ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಲ್ಯುಲಾಯ್ಡ್ ಸಿನಿಮಾ ಮೋಹದ ಕತೆ – ಚೆಲ್ಲೊ ಶೊ

ಚಂದ್ರಪ್ರಭ ಕಠಾರಿ

ನಾನು ಬೆಳಕನ್ನು ಕಲಿಯಬೇಕು…ಬೆಳಕಿದ್ದರೆ ಕತೆ…ಕತೆಯಿದ್ದರೆ ಸಿನಿಮಾ.

ಇದು ಚೆಲ್ಲೊ ಶೊ ಗುಜರಾತಿ ಸಿನಿಮಾದಲ್ಲಿ ಪ್ರೊಟಗಾನಿಷ್ಟ್ ಬಾಲಕ ಸಮಯ್ ಹೇಳುವ ಮಾತಿದು. ಹಾಗಾದರೆ ಕತ್ತಲೆಯಲ್ಲಿ ಕತೆ ಇರುವುದಿಲ್ಲವೇ? ಅದು ಹಾಗಲ್ಲ. ಸಮಯ್ ಹೇಳುತ್ತಿರುವುದು – ಟಾಕೀಸಿನಲ್ಲಿ ಪ್ರೊಜೆಕ್ಟರ್ ನಿಂದ ಬೆಳ್ಳಿಪರದೆಯ ಮೇಲೆ ಚೆಲ್ಲುವ ಬೆಳಕು ಮತ್ತು ಆ ಬೆಳಕು ಮೂಡಿಸುವ ಚಲಿಸುವ ಚಿತ್ರಗಳು, ಚಲಿಸುವ ಚಿತ್ರಗಳು ಹೇಳುವ ಕತೆಗಳು. 

೨೦೨೧ರಲ್ಲಿ ಬಿಡುಗಡೆಯಾದ ಗುಜರಾತಿ ಚಿತ್ರ ‘ಚೆಲ್ಲೊ ಶೊ’ ಅಥವಾ ‘ಲಾಸ್ಟ್ ಫಿಲಮ್ ಶೊ’ ಅನ್ನು ಪ್ಯಾನ್ ನಳೀನ್ ಕತೆ, ಚಿತ್ರಕತೆ ಬರೆದು  ನಿರ್ದೇಶಿಸಿದ್ದಾರೆ. ಈ ಸಿನಿಮಾ ಇದೇ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ಭಾರತೀಯ ಚಿತ್ರವಾಗಿ ಆಯ್ಕೆಯಾಗಿದೆ. ಇದಕ್ಕು ಮುಂಚೆಯೇ ಈ ಚಿತ್ರ ವಿಶ್ವದ ಹಲವು ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಗೆದ್ದಿದೆ.

‘ಚೆಲ್ಲೊ ಶೊ’ ಸಿನಿಮಾದ ಬಗ್ಗೆ ಅರಿಯುವ ಮೊದಲು ಪ್ಯಾನ್ ನಳೀನ್ ಅವರ ಜೀವನ ಮತ್ತು ಸಿನಿಮಾ ಬದುಕಿನ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ – ಗುಜರಾತ್ ರಾಜ್ಯದ ಅದ್ ತಾಲ ಎಂಬ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಬಾಲಕ ನಳೀನ್ ಕುಮಾರ್ ಪಾಂಡ್ಯ, ಸಿನಿಮಾ ಮೋಹಿಯಾಗಿ ಬದ್ಧತೆ, ಸಾಧಿಸುವ ಛಲದೊಂದಿಗೆ ತಾನೇ ಸಿನಿಮಾವನ್ನು ಕಲಿತು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವುದು ಸಾಮಾನ್ಯದ ಮಾತಲ್ಲ. ಸುಮಾರು ಹನ್ನೆರೆಡನೇ ವಯಸ್ಸಿನವರೆಗೂ ರೈಲ್ವೆಸ್ಟೇಷನ್ನಿನ ಪ್ಲಾಟ್ ಫಾರಮ್ಮಿನಲ್ಲಿ ಚಾ ಮಾರುತ್ತಿದ್ದ ತನ್ನ ತಂದೆಗೆ ಸಹಾಯಕರಾಗಿದ್ದ ನಳೀನ್ ಶಾಲೆಯ ಪಾಠಗಳಲ್ಲಿ ಆಸಕ್ತಿ ಇರದೆ, ಮುಂದೆ ಸಿನಿಮಾ ಆಸಕ್ತಿಯ ಸಲುವಾಗಿ ಮನೆ ಬಿಟ್ಟು ಫೈನ್ ಆರ್ಟ್ ಕಲಿಯಲು ಬರೋಡದ ಎಮ್ ಎಸ್ ಯೂನಿವರ್ಸಿಟಿಗೆ ಸೇರುತ್ತಾರೆ. ಈ ಹಿನ್ನೆಲೆಯ ಕಾರಣಕ್ಕೊ ಏನೋ, ‘ಚೆಲ್ಲೊ ಶೊ’ ಸಿನಿಮಾದಲ್ಲಿ ರೈಲ್ವೆಸ್ಟೇಷನ್ನಿನ ಪ್ಲಾಟ್ ಫಾರಮ್ಮಿನಲ್ಲಿ ಚಾ ಮಾರುವ ತಂದೆಯ ಪಾತ್ರವನ್ನು ಮತ್ತು ಬಾಲಕ ಪಾತ್ರ ಸಮಯ್ ಮನೆ ಬಿಟ್ಟು ಹೋಗುವ ಸನ್ನಿವೇಶವನ್ನು  ಸೃಷ್ಟಿಸಿದ್ದಾರೆ.

ಬರೋಡದಲ್ಲಿ ನಳೀನ್ ಗೆ ಹಾಲಿವುಡ್ ಮತ್ತು ಜಾಗತಿಕ ಸಿನಿಮಾಗಳ ಪರಿಚಯವಾಗಿ ಆ ಬಗ್ಗೆ ಆಸಕ್ತಿ ಮೂಡುತ್ತದೆ. ಮುಂದೆ ಅಹಮದಬಾದಿನ ನ್ಯಾಷನಲ್ ಇನ್ಸ್ ಟಿಟೂಟ್ ಆಫ್ ಡಿಸೈನ್ ನಲ್ಲಿ ವ್ಯಾಸಂಗ ಮಾಡುತ್ತ ಫಿಲಮ್ ಕ್ಲಬ್ಬನ್ನು ಪ್ರಾರಂಭಿಸಿ ಜಾಗತಿಕ ಸಿನಿಮಾಗಳನ್ನು ಪ್ರದರ್ಶಿಸುತ್ತಾರೆ. ಆಗ ತಮ್ಮ ಶಿಕ್ಷಣ ಮತ್ತು ಚಿತ್ರ ತಯಾರಿಕೆಯ ವೆಚ್ಚವನ್ನು ಭರಿಸಲು ಐವತ್ತಕ್ಕು ಹೆಚ್ಚು ಮದುವೆ ಸಮಾರಂಭದ ವಿಡಿಯೋಗ್ರಾಫಿಯನ್ನು ಮಾಡಿ, ಅದರಲ್ಲಿ ಬಂದ ಹಣದಲ್ಲಿ ಅಹಮದಬಾದಿನ ಸಂಡೇ ಬಜಾರಿನಲ್ಲಿ ಕೊಂಡ ಹಳೇಯ ಕ್ಯಾಮರೆವನ್ನು ಬಳಸಿಕೊಂಡು ನಾಲ್ಕು ಅನಿಮೇಶನ್ ಮತ್ತು ಇಪ್ಪತ್ತು ಮೂಕಿಚಿತ್ರಗಳನ್ನು ಮಾಡುತ್ತಾರೆ.

ನಂತರ, ಮುಂಬೈಗೆ ಬಂದು ದೂರದರ್ಶನದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷಣ್ ಅವರೊಂದಿಗೆ ಕಾಮಿಡಿ ಟಿವಿ ಸೀರಿಯಲ್ ಗಳಿಗಾಗಿ ಕೆಲಸ ಮಾಡುತ್ತಾರೆ. ಮುಂದೆ ಅದು ‘ವಾಗಲೇ ಕೀ ದುನಿಯಾ’ ಎಂಬ ಹೆಸರಲ್ಲಿ ಪ್ರಸಾರವಾಗಿ ಪ್ರಸಿದ್ಧಿಗೆ ಬರುತ್ತದೆ. ತೊಂಭತ್ತರ ದಶಕದಲ್ಲಿ ಹಲವಾರು ಡಾಕ್ಯುಮೆಂಟರಿ ಮತ್ತು ಕಿರುಚಿತ್ರಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ಮುಖ್ಯವಾಗಿ – ಸೆಕ್ರೆಡ್ ಕರ್ಟ್ ಸನ್ ದೇವದಾಸಿ (Sacred Courtesan Devadasi) ಎಂಬ ಡಾಕ್ಯುಮೆಂಟರಿ ಮತ್ತು ಖಜುರಹೊ (Khajuraho) ಎಂಬ ಕಥಾನಕ ಕಿರುಚಿತ್ರ ಪ್ಯಾರಿಸಿನ ಪ್ರಖ್ಯಾತ ಚಲನಚಿತ್ರ ಲೈಬ್ರರಿ ಸಿನಿಮಥಿಕ್ ನಲ್ಲಿ ಪ್ರದರ್ಶನವಾಗುವುದರ ಮೂಲಕ ಅವರ ಚಲನಚಿತ್ರ ನಿರ್ಮಾಣದ ಆಸಕ್ತಿಯನ್ನು ವಿಶ್ವ ಸಿನಿಮಾ ಗುರುತಿಸುತ್ತದೆ.

ಮುಂದೆ ಅವರ ವೃತ್ತಿ ಜೀವನದ ಮೈಲಿಗಲ್ಲೆಂದೇ ಗುರುತಿಸುವ ‘ಸಂಸಾರ’ ಚಿತ್ರವನ್ನು ನಿರ್ಮಿಸುತ್ತಾರೆ. 2000 ಇಸವಿಯಲ್ಲಿ ತಯಾರಾಗುವ ಈ ‘ಸಂಸಾರ’ ಚಿತ್ರದ ಪಾತ್ರವರ್ಗ, ತಾಂತ್ರಿಕವರ್ಗದಲ್ಲಿ ಹದಿನಾಲ್ಕು ಬೇರೆ ಬೇರೆ ದೇಶದವರು ಭಾಗವಹಿಸಿರುವುದು ಒಂದು ವಿಶೇಷ. ಈ ಚಿತ್ರದ ಮತ್ತೊಂದು ಹೆಗ್ಗಳಿಕೆ ಎಂದರೆ ಟೊರೊಂಟೊ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲಲ್ಲಿ ಪ್ರೀಮಿಯರ್ ಶೋ ಆಗಿ ಪ್ರರ್ದಶನಗೊಳ್ಳುತ್ತದೆ. ಆ ಮೂಲಕ ಪ್ಯಾನ್ ನಳೀನ್ ಅವರು ಜಾಗತಿಕವಾಗಿ ಸಿನಿಮಾಜಗತ್ತಿನಲ್ಲಿ ಗುರುತಿಸಲ್ಪಡುತ್ತಾರೆ. ವಿಶ್ವದೆಲ್ಲೆಡೆ ‘ಸಂಸಾರ’ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗೆ ಭಾಜನವಾಗುತ್ತದೆ. 

ಅವರಿಗೆ ಹೆಸರು ತಂದ ಕೊಟ್ಟ ಹಲವು ಚಿತ್ರಗಳಲ್ಲಿ ಆರ್ಯುವೇದ – ಆರ್ಟ್ ಆಫ್ ಬಿಯಿಂಗ್ (AYURVEDA : ART OF BEING), ಕುಂಭಮೇಳ (KUMBH MELA) ಡಾಕ್ಯುಮೆಂಟರಿ ಚಿತ್ರಗಳಾದರೆ, ಫಿಚರ್ ಫಿಲಮ್ ಗಳಾದ ವ್ಯಾಲಿ ಆಫ್ ಫ್ಲವರ್ಸ್ (VALLEY OF FLOWERS) ಮತ್ತು ಆಂಗ್ರಿ ಇಂಡಿಯನ್ ಗಾಡೆಸಸ್ಸ್ (ANGRY INDIAN GODDESSES) ಅನ್ನು ಹೆಸರಿಸಬಹುದು.          

‘ಚೆಲ್ಲೊ ಶೊ’ ಸಿನಿಮಾ ಸೌರಾಷ್ಟ್ರದ ಚಲಾಲಾ ಎಂಬ ಒಂದು ಪುಟ್ಟ ಗ್ರಾಮದಲ್ಲಿ ಸಾಗುತ್ತದೆ. ಸಿನಿಮಾವನ್ನು ಕಂಡರೆ ಆಗದ ಸಮಯನ ಅಪ್ಪ ಒಂದು ದಿನ, ‘ಜೈ ಮಹಾಕಾಳಿ’ ಸಿನಿಮಾ ದೇವರ ಕುರಿತ ಚಿತ್ರವಾದ್ದರಿಂದ ಅದನ್ನು ನೋಡಲು ಕುಟುಂಬ ಸಮೇತ ರೈಲತ್ತಿ ಪಟ್ಟಣಕ್ಕೆ ಬರುತ್ತಾನೆ. ಹಾಗೆ ಅನಿರೀಕ್ಷಿತವಾಗಿ ಸಿನಿಮಾ ಟಾಕೀಸಿಗೆ ಬಂದ ಬಾಲಕ ಸಮಯನಿಗೆ ಅಲ್ಲಿನ ವಾತಾವರಣ ಬೆರಗು ಮೂಡಿಸುತ್ತದೆ. ಸಿನಿಮಾ ನೋಡುತ್ತ, ಪ್ರೊಜೆಕ್ಟರ್ ರೂಮಿನಿಂದ ಚೆಲ್ಲುವ ಬೆಳಕಿನ ಕಿರಣಗಳು. ಆ ಕಿರಣಗಳು ಬೆಳ್ಳಿಪರದೆಯ ಮೂಡಿಸುವ ಚಲಿಸುವ ಚಿತ್ರಗಳು ಅವನಲ್ಲಿ ಆಸಕ್ತಿ ಕೆರಳಿಸುತ್ತದೆ. ಸಿನಿಮಾ ನೋಡಿ ಮನೆಗೆ ವಾಪಸ್ಸು ಬರುವಾಗ ಅಪ್ಪನೊಂದಿಗೆ ತಾನು ಸಿನಿಮಾ ಮಾಡುತ್ತೇನೆ ಎನ್ನುತ್ತಾನೆ. ಕೋಪಗೊಂಡ ಅವನಪ್ಪ ಬ್ರಾಹ್ಮಣನಾಗಿ ಸಿನಿಮಾ ಮಾಡುವಂತ ಕೀಳು ಕೆಲಸವನ್ನು ಮಾಡಿ ತನ್ನ ಹೆಸರು ಕೆಡಿಸಬೇಡ ಎನ್ನುತ್ತಾನೆ. 

ಮುಂದೆ ಸಿನಿಮಾದ ಗುಂಗಿನಲ್ಲಿಯೇ ಉಳಿದ ಬಾಲಕ ಸಮಯ್, ರೈಲಿನ ಹಳಿಗಳಲ್ಲಿ ಸಿಕ್ಕ ಖಾಲಿ ಕಡ್ಡಿಪಟ್ಟಿಗೆಗಳನ್ನು ಗುಡ್ಡೆ ಹಾಕಿ, ಅದರ ಮೇಲಿದ್ದ ಚಿತ್ರಗಳನ್ನು ಹೊಂದಿಸುತ್ತ ಕತೆಯನ್ನು ಕಟ್ಟಿ, ಗೆಳೆಯರೊಂದಿಗೆ ಹಂಚಿಕೊಳ್ಳುತ್ತಾನೆ. ಒಡೆದ ಬಣ್ಣಬಣ್ಣದ ಗಾಜುಗಳನ್ನು ರೈಲ್ವೆಹಳಿಗಳಲ್ಲಿ ನಿಲ್ಲಿಸಿ ಅದರಿಂದ ಮೂಡುವ ಚಿತ್ರವಿಚಿತ್ರ ದೃಶ್ಯಗಳನ್ನು ಗಮನಿಸುತ್ತಾನೆ. ಹಾಗೆ, ರೈಲಿನಲ್ಲಿ ಸಿಕ್ಕ ಹಸಿರುಗಾಜಿನ ಖಾಲಿ ಬಾಟಲಿಯ ಮೂಲಕ ರೈಲಿನಾಚೆ ಚಲಿಸುವ ನಿರ್ಸಗವನ್ನು ನೋಡಿ ವಿಸ್ಮಿತನಾಗುತ್ತಾನೆ. ಈ ದೃಶ್ಯಕಟ್ಟುಗಳು ಸಮಯನಲ್ಲಿ ಸಿನಿಮಾ ವೀಕ್ಷಣೆ ಹುಟ್ಟು ಹಾಕಿದ ಬೆಳಕಿನ ಬಗೆಗಿನ ಕುತೂಹಲವನ್ನು ನಿರೂಪಿಸುತ್ತದೆ. 

ಟೀ ಮಾರುತ್ತ ಬಂದ ಹಣದಲ್ಲಿ ಸ್ವಲ್ಪ ಹಣ ಎಗರಿಸಿ ಸಿನಿಮಾ ನೋಡಿ ಬಂದು ಅಪ್ಪನ ಕೈಗೆ ಸಿಕ್ಕಿ ಬೀಳುತ್ತಾನೆ. ಒದೆ ತಿಂದರೂ ಸಿನಿಮಾ ನೋಡುವ ಹುಚ್ಚು ಬಿಡುವುದಿಲ್ಲ. ಒಮ್ಮೆ ಶಾಲೆಗೆ ಚಕ್ಕರ್ ಹಾಕಿ ಟಿಕೇಟ್ ಇಲ್ಲದೆ ಸಿನಿಮಾ ನೋಡುತ್ತಿದ್ದಾಗ ಸಿಕ್ಕಿ ಬಿದ್ದು ಆಚೆ ಹಾಕುತ್ತಾರೆ. ಆಗ ಆಕಸ್ಮಿಕವಾಗಿ ಅವನಿಗೆ ಟಾಕೀಸಿನ ಪ್ರೊಜೆಕ್ಟರ್ ರೂಮಿನಲ್ಲಿ ಕೆಲಸ ಮಾಡುವ ಫಾಜಲ್ ನ ಸ್ನೇಹವಾಗುತ್ತದೆ. ಅಮ್ಮ ಶಾಲೆಗೆ ಹೋಗುವಾಗ ಮಾಡಿಕೊಡುವ ರುಚಿರುಚಿಯಾದ ಊಟವನ್ನು ಫಾಜಲ್ ಗೆ ಕೊಟ್ಟು ಪ್ರೊಜೆಕ್ಟರ್ ರೂಮಿನಲ್ಲಿಯೇ ಕೂತು ಹಲವು ಸಿನಿಮಾಗಳನ್ನು ನೋಡುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾನೆ. ಸಿನಿಮಾ ನೋಡುವುದರೊಂದಿಗೆ ಅಲ್ಲಿದ್ದ ಫಿಲಮ್ ರೀಲ್ ಗಳ ಬಗ್ಗೆ, ಪ್ರೊಜೆಕ್ಟರ್ ಗೆ ಫಿಲಮ್ ರೀಲನ್ನು ಹೊಂದಿಸುವ ಬಗ್ಗೆ, ತುಂಡಾದ ರೀಲುಗಳನ್ನು ಅಂಟಿಸುವುದರ ತಾಂತ್ರಿಕ ವಿಷಯಗಳ ಬಗ್ಗೆ ಪರಿಚಯ ಮಾಡಿಕೊಳ್ಳುತ್ತಾನೆ. 

ಬೆಳಕಿನ ಮೂಲಕ ಚಿತ್ರಗಳು ಪರದೆಯ ಮೇಲೆ ಮೂಡುವ ಬಗ್ಗೆ ಕುತೂಹಲವಿರುವ ಸಮಯ ತಾನು ಹಲವು ಪ್ರಯೋಗಗಳನ್ನು ಮಾಡುತ್ತಾನೆ. ಬುರುಡೆ ಬಲ್ಪಿನ ಒಳಗಿರುವ ತಂತಿಗಳನ್ನು ತೆಗೆದು, ಅದರಲ್ಲಿ ನೀರನ್ನು ತುಂಬಿಸಿ ಅದರ ಮೇಲೆ ಕನ್ನಡಿಯಿಂದ ಬೆಳಕು ಹಾಯಿಸಿ, ಪ್ರೊಜೆಕ್ಟರ್ ರೂಮಿನಿಂದ ತಂದಿದ್ದ ತುಂಡುತುಂಡು ಫಿಲ್ಮಗಳಿಂದ ಪರದೆಯ ಮೂಲಕ ಮೇಲೆ ಚಿತ್ರ ಮೂಡಿಸಲು ಪ್ರಯತ್ನಿಸುತ್ತಾನೆ. ಮತ್ತೊಮ್ಮೆ ರೈಲಿನಲ್ಲಿ ಶಾಲೆಗೆ ಪ್ರಯಾಣಿಸುವಾಗ, ರೈಲಿನ ಕಿಟಕಿಯನ್ನು ಬಟ್ಟೆಗಳಿಂದ ಮುಚ್ಚಿ ಕಿರಿದಾಗಲಿ, ಅಲ್ಲಿಂದ ಸೂರ್ಯನ ಬೆಳಕು ರೈಲಿನ ಎದುರು ಗೋಡೆಗೆ ಬೀಳುವಾಗ, ಅಲ್ಲಿ ರೈಲಿನ ಹೊರಗಡೆ ಚಲಿಸುವ ದೃಶ್ಯವು ತಿರುಗುಮುರುಗಾಗಿರುವುದನ್ನು ಗಮನಿಸುತ್ತಾನೆ. ಇದು ಪಿನ್ ಹೋಲ್ ಕ್ಯಾಮೆರದ ಪ್ರಯೋಗವಾಗಿದೆ. ಬಾಲಕನ ಬೆಳಕಿನ  ಕುತೂಹಲವನ್ನು ಕಟ್ಟಿಕೊಡುವ ಈ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿದೆ. ಮುಂದೆ ಹಳೇ ಹೊಲಿಗೆ ಯಂತ್ರವನ್ನು ಉಪಯೋಗಿಸಿ ಒಂದು ಪ್ರೊಜೆಕ್ಟರ್ ಅನ್ನು ತಯಾರಿಸುತ್ತಾನೆ. ಚಿತ್ರ ಪ್ರದರ್ಶಿಸಲು ಬೇಕಾದ ಫಿಲಮ್ ರೀಲುಗಳನ್ನು ತನ್ನ ಗೆಳೆಯರೊಂದಿಗೆ ರೈಲ್ವೆಸ್ಟೇಷನಲ್ಲಿರುವ ಪಾರ್ಸಲ್ ರೂಮಿನಿಂದ ಕದ್ದು ತರುತ್ತಾನೆ. ಆ ಕೃತ್ಯಕ್ಕಾಗಿ ಪೊಲೀಸರು ಅವನನ್ನು ಹಿಡಿದು ಬಾಲಾಪರಾಧಿ ಜೈಲಲ್ಲಿ ಬಂಧಿಸುತ್ತಾರೆ. ಇದು ಸ್ವಲ್ಪ ಅಸಹಜವಾಗಿ ಕಂಡು ಚಿತ್ರದ ಆಶಯಕ್ಕೆ ಹೊಂದಿಕೊಳ್ಳುವುದಿಲ್ಲ.  

ಇದಿಷ್ಟು ಬಾಲಕ ಸಮಯನಿಗಿರುವ ಸಿನಿಮಾದ ಬೆಳಕಿನ ಆಸಕ್ತಿಯನ್ನು ತೆರೆದಿಡುವಂತೆ ಮುಂದೆ ಚಿತ್ರ ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ಫಾಜಲ್ ತುರ್ತಾಗಿ ಸಮಯನನ್ನು ಚಿತ್ರಮಂದಿರಕ್ಕೆ ಬರಹೇಳಿದಾಗ, ಅಲ್ಲಿ ನಡೆಯುತ್ತಿರುವ ವಿದ್ಯಮಾನವು ಅಚ್ಚರಿ ಜೊತೆಗೆ ನಿರಾಶೆಯನ್ನು ಸಮಯನಿಗೆ ತರುತ್ತದೆ. ಕ್ರೇನೊಂದು ಸಿನಿಮಾದ ಪ್ರೊಜೆಕ್ಟರನ್ನು ಎತ್ತಿ ಲಾರಿಗೆ ಹಾಕುವ ದೃಶ್ಯ ಕಾಣುತ್ತದೆ. ಮತ್ತೊಂದು ಲಾರಿಯಲ್ಲಿ ಫಿಲಮ್ ರೀಲುಗಳಿರುವಾಗ ಡಬ್ಬಗಳನ್ನು ಪೇರಿಸಿ, ಕೆಲಸದ ಬಾರದ ವಸ್ತುಗಳೆಂದು ಗುಜರಿಗೆ ಸಾಗಿಸುತ್ತಿರುತ್ತಾರೆ. ಅಂದರೆ ಆ ಥಿಯೇಟರಲ್ಲಿ ಸೆಲ್ಯುಲಾಯ್ಡ್ ಫಿಲಮ್ ರೀಲ್ ಸಿನಿಮಾ ಪ್ರೊಜೆಕ್ಷನ್ನಿನ ಛೆಲ್ಲೊ ಶೊ ಅಂದರೆ ಕೊನೆಯ ಆಟ ಮುಗಿದಿದೆ. ಬದಲಿಗೆ ಡಿಜಿಟಲ್ ಮೂವೀ ಪ್ರೊಜೆಕ್ಷನ್ ಗೆ ಆಧುನೀಕರಣಗೊಳ್ಳುತ್ತಿದೆ. ಈಗ ಅಕ್ಷರ ಮತ್ತು ಅಂಕಿಯ ಜ್ಞಾನವಿರದ ಪ್ರೊಜೆಕ್ಷನಿಷ್ಟ್ ಫಾಜಿಲ್ ಕೆಲಸ ಕಳೆದುಕೊಳ್ಳಬೇಕಾದ ಅನಿರ್ವಾಯ ಪರಿಸ್ಥಿತಿ ಉಂಟಾಗಿದೆ. 

ಕೈಗಾರಿಕಾ ಕ್ರಾಂತಿಯಿಂದ ಮೊದಲ್ಗೊಂಡು ಕಾಲಾನುಕಾಲಕ್ಕೆ ಹೊಸ ಅವಿಷ್ಕಾರದೊಂದಿಗೆ ಆಧುನೀಕರಣಗೊಳ್ಳುವ ಯಂತ್ರಸಾಧನಗಳು, ಅದರಲ್ಲೂ ಕಂಪ್ಯೂಟರ್ ಯುಗದಲ್ಲಿ ದಿನದಿನಕ್ಕೂ ಎಲ್ಲಾ ರಂಗದಲ್ಲಿಯೂ ತಾಂತ್ರಿಕತೆ ನವೀಕರಣ ಗೊಳ್ಳುತ್ತಿರುವಾಗ ಸಿನಿಮಾ ಕೂಡ ಅದಕ್ಕೆ ಹೊರತಲ್ಲ. ಆದರೆ ಹಾಗೆ ಉಂಟಾದ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಗದ ಮಾನವನ ಸಂಕಟವನ್ನು ಈ ದೃಶ್ಯ ಕಟ್ಟಿಕೊಡುತ್ತದೆ. ಅಲ್ಲದೆ ಒಂದು ಕಾಲಕ್ಕೆ ಸೆಲ್ಯುಲಾಯ್ಡ್ ಫಿಲಮ್ ರೀಲಿನ ಸಿನಿಮಾಗಳ ಜೊತೆಯಿದ್ದ ಒಂದು ಭಾವನಾತ್ಮಕ ಸಂಬಂಧ, ನೆನಪುಗಳಿಗೆ ಕಾಲ ತೆರೆ ಎಳೆದಂತಾಗುತ್ತದೆ. 

ಚಿತ್ರದಲ್ಲಿ ಬರುವ ಮುಂದಿನ ದೃಶ್ಯಗಳು ಇಡೀ ಸಿನಿಮಾದ ಆಶಯವನ್ನು ಕಟ್ಟಿಕೊಡುವಂತಿವೆ. ಗುಜರಿಗೆ ಬಂದ ಪ್ರೊಜೆಕ್ಟರ್ ಅನ್ನು ಕುಟ್ಟಿ ಪುಡಿ ಮಾಡಿ ಕರಗಿಸಿ ಚಮಚದಂಥ ವಸ್ತುಗಳನ್ನಾಗಿ ಮಾರ್ಪಡಿಸಲಾಗುತ್ತದೆ. ಹಾಗೆ ಸೆಲ್ಯುಲಾಯ್ಡ್ ಫಿಲಮ್ ರೀಲುಗಳನ್ನು ಕರಗಿಸಿ ಪ್ಲಾಸ್ಟಿಕ್ ಹೆಣ್ಣುಮಕ್ಕಳ ಬಳೆಗಳನ್ನಾಗಿಸುವ ಕಾರ್ಖಾನೆಯ ದೃಶ್ಯಗಳು ಕಂಡು ಬರುತ್ತದೆ. ಅದನ್ನು ನೋಡುತ್ತ ಬಾಲಕ ಸಮಯನ ಕಣ್ಣಲ್ಲಿ ನೀರು ಜಿನುಗುತ್ತದೆ.

ಕೊನೆಯಲ್ಲಿ ಸಮಯ ತಾನು ಇಲ್ಲಿಂದ ಹೋಗಬೇಕು, ಬೆಳಕಿನ ಬಗ್ಗೆ ಓದಬೇಕೆಂದಾಗ, ಅವನ ತಂದೆ ಒಂದಷ್ಟು ದುಡ್ಡನ್ನು ಕೊಟ್ಟು ವಡೋದರಕ್ಕೆ ಹೋಗಿ ಅಲ್ಲಿ ಅಭ್ಯಾಸ ಮಾಡಲು ಹೇಳುತ್ತಾನೆ. ರೈಲಿನಲ್ಲಿ ಹೋಗುವಾಗ ಮಹಿಳೆಯರು ಹಾಕಿಕೊಂಡ ಬಣ್ಣಬಣ್ಣದ ಬಳೆಯನ್ನು ನೋಡುತ್ತ, ಆ ಬಳೆಗಳಲ್ಲಿ ಮನಮೋಹನ್ ದೇಸಾಯಿ, ಶಾರೂಕ್ ಖಾನ್, ರಜನೀಕಾಂತ್ ಇತರೆ ಪ್ರಖ್ಯಾತ ನಟರು ಇರಬಹುದೆಂದು ಕನವರಿಸುತ್ತಾನೆ. ಹಿನ್ನೆಲೆಯಲ್ಲಿ ಜಗತ್ತಿನ ಶ್ರೇಷ್ಟ ನಿರ್ದೇಶಕರ ಹೆಸರುಗಳು ಸಾಲುಸಾಲಾಗಿ ಕೇಳಿ ಬರುತ್ತದೆ. ಚಿತ್ರ ಮುಗಿಯುತ್ತದೆ.

ಚೆಲ್ಲೊ ಶೋ ಚಿತ್ರದ ಮೊದಲ ಭಾಗವನ್ನು ನೋಡುವಾಗ, ಜಾಗತಿಕ ಚಲನಚಿತ್ರೋತ್ಸವಗಳಲ್ಲಿ ಹಲವಾರು ಪ್ರಶಸ್ತಿಯನ್ನು ಗೆದ್ದು ಜನಮನ್ನಣೆ ಪಡೆದ ಇಟಲಿಯ ಟೊರ್ ನ ಟೊರೆ ನಿರ್ದೇಶಿಸಿದ ೧೯೮೮ ರಲ್ಲಿ ತಯಾರಾದ ಚಿತ್ರ ‘ಸಿನಿಮಾ ಪಾರಾಡಿಸೊ’ ವನ್ನು ನೆನಪಿಸುತ್ತದೆ. ಆ ಚಿತ್ರದಲ್ಲೂ ಬಾಲಕ ಮತ್ತು ಪ್ರೊಜೆಕ್ಸಾನಿಸ್ಟ್ ನ ಗೆಳೆತನದ ಕತೆ ಇದೆ. 

ಕೊನೆಯಲ್ಲಿ ತಂದೆ ಮಗನ ಸಂಭಾಷಣೆ ಮತ್ತು ರೈಲ್ವೆಸ್ಟೇಷನ್ ಬ್ರಾಡ್ ಗೇಜ್ ಗೆ ಬದಲಾಗುವುದರಿಂದ ಆ ನಿಲ್ದಾಣದಿಂದ ವಡೋದರಕ್ಕೆ ಹೋಗುವ ಕಡೆಯ ರೈಲನ್ನು ಕೇವಲ ಹದಿನೈದು ನಿಮಿಷದಲ್ಲಿ ಹಿಡಿಯಬೇಕು ಎಂಬ ದೃಶ್ಯಗಳು ನಾಟಕೀಯವಾಗಿ ತೋರುತ್ತದೆ. ಹಾಗೆ ಸಮಯನ ಮನೆಯಲ್ಲಿ ಅಡುಗೆಮನೆ ನಾಲ್ಕು ಗೋಡೆಗಳ ಮಧ್ಯೆ ಇರದೆ ಹೊರ ಅಂಗಳದಲ್ಲಿರುವುದು ವಿಚಿತ್ರವೆನಿಸುತ್ತದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿ ಸಿನಿಮಾದಂಥ ಹೀನ ವೃತ್ತಿಯಲ್ಲಿ ಕೆಲಸ ಮಾಡಕೂಡದು ಎಂದು ಸಮಯನ ಅಪ್ಪ ಹೇಳುವುದು ಮತ್ತು ಶಾಲೆಯ ಮಾಸ್ಟರ್ ಸಮಯನಿಗೆ ಉಪದೇಶ ಮಾಡುತ್ತ ಪ್ರಗತಿ ಶೀಲ ಭಾರತದಲ್ಲಿ ಜಾತಿ ಯೆಂಬುದಿಲ್ಲ ಇರುವುದು ಎರಡೇ ಜಾತಿ ಒಂದು ಇಂಗ್ಲೀಷ್ ಬಲ್ಲವರು ಮತ್ತು ಇಂಗ್ಲೀಷ್ ಬಾರದವರು ಎನ್ನುತ್ತಾನೆ. ಇದು ಅವಾಸ್ತವವಾಗಿ ತೋರುತ್ತದೆ. 

ಬಾಲಕ ಸಮಯ್ ಪಾತ್ರದಲ್ಲಿ ಭಾವಿನ್ ರಾಬರಿಯ ಮುಗ್ಧ ನಟನೆ ಗಮನ ಸೆಳೆಯುತ್ತದೆ. ಸಮಯನ ಗೆಳೆಯರಾಗಿ ಬಾಲನಟರನ್ನು ನಿರ್ದೇಶಕರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಮಿಕ್ಕಂತೆ ತಾಂತ್ರಿಕವರ್ಗದಲ್ಲಿ ಚಿತ್ರದ ಕಲಾ ನಿರ್ದೇಶನವನ್ನು ದುಶ್ಯಂತ್ ಕುಮಾರ ಮತ್ತು ಪಂಕಜ್ ಪಾಂಡ್ಯ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ಚಿತ್ರಕ್ಕೆ ಸ್ವಪ್ ನಿಲ್ ಮತ್ತು ಸೊನವೆನ್ ಅವರ ಸಮರ್ಪಕ ಛಾಯಾಗ್ರಹಣವಿದ್ದು, ಚಿತ್ರದ ಕೊನೆಯಲ್ಲಿ ಬರುವ ದೃಶ್ಯಗಳು ಮನದಲ್ಲಿ ಉಳಿಯುತ್ತವೆ. ಚಿತ್ರಕ್ಕೆ ಸೈರಿಲ್ ಮೊರಿನ್ ಅವರ ಸಂಗೀತವಿದೆ ಮತ್ತು ಶ್ರೇಯಸ್ ಬೆಳ್ತಂಗಡಿ ಮತ್ತು ಪಾವನ್ ಭಟ್ ಅವರ ಸಂಕಲನವಿದೆ.

ಸಿನಿಮಾವನ್ನು ಪ್ರೀತಿಸುವ ಅದರಲ್ಲೂ ಸೆಲ್ಯುಲಾಯ್ಡ್ ಫಿಲಮ್ ಸಿನಿಮಾಗಳನ್ನು ನೋಡಿದವರಿಗೆ ಈ ‘ಚೆಲ್ಲೊ ಶೊ’ ಸಿನಿಮಾ ವೀಕ್ಷಣೆ ಹಳೇ ನೆನಪಿನೊಂದಿಗೆ ಒಂದು ಸುಂದರ ಅನುಭವವನ್ನು ನೀಡುತ್ತದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಚಿತ್ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಬರಲಿ ಎಂದು ಶುಭ ಹಾರೈಸೋಣ.

‍ಲೇಖಕರು Admin

2 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading