ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಭಾಷ್ ರಾಜಮಾನೆ ಹೊಸ ಕೃತಿ ʼಬುದ್ಧಪ್ರಜ್ಞೆಯ ನಡಿಗೆʼ

ಡಾ ಎಚ್ ಎಸ್ ರಾಘವೇಂದ್ರ ರಾವ್

ವಿಮರ್ಶಕರಾದ ಡಾ.ಎಚ್.ಎಸ್. ರಾಘವೇಂದ್ರ ರಾವ್ ಹಾಗೂ ಡಾ.ಜಿ ಕೃಷ್ಣಪ್ಪ ಅವರು “ಬುದ್ಧಪ್ರಜ್ಞೆಯ ನಡಿಗೆ” ಕುರಿತು ಬರೆದಿರುವ ಮಾತುಗಳು

ಇದು ಪುಸ್ತಕವಲ್ಲ. ಸಾಹಿತ್ಯ ಕೃತಿಯಂತೂ ಮೊದಲೇ ಅಲ್ಲ. ಇದು ಜೀವನವನ್ನು ಕುರಿತ ತಿಳಿವಳಿಕೆ. ಹಾಗೆಂದು ಇದು ಉಪದೇಶವಲ್ಲ. ಇದನ್ನು ನಮಗೆ ನೀಡುತ್ತಿರುವವರಿಗೆ ಕಲಿಸುವೆನೆಂಬ ಹಮ್ಮು ಇಲ್ಲ, ಕಲಿಸಲೇಬೇಕೆಂಬ ಹಟವೂ ಇಲ್ಲ. ತನ್ನ ಬದುಕಿನ ವಿವರಗಳನ್ನು ಮತ್ತು ತನ್ನ ಸುತ್ತಲಿನ ಲೋಕವನ್ನು ತಾನೇ ಗಮನವಿಟ್ಟು ನೋಡುವ, ಹಾಗೆ ನೋಡಿದಾಗ ಕಂಡುದನ್ನು ಇತರರೊಂದಿಗೆ ಹಂಚಿಕೊಳ್ಳುವ ಹಂಬಲ ಇಲ್ಲಿದೆ. ತನ್ನ ಜೊತೆ-ಜೀವಿಗಳೆಲ್ಲರೂ ಹೂವಿನಂತೆ ಅರಳಬೇಕು. ಅದರಂತೆ ಲೋಕಕ್ಕೆ ಹಿತ ಉಂಟು ಮಾಡಬೇಕು ಎಂಬ ಪ್ರೀತಿಯೇ ಈ ಹಂಬಲಕ್ಕೆ ಮೀಟುಗೋಲು.

ಇಲ್ಲಿ ತಾತ್ವಿಕವಾದ ಜಿಜ್ಞಾಸೆಗಿಂತ ಲೋಕವನ್ನು ಕುರಿತ ಚಿಂತನೆಗಿ೦ತ ಅದರೊಂದಿಗೆ ನಾವು ಇಟ್ಟುಕೊಂಡಿರುವ, ಇಟ್ಟುಕೊಳ್ಳಬೇಕಾದ ಸಂಬ೦ಧಗಳ ಸ್ವರೂಪವನ್ನು ಕುರಿತಾದ ಅನಿಸಿಕೆಗಳಿವೆ. ಮುಖ್ಯವಾದ ಸಂಗತಿಯೆ೦ದರೆ, ಇದನ್ನು ಹೇಳುತ್ತಿರುವವರು ಲೋಕವನ್ನು ತೊರೆದ ಸನ್ಯಾಸಿಯಲ್ಲ. ಬದಲಾಗಿ ತನ್ನ ನಾಡನ್ನು, ಇಡೀ ಲೋಕವನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ತನ್ನದೇ ಆದ ರೀತಿಯಲ್ಲಿ, ಪರಿಹರಿಸಲು ಪ್ರಯತ್ನಿಸಿದ ‘ಆಕ್ಟಿವಿಸ್ಟ್’ ಇಲ್ಲಿ ಮಾತಾಡುತ್ತಿದ್ದಾನೆ. ಆದರೆ ಅವನಲ್ಲಿ ಇಂದಿನ ಲೋಕರೂಢಿಯಂತೆ ಪರ-ವಿರೋಧಗಳ ಗೊಂದಲವಿಲ್ಲ. ಒಂದೇ ಸಂಗತಿಯನ್ನು ಎಲ್ಲರ ನೆಲೆಗಳಿಂದಲೂ ಪೂರ್ಣದೃಷ್ಟಿಯಿಂದ ಕಂಡುಕೊ೦ಡಾಗ ಮೂಡುವ ಅರಿವು ಮತ್ತು ಪ್ರೀತಿಗಳು ಇಲ್ಲಿ ಇಡಿಕಿರಿದಿವೆ.

ಇದು ಬುದ್ಧಗುರುವಿನ ತಿಳಿವಳಿಕೆಯ ವಿಸ್ತರಣೆಯಂತೆ ಕಂಡರೂ ಅಷ್ಟೇ ಅಲ್ಲ. ಚೈನಾ, ಜಪಾನ್ ಮುಂತಾದ ದೇಶಗಳಲ್ಲಿ ಬೆಳೆದು ಬಂದಿರುವ ‘ಕಲಿಸುವ ಬಗೆ’ಗಳ ಬಳಕೆ ಇಲ್ಲಿದೆ. ಸ್ವಾನುಭವವೇ ತಿಚ್ ನ್ಹಾತ್ ಹಾನ್ ಅವರ ಮೂಲ ನೆಲೆ. ನಾವು ಕಟ್ಟಿಕೊಂಡಿರುವ ಎಲ್ಲ ಗಡಿಗಳನ್ನು ಮೀರುವುದರ ಅಗತ್ಯವನ್ನು ಅವರು ಒತ್ತಿ ಹೇಳುತ್ತಾರೆ. ವಿಯಟ್ನಾಂ, ಫ್ರಾನ್ಸ್, ಅಮೆರಿಕಾ ಮುಂತಾದ ತಂಗುದಾಣಗಳಲ್ಲಿ ಪಡೆದ ಅನುಭವಗಳು ಬೇರೆ ಬೇರೆ ಭಾಗಗಳಲ್ಲಿ ಹರಿಗಡಿಯದಂತೆ ಹೆಣೆದುಕೊಂಡಿವೆ.

ತನ್ನ ಒಳಗನ್ನು ಆಳವಾಗಿ ಕಲಕಿದ ಕೃತಿಗಳ ಅನುವಾದದಲ್ಲಿ ಎಡೆಬಿಡದೆ ತೊಡಗಿಕೊಳ್ಳುವುದರಿಂದಲೇ ತನ್ನತನದ ಗಡಿಗಳನ್ನು ಬೆಳೆಸಿಕೊಳ್ಳುತ್ತಿರುವ, ನನ್ನ ಮಿತ್ರರಾದ ಸುಭಾಷ್ ರಾಜಮಾನೆಯವರು, ಈ ಕೆಲಸವನ್ನೂ ಮನಸ್ಸಿಟ್ಟು, ಹೃದಯವಿಟ್ಟು ಮಾಡಿದ್ದಾರೆ. ಮೂಲದಂತೆಯೇ ಅನುವಾದವೂ ನೇರವಾಗಿದೆ, ಸರಳವಾಗಿದೆ. ಇವರೇ ಕನ್ನಡಕ್ಕೆ ತಂದಿರುವ ವಿಕ್ಟರ್ ಫ್ರಾಂಕೆಲ್‌ನ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಹಾಗೆಯೇ ಇದು ಕೂಡ, ನಾವು ಕನ್ನಡದವರು ನಮ್ಮೊಳಗೆ ತೆಗೆದುಕೊಳ್ಳಬೇಕಾದ ಕೃತಿ.

ಡಾ ಜಿ ಕೃಷ್ಣಪ್ಪ

ಬುದ್ಧನ ಧ್ಯಾನಮಾರ್ಗದ ದೀಪ್ತಿಯಲ್ಲಿ ಬೆಳಗಿದ ವಿಯೆಟ್ನಾಂನ ಈ ಬೌದ್ಧ ಗುರು ತಿಚ್ ನ್ಹಾತ್ ಹಾನ್ ಅವರು ಶಾಂತಿ, ಕರುಣೆ ಹಾಗೂ ಪ್ರೀತಿಯಲ್ಲಿ ಉಸಿರಾಡುತ್ತ ಅದನ್ನು ಯುದ್ಧದ ಭಾಗವಾದ ಸೈನಿಕರಲ್ಲಿ ಬಿತ್ತಿ ಸ್ನೇಹದ ಫಲ ಪಡೆದವರು. ಬುದ್ಧನ ‘ಆನ ಪಾನ ಸತಿ’ಯ ಉಸಿರನ್ನೇ ಗಮನಿಸುವ ಧ್ಯಾನ ಒಂದು ವಿಶಿಷ್ಟ ಮನೋಮಗ್ನತೆ. ಅದರ ಸಾಕಾರ ರೂಪ ಈ ಸಂತ.

ವೈರ, ದ್ವೇಷ, ಅಸೂಯೆರಹಿತ ಬದುಕಿಗೆ ಪ್ರತಿ ಮನುಷ್ಯರನ್ನು ಕೊಂಡೊಯ್ಯುವ ನಿಧಾನ ನಡಿಗೆಯ, ಶಾಂತ ಚಿತ್ತದ, ಮನದ ಅನುಸಂಧಾನದಲ್ಲಿ ತನ್ನ ಒಳಗನ್ನು ಶೋಧಿಸಿಕೊಳ್ಳುತ್ತ ಶುದ್ಧನಾದ ಯೋಗಿ ಈತ. ಈ ಗುರುವಿನ ಅಮೂಲ್ಯ ಚಿಂತನೆಗಳನ್ನು ಗೆಳೆಯ ಡಾ. ಸುಭಾಷ್ ರಾಜಮಾನೆ ಕನ್ನಡಕ್ಕೆ ಅನುವಾದಿಸಿ, ಕನ್ನಡಿಗರು ಬುದ್ಧನ ಧ್ಯಾನಮಾರ್ಗದಲ್ಲಿ ಸಾಗಲು ಸಹಾಯಕರಾಗಿದ್ದಾರೆ. ಇಂತಹ ಕೃತಿ ಕನ್ನಡಿಗರ ಶಾಂತಿ, ಸಹನೆ, ಪ್ರೀತಿಯ ಬದುಕನ್ನು ವೃದ್ಧಿಸುತ್ತದೆ.

ವಿಯೆಟ್ನಾಂ ದೇಶದ ಮಹಾನ್ ಬೌದ್ಧ ಗುರು, ಜೆನ್ ಮಾಸ್ಟರ್, ಆಕ್ಟಿವಿಸ್ಟ್, ಲೇಖಕ ತಿಚ್ ನ್ಹಾತ್ ಹಾನ್ ಅವರದ್ದು ವಿಶ್ವವಿಖ್ಯಾತ ಹೆಸರು. ಮನೋಮಗ್ನತೆಯ (Mindfulness) ಹರಿಕಾರ ಎಂದೇ ಖ್ಯಾತರು. ಬೀದಿಗಿಳಿದು ಮನೋಮಗ್ನತೆಯಿಂದ ಹೋರಾಟ ನಡೆಸಿದ್ದರಿಂದ “ಕಾರ್ಯಪ್ರವೃತ್ತ ಬೌದ್ಧತೆ” (Engaged Buddhist) ಎಂಬ ಹೊಸ ಮಾರ್ಗವನ್ನು ಅನುಷ್ಠಾನಕ್ಕೆ ತಂದವರು. ವಿಯೆಟ್ನಾಂನಿಂದ ಗಡಿಪಾರಾದವರು; ಫ್ರಾನ್ಸ್ ದೇಶದಲ್ಲಿ ನಿರಾಶ್ರಿತರೊಂದಿಗೆ ಸೇರಿಕೊಂಡು “ಪ್ಲಮ್ ವಿಲೇಜ್” ನ್ನು ಸ್ಥಾಪಿಸಿದರು. ನೊಂದ ಬಾಳಿಗೆ ಭರವಸೆಯ ಬೆಳಕಾಗುವ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಅವರ ಕೃತಿಗಳು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.

‍ಲೇಖಕರು Admin

27 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading