ಕಾಣದ ಕಡಲಿಗೆ ಹಂಬಲಿಸಿದೆ ಮನ..
ಹೆಜ್ಜೆ 05
ದುಗುಡ ದುಮ್ಮಾನ
ಬೆಳಗಿನ ಜಾವ ನಿದ್ರೆ ಬಂದಿರಬೇಕು. ಮಹಾಲಿಂಗಪ್ಪ ಅಜ್ಜ ಬಂದು ಏಳಿಸಿದಾಗ, ನಾನು ಎದ್ದು ಯೋಗಾಭ್ಯಾಸಕ್ಕೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ನನ್ನ ಉಪವಾಸ ಐದನೇ ದಿನವೂ ಮುಂದುವರಿಯಿತು. ಅರೆ ನಿದ್ರಾವಸ್ತೆಯಲ್ಲಿಯೇ ಬೆಳಗಿನ ಪಾನಕವನ್ನು ಹಲ್ಲನ್ನು ಉಜ್ಜದೆಯೇ ಕುಡಿದು ಮತ್ತೆ ನಿದ್ರೆಗೆ ಜಾರಿದೆ. ಮನಸ್ಸು ಸ್ವಲ್ಪ ಭಾರವಾಗಿದ್ದರಿಂದ, ನನಗೆ ಹೊರಗೆ ಎದ್ದು ಹೋಗುವ ಹುಮ್ಮಸ್ಸು ಇರಲಿಲ್ಲ.
ಸುಮಾರು 12:00ಕ್ಕೆ ಮೈಸೂರಿನಿಂದ ಬಂದಿದ್ದ ಓರ್ವ ಹೆಂಗಸು ನಮ್ಮ ಕೋಣೆಗೆ ನನ್ನನ್ನು ಹುಡುಕಿಕೊಂಡು ಬಂದು ಗಲಾಟೆ ಮಾಡಿ ಎಬ್ಬಿಸಿಬಿಟ್ಟರು. ನಮ್ಮ ಮನೆಯವರಲ್ಲಿ ನಾನು ಸನ್ಯಾಸಿಯಾಗಿಬಿಡಬಹುದೆಂಬ ದುಗುಡವಿರಬಹುದೇ? ಒಳ್ಳೇ ತಮಾಷೆಯಾಯ್ತು. ಸನ್ಯಾಸಿಯಾಗುವುದು ಅಷ್ಟು ಸುಲಭದ ಮಾತೇ? ಅದಕ್ಕೆ ಸಾಧನೆ ಮತ್ತು ಅರ್ಹತೆ ಬೇಡವೇ? ನನಗಂತೂ ಸನ್ಯಾಸಿ ಅಥವಾ ಸ್ವಾಮೀಜಿಯಾಗುವ ಯಾವ ಯೋಚನೆಯೂ ಇರಲಿಲ್ಲ.
ಸನ್ಯಾಸಿಯಾಗುವ ಯೋಚನೆ ಎನಗಿಲ್ಲ,
ಗುರುವಾಗುವ ಅರ್ಹತೆ ಪಡೆದಿಲ್ಲ,
ಯೋಗ ಸಾಧನೆಗಳ ಕರಗತವಿಲ್ಲ,
ವೇದ ಉಪನಿಷತ್ಗಳ ಗ್ರಹಿಸಿಲ್ಲ,
ಜೋಳಿಗೆ ಹಿಡಿದು ಭಿಕ್ಷೆ ಬೇಡುವುದ ಕಲಿತಿಲ್ಲ,
ಪಂಚಭೂತಗಳು ಎನ್ನ ಮರೆತಿಲ್ಲ,
ಇಲ್ಲಗಳ ನಡುವೆ ಧೀಕ್ಷೆ ಪಡೆದರೆ,
ಹುಚ್ಚನಿಗೆ ಮದುವೆ ಮಾಡಿದಂತಾಗುವುದಿಲ್ಲವೇ? ಓ ಪ್ರಕೃತಿ.
ಮನಸ್ಸಿನ ಸ್ಥಿತಿ ಅಷ್ಟಾಗಿ ಚೆನ್ನಾಗಿ ಇಲ್ಲದಿದ್ದ ಕಾರಣ ಸಂಜೆಯ ತನಕ ಮೌನವ್ರತ ಸ್ವೀಕರಿಸಿ, ಯಾರ ಜೊತೇನೂ ಒಂದು ಪದವೂ ಕೂಡ ಮಾತನಾಡಲಿಲ್ಲ. ಶಿಬಿರದ ನಿತ್ಯ ಸೇವೆಗಳಲ್ಲಿ ಮಾತಾಡದೆಯೇ ತೊಡಗಿದೆ. ಹುಡುಗರ ಕೀಟಲೆಗಳನ್ನು ಲೆಕ್ಕಿಸದೆ ದನದ ಕೊಟ್ಟಿಗೆಗೆ ಬಂದು ಕುಳಿತೆ. ಮಧ್ಯೆ ಗಿಡಗಳಿಗೆ ನೀರೆರೆಯಲೆಂದು ಬಂದಿದ್ದು ಬಿಟ್ಟರೆ ಸಂಜೆಯ ಪ್ರಾರ್ಥನೆ ಸಮಯದ ತನಕ ಅಲ್ಲೇ ಕುಳಿತು ಓದಿನಲ್ಲಿ ಮಗ್ನನಾದೆ.
ವಿವಿಧ ಜಾತಿಯ ಹಸುಗಳು ನನ್ನ ಮನಸ್ಸಿನ ಭಾವನೆಗಳಿಗೆ ತಮ್ಮ ತಲೆಯಾಡಿಸುತ್ತಾ ಸಾಥ್ ಕೊಡುತ್ತಿದ್ದವು. ಸಂಜೆ ಬಹಳ ದೂರದ ಗುಡ್ಡಗಳ ದಾಟಿ ಊರು ತಲುಪಿ ಬಂದೆ. ದೇಹ ಬಹಳವಾಗಿ ದಣಿದಿತ್ತು. ಸಂಜೆಯ ನಡಿಗೆಯಲ್ಲಿ ನಾನು ಗಮನಿಸಿದ ವಿಷಯವೇನೆಂದರೆ, ಅಲ್ಲಲ್ಲಿ ಮಳೆ ಬಿದ್ದಿದ್ದರಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದರು. ಜೋಳ, ರಾಗಿ, ಮತ್ತಿತರ ಬೆಳೆಗಳು. ಆಗ ತಾನೆ ಬಿತ್ತಿದ್ದ, ಒಂದು ಅಡಿಯಷ್ಟು ಬೆಳೆದಿದ್ದ ಬೆಳೆ ನನ್ನ ಗಮನ ಸೆಳೆಯಿತು. ಅಲ್ಲಿದ್ದ ರೈತ ಬಾಂಧವರನ್ನು ಕೇಳಿದೆ. ಅದು ಸೋಯಾಬೀನ್ ಬೆಳೆಯೆಂದು ಗೊತ್ತಾಯಿತು. ಇತ್ತೀಚಿಗೆ ಸೋಯಾಬೀನ್ ಎಣ್ಣೆ ಪ್ರಸಿದ್ಧಿ ಪಡೆಯಲು ಶುರುವಾಗಿ, ಬೆಳೆಗೆ ಒಳ್ಳೆಯ ಧಾರಣೆಯಿರುವುದಾಗಿ ವಿವರಿಸಿದರು.
ಶಿಬಿರದಲ್ಲಿ ಸೇವೆ ಮಾಡುತ್ತಿದ್ದನ್ನು ಕಂಡಿದ್ದ ಶಿಬಿರಾರ್ಥಿಗಳಲ್ಲಿ ಕೆಲವರು ನನ್ನ ಪರಿಚಯ ಮಾಡಿಕೊಂಡರು. ನನ್ನ ಸೇವಾ ಮನೋಭಾವವನ್ನು ಮೆಚ್ಚಿ, ಪ್ರಶಂಸೆಯನ್ನೂ ಕೊಟ್ಟರು. ಕೆಲವರು ತಮ್ಮ ಮಕ್ಕಳಿಗೆ ನನ್ನನ್ನು ಹೋಲಿಸಿಕೊಂಡರು. ರಾತ್ರಿಯ ಪ್ರಸಾದಕ್ಕೆ ಹುರುಳಿಯ ಹುಗ್ಗಿ ಮಾಡಿದ್ದರು. ನಮ್ಮ ಉಪವಾಸದ ಸಮಯದಲ್ಲಿ ಶಿಬಿರಾರ್ಥಿಗಳು ಮಾತ್ರ ಮೃಷ್ಟಾನ್ನ ಭೋಜನವನ್ನು ಸವಿಯುತ್ತಾ ನಮ್ಮನ್ನು ಹೀಯಾಳಿಸಿದರೆ ನಮಗೆ ಏನಾಗಬೇಡ. ನನಗೆ ತಡೆಯಲಾಗಲಿಲ್ಲ. ಹಸಿವನ್ನು ತಾಳಲಾರದೆ ಅಡುಗೆ ಮನೆಗೆ ಹೋಗಿ ಒಂದು ಸಣ್ಣ ಲೋಟದಲ್ಲಿ ಹುಗ್ಗಿಯನ್ನು ಹಾಕಿಕೊಂಡು ಯಾರಿಗೂ ಕಾಣದ ಹಾಗೆ ಕುಡಿದುಬಿಟ್ಟೆ.
ರಾತ್ರಿ ಮಲಗಲು ಪ್ರಯತ್ನಿಸಿದರೂ ಫಲವಿಲ್ಲ. ಅಬ್ದುಲ್ ಕಲಾಂರವರ ಮಾತು ನೆನಪಿಗೆ ಬಂತು. ನಾವು ಗುರಿಮುಟ್ಟುವ ಬಗೆಗಿನ ಕನಸುಗಳು ನಮ್ಮ ನಿದ್ರೆಯಲ್ಲಿ ಬಂದು ಹೋಗಬಾರದು, ನಮ್ಮ ಕನಸುಗಳು ನಮ್ಮನ್ನು ನಿದ್ರೆ ಮಾಡಲು ಬಿಡಬಾರದು.
ಕೋಣೆಯಲ್ಲಿ ನಮ್ಮ ಪ್ರವೀಣ, ಕೋಣೆಯ ದೀಪವನ್ನು ಹಚ್ಚಿ, ಕಿಟಕಿ ಬಾಗಿಲುಗಳನ್ನು ಹಾಕಿ ತೂಕಡಿಸುತ್ತಿದ್ದ.
“ಏನ್ ಆಯ್ತು ಮರಾಯರೇ?” ಎಂದು ವಿಚಾರಿಸಿದೆ.
“ಸೂಳೆಮಗಂದ್ ಸೊಳ್ಳೆಗಳೂ ಸರ್. ನಿದ್ರೆ ಮಾಡಾಕ್ ಬಿಡ್ತಾ ಇಲ್ಲ.” ಎಂದ.
ನಾನು ಎದ್ದು ಒಂದು ಸೊಳ್ಳೆ ಬತ್ತಿ ಹಚ್ಚಿ ಬಂದು ಮಲಗಿದೆ. ದೀಪ ಆರಿಸಿದ ತಕ್ಷಣ, ಅವನಿಗೆ ನಿದ್ರೆ ಹತ್ತಿತು. ನನ್ನ ನಿದ್ರೆಗೆ ಕತ್ತರಿ ಬಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ನನಗೆ ನಿದ್ರೆ ಹತ್ತಲಿಲ್ಲ. ಯಾವುದೋ ಹೊತ್ತಿಗೆ ನಿದ್ರೆ ಹತ್ತಿ ಒಂದೆರಡು ಗಂಟೆ ನಿದ್ರೆ ಮಾಡಿರಬೇಕು.
ಮತ್ತೆ ಎಚ್ಚರವಾಗಿ, ಶಿಬಿರದ ನಂತರ ಮತ್ತೇನು ಮಾಡುವುದು ಎನ್ನುವ ಪ್ರಶ್ನೆ ಮೂಡಿತು. ಬಹಳ ಹೊತ್ತು ಯೋಚನೆ ಮಾಡಿದ ನಂತರ ಪ್ರಕೃತಿಯ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿಕೊಂಡು ಹೋಗುವುದು ಎಂದು ನಿಶ್ಚಯಿಕೊಂಡೆ. ಆದರೆ ಯಾರು ತಾನೆ ಸುಮ್ಮನೆ ನನ್ನ ಮಾತು ಕೇಳಿ ಕುಳಿತಾರು ಎಂದೆನಿಸಿತು.
ಅದಕ್ಕೆ ಒಂದು ನೀಲನಕ್ಷೆ ಸಿದ್ಧಪಡಿಸಬೇಕು ಎಂದುಕೊಂಡೆ.
ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜುದೂರ = 29 ಮೈಲುಗಳು





Goodinda horabanda swathanthra hakkiyu gharigetharuva samaya….. Nimma Mundina hejjegala neela nakshe thiliyalu kathararagiruttheve….
ಧನ್ಯವಾದಗಳು ಪ್ರದೀಪ್. ತಮ್ಮ ಈ ಉತ್ತೇಜನ ಮಾತುಗಳು ಯುವ ಬರಹಗಾರರಿಗೆ ತುಂಬಾ ಆತ್ಮವಿಶ್ವಾಸ ಮತ್ತು ಖುಷಿ ಕೊಡುತ್ತದೆ. ಹೀಗೆಯೇ ನಮ್ಮ ಪ್ರಯಾಣದುದ್ದಕ್ಕೂ ಸಹಕರಿಸಬೇಕೆಂಬುದು ನನ್ನ ಆಶಯ.
ಇತ್ತೀಚಿನ ದಿನಗಳಲ್ಲಿ ‘ಅವಧಿ’ ನನಗೆ ಒಬ್ಬ ಒಳ್ಳೆಯ ಗೆಳೆಯನಾಗಿದ್ದಾನೆ. ಕಥೆಯನ್ನು ಪೋಸ್ಟ್ ಮಾಡುವ ಎಲ್ಲರಿಗೂ ತುಂಬಾ ಧನ್ಯವಾದಗಳು.
ಅವಧಿಯಲ್ಲಿ ಅತ್ಯುತ್ತಮ ಲೇಖನಗಳು ಮತ್ತು ಅಂಕಣಗಳು ಪ್ರಕಟಗೊಳ್ಳುತ್ತಿವೆ. ಯುವಕರಿಗಂತೂ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ.
ನಮ್ಮ ಬರಹವನ್ನು ಓದಿ ಮೆಚ್ಚುತ್ತಿರುವ ತಮಗೂ ಧನ್ಯವಾದಗಳು ಅಮರೇಶ್.