ಜೀವ ವಿಕಾಸದಲ್ಲೇ ಗಂಡು ಹೆಣ್ಣಿನ ನಡುವೆ ತಾರತಮ್ಯ ಇದೆ ಎಂದು ಜೀವಶಾಸ್ತ್ರಜ್ಞರು ಹೇಳುವುದು ಸುಳ್ಳು ಎಂಬುದನ್ನು ಸಿಮೊನ್ ತೋರಿಸಿದರು. ಧಾರ್ಮಿಕ ಗ್ರಂಥಗಳಲ್ಲಿ ಕಿಕ್ಕಿರಿದಿರುವ ಅತಾರ್ಕಿಕವಾದ ಮಾತುಗಳು ಸಾವಿರಾರು ವರ್ಷ ಹೆಣ್ಣನ್ನು ಸೆರೆಯಾಳಾಗಿಸಿದ ಸಂಚನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಜಗತ್ತಿನ ವಿವಿಧ ಭಾಗಗಳ ಸಾಹಿತ್ಯಗಳಲ್ಲಿ ನುಸುಳಿರುವ ಗಂಡು ಪೂರ್ವಗ್ರಹ ಎಂಥದೆಂಬುದನ್ನು ತೋರಿಸಿಕೊಟ್ಟರು; ಗೇಲಿ, ವ್ಯಂಗ್ಯದ ಮೂಲಕ ಸ್ತ್ರೀ ದನಿಯನ್ನು ದಮನ ಮಾಡಿರುವ ರೀತಿಯನ್ನು ಕಾಣಿಸಿದರು.
_____________
ನಟರಾಜ್ ಹುಳಿಯಾರ್
“ದ ಸೆಕೆಂಡ್ ಸೆಕ್ಸ್” ಪುಸ್ತಕ ಬರೆದ ಸಿಮೊನ್ ದ ಬೋವಾ ಎಂಬ ಫ್ರೆಂಚ್ ಲೇಖಕಿ ಮೊದಲು ಕಾದಂಬರಿ ಬರೆಯುತ್ತಿದ್ದರು. ಬರಬರುತ್ತಾ ಹೆಣ್ಣನ್ನು ಸಮಗ್ರವಾಗಿ ಅರಿಯುವ ಪುಸ್ತಕವೊಂದು ಸುಮಾರು ಹತ್ತು ಹದಿನೈದು ವರ್ಷಗಳ ಕಾಲ ಅವರ ಒಳಗೇ ಬೆಳೆಯತೊಡಗಿತು. ೧೯೪೯ರಲ್ಲಿ “ದ ಸೆಕೆಂಡ್ ಸೆಕ್ಸ್”(ಅಂದರೆ “ಎರಡನೇ ಲಿಂಗ”; “ಹೆಣ್ಣು”) ಪ್ರಕಟವಾದಾಗ ಅದನ್ನು ಕಂಡ ಬುದ್ಧಿಜೀವಿಗಳು ಜಗತ್ತಿನ ದೊಡ್ಡ ಚಿಂತಕರನ್ನು ಹಾಗೂ ಹೆಣ್ಣನ್ನು ಕುರಿತ ಆವರೆಗಿನ ಪುರಾಣಗಳು, ಜ್ಞಾನ, ಅಜ್ಞಾನ, ವಾಸ್ತವಗಳನ್ನೆಲ್ಲ ಪರೀಕ್ಷೆಗೆ ಒಳಪಪಡಿಸಿದ್ದ ಸಿಮೊನ್ ರ ಧೈರ್ಯ ಕಂಡು ವಿಸ್ಮಯಗೊಂಡರು. ಕೆಲವರು ಅವರನ್ನು ಗೇಲಿ ಮಾಡಿದರು. ಆದರೆ ಬರಬರುತ್ತಾ ಆ ಪುಸ್ತಕ ಇಂಗ್ಲಿಷಿಗೆ ಅನುವಾದವಾಗಿ ಜಗತ್ತಿನ ಗಂಡು, ಹೆಣ್ಣುಗಳ ಪ್ರಜ್ಞೆಯನ್ನು ಕಲಕತೊಡಗಿದ ಮೇಲೆ ಸಿಮೊನ್ ರನ್ನು ಕಂಡು ಭಯ ಬೆರೆತ ಗೌರವ ಎಲ್ಲೆಡೆ ಹಬ್ಬತೊಡಗಿತು.
ಈ ಪುಸ್ತಕ ಜಗತ್ತಿನಲ್ಲಿ ಸ್ತ್ರೀಯರನ್ನು ನೋಡುವ ಬಗೆಯನ್ನು ಕ್ರಾಂತಿಕಾರಕವಾಗಿ ಬದಲಿಸಿದ್ದು ಈಗ ಇತಿಹಾಸ. ಆದರೆ ಈ ಪುಸ್ತಕ ಮಾತ್ರ ಇತಿಹಾಸ ಸೇರದೆ, ಇವತ್ತಿಗೂ ಮರುಹುಟ್ಟು ಪಡೆಯುತ್ತಲೇ ಇದೆ. ಯಾಕೆಂದರೆ, ಇವತ್ತು ಜಗತ್ತಿನಾದ್ಯಂತ ಸ್ತ್ರೀವಾದಿಗಳು ಹಾಗೂ ಸ್ತ್ರೀಪರ ಚಿಂತಕ, ಚಿಂತಕಿಯರ ಬಾಯಲ್ಲಿ ಸಿಮೊನ್ ರ ಮಾತುಗಳಿವೆ; ನುಡಿಗಟ್ಟುಗಳಿವೆ. ಹೆಣ್ಣನ್ನು ಗ್ರಹಿಸುವ ರೀತಿಯಲ್ಲಿ ಸಿಮೊನ್ ರ ನೋಟಗಳಿವೆ. ಡಾ. ಎಚ್ ಎಸ್ ಶ್ರೀಮತಿಯವರು ನಾಲ್ಕು ತಿಂಗಳು ಕಷ್ಟಪಟ್ಟು ಕನ್ನಡಕ್ಕೆ ತಂದಿರುವ ಈ ಪುಸ್ತಕ ಓದುತ್ತಿರುವಾಗ, ಸಿಮೊನ್ ಗೆ ಈ ಥರದ ನಿರ್ಭಿಡೆಯ ಬರವಣಿಗೆ ಮಾಡಬಲ್ಲ ಬೌದ್ಧಿಕ ಸ್ವಾತಂತ್ರ್ಯವಿದ್ದ ಪಶ್ಚಿಮದ ಬಗ್ಗೆ ಗೌರವ ಹುಟ್ಟುತ್ತದೆ. ಸಿಮೊನ್ ಅಸ್ತಿತ್ವವಾದಿ ಚಿಂತಕ ಸಾರ್ತರ್ ನ ಗೆಳತಿಯಾಗಿದ್ದರು. ಈ ಸಂಬಂಧದಿಂದ ಸಾರ್ತರ್ ಹಾಗೂ ಸಿಮೊನ್ ಇಬ್ಬರೂ ಅದ್ಭುತವಾದ ಬೌದ್ಧಿಕ ಚೈತನ್ಯ ಪಡೆದಿದ್ದರು. ಸಿಮೊನ್ ರ ಇನ್ನೊಬ್ಬ ಗೆಳೆಯ ಅಮೆರಿಕಾದ ಕಪ್ಪು ಸ್ತ್ರೀಯರ ಸ್ಥಿತಿಯ ಕಡೆಗೆ ಸಿಮೊನ್ ಗಮನ ಸೆಳೆದ. ಆಗ ಸಿಮೊನ್ ಸ್ತ್ರೀಯರನ್ನು ಅರಿಯುವ ಕ್ರಮ ಬೇರೆ ದಿಕ್ಕು ಹಿಡಿಯಿತು. ಈ ಬಗೆಯ ಮುಕ್ತ ಸ್ನೇಹದಿಂದ ಸಿಮೊನ್ ವ್ಯಕ್ತಿತ್ವಕ್ಕೆ ಸಿಕ್ಕ ಸ್ಫೂರ್ತಿ ಕೂಡ ನನ್ನನ್ನು ಸೆಳೆಯಿತು.
ನಾವು ಬಳಸುವ “ಯುಗಪ್ರವರ್ತಕ” ಮೊದಲಾದ ತುಕ್ಕು ಹಿಡಿದ ಮಾತುಗಳು ನಿಜಕ್ಕೂ ಅನ್ವಯವಾಗುವುದು “ದ ಸೆಕೆಂಡ್ ಸೆಕ್ಸ್” ಪುಸ್ತಕಕ್ಕೆ. ಏಂಗೆಲ್ಸ್, ಫ್ರಾಯ್ದ್ ರಂಥ ಶ್ರೇಷ್ಠ ಚಿಂತಕರ ಆಧುನಿಕ ವಿಶ್ಲೇಷಣೆಗಳ ಹಿಂದೆ ಕೂಡ ಪುರುಷ ತಾತ್ವಿಕತೆಯೇ ಕೆಲಸ ಮಾಡುವುದನ್ನು ಸಿಮೊನ್ ಕಂಡುಕೊಂಡರು. ಜೀವ ವಿಕಾಸದಲ್ಲೇ ಗಂಡು ಹೆಣ್ಣಿನ ನಡುವೆ ತಾರತಮ್ಯ ಇದೆ ಎಂದು ಜೀವಶಾಸ್ತ್ರಜ್ಞರು ಹೇಳುವುದು ಸುಳ್ಳು ಎಂಬುದನ್ನು ಸಿಮೊನ್ ತೋರಿಸಿದರು. ಧಾರ್ಮಿಕ ಗ್ರಂಥಗಳಲ್ಲಿ ಕಿಕ್ಕಿರಿದಿರುವ ಅತಾರ್ಕಿಕವಾದ ಮಾತುಗಳು ಸಾವಿರಾರು ವರ್ಷ ಹೆಣ್ಣನ್ನು ಸೆರೆಯಾಳಾಗಿಸಿದ ಸಂಚನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಜಗತ್ತಿನ ವಿವಿಧ ಭಾಗಗಳ ಸಾಹಿತ್ಯಗಳಲ್ಲಿ ನುಸುಳಿರುವ ಗಂಡು ಪೂರ್ವಗ್ರಹ ಎಂಥದೆಂಬುದನ್ನು ತೋರಿಸಿಕೊಟ್ಟರು; ಗೇಲಿ, ವ್ಯಂಗ್ಯದ ಮೂಲಕ ಸ್ತ್ರೀ ದನಿಯನ್ನು ದಮನ ಮಾಡಿರುವ ರೀತಿಯನ್ನು ಕಾಣಿಸಿದರು.
ರೋಮ್ ನ ಮಹಿಳೆಯರಿಗೆ ಆ ಕಾಲದಲ್ಲಿ ಕೊಂಚ ಹೆಚ್ಚು ಸ್ವಾತಂತ್ರ್ಯವಿತ್ತು. ಆ ಕಾಲದ ಮಹಿಳೆಯರು ವ್ಯಾಕರಣ ತಜ್ಞರ ಜೊತೆ ಜಗಳವಾಡುತ್ತಿದ್ದರು ಎಂದು ಜುವೆನೆಲ್ ಎಂಬ ಲೇಖಕ ಟೀಕಿಸುತ್ತಾನೆ. ಈ ಪ್ರಸಂಗ ಬಹಳ ಸಾಂಕೇತಿಕವಾಗಿದೆ. ಯಾಕೆಂದರೆ, ವ್ಯಾಕರಣ ಹಾಗೂ ಸಾಹಿತ್ಯ ಮೀಮಾಂಸೆಯ ಅನೇಕ ನಿಯಮಗಳನ್ನು ಪುರುಷರು ರೂಪಿಸುತ್ತಾ ಬಂದಿದ್ದಾರೆ. ಹೀಗಾಗಿ ಮಹಿಳೆಯೊಬ್ಬಳು ಆ ನಿಯಮಗಳನ್ನು ಮುರಿದು ತನ್ನದೇ ಆದ ಭಾಷೆಯೊಂದನ್ನು, ತನ್ನದೇ ಆದ ಹೇಳುವ ಕ್ರಮವನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅಂಥ ಆರಂಭಿಕ ಪ್ರಯತ್ನವನ್ನು ಇತಿಹಾಸದಲ್ಲಿ ಗೇಲಿ ಮಾಡಲಾದ ರೀತಿಯನ್ನು ಸಿಮೊನ್ ವಿಶ್ಲೇಷಿಸಿರುವುದು ಇವತ್ತಿಗೂ ಅರ್ಥಪೂರ್ಣ.
ಈ ಲೇಖಕಿ ಹೆಣ್ಣಿನ ದೇಹ, ಮನಸ್ಸು, ಚೈತನ್ಯಗಳನ್ನು ತೀರಾ ಖಾಸಗಿಯಾಗಿ ಹಾಗೂ ಇಡೀ ಸ್ತ್ರೀ ಕುಲಕ್ಕೆ ಅನ್ವಯವಾಗುವ ಹಾಗೆ ಗ್ರಹಿಸಿರುವ ಕ್ರಮ ಅದ್ಭುತವಾದುದು ಎಂಬ ಬಗ್ಗೆ ಯಾರಿಗೂ ಅನುಮಾನ ಇರಲಾರದು. ಅದೆಲ್ಲದರ ನಡುವೆಯೂ ಈ ಕೃತಿ ಸ್ತ್ರೀಯ ಬಗೆಗೆ ವಿಮರ್ಶಾತ್ಮಕವಾಗಿಯೂ ಇದೆ ಎಂಬುದನ್ನು ಮರೆಯಬಾರದು. ಈ ಪುಸ್ತಕ ಬೌದ್ಧಿಕ ಪರಿಸರದಿಂದಾಚೆಗೆ ಪ್ರಯಾಣ ಮಾಡಿ, ರಾಜಕೀಯ, ಸಾಮಾಜಿಕ ಚಿಂತನೆಗಳ ವಲಯವನ್ನೂ ಪ್ರಭಾವಿಸಿದೆ. ಈ ಪುಸ್ತಕದಿಂದ ಕವಲೊಡೆದ ರೆಂಬೆಗಳಂತೆ ಜಗತ್ತಿನ ಸಾವಿರಾರು ಪುಸ್ತಕಗಳು ಹುಟ್ಟಿವೆ. ಆ ಪುಸ್ತಕಗಳು ಹೆಣ್ಣಿನ ಸಮಾನತೆಯ ಪ್ರಶ್ನೆಯನ್ನು ಕೇಂದ್ರ ರಂಗಕ್ಕೆ ತಂದಿವೆ ಹಾಗೂ ಸ್ತ್ರೀಯ ಸ್ಥಾನವನ್ನು ಕ್ರಾಂತಿಕಾರಕವಾಗಿ ಬದಲಿಸಿವೆ. ಪಶ್ಚಿಮದ ರಾಜಕೀಯ ವ್ಯವಸ್ಥೆ ಹಾಗೂ ಪಾಲಿಸಿಗಳನ್ನು ರೂಪಿಸುವ ಶಕ್ತಿಗಳ ಜೊತೆಗೆ ಸ್ತ್ರೀವಾದ ಸಾಧಿಸಿದ ಸಂಬಂಧವನ್ನು ಇವತ್ತು ಕನ್ನಡ ಸ್ತ್ರೀವಾದಿ ಚಿಂತನೆ ಕೂಡ ಸಾಧಿಸಬೇಕಾದ ಅಗತ್ಯವಿದೆ ಅನ್ನಿಸುತ್ತದೆ. ಸ್ತ್ರೀವಾದಿ
ಚಿಂತನಾ ಲೋಕದಲ್ಲಿ ಕೆಳಜಾತಿ ಹಾಗೂ ಕೆಳವರ್ಗಗಳಿಂದ ಬಂದ ಚಿಂತಕಿಯರು ಹೆಚ್ಚತೊಡಗಿದ ಹಾಗೆ ಈ ಸಂಬಂಧ ಹೆಚ್ಚು ವ್ಯಾಪಕವಾಗುತ್ತದೆ ಎಂದು ನನ್ನ ನಂಬಿಕೆ. ಯಾವುದೇ ವಾದ ಅಕಡೆಮಿಕ್ ವಲಯದ ದಂತಗೋಪುರದಿಂದ ಹೊರಬಂದ ಹಾಗೆಲ್ಲ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಅಕಡೆಮಿಕ್ ಶ್ರದ್ಧೆಯಿಂದ ಹುಟ್ಟಿದ ಆಳವಾದ ಚಿಂತನೆಗಳ ಫಲ ಜನರಿಗೆ ದಕ್ಕುವ ಹಾಗೆ ಮಾಡುವ ಹೊಣೆ ಕೂಡ ಚಿಂತಕ, ಚಿಂತಕಿಯರ ಮೇಲಿರುತ್ತದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಆ ಕೆಲಸ “ದ ಸೆಕೆಂಡ್ ಸೆಕ್ಸ್” ಪುಸ್ತಕದ ಕನ್ನಡ ರೂಪ ಕುರಿತ ಚರ್ಚೆಯ ಮೂಲಕ ಆರಂಭವಾಗಲಿದೆಯೆಂಬುದು ನಮ್ಮಂಥವರ ನಿರೀಕ್ಷೆ.






0 Comments