17ನೇ ವರ್ಷದ ಸಂಭ್ರಮ
ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ
ಕಲಬುರಗಿ ತಾಲೂಕಿನ ಸೇಡಂನ ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ವತಿಯಿಂದ `ಅಮ್ಮ ಪ್ರಶಸ್ತಿ’ 17ನೇ ವರ್ಷದ ಸಂಭ್ರಮ ಕಾರ್ಯಕ್ರಮವು ನ. 26 ರಂದು ಸಂಜೆ 5.30 ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯಲಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ.ಶ್ರೀ ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮವನ್ನು ಕಲಬುರಗಿ ವಿವಿ ಕುಲಪತಿ ಪ್ರೊ. ಎಸ್.ಆರ್.ನಿರಂಜನ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನ ಪರಿಷತ್ತಿನ ಸದಸ್ಯ ಶರಣಪ್ಪ ಮಟ್ಟೂರ ಮುಖ್ಯ ಅತಿಥಿಗಳಾಗಿರುವರು.
ಅಮ್ಮ ಪ್ರಶಸ್ತಿ ಪುರಸ್ಕೃತರು :
ಎಂ.ಆರ್.ಕಮಲ `ಮಾರಿಬಿಡಿ’ ಕಾವ್ಯಕ್ಕಾಗಿ,
ರಾಜಾರಾಂ ತಲ್ಲೂರ `ನುಣ್ಣನ್ನ ಬೆಟ್ಟ’ ಅಂಕಣ ಬರಹಕ್ಕಾಗಿ,
ರೇಖಾ ಕಾಖಂಡಕಿ `ವೈವಸ್ವತ’ ಕಾದಂಬರಿಗಾಗಿ,
ಎಚ್.ಆರ್.ಸುಜಾತಾ `ನೀಲಿ ಮೂಗಿನ ನತ್ತು’ ಕೃತಿಗಾಗಿ,
ಗಿರೀಶ ಜಕಾಪುರೆ `ನಾಝೀ ನರಮೇಧ’ ಸಂಶೋಧನೆಗಾಗಿ ಭಾಜನರಾಗಲಿದ್ದಾರೆ.
ಅಮ್ಮ ಗೌರವ ಪುರಸ್ಕಾರ :
ಕನ್ನಡ ನಾಡು, ನುಡಿಗಾಗಿ ಸಲ್ಲಿಸಿದ ಕೊಡುಗೆಗಾಗಿ `ಅಮ್ಮ ಗೌರವ’ ಪುರಸ್ಕಾರವನ್ನು ಈ ಬಾರಿ ಹಿರಿಯ ವಿದ್ವಾಂಸ ಡಾ.ಚೆನ್ನಣ್ಣ ವಾಲೀಕಾರ , ಎ.ರಮೇಶ ಉಡುಪ , ಡಾ.ವಿನಯಾ ಒಕ್ಕುಂದ , ಡಾ. ಎಸ್.ಎಸ್.ಗುಬ್ಬಿ , ಡಾ. ರಮೇಶ ಐನಾಪುರ, ಅವರುನ್ನು ಗೌರವಿಸಲಾಗಿದೆ
ಹೊಲಿಗೆ ಮಿಷನ್ ವಿತರಣೆ :
ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರ ತಂದೆ ನಾಗಪ್ಪ ಮಾಸ್ತರ ಮುನ್ನೂರ ಸ್ಮರಣಾರ್ಥ ಹೊಲಿಗೆ ಮಿಷಿನ್ ವಿತರಣೆ ಮಾಡಲಾಗುವುದು.
ಕಿರಣ್ ಪಾಟೀಲ ಕಲಬುರಗಿ ಅವರಿಂದ `ಅಮ್ಮನ ಕುರಿತು ಎಂದೂ ಮರೆಯದ ಹಾಡುಗಳು’ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.






0 Comments