
ಮೌನೇಶ ಬಡಿಗೇರ
ಲೇಖಕ, ರಂಗಭೂಮಿ ಹಾಗೂ ಚಿತ್ರ ನಿರ್ದೇಶಕ
ಈ ಬರಹವನ್ನು ಅವರ ಫೇಸ್ ಬುಕ್ ವಾಲ್ ನಿಂದ ತೆಗೆದುಕೊಳ್ಳಲಾಗಿದೆ
ಬರೀ ಪ್ರದರ್ಶನದ ವೈವಿಧ್ಯತೆಯ ಕಾರಣಕ್ಕಾಗಿಯೇ ಸುಖಾಸುಮ್ಮನೆ ಯಾವುದೋ ಜಾನಪದ ಫಾರ್ಮ್ ಗಳನ್ನು ಎಳೆದುತಂದು ಆಧುನಿಕ ನಾಟಕಗಳಿಗೆ ಕಸಿ ಮಾಡಲು ಬರುವುದಿಲ್ಲ; ಅಥವಾ ಯಕ್ಷಗಾನ, ಕೂಡಿಯಾಟ್ಟಮ್, ಕಳರಿ ಮೊದಲಾದವುಗಳನ್ನು ಈಗಾಗಲೇ ಬಳಸಿದ್ದಾರೆ ಹಾಗಾಗಿ ನಾನು ಬೇರೆ ಯಾವುದಾದರೂ ಒಂದನ್ನು ತಂದು ಬಳಸಿ ಪ್ರಯೋಗವನ್ನು ವಿಭಿನ್ನವಾಗಿ ಮಾಡುತ್ತೇನೆ ಎಂದೂ ಮಾಡಲು ಬರುವುದಿಲ್ಲ.
ಇಷ್ಟಕ್ಕೂ ಫಾರ್ಮ್ ಅನ್ನೋದು ನಿರ್ದೇಶಕನ ಅಸ್ಮಿತೆಯ ಹುಡುಕಾಟದ ಫಲವೇ ಹೊರತು ಸುಮ್ಮನೆ ಬಣ್ಣಬಣ್ಣದ ಜಾತ್ರೆ ಮಾಡಿ ಪ್ರಯೋಗಶೀಲತೆ ಎಂದು ಬೀಗುವುದಲ್ಲ.
ಆ ಫಾರ್ಮ್ ನಲ್ಲಿ ರಂಗದ ಮೇಲೆ ಕಣ್ಣಿಗೆ ಕಾಣುವ ಪ್ರತಿಯೊಂದೂ ಒಂದು ಬಿಡಿಬಿಡಿ ವಿಭಾಗಗಳು ಅಷ್ಟೇ. ಅವೆಲ್ಲವೂ ಒಂದು ನಿರ್ಧಿಷ್ಟ ಅರ್ಥ- ಅನುಭವದಲ್ಲಿ ಏಕತ್ರಗೊಂಡು ಉಂಟುಮಾಡುವ ಪರಿಣಾಮದಲ್ಲಿ ನಿರ್ದೇಶಕನೊಬ್ಬನ ಫಾರ್ಮ್ ಇರುತ್ತದೆ.
ನಮ್ಮ ದುರದೃಷ್ಟ ಅಂದರೆ ನಿರ್ದೇಶಕನೊಬ್ಬ ತನ್ನ ಫಾರ್ಮ್ ಅನ್ನು ನಿರೂಪಿಕೊಳ್ಳುವಷ್ಟು ಕಾಲಾವಕಾಶವನ್ನೇ ನಾವು ಕೊಡುವುದಿಲ್ಲ. ನೂರಾ ಎಂಟು ಸಮಸ್ಯೆಗಳ ನಡುವೆ ನಿರ್ದೇಶಕನೊಬ್ಬ ನಾಟಕ ಮಾಡಿಸುತ್ತಿರುತ್ತಾನೆ. ಸತತವಾಗಿ ಯಾವುದಾದರೂ ರಂಗಶಾಲೆಗಳಲ್ಲಿ ಪ್ರಯೋಗ ಮಾಡುತ್ತಿದ್ದವರಿಗೆ ಹೀಗೆ ತಮ್ಮ ಫಾರ್ಮ್ ಅನ್ನು ಕಟ್ಟಿಕೊಳ್ಳುವ ಅವಕಾಶ ಸಿಗಬಹುದು….
ಹೀಗಿರುವಾಗ ಸುಮ್ಮನೆ ಅನ್ಯಭಾಷೆಯ ಕೆಲ ನಾಟಕ ಪ್ರಯೋಗಗಳನ್ನು ಉದಾಹರಿಸಿ ಅವುಗಳ ಮರುಪ್ರದರ್ಶನಗಳೇ ಅವುಗಳ ಯಶಸ್ಸಿನ ಮಾನದಂಡವನ್ನಾಗಿ ಕಾಣುವುದು ನಮ್ಮ ಕನ್ನಡದ ಧೀಮಂತ ರಂಗಭೂಮಿಯ ಹಿನ್ನೆಲೆಯಲ್ಲಿ ಬಾಲಿಶ ಎನಿಸುತ್ತದೆ.
ಅಷ್ಟಕ್ಕೂ ಈಗ ರಂಗಭೂಮಿ ಬರೀ ಮನರಂಜನೆಯ ಘಟ್ಟ ದಾಟಿ ಬಹಳ ದೂರ ಬಂದಿದೆ…..
ಹೊಸ ಹೊಸ ಹುಚ್ಚುತನಕ್ಕೆ ಇನ್ನೂ ಹೆಚ್ಚು ತೆರೆದುಕೊಳ್ಳಬೇಕು ಎನ್ನಬಹುದು ಅಷ್ಟೆ.
0 Comments