
ಸಾಯಿಲಕ್ಷ್ಮಿ ಅಯ್ಯರ್
ಇಂದು ಭಾರತೀಯ ಮೂಲದ ನೊಬೆಲ್ ಪ್ರಶಸ್ತಿ ಭೂಷಿತ ಖಭೌತ ವಿಜ್ಞಾನಿ ಪ್ರೊ. ಸುಬ್ರಮಣ್ಯನ್ ಚಂದ್ರಶೇಖರ ಅವರ ನೆನಪಿನ ದಿನವಂತೆ.
ಶ್ರೇಷ್ಠರ ಸಂಪರ್ಕ ಯೋಗ
ಟೆಲಿಪೋನ್ ಎಕ್ಸಚೇಂಜ್ ನ ನೌಕರಿ ದಿನಗಳು
ನಮ್ಮ ಜೀವನದಲ್ಲಿ ಎಂತೆಂತಹ ನಿಲುಕದ ನಕ್ಷತ್ರಗಳು. ಅಗಸಕ್ಕೆ ಅವಕಾಶವೇ ಏಣಿ ಹಾಕಿ ಹೊಳೆಯುವ ತಾರೆಯನ್ನು ಹಿಡಿದುಕೊಟ್ಟರೆ…..ಕಂಗಳಿಗೆ ಏನಾನಂದ. ಬಾಳಿಗೆಂತಹ ಧನ್ಯತೆಯ ಮಿಂಚು. ಅಂತಹ ಒಂದು ರೋಮಾಂಚಕಾರಿ ಘಟನೆ.
ನಾನಾಗ ಬೆಂಗಳೂರು ದೂರವಾಣಿಯ ಓವರಸೀಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಹೊರಗೆ ಸಿಗುವ ಗೆಳತಿಯರಿಗೆ ತಮಾಷೆಗೆ “ಸಪ್ತಸಮುದ್ರದಾಚೆಗೆ ಹಾರಿರುವೆ” ಎನ್ನುತ್ತಿದ್ದೆ. ಆಗ ಎಲ್ಲ ದೇಶಗಳಿಗೂ ನಮಗೆ ಇಲ್ಲಿಂದ ಡೈರೆಕ್ಟ್ ಡಯಲಿಂಗ್ ಸೌಲಭ್ಯವಿರಲಿಲ್ಲ. ಉದಾಹರಣೆಗೆ ಲಂಡನ್ ಗೆ ಕಾಲ್ ಬುಕ್ ಆದರೆ ಮುಂಬೈ ಆಪರೇಟರ್ ಡಯಲ್ ಮಾಡಿ ಕನೆಕ್ಟ್ ಮಾಡುತ್ತಿದ್ದರು. ಅಮೆರಿಕೆಯ ಕಾಲ್ ಗಳನ್ನು ನಾವೇ ಹಾಕುತ್ತಿದ್ದೆವು.

ಓವರ್ ಸೀಸ್ ಕಾಲ್ ಗಳು ಅ ದೇಶದ ಸಮಯ ಹೊಂದಿಸಿಕೊಂಡೇ ಗ್ರಾಹಕರು ಬುಕ್ಮಾಡುವರು. ಅದರಲ್ಲು calling party, called party ವಿವರಗಳಿರುವವು. ನಾವು ಮೊದಲೇ ಅವರವರ ಸಮಯಕ್ಕೆ ತಕ್ಕಂತೆ ಕಾಲಿಂಗ್ ಪಾರ್ಟಿಯನ್ನು ಲೈನ್ ಗೆ ತೆಗೆದುಕೊಂಡೇ ಕಾಲ್ ಹಾಕಲು ಪ್ರಯತ್ನ ನಡೆಸುತ್ತಿದ್ದೆವು.
ನಮ್ಮಲ್ಲಿ ನಾವು ಯಾರೂ ಕರೆಯನ್ನು ದುರ್ಬಳಕೆ ಮಾಡಬಾರದು ಎಂಬುವ ಕಾರಣಕ್ಕೆ secret.observation ವ್ಯವಸ್ಥೆ ಇತ್ತು. ನಮ್ಮ ದೇಶದೊಳಗೆ ಎಲ್ಲಿಗಾದರೂ ಪರಮಿಶನ್ ಪಡೆದು ಮಾತನಾಡಲು ನಮಗೆ ಅವಕಾಶವಿತ್ತು. ಆದರೆ ಅಂತಾರಾಷ್ಟ್ರೀಯ ಕರೆಗಳಿಗೆ ಅದು ಅನ್ವಯವಾಗದು.
ಹೀಗೊಂದು ಸಂದರ್ಭ.
ನನ್ನ ಕೈಗೆ ಆ ಓವರ್ಸೀಸ್ ಕಾಲ್ ಟಿಕೆಟ್ ಬಂತು. ಅದು ಜಯನಗರದ ಪೋನ್ ನಂಬರ್. ಕಾಲಿಂಗ್ ಪಾರ್ಟಿ ಲೈನಿಗೆ ಬಂದಿದ್ದಾರೆ. ಅವರಿಗೆ ವಂದಿಸಿ ಕಾಲ್ಡ್ ಪಾರ್ಟಿ ನೋಡುತ್ತೇನೆ. ಆ ಹೆಸರಿನ ಮೇಲೆ ಕಣ್ಣೋಡುತ್ತಿರುವಂತೆ ರೋಮಾಂಚನ. ಅವರೇ ನಮ್ಮ ದೇಶವನ್ನು ಪ್ರತಿನಿಧಿಸುತ್ತ ಖಭೌತ ವಿಜ್ಞಾನ ಲೋಕದಲ್ಲಿ ಪ್ರಜ್ವಲಿಸುತ್ತಿದ್ದ ಉಜ್ವಲ ನಕ್ಷತ್ರ ಅಮೆರಿಕೆಯಲ್ಲಿದ್ದ ಪ್ರೊ. ಸುಬ್ರಮಣ್ಯನ್ ಚಂದ್ರಶೇಖರ.
ವಿಜ್ಞಾನ ತಪಸ್ವಿ ಡಾ ಸಿ ವಿ ರಾಮನ್ ಅವರ ಸೋದರ ಸಂಬಂಧಿ. ಅಂದೇ ಸುಬ್ರಮಣಿಯನ್ ಅವರಿಗೂ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು. ನನಗೆ ಹರುಷ ತಾಳಲಾಗಲಿಲ್ಲ. ಡಯಲ್ ಮಾಡಲು ಹೊರಟರೆ ಕೈಬೆರಳುಗಳು ಕುಣಿದಾಡುತ್ತಿವೆ. ಭಾವುಕ ಸ್ಥಿತಿ. ಅತ್ತ ರಿಸೀವರ್ ತೆಗೆದು “Subramaniyan here” ಎಂದ ಮಹಾನುಭಾವರು ಅವರೇ. Secret observation ಎಲ್ಲವೂ ನೆನಪಿಗೆ ಬಾರಲೇ ಇಲ್ಲ.
“Namaste Sir there is a call for you from India Bangalore.” ಅವರು ಅಷ್ಟೆ ಗಂಭೀರ ದನಿಯಲ್ಲಿ “Namaste Madam. I would love to speak to the call”ಎಂದರು.
ಪುಳಕಗೊಂಡ ನಾನು ತಡಮಾಡದೆ ಭಾವಾವೇಶದಿಂದ ಹೇಳಿಯೇಬಿಟ್ಟೆ.
“Sir very happy to know that you are honoured with noble prize. I congratulate you on behalf of the whole country. We are proud of your achievement. I salute you Sir” ಅವರು ಅಷ್ಟೆ ಮೃದುವಾಗಿ ವಂದನೆ ಹೇಳಿದರು. ಕಡೆಯ ಮಾತನಾಡುವಾಗ ನಾನು ಕುಳಿತಿದ್ದವಳು ನಿಂತುಬಿಟ್ಟಿದ್ದೆ. ಒಂದು ಕ್ಷಣ ನಾನು ಅಕ್ಕಪಕ್ಕದವರ ಪ್ರಶ್ನೆ ಉತ್ತರಿಸುವ ಸ್ಥಿತಿಯಲ್ಲೇ ಇರಲಿಲ್ಲ. ಅಂತಹ ಜಗತ್ಪ್ರಸಿದ್ಧ ಮೇಧಾವಿಯೊಡನೆ ನಾನೇನಾ ಮಾತನಾಡಿದ್ದು ಎಂಬ ಸಂಗತಿ ನನಗೆ ನಂಬಲಾಗಿರಲಿಲ್ಲ. ಆಶ್ಚರ್ಯ ಆನಂದದ ಮನಸ್ಥಿತಿ. ನಿಧಾನವಾಗಿ ವಿಷಯ ತಿಳಿದ ಗೆಳತಿಯರೆಲ್ಲ ನನ್ನ ಧೈರ್ಯ ಮೆಚ್ಚಿ ಅಭಿನಂದನೆಯ ಮಹಾಪೂರ ಹರಿಸಿದರು






0 Comments