ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ತ್ರೀ ವೇಶ್ಯೆಯಾಗಿದ್ದಾಳೆ ಎಂದರೆ ನೂರಾರು ಪುರುಷರು ವ್ಯಭಿಚಾರಿಗಳಾದ್ದಾರೆಂದೇ ಅರ್ಥ’

ವೇಶ್ಯಾವೃತ್ತಿಯನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸುವುದರ ಪರ ಮತ್ತು ವಿರೋದವಾಗಿ ಸಾಕಷ್ಟು ಲೇಖನಗಳು ಬಂದಿವೆ, ಬರುತ್ತಲಿವೆ.

ಆ ಮೂಲಕ ಈ ವೃತ್ತಿಯಲ್ಲಿರುವವರ ನಿಟ್ಟುಸಿರು ಎಲ್ಲರನ್ನೂ ತಲುಪಿ, ಅವರ ಜೀವನಕ್ಕೊಂದು ಘನತೆ, ಸಮಸ್ಯೆಗಳಿಗೆ ಪರಿಹಾರದ ಬೆಳಕು ಸಿಗಬಹುದೇ?

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ

***

ಅವರಿಗೂ ನಾಳೆಯ ನೆಮ್ಮದಿಯ ಕನಸುಗಳಿವೆ

– ಡಾ ಎಸ್ ಬಿ ಜೋಗುರ

ವೇಶ್ಯಾವೃತ್ತಿ ಎನ್ನುವುದು ಅಕ್ಷರ ಪೂರ್ವ ಸಮಾಜದಿಂದಲೂ ಅಸ್ಥಿತ್ವದಲ್ಲಿದೆ ಎನ್ನುವುದನ್ನು ಅನೇಕ ಸಮಾಜಶಾಸ್ತ್ರೀಯ ಅಧ್ಯಯನಗಳು ತೋರಿಸಿಕೊಟ್ಟಿರುವದಿದೆ. ಪ್ರತಿಯೊಂದು ಸಾಮಾಜಿಕ ವ್ಯವಸ್ಥೆಯಲ್ಲಿಯೂ ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳು ಒಂದು ನಿರ್ದಿಷ್ಟವಾದ ನೆಲೆಯಲ್ಲಿ ಸ್ವೀಕೃತ ಎನಿಸಿರುವಂತೆಯೇ, ಆ ವಿಷಯವಾಗಿ ಆಯಾ ಸಮಾಜದ ಸಾಂಸ್ಕೃತಿಕ ನೆಲೆಯಲ್ಲಿ ಗಂಡು-ಹೆಣ್ಣಿನ ಮಧ್ಯೆ ಏರ್ಪಡುವ ಕೆಲ ಲೈಂಗಿಕ ಅಪವರ್ತನೆಗಳ ಬಗೆಗೂ ಚರ್ಚೆಗಳಿವೆ.
ಲುಂಡಬರ್ಗ್ [ಪು-357] ಎನ್ನುವ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ಬಹುತೇಕ ಸಮಾಜಗಳು ಅಗಮ್ಯಗಮನ ಸಂಬಂಧವನ್ನು, ವಿವಾಹೇತರ ಸಂಬಂಧಗಳನ್ನು, ಮಹಿಳೆಯನ್ನು ಅಪಹರಿಸುವದನ್ನು, ಬಲತ್ಕರಿಸುವದನ್ನು ಸಹಿಸುವದಿಲ್ಲ. ಈ ಬಗೆಯ ಲೈಂಗಿಕ ಕೃತ್ಯಗಳನ್ನು ಹಿಂದೆಯೂ ಶಿಕ್ಷಾರ್ಹ ಎಂದು ಪರಿಗಣಿಸಲಾಗಿತ್ತು ಎನ್ನಲಾಗುತ್ತದೆ. ಹಾಗೆಯೇ ಹೆಣ್ಣನ್ನು ಅಂಗನೆ, ಮಾಯಾವಿ, ರಮಾ ಎಂದು ಸಂಬೋಧಿಸುವ ಮೂಲಕ ಸಾಮಾಜಿಕ ಅನುಮತಿಗಳೊಂದಿಗೆಯೇ ಆಕೆಯನ್ನು ಅನುಭೋಗಿಸಿ ಪಾಪಕೂಪಕ್ಕೆ ತಳ್ಳುವ ಪೌರುಷ ಪರಿಪಾಠ ಇಂದು ನೆನ್ನೆಯದಲ್ಲ. ಇನ್ನು ಹೆಣ್ಣನ್ನು ಎಲ್ಲ ರಾಷ್ಟ್ರಗಳಲ್ಲಿಯೂ ಹೀಗೆ ಭೋಗದ ವಸ್ತುವಿನಂತೆ ಬಳಸುವ ಆ ಮೂಲಕ ಪುರುಷ ಅಧಿಪತ್ಯವನ್ನು ಸ್ಥಾಪಿಸುವ ಕ್ರಮ ಇಂದಿನದಲ್ಲ. ಆದರೆ ನಾವೂ ಮನುಷ್ಯರು ನಿಮ್ಮ ಹಾಗೆಯೇ ನಮಗೂ ಆಕಾಂಕ್ಷೆಗಳಿವೆ ನಾವೂ ಬಾಳಿ ಬದುಕಬೇಕು, ನಮ್ಮ ಹಕ್ಕುಗಳನ್ನು ಹೊಸಕಬೇಡಿ ನಮಗೆ ಕಾನೂನಾತ್ಮಕ ಸಂರಕ್ಷಣೆ ಬೇಕು ಎನ್ನುವ ಕೂಗು ಎದ್ದದ್ದೇ ತೀರಾ ತಡವಾಗಿ.
ಮುಂದುವರೆದ ರಾಷ್ಟ್ರಗಳಲ್ಲಿ ಈ ಬಗೆಯ ಕೂಗು ಮೊದಲೇ ಎದ್ದಿದೆಯಾದರೂ ಆಕೆಯ ಸಬಲೀಕರಣದಲ್ಲಿ ಮೈಲಿಗಲ್ಲಾಗುವ ಮಟ್ಟದಲ್ಲಿ ಅದು ಗಮನ ಸೆಳೆದಿಲ್ಲ್ಲ. ಕರ್ಟ್ ಬಾರ್ಟಲ್ ದಂಪತಿಗಳು ತಮ್ಮ ಕೃತಿ ‘ಕ್ರಿಮಿನಲ್ ಬಿಹೇವಿಯರ್’ [ಪು-240] ದಲ್ಲಿ ಹೇಳುವಂತೆ ಅಮೆರಿಕೆಯಂಥಾ ಮುಂದುವರೆದ ರಾಷ್ಟ್ರಗಳಲ್ಲಿಯೂ ನೆವಡಾ ರಾಜ್ಯವನ್ನು ಬಿಟ್ಟರೆ ಮಿಕ್ಕ ಯಾವುದೇ ಕಡೆಯಲ್ಲಿ ವೇಶ್ಯಾವಾಟಿಕೆ ಶಾಸನೀಯ ಸಮ್ಮತಿಯನ್ನು ಪಡೆದಿಲ್ಲ. ಅದು ಅಲ್ಲೂ ಕಾನೂನು ಬಾಹಿರ ಚಟುವಟಿಕೆಯೇ.. ಈ ಬಗೆಯ ಕೃತ್ಯ ನೆರೆಹೊರೆಯಲ್ಲಿಯ ಮೌಲ್ಯಗಳನ್ನು ಅಧ:ಪತನಗೊಳಿಸಿ, ಜನರಲ್ಲಿ ಮಾದಕವ್ಯಸನದಂತಹ ಚಟಗಳನ್ನು ವಿಸ್ತರಿಸುತ್ತದೆ ಎಂದು ಭಾವಿಸಲಾಗುತ್ತದೆ. ವೇಶ್ಯೆಯರು ಅದರಲ್ಲೂ ವಯಸ್ಕ ವೇಶ್ಯೇಯರಿಗೆ ಶಾಸನೀಯವಾದ ಸಮ್ಮತಿಯನ್ನು ನೀಡುವದು ಮಾತ್ರವಲ್ಲದೇ ಅವರನ್ನು ಲೈಂಗಿಕ ರೋಗಗಳ ತಿಳುವಳಿಕೆ ನೀಡುವ ವಿಷಯದಲ್ಲಿ ಬಳಸಿಕೊಳ್ಳಬಹುದಾಗಿದೆ ಎನ್ನುವ ಇತ್ಯಾತ್ಮಕವಾದ ಅಭಿಪ್ರಾಯವೂ ಇದೆ.

ಈ ವೇಶ್ಯಾವಾಟಿಕೆಯಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ತೊಡಗಿರುವದಿದೆ. ಪುರುಷರು ವೇಶ್ಯಾವಾಟಿಕೆಯಲ್ಲಿ ತೊಡಗುವದನ್ನು ‘ಗಿಗಿಲೊ’ ಕಲ್ಚರ್ ಎಂದು ಕರೆಯಲಾಗುತ್ತದೆ. ಇನ್ನು ಪಿಂಪ್ ಗಳಾಗಿ ಬಹುತೇಕವಾಗಿ ಪುರುಷರೇ ಕಾರ್ಯ ನಿರ್ವಹಿಸುವದಿದೆ. ಹೀಗಿರುವಾಗಲೂ ಮಹಿಳಾ ಖೈದಿಗಳಲ್ಲಿ 1/3 ಭಾಗದಷ್ಟು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರೇ ಇರುವದಿದೆ. ಸಾಂಪ್ರದಾಯಿಕವಾದ ಹಿನ್ನೆಲೆಯಲ್ಲಿಯೇ ವೇಶ್ಯಾವಾಟಿಕೆಯ ಕಾರಣಗಳನ್ನು ಹುಡುಕುವವರು ಮತ್ತದೇ ಚಂಚಲ ಮನಸು, ವಿಕಾರ ಲೈಂಗಿಕ ಕಾಮನೆ, ಭಾವನಾತ್ಮಕ ಗೊಂದಲ, ಲೈಂಗಿಕ ಅತೃಪ್ತಿ ಮುಂತಾದವುಗಳನ್ನು ಮುಂದೆ ಮಾಡಿ ಮಾತನಾಡುವದಿದೆ. ಆದರೆ ವೇಶ್ಯಾವಾಟಿಕೆೆಗೆ ಬರುವವರು ಜೀವನದ ವಿಭಿನ್ನ ನೆಲೆಗಳಿಂದ, ಹಿನ್ನೆಲೆಯಿಂದ ಬಂದವರು. ವಿಭಿನ್ನ ಶಿಕ್ಷಣ, ಕೌಟುಂಬಿಕ ಹಿನ್ನೆಲೆ, ಆಸಕ್ತಿ ಹೊಂದಿದವರು. ಅವರಲ್ಲಿಯೇ ಮತ್ತೆ ಕೆಲವು ಬೇರೆ ಬೇರೆ ಸ್ತರಗಳಿವೆ. ರಸ್ತೆಯ ಬದಿ ನಿಂತು ಗ್ರಾಹಕರನ್ನು ಅರಸುವವರು ಇರುವಂತೆ ಕಾಲ್ ಗರ್ಲ್ಸ್ ಗಳಾಗಿ ಭವ್ಯ ಹೊಟೆಲಗಳಲ್ಲಿ ವ್ಯವಹರಿಸುವವರೂ ಇದ್ದಾರೆ. ಇಬ್ಬರೂ ಒಂದೇ ವೃತ್ತಿಯವರಾದರೂ ಕಾರ್ಯನಿರ್ವಹಿಸುವ ಪರಿಸರ, ಕ್ರಮ, ತಂತ್ರಗಳು ವಿಭಿನ್ನ. ಸಿಗ್ಮಂಡ್ ಫ್ರಾಯಿಡ್ ರಂಥಾ ಚಿಂತಕರು ಈ ವೇಶ್ಯಾವಾಟಿಕೆ ಎನ್ನುವುದು ‘ವ್ಯಕ್ತಿಗತ ಮನ:ಸ್ಥಿತಿಯ ಪರಿಣಾಮವೇ ಹೊರತು ಸಾಮಾಜಿಕ ಪರಿಸರದ ಪರಿಣಾಮವಲ್ಲ’ ಎನ್ನುವದಿದೆ. ಓರ್ವ ಸ್ತ್ರೀ ಕೇವಲ ಮನೋವಿಕ್ಷಿಪ್ತತೆಯಿಂದಾಗಿಯೇ ಈ ಬಗೆಯ ವೃತ್ತಿಗಿಳಿಯುತ್ತಾಳೆ ಎನ್ನುವ ಫ್ರಾಯಿಡ್ ನ ಅಭಿಪ್ರಾಯ ಎಷ್ಟು ಸಮರ್ಥನೀಯ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ.
ಇನ್ನು ವೇಶ್ಯೆಯಾದವಳು ಬದುಕಿನ ಎಲ್ಲ ಹಕ್ಕುಗಳಿಂದ ವಂಚಿತಳಾಗಬೇಕೆಂದೇನೂ ಇಲ್ಲ. ಅವಳ ವೃತ್ತಿಯನ್ನು ಕಾನೂನು ಬದ್ಧಗೊಳಿಸುವಲ್ಲಿ ಒಂದು ಬಗೆಯ ನೈತಿಕತೆಯೂ ಇದೆ. ಆಕೆ ವೇಶೆ ನಂತರ ಅದಕ್ಕಿಂತಲೂ ಮೊದಲು ಆಕೆ ಮನುಷ್ಯಳು ಎನ್ನುವದನ್ನು ಮರೆಯಲಾದೀತೆ..? ಯಾವುದೋ ಒಂದು ಸನ್ನಿವೇಶದ ಒತ್ತಡಕ್ಕೆ ಸಿಲುಕಿ ಈ ವೃತ್ತಿಗೆ ಬಂದ ಆಕೆ ತನ್ನತನವನ್ನು ಹೂತು ಹಾಕಿಯೇ ಬದುಕಬೇಕೆಂಬ ಒತ್ತಾಸೆಯೇ ಸರಿಯಲ್ಲ. ಅನೇಕ ಸಮಾಜಶಾಸ್ತ್ರಜ್ಞರು ವೇಶ್ಯೆಯರನ್ನು ಸಂದರ್ಶನ ಮಾಡಿರುವದಿದೆ. ಹಾಗೆ ಮಾಡಲಾದ ಸಂದರ್ಶನ ಒಂದರಲ್ಲಿ ಓರ್ವ ವೇಶ್ಯೆ ಮಾತನಾಡಿದ್ದು ಹೀಗೆ ‘ ನಾವು ಈ ವೃತ್ತಿಯಲ್ಲಿ ಬರೀ ಮೈ ಮಾರುವುದು ಮಾತ್ರವಲ್ಲ, ನಮ್ಮ ಮಾನವಂತಿಕೆೆಯನ್ನೇ ಮಾರುತ್ತೇವೆ. ನಾವು ಹಾಸಿಗೆಯಲ್ಲಿ ಕಳೆದುಕೊಂಡದ್ದು ಏನೂ ಅಲ್ಲ. ನಮ್ಮ ಘನತೆ ಗೌರವವನ್ನೇ ನಾವು ಹರಾಜಿಗಿಡುತ್ತೇವೆ’ ಎಂದು ಅತ್ಯಂತ ಖಿನ್ನಳಾಗಿ ನುಡಿದ ಬಗ್ಗೆ ಯಾರೇ ಆಗಲಿ ಗಂಭೀರವಾಗಿ ಯೋಚಿಸುವಂಥದು. ಅಷ್ಟಕ್ಕೂ ಆಕೆ ತನ್ನ ಮಾನ, ಘನತೆ ಒತ್ತೆ ಇಟ್ಟಿದ್ದು ಕೇವಲ ತನಗಾಗಿ.. ತನ್ನ ಸ್ವಾರ್ಥಕ್ಕಾಗಿ ಎಂದು ನಾವು ಭಾವಿಸುವದಾದರೆ ಅದಕ್ಕಿಂತ ರೂಕ್ಷ ವಿಚಾರ ಇನ್ನೊಂದಿಲ್ಲ.
ಫ್ರೆಂಚ ದೇಶದ ಸಮಾಜಶಾಸ್ತ್ರಜ್ಞ ಎಮೈಲ್ ಡರ್ಖಹೀಮ್ ಈ ವೇಶ್ಯಾವಾಟಿಕೆಯನ್ನು ‘ಸಮಾಜದ ಸುರಕ್ಷಿತ ಗೋಡೆ’ ಎಂದು ಕರೆದಿರುವದಿದೆ. ಆ ಮೂಲಕ ಒಂದು ಸಮಾಜದಲ್ಲಿಯ ಲೈಂಗಿಕ ಅಪರಾಧಗಳನ್ನು ಪರೋಕ್ಷವಾಗಿ ನಿಯಂತ್ರಿಸುವಲ್ಲಿ ಈ ವೇಶ್ಯಾವಾಟಿಕೆ ಕೆಲಸ ಮಾಡುತ್ತದೆ ಎನ್ನುವ ವಿಚಾರವನ್ನೂ ಅಲ್ಲಗಳೆಯುವಂತಿಲ್ಲ. ನಮ್ಮ ಸಮಾಜ ಹೆಣ್ಣನ್ನು ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ, ಗೆಳತಿಯಾಗಿ, ಪ್ರೇಯಸಿಯಾಗಿ ಎಲ್ಲ ಸ್ಥಾನಗಳನ್ನು ಸಹ್ಯ ಎಂದು ಗುರುತಿಸಿ ಈ ಎಲ್ಲ ಸ್ಥಾನಗಳಿಗಿಂತ ವಿಭಿನ್ನವಾದ ಸ್ಥಾನ ನಿರ್ವಹಣೆಯ ವೇಶ್ಯೆ ಎನ್ನುವ ಅಂತಸ್ತಿಗೆ ಮಾತ್ರ ಅದೇಕೆ ಅಸಹ್ಯವನ್ನು ಲೇಪಿಸಲಾಗಿದೆ..? ಅವರನ್ನು ಕೂಡಾ ಮುಖ್ಯ ವಾಹಿನಿಯ ಭಾಗವೆಂದು ಪರಿಗಣಿಸಬಾರದೇಕೆ..? ಅವಳು ಲೈಂಗಿಕ ವೃತ್ತಿಯಲ್ಲಿದ್ದಾಳೆನ್ನುವುದು ಅವಳನ್ನು ಮತ್ತಷ್ಟು ಕಾಲ ಶೋಷಣೆಯಲ್ಲಿ ಕೊಳೆಯಲು ಅವಕಾಶ ಮಾಡಿಕೊಡಬೇಕೆ..? ಆಕೆಯ ವೃತ್ತಿಯನ್ನು ಕಾನೂನು ಸಮ್ಮತಗೊಳಿಸುವ ಮೂಲಕ ಅವಳಿಗೆ ನಾವು ಮಹತ್ತರವಾದುದನ್ನಂತೂ ಕೊಟ್ಟಂತಲ್ಲ. ಕೊನೆಯ ಪಕ್ಷ ಅವಳೂ ಮನುಷ್ಯಳು.. ಅವಳಿಗೂ ಮಿಕ್ಕವರಂತೆ ಸ್ವಾವಲಂಬನೆ ಮತ್ತು ಸ್ವಾಭಿಮಾನಿಯಾಗಿ ಬದುಕುವ ಎಲ್ಲ ಹಕ್ಕುಗಳಿವೆ ಎನ್ನುವುದನ್ನು ಸಾಬೀತು ಮಾಡಬೇಕಿದೆ.
ನಾವು ಅನೇಕ ಸಿನೇಮಾಗಳಲ್ಲಿ ಎಮೋಶನಲ್ ಆಗಿರುವ ಡೈಲಾಗ್ ಒಂದನ್ನು ಕೇಳಿದ್ದೇವೆ. ಓರ್ವ ಸ್ತ್ರೀ ವೇಶ್ಯೆೆಯಾಗಿದ್ದಾಳೆ ಎಂದರೆ ನೂರಾರು ಪುರುಷರು ವ್ಯಭಿಚಾರಿಗಳಾದ್ದಾರೆಂದೇ ಅರ್ಥ. ಇನ್ನು ಆ ಸ್ತ್ರೀ ಆ ವೃತ್ತಿಗೆ ಬರುವಲ್ಲಿಯೂ ಅನೇಕ ಬಾರಿ ಪುರುಷರೇ ಕಾರಣವಾಗಿರುವದಿದೆ. ಅದು ಗಂಡ, ತಂದೆ, ಮಾವ..ಹೀಗೆ ಯಾರೋ ಆಗಿರಬಹುದು. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಎಲೆನಾರ್ ಮಿಲ್ಲರ್ ಎನ್ನುವವರು ‘ಸ್ಟ್ರೀಟ್ ವುಮನ್’ ಎನ್ನುವ ಕೃತಿಯನ್ನು ರಚಿಸಿದ್ದಾರೆ. ಸುಮಾರು 64 ವೇಶ್ಯೆಯರ ಬಗ್ಗೆ ಅಧ್ಯಯನ ಮಾಡಿದ ಅವರು ಅದರಲ್ಲಿ ಓರ್ವ ತರುಣಿ ಆಕೆಯ ತಂದೆಯಿಂದಾಗಿಯೇ ಆ ವೃತ್ತಿಗೆ ಬಂದ ಬಗ್ಗೆ ಹೇಳುತ್ತಾಳೆೆ. ಆ ಯುವತಿ ಪಕ್ಕದ ಮನೆಯಲ್ಲಿಯ ಕಪ್ಪು ಹುಡುಗನೊಂದಿಗೆ ನಿಂತು ಮಾತನಾಡುವದನ್ನು ಕಂಡದ್ದೇ ಆಕೆಯ ತಂದೆ ಕೆಂಡಾಮಂಡಲವಾಗಿ ಆಕೆಯನ್ನು ‘ಸೂಳೆ’ ಎಂದು ಸಿಟ್ತಿನಿಂದ ಕರೆದ. ಆ ದಿನದಿಂದ ಆ ಹುಡುಗಿ ಮನೆ ಬಿಟ್ಟು ನಡೆದಳು. ವೇಶ್ಯಾವೃತ್ತಿಗೆ ಇಳಿದಳು. ಈ ವೃತ್ತಿಯಲ್ಲಿರುವವರ ಮೇಲಿನ ದೌರ್ಜನ್ಯಗಳನ್ನು ತಪ್ಪಿಸಲು, ಇವರಲ್ಲಿ ಜೀವನ ಪ್ರೀತಿ ಮತ್ತು ಆತ್ಮ ವಿಶ್ವಾಸ ಮೂಡಿಸಲು, ಇವರ ಆರೋಗ್ಯದ ಬಗ್ಗೆ ಗಮನ ಹರಿಸಲು, ತಲೆಹಿಡುಕರ ಉಪಟಳವನ್ನು ತಪ್ಪಿಸಲು, ಅಪ್ರಾಪ್ತ ಹುಡುಗಿಯರನ್ನು ಇಲ್ಲಿ ನೂಕುವದನ್ನು ತಡೆಯಲು ಎಲ್ಲಕ್ಕಿಂತಲೂ ಮುಖ್ಯವಾಗಿ ಇವರ ಹಕ್ಕುಗಳನ್ನು ಸಂರಕ್ಷಿಸುವ ಜೊತೆಗೆ ಇವರಿಗೂ ಒಂದು ನೆಮ್ಮದಿಯ ನಾಳೆಯನ್ನು ಸಾಧ್ಯವಾಗಿಸಲು ಈ ವೃತ್ತಿಯನ್ನು ಕಾನೂನು ಚೌಕಟ್ಟಿಗೆ ಒಳಪಡಿಸುವದು ಕ್ಷೇಮ.

‍ಲೇಖಕರು G

10 October, 2014

3 Comments

  1. srinivasamurthy

    “ಇನ್ನು ವೇಶ್ಯೆಯಾದವಳು ಬದುಕಿನ ಎಲ್ಲ ಹಕ್ಕುಗಳಿಂದ ವಂಚಿತಳಾಗಬೇಕೆಂದೇನೂ ಇಲ್ಲ. ಅವಳ ವೃತ್ತಿಯನ್ನು ಕಾನೂನು ಬದ್ಧಗೊಳಿಸುವಲ್ಲಿ ಒಂದು ಬಗೆಯ ನೈತಿಕತೆಯೂ ಇದೆ.” ಈ ನಿಮ್ಮ ಹೇಳಿಕೆಯಿಂದಲೇ ನೀವು ವೇಶ್ಯವಾಟಿಕೆಯನ್ನು ಕಾನೂನುಗೊಳಿಸಬೇಕೆಂದು ಹೇಳಿದ್ದೀರೆಂದುಕೊಂಡು ನಾನು ಹೇಳುತ್ತಿರುವುದೇನೆಂದರೆ, ಮುಂಬಾಯ್ ಹಾಗೂ ಕೋಲ್ಕತ್ತಗಳಲ್ಲಿ ಇದನ್ನು ಕಾನೂನುಗೊಳಿಸಿದ್ದರೂ ಅಲ್ಲಿ ರವ್ಡಿಗಳ ನೆರಳಲ್ಲಿಯೇ ಈ ಕಸುಬು ನಡೆಯುತ್ತಿದೆಯಲ್ಲವೆ? ಕಾನೂನುಗೊಂಡ ಕಸುಬುಗಳಲ್ಲಿ ಯಾವುದೇ ತೆರನ ರವ್ಡಿಗಳ ಅಸ್ತಿತ್ವವಿರಬಾರದು. ನಿಮ್ಮಲ್ಲಿ ಕಸುಬುಗಳಿಗೆ ಸಂಬಂದಿಸಿದಂತೆ ಅರಿವಿನ ಕೊರತೆ ಇದ್ದಿರಬಹುದೇನೋ ಅನಿಸಿದೆ. ಬದುಕಲಿಕ್ಕೆ ಇದೊಂದೇನ ಕಸುಬು ಬೇರೆ ಕಸುಬುಗಳೇ ಇಲ್ಲವೆ ಜಗತ್ತಿನಲ್ಲಿ ಸರಿಸಾಟಿಯಾಗಿ ಬದುಕಲಿಕ್ಕೆ? ಒಂದು ಕಡೆ ದೇವದಾಸಿ ಪದ್ದತಿ ಬೇಡಾ ಅಂತ ಕಿರುಚಾಡುತ್ತಾರೆ. ಮತ್ತೊಂದು ಕಡೆ ವೇಶ್ಯವಾಟಿಕೆ ಕಾನೂನುಗೊಳ್ಳಬೇಕು ಅಂತ ಅರುಚಾಡುತ್ತಾರೆ. ವೇಶ್ಯವಾಟಿಕೆ ನಿಮ್ಮ ಪ್ರಕಾರ ಕಾನೂನುಗೊಂಡರೆ ಅದು ನಯ್ತಿಕತೆ. ದೇವದಾಸಿ ಅಮಾನುಶ ಅಲ್ಲವೆ ಕೆಲವರ ಪ್ರಕಾರ?

  2. Anonymous

    REALY VERY GOOD ARTICLE

  3. Raman

    Let me tell a plain truth here. At least int he western societies, women became prostitutes merely for money. It’s not simply the ‘sexual act’, thee are many variants of it – such as lap dance to other 420 activities. People don’t force them to do so. However, the situation in 3rd world countries is different. Some Women are victimized to become prostitutes.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading