ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಲ್ತಾನನ ಮೋಹಕ್ಕೆ ಬೋಂಗು ಬಿಡುವ ಕತೆ..

ದಿಲಾವರ್ ರಾಮದುರ್ಗ

ಪದ್ಮಾವತ್ ನೋಡಿದೆ. ಈ ಚಿತ್ರ ವಿವಾದಕ್ಕೊಳಗಾಗಿರುವುದಕ್ಕೆ ಕಾರಣ ಹಿಂದು–ಮುಸ್ಲಿಂ ನೆಲೆಯಲ್ಲಿ ಸಿಗುವುದಿಲ್ಲ. ನಿಜವಾದ ಅಂಶ ಮತ್ತು ಒಳನೋಟ ಸಿನಿಮಾ ದಕ್ಕಿಸಿಕೊಂಡಾಗಲೇ ಅರ್ಥವಾಗುತ್ತದೆ.

ರಾಣಿ ಪದ್ಮಿನಿ ಅಪ್ರತಿಮ ಸುಂದರಿ ಎನ್ನುವ ಕಾರಣಕ್ಕೆ ವಿವಾಹಿತ ರಜಪೂತರ ರಾಜ ಅವಳನ್ನು ಎರಡನೇ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಸೌಂದರ್ಯ ಆರಾಧನೆಯಲ್ಲವೇ! ಬ್ರಾಹ್ಮಣ ರಾಜಗುರು ಈ ಜೋಡಿಗೆ ಆಶೀರ್ವಾದ ಮಾಡುತ್ತಲೇ ಇವರ ಸುಂದರ ದಾಂಪತ್ಯದ ಮೇಲೆ ಕಣ್ಣಿಡುತ್ತಾನೆ. ಸಿಕ್ಕಿಬಿದ್ದು ಅವಮಾನಕ್ಕೊಳಗಾಗುತ್ತಾನೆ. ರಾಜಗುರುವಿನ ಕಾಲಿಗೆರಗಿ ಕ್ಷಮಾಪಣೆ ಕೇಳು ಎನ್ನುತ್ತಾನೆ ಬ್ರಾಹ್ಮಣ. ಬ್ರಹ್ಮ ಹತ್ಯೆ ಮಹಾಪಾಪ ಜೀವಭಿಕ್ಷೆ ಕೊಟ್ಟಿದ್ದೇನೆ ತೊಲಗಾಚೆ ಎನ್ನುತ್ತಾನೆ ರಾಜ.

ಈ ಅವಮಾನದ ಪರಿಣಾಮ ಏನು ತೋರಿಸುತ್ತೇನೆ ಎಂದು ಅಬ್ಬರಿಸಿ ಹೊರನಡೆದ ಬ್ರಾಹ್ಮಣ ನೇರ ಅಲ್ಲಾವುದ್ದೀನ್‌ ಖಿಲ್ಜಿ ಬಳಿ ತೆರಳಿ ಅವನಲ್ಲಿ ರಾಣಿ ‍ಪದ್ಮಿನಿಯ ಸೌಂದರ್ಯದ ಮೋಹ ಹುಟ್ಟಿಸುತ್ತಾನೆ.

ಸಿಕ್ಕರೆ ನಿನ್ನ ಷಹನಷಾಹ್‌ ಘನತೆಗೆ ದೊಡ್ಡ ಗರಿಯಷ್ಟೇ ಅಲ್ಲ ದೊಡ್ಡ ಅದೃಷ್ಟ ಎಂದು ಬೋಂಗು ಬಿಡುತ್ತಾನೆ.

ಸುಲ್ತಾನನ ರಸಿಕತೆಯನ್ನು ಉನ್ಮಾದಕ್ಕೊಳಪಡಿಸಿ ಬರಿಯ ಕಾಮನೆಗಳ ವಿಷವಾಗಿಸುತ್ತಾನೆ. ಖಿಲ್ಜಿ ಕಂಗೆಟ್ಟ ಕಾಳಿಂಗ ಸರ್ಪದಂತೆ ಬುಸುಗುಡುತ್ತಾನೆ. ಅವಳ ದರ್ಶನಕ್ಕೆ ದೆಹಲಿಯಿಂದ ಚಿತ್ತೋರಿಗೆ ಇಡೀ ಸಾಮ್ರಾಜ್ಯವನ್ನೇ ಹೊತ್ತೊಯ್ಯುವಂತೆ ಮಾಡುತ್ತಾನೆ.

ಪರಿಸ್ಥಿತಿ ಹೆಣ್ಣಿಗೋಸ್ಕರ ಯುದ್ಧವಾಗಿ ಪರಿವರ್ತನೆಯಾಗುತ್ತದೆ. ಮೋಸ, ತಂತ್ರ, ಕುತಂತ್ರಗಳು ಮುನ್ನೆಲೆಗೆ ಬಂದು ನೀತಿಗಳು ಸೋತು ಉನ್ಮಾದಗಳೇ ಹ್ಞೂಂಕರಿಸುತ್ತವೆ. ಅವಳಿಚ್ಛೆಯಂತೆ ಬ್ರಾಹ್ಮಣನ ರುಂಡ ಪದ್ಮಿನಿಯ ಮುಂದಿಡಲ್ಪಡುತ್ತದೆ. ಶೌರ್ಯ, ರಾಜಮರ್ಯಾದೆ, ಘನತೆ, ಸಂಸ್ಕೃತಿ ಎನ್ನುವುದೆಲ್ಲ ಒಂದು ಭ್ರಮೆ ಎನ್ನುವಂತೆ ಅದರ ನಿಷ್ಠಾವಂತ ರಜಪೂತ ರಾಜ ಯುದ್ಧದ ಕ್ರೌರ್ಯಕ್ಕೆ ಬಲಿಯಾಗುತ್ತಾನೆ.

ಯುದ್ಧ, ಪ್ರೇಮದಲ್ಲಿ ಎಲ್ಲವೂ ಒಪ್ಪಿತ ಎನ್ನುವ ಖಿಲ್ಜಿ ಹುಚ್ಚು ಯುದ್ಧ ಗೆದ್ದವನಂತೆ ಅಟ್ಟಹಾಸ ಮೆರೆಯುತ್ತಾನೆ. ಪದ್ಮಿನಿಯ ಸೇರುವ ಅವನ ಮೋಹವೆಲ್ಲ ಕಣ್ಮುಂದೆ ಆಕೆ ಸತಿ ಹೋದ ಪರಿಯಲ್ಲಿ ಬೂದಿಯಾಗುತ್ತದೆ.

ಸುಲ್ತಾನನ ಮೋಹ, ವಾಸನಾ, ದೌಲತ್ತೆಲ್ಲ ಯಕಶ್ಚಿತ ಎನ್ನುವಂತೆ ಪದ್ಮಿನಿ ಚಿತೆ ಏನೋ ಸೇರುತ್ತಾಳೆ. ಆದರೆ ಇದು ಮೌಢ್ಯದ ಪರಮಾವಧಿ. ಖಿಲ್ಜಿಯದು ನೀಚತನದ ಪರಮಾವಧಿ. ಬ್ರಾಹ್ಮಣನದು ಕುತಂತ್ರದ ಪರಮಾವಧಿ.

ಬನ್ಸಾಲಿ ಕಲಾವಂತಿಕೆ, ಜಾಣ್ಮೆ, ಧೈರ್ಯ ಮೆಚ್ಚುಗೆಯಾಯ್ತು.

‍ಲೇಖಕರು Avadhi GK

2 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading