ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸುಮಾರು 9 ಘಂಟೆಗಳ ಕಾಲ ರಾತ್ರಿ ಪೂರಾ ಓಡುವ ನಾಟಕ..'

ಮಲೆಗಳಲ್ಲಿ ಮದುಮಗಳು

ಜನಶಕ್ತಿ

ಜಯ

ಕಾದಂಬರಿಯ ಪರಿಣಾಮಕಾರಿ ನಾಟಕ ರೂಪ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಗತಿಶೀಲ ಬರಹಗಾರರಾಗಿ ಕುವೆಂಪು ಮಹೋನ್ನತ ಸಾಹಿತ್ಯ ಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮಹಾಕಾವ್ಯ ಮಹಾ ಕಾದಂಬರಿ ಪ್ರಬಂಧ, ಸಣ್ಣಕಥೆ ಹೀಗೆ ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಅವರು ರಚಿಸಿರುವ ಒಂದೊಂದು ಕೃತಿಯೂ ಅವರ ಮಹಾನ್ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿವೆ. ಜಾತಿ ಕಟ್ಟಳೆ, ಪಾಳೇಗಾರಿ ಯಜಮಾನಿಕೆ, ಜೀತಪದ್ದತಿಯ ಕ್ರೌರ್ಯ ಗಳನ್ನೊಳಗೊಂಡ ಅರೆ-ಪಾಳೇಗಾರಿ ಸಮಾಜದ ಗರ್ಭದೊಳಗಿಂದ ಚಿಗುರೊಡೆಯುತ್ತಿದ್ದ ಮಲೆನಾಡ ಸಮಾಜದ ಚಿತ್ರಣವನ್ನು ಮಲೆನಾಡ ಕಾನನದಷ್ಟೆ ದಟ್ಟವಾಗಿಯೂ ಶ್ರೀಮಂತವಾಗಿಯೂ ಕುವೆಂಪು ಚಿತ್ರಿಸಿದ್ದಾರೆ. ಜಡ್ಡು ಗಟ್ಟಿದ ಪಾಳೇಗಾರಿ ಸಂಬಂಧಗಳು ಆಧುನಿಕತೆಯ ನಿಧಾನ ಪ್ರವೇಶದಿಂದ ಸಡಿಲಗೊಳ್ಳುವ ಪ್ರಕ್ರಿಯೆಯನ್ನು ಹೊಸತು ಹಳತುಗಳ ನಡುವಣ ಸಂಘರ್ಷದ ದೃಷ್ಟಿಯಲ್ಲಿ ದ್ವಂದ್ವಾತ್ಮತೆಯಿಂದ ಕಥಾಹಂದರವನ್ನು ಹೆಣೆದಿದ್ದಾರೆ. ಆಸ್ತಿವುಳ್ಳವರ ಯಜಮಾನಿಕೆಯ ಹಿಡಿತದಲ್ಲಿ ಸಿಲುಕಿ ದೈನೇಸಿ ಬದುಕು ನಡೆಸುವ ಬದುಕಿಯೂ ಸತ್ತಂತಿರುವ ದಲಿತ ಆಳುಗಳಲ್ಲಿ ಅಡಗಿರುವ ಉತ್ಪಾದಕ ಶಕ್ತಿಯ ವಿರಾಟ್ ಸ್ವರೂಪದ ದಿಗ್ದದರ್ಶನ ಮಾಡಿಸುತ್ತಾರೆ. ಈ ಕಾದಂಬರಿ ನಮ್ಮ ದೇಶದ ನೈಜ ಉತ್ಪಾದಕ ಶಕ್ತಿಗಳಾದ ದಲಿತರು ಮತ್ತು ಕೆಳವರ್ಗದವರು ಶೋಷಣೆಯ ತುಳಿತಕ್ಕೆ ಸಿಲುಕಿ ನಲುಗಿಹೋಗುತ್ತಿರುವ ಮಹಾನ್ ಕಥೆಯೂ ಹೌದು. ಇಡೀ ಕಾದಂಬರಿಯಲ್ಲಿ ಅಪ್ರತಿಮ ಹೀರೋ ಆಗಿ ವಿಜೃಂಭಿಸುವುದು ದಲಿತ ಜೀತದಾಳು `ಗುತ್ತಿ‘ ಮತ್ತು ಅವನ `ನಾಯಿ‘ ಆದರೂ, ಜೀತದಾಳುಗಳ ಸಂಕಷ್ಟ ಸ್ಥಿತಿ, ಚಿನ್ನಮ್ಮ-ಮುಕುಂದಯ್ಯ ಹಾಗೂ ನಾಯಿಗುತ್ತಿ-ತಿಮ್ಮಿಯರ ಮನುಷ್ಯ ಸಹಜ ಪ್ರೀತಿ ಪ್ರೇಮಗಳು, ಮನಸೂರೆಗೈಯ್ಯುತ್ತವೆ. ಕಾದಂಬರಿಯ ಪಾತ್ರಗಳು ಮತ್ತು ಕಥಾ ಹಂದರವನ್ನು ಇತಿಹಾಸ ಚಕ್ರದ ವಶಕ್ಕೇ ಲೇಖಕರು ಒಪ್ಪಿಸಿರುವುದರಿಂದ ಕಾಲ ಚಕ್ರದ ಕಾಲಾವಧಿಯ ಭಾಗವೊಂದರ ಕಥೆ ಈ ಕಾದಂಬರಿಯೊಳಗೆ ನೈಜವಾಗಿ ಮೂಡಿಬಂದಿದೆ.

ಸವಾಲೇ ಸರಿ


700 ಕ್ಕೂ ಹೆಚ್ಚು ಪುಟಗಳಿರುವ ಈ ಬೃಹತ್ ಕಾದಂಬರಿಯನ್ನು ನಾಟಕವಾಗಿ ರಂಗದ ಮೇಲೆ ತರುವುದು ಯಾವುದೇ ನಿರ್ದೇಕಶನಿಗೂ ಸವಾಲೇ ಸರಿ. ಸುಮಾರು 9 ಘಂಟೆಗಳ ಕಾಲ ರಾತ್ರಿ ಪೂರಾ ಓಡುವ ನಾಟಕ ರಚಿಸಿರುವ ರಂಗಕರ್ಮಿ ಸಿ. ಬಸವಲಿಂಗಪ್ಪ ನಿಜಕ್ಕೂ ತಮ್ಮ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಮಲೆನಾಡ ಕಥೆಯನ್ನು ಕಾದಂಬರಿಯಷ್ಟೆ ದಟ್ಟವಾಗಿ ಶ್ರೀಮಂತಿಕೆಯಿಂದ ರಂಗದ ಮೇಲೆ ಮೂಡಿಸುವುದಿರಲಿ, ಕುವೆಂಪುರವರು ಚಿತ್ರಿಸಿರುವ ಮಲೆನಾಡ ಸೊಬಗು ಲಂಗೂಲಗಾಮಿಲ್ಲದೆ ದಿಕ್ಕೆಟ್ಟ ನಗರೀಕರಣ ಆರ್ಭಟಕ್ಕೆ ಸಿಲುಕಿ ಇವತ್ತು ಮಲೆನಾಡಿನಲ್ಲಿಯೂ ಗೋಚರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಬಸವಲಿಂಗಪ್ಪನವರ ಪ್ರಯತ್ನ ಶ್ಲಾಘನೀಯ.
ಬೃಹತ್ ಕಾದಂಬರಿಯನ್ನು ನಾಟಕವನ್ನಾಗಿ ರೂಪಿಸಲು ನಿರ್ದೇಶಕರು ಬಳಸಿಕೊಂಡಿರುವ ಅರ್ಜುನ ಜೋಗಯ್ಯರು ಮತ್ತು ಸುಡುಗಾಡು ಸಿದ್ದರ ರೂಪಕ ಬಹಳ ಪರಿಣಾಮಕಾರಿಯಾಗಿ ಬಂದಿದೆ. ಇವರು ಕಥೆಯನ್ನು ಹೇಳುತ್ತಾ ಕಥೆ ಎಲ್ಲಿಯೂ ನಿಂತು ಬೋರು ಹೊಡೆಸದಂತೆ ನಾಟಕದ ವೇಗಕ್ಕೆ ಚಕ್ರವಾಗಿದ್ದಾರೆ. ನಾಲ್ಕು ರಂಗ ಸ್ಥಳಗಳಲ್ಲಿ ರಂಗಸ್ಥಳ ನಿರ್ಮಾಣ, ಬೆಳಕು ಮತ್ತು ಸಂಗೀತ ಸಂಯೋಜನೆ ನುರಿತ ನಟನಾ ಕೌಶಲಗಳನ್ನು ಹೊಂದಿರುವ 50ಕ್ಕಿಂತಲೂ ಹೆಚ್ಚು ಪಾತ್ರಧಾರಿಗಳು, ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಯುಳ್ಳ ಸ್ಫೋಟಕ ಸಂಭಾಷಣೆ ಮತ್ತು ಅದರಲ್ಲಿಯ ಮಲೆನಾಡ ಸೊಬಗಿನ ಮಾತುಗಳು, ಪಾತ್ರಧಾರಿಗಳ ವೇಷಭೂಷಣ ಇವೆಲ್ಲವೂ ಪ್ರೇಕ್ಷಕ ಕಣ್ರೆಪ್ಪೆ ಮುಚ್ಚುವುದಕ್ಕೆ ಅಷ್ಟು ಸುಲಭವಾಗಿ ಬಿಡುವುದಿಲ್ಲ. ನಾಟಕ ಮುಗಿದ ನಂತರ ಪ್ರೇಕ್ಷಕ ನಿಜಕ್ಕೂ ಧನ್ಯಭಾವದಿಂದ ತೃಪ್ತಿಯುತ ಹೆಜ್ಜೆ ಹಾಕುತ್ತಾನೆ. ಒಟ್ಟು ನಾಲ್ಕು ಭಾಗಗಳಂತೆ ವಿರಾಮ ಕಾಲದ ನಡುವೆ ವಿಭಜಿಸಿರುವ ನಾಟಕದಲ್ಲಿ ಮೂರನೆಯ ಭಾಗ ಮಾತ್ರ ಪೇಲವವೆನಿಸುತ್ತದೆ. ಈ ಭಾಗವನ್ನು ಕೆಲಮಟ್ಟಿಗೆ ಎಳೆದಂತೆ ಕಾಣುತ್ತದೆ. ಈ ಭಾಗದಲ್ಲಿ ಅಂತಕ್ಕನ ಮಗಳು ಮದುವೆ ವಯಸ್ಸಿನ ಕಾವೇರಿ ದುಷ್ಟ ಸಾಬರು ಮತ್ತು ಸೇರೆಗಾರನ ತಂತ್ರಕ್ಕೆ ಬಿದ್ದು ಅತ್ಯಾಚಾರಗೊಂಡು ಬಲಿಯಾಗುವ ದೃಶ್ಯ ಮಾತ್ರ ಮನಕರಗಿಸುತ್ತದೆ.
ಬಲಾತ್ಕಾರದಿಂದ ಮತಾಂತರ ಮಾಡುವ ಕ್ರೈಸ್ತ ಮಿಶನರಿಗಳ ವಿರುದ್ದ ಬರುವ ಸಂಭಾಷಣೆಯಲ್ಲಿ ಕ್ರೈಸ್ತ ಧರ್ಮದ ವಿರುದ್ದ ಒಂದು ಕೈ ಮೇಲಾಗುವಂತೆ ಸಂಭಾಷಣೆ ಹರಿದು ಬಂದಿರುವುದರ ಕುರಿತು ನಿರ್ದೇಶಕರು ಎಚ್ಚರಿಕೆ ವಹಿಸಬೇಕಿತ್ತು. ಕ್ರೈಸ್ತ ಮಿಶನರಿಗಳ ನೈಜ ಮತ ಪ್ರಚಾರದ ಕುರಿತು ದೊಡ್ಡ ಪಾದ್ರಿ ಕೊನೆಗೆ ವಿವರಣೆ ನೀಡುವಂತೆ ಕಂಡರೂ, ಕ್ರೈಸ್ತ ಧರ್ಮದ ವಿರುದ್ಧ ಒಂದು ದೊಡ್ಡ ದೃಶ್ಯ ಮತ್ತು ಹಾಡನ್ನು ಅಳವಡಿಸಿರುವುದೇ ಮೇಲುಗೈ ಪಡೆಯುತ್ತದೆ. ಹಾಗೆಯೇ ಸಾಬರೆಂದರೆ ಬರಿ ಹೊಡೆಯೋದು, ಬಡಿಯೋದು, ಕೊಲ್ಲೋದು ಎಂಬಂತಹ ಡೈಲಾಗುಗಳು ಹೆಚ್ಚು ಚುರುಕಾಗಿ ಬಂದಿದ್ದು, ಸಾಮಾನ್ಯ ಸಾಬರೂ ಕೂಡ ಆಳುವವರ ಅಡಿಯಾಳುಗಳು ಎಂಬ ಹಾಡಿನ ಸಂದೇಶ ಅಷ್ಟು ಮನತಾಕುವುದಿಲ್ಲ. ಆದರೆ, ಕಾದಂಬರಿ ಮಾತ್ರ ಎಲ್ಲ ಪುರೋಹಿತ ಶಾಹಿಗಳ ವಿರುದ್ದವೂ – ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ-ತನ್ನ ಪಾತ್ರಗಳ ದನಿಯಿಂದ ಚಾಟಿ ಬೀಸುತ್ತ ದೆಂಬುದನ್ನು ನಾವು ಇಲ್ಲಿ ಮರೆಯುವಂತಿಲ್ಲ.
ಮೇಗರವಳ್ಳಿಯ ಚಿತ್ರಣ, ಹುಲಿಕಲ್ ಬೆಟ್ಟದ ಸೊಬಗು, ಕೋಣೂರು, ಲಕ್ಕುಂದ, ಬೆಟ್ಟಳ್ಳಿ, ಇತ್ಯಾದಿ ಊರುಗಳ ನಡುವೆ ಕಥೆಯು ಲೀಲಾಜಾಲವಾಗಿ ತನ್ನ ಪಾತ್ರಗಳನ್ನು ಓಡಾಡಿಸಿಕೊಂಡು ಜೊತೆಗೆ ಪ್ರೇಕ್ಷಕರನ್ನೂ ಕರೆದೊಯ್ದು ಮಲೆನಾಡ ಲೋಕದೊಳಗೆ ಅನಾವರಣಗೊಳ್ಳುತ್ತಾ ತಮ್ಮ ಹಿಂದಿರುವ ಗುರಿ ಮತ್ತು ಉದ್ದೇಶಗಳನ್ನು ಪ್ರೇಕ್ಷಕರೆದುರಿಗೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಧರ್ಮ ಧರ್ಮದ ನಡುವಿನ ತಿಕ್ಕಾಟ, ಬಲಿಷ್ಟ ಕೋಮು ತನ್ನ ಆಸ್ತಿ ಶಕ್ತಿಯಿಂದ ಕೆಳವರ್ಗದ ಜನತೆಯನ್ನು ದಬಾವಣೆ ಮಾಡುವುದು, ತಾನು ಮದುವೆಯಾಗಬೇಕೆಂದರೂ ತನ್ನ ಯಜಮಾನನ ಆಣತಿಗಾಗಿ ಬೇಡುವ ದಲಿತ ಜೀತದಾಳು ನಾಯಿಗುತ್ತಿ, ಜೀವದ ಹಂಗು ತೊರೆದು ಒಡೆಯನ ರಕ್ಷಿಸುವ ನಾಯಿ, ಇತ್ಯಾದಿ ದೃಶ್ಯಗಳು ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿವೆ. ನಿಸರ್ಗ-ಮನುಷ್ಯನ ನಡುವಿನ ಕೊಡುಕೊಳುವಿಕೆಯ ದ್ವಂದ್ವಾತ್ಮತೆಯನ್ನು ಪರಿಣಾಮಕಾರಿಯಾಗಿ ಕಾದಂಬರಿಯಲ್ಲಿ ಚಿತ್ರಿಸಿರುವಂತೆ ನಾಟಕದಲ್ಲಿ ನಾವು ನಿರೀಕ್ಷಿಸಲಾಗ ದಿದ್ದರೂ ಅದು ನಾಟಕದ ಮಿತಿಯಾಗುವುದಿಲ್ಲ. ನಾಟಕದಲ್ಲಿಯ ಪಾತ್ರವೊಂದು ಗುತ್ತಿಯ ಕುರಿತು `ನಾಯಿಗೆ ಹುಲಿ ಅಂತ ಹೆಸರಿಟ್ಟಾನಲ್ಲಾ ಈ ಹೊಲೆಯ‘ ಎಂದು ಹೀಗಳೆದರೂ, ನಾಯಿಯ ಪಾತ್ರವಂತೂ ನಿಜಕ್ಕೂ ಹುಲಿಗೂ ಮೀರಿದ ಶಕ್ತಿಯನ್ನು ತುಂಬಿತಂದಿದೆ.
ಹಾಡು ಪಾಡು

ನಾಟಕಕ್ಕೆ ಸಂಗೀತ ನೀಡಿರುವ ಹಂಸಲೇಖ ಒಂದು ಉತ್ತಮ ಪ್ರಯತ್ನ ಮಾಡಿರುವುದು ಕಂಡು ಬರುತ್ತದೆ. ಆದರೆ, ನಾಟಕದ ಬೆನ್ನೆಲುಬುಗಳಲ್ಲೊಂದಾಗ ಬೇಕಾಗಿದ್ದ ಸಂಗೀತ ತನ್ನ ಬೆಂಬಲ ನೀಡದೆ ಹಲವು ಕಡೆ ಕೃಶವಾಗಿದೆ. ಈ ನಾಟಕ ಸುಮಾರು 45 ಹಾಡುಗಳನ್ನು ಹೊಂದಿದೆ. ಇದರಲ್ಲಿ ಕುವೆಂಪು ರಚಿತ 4 ಹಾಡುಗಳನ್ನು ಮಾತ್ರವೇ ಬಳಸಿಕೊಳ್ಳಲಾಗಿದೆ. ಬಹುತೇಕ ಹಾಡುಗಳು ಸಿನಿಮೀಯವಾಗಿ ಕೇಳಿಬರುತ್ತವೆ. ಕುವೆಂಪು ರವರು ರಚಿಸಿರುವ ಹಲವು ಗೀತೆಗಳನ್ನು ವಿಶೇಷವಾಗಿ ಜಾನಪದ ಸೊಗಡಿನ ಗೀತೆಗಳು, ಭಾವಗೀತೆಗಳು ಮತ್ತು ಪ್ರಗತಿಪರ ಗೀತೆಗಳನ್ನು ಅಳವಡಿಸುವಲ್ಲಿ ನಿರ್ದೇಶಕರು ಸಂಪೂರ್ಣ ಸೋತಿದ್ದಾರೆ. ಇದರಿಂದಾಗಿ ಸಂಭಾಷಣೆಯು ಗಟ್ಟಿತನದಿಂದ ಬಂದಿರುವಂತೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಅಷ್ಟು ಗಟ್ಟಿತನ ಉಳಿಸಿಕೊಂಡಿಲ್ಲ.
ಇದೇನೆ ಇರಲಿ, 20-20 ಕ್ರಿಕೆಟ್ ಆಟದ ಆರ್ಭಟ, ಸಿನಿಮಾ ಆಕರ್ಷಣೆ, ಹೆಚ್ಚುತ್ತಿರುವ ಮಾಲ್ ವೀಕ್ಷಣೆಗಳ ನಡುವೆಯೂ ಪ್ರತಿ ಪರ್ಯಾಯ ದಿನ ಒಂದು ತಿಂಗಳ ಕಾಲ ನಡೆಯುತ್ತಿರುವ ಈ ನಾಟಕ ಪ್ರತಿ ಆಟಕ್ಕೆ 400 ಕ್ಕೂ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಿ ರಾಜ್ಯಾದ್ಯಾಂತ ರಂಗಪ್ರೇಮಿಗಳು ರಸದೂಟ ಸವಿದಿದ್ದಾರೆ. ಕನ್ನಡ ಪ್ರೇಕ್ಷಕ ಅನ್ಯಭಾಷಿಕ ಚಿತ್ರಗಳನ್ನು ಮಾತ್ರವೇ ನೋಡುತ್ತಾನೆಂದೂ, ಕ್ರಿಕೆಟ್ ಮತ್ತು ಚುನಾವಣೆಗಳು ಚಲನಚಿತ್ರ ಬಿಡುಗಡೆಗೆ ಸಕಾಲವಲ್ಲವೆಂದು ಏನೇನೋ ಸಬೂಬು ದೂರುಗಳನ್ನು ಹೇಳುವ ಗಾಂಧಿನಗರ ಪಂಡಿತರು ತಿಳಿಯಬೇಕಿರುವುದಿಷ್ಟು: ಉತ್ತಮ ದರ್ಜೆಯ ನಾಟಕಗಳನ್ನು ಮತ್ತು ಚಲನಚಿತ್ರಗಳನ್ನು ಕನ್ನಡ ಪ್ರೇಕ್ಷಕ ಯಾವತ್ತೂ ಮಿಸ್ ಮಾಡಿಕೊಳ್ಳದೆ ನೋಡೇ ನೋಡುತ್ತಾನೆ ಎನ್ನುವುದಕ್ಕೆ ಸಿ. ಬಸವಲಿಂಗಪ್ಪನವರ `ಮಲೆಗಳಲ್ಲಿ ಮದುಮಗಳು‘ ನಾಟಕವೇ ಸಾಕ್ಷಿ.
 

‍ಲೇಖಕರು avadhi

20 April, 2013

2 Comments

  1. girish

    Tickets elli siguttave tilisi.
    Rgrds,
    Girish

  2. girish

    tickets bagge yaaradru helrappa…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading