ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಬ್ಬಣ್ಣನವರದು ವಿಶಿಷ್ಟ, ಆಕರ್ಷಕ ಧ್ವನಿ..

ದೀಪಕ್ ಕಲ್ಕೆರೆ

ಅದು ಎಂಭತ್ತರ ದಶಕದ ಆರಂಭದ ಕಾಲ. ನಾನು ಮಾಧ್ಯಮಿಕ ಶಾಲೆಯಲ್ಲಿದ್ದೆ. ಆಗ ನನಗೆ ಸಂಗೀತವನ್ನು ಕೇಳುವುದೇ ಒಂದು ಗೀಳಿನಂತಿತ್ತು. ಹಾಗೆಯೇ ಸಹಜವಾಗಿ ಚಿತ್ರಗೀತೆಗಳನ್ನೂ ಕೂಡ. ಚಲನಚಿತ್ರಗೀತೆಗಳ ಸಂಗೀತ, ಸಾಹಿತ್ಯ ನಿಮಗೆ ತಿಳಿದಂತೆ ಈಗಿನಂತೆ ವಿಲಕ್ಷಣವಾಗಿರಲಿಲ್ಲ. ಆಗ ರೇಡಿಯೋದಲ್ಲಿ ಬೆಳಗ್ಗೆ ಮತ್ತು ಸಂಜೆ ನಿಗದಿತ ಸಮಯದಲ್ಲಿ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು.

ಶಿವಮೊಗ್ಗ ಸುಬ್ಬಣ್ಣನವರ ಧ್ವನಿ ನನ್ನನ್ನು ಎಷ್ಟು ಆವರಿಸಿತ್ತೆಂದರೆ ಪ್ರತಿದಿನ ಅವರ “ಕಾಡು ಕುದುರೆ ಓಡಿ ಬಂದಿತ್ತ” ಹಾಡು ಬರಬಹುದೆಂದೇ ಕಾಯುತ್ತಿದ್ದೆ. ಕಂಬಾರರ ಸಾಹಿತ್ಯ, ಸುಬ್ಬಣ್ಣನವರ ವಿಶಿಷ್ಟ ಧ್ವನಿ ನನಗೊಂದು ಬೆರಗಿನ ಲೋಕವನ್ನೇ ಅನಾವರಣಗೊಳಿಸಿತ್ತು. ಆ ಹಾಡು ಮತ್ತು ಸಂಗೀತ ಸಂಯೋಜನೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ನನಗೆ ಆಗ ಈ ರಾಷ್ಟ್ರ ಪ್ರಶಸ್ತಿ ಎಂದರೇನೆಂದು ತಿಳಿಯುತ್ತಿರಲಿಲ್ಲ. ಒಟ್ಟಾರೆ ದೇಶದ ಜನ ಮೆಚ್ಚಿರಬಹುದು ಎನ್ನುವುದು ನನ್ನ ತಿಳಿವಳಿಕೆಯಾಗಿತ್ತು. ಬಹುಶಃ ಅದು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರಗೀತೆ ಇರಬಹುದು.

ಆಗ ತಾನೆ ಕನ್ನಡದ ಭಾವಗೀತೆಯ ಪ್ರಕಾರಕ್ಕೆ ಕನ್ನಡ ಸಾಂಸ್ಕೃತಿಕ, ಸಾರಸ್ವತ ಲೋಕ ತೆರೆದುಕೊಳ್ಳುತ್ತಿತ್ತು. ಸಹಜವಾಗಿ ನನಗೆ ಶಿವಮೊಗ್ಗ ಸುಬ್ಬಣ್ಣನವರ ಹಾಡುಗಳು ಇಷ್ಟವಾಗತೊಡಗಿದವು. ಇದಕ್ಕೆ ಕಾರಣವಾಗಿದ್ದು ಸುಬ್ಬಣ್ಣನವರ ವಿಶಿಷ್ಟ, ಆಕರ್ಷಕ ಧ್ವನಿ.

ಸುಬ್ಬಣ್ಣನವರ ಧ್ವನಿಯಲ್ಲಿ ತುಂಬಾ ನಿಖರತೆ ಮತ್ತು ಸ್ಪಷ್ಟತೆ ಇರುತಿತ್ತು. ಬಹುತೇಕ ಪ್ರಸಿದ್ಧ ಗಾಯಕರಲ್ಲಿರುವಂತೆಯೇ ಸುಬ್ಬಣ್ಣನವರದು ಮಂದರ ಶೃತಿ. ತಾರಕದಲ್ಲಿನ ಸ್ವರದಲ್ಲಿನ ಹಾಡುಗಳಿಗಿಂತ ಮಂದರದ ಶೃತಿಯ ಹಾಡುಗಳು ಹೆಚ್ಚು ಆಪ್ತ ಅನಿಸುತ್ತವೆ. ಹಾಗೆಯೇ ಅವರ ಹಾಡಿನ ಸಂಗತಿಗಳು ಮತ್ತು ಧ್ವನಿಯಲ್ಲಿ ಒಂದು ಗೆರೆಯಷ್ಟು ಕೀರಲು ಕೇಳುತ್ತಿರಲಿಲ್ಲ. ಅಷ್ಟು ಸ್ಪಷ್ಟ ಶಾರೀರವಾಗಿತ್ತು. ಅದನ್ನು ದೇಸೀ ಭಾಷೆಯಲ್ಲಿ “ಕಲ್ಲು ಒಗೆದಂತೆ” ಎನ್ನುತ್ತಾರೆ.

“ಹಾಕಿದ ಜನಿವಾರವ ಸದ್ಗುರುನಾಥ….” ಎಂಬ ಶರೀಫರ ಗೀತೆ ಮತ್ತು “ಅಗಣಿತ ತಾರ ಗಣಗಳ ನಡುವೆ ನಿನ್ನನೆ ನೆಚ್ಚಿಹೆ ನಾನು, ನನ್ನೀ ಜೀವನ ಸಮುದ್ರ ಯಾನಕೆ ಚಿರಧ್ರುವ ತಾರೆಯು ನೀನು…..”, “ಬಾರಿಸು ಕನ್ನಡ ಡಿಂಡಿಮವ….”, ಆನಂದಮಯ ಈ ಜಗ ಹೃದಯ….” ಎನ್ನುವ ಕುವೆಂಪು ಅವರ ಗೀತೆಗಳನ್ನು ಅದೆಷ್ಟು ಬಾರಿ ಕೇಳಿದ್ದೇನೋ ಗೊತ್ತಿಲ್ಲ. ಹಾಗೆಯೇ ಯಾವುದೇ ಕಾರ್ಯಕ್ರಮಗಳಲ್ಲಿ ಅವುಗಳನ್ನು ಹಾಡಲು ಯತ್ನಿಸುತ್ತಿದ್ದೆ. ಈ ಹಾಕಿದ ಜನಿವಾರವ ಅನ್ನುವ ಗೀತೆ ಸುಬ್ಬಣ್ಣನವರ ಧ್ವನಿಯಲ್ಲಿ ಇಡೀ ಪ್ರಕ್ರಿಯೆ ನಮ್ಮ ಕಣ್ಣ ಮುಂದೆ ನಡೆದಂತೆ ಅನಾವರಣಗೊಳಿಸುತ್ತಿತ್ತು. ಇಂತಹ ಅನೇಕ ಶಿಶುನಾಳ ಶರೀಫ, ಕುವೆಂಪು ಅಂಥವರ ಸಾಹಿತ್ಯ ಸರಾಗವಾಗಿ ನನ್ನಂಥವರ ಮನಕ್ಕಿಳಿಸುವಲ್ಲಿ ಸುಬ್ಬಣ್ಣನವರ ಧ್ವನಿ ಸಹಾಯಕವಾಗಿರುವುದರಿಂದ ನಾವು ಋಣಿಗಳು.

ನಾಡಿನ ಗಾಯನಲೋಕದ ಅದ್ಬುತ ಪ್ರತಿಭೆ ಶಿವಮೊಗ್ಗ ಸುಬ್ಬಣ್ಣ.

‍ಲೇಖಕರು Admin

12 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading