ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುನಂದಾ ಅವರ 'ದೋಣಿ ನಡೆಸೋ ಹುಟ್ಟು'

ದೋಣಿ ನಡೆಸುವ ಆಟ

ಗ್ಯಾಸುಕಟ್ಟೆಯ ಎದುರು ನಿಂತು ಹೆಂಚಿನಲ್ಲಿ ದೋಸೆ ಮಾಡುತ್ತಲಾದರೂ ಒಂದು ಪುಸ್ತಕ ಓದಿಬಿಡಬಹುದು. ಆದರೆ ಬರವಣಿಗೆಗೆ ಬೇಕಾದ ಮೌನವನ್ನು ಕಾಪಾಡಿಕೊಳ್ಳುವುದು ನನ್ನಂತಹ ಟಿಪಿಕಲ್ ಗೃಹಿಣಿಗೆ ಸವಾಲಿನ ಸಂಗತಿಯೇ ಅನಿಸುತ್ತಿದೆ. ಸಂತೆಯ ಗದ್ದಲದಲ್ಲೂ ಒಂದು ಅವಾಯಕ ಬೆಕ್ಕು, ಹೇಗೆ ತರಕಾರಿ ಚೀಲದ ಮೇಲೆ ಕಣ್ಣುಮುಚ್ಚಿ ಕೂತು ಸಿಕ್ಕಷ್ಟೇ ಸಮಯದಲ್ಲಿ ಧ್ಯಾನಸ್ಥ ಮೌನವನ್ನು ಅರಸಿಕೊಳ್ಳುತ್ತದೆಯೋ ಹಾಗೆ ನನ್ನ ಬರವಣಿಗೆಯ ಸಮಯ ನನಗೆ ವೇದ್ಯವಾದದ್ದು.

ಕೇವಲ ಮೂರು ತಿಂಗಳ ಅವಧಿಯಲ್ಲಿ ಈ ಹುಟ್ಟು ರೂಪಗೊಂಡಿದೆ. ಸಹೃದಯರ ಮನಸ್ಸಿನ ದೋಣಿಯನ್ನು ಈ ಹುಟ್ಟಿನಿಂದ ಕಿಂಚಿತ್ ದಡಕ್ಕೆ ತಂದು ಕ್ಷಣ ವಿಶ್ರಮಿಸಲು ಸಾಧ್ಯ ಮಾಡಿದ್ದೇ ಆದರೆ ನನ್ನ ಅಕ್ಷರಗಳು ಸಾರ್ಥಕ.

ಈ ಕೃತಿಯನ್ನು ಆಸಕ್ತಿಯಿಂದ ಪ್ರಕಟಿಸುತ್ತಿರುವ, ಗುಲಬರ್ಗಾ ಜಿಲ್ಲೆಯಲ್ಲಿನ ‘ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘ’ದ ಅಧ್ಯಕ್ಷರಾದ ಮಾನ್ಯ ಅಪ್ಪಾರವ್ ಅಕ್ಕೋಣೆಯವರ ಪರಿಚಯವಾದದ್ದು ತೀರಾ ಆಕಸ್ಮಿಕವಾಗಿ. ನಮ್ಮ ಸ್ನೇಹಿತರಾದ ಬೀದರ ಜಿಲ್ಲೆಯ ಹೆಬ್ಬಾಳರ ಮಾವನವರಾಗಿರುವ ಶ್ರೀ ಅಕ್ಕೋಣೆಯವರು ಪರಿಚಿತರಾಗಿ ಅಲ್ಪಕಾಲದಲ್ಲೇ ನನ್ನ ಬರವಣಿಗೆಯ ಮೇಲೆ ನಂಬಿಕೆಯಿಟ್ಟು ಹೀಗೊಂದು ಪುಟ್ಟ ಕಾದಂಬರಿ ಬರೆದು ಕೊಡುವಂತೆ ಹಕ್ಕಿನಿಂದ ಕೇಳಿ, ಒಬ್ಬ ಅಪ್ಪಟ ಮಾಸ್ತರನಂತೆ ಬೆತ್ತ ಹಿಡಿದು ನಿಂತು ಬರೆಸಿದ್ದಾರೆ. ಅವರ ಅಚಲ ವಿಶ್ವಾಸಕ್ಕೆ ವಂದನೆ.

ಪ್ರಕಟಣಾಪೂರ್ವ ಮೊದಲ ಓದು ಓದಿ ಅಲ್ಲಲ್ಲಿ ತಿದ್ದಿಸಿದ್ದು ನನ್ನ ಮಗಳು ಕಾವ್ಯಾ, ನಂತರ ಸೂಕ್ಷ್ಮ ಓದುಗನಾಗಿ ನಿಂತು ಕೆಲವು ತಿದ್ದುಪಡಿ ಸೂಚಿಸಿದವ ವಿದ್ಯಾರ್ಥಿಮಿತ್ರ ಕವಿ ಪತ್ರಕರ್ತನೂ ಆದ ಪದ್ಮಾನಾಭ ಶೇವ್ಕಾರ ಹಾಗೂ ನಾನು ಬರೆದಿದ್ದೆಲ್ಲವನ್ನೂ ಅನಿವಾರ್ಯ ಕರ್ಮದಂತೆ ಓದಿ, ಪೂರಕ ಸಲಹೆ ನೀಡುವ ಸಹ ಬರಹಗಾರರಾದ ವಸುಧೇಂದ್ರ ಮತ್ತು ಗುರುಪ್ರಸಾದ ಕಾಗಿನೆಲೆ, ಮುಖ ಪುಟ ವಿನ್ಯಾಸ ನೀಡಿದವ ಕತೆಗಾರನೂ ಆದ ಅಪಾರ.

ಬರೆಯುವಾಗ ವಿಹಿತ ವಾತಾವರಣ ಸೃಷ್ಟಿಸಿಕೊಟ್ಟವರು ಪ್ರಕಾಶ್ ಮತ್ತು ನವ್ಯ. ಅನುದಾದಾ, ಸೋದರರು, ತಾಯಿ-ಅತ್ತೆ ಮತ್ತು ಅವರಿಬ್ಬರ ತುಂಬು ಬಳಗ ಹಾಗೂ ಸ್ನೇಹಿತರು ಹಿತೈಷಿಗಳು ಎಂದಿನಂತೆ ನನ್ನೊಂದಿಗಿದ್ದಾರೆ. ಇದೀಗ ಕೃತಿಯ ಪುಟ ತೆರೆಯುತ್ತಿರುವ ನಿಮಗೆಲ್ಲರಿಗೂ ನನ್ನ ಅಕ್ಕರೆಯ ನಮನ.

ಸುನಂದಾ

ಸದಾ ರಿಂಗಣಿಸುವ ದೂರವಾಣಿ ಸದ್ದು, ರಸ್ತೆಯಲ್ಲಿ ಹರಿಯುವ ಚರಂಡಿಯ ಕೊಳಚೆ ನೀರು, ಆಗಾಗ ಹಠಾತ್ತನೆ ನಿಂತು ಹೋಗುವ ವಿದ್ಯುತ್ ಸರಬರಾಜು, ನೀರಿನ ಸಮಸ್ಯೆ, ಸೈಟು ಖರೀದಿ ಹಂತದಲ್ಲಿ ಜನಸಾಮಾನ್ಯರು ಅನುಭವಿಸುವ ವಂಚನೆ, ಚಿನ್ನ ಧರಿಸಿ ಮೆರೆಯುವ ಅಮಾಯಕ ಹೆಣ್ಣುಮಕ್ಕಳ ಮೇಲಾಗುವ ಮೋಸ, ಹೀಗೆ ಕಾದಂಬರಿಯುದ್ದಕ್ಕೂ ಓದುಗರನ್ನು ಸಚಿತ್ರವಾಗಿ ಕಾಡುವ ಸಂಗತಿಗಳು ಒಟ್ಟಾರೆಯಾಗಿ ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಸಣ್ಣ ನಗರಗಳ ಅಸ್ತವ್ಯಸ್ಥ ಬದುಕನ್ನು ಮತ್ತು ಇಂದಿನ ಇಡೀ ಸಾಮಾಜಿಕ ವ್ಯವಸ್ಥೆಯ ಮನಸ್ಥಿತಿಯನ್ನು ಈ ಕೃತಿ ಪ್ರತಿಬಿಂಬಿಸುತ್ತದೆ.

ಪಟ್ಟಣದ ಜೀವನದಲ್ಲಿ ಹಾಸುಹೊಕ್ಕಾಗಿರುವ ಮಾನವೀಯ ಮೌಲ್ಯಗಳ ನಾಶ, ಅತಿಯಾಸೆ, ಸ್ವಾರ್ಥ ಸಾಧನೆ, ಪತ್ನಿಯ ಮಾನಸಿಕ ದೌರ್ಬಲ್ಯದಿಂದ ಮನುಷ್ಯ ಸಂಬಂಧಗಳಲ್ಲಿ ಅನುಸಂಧಾನ ತೋರುವ ಶ್ರೀಕಾಂತನ ಸಾಂಕೇತಿಕ ಗೃಹಸ್ಥನ ಪಾತ್ರ ಹಾಗೂ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬಂದು ನೆಲೆಸಬೇಕಾದ ಅನಿರ್ವಯ ಪರಿಸ್ಥಿತಿಯಲ್ಲಿ ಮಹಿಳೆಯರ ಮಾನಸಿಕ ದಿಗಿಲು ಆತಂಕ ತಲ್ಲಣಗಳು ಇವೆಲ್ಲವನ್ನು ಕಾದಂರಿಗಾರ್ತಿ ಸುನಂದಾ ಪ್ರಕಾಶ ಕಡಮೆಯವರು ತಮ್ಮ ಎಂದಿನ ಆಪ್ತ ಶೈಲಿಯಲ್ಲಿ ದೃಶ್ಯಗಳಾಗಿ ಕಟ್ಟುತ್ತ ಒಂದು ಕೌಟುಂಬಿಕ ಸೂಕ್ಷ್ಮಗಳ ಹಿನ್ನಲೆಯ ಮೂಲಕ ಅಭಿವ್ಯಕ್ತಿಸಿದ್ದಾರೆ

ಅಪ್ಪಾರವ ಅಕ್ಕೋಣೆ

 
ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ
ಗುಲಬರ್ಗಾ
ಕನ್ನಡನಾಡು ಪ್ರಕಾಶನ
ಬೆಲೆ: 100/-


 

 

‍ಲೇಖಕರು avadhi

13 May, 2013

2 Comments

  1. chalam

    ಪ್ರಕಾಶಕರ ನಂಬರ್ ಕೊಟ್ರೆ ಉಪಯೋಗವಾಗತ್ತೆ….

  2. Kavya Kadame

    @ chalam, Publisher Apparoa Akkone’s contact number: 9448570985

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading