ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಟ್ಟರೂ ಬಿಡದಂತಿದ್ದ ಸೋಮಶೇಖರ್…

ಪುಟ್ಟಸ್ವಾಮಿ ಕೆ

ಒಂದು ಶ್ರದ್ಧಾಂಜಲಿ
ಇವರು ಹ. ಸೋಮಶೇಖರ್. ಕೃಷಿ ವಿಶ್ವವಿದ್ಯಾಲಯದಲ್ಲಿ ನನಗಿಂತ ಒಂದು ವರ್ಷ ಸೀನಿಯರ್.

ನನ್ನ ಪದವಿ ವಿದ್ಯಾಭ್ಯಾಸದ ಸಮಯದಲ್ಲಿ ನನಗೆ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳ ಬಗ್ಗೆ ತಿಳಿವಳಿಕೆ ಮೂಡಿಸಿದ ಒಂದು ಬಗೆಯಲ್ಲಿ ಗುರುವೇ ಆಗಿದ್ದ ಸಮಾಜವಾದಿ ಚಿಂತಕ ಪ್ರೊ. ಹ. ಸೋಮಶೇಖರ್ ಅವರು ೨೫ನೇ ಅಕ್ಟೋಬರ್ ತೀರಿಕೊಂಡ ವಿಷಯವನ್ನು ಎಸ್ ಎನ್ ಲಕ್ಷ್ಮೀ ನಾರಾಯಣ್ ಮತ್ತು ಸಹಪಾಠಿ ಬಿ ಎಸ್ ಅಮರಪ್ರಸಾದ್ ತಿಳಿಸಿದಾಗ ಮನಸ್ಸಿಗೆ ನಿಜವಾಗಲೂ ಬೇಸರ ಮೂಡಿತು. ಒಂದು ಕಾಲದಲ್ಲಿ ಬಿಟ್ಟರೂ ಬಿಡದಂತಿದ್ದ ಸೋಮಶೇಖರ್. ಎಲ್ಲರಿಂದಲೂ ದೂರವಾಗಿ ಗೂಡು ಸೇರಿಕೊಂಡಿದ್ದ ಸೋಮಶೇಖರ್ ಅನ್ನು ನಾವು ಹಲವು ದಶಕಗಳಿಂದ ಮರೆತೇ ಹೋಗಿದ್ದೆವು. ಅವರ ಸಾವೇ ಮತ್ತೆ ಅವರನ್ನು ನೆನೆಯುವಂತೆ ಮಾಡಿರುವುದು ವಿಚಿತ್ರ. ಇದಕ್ಕೆ ನಾನೆಷ್ಟು ಕಾರಣನೋ ತಿಳಿಯದು. ಆದರೆ ಮನುಷ್ಯರಿಂದಲೇ ಕ್ರಮೇಣ ದೂರಸರಿದ ಸೋಮಶೇಖರ್ ಎಲ್ಲರ ನೆನಪಿನಿಂದ ಬಹುಬೇಗನೆ ಜಾರಿ ಹೋಗಿದ್ದಂತೂ ನಿಜ. ಆದರೆ ಇಷ್ಟು ಮಾತ್ರ ನಿಜ!, ಸಾಮಾಜಿಕ ತಿಳಿವಳಿಕೆಗೆ ಮೊದಲು ಅಡಿಪಾಯ ಹಾಕಿದ ವ್ಯಕ್ತಿ ಈತನೇ ಎಂದು ಕೃತಜ್ಞತೆಯಿಂದ ಆತ ಇಲ್ಲವಾಗಿರುವ ಕಾಲದಲ್ಲಿ ನೆನೆಯುತ್ತೇನೆ.

ಹ. ಸೋಮಶೇಖರ್ ನನಗೆ ಗಾಢವಾಗಿ ಪರಿಚಯವಾದದ್ದು ನನ್ನ ಪದವಿಯ ಮೂರನೇ ವರ್ಷದ ಆರಂಭದಲ್ಲಿ. ಅವರು ನಾಲ್ಕನೇ ವರ್ಷದಲ್ಲಿದ್ದರು. ನಾನಾಗ ಕವನ ಅದೂ ಇದೂ ಅಂತ ಬರೆಯುತ್ತಿದ್ದೆ. ಅವರೂ ಬರೆಯುತ್ತಿದ್ದರು. 1976ರಲ್ಲಿ ನಾವಿನ್ನೂ ಪದವಿಯ ಆರಂಭದಲ್ಲಿ ಇದ್ದಾಗ ಒಂದು ಕಾವ್ಯ ಕಮ್ಮಟ ನಡೆಯಿತು. ನಮ್ಮ ಮೇಷ್ಟ್ರುಗಳಾದ ಅಕುಮಾಲ್ ರಾಮಚಂದರ್ ಮತ್ತು ಎಚ್ ಎ ರಾಮಕೃಷ್ಣ ನಡೆಸಿಕೊಟ್ಟರು. ಸಮಾರೋಪಕ್ಕೆ ಬಂದ ಕವಿ ಗೋಪಾಲಕೃಷ್ಣ ಅಡಿಗ ಅವರು ವಿದ್ಯಾರ್ಥಿಗಳ ಕವನಗಳನ್ನು ಪರಿಶೀಲಿಸಿ ನನ್ನ ಕವನಕ್ಕೆ ಬಹುಮಾನ ಘೋಷಿಸಿ (ಒಂದೇ ಬಹುಮಾನ) ಸೋಮಶೇಖರ್ ಅವರ ಕವನವೂ ಸೇರಿದಂತೆ ಆರು ಜನರ ಕವನಗಳನ್ನು ಒಳ್ಳೆಯ ರಚನೆಗಳೆಂದು ಆಯ್ಕೆ ಮಾಡಿದ್ದರು. ಬೆಂಗಳೂರು ಆಕಾಶವಾಣಿಯ ತಂಡ ಕಾರ್ಯಕ್ರಮವನ್ನು ಧ್ವನಿ ಮುದ್ರಿಸಿ ಯುವವಾಣಿ ಕಾರ್ಯಕ್ರಮದಲ್ಲಿ ಪ್ರಸಾರಮಾಡಿತು. ಸೋಮಶೇಖರ್ ಮತ್ತು ನಾನೂ ಸೇರಿದಂತೆ ಆಕಾಶವಾಣಿಗೆ ಕವನ ಓದಿದೆವು.

ಸಮಾರೋಪ ಸಮಾರಂಭದಲ್ಲಿ ಅಡಿಗರು ಜಗತ್ತಿನ ಕಾವ್ಯ ಸಂಪ್ರದಾಯ ಕುರಿತು ಮಾತಾಡಿದರು. ಕಲ್ಚರ್ ಎಂಬ ಶಬ್ದ ಬಂದದ್ದೇ ಅಗ್ರಿಕಲ್ಚರ್ ನಿಂದ ಎಂದು ಮ್ಯಾಥ್ಯೂ ಆರ್ನಾಲ್ಡ್ ನ ಕಲ್ಚರ್ ಅಂಡ್ ಅನಾರ್ಕಿಯನ್ನು ಉಲ್ಲೇಖಿಸಿ ಕೃಷಿ ಎಂದರೆ ಪೊರೆಯುವ, ಬೆಳೆಸುವ, ಮನುಕುಲಕ್ಕೆ ಬೇಕಾಗುವ ಅಗತ್ಯಗಳನ್ನು ಪೂರೈಸುವ ಜೊತೆಗೆ ಕೃಷಿಕನ ಸೃಜನಶೀಲಶಕ್ತಿಗೆ ಅಪಾರ ಅವಕಾಶಗಳನ್ನು ತೆರೆದು ಬದುಕನ್ನು ಸ್ವೋಪಜ್ಞ ಗೊಳಿಸುವ ಕಸುಬು ಎಂದರು. ಅದರಿಂದ ಬಂದ ಕಲ್ಚರ್ ನ ,ಉದ್ದೇಶ ಕೃಷಿಯಂತೆ ಸಮಾಜವನ್ನು ಪೊರೆವ, ಬೆಳೆಸುವ, ಆನಂದ, ಸೌಂದರ್ಯ ತರುವ ಗುರಿಯ ಕಾರ್ಯ ಎಂದು ಅಗ್ರಿಕಲ್ಚರ್ ಓದುವ ವಿದ್ಯಾರ್ಥಿಗಳಿಗೆ ಕಾವ್ಯ , ನಾಟಕ, ಸಾಹಿತ್ಯ ಆಸಕ್ತಿ ಇದ್ದರೆ ಅದು ಸಹಜ ಎಂದು ಹೇಳಿ ನಮ್ಮನ್ನು ಉಬ್ಬಿಸಿದ್ದರು.

ಕವಿ ಅಡಿಗರು ಒಂದು ಗಂಟೆ ಮಾಡಿದ ಭಾಷಣ ಕೇಳಿದಮೇಲೆ ಕಾವ್ಯಕಟ್ಟುವಿಕೆ ಸುಲಭದ ಕಾರ್ಯವಲ್ಲ ಅನ್ನೋದು ಮನವರಿಕೆಯಾಯಿತು. ಕಾವ್ಯದ ಸ್ವರೂಪ, ಅದರ ಬಂಧ, ಅದನ್ನು ಕಟ್ಟಲು ಬೇಕಾದ ತಿಳಿವಳಿಕೆ, ಜಗತ್ತಿನ ಶ್ರೇಷ್ಟಕಾವ್ಯಗಳ ಲಕ್ಷಣ ಇತ್ಯಾದಿ ಕುರಿತ ಅವರ ಅಮೋಘ ಭಾಷಣ ಕೇಳಿದ ಮೇಲೆ ಕವನ, ಕಾವ್ಯ ಬರೆಯುವುದು ನನಗಾಗದ ಕೆಲಸ ಎಂದು ತೀರ್ಮಾನಿಸಿ ಕಾವ್ಯ ವಿಮುಖನಾದೆ/ ಅನಾಸಕ್ತನಾದೆ!
ಆದರೆ ಮುಂದುವರೆದ ಓದುವ ಚಟಕ್ಕೆ ನಿರ್ದಿಷ್ಟ ಹಾದಿಯನ್ನು ತೋರಿದ್ದು ಮಾತ್ರವಲ್ಲ ಸಮಾಜವಾದದ ಸಿದ್ಧಾಂತಗಳ ಪಾಠವನ್ನು ಮತ್ತು ಆವರೆವಿಗೂ ಹೆಸರೇ ಕೇಳದಿದ್ದ ರಾಮಮನೋಹರ ಲೋಹಿಯಾ ಅವರ ಬದುಕು ಬರಹಗಳ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಿದವರು ಇದೇ ಸೋಮಶೇಖರ್. ಅದಕ್ಕೆ ಹೆಬ್ಬಾಳದಲ್ಲಿ ನಡೆದ ಘಟನೆ ಕಾರಣ.

೧೯೭೮ರ ಸೆಪ್ಟೆಂಬರ್ ತಿಂಗಳಿನಲ್ಲಿ ಹಾಸ್ಟೆಲ್‌ನಲ್ಲಿ ಕೂರಿಸಿದ್ದ ಗಣೇಶನನ್ನು ಹೆಬ್ಬಾಳ ಕೆರೆಯಲ್ಲಿ ವಿಸರ್ಜಿಸಲು ಮೆರವಣಿಗೆಯಲ್ಲಿ ಹೊದ ತಂಡದ ಕೆಲವು ಸವರ್ಣೀಯ ವಿದ್ಯಾರ್ಥಿಗಳು ಯಾವುದೋ ನೆಪ ಮಾಡಿಕೊಂಡು ದಲಿತ ವಿದ್ಯಾರ್ಥಿಗಳನ್ನು ಥಳಿಸಿದ್ದರು. ಪ್ರಕರಣ ಗಂಭೀರ ಸ್ವರೂಪ ತಾಳಿತ್ತು. ಆ ಸಮಯದಲ್ಲಿ ಸೋಮಶೇಖರ್ ನಮ್ ರೂಮಿಗೆ ಬಂದು ನನ್ನನ್ನು ಎಂ ಎಸ್‌ಸಿ ಮಾಡುತ್ತಿದ್ದ ಶ್ರೀಧರ ಕಲಿವೀರ ಅವರ ರೂಮಿಗೆ ಕರೆದೊಯ್ದರು. (ಲಂಕೇಶ್ ಅವರು ಸಂಪಾದಿಸಿದ್ದ ಪಾಂಚಾಲಿಯಲ್ಲಿ ದೇವನೂರ ಮಹಾದೇವ ಮತ್ತು ಶ್ರೀಧರ ಕಲಿವೀರ ಅವರು ದಮನಿತ ವಿದ್ಯಾರ್ಥಿಗಳ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಜೋಡಿ. ಮುಂದೆ ಬ್ಯಾಂಕ್ ಅಧಿಕಾರಿಯಾಗಿ ನಂತರ ಸ್ವಯಂ ನಿವೃತ್ತಿಪಡೆದು ಬಿಎಸ್‌ಪಿ ಸೇರಿದರು.) ಅಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ವಿದ್ಯಾರ್ಥಿಗಳಾಗಿ ಖಂಡಿಸುವ ವಿಧಾನವನ್ನು ಚರ್ಚಿಸಲು ಹಲವರು ಸಭೆ ಸೇರಿದ್ದರು. ಕವನ-ಗಿವನ ಬರೆಯುವ ಕಾರಣ ಇವನು ಪ್ರೋಗ್ರೆಸ್ಸಿವ್ ಎಂದು ಸೋಮಶೇಖರ್ ಬಾವಿಸಿ ನನ್ನನ್ನು ಕರೆದೊಯ್ದಿದ್ದರು. ಜೊತೆಯಲ್ಲಿ ಕೆ. ಆರ್ ರವೀಂದ್ರ ಇದ್ದ. ನನಗೆ ಯಾವ ರಾಜಕೀಯ ನಿಲುವೂ ಇಲ್ಲದಿದ್ದ ಕಾಲ. ಆದರೆ ನೊಂದವರ ಪರ ನಿಲ್ಲಬೇಕೆನ್ನುವ ನೈತಿಕ ಪ್ರಜ್ಞೆಯಂತೂ ಇತ್ತು. ಹಲ್ಲೆಯನ್ನು ಖಂಡಿಸಿ ಕಾಲೇಜಿನಲ್ಲಿ ಮೆರವಣಿಗೆ ಮಾಡಲು ಸಭೆಯಲ್ಲಿ ನಿರ್ಧಾರವಾಯಿತು.

ಆಗ ಸೋಮಶೇಖರ್ ಮತ್ತು ಕಲಿವೀರ ಸೇರಿ ಕರಪತ್ರವೊಂದನ್ನು ಸಿದ್ಧಪಡಿಸಿದರು. ಅನ್ವೇಷಕ ಬಳಗ ಎಂದು ನಮ್ಮ ಗುಂಪಿಗೆ ನಾಮಕರಣ ಮಾಡಿಕೊಂಡು ಆ ಹೆಸರಿನಲ್ಲಿ ಕರಪತ್ರ ಮುದ್ರಿಸಿ ತಂದೆವು. ಮೊದಲಬಾರಿಗೆ ನಮ್ಮದೇ ಸ್ನೇಹಿತರಿಗೆ ಕರಪತ್ರ ಹಂಚಿದಾಗ ನನಗೆ ಏನೋ ಅಳಕು, ಪುಳಕ. ಆದರೆ ಸೋಮಶೇಖರ್ ನಿಜವಾದ ಕಾರ್ಯಕರ್ತನಂತೆ ಎದುರಾದ ಎಲ್ಲರಿಗೂ ಕರಪತ್ರ ನೀಡುವ ಜೊತೆಗೆ ಮೆರವಣಿಗೆಯಲ್ಲಿ ಯಾಕೆ ಭಾಗವಹಿಸಬೇಕು ಎಂದು ಅವರು ಕಿವಿಗೊಡಲಿ, ಇಲ್ಲದಿರಲಿ ಗಂಭೀರವಾಗಿ ವಿವರಿಸುತ್ತಿದ್ದರು. ಹಿಡಿದ ಕಾರ್ಯದಲ್ಲಿ ಆತನಿಗೆ ಅಷ್ಟೊಂದು ದೃಢನಂಬಿಕೆಯಿತ್ತು.

ವಿದ್ಯಾರ್ಥಿಗಳ ಅಂಥದ್ದೊಂದು ಮೆರವಣಿಗೆಗೆ ಇಡೀ ಕ್ಯಾಂಪಸ್‌ನಲ್ಲಿ ಸಂಚಲನ ಮೂಡಿಸಿತು. ಆದರೆ ನಮ್ಮ ಬಳಗ ಅಲ್ಲಿಗೆ ನಿಲ್ಲಲಿಲ್ಲ. ಅನ್ವೇಷಬಳಗದ ಸದಸ್ಯರು ಆಗಾಗ್ಗೆ ಸೇರಿ ಸಾಹಿತ್ಯ, ಸಮಾಜ ರಾಜಕೀಯ ಚಿಂತನೆಗಳ ಚರ್ಚೆಯ ವೇದಿಕೆಯಾಯಿತು. ಸೋಮಶೇಖರ್, ಕಲಿವೀರ ಅಲ್ಲದೆ ಪ್ರಕಾಶ್ ಕಮ್ಮರಡಿ, ರವೀಂದ್ರ, ವೆಟರ್‌ನರಿ ಕಾಲೇಜಿನ ಜಯಕುಮಾರ್, ಬಸವರಾಜು, ಬಿ ಎಸ್ ಅಮರ ಪ್ರಸಾದ್ ಮೊದಲಾದವರಿಂದ ಹಿಗ್ಗಿತು. ಆ ಬಳಗದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ‍್ಕ್ಸ್, ಮಾವೋ ವಾದಿಗಳೆಲ್ಲಾ ಇದ್ದರು. ಅಪ್ಪಟ ಲೋಹಿಯಾವಾದಿಗಳಾಗಿದ್ದ. ಸೋಮಶೇಖರ್ ಜೊತೆ ನನ್ನ ಭೇಟಿ ಪ್ರತಿದಿನವೂ ಇತ್ತು. ಆ ವೇಳೆಗಾಗಲೇ ಲೋಹಿಯಾ ಸಿದ್ಧಾಂತಗಳನ್ನು ಮನವರಿಕೆಯಾಗುವಂತೆ ವಿವರಿಸುತ್ತಿದ್ದರು. ಅಂಬೇಡ್ಕರ್‌ವಾದಿಗಳು ಸಂಪೂರ್ಣ ವಿರೋಧಿಸಿದರೂ ತಾಳ್ಮೆಗೆಡದೆ ಆತ ಮಂಡಿಸುತ್ತಿದ್ದ ವಾದ ಸರಣಿ ನಿಬ್ಬರೆಗುಮೂಡಿಸುತ್ತಿತ್ತು. ವಿದ್ಯಾರ್ಥಿಗಳು ಕಡ್ಡಾಯ ಭಾರತ ಪ್ರವಾಸ ಮಾಡಿದ ಸಂದರ್ಭದಲ್ಲಿ ಹೈದರಾಬಾದಿನ ಲೋಹಿಯಾ ಅಧ್ಯಯನ ಕೇಂದ್ರಕ್ಕೆ ಭೇಟಿನೀಡಿ ಅಲ್ಲಿದ್ದ ಲೋಹಿಯಾ ಸಂಪಾದಿಸಿದ್ದ ಮ್ಯಾನ್‌ಕೈಂಡ್ ಪತ್ರಿಕೆಗಳ ರಾಶಿಯನ್ನೇ ಹೊತ್ತು ತಂದು, ರೂಮಿನ ತುಂಬ ಪುಸ್ತಕಗಳ ರಾಶಿ ಹೇರಿಕೊಂಡು ಓದಿದ್ದೆಲ್ಲವನ್ನೂ ಹಂಚಿಕೊಳ್ಳುತ್ತಿದ್ದರು. ಅಡಿಗರ ಮನೆಗೆ ಹೋಗಿ ಪುಸ್ತಕಗಳನ್ನು ಹೊತ್ತು ತಂದಿದ್ದರು. ಮ್ಯಾಕ್ಸಿಂ ಗಾರ್ಕಿಯ ಆತ್ಮಕತೆಯ ಮೂರು ಸಂಪುಟಗಳನ್ನು ಓದಿದ್ದು ಅಡಿಗರ ಪ್ರತಿಗಳಿಂದಲೇ!

ಅನ್ವೇಷಕ ಬಳಗದ ಮುಂದಿನ ಕಾರ್ಯಕ್ರಮವಾಗಿ ಮೈಸೂರಿನಲ್ಲಿ ಈ ಹಿಂದೆ ನಡೆದಂತೆ ಹೆಬ್ಬಾಳದ ಆಡಿಟೋರಿಯಂನಲ್ಲಿ ಜಾತಿವಿನಾಶ ವಿಚಾರ ಸಂಕಿರಣ ಏರ್ಪಡಿಸಲು ನಿರ್ಧರಿಸಿದ ಸೋಮಶೇಖರ್ ಭಾಷಣಕಾರರನ್ನು ಗೊತ್ತುಪಡಿಸಲು ನನ್ನನ್ನೇ ಎಳೆದೊಯ್ಯುತ್ತಿದ್ದರು. ಆ ಸುತ್ತಾಟದಲ್ಲಿ ನಾವಿಬ್ಬರೂ ಪ್ರೊ. ನಂಜುಂಡಸ್ವಾಮಿ, ದ.ಸಂ.ಸಮಿತಿಯ ರಾಜ್ಯ ಕಾರ್ಯದರ್ಶೀ ಓ. ಶ್ರೀಧರನ್, ಕಾಳೇಗೌಡ ನಾಗವಾರ, ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಸಮುದಾಯದ ಪ್ರಸನ್ನ, ಪ್ರಜಾವಾಣಿಯ ಇಂದೂಧರ ಹೊನ್ನಾಪುರ ಮುಂತಾದವರನ್ನು ಭೇಟಿ ಮಾಡಿ ಒಪ್ಪಿಸಿದೆವು. ದಾರವಾಡz ವಿಜಯ ಪಾಟೀಲ, ಯಡೂರ ಮಹಾಬಲ ಮೊದಲಾದವರು ಬರಲು ಒಪ್ಪಿಕೊಂಡರು. ಟಿ.ಎ. ಯಾರಿಗೂ ಕೊಡಲಿಲ್ಲ. ಹಾಸ್ಟಲ್‌ನಲ್ಲಿ ಕೊಡಿಸಿದ ಭರ್ಜರಿ ಊಟ ಏರ್ಪಾಡು ಅಷ್ಟೆ. ಆ ದಿನ ಕಾರ್ಯನಿಮಿತ್ತ ಬರಲಾಗದ ಕಾಳೇಗೌಡ, ಸಿದ್ಧಲಿಂಗಯ್ಯ ಹೊರತುಪಡಿಸಿ ಉಳಿದವರ ಮಾತುಗಳು ಸಭಿಕರನ್ನು ಮೋಡಿಹಾಕಿದವು. ಡಿ ಆರ್ ಆಗಿನ್ನೂ ಎಡಚಿಂತನೆಗಳ ಗಾಢಪ್ರಭಾವದಲ್ಲಿದ್ದರು.

ಗೆಳಿಯರಲ್ಲಿ ಸಾಮಜಿಕ ರಾಜಕೀಯ ಚಿಂತನೆಯ ದೀಪ ಹೊತ್ತಿಸಲು ಸೋಮಶೇಖರ್ ಸದಾ ಮುಂದಾಗಿದ್ದರು. ಅವರ ಸಹವಾಸದಿಂದಲೇ ಚಳುವಳಿಗಳ ಸಂಗಾತಿಗಳಾಗಿ ಆ ಕಾಲದಲ್ಲಿ ಯಾವ ಯಾವ ಮೂಲೆಯಿಂದಲೋ ಬರುತ್ತಿದ್ದ ಬದುಕು, ಪಂಚಮ, ಜನತಾ ಮಾಧ್ಯಮ, ಕಾರಾವಾನ್, ಮೊದಲಾದ ಪತ್ರಿಕೆಗಳು, ಅಂಬೇಡ್ಕರ್, ಲೋಹಿಯಾ, ಮಾರ‍್ಕ್ಸ್, ಮಾವೋ ಪುಸ್ತಕಗಳು ಎಲ್ಲರಿಗೂ ದೊರೆಯುವಂತೆ ಮಾಡುತ್ತಿದ್ದರು. ಆ ಕಾಲದಲ್ಲಿಯೇ ಆರೆಸ್ಸೆಸ್ ಕೆಡುಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಜೆ. ಬಾಲಕೃಷ್ಣ ಅವರು ವಿದ್ಯಾರ್ಥಿಯಾಗಿ ಹೊರತರುತ್ತಿದ್ದ ’ಅಂಕುರ’ ಮಾಸ ಪತ್ರಿಕೆಗೆ ೧೯೮೨ರಲ್ಲೇ ಹಿಂದೆಯೇ “ಆರೆಸ್ಸೆಸ್ ಮತ್ತು ಅದರ ಜನಾಂಗವಾಹಿ ಧೋರಣೆಗಳು” ಲೇಖನ ಆ ಕಾಲದಲ್ಲಿಯೇ ಸಾಕಷ್ಟು ವಿವಾದ ಎಬ್ಬಿಸಿತ್ತು.

ಒಮ್ಮೆ ಲಂಕೇಶ್ ನಮ್ಮ ಆಹ್ವಾನ ಮನ್ನಿಸಿ ಅವರ ’ಎಲ್ಲಿಂದಲೋ ಬಂದರು’ ಚಿತ್ರೀಕರಣ ಸ್ಪಾಟ್‌ನಿಂದ ನೇರವಾಗಿ ಬಂದು ಮಾತನಾಡಿದರು. ಆ ದಿನ ಲಂಕೇಶ್ ಸೋಮಶೇಖರ್ ಹಾಕಿದ ಪ್ರಶ್ನೆಯೊಂದಕ್ಕೆ ಕೆರಳಿ ಮುನಿಸಿಕೊಂಡು ಹೋದರು. ಬಂಡಾಯ ಸಾಹಿತ್ಯ ಸಂಘಟನೆ ಶುರುವಾದ ಸಮಯದಲ್ಲಿ ಮೊದಲಬಾರಿಗೆ ಬರಗೂರು ಅವರನ್ನು ಕರೆಸಿ ಕಾಲೇಜಿನಲ್ಲಿ ಬಾಷಣ ಮಾಡಿಸಿದರು.

ಹೀಗೆ ನಮ್ಮ ಕಲಿಕೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಸೋಮಶೇಖರ್ ಪದವಿ ಮುಗಿದ ತಕ್ಷಣ ರೀಸರ್ಚ್ ಅಸಿಸ್ಟೆಂಟ್ ಆಗಿ ಆಯ್ಕೆಯಾದರು. ಆಗಲೂ ಅವರು ಸಮಜವಾದಿ ಚಿಂತನೆಯಲ್ಲಿಯೇ ಮುಳುಗಿದ್ದರು. ನಂತರ ಕೃಷಿ ಅರ್ಥಶಾಸ್ತ್ರದಲ್ಲಿ ಎಂ ಎಸ್‌ಸಿ(ಅಗ್ರಿ) ಮಾಡಿ ಅಧ್ಯಾಪಕರಾದರು. ಆದರೆ ಆ ನಡುವೆ ಅವರ ಮಾನಸಿಕ ಆರೋಗ್ಯ ಹದಗೆಟ್ಟಿತು. ಜೆ. ಬಾಲಕೃಷ್ಣ, ಬಿ ಎಸ್ ಅಮರ ಪ್ರಸಾದ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಸರಿಹೋದರು ಎನ್ನುವಷ್ಟರಲ್ಲೇ ಅವರು ತಮ್ಮ ಬದುಕಿನ ಬಗ್ಗೆ ಅನಾಸಕ್ತಿ ತಾಳುತ್ತಾ ಹೋದರು. ನಾನು ಹಾಸನ, ಚಿಕ್ಕಮಗಳೂರು, ಮಂಗಳೂರು ಕಡೆ ಹೋದ ನಂತರ ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನಷ್ಟೇ ನೋಡುತ್ತಿದ್ದದ್ದು. 1991ರಲ್ಲಿ ನನ್ನ ಜೀವಸಂಕುಲಗಳ ಉಗಮ ಪುಸ್ತಕವನ್ನು ಹುಡುಕಿಹೋಗಿ ಕೊಟ್ಟಾಗ ಪುಸ್ತಕವನ್ನು ತಿರುವಿಯೂ ಹಾಕಲಿಲ್ಲ. ನನ್ನ ಜೊತೆ ಅಷ್ಟು ಗಾಢ ಪರಿಚಯವಿದ್ದ ಅವರು ಮತ್ತೊಮ್ಮೆ ಎದುರು ಸಿಕ್ಕಾಗ ಗುರುತು ಹಿಡಿಯದಾದರು.

ಚಿಂತಾಮಣಿ ಕೃಷಿಕಾಲೇಜಿನಲ್ಲಿ ಬೋಧಕರಾಗಿದ್ದ ಸಮಯದಲ್ಲಿ ಸ್ವಯಂ ನಿವೃತ್ತಿ ಪಡೆದು ಮತ್ತಷ್ಟು ಗೂಡು ಸೇರಿದರಂತೆ. ಇತ್ತೀಚೆಗೆ ತಾವು ಬರೆದ ಲೇಖನಗಳನ್ನೆಲ್ಲ ಪುಸ್ತಕ ಮಾಡುವ ಮನಸಾಗಿತ್ತಂತೆ. ಎಲ್ ಹನುಮಂತಯ್ಯನವರು ಪ್ರಕಟಿಸುವ ಭರವಸೆ ನೀಡಿದ್ದರಂತೆ. ಹಸ್ತಪ್ರತಿ ಸಿದ್ಧವಾಗಿರುವ ಬಗ್ಗೆ ತಿಳಿಯಲು ಅವರು ಫೋನ್ ಮಾಡಿದಾಗ ಸಿಕ್ಕಿದ್ದು ಅವರ ಸಾವಿನ ಸುದ್ದಿ. ನಿಜಕ್ಕೂ ಒಬ್ಬ ದೊಡಗಡ ರಾಜಕೀಯ ಚಿಂತಕನಾಗುವ ಎಲ್ಲ ಅರ್ಹತೆಯಿದ್ದ ಸೋಮಶೇಖರ್ ದಕ್ಕದೇ ಹೋದದ್ದು ದುರಂತ.

ಎಲ್ಲರಿಗೂ ಒಂದೊಂದು ಅಡ್ಡ ಹೆಸರು ಇಟ್ಟು ಕರೆಯುತ್ತಿದ್ದ ಅವರ ಸಹಪಾಟಿ ನಮ್ಮ ಕೀಟಲೆ ಲಕ್ಷ್ಮೀನರಾಯಣ ಸದಾ ನಗುಮೊಗದ ಗೆಳೆಯನ್ನನ್ನು ಹಲ್ಕಿರಿ ಸೋಮಶೇಖರ್ ಎಂದೇ ಕಿಚಾಯಿಸುತ್ತಿದ್ದ. ಆತ ಗೆಳೆಯನಿಗೆ ಬರೆದ ಶ್ರದ್ಧಾಂಜಲಿ ಇದು.

H. Somashekhar also known as Ha. Somashekhar, one of our illustrious batchmates from ‘A’ Section passed away today morning….

A staunch socialist, Lohiaite Somashekhar was a very avid reader and a regular contributor to various newspapers and magazines…He taught economics in UAS-B and took voluntary retirement from the profession.

He used to stun us with his vast knowledge beyond the syllabi of a student and that of a teacher….
He was a true and emotional friend with whom I have spent hours together discussing socialism and sometimes arguing on various issues afflicting this country… We both shared a similar dream of an egalitarian and casteless India, regretfully not yet realised….

With him, we have lost a socialist ideologue of our batch…
S. N. Lakshminarayana

‍ಲೇಖಕರು Admin

28 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading