೆ? ಏನಾಯ್ತುʼ ಎಂದು ಅವರನ್ನು ಕೇಳಿದೆ. ಅದಕ್ಕೆ ʼಏನಿಲ್ಲ ಸಾರ್‌ ಆ ತಾತಪ್ಪಂಗೆ ಸ್ವಲ್ಪ ಹುಚ್ಚು, ಒಬ್ಬೊಬ್ಬನೇ ಏನೇನೋ ಮಾತಾಡ್ತಿರ್ತಾನೆ, ಮಗನ ಮನೆ ಅಂತಾನೆ, ಎಲ್ಲೋ ನಿನ್ನ ಮಗನ ಮನೆ ಎಂದು ಕೇಳಿದರೆ ಅದೋ ಅಲ್ಲಿ ಅಂತ ಆ ಮರದ ಕಡೆ ಕೈ ತೋರಿಸುತ್ತಾನೆʼ ಅಂತ ಹೇಳಿದರು.

ʼಪಾರ್ಕೊಳಗೆಲ್ರೀ ಮನೆ ಬರ್ಬೇಕು, ಇಲ್ಲಿ ಹೇಗೆ ಅವರ ಮನೆ ಮತ್ತು ಮಗನಿರಲು ಸಾಧ್ಯʼ ಎಂದು ಕೇಳಿದೆ. ಇಲ್ಲ ಸಾರ್‌ ಈ ಪಾರ್ಕ್‌ ಆಗೋಕೂ ಮುಂಚೆ ಈ ತಾತಪ್ಪಂದೂ ಇಲ್ಲೇ ಮನೆ ಇತ್ತಂತೆ. ಪಾರ್ಕ್‌ ಮಾಡ್ಬೇಕು ಅಂತ ಸರ್ಕಾರದ ಆದೇಶ ಬಂದ ನಂತರ ಇವ್ರ ಮನೆಯನ್ನ ಬಲವಂತವಾಗಿ ಖಾಲಿ ಮಾಡಿಸಿದರಂತೆ, ಆ ಜಾಗ ಇವ್ರದ್ದೂ ಅಂತ ಹೇಳ್ಕೊಳ್ಳೋಕೆ ಯಾವ ದಾಖಲಾತಿನೂ ಇವರ ಬಳಿ ಇರ್ಲಿಲ್ವಂತೆ, ಅದಕ್ಕೆ ಇವರಿಗೆ ಯಾವ ಪರಿಹಾರಾನೂ ಸಿಗಲಿಲ್ವಂತೆ ಮತ್ತು ಇವರ ಮಾತನ್ನ ಯಾರೂ ಕೇಳಲೇ ಇಲ್ವಂತೆ.

ಇದನ್ನೇ ಮನಸ್ಸಿಗೆ ಹಚ್ಕೊಂಡಿದ್ದ ಆ ತಾತಪ್ಪನ ಮಗ ಏನೂ ಮಾಡೋಕೆ ತನ್ನ ಮನೆ ಕಣ್ಮುಂದೆನೇ ಕೈ ಬಿಟ್ಟು ಹೋದರೂ ಏನೂ ಮಾಡೋಕೆ ಆಗ್ತಾ ಇಲ್ಲ ಅನ್ನೋ ಕೊರಗಿನಿಂದ ಅಗೋ ಅದೇ ಮರಕ್ಕೇ ನೇಣು ಹಾಕಿಕೊಂಡು ಸತ್ತೋದ್ನಂತೆʼ ಈ ತಾತಪ್ಪ ಹೇಳ್ತಿರೋದಕ್ಕೆ ಯಾವ ತಲೆ ಬುಡಾನೇ ಇಲ್ಲಾ ಸಾರ್.‌ ತಾತಪ್ಪನ ಮನೆ ಇದ್ದಿದ್ದಕ್ಕೆ, ಮಗ ಇದ್ದಿದ್ದಕ್ಕೆ ಮತ್ತು ಆತನ ಮಗ ಇಲ್ಲೇ ನೇಣಾಕಿಕೋಂಡಿದ್ದಕ್ಕೆ ಯಾವ ಸಾಕ್ಷಿನೂ ಇಲ್ಲ, ಕೊನೆಗೆ ಪೋಲೀಸ್‌ ಕೇಸೂ ಆಗಿಲ್ಲ, ಇಲ್ಯಾರಿಗೂ ಅವಾಗೇನಾಗಿತ್ತು ಅಂತ ಯಾರಿಗೂ ಗೊತ್ತೂ ಇಲ್ಲ, ನಾವೆಲ್ಲ ಇತ್ತೀಚೆಗೆ ಬಂದೋರು ಸಾರ್. ಈ ಏರಿಯಾ ಇಷ್ಟೆಲ್ಲಾ ಡೆವಲಪ್ಪಾಗಿರೋದೇ ಇತ್ತೀಚೆಗೆ.‌

ಈ ತಾತಪ್ಪ ಮಾತ್ರ ಈ ಪಾರ್ಕ್‌ ಶುರು ಆದಾಗಿನಿಂದಲೂ ನಮಗಿಂತಲೂ ಕಡಿಮೆ ಸಂಬಳ ಸಿಕ್ಕರೂ ಇಲ್ಲೇ ವಾಚ್‌ ಮನ್‌ ಆಗಿದಾರಂತೆ. ವಯಸ್ಸಾಯ್ತು ಇನ್ಮೇಲೆ ಮನೇಲಿರಿ ಅಂದ್ರೂ ಕೇಳದೆ ಪಾರ್ಕಿಗೆ ಬಂದು ವಾಚ್‌ ಮನ್‌ ಕೆಲಸ ಮಾಡಿ ಮನೇಗೋಗುತ್ತೆ. ಆ ತಾತಪ್ಪ ಏನೇನೋ ಹೇಳ್ತಾ ಇರುತ್ತೆ ಸಾರ್, ಅದನ್ನೆಲ್ಲಾ ನೀವು ಕೇಳಿ ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡಿʼ ಅಂದರು.

ಇದೀಗ ಈ ಜೇಪಿ ಪಾರ್ಕಿನ ಮಗದೊಂದು ಆಯಾಮ ನನ್ನ ಮುಂದೆ ಬಿಚ್ಚಿಕೊಳ್ಳತೊಡಗಿತು.

‍ಲೇಖಕರು Avadhi

30 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading