
ಸೋಮು ರೆಡ್ಡಿ
ಸೃಜನಶೀಲ ಗಾಂಭೀರ್ಯದ ಘನ ಸಾಹಿತ್ಯದ ‘ಎತ್ತರ’
‘ಕತ್ಲೆಕಾನು’ ಎನ್ನುವುದು ಹೆಗ್ಗಾನಿನ ಕಾಡು ಹಳ್ಳಿಯೋ ನಮ್ಮೊಳಗಿನ ಅದೃಶ್ಯ ಆಧುನಿಕ ಊರೋ?’
‘ಎತ್ತರ ಅನ್ನುವುದು ಎಲ್ಲದಕ್ಕೂ ಪ್ರಶ್ನೆಯೋ ಉತ್ತರವೋ?’
ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ದ ಐದು ನೂರಾ ಮೂವತ್ತು ಪುಟಗಳ ಘನಗಾತ್ರದ ಘನ ಓದಿನ ನಂತರ ನಮ್ಮಲ್ಲಿ ಈ ಪ್ರಶ್ನೆಗಳು ಮೂಡುತ್ತವೆ. ಕಾಡು ಹಳ್ಳಿ ಕತ್ಲೆಕಾನು ಮತ್ತು ಸುತ್ತುವರೆದ ದಟ್ಟಕಾನನ ಕುರಿತಾದ ದಟ್ಟ ವಿವರಣೆಗಳು ಓದುಗನನ್ನ ಕೊನೆಯ ಪುಟದವರೆಗೂ ಕೈಬಿಡದೇ ಕರೆದೊಯ್ಯುತ್ತವೆ. ವಿಶೇಷ ಓದಿನ ಸುಖಕ್ಕೆ ನನಗೆ ಸಾಕ್ಷಿಯಾಗಿ ಕಂಡು ಬಂತು ಈ ಕಾದಂಬರಿ.
ಅದೆಷ್ಟೋ ಬಗೆಯ ಗಿಡ-ಮರ-ಬಳ್ಳಿಗಳ, ಪ್ರಾಣ -ಪಕ್ಷಿಗಳ, ಕೀಟ ಸರೀಸೃಪಗಳ, ಜಲಚರ ಹಾಗೂ ಉಭಯವಾಸಿಗಳ ಜೈವಿಕ ವೈವಿಧ್ಯತೆಗಳೊಂದಿಗೆ ಅಲ್ಲಿ ಬೀಸುವ ಗಾಳಿ, ಧಗಧಗಿಸುವ ಬಿಸಿಲು, ಧೋ ಎಂದು ಸುರಿಯುವ ಮಳೆ, ಮೈ ಕೊರೆಯುವ ಚಳಿ, ಹಿಮದಂತೆ ಬೀಳುವ ಇಬ್ಬನಿಯ ನಸುಕು, ಪ್ರಖರ ಬೆಳಕು, ತಣ್ಣನೆಯ ಸಂಜೆ, ಘನೀಭೂತ ಕತ್ತಲಾವರಿಸುವ ರಾತ್ರಿ – ಸೃಷ್ಠಿಯ ಎಲ್ಲವನ್ನೂ ಒಳಗೊಂಡ ಮನುಷ್ಯ ಪ್ರಪಂಚಕ್ಕೆ ಪೂರಕವಾಗಿರುವ ಈ ಪರಿಸರದ ಅನುಕೂಲ ಅನಾನುಕೂಲಗಳ ಜೊತೆಗೆ ಕಥಾನಾಯಕನ ಹೊಂದಾಣಿಕೆಯ ಬದುಕು ಇಲ್ಲಿ ಬಹಳಷ್ಟು ವೈವಿಧ್ಯಮಯವಾಗಿ ದಾಖಲಾಗಿದೆ. ಕಾಡಿನಲ್ಲಿ ದಕ್ಕುವ ಔಷಧಿ ಗುಣದ ಸಸ್ಯಗಳು, ಹೊಟ್ಟೆ ಹೊರೆಯುವ ಹಣ್ಣು-ಹಂಪಲದ ಮರಗಳು, ವಿವಿಧ ಪ್ರಾಣಿಮೃಗಗಳ ಮಾಂಸ, ಉಗುರು, ಕೊಂಬು, ಚರ್ಮ ಇನ್ನಿತ್ಯಾದಿ ಸೇರಿದಂತೆ ಕಾಡಿನ ಒಟ್ಟು ಉತ್ಪನ್ನದ ವಿವರಣೆಗಳು, ಆ ಉತ್ಪನ್ನವನ್ನೇ ನಂಬಿ ಬದುಕುವವರ ಬವಣೆಗಳು ಹೊಸ ಸೋಜಿಗವನ್ನು ಸೃಷ್ಟಿಸುತ್ತವೆ. ಅಲ್ಲದೇ ಅಲ್ಲಿನ ಜನರ ಬದುಕು, ಭಾಷೆ, ವೃತ್ತಿ, ಊಟ, ತಿಂಡಿಯ ಸ್ವಾರಸ್ಯಕರ ಸಂಗತಿಗಳು ಆಹ್ಲಾದತೆಯನ್ನು ಉಂಟುಮಾಡದೇ ಇರಲಾರವು.

ಉತ್ತರ ಕನ್ನಡದ ಕಾಡಿನ ಜನಜೀವನದ ಬಹುತೇಕ ಎಲ್ಲಾ ಅಂಶಗಳನ್ನು ಒಳಗೊಂಡು ಮೈದಾಳಿದ ಇಲ್ಲಿನ ಕಥನ, ಈ ಅಪರೂಪದ ಕಾಡಿನಷ್ಟೇ ಸಂಕೀರ್ಣ, ನಿಗೂಢ, ವಿಶಾಲ, ವಿಸ್ಮಯ.
ತನ್ನ ಬದುಕಿಗೆ ಅಂಟಿಕೊ೦ಡಿರುವ ಜಾಢ್ಯ ತೊರೆಯಲು ಎಲ್ಲವನ್ನೂ ಮರೆಯಬೇಕು, ಎಲ್ಲರಿಂದಲೂ ಮರೆಯಾಗಬೇಕು ಎಂದುಕೊ೦ಡ ರವಿಕಿರಣ ಎನ್ನುವ ಕಥಾನಾಯಕ ತನ್ನ ಮೂಲ, ‘ಬೋಧನೆ-ಸಂಶೋಧನೆ-ಲೋಕೋದ್ಧಾರಕ್ಕಾಗಿ ಬದಲಾವಣೆ’ ಎನ್ನುವ ಬದುಕಿನ ಜಾಯಮಾನಕ್ಕೆ ಒಗ್ಗದ ಟೈಪಿಂಗ್ ಕೆಲಸ ನೆಚ್ಚಿಕೊಂಡು ದೂರದೂರಿನಿಂದ ಕತ್ಲೆಕಾನಿಗೆ ಬಂದಿಳಿಯುತ್ತಾನೆ. ಹುಟ್ಟಿ ಬೆಳೆದ ಜಾಗದಲ್ಲಿ ಜಾಗ ಕಳೆದುಕೊಂಡವನಿಗೆ ಈ ಕಾಡು ಪೊರೆಯುತ್ತದೆ. ದೂರದೂರಿನ ಈ ಜಾಗಕ್ಕೆ ಬಂದು ಅಪರಿಚಿತನಾಗಲು ಅಜ್ಞಾತನಾಗಿರಲು ಹೊಸದಾಗಲು ಬೇರೆಯವನಾಗಲು ಹವಣಿಸುತ್ತಾನೆ. ಪ್ರಯತ್ನಿಸುತ್ತಾನೆ, ಹಪಾಹಪಿಸುತ್ತಾನೆ, ಸೋಲುತ್ತಾನೆ, ಗೆಲ್ಲುತ್ತಾನೆ, ಮತ್ತೆ ಸೋಲುತ್ತಾನೆ. ಎಲ್ಲವನ್ನೂ ಮರೆಯಲಾಗದೇ, ಎಲ್ಲರಿಂದಲೂ ಮರೆಯಾಗಲಾರದೇ, ಎಂದೂ ಮರೆಯಾಗದ, ಮರೆಯಲಾಗದ ಮತ್ತಷ್ಟು ಕಾಡುವ ನೆನಪುಗಳೊಂದಿಗೆ ಚಡಪಡಿಸುತ್ತಾನೆ.
ನೆನಪು – ಮರೆವು – ಪ್ರಜ್ಞೆ – ಅರೆಪ್ರಜ್ಞೆ – ಸುಪ್ತಪ್ರಜ್ಞೆ – ವಾಸ್ತವ – ಅತಿವಾಸ್ತವ – ಮಾಂತ್ರಿಕ ವಾಸ್ತವದ ಸ್ಥಿತಿಗಳಿಗೆ ಬಲಿಯಾಗುತ್ತ, ಓದುಗರ ಈಡು ಮಾಡುತ್ತ ಸಾಗುವ ಈ ಸು-ದೀರ್ಘ ಕಥಾನಕ ಅಪರೂಪದ ಓದು-ಅನುಭವ-ತಿಳುವಳಿಕೆ ಕೊಡುತ್ತದೆ.
ಇರುವುದೆಲ್ಲವ ಬಿಟ್ಟು ಬಂದು ಹೊಸ ಅಪರಿಚಿತ ಜಾಗದಲ್ಲಿ ಎದೆಗುಂದಿದ್ದ ಕಥಾನಾಯಕ ರವಿಕಿರಣನಿಗೆ ಆಶ್ರಯ ಕೊಡುವ ಕತ್ಲೆಕಾನಿನ ಬಡಕಲುಮನೆ ‘ಗೂಡೇಶ’, ಗಣಪಯ್ಯಜ್ಜನ ಮೂಕಾಂಬಿಕಾ ಹೋಟ್ಲು, ಸರಿತಾಳ ಕಿರಾಣಿ ಅಂಗಡಿ, ಎತ್ತರಕ್ಕಿರುವ ಕಾದಂಬರಿಯ ದೈತ್ಯ ಮಹಲು, ಘನಾಜಂಗಲ್, ಹಳೆಯಚರ್ಚು, ದೊಡ್ಡಗುಡಿ, ಒಂಟೊ೦ಟಿ ಮನೆಗಳು, ಯಲ್ಲಾಪುರದ ಮೀನುಪೇಟೆಗಳು ವಿಲಕ್ಷಣವಾಗಿ ಸಲಹುತ್ತವೆ. ವಿಶೇಷ ಖ್ಯಾದ್ಯ ತಿನ್ನಿಸುವ ನೆರೆಮನೆಯ ಪಾರೋತಿ, ವಿನಾಕಾರಣ ಗೋಳುಹೊಯ್ದುಕೊಳ್ಳುವ ಆಕೆಯ ಮಗ ಪುಟ್ಟ, ಉದ್ರಿಗೆ ಬನ್ಸ್ಬಾಜಿ, ಇಡ್ಲಿದೋಸೆ ಕೊಡುವ ಗಣಪಯ್ಯ. ಕಕ್ಕುಲಾತಿ ತೋರುವ ಸರಿತಾ, ಸ್ನೇಹಕ್ಕೆ ಕೈ ಚಾಚುವ ಅವಳ ತಂಗಿ ವಿಮಲಾ, ಈ ಕಾಡುಹಳ್ಳಿಯಲ್ಲಿ ಟೈಪಿಂಗ್ ಕೆಲಸ ಕೊಟ್ಟು ಎಲ್ಲ ನಿಗೂಢ ಚಟುವಟಿಕೆಗಳಿಗೂ ಕಥಾನಾಯಕನ ಎಡೆಮಾಡಿಕೊಡುವ ಒಡತಿ ಕಾದಂಬರಿ, ಅತಿಯಾಗಿ ಮೋಹಿಸುವ ಕೆಲಸದಾಕೆ ಲಲಿತಾ ಸಿದ್ದಿ ಪಾತ್ರಗಳು ಗಾಢವಾಗಿ ಮನಸ್ಸಿನಲ್ಲಿ ಉಳಿದು ಬಿಡುತ್ತವೆ.
ಈ ಮುಖ್ಯ ಪಾತ್ರಗಳೊಂದಿಗೆ ತೆರೆದುಕೊಳ್ಳುವ ಮತ್ತಷ್ಟು ಪಾತ್ರಗಳು, ಕಥೆಯ ಜೊತೆ ನೂರಾರು ಉಪಕತೆಗಳು ಬಿಚ್ಚಿಕೊಳ್ಳುವ ಪರಿ ಅನನ್ಯವಾದುದು. ಚೇತೋಹಾರಿಯಾದ ನಿರೂಪಣೆಗೆ ನಿಗೂಢತೆ ಸಾಂದರ್ಭಿಕವಾಗಿ ಜೊತೆಗೊಂಡು, ಕಾದಂಬರಿಯುದ್ದಕ್ಕೂ ಮಿಂಚಿನ೦ತೆ ಸುಳಿದು ಬೆಚ್ಚಿಬೀಳಿಸುತ್ತದೆ. ಅತೀವ ಸಂತಸ, ವಿಚಿತ್ರ ಸನ್ನಿವೇಶಗಳು, ವಿಲಕ್ಷಣ ಸಂಕಟಗಳನ್ನ ಒಟ್ಟೊಟ್ಟಿಗೆ ಅನುಭವಿಸುವಂತೆ ಮಾಡಿಬಿಡುತ್ತದೆ. ಇಡೀ ಕಾದಂಬರಿಯನ್ನ ಸೂಕ್ಷ್ಮವಾಗಿ ಅವಲೋಕಿಸಿದಾಗ ಇಲ್ಲಿನ ಯಾವ ಪಾತ್ರಗಳೂ ಅಮುಖ್ಯ, ನೀರಸ, ನಗಣ್ಯವಾದವು ಅನ್ನಿಸುವುದಿಲ್ಲ. ಯಾವುದೇ ಒಂದು ಪಾತ್ರವನ್ನು ಆಯ್ದು ಆ ಪಾತ್ರದ ಗುಣ, ವಿಶೇಷಣ, ಕ್ರಿಯೆ ಆಧರಿಸಿ ಆ ಮೂಲಕ ಕಾದಂಬರಿಯನ್ನ ಕಂಡಾಗ ಅದೇ ಪಾತ್ರವೇ ಮುನ್ನೆಲೆಗೆ ಬಂದ೦ತಾಗುತ್ತದೆ. ಇದೊಂದು ರೀತಿ ಕಥನ ಕಟ್ಟಿವಿಕೆಯ ಕಥೆಗಾರನ ನವನವೀನ ಕೌಶಲ್ಯ ಅನ್ನಿಸುತ್ತದೆ.
ಇದರಲ್ಲಿ ಏನಿಲ್ಲ? ಎಲ್ಲವೂ ಇದೆ. ಮನುಷ್ಯನ ದಯೆ, ದಾರಿದ್ರ್ಯ, ಕರುಣೆ, ಮೋಹ, ವಾತ್ಸಲ್ಯ, ಮಮತೆ, ನಿರಾಶೆ, ಪ್ರೀತಿ, ಸ್ನೇಹಗಳೊಂದಿಗೆ ಸೈಕಾಲಜಿ, ಬಯಾಲಜಿ, ಎಂಟೊಮಾಲಜಿ, ಇಕಾಲಜಿ, ಟೆಕ್ನಾಲಜಿ, ಬಾಟನಿಯ ಎಲ್ಲಾ ಗುಣಗಳ ಮುಸುಕು ಹೊದ್ದಿದೆ. ಹೀಗಾಗಿ ಈ ಕಾದಂಬರಿ ಇಂಥ ಪ್ರಕಾರದ್ದೇ ಅಂತ ಚೌಕಟ್ಟಿನಲ್ಲಿ ಹಿಡಿದಿಡಲಾಗುವುದಿಲ್ಲ. ಅಳೆದು ತೂಗಿ ಪ್ರಮಾಣಿಕರಿಸಲಾಗುವುದಿಲ್ಲ. ಯಾವ ಐಡಿಯಾಲಜಿ, ಅಜೆಂಡಾಗಳನ್ನ ಇದರಲ್ಲಿ ಶೋಧಿಸಲಾಗುವುದಿಲ್ಲ.

ಕಾದಂಬರಿಕಾರ ಇಂದ್ರಕುಮಾರ್ ಎಚ್ ಬಿ ಅವರು ಸದಾ ಹೊಸತನಕ್ಕೆ ಹಾತೊರೆಯುವ ಕನ್ನಡದ ಒಬ್ಬ ಪ್ರಮುಖ ಪ್ರಯೋಗಶೀಲ, ಸೃಜನಶೀಲ, ಕಥಿಕ. ಎತ್ತರ ಕಾದಂಬರಿಯೊಳಗಿನ ಅವರ ಹದಭರಿತ ಭಾಷೆ, ಭಾಷೆಯೊಳಗಿನ ಕಾವ್ಯದಷ್ಟೇ ಚೆಲುವುಳ್ಳ ವಾಕ್ಯ, ನುಡಿಗಟ್ಟು, ಪದ, ಪಾತ್ರ ಸಂಯೋಜನೆ, ಸನ್ನಿವೇಶ, ರೂಪಕ, ಸಂಕೇತ, ಸಂಗತಿಳುಳ್ಳ ಸಂಕೀರ್ಣವಾದ ದೀರ್ಘ ಬರೆಹದ ನಿರ್ವಹಣೆಯ ತಾಕತ್ತಿಗೆ, ಚಿತ್ರಕ ಶಕ್ತಿ ಅಪರೂಪವಾದುದು.
ಎತ್ತರ ಅನ್ನುವುದು ಬರಿಯ ಮೇಲೆ-ಕೆಳಗೆ ಎಂಬ೦ರ್ಥದಲ್ಲಿ ಸಿಕ್ಕು ಬಿಡುವ ಭೌತಿಕ ಅಳತೆಯ ಮಾನದಂಡವಷ್ಟೇ ಆಗಿಲ್ಲ ಇಲ್ಲ. ಜೈವಿಕ-ಅಜೈವಿಕ, ಆರೋಗ್ಯ-ಅನಾರೋಗ್ಯ, ಉತ್ಕೃಷ್ಟ-ನಿಕೃಷ್ಟ, ಸಂಬ೦ಧ, ಕೌಟುಂಬಿಕತೆ, ಜೀವನಶೈಲಿ, ಆಧುನಿಕ-ಪ್ರಾಚೀನ ವಸ್ತುವಿವರಗಳನ್ನು ಹೊಸ ಆಯಾಮದಲ್ಲಿ ನೋಡುವಂತೆ ಹೊಸ ನಿಷ್ಕರ್ಷೆಗೆ ಒಳಪಡಿಸುತ್ತದೆ.
೫೩೦ ಪುಟಗಳ ಸೃಜನಶೀಲ ಸಾಹಿತ್ಯ ಗಾಂಭೀರ್ಯತೆಯಿ೦ದ ಓದಿಸಲ್ಪಡುವ ಈ ಕಾದಂಬರಿ ಹಲವು ಪದರುಗಳು, ಹಲವು ಆಯಾಮಗಳನ್ನು ಒಳಗೊಂಡಿದ್ದು, ಮರು ಓದಿಗೆ ಭಿನ್ನವಾದ ಅಂಶಗಳನ್ನು ಬಿಟ್ಟುಕೊಡುತ್ತ ವಿಶೇಷವೆನಿಸುವ ಕಾರಣಕ್ಕೆ ಈ ಕಾಲದ ಮಹತ್ವದ ಕಾದಂಬರಿ ಎಂದು ನನಗೆ ಅನ್ನಿಸುತ್ತದೆ. ಮಹಾಕಾವ್ಯವಾಗಿಯೂ ನನಗೆ ಕಾಣ ಸಿದೆ. ಪಂಡಿತರಿಗೂ ಪಾಮರರಿಗೂ ಓದಿನ ಸುಖ ನೀಡುವ, ರಚನಾ ಕ್ರಮದಲ್ಲಿ ವಸ್ತು-ವಿಷಯ-ವಿನ್ಯಾಸ-ನಿರೂಪಣೆಯಲ್ಲಿ ಮಹತ್ವದ್ದನ್ನು ಸಾಧಿಸಿರುವ ಈ ಕಾದಂಬರಿ ಓದಲೇಬೇಕಾದ ಕನ್ನಡದ ಅಪರೂಪದ ಕೃತಿಯಾಗಿದೆ.






0 Comments