ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೈಂಟ್ ಲೂಯಿಸ್ ನಲ್ಲಿ ಉಷಾ ರೈ ಕಂಡ ಕನ್ನಡ ಪ್ರೀತಿ

ಸೈಂಟ್ ಲೂಯಿಸ್ನಲ್ಲಿ ಕಂಡ ಕನ್ನಡ ಪ್ರೀತಿ

ಕೆ. ಉಷಾ ಪಿ. ರೈ

ಕೆಲಸದ ನಿಮಿತ್ತ ತಾಯಿನಾಡಿನಿಂದ ದೂರಸರಿದವರಿಗೆ ತಾಯಿನಾಡಿನ, ತಾಯಿ ನುಡಿಯ ಮೇಲೆ ತಾಯಿನಾಡಿನಲ್ಲೇ ಇರುವವರಿಗಿಂತ ವ್ಯಾಮೋಹ ಹೆಚ್ಚು ಎನ್ನುವುದು ನನ್ನ ಅನುಭವಕ್ಕೆ ಬಂದುದು ಅಮೇರಿಕಾಕ್ಕೆ ಹೋದಾಗ. ಅಲ್ಲಂತೂ ಕನ್ನಡಿಗರಿದ್ದಲ್ಲೆಲ್ಲ ಕನ್ನಡ ಸಂಘಗಳು ಹುಟ್ಟಿ ಬೆಳೆದಿವೆ. ಇಂಗ್ಲಿಷ್ಮಯ ನಾಡಿನಲ್ಲಿ ತಮ್ಮಿಂದ ಹಾಗೂ ತಮ್ಮ ಮಕ್ಕಳಿಂದ ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆ ಮರೆಯಾಗಬಾರದು ಎನ್ನುವ ಕಾಳಜಿಯಿಂದ ಈ ಸಂಘಗಳು ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಗಡಿಬಿಡಿ ಇಲ್ಲದ ಪ್ರಶಾಂತ ಪ್ರದೇಶ ಸೈಂಟ್ಲೂಯಿಸ್ನಲ್ಲಿ ಇಪ್ಪತ್ತೇಳು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟು ಕನ್ನಡಿಗರಿಂದ ಪ್ರಾರಂಭವಾದ ‘ಸಂಗಮ’ ಕನ್ನಡ ಸಂಘ ಇವತ್ತು ನೂರಾ ಮೂವತ್ತು ಸದಸ್ಯರನ್ನು ಹೊಂದಿದೆ. 2010 ರಲ್ಲಿ ವಾಶಿಂಗ್ಟನ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ಶ್ರೀ. ಅರವಿಂದ ಉಪಾಧ್ಯರ ನೇತೃತ್ವದಲ್ಲಿ ಅದ್ದೂರಿಯಾಗಿ ಬೆಳ್ಳಿಹಬ್ಬವನ್ನೂ ಆಚರಿಸಿತ್ತು ಎನ್ನುವುದು ಉಲ್ಲೇಖನೀಯ ಸಂಗತಿ. ಕೆಲಸದ ನಿಮಿತ್ತ ಅಲ್ಲಿಗೆ ಬರುತ್ತಿರುವ ಹೊಸ ಹೊಸ ಕನ್ನಡಿಗರನ್ನು ಆತ್ಮೀಯತೆಯಿಂದ ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡು ಎಲ್ಲ ಕನ್ನಡಿಗರೂ ಬಹಳ ಸ್ನೇಹದಿಂದ ಬೆರೆಯುವಂತೆ ಮಾಡುವುದು ಈ ಕನ್ನಡ ಸಂಘದ ಮುಖ್ಯ ಧ್ಯೇಯ. ಒಬ್ಬರಿಗೊಬ್ಬರು ಸಹಾಯವಾಗುತ್ತಾ, ಹಬ್ಬ ಹರಿದಿನಗಳಲ್ಲಿ ಒಂದೊಂದು ಮನೆಯಲ್ಲಿ ಸೇರಿ ತಾವು ತಂದ ಊಟವನ್ನು ಹಂಚಿ ತಿಂದು ಆನಂದ ಪಡುತ್ತಾ ಸಂತೋಷದಿಂದಿರುವ ಅವರನ್ನು ನೋಡುವಾಗ ಮನಸಿಗೆ ನಿಜಕ್ಕೂ ಖುಷಿಯಾಗುತ್ತದೆ.

ಮಿಸಿಸಿಪಿ ಮತ್ತು ಮಿಜéೋರಿ   ಎರಡು ಮಹಾನದಿಗಳು ಸಂಗಮವಾಗುವ ಈ ಸಮೃದ್ಧ ನೆಲದಲ್ಲಿ ಬಂದು ನೆಲೆಯೂರಿರುವ ಕನ್ನಡಿಗರು ಜೊತೆಗೂಡಿ ನಡೆಸುವ ಈ ಕನ್ನಡ ಸಂಘವನ್ನು ‘ಸಂಗಮ’ ಎಂದು ಹೆಸರಿಸಿದ್ದು ಬಹಳ ಅರ್ಥಪೂರ್ಣ. ಎಲ್ಲೆಲ್ಲಿಂದಲೋ ಬಂದ ಅಪರಿಚಿತ ಕನ್ನಡಿಗರು ಒಂದು ಗೂಡುತ್ತಿರುವ ಸಂಗಮ ಸ್ಥಳ ಈ ‘ಸಂಗಮ’ ಕನ್ನಡ ಸಂಘ. ವರ್ಷದಲ್ಲಿ ಅವರು ನಡೆಸುವ ಐದಾರು ಕಾರ್ಯಕ್ರಮಗಳು ಅಲ್ಲಿಯ ಎಲ್ಲ ಕನ್ನಡದ ಮನಸುಗಳನ್ನು ಹತ್ತಿರಕ್ಕೆ ತಂದಿವೆ. ಉಗಾದಿ, ಫಾದರ್ಸ್ ಡೇ ವಾರ್ಷಿಕ ಪ್ರವಾಸ, ಗೌರಿ ಗಣೇಶ ಹಬ್ಬ, ರಾಜ್ಯೋತ್ಸವ, ದೀಪಾವಳಿ ಹಬ್ಬ ಮತ್ತು ಹೊಸವರ್ಷಕ್ಕೆ ಸ್ವಾಗತ ಇಷ್ಟು ಸಮಾರಂಭಗಳು ವರ್ಷವೂ ನಡೆಯುತ್ತವೆ. ಇಲ್ಲಿ ಹೆಚ್ಚು ಖುಷಿ ಕೊಡುವ ಸಂಗತಿಯೆಂದರೆ ಎಲ್ಲ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ. ಅಲ್ಲೇ ಹುಟ್ಟಿ ಬೆಳೆದ ಮಕ್ಕಳಲ್ಲಿ ತಮ್ಮ ನೆಲದ, ತಮ್ಮ ಭಾಷೆಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವನ್ನು ಅಲ್ಲಿಯ ಕನ್ನಡಿಗರು ತಮ್ಮೆಲ್ಲ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಮನಪೂರ್ವಕವಾಗಿ ಮಾಡುತ್ತಿದ್ದಾರೆ. ಮನೆಯಲ್ಲಿ ಕನ್ನಡ ಮಾತಾಡುತ್ತಾರೆ. ಕನ್ನಡ ಚೆನ್ನಾಗಿ ಗೊತ್ತಿರುವ ಸದಸ್ಯರು ಒಟ್ಟು ಸೇರಿ ಮಕ್ಕಳಿಗೆ ವಾರದ ರಜಾದಿನಗಳಲ್ಲಿ ಕನ್ನಡ ಕಲಿಸುವ ಕನ್ನಡ ಶಾಲೆಯನ್ನು ನಡೆಸುತ್ತಿದ್ದಾರೆ ಎನ್ನುವುದನ್ನು ಕೇಳಿ ನನಗಾದ ಅಚ್ಚರಿ ಸಂತೋಷ ಅಷ್ಟಿಷ್ಟಲ್ಲ. ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಕಲಿಯುವುದೆಂದರೆ ಎಲ್ಲಿಲ್ಲದ ಅವಮಾನ. ಇಂಗ್ಲಿಷ್ ಮಾದ್ಯಮ ಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲಿ ಕನ್ನಡವನ್ನು ಎರಡನೇ ಭಾಷೆಯಾಗಿ ಕಲಿಯುವ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ. ಕನ್ನಡ ಬೋಧಿಸುವ ಕ್ರಮವಂತೂ ಬಹಳ ನಿರಾಶಾದಾಯಕ. ಅಲ್ಲಿಯ ಮಕ್ಕಳು ಅಮೇರಿಕನ್ ಆಕ್ಸೆಂಟ್ನಲ್ಲಿ ನಿರರ್ಗಳವಾಗಿ ಕನ್ನಡ ಮಾತಾಡುವುದನ್ನು ಕೇಳುವಾಗ, ಅಲ್ಲಿಯ ಹಿರಿಯರ ಪ್ರಯತ್ನವನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಅದರ ಜೊತೆಗೆ ಇಲ್ಲಿಯ ಇಂಗ್ಲಿಷ್ ಮೀಡಿಯಮ್ ಮಕ್ಕಳು ಕನ್ನಡ ಮಾತನಾಡಲು ಒದ್ದಾಡುವುದೂ ನೆನಪಿಗೆ ಬಾರದಿರುವುದಿಲ್ಲ.

2011ರ ಅಕ್ಟೋಬರ್ ತಿಂಗಳಲ್ಲಿ ಮಗನ ಜೊತೆಗೆ ಅನಿರೀಕ್ಷಿತವಾಗಿ ಸೈಂಟ್ಲೂಯಿಸ್ನ ಅಪರಿಚಿತ ನೆಲದಲ್ಲಿ ಕಾಲಿಟ್ಟಾಗ ಯಾರ ಪರಿಚಯವೂ ನಮಗಿರಲಿಲ್ಲ. ಆಗಷ್ಟೇ ಮಗನಿಗೆ ಅಲ್ಲಿಗೆ ಪೋಸ್ಟಿಂಗ್ ಆಗಿತ್ತು. ಅವನಿಗೂ ಹೊಸ ಜಾಗ. ಅಲ್ಲಿಗೆ ಪ್ರಯಾಣಿಸುವ ಮುನ್ನ ವಿಜಯ ಕರ್ನಾಟಕದಲ್ಲಿ ತಮ್ಮ ಅಂಕಣ ಬರಹಗಳಿಂದ ಪರಿಚಿತರಾಗಿದ್ದ ವಾಷಿಂಗ್ಟನ್ ನಿವಾಸಿ ಜೋಷಿಯವರ ಮೂಲಕ ಸೈಂಟ್ಲೂಯಿಸ್ನಲ್ಲಿ ನೆಲೆಸಿರುವ ಶ್ರೀಮತಿ ಜ್ಯೋತಿ ಮೈಸೂರು ಅವರ ಪರಿಚಯ ಈ ಮೈಲ್ ಮೂಲಕ ನನಗಾಗಿತ್ತು. ಯಾರೆಂದು ಗೊತ್ತಿರಲಿಲ್ಲ. ಮುಖ ಪರಿಚಯವಂತೂ ಇರಲೇ ಇಲ್ಲ. ಆದರೆ ನಾವು ಅಲ್ಲಿಗೆ ಕಾಲಿಟ್ಟ ಒಂದೆರಡು ದಿನಗಳಲ್ಲೇ ಅವರು ಮನೆಯಡುಗೆ ಹಿಡಿದುಕೊಂಡು ಬಂದು ನಮ್ಮನ್ನು ಭೇಟಿಯಾಗಿ, ಮುಂದಿನ ವಾರದ ಕೊನೆಗೆ ಅವರ ಮನೆಗೆ ಊಟಕ್ಕೆ ಕರೆದು, ಅಲ್ಲಿರುವ ಇತರ ಕನ್ನಡಿಗರನ್ನೂ ಭೇಟಿ ಮಾಡಿಸಿ ನಾನು ಕನ್ನಡ ನಾಡಿನಲ್ಲಿಯೇ ಇರುವ ಭಾವನೆ ಮೂಡಿಸಿದ್ದು ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ನೆನಪು. ಅವರೆಲ್ಲರೂ ನನ್ನನ್ನು ಹಳೆಯ ಗೆಳತಿಯೊಬ್ಬಳನ್ನು ಭೇಟಿಯಾದಂತೆ ಸಂಭ್ರಮಿಸಿದ್ದು, ತಮ್ಮಲ್ಲಿ ಒಂದಾಗಿಸಿಕೊಂಡದ್ದು ಅಲ್ಲಿಯವರ ಸ್ನೇಹಪರತೆಗೆ ಸಾಕ್ಷಿ. ಇತ್ತೀಚೆಗೆ ಇಂತಹ ಸ್ನೇಹ ಇಲ್ಲಿಯ ಕನ್ನಡಿಗರಲ್ಲಿ ಮಾಯವಾಗುತ್ತಿರುವುದು ನೆನಪಿಗೆ ಬಂದು ಹೃದಯ ಭಾರವಾಗಿತ್ತು.

ಕೆಲಸದ ನಿಮಿತ್ತ ನನ್ನ ಮಗ ಮೂರುನಾಲ್ಕು ದಿನಕ್ಕೆ ನ್ಯೂಜೆರ್ಸಿಗೆ ಹೋಗ ಬೇಕಾದಾಗ ಜ್ಯೋತಿ ಮತ್ತು ಅನಂತ್ ಅವರು ನನ್ನನ್ನು ಅವರ ಮನೆಯಲ್ಲಿ ನಿಲ್ಲಿಸಿಕೊಂಡು ಸ್ವಂತ ಅಕ್ಕನಂತೆ ನೋಡಿಕೊಂಡದ್ದು, ಸ್ವಲ್ಪ ದಿನಗಳಲ್ಲೇ ನಡೆಯಲಿರುವ ರಾಜ್ಯೋತ್ಸವ ಸಮಾರಂಭಕ್ಕೆ ಒಬ್ಬೊಬ್ಬರ ಮನೆಯಲ್ಲಿ ಸೇರಿ ನಡೆಸುವ ತಯಾರಿಯ ಕಾರ್ಯಕ್ರಮಗಳಲ್ಲಿ ನಾನೂ ಸೇರಿಕೊಳ್ಳುವಂತೆ ಮಾಡಿದ್ದು ಮನಕ್ಕೆ ಮುದ ನೀಡಿ ನಾನು ಕರ್ನಾಟಕದಲ್ಲೇ ಇರುವೆನೇನೋ ಎಂದು ಅನಿಸುವಂತೆ ಮಾಡಿತ್ತು.

2011ರಲ್ಲಿ ನಾನು ಅಲ್ಲಿಗೆ ಹೋಗಿದ್ದ ಸಮಯದಲ್ಲಿ ‘ಸಂಗಮ’ದ ಅಧ್ಯಕ್ಷತೆಯ ಚುಕ್ಕಾಣಿ ಹಿಡಿದು ನಡೆಸುತ್ತಿದ್ದವರು ಶ್ರೀ ವಿನಾಯಕ ಶರ್ಮಾ. ಅವರಿಗೆ ಸಹಕಾರ ಒದಗಿಸುತ್ತಿದ್ದವರು ಉಪಾಧ್ಯಕ್ಷರಾಗಿ ಶ್ರೀಮತಿ ದೀಪ್ತಿ ಭಾರದ್ವಾಜ್, ಕಾರ್ಯದಶರ್ಿಯಾಗಿ ಶ್ರೀಮತಿ ಸೀಮಾಮೂತರ್ಿ, ಖಜಾಂಜಿಯಾಗಿ ಶ್ರೀಮತಿ ಜ್ಯೋತಿ ಮೈಸೂರು. ಇದಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವರ ಜೊತೆ ಕೈಜೋಡಿಸಿರುವವರು ಶ್ರೀ ಆರ್. ಶ್ರೀನಿವಾಸ್, ಶ್ರೀ ಹೇಮಂತ ಕುಮಾರ್, ಶ್ರೀ ಪ್ರಭಾಕರ್ ಬೆಟಂಗ್, ಶ್ರೀಮತಿ ಲಕ್ಷ್ಮಿನವೀನ್, ಶ್ರೀಮತಿ ಶೀತಲ್ ರಾಕೇಶ್ ಮತ್ತು ಶ್ರೀಮತಿ ಮಾಲತಿ ರೆಡ್ಡಿ, ಇವರಲ್ಲದೆ ಹಿರಿಯ ಸಲಹೆಗಾರರಾಗಿ ಶ್ರೀ ಎಂ. ಕೆ. ಸತೀಷ್, ಶ್ರೀ ಪಿ. ವಿಠಲ್ ಭಟ್, ಶ್ರೀ ಅರವಿಂದ ಉಪಾಧ್ಯ, ಶ್ರೀ ಸುನಿಲ್ ಕಾಂತರಾಜು.

ನವೆಂಬರ್ ಹತ್ತೊಂಭತ್ತರಂದು ‘ಸಂಗಮ’ ಕನ್ನಡ ಸಂಘ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಂಡಿತ್ತು. ‘ನೀವೂ ಬನ್ನಿ ನಮ್ಮ ಸಮಾರಂಭವನ್ನು ನೋಡಿ’ ಎನ್ನುವ ಆತ್ಮೀಯ ಆಹ್ವಾನವನ್ನು ಸ್ವೀಕರಿಸದೆ ಇರುವ ಹಾಗೆಯೇ ಇರಲಿಲ್ಲ. ಬಹಳ ಸಂತಸದಿಂದ ಮಗನ ಜೊತೆಗೆ ‘ಗಾಂಧಿ ಸೆಂಟರ್’ನಲ್ಲಿ ನಡೆಯಲಿದ್ದ ಸಮಾರಂಭಕ್ಕೆ ಹೋಗಿದ್ದೆವು. ಅದರ ಎದುರೇ ಒಂದು ಭವ್ಯವಾದ ಹಿಂದೂ ದೇವಸ್ಥಾನವಿತ್ತು. ಅದೊಂದು ಶ್ವೇತ ಭವನ. ನಮ್ಮ ಎಲ್ಲ ದೇವರುಗಳನ್ನು ಅಲ್ಲಿ ಪ್ರತಿಷ್ಟಾಪಿಸಿದ್ದರು. ಕನ್ನಡ ಸಂಘದ ಕಾರ್ಯಕ್ರಮಗಳು ನಡೆಯುವ ದಿನ ಆ ದೇವಸ್ಥಾನದಲ್ಲೂ ಜನ. ಗಾಂಧಿ ಸೆಂಟರ್ ನಾವಿದ್ದಲ್ಲಿಂದ ಸುಮಾರು ಇಪ್ಪತ್ತೈದು ಮೈಲಿ ದೂರದಲ್ಲಿತ್ತು. ಆ ಪ್ರದೇಶಕ್ಕೆ ಹೋಗುವಾಗಲೇ ಖುಷಿಯಾಗಿತ್ತು. ವಾಹನ ದಟ್ಟಣೆಯಂತೂ ಇಲ್ಲವೇ ಇಲ್ಲ. ದಾರಿಯುದ್ದಕ್ಕೂ ಬಟಾ ಬಯಲು. ಹಿತಕರವಾದ ಗಾಳಿ. ದೂರ ದೂರದಲ್ಲಿ ಒಂದೊಂದು ದೊಡ್ಡ ದೊಡ್ಡ ಆಕರ್ಷಕ ಬಂಗಲೆಗಳು, ಸಾಲುಗಟ್ಟಳೆ ಮರಗಿಡಗಳು. ಚಳಿಗಾಲವಾದುದರಿಂದ ಎಲೆಗಳುದುರಿ ಬೋಳಾಗಿದ್ದರೂ ಆಗಸದ ಎತ್ತರಕ್ಕೆ ಪಸರಿಸಿದ್ದ ಮರದ ಗೆಲ್ಲುಗಳು ರೇಖಾಚಿತ್ರದಂತೆ ಕಾಣುತ್ತಿದ್ದುವು. ಪ್ರಕೃತಿ ಹೇಗಿದ್ದರೂ ಚೆನ್ನವೇ.

ಸಮಾರಂಭದ ಸಭಾಂಗಣದಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಸಂಭ್ರಮ, ಎಲ್ಲೆಲೂ ಕಲರವಿಸಿದ್ದ ಕನ್ನಡದ ಮಾತುಗಳು ನಾನು ಅಮೇರಿಕಾದಲ್ಲಿದ್ದೇನೆ ಎನ್ನುವ ನೆನಪನ್ನೇ ಮರೆಸಿತ್ತು. ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತೆ ಎಲ್ಲರೂ ಕನ್ನಡ ನಾಡಿನ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸುತ್ತಿದ್ದರು. ಬೆಂಗಳೂರಿನ ರಾಜ್ಯೋತ್ಸವ ಸಮಾರಂಭಗಳಲ್ಲಿ ಮಕ್ಕಳು ಇರುವುದೇ ಇಲ್ಲ. ಏನಾದರೂ ಸ್ಪರ್ದೆಗಳಿದ್ದರೆ ಸ್ಪರ್ಧೆಯಲ್ಲಿ ಭಾಗವಹಿಸುವ ಕೆಲವು ಮಕ್ಕಳಿರುತ್ತಾರೆ. ಇಲ್ಲಿ ಹಾಗಲ್ಲ ಪ್ರತೀ ಮನೆಯ ಮಕ್ಕಳೂ ಅಲ್ಲಿದ್ದು ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ನಾನು ಆ ಸಂಭ್ರಮವನ್ನು ನೋಡುವುದರಲ್ಲಿ ಮೈಮರೆತಿರುವಾಗ ಅಧ್ಯಕ್ಷ ವಿನಾಯಕ ಶರ್ಮಾ ಅವರು ಹತ್ತಿರ ಬಂದು ‘ನೀವು ಒಂದು ಕ್ಷಣ ವೇದಿಕೆಗೆ ಬಂದು ನಾಲ್ಕು ಮಾತಾಡಬೇಕು. ನೀವು ನಮ್ಮ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಮ್ಮೊಡನೆ ಇರುವುದು ನಮಗೆ ತುಂಬಾ ಸಂತಸದ ಸಂಗತಿ’ ಎಂದಾಗ ಇದೂ ಒಂದು ಅನಿರೀಕ್ಷಿತ ಅವಕಾಶವೆಂದು ಸಂತಸದಿಂದಲೇ ಸಮ್ಮತಿಸಿದ್ದೆ.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳೆಯರಿಂದ ಪ್ರಾರ್ಥನೆ. ಇದಕ್ಕೂ ಮಹಿಳೆಯರನ್ನು ಒಟ್ಟು ಸೇರಿಸಿದ್ದು ಜ್ಯೋತಿಯವರೇ ಇರಬೇಕು. ಸ್ವತಹ ಹಾಡುಗಾರರು. ಆ ಗುಂಪಿನಲ್ಲಿದ್ದ ಎಲ್ಲರೂ ಸಂಗೀತದಲ್ಲಿ ಆಸಕ್ತಿ ಇದ್ದವರೇ. ತಮ್ಮ ಬಾಲ್ಯದಲ್ಲಿ ಸಂಗೀತ ಕಲಿತಿದ್ದವರೇ. ಹಾಗಾಗಿ ಅದಕ್ಕೊಂದು ಕ್ಲಾಸಿಕಲ್ ಟಚ್ ಇತ್ತು. ಮಹಿಳೆಯರ ಕಾರ್ಯಕ್ರಮ ಅದೊಂದೇ. ಮತ್ತೆಲ್ಲಾ ಮಕ್ಕಳ ಕಾರ್ಯಕ್ರಮಗಳು. ಮಹಿಳೆಯರದ್ದು ಪರದೆಯ ಹಿಂದಿನ ಕೆಲಸ. ಸ್ಟೇಜ್ ಮೇಲೆ ಮಕ್ಕಳಿಗೇ ಆಧ್ಯತೆ. ಎಲ್ಲ ಕಾರ್ಯಕ್ರಮಗಳೂ ಕನ್ನಡದಲ್ಲೇ. ಕನ್ನಡದ ಹಾಡಿಗೆ ಐದಾರು ವಯಸ್ಸಿನ ಪುಟಾಣಿಗಳು ಹೆಜ್ಜೆ ಹಾಕಿದ್ದನ್ನು ನೋಡುವುದೇ ಖುಷಿ. ಕನ್ನಡ ರಾಜ್ಯ ಉದಯವಾಗಲು ಶ್ರಮಿಸಿದವರನ್ನೆಲ್ಲಾ ನೆನಪಿಸಿಕೊಂಡು ಹಿರಿಯರು ರೂಪಿಸಿ, ಮಕ್ಕಳು ನಡೆಸಿಕೊಟ್ಟ ‘ಏಕೀಕರಣ’ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದಿತ್ತು. ಮೈಸೂರು ಕನ್ನಡಿಗರು, ದಕ್ಷಿಣ ಕನ್ನಡದ ಕನ್ನಡಿಗರು, ಧಾರವಾಡ ಕಡೆಯ ಕನ್ನಡಿಗರು ಎಂದು ಆಯಾ ಪ್ರದೇಶದ ಉಡುಗೆ ತೊಡುಗೆಗಳಿಂದ ಮಕ್ಕಳು ಮಿಂಚಿದ್ದರು. ಕನ್ನಡ ನಾಡಿನ ರಚನೆಗಾಗಿ ಹೋರಾಡಿದ ಸಂಘಸಂಸ್ಥೆಗಳನ್ನೂ ನೆನಪಿಸಿಕೊಂಡದ್ದು ಹೃದಯಂಗಮವಾಗಿತ್ತು. ವಿಶೇಷವಾಗಿತ್ತು.

ಮನಸಿಗೆ ಹಿಡಿಸಿದ್ದು ಅವರ ಅತಿ ಭಿನ್ನವಾದ ನಿರೂಪಣಾ ರೀತಿ. ‘ಪಯಣ’ ಎನ್ನುವ ಹಾಸ್ಯಮಯ ನಾಟಕೀಯ ಶೈಲಿಯಲ್ಲಿ ಸೈಂಟ್ಲೂಯಿಸ್ನಿಂದ ಬೆಂಗಳೂರಿಗೆ ಬಂದಿಳಿವ ಯುವಕ ತನ್ನೊಬ್ಬ ಗೆಳೆಯನ ಜೊತೆಗೆ ಬೆಂಗಳೂರಿನಿಂದ ಧಾರವಾಡದ ಕಡೆಗೆ ಸಂಚರಿಸುವಾಗ ನೋಡುವ ಸ್ಥಳ ಪರಿಚಯ, ಎದುರಿಸುವ ಆತಂಕ, ಕೌತುಕಗಳ ಜೊತೆಗೆ ಕಾರ್ಯಕ್ರಮ ನಿರೂಪಣೆ ಮಾಡಿದ್ದು ಅತ್ಯಂತ ಆಸಕ್ತಿದಾಯಕವಾಗಿತ್ತು. ದತ್ತಾತ್ರಿ ಚಂದ್ರಶೇಖರ್ ಮತ್ತು ಹೇಮಂತ ಕುಮಾರ್ ಅವರು ಬೆಂಗಳೂರು ಕನ್ನಡಿಗರಿಗೆ ಸವಾಲು ಹಾಕುವಂತೆ ಹಾಸ್ಯಮಯವಾಗಿ ಮಾಡಿದ ನಿರೂಪಣೆ ಮನಕ್ಕೆ ಮುದ ನೀಡಿತ್ತು. ನಮ್ಮ ಕಾರ್ಯಕ್ರಮಗಳಲ್ಲಿ ಒಬ್ಬರೇ ನಿರೂಪಕರು ಬೋರು ಹಿಡಿಸುವಷ್ಟು ಮಾತಾಡುವುದನ್ನು ನೋಡಿ ನೋಡಿ ಬೇಸತ್ತಿದ್ದ ನನಗೆ ಆ ನಿರೂಪಣಾ ರೀತಿ ಬಹಳ ಇಷ್ಟವಾಯಿತು. ಯುವ ಅಮೇರಿಕನ್ನಡಿಗ ದತ್ತಾತ್ರಿಯವರಂತೂ ಅರಳು ಹುರಿದಂತೆ ಮಾತಾಡುವುದನ್ನು ಕೇಳುವಾಗ ಬೆಂಗಳೂರಿನ ಕನ್ನಡ ಬಾರದ ಟೆಕ್ಕಿಗಳು ನೆನಪಿಗೆ ಬಂದಿದ್ದರು.

ಮಕ್ಕಳ ಕಾರ್ಯಕ್ರಮಗಳ ನಡುವೆಯೇ ನನ್ನನ್ನೂ ವೇದಿಕೆಗೆ ಕರೆದು ಪರಿಚಯಿಸಿದ್ದು ಬಹಳ ಸ್ವಾರಸ್ಯಕರವಾಗಿತ್ತು. ಹಿಂದಿನ ಅಧ್ಯಕ್ಷ ಶ್ರೀ ಅರವಿಂದ ಉಪಾಧ್ಯರು ಸಭೆಗೆ ಪರಿಚಯಿಸಿದ್ದರು. ನಮ್ಮ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡದ ಲೇಖಕಿಯೊಬ್ಬರು ನಮ್ಮೊಡನಿರುವುದು ನಮಗೆ ಅತ್ಯಂತ ಸಂತಸದ ಸಂಗತಿಯೆಂದು ನನಗೆ ಅಚ್ಚರಿಯಾಗುವಂತೆ ನನ್ನನ್ನು ಸನ್ಮಾನಿಸಿ ಗೌರವಿಸಿದ್ದು ಅವರ ಕನ್ನಡ ಪ್ರೀತಿಗೆ ದ್ಯೋತಕ. ನನಗೆ ಇದು ಅನಿರೀಕ್ಷಿತವಾಗಿ ಸಂದ ಗೌರವ. ನಾನು ಹೆಚ್ಚು ಮಾತಾಡಲಿಲ್ಲವಾದರೂ ಅವರ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸುವ ಅವಕಾಶ ಸಿಕ್ಕಿತ್ತು. ಕಳೆದ ಐದಾರು ವರುಷಗಳಿಂದ ಕಾರಣಾಂತರಗಳಿಂದ ನಾನು ಯಾವ ಸಮಾರಂಭಗಳಲ್ಲೂ ಭಾಗಿಯಾಗುತ್ತಿರಲಿಲ್ಲ. ಆದರೆ ಕನ್ನಡ ನಾಡಿನಿಂದ ದೂರವಿದ್ದ ಸಂದರ್ಭದಲ್ಲಿ ‘ಸಂಗಮ ಕನ್ನಡ ಸಂಘ’ದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವಂತಾದದ್ದು ನನಗೆ ಬಯಸದೇ ದೊರಕಿದ ಅವಕಾಶ.

ಸೈಂಟ್ಲೂಯಿಸ್ನಲ್ಲಿ ಬೆಂಗಳೂರು, ಮಂಗಳೂರಿನ, ಶಿವಮೊಗ್ಗ ತೀರ್ಥಹಳ್ಳಿ ಕಡೆಯ ಕನ್ನಡಿಗರಲ್ಲದೆ ನಮ್ಮ ಉಡುಪಿ ಕಡೆಯವರು ಸಾಕಷ್ಟು ಜನರಿದ್ದಾರೆ. ಹಾಗಾಗಿ ಕನ್ನಡದ ಜೊತೆಗೆ ತುಳು ಮಾತಾಡುವವರೂ ನನಗೆ ದೊರೆತದ್ದು ಇನ್ನಷ್ಟು ಸಂತಸ ನೀಡಿತ್ತು. ಜ್ಯೋತಿ, ಅನಂತ್, ಮತ್ತು ನನ್ನ ಮೊಮ್ಮಗನ ವಯಸ್ಸಿನ ಅವರ ಮಗ ಅವಿರಥ್ನ ಪ್ರೀತಿಯ ಆಥಿತ್ಯದಲ್ಲಿ ಕಳೆದ ನಾಲ್ಕು ದಿನಗಳು; ಅರವಿಂದ ಉಪಾಧ್ಯರ ಮನೆಯ ರುಚಿಯಾದ ಊಟ ಮತ್ತು ಅವರು ತೋರಿದ ಆತ್ಮೀಯತೆ; ಅಲ್ಲಿಯ ಚಳಿಯಿಂದ ರಕ್ಷಿಸಿಕೊಳ್ಳಲು ಅವರ ಹೆಂಡತಿ ಪ್ರೀತಿಯಿಂದ ಕೊಟ್ಟ ಕೋಟು, ಟೋಪಿ, ಶಾಲು; ದತ್ತಾತ್ರಿಯವರ ಮನೆಯ ಆದರದ ಆತಿಥ್ಯ ಮತ್ತು ಅವರ ಹೆಂಡತಿ ಸುಶ್ಮಾಳ ಸುಂದರ ಪೈಂಟಿಂಗ್ಸ್; ನಾನು ಕೊಟ್ಟ ಒಂದೆರಡು ಪುಸ್ತಕಗಳನ್ನು ಓದಿ ‘ಆಂಟೀ, ನಾನು ನಿಮ್ಮ ಫ್ಯಾನ್ ಆಗಿ ಬಿಟ್ಟಿದ್ದೇನೆ’ ಎನ್ನುವ ದೀಪ್ತಿಯವರ ಪ್ರೀತಿಯ ಮುಗ್ಧ ಮಾತು; ಸಮಾರಂಭದಲ್ಲಿ ಭೇಟಿಯಾದ ಎಲ್ಲ ಕನ್ನಡಿಗರ ಪ್ರೀತಿ, ಇವುಗಳ ಮೂಟೆ ಹೊತ್ತು ಸೈಂಟ್ಲೂಯಿಸ್ ಬಿಡುವಾಗ ಮನಸ್ಸು ಭಾರವಾದದಂತೂ ನಿಜ. ಪ್ರೀತಿಯನ್ನೇ ಹೊದ್ದು ಕಳುಹಿಸಿದ್ದ ಅಲ್ಲಿಯ ಕನ್ನಡಿಗರು ನನ್ನ ಮನವನ್ನು ಆಕ್ರಮಿಸಿಕೊಂಡಿದ್ದರು.

‘ಸಂಗಮ ಕನ್ನಡ ಸಂಘ’ ಏಳು ಸಮುದ್ರದಾಚೆಗಿರುವ ಕನ್ನಡಿಗರ ಕನ್ನಡಾಭಿಮಾನದ ಪರಿಚಯ ಮಾಡಿಸಿತ್ತು. ಜೊತೆಗೆ ಬೆಂಗಳೂರಿನ ಕನ್ನಡಿಗರ ಕನ್ನಡದ ಮೇಲಿನ ನಿರಾಸಕ್ತಿಯನ್ನೂ ನೆನಪಿಸಿತ್ತು. ಅಲ್ಲಿ ಎಲ್ಲೆಲ್ಲಿಂದಲೋ ಬಂದ ಕನ್ನಡಿಗರು ಒಬ್ಬರಿಗೊಬ್ಬರು ಹತ್ತಿರವಾಗುತ್ತಿದ್ದರು. ಇಲ್ಲಿಯೇ ಹುಟ್ಟಿ ಒಟ್ಟಿಗೇ ಬೆಳೆದ ಇಲ್ಲಿಯ ಕನ್ನಡಿಗರು ಒಬ್ಬರಿಂದ ಒಬ್ಬರು ದಿನದಿನಕ್ಕೆ ದೂರವಾಗುತ್ತಿದ್ದಾರೆ ಎಂದು ಅನಿಸಿದಾಗ ಹೀಗೇಕೆ ಎಂದು ಅನಿಸಿದ್ದಂತೂ ನಿಜ.

‍ಲೇಖಕರು G

13 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading