ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಎಸ್ ಭೀಮರಾಯ ಓದಿದ ‘ಹೋಟೆಲ್ ಗೋದಾವರಿ’

ಸಿ ಎಸ್ ಭೀಮರಾಯ

ಡಾ. ಬಾಳಾಸಾಹೇಬ ಲೋಕಾಪುರ ಸಮಕಾಲೀನ ಕನ್ನಡ ಸಾಹಿತ್ಯದ ಬಹು ಮುಖ್ಯ ಲೇಖಕರಲ್ಲಿ ಒಬ್ಬರು. ಅವರು ತಮ್ಮ ಮಾತೃಹೃದಯದಿಂದ ಕನ್ನಡ ಕಥೆ ಮತ್ತು ಕಾದಂಬರಿಗಳ ಲೋಕವನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶದ ಜಗತ್ತನ್ನು, ಅಕ್ಷರ ಲೋಕಕ್ಕೆ ವಿಸ್ತರಿಸಿದ ಪ್ರತಿಭಾನ್ವಿತ ಲೇಖಕರು. ಕಥನ ಪರಂಪರೆಗೆ ಹೊಸ ಸಂವೇದನೆಯ ಮೊನಚು ಮತ್ತು ನೂತನ ಆಯಾಮಗಳನ್ನು ದೊರಕಿಸಿಕೊಟ್ಟ ಯಶಸ್ಸಿನಲ್ಲಿ ಅವರ ಪಾಲು ದೊಡ್ಡದು. ಲೋಕಾಪುರರು ಬದುಕು ಮತ್ತು ಬರಹಗಳಲ್ಲಿ ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ತಮ್ಮ ಉಸಿರಾಗಿಸಿಕೊಂಡವರು. ಕುಡಿಯುವ ನೀರು, ತಿನ್ನುವ ಆಹಾರ ಮತ್ತು ಉರಿಯುವ ಬೆಂಕಿಯನ್ನು ಹಂಚಿಕೊಳ್ಳುವ ಸಂಪ್ರದಾಯದ ಗ್ರಾಮೀಣ ಪ್ರದೇಶದ ಕುಟುಂಬದಲ್ಲಿ ಹುಟ್ಟಿ ಬೆಳೆದ ಲೋಕಾಪುರರು ಸಹಜವಾಗಿ ಪರಕೀಯವೆನಿಸಿದ ನಗರ ಪ್ರದೇಶದ ಸಂಸ್ಕೃತಿಯನ್ನು ಬೆರಗುಗಣ್ಣಿನಲ್ಲಿ ನೋಡುತ್ತ ಬೆಳೆದವರು.

ಡಾ. ಬಾಳಾಸಾಹೇಬ ಲೋಕಾಪುರರ ‘ಹೋಟೆಲ್ ಗೋದಾವರಿ’ ಕಾದಂಬರಿಯ ಕಥೆ ಕುತೂಹಲಕಾರಿಯಾಗಿದೆ. ಇದು ಅವರ ಎಂಟನೇ ಕಾದಂಬರಿ. ಇದರಲ್ಲಿ ಎರಡು ಅಧ್ಯಾಯಗಳಿವೆ. ಸಮಕಾಲೀನ ಗ್ರಾಮೀಣ ಪ್ರದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ವಿದ್ಯಮಾನಗಳನ್ನು ದಟ್ಟವಾಗಿ ಕಟ್ಟಿಕೊಡುವ ‘ಹೋಟೆಲ್ ಗೋದಾವರಿ’ ವಾಸ್ತವವಾದಿ ಕಾದಂಬರಿಯಾಗಿ ಗಮನಾರ್ಹವಾಗುತ್ತದೆ. ಗೋದವ್ವ ಈ ಕಾದಂಬರಿಯ ಕೇಂದ್ರ ಆಕರ್ಷಣೆ. ಕಾದಂಬರಿ ಗೋದವ್ವಳ ಅಂತರಾಳದ ಸ್ವರೂಪವನ್ನು ಮಾತ್ರ ತೋರಿಸುತ್ತಿಲ್ಲ, ಅದು ಗೋದವ್ವಳ ಬದುಕಿನ ಕಾಲದ ಸಂಕೀರ್ಣ ಸ್ವರೂಪವನ್ನೂ ಕಾಣ ಸುವ ಹಂಬಲವನ್ನು ಪ್ರಕಟಿಸುತ್ತದೆ. ಅವಳ ಕೌಟುಂಬಿಕ ಜೀವನವನ್ನು, ಅದರ ಜಂಜಾಟ, ಹೋರಾಟ, ಅಭೀಪ್ಸೆ ಮತ್ತು ಆಶೋತ್ತರಗಳನ್ನು ಸಮಕಾಲೀನ ಗ್ರಾಮೀಣ ಭಾರತ ನಡೆದಿರುವ ಹಾದಿಯ ವಿಶಾಲ ಭಿತ್ತಿಯಲ್ಲಿ ಇಟ್ಟು ನೋಡುವ ಮಹತ್ವಾಕಾಂಕ್ಷೆ ಈ ಕಾದಂಬರಿಯಲ್ಲಿದೆ. ನಮ್ಮ ಗ್ರಾಮೀಣ ಜಗತ್ತು ಜಾತಿ ಮತ್ತು ಶ್ರೇಣಿಕೃತ ವ್ಯವಸ್ಥೆಯಿಂದ ಕೂಡಿದೆ. ಅಲ್ಲಿ ಕಂಡುಬರುವ ಪಾಳೇಗಾರಿಕೆ, ಅಸಮಾನತೆ, ಬಡತನ, ಮೂಢನಂಬಿಕೆ, ವಂಚನೆ, ಅಸೂಯೆ, ಅನ್ಯಾಯ, ಹಾದರ, ಸ್ವಾರ್ಥಿಗಳ ಮೋಸ, ಮೋಸಕ್ಕೊಳಗಾದ ಸಾಮಾನ್ಯ ಜನರ ದಾರುಣ ಸ್ಥಿತಿಗತಿ-ಇವೆಲ್ಲವನ್ನು ವಾಸ್ತವವಾಗಿ ಹಿಡಿದಿಟ್ಟಿರುವ ಈ ಕಾದಂಬರಿ ಆ ಜೀವನದ ಕೈಗನ್ನಡಿಯಂತಿದೆ.

ಭಾರತ ದೇಶದಲ್ಲಿ ದಲಿತರ ಮೇಲೆ ಪ್ರತಿ ದಿನ ನೂರಾರು ಅತ್ಯಾಚಾರಗಳು ನಡೆಯುತ್ತವೆ. ಹಲವಾರು ಶತಮಾನಗಳಿಂದ ಜಾತಿಪದ್ಧತಿಯ ಕ್ರೌರ್ಯದಡಿ ನಜ್ಜುಗುಜ್ಜಾಗುತ್ತ ಬಂದಿರುವ ಈ ಜನಾಂಗದ ಬದುಕು, ಬವಣೆ ಮತ್ತು ಅಸ್ಮಿತೆಗಳ ಕಥೆಯೇನು? ಅವಮಾನಿತ ಕೆಳಜಾತಿಗಳ ದಮನದ ಅಮಾನುಷ ಮುಖಗಳು ಹತ್ತು ಹಲವು. ದಲಿತರು ಚಪ್ಪಲಿ ಧರಿಸುವುದನ್ನು ನಿಷೇಧಿಸಿರುವ, ಹೋಟೆಲ್ ಮತ್ತು ದೇವಸ್ಥಾನಗಳಲ್ಲಿ ಪ್ರವೇಶವಿರದ, ಊರು ಪ್ರವೇಶ ಮಾಡುವ ಮುನ್ನ ಚಪ್ಪಲಿಯನ್ನು ಕಳಚಿ ಕೈಲಿ ಹಿಡಿದು ನಡೆಯಬೇಕಾದ, ಏರಿದ್ದ ಸೈಕಲ್‌ನ್ನು ಇಳಿದು ಅದನ್ನು ತಳ್ಳಿಕೊಂಡೇ ಮೇಲ್ಜಾತಿಗಳ ಮನೆಗಳನ್ನು ದಾಟಿಕೊಂಡು ಹೋಗಬೇಕಾದ ರೂಢಿ ಇಂದಿಗೂ ಜಾರಿಯಲ್ಲಿರುವ ಸಾವಿರಾರು ಹಳ್ಳಿಗಳಿವೆ. ನಮ್ಮ ಹಳ್ಳಿಗಳ ದಲಿತರ ಕೇರಿಗಳು ಊರಿನ ಅಂಚಿಗಿರುತ್ತವೆ. ಪಶ್ಚಿಮ ದಿಕ್ಕಿಗಿರುವುದು ವಾಡಿಕೆ. ಇವುಗಳಿಗೆಲ್ಲಾ ಕೊನೆ ಯಾವಾಗ? ಕಾಲವೇ ಉತ್ತರಿಸಬೇಕು.

‘ಹೋಟೆಲ್ ಗೋದಾವರಿ’ ಬಾಳಾಸಾಹೇಬ ಲೋಕಾಪುರರ ಕಥನ ಪ್ರತಿಭೆ ಮಹತ್ವಾಕಾಂಕ್ಷೆಯ ಆಶಯ ಹೊಂದಿದೆ. ದರಶ್ಯಾ ದುಡಿಯದೆ ಅಗಸಿ ಮುಂದಿನ ಆಲದ ಗಿಡದ ಕೆಳಗೆ ಕುಳಿತು ಹರಾಮಿ ಕಾಲ ಕಳೆಯುವುದು, ದಾದೂ ಪಾಟೀಲನ ಹೊಲದಲ್ಲಿ ಬಿತ್ತಿದ ಶೇಂಗಾ ಬೀಜಗಳನ್ನು ದರಶ್ಯಾ ಆರಿಸಿ ತಿನ್ನುವುದು, ದಾದೂ ಪಾಟೀಲನ ಆಳುಗಳು ದರಶ್ಯಾನನ್ನು ಹಿಡಿದು ಬಡಿಯುವುದು, ಟಿಕಾಣ ಭೀಮ ಸೆರೆ ಮಾರಾಟಮಾಡುವುದು, ಗೋದವ್ವ ದಾದೂ ಪಾಟೀಲನ ಹೊಲದಲ್ಲಿಯ ನೀರಲಗಿಡವನ್ನು ಹಿಡಿದು ನೀರಲಕಾಯಿಗಳನ್ನು ಮಾರುವುದು, ಗೋದವ್ವಳ ಜೀವನಕ್ಕೆ ಆಧಾರವಾಗಿದ್ದ ಹಣ್ಣು ತುಂಬಿದ ನೀರಲಗಿಡವನ್ನು ದಾದೂ ಪಾಟೀಲನ ಮಗ ಶಿವಾನಂದ ಪಾಟೀಲ ಕಡಿಸುವುದು, ಸಾವಂತ್ರೆವ್ವ ಗೋದವ್ವಳನ್ನು ಕೂಲಿ ಕೆಲಸಕ್ಕೆ ಕರೆಯುವುದು, ಗೋದವ್ವಳನ್ನು ಸಾವಂತ್ರೆವ್ವ ತನ್ನ ಕೆಲಸದ ಮ್ಯಾಳಿನಲ್ಲಿ ಸೇರಿಸಿಕೊಂಡು ಊರ ವ್ಯಭಿಚಾರದ ಹರಾಮಿ ಜಗತ್ತನ್ನು ಆಳಬೇಕೆಂದು ಹಂಬಲಿಸುವುದು, ದಾಸರ ದೇವಪ್ಪ ತತ್ವಪದ ಹಾಡುವುದು, ಶಾನು ಮಾಸ್ತರ ಗೋದವ್ವಳಿಗೆ ಧೈರ್ಯ ತುಂಬುವುದು, ಶುಕ್ಲಾಬಾಯಿ ನಿತ್ಯವೂ ಬೇಸನ್ ಉಂಡಿಮಾಡಿ ಶಾಲೆಯ ಹುಡುಗರಿಗೆ ಹಂಚುವುದು, ಶಾನು ಮಾಸ್ತರ ಬುದ್ಧ ಮತ್ತು ಅಂಬೇಡ್ಕರ್‌ರ ಆದರ್ಶ ಮತ್ತು ವಿಚಾರಗಳನ್ನು ಗೋದವ್ವಳಿಗೆ ಹೇಳುವುದು, ಗೋದವ್ವಳ ಮಕ್ಕಳು ಶಾಲೆಗೆ ಹೋಗುವುದು, ಟಿಕಾಣ ಭೀಮ ಗೋದವ್ವಳನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುವುದು, ದರಶ್ಯಾ ಕೂಲಿ ಕೆಲಸಕ್ಕೆ ಹೋಗುವುದು, ಶಾನು ಮಾಸ್ತರ ಬೇರೆ ಊರಿಗೆ ವರ್ಗಾವಣೆ ಆಗುವುದು, ದಾದೂ ಪಾಟೀಲ ಹಳ್ಳದ ನೀರಿನ ಸೆಳೆತಕ್ಕೆ ಸಿಕ್ಕು ಸಾಯುವುದು, ಗೋದವ್ವ ತನ್ನ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಕಾಯಿ-ಕಸರು ಮಾರಿ ಬರುವುದು, ದರಶ್ಯಾ ಸಾಧುವಿನೊಂದಿಗೆ ಊರು ಬಿಟ್ಟು ಹೋಗುವುದು, ಶಿವಾನಂದ ಬೆಂಗಳೂರಿನಲ್ಲಿ ನೌಕರಿ ಮಾಡುವುದು, ಊರಲ್ಲಿ ನೀರಾವರಿಯ ಅವತಾರವೆಲ್ಲ ಮುಗಿದು ಎರಿ ಮಣ್ಣಿನ ಹೊಲಗಳಲ್ಲಿ ಜವಳು ಕಾಣಿಸಿಕೊಳ್ಳುವುದು, ಸರಕಾರದ ಭಾಗ್ಯಜ್ಯೋತಿ ಯೋಜನೆ ಕೇರಿಯ ಎಲ್ಲಾ ಮನೆಗೂ ಬೆಳಕು ತರುವುದು, ಬೂಬಣ್ಣ ಉನ್ನತ ಶಿಕ್ಷಣ ಪಡೆಯುವುದು, ಗೋದವ್ವ ತನ್ನ ಮಗ ಬೂಬಣ್ಣನ್ನು ಕರೆತರಲು ಅಥಣಿಗೆ ಬರುವುದು, ಪವಿತ್ರಾ ಸೂಳೆಗಾರಿಕೆ ಮಾಡುವುದು, ಜಕಣವ್ವ ಗೋದವ್ವಳಿಗೆ ಹೋಟೆಲ್ ಪ್ರಾರಂಭಿಸುವ೦ತೆ ಸೂಚಿಸುವುದು, ಗೋದವ್ವ ತನ್ನ ಮಗ ಬೂಬಣ್ಣನ್ನು ಕರೆದುಕೊಂಡು ಶಿರಿಹಾಡಿಗೆ ಬರುವುದು, ಗೋದವ್ವ ಜಕಣವ್ವಳನ್ನು ಭೇಟಿಯಾಗುವುದು, ಟುಕರಿ ಬಸ್ಸು ಗೋದವ್ವಳಿಗೆ ಹೊಲ ಮಾರುವುದು, ನವಕಾರ ಸಿದ್ದ ಗೋದವ್ವಳ ಹತ್ತಿರ ಬಂದು ತಿನ್ನಲು ಜೋಳ ಕೇಳುವುದು, ಗೋದವ್ವ ಊರಲ್ಲಿ ಹೋಟೆಲ್ ಪ್ರಾರಂಭಿಸುವುದು, ಗೋದವ್ವಳ ಹೋಟೆಲ್‌ನಲ್ಲಿ ಭರ್ಜರಿ ವ್ಯಾಪಾರ ನಡೆಯುವುದು, ಶಿವಾನಂದ ಗೋದವ್ವಳ ಹೋಟೆಲ್‌ಗೆ ಬಂದು ಅವಳ ಮುಂದೆ ನಿಂತು ಪಶ್ಚಾತಾಪದಿಂದ ಕಣ್ಣಿ ರು ಸುರಿಸುವುದು, ಗೋದವ್ವ ಶಿವಾನಂದನನ್ನು ತನ್ನೆದೆಗೆ ಅಪ್ಪಿಕೊಂಡು ಸಂತೈಸುವುದು, ಶಿವಾನಂದ ಊರಿಂದ ಊರಿಗೆ ವರ್ಗಾವಣೆಯಾಗುವುದು, ಟಿಕಾಣ ಭೀಮನ ಮಗಳು ಲಗಮವ್ವ ರಾಮಭಟ್ಟನೊಂದಿಗೆ ಓಡಿಹೋಗುವುದು, ಗೋದವ್ವ ಗ್ರಾಮ ಪಂಚಾಯತಿಯ ಅಧ್ಯಕ್ಷಳಾಗುವುದು, ಗೋದವ್ವ ಆಗಸ್ಟ್ ಹದಿನೈದರಂದು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವುದು, ಗೋದವ್ವಳ ‘ಹೋಟೆಲ್ ಗೋದಾವರಿ’ಗೆ ಟಿಕಾಣ ಭೀಮ ಬೆಂಕಿ ಹಚ್ಚುವುದು-ಹೀಗೆ ಮೊದಲಾದ ವಾಸ್ತವ ಘಟನೆಗಳನ್ನು ದಟ್ಟವಾದ ವಿವರಗಳ ಮೂಲಕ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕಿನ ಪಲ್ಲಟಗಳನ್ನು ಯಥಾವತ್ತಾಗಿ ಕಾಣಿಸುವಲ್ಲಿ ಈ ಕಾದಂಬರಿ ಉಜ್ವಲವಾದ ಮಾಧ್ಯಮವಾಗಿದೆ.

ಗ್ರಾಮೀಣ ಬದುಕಿನ ವಸ್ತುನಿಷ್ಠ ಚಿತ್ರಣ ಕೊಡುವ ‘ಹೋಟೆಲ್ ಗೋದಾವರಿ’ ಕಾದಂಬರಿ ಆರಂಭದಿ೦ದ ಅಂತ್ಯದವರೆಗೆ ತನ್ನೆಲ್ಲಾ ಪರಿಕರಗಳಲ್ಲಿ ಹಳ್ಳಿಯ ಸತ್ವಗಳನ್ನೇ ತುಂಬಿಕೊ೦ಡಿದೆ. ಬಾಳಾಸಾಹೇಬ ಲೋಕಾಪುರರು ಈ ಕಾದಂಬರಿಯ ಕಥಾನಾಯಕಿ ಗೋದವ್ವಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ; ಗೋದವ್ವ ಶಿರಿಹಾಡಿಯ ದಲಿತ ದರಶ್ಯಾನ ಹೆಂಡತಿ. ದರಶ್ಯಾ ಕುಂಟ ಮತ್ತು ಕುಡುಕ. ಆದರೆ ಗೋದವ್ವ ಎಚ್ಚೆತ್ತ ಮಹಿಳೆ. ಊರಿನ ಕಚ್ಚೆಹರುಕ ಗಂಡಸರನ್ನು ಎದುರಿಸುವ ಶಕ್ತಿ ಅವಳಿಗಿದೆ. ಹಾದರ ಮಾಡಲು ಗೋದವ್ವಳಿಗೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳು ಗರತಿಯಾಗಿ ಜೀವನ ನಡೆಸುತ್ತಾಳೆ. ಅವಳದು ದುಷ್ಟತನವಲ್ಲ, ದಬ್ಬಾಳಿಕೆಯ ಪ್ರವೃತ್ತಿಯಲ್ಲ. ಅವಳು ಶ್ರದ್ಧಾವಂತೆ, ಬದುಕನ್ನು ಗಂಭೀರವಾಗಿ ಸ್ವೀಕರಿಸಿದವಳು. ಗೋದವ್ವ ತನ್ನ ಸಮುದಾಯದವರಿಗಿಂತ ಭಿನ್ನ. ಈ ಭಿನ್ನತೆಯಿಂದಾಗಿ ಅವಳು ಯಾರಿಗೂ ತಲೆಬಾಗುವುದಿಲ್ಲ.

ಗೋದವ್ವ ಪಾತ್ರದಲ್ಲಿ ಗಟ್ಟಿತನವಿದೆ, ಚೈತನ್ಯವಿದೆ. ತನ್ನ ಶೀಲ ಮತ್ತು ಸೌಂದರ್ಯವನ್ನು ಕಾಯ್ದುಕೊಂಡೇ ತನ್ನ ಆಸೆ-ಆಕಾಂಕ್ಷೆಗಳನ್ನು ಸಾಧಿಸಿಕೊಳ್ಳಬೇಕು ಎನ್ನುವ ಸ್ಪಷ್ಟ ಅರಿವಿರುವ ಹೆಣ್ಣು ಅವಳು. ಅವಳ ಈ ನಡೆ ಸಮಾಜಕ್ಕೆ ಮಾದರಿಯಾಗುತ್ತದೆ. ಅವಳು ಪುರುಷ ಜಗತ್ತಿನಲ್ಲಿ ನಡೆಸುವ ಅಭಿಮಾನಶೀಲ ಹೋರಾಟ, ತನ್ನ ಭಾವನೆಗಳಿಗೆ ಪ್ರಾಮಾಣ ಕವಾಗಿ ಬದುಕಲು ಎಲ್ಲ ಸನ್ನಿವೇಶಗಳಲ್ಲಿ ಹೆಣಗುವ ಹೆಣ್ಣಿನ ಹೋರಾಟವಾಗಿ, ಅವಳ ಕೆಲವು ಸಣ್ಣಪುಟ್ಟ ದೋಷಗಳನ್ನು ಮರೆಸಿಬಿಡುತ್ತದೆ. ಒಬ್ಬ ಮಹಿಳೆಯ ಯೋಗ್ಯತೆಯನ್ನು ಒಂದೇ ಒಂದು ಕ್ರಿಯೆಯಿಂದ ನಿರ್ಧರಿಸಲು ಸಾಧ್ಯವಿಲ್ಲ. ಅವಳ ಜೀವನದ ಮತ್ತು ಸ್ವಭಾವದ ಪೂರ್ಣ ಗುರಿ ಮತ್ತು ಪ್ರವೃತ್ತಿಗಳಿಂದ ನಿರ್ಧರಿಸಬೇಕೆಂಬ ವಿಚಾರಕ್ಕೆ ಗೋದವ್ವ ಉತ್ತಮ ನಿದರ್ಶನ. ಹಳ್ಳಿಯ ಪ್ರತಿಷ್ಠಿತರ ಜೊತೆಯಲ್ಲಿ ಶ್ರಮವಹಿಸಿ, ಸ್ವಾಭಿಮಾನದಿಂದ ಬದುಕುವ ಅವಳು ಹೊಸ ಜನಾಂಗದ ಮಹಿಳೆ. ಅವಳಿಗೆ ಯಾವ ಶಕ್ತಿ ಇಲ್ಲ, ಪ್ರಭಾವವಿಲ್ಲ. ಆದರೆ ಯೋಗ್ಯ ನಡತೆಯಲ್ಲಿ ಕಣ್ಣು ನೆಟ್ಟ ಅವಳು ಇತರ ಪಾತ್ರಗಳನ್ನು ಅಳೆಯುವ ಸಾಧನವಾಗುತ್ತಾಳೆ. ‘ಕ್ಯಾರೆಕ್ಟರ್’, ಗಟ್ಟಿಯಾದ ಶೀಲ, ನಿಜವಾದ ನೈತಿಕತೆ ಅವಳದು. ಗೋದವ್ವಳಲ್ಲಿ ಅಪರಿಮಿತ ಜೀವನೋತ್ಸಾಹ, ತಾಳ್ಮೆ, ಮಾತೃವಾತ್ಸಲ್ಯ, ಜೀವನಪ್ರೀತಿ, ಸಿಟ್ಟು ಮತ್ತು ದಂಗೆ ಏಳುವ ಗುಣಗಳಿವೆ. ಸ್ವತಂತ್ರ ವಿಚಾರಶಕ್ತಿ, ಸ್ವಾಲಂಬನೆ, ಧೈರ್ಯವಂತಿಕೆ, ಪರಿವರ್ತನಶೀಲತೆ- ಇವೆಲ್ಲ ಗುಣಗಳ ಖನಿಯಾಗಿರುವ ಗೋದವ್ವ ಯಾವುದೇ ಕಠಿಣ ಸಂದರ್ಭದಲ್ಲೂ ಅಧೀರಳಾಗದೇ ತನ್ನ ಗುರಿಗಳ ಕಡೆಗೆ ಸ್ಥೈರ್ಯದಿಂದ ಮುನ್ನಡೆಯುತ್ತಾಳೆ ಎಂಬುದರ ಮೂಲಕ ಕಾದಂಬರಿಯ ಸ್ತ್ರೀಪರ ಮತ್ತು ಜನಪರ ಧೋರಣೆಗಳು ದಾಖಲಾಗುತ್ತವೆ.

ಲೋಕಾಪುರರು ಚಿತ್ರಿಸಿರುವ ಗೋದವ್ವ ಪಾತ್ರವಂತೂ ತನ್ನ ಅಪೂರ್ವ ಗುಣಗಳಿಂದ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ.
ನಾಟಕ ಪ್ರಕಾರದ ಬಹುಮುಖ್ಯ ಅಂಗವಾದ ಸಂಭಾಷಣೆ ಕಾದಂಬರಿಯಲ್ಲಿ ಪ್ರವೇಶಿಸಿದಾಗ ಅದಕ್ಕೆ ಸಹಜವಾಗಿಯೇ ಚಲನೆ ಪ್ರಾಪ್ತವಾಗುತ್ತದೆ ಹಾಗೂ ಜೀವಂತಿಕೆ ಬರುತ್ತದೆ. ಗದ್ಯದ ನೇರ ನಿರೂಪಣೆಯೇ ಪ್ರಧಾನವಾಗುವ ಕಾದಂಬರಿಯಲ್ಲಿ ನಾಟಕೀಯ ಸಂಭಾಷಣೆಗಳು ಎಡೆ ಪಡೆದಾಗ ಅದರ ಹರಿವಿಗೆ ಹೊಸ ಆಯಾಮ ದೊರಕುತ್ತದೆ. ಕಾದಂಬರಿಯ ಪ್ರಮುಖ ಪಾತ್ರಗಳು ಸಂಧಿಸುವಾಗ ಏರ್ಪಡಿಸುವ ಸಂಭಾಷಣೆ ಕಾದಂಬರಿಕಾರನ ಸಾಮರ್ಥ್ಯವನ್ನವಲಂಬಿಸಿ ಅರ್ಥವಂತಿಕೆಯನ್ನೂ ಮತ್ತು ಆಕರ್ಷಣೆಯನ್ನೂ ಪಡೆಯುತ್ತದೆ. ಶೈಲಿಯ ಮುಖ್ಯ ಅಂಗವಾಗಿ ಅಭಿವ್ಯಕ್ತಿ ಪಡೆಯುವ ಸಂಭಾಷಣೆ ಎಲ್ಲ ಕಾದಂಬರಿಕಾರರಿಗೂ ಸರಳವಾಗಿ ಕೈಗೆ ಸಿಗುವಂಥದ್ದಲ್ಲ. ಈ ಹಿನ್ನೆಲೆಯಲ್ಲಿ ಬಾಳಾಸಾಹೇಬ ಲೋಕಾಪುರರ ಕಾದಂಬರಿಗಳನ್ನು ಅಧ್ಯಯನ ಮಾಡಿದಾಗ ಅವರ ಕಾದಂಬರಿಗಳ ಬಹುಪಾಲು ಭಾಗ ಸ್ವಾರಸ್ಯಕರ ಹಾಗೂ ಅರ್ಥಪೂರ್ಣವಾದ ಸಂಭಾಷಣೆಯಲ್ಲಿಯೇ ಸಾಗಿರುವುದು ಗಮನಕ್ಕೆ ಬರುತ್ತದೆ. ಅತೀ ದೀರ್ಘವಾದ ನಿರೂಪಣೆ ಅವರ ಕಾದಂಬರಿಗಳಲ್ಲಿ ಕಂಡುಬರುವುದು ಕಡಿಮೆ. ವಸ್ತುವನ್ನು ನಿರೂಪಣೆಯ ಮೂಲಕ ಸಹಜವಾಗಿ ವಿವರಿಸುತ್ತ ಹೋಗ ಹೋಗುತ್ತಿದ್ದಂತೆಯೇ ಅವರು ನಡುವೆಯೇ ಪಾತ್ರಗಳ ಬಾಯಿ ಹಾಕಿಸಿ, ಕಾದಂಬರಿಗಳಲ್ಲಿ ಸಂಭಾಷಣೆಯನ್ನು ತರುತ್ತಾರೆ. ಇದರಿಂದಾಗಿ ನಿರೂಪಣೆಯ ಏಕತಾನತೆ ನಿಂತು ಕಾದಂಬರಿ ಮಾತುಕಥೆಯ ಮೂಲಕ ಸ್ವಾರಸ್ಯಕರವಾಗಿ ಮುಂದುವರೆಯುತ್ತದೆ. ‘ಹೋಟೆಲ್ ಗೋದಾವರಿ’ ಕಾದಂಬರಿಯ ನಿರೂಪಣೆಯಲ್ಲಿ ಬರುವ ಕೆಲವು ಪ್ರಮುಖ ಸಂಭಾಷಣೆಗಳನ್ನು ಗಮನಿಸಬೇಕು:

“ಸಾವಕರ‍್ರ ಸಾವಾಕರ‍್ರ” ಅಂದ ಚಂದೂ. “ಯಾನಾತೋ ಚಂದ್ಯಾ ಹಾವಾ ಯಾನರೆ ನೋಡಿದಿ ಯಾನು?” ಎಂದ ದಾದೂ ಪಾಟೀಲ. “ಇಲ್ರಿ ಇಲ್ರಿ ಅಲ್ಲಿ ಅಲ್ಲಿ” ಎಂದ ಚಂದೂ. “ಈ ಉರಿ ಬಿಸಲಾಗ ಯಾವನರೆ ಹೆಂಗಸನ ಹಾಕ್ಕೊಂಡ ಹಳ್ಳದಾಗ ಬಿದ್ದದ್ದ ನೋಡಿದೇನೋ?” ಅಂದರು (ಪುಟ-೦೬). “ಏ ಗುಂಡದಾಗ ಉಗಳತಿಯಾನೋ ಸೂಳಿಮಗನ” ಎಂದ ಒಬ್ಬ. ದರಶ್ಯಾ ಅಮಾಯಕನಾಗಿ ಅವರನ್ನು ನೋಡಿದ. “ಬಾ ಮಗನ, ಅಲ್ಲಿ ಗೌಡ್ರು ಕರಿಲಾಕತ್ಯಾರ…” (ಪುಟ-೦೭). “ಹಾಕ ಅಣ್ಣ ಎರಡಕಾಯಿ….” ಎಂದು ತಂಬಿಗೆ ಅವನ ಮುಂದೆ ಹಿಡಿದಳು. “ಎಡ್ಡಲ್ಲ. ಇಕಾ ಮೂರಕಾಯಿ ಹಾಕೇನಿ”. “ಈ ವಾರದ ಸಂತ್ಯಾಗ ನೀರಲಕಾಯಿ ಮಾರಿ ನಿನ್ನ ರೊಕ್ಕಾ ಮುಟ್ಟಸತೀನಿ. ಉಪಕಾರ ಆತು” ಎಂದಳು. “ಏ ಗೋದಾ ಕೇಳಿಲ್ಲಿ. ಯಾಕ ಒದ್ಯಾಡತಿ? ಸಂಜಿಮು೦ದ ನನ್ನ ತ್ವಾಟದ ಕಡೆ ಬಾ. ನಿನ್ನ ಬಡತನಾ ಹಿಂಗಿ ಹೋತ ಅಂತ ತಿಳಕೋ”. “ಇಂತಾದ್ದ ಎಲ್ಲ ಮಾತಾಡಲಾಕ ಹೋಗಬ್ಯಾಡಪಾ ಅಣ್ಣಾ. ವಜನೀಕ ಮನಷ್ಯಾ ಅದೀ. ವಜನ ಉಳಸಕೋ”. “ಗೋದಾ ಗೋದಾ ಸುಮ್ಮ ನನ್ನ ಮಾತ ಕೇಳ” ಎಂದು ಅವಳ ರಟ್ಟೆ ಹಿಡಿದ. “ನೋಡು ಕೈ ಬಿಡು. ಸುಮ್ಮ ಹೋಗ ಇಲ್ಲ ಅಂದ್ರ ಕಾಲಾಗ ಚೆಪ್ಪಲ್ಲ ಅದಾವ”. “ಅಲೇ ಇವನಾ…., ಯಾನತ್ತ ಮಾತಾಡತಿ…” “ಏ ಭಾಡ್ಯಾ ದಾರೂ ಬೇಡಿದ್ರ ಸೀರಿ ಕಳಿ ಅಂತಿ? ಹ್ಯಾಂಗ ಐತಿ ಮೈಯಾಗ?”. ಇದನ್ನು ಕೇಳಿಸಿಕೊಂಡ ಟಿಕಾಣ ಭೀಮ ಥಂಡಾ ಹೊಡೆದು ನಿಂತ (ಪುಟ-೧೪). “ಸುದ್ಯಾಗ ಅದೀ ಇಲ್ಲೋ ಭೀಮ್ಯಾ ಒಂಟೆಲುಬಿನ ಹೆಂಗಸ ಅದಾಳ. ಬಡದ ಕೊಲ್ಲಬೇಕ ಅಂತೀಯಾನ?” ಎಂದು ತಾರವ್ವ ಮುದಿಕಿ ಬೈದಾಗಲೇ ಅವನಿಗೆ ಮೈಮೇಲೆ ಎಚ್ಚರ ಬಂದಿತು. “ಯಾನ ಮಾಡ್ಯಾಳಂತ ಬಡದಿಯೋ ಹಾಟ್ಯಾ…” ಎಂದು ಇನ್ನೊಂದು ಮುದುಕಿ ಬೈದಳು. ಕೂಡಿದ ಹೆಂಗಸರು ಛೀ ಥೂ ಎಂದು ಚೀಮಾರಿಸಿದರು. “ಬಡೀಲಿ ಬಡದ ಕೊಲ್ಲಲಿ ನನ್ನ ಅವರಾ. ನಾ ಸತ್ತ ಹೋಗತೀನಿ. ನಾ ಇನ್ನ ಜೀವನ ಇಡೂದಿಲ್ಲ” ಎಂದು ರಾಣವ್ವ ಪಡಸಾಲಿ ತುಂಬ ಉಳ್ಳಾಡುತ್ತ ಅಳತೊಡಗಿದಳು (ಪುಟ-೧೫).

“ಹೊಲ ಎಂದ ಖರೀದಿ ಹಾಕೊಳ್ಳುಣು ಮರೆಪ್ಪ. ನಿಮ್ಮ ಅವ್ವನ ಕರೆಸಿಬಿಡ ಸಹಿ ಹಾಕಲಿ ನಾ ತಯಾರ ಅದೀನಿ” ಎಂದ. “ಇಲ್ರಿ ಮಾರೂದು ಬ್ಯಾಡ ಅಂತ ಯೋಚನಾ ಮಾಡೀವಿ. ನಾ ಇಲ್ಲೇ ಇರಲಿಕ್ಕೆ ಬಂದೀನ್ರಿ ಗೌಡ್ರ” ಎಂದ. “ಅಲ್ಲೋ ನಿಮ್ಮ ಅವ್ವ ಮಾತಕತಿ ಮುಗಿಸಿ ಹೋಗಿದ್ದಳು?” “ನಮ್ಮ ಅವ್ವ ಮಳ್ಳ ಅದಾಳರಿ ಗೌಡ್ರ” ಅಂದ. ಮರೆಪ್ಪನ ಮಾತಿನಿಂದ ದಾದೂ ಪಾಟೀಲನಿಗೆ ಸಿಟ್ಟು ಬಂದಿತ್ತು (ಪುಟ-೨೫). “ಗೋದವ್ವಗ ತ್ರಾಸ ಕೊಟ್ರ ನನಗ ಯಾನ ಫಾಯದಾ?” “ಆಕಿ ಗೋಳೋ ಅಂತ ಅಳಕೋತ ನಿಮ್ಮ ಮನೀಗಿ ಬರತಾಳ. ನಮಗ ಬೇಕಾದ ಟೊಂಗಿ ನಮ್ಮ ಕಡೆ ಬಾಗಿದ್ರ ಹರೀದು ಸಸಾರಾ ಅಲ್ಲೇನ್ರಿ? ಗಿಡ ಹತ್ತು ಜಂಜಾಟ ಇಲ್ಲ.” ಶಿವಾನಂದನ ಮುಖದಲ್ಲಿ ನಿಧಾನವಾಗಿ ಕ್ರೌರ್ಯದ ಗೆರೆಗಳು ಮೂಡತೊಡಗಿದವು (ಪುಟ-೩೦). “ಮಂದಿ ಯಾನ ಅಂತಾರು. ಒಡಪಕ್ಷಿ ಮಾಡಿಹೇಳ ಸಾವಕಾರ್ತಿ. ಗರೀಬರ ಮ್ಯಾಲ ಗೂಗಿ ಬಿಡಬ್ಯಾಡ.” “ಆತವಾ ನನ್ನ ಬಾಯಿಂದ ಕೇಳು ಹುಕ್ಕಿ ನಿಂದ. ಕೇಳಿಲ್ಲಿ. ನಿ ಮಾಡಕೊಂಡ ನೀರಹಾಕಿ ಬೆಳೆಸಿದ ಹಣ್ಣಿ ನಿಂದ ತುಂಬಿದಗಿಡಾ ಯಾರ ಕಡಿಸಿದ್ರು?” “ನನಗ ಗೊತ್ತ ಇಲ್ಲ.” “ನೀ ಹಿಂಗ ಹೇಳತಿ ಅಂತ ನನಗ ಗೊತ್ತ ಇತ್ತು. ಟಿಕಾಣ ಭೀಮ ನಿನ್ನ ಹಾಸಿಗ್ಗಿ ಕರದನಂತ ಅದು ಸುಳ್ಳಾ.” “ಅದು ಖರೆ. ನಾ ಹೋಗಲಿಲ್ಲ.” (ಪುಟ-೩೭). “ಏನಾಗೇದೊ ನಿನಗಾ? ಒಳಗಯಾಕ ಬರಲಿಲ್ಲ?” ಬೂಬ್ಯಾ ಅಳಲು ಸುರುಮಾಡಿದ. “ಅಯ್ಯ ಏನಾಗೇದ ಇದಕ? ರುಕಮವ್ವ ಕೇಳ ಇವನ.” “ಮಾತಾಡೋ ಹಾಟ್ಯಾ” ಅಂದಳು ರುಕಮಾಯಿ (ಪುಟ-೪೪). “ಮಾಸ್ತರಿ ಯಾರಿವರು?” “ಅಯ್ಯೋ ತಾಯಿ ಇವರೇ ಬುದ್ಧಗುರು. ನಮ್ಮ ಅಂಬೇಡ್ಕರ್ ಅವರಿಗೆ ಜ್ಞಾನದೀಪ್ತಿ ಹರಿಸಿದವರು.” “ಅಂಬೇಡ್ಕರ್ ಯಾರು?” (ಪುಟ-೪೭).

“ನೀವೊಂದ ಹೆಂಗ್ಸ. ಅಲ್ಲಾ ಆಕಿ ಮೊಮ್ಮಗಳ ಯಾನೋ ಐತಲಾ ಹೆಸರ ಹಾ… ಪವಿತ್ರಾ. ಆ ಹುಡುಗಿನ ದಂದೆಕ ಬಿಟ್ಟಿಲ್ಲಯಾನ. ಮತ್ತ ಊರ ಹುಡುಗರು ಇಂತಾ ಮಿರಿ ಮಿರಿ ಮಿಂಚು ಬೆಳಕನ್ಯಾಗ ಹ್ಯಾಂಗ ಈಕಿ ಮನೀಗಿ ಬರಬೇಕು. ಹಾದರ ಕತ್ತಲ ಬೇಡತೈತಿ” ಎಂದಳು ಗೋದವ್ವನ ಅಜ್ಞಾನವನ್ನು ಅಣಕಿಸುತ್ತ. “ಮುಂದ?” ಎಂದಳು ಗೋದವ್ವ (ಪುಟ-೬೦). “ಯಾಕವಾ ಸುಮ್ಮನಾದಿ?” “ಅಕ್ಕಾವ್ರ ನಿಮಗ ಗೊತ್ತ ಇಲ್ಲ. ನಾ ಬ್ಯಾರೆ ಜಾತೇಕಿ ಅದೀನಿ. ನಮ್ಮ ಊರಾಗ ಹೆಂಗ ನಡದೀತು?” “ಬ್ಯಾರೆ ಜಾತಿ ಅಂದ್ರ? ನನ್ನ ಜಾತಿ?” “ಅಲ್ರಿ…” “ನಾ ಯಾವ ಜಾತಿ ಗೊತ್ತಾ ನಿನಗಾ?” “ಈಬತ್ತಿ ಹಚ್ಚೇರಿ. ಲಿಂಗಾ ಕಟ್ಟೇರಿ…” “ನೀನು ಹಚ್ಚಕೋ. ನೀನು ಲಿಂಗಾ ಕಟ್ಟಕೋ. ಬ್ಯಾಡ ಯಾರ ಅಂತಾರು?” “ಹಾಂಗಾದ್ರ ನೀವು ನಮ್ಮ ಮಂದಿ” (ಪುಟ-೬೩). “ಗೋದವ್ವ ಊರಾಗ ಮಂದಿ ನನ್ನ ನಿನ್ನ ಕೂಡಿಸಿ ಕತಿ ಕಟ್ಟಿ ಮಾತನಾಡಲಾಕ ಹತ್ಯಾರ.” “ಗೊತ್ತ ಆಗೇತ್ರಿ. ಕೂಲಿ ಹೋದಾಗ ಜೋಡಿ ಆಳಗೋಳು ಹುಬೆ ಹುಬೇ ನನ್ನ ಕೇಳ್ಯಾರ.” “ಹಾಂಗಾದ್ರ ನೀ ಹುಷಾರ ಇರು.” “ನಂದ ಬಿಡ್ರಿ. ನಿಮ್ಮ ವಜನ ನೋಡಕೋರಿ. ಗುಲ್ಲಾ ಯಾಕ ಹೊತಗೊಳ್ಳೂದು.” “ಸಾವಕಾರಾ” ಅಂದಳು. ಮರೆಪ್ಪ ಅವಳನ್ನು ಸುಮ್ಮನೇ ನೋಡಿದ. “ನಾ ಒಂದ ಹೋಟೆಲ್ ಇಡಬೇಕ ಅಂತ ಮಾಡೆನ್ರಿ ಊರಾಗ” ಅಂದಳು. “ಯಾನಾ? ಹೋಟೆಲಾ?” ಎಂದು ಗಹಗಹಿಸಿ ನತೊಡಗಿದ (ಪುಟ-೭೦). “ಹಾಂಗಾದ್ರ ನಮ್ಮ ಇಬ್ಬರದು ಎಂತಾ ಸಂಬ೦ಧ?”. “ಸಂಬ೦ಧಕ್ಕೊ೦ದ ಹೆಸರಬೇಕು ಅಂದ್ರ ಅದು ದೊಡ್ಡ ವಿಷಯ ಅಲ್ಲ ಸಾವಕಾರಾ. ಮಂದಿ ನನ್ನನ್ನ ಈಕಿ ಮರೆಪ್ಪನ ರಂಡಿ, ಅವನ ಇಟಗೊಂಡಾಕಿ ಹಿಂಗ ತಮಗ ಗೊತ್ತ ಇದ್ದ ಶಬ್ದಾ ಬಳಸಿ ಮಾತಾಡಲಾಕ ನಾವು ಬಿಡಬೇಕೇನು. ಬೆಳೆದ ದೊಡ್ಡವರಾಗಿ ನನ್ನ ಮುಂದ ನಿಂತ ನನ್ನ ಮಕ್ಕಳಿಗೆ ನಾ ಯಾನತ್ತ ಉತ್ತರ ಕೊಡಲಿ?”. “………………” “ಹೇಳ್ರಿ ಯಾನರ ಹೇಳ್ರಿ” ಅಂದಳು. ಮರೆಪ್ಪ ಮತ್ತೂ ಮಾತಿಲ್ಲದೆ ಸುಮ್ಮನಾದ (ಪುಟ-೭೪). “ಬರತೀನಿ ಗೋದಾ” ಎಂದ. “ಈ ಮನಿ ನಿಂದ. ನಿನಗ ಬೇಕಾದಾಗ ಬಾ ಅಣ್ಣಾ” ಅಂದಳು. ಮರೆಪ್ಪ ಮುಂಗಾರಿ ಮಳೆಯಲ್ಲಿ ಮೈತೊಳೆದುಕೊಂಡ ಹಕ್ಕಿಯ ಹಾಗೆ ಹಗುರಾಗಿ ತನ್ನ ಮನೆ ಸೇರಿದ (ಪುಟ-೭೫). “ಅಲ್ಲಾ ದೋಸ್ತ ಗೋದವ್ವ ಇಲ್ಲ ಅನ್ನಲಾಕ ಇಲ್ಲೇನು? ಕೊಟ್ಟಾಳೇನು ಜ್ವಾಳಾ?” “ಕೊಡಬೋದು ಇಲ್ಲಾ ಕೊಡಲಾಕ ಇಲ್ಲ. ಕೊಟ್ಟರು ನಿನಗ ಅಪಮಾನ ಮಾಡಲಾಕ ಕೊಟ್ಟಾಳು.” “ಅಪಮಾನ ಮಾಡಲಾಕ ನನ್ನ ಹತ್ಯಾಕ ಈಗ ಯಾನ ಐತೋ ದೋಸ್ತ. ಕೊಟ್ರ ಅದರಾಗ ನಿನಗೂ ಕೊಡತೀನಿ. ನಿನ್ನ ಬಿಟ್ಟ ಉಂಡಾವ ಅಲ್ಲ ನಾ” (ಪುಟ-೯೪). “ಶಿವಾನಂದ ಪಾಟೀಲನ ಜೋಡಿ ಸಂಬ೦ಧ ಮಾಡು ಅಂತ ಹೇಳಾಕ ಬಂದೀನಿ” ಎಂದಿದ್ದ. “ಯಾರ ಕಳಶಾರು?” “ಟಿಕಾಣ ಭೀಮ.” “ಯಾಕ ಅವನ ಹೆಣ್ತಿ ಇಲ್ಲಾ.” “ಅದಾಳು.” “ಅವಳನ ಕಳಸ ಅಂತ ಹೇಳು. ಬೇಡಾದ್ರ ನಿನ್ನ ಹೆಂಡತಿ ಚೆಂದ ಅದಳಲಾ ಆಕೀನ ಕಳಸು. ನೀನೂ ಬಡವ ಅದೀದಿ. ಎಲ್ಲ ಅನುಕೂಲ ನಿನಗ ಸಿಗಲಿ” ಎಂದು ಹೇಳಿ ಅವನನ್ನು ತನ್ನ ಗುಡಿಸಲದಲ್ಲೇ ಬಿಟ್ಟು ಹೊರ ಹೋಗಿದ್ದಳು (ಪುಟ-೯೫). “ಅಮ್ಮಾವರ…” ಎಂದು ರಾಮಭಟ್ಟ ಮುಂದೆ ಮಾತನಾಡದೆ ನಿಂತ. “ಯಾನಾ ಮಾತಾಡು.” “ಅವ್ವಾ ನಾನು ನೀವ ತಿಳಕೊಂಡ೦ಗ ಮ್ಯಾಲಿನ ಜ್ಯಾತ್ಯಾವ ಅಲ್ಲಾ.” “ಗೊತ್ತ ಐತಿ. ಜಕಣವ್ವ ಎಲ್ಲಾ ಹೇಳ್ಯಾಳ” (ಪುಟ-೧೦೧).

ಇಂಥ ಸಂಭಾಷಣೆಗಳ ಮೂಲಕ ಲೋಕಾಪುರರು ಈ ಕಾದಂಬರಿಯ ಜೀವಂತಿಕೆಯನ್ನು ಹೆಚ್ಚಿಸಿದ್ದಾರಷ್ಟೇ ಅಲ್ಲ, ಜನಜೀವನದ ವಾಸ್ತವ ಮಿಡಿತವನ್ನೂ ಅವರ ಮಾತುಗಳಲ್ಲಿಯೇ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಬಳಕೆಯಾಗಿರುವ ಭಾಷೆಯಲ್ಲಿ ಪಾತ್ರಗಳ ಮನೋಭಾವ ಮತ್ತು ವ್ಯಕ್ತಿತ್ವಗಳೆಲ್ಲ ಸ್ಪಷ್ಟವಾಗುತ್ತವೆ. ಇಂಥ ಭಾಷೆಯಲ್ಲೇ ಹಲವಾರು ಕಡೆ ನಡೆಯುವ ಸಂಭಾಷಣೆಗಳಿ೦ದಾಗಿ ಕಾದಂಬರಿಗೆ ಎಲ್ಲಿಲ್ಲದ ಲವಲವಿಕೆ ಪ್ರಾಪ್ತವಾಗಿದೆ. ಆಕರ್ಷಕ ಸನ್ನಿವೇಶಗಳು ಅದರ ನೇರ ಪ್ರವಾಹಕ್ಕೆ ಪೂರಕವಾಗಿವೆ. ಗ್ರಾಮೀಣ ಭಾಷೆಯ ಬನಿ, ಅದರೊಳಗೆ ಹುದುಗಿರುವ ಅರ್ಥ ಇಲ್ಲಿ ಎದ್ದು ಕಾಣುತ್ತದೆ. ನೆಲದ ಸತ್ವ ಮತ್ತು ಸೂಕ್ಷ್ಮತೆಗಳನ್ನೊಳಗೊಂಡ ಇಂಥ ಭಾಷೆಯಿಂದಲೇ ‘ಹೋಟೆಲ್ ಗೋದಾರಿ’ ಕಾದಂಬರಿಯ ಮೌಲಿಕತೆ ಹೆಚ್ಚಿದೆ.

ಲೋಕಾಪುರರ ಈ ಕಾದಂಬರಿಯು ಸಂಪೂರ್ಣವಾಗಿ ಗೋದವ್ವ ಕೇಂದ್ರಿತವಾಗಿ ಸಂಕುಚಿತಗೊ೦ಡಿಲ್ಲ. ಅವರು ಎರಡು ತಲೆಮಾರಿನ ವ್ಯಕ್ತಿಗಳ ಕಥೆ ಹೇಳುವಲ್ಲಿ ಅಪಾರ ಕಲಾತ್ಮಕ ಜಾಣತನ ತೋರಿದ್ದಾರೆ. ಲೇಖಕರು ಅಗಾಧ ಮಾನವ ಪ್ರೀತಿಯಿಂದ ಕಥೆ ಹೇಳಿದ್ದಾರೆ. ಒಟ್ಟಾರೆ ಮನುಷ್ಯ ಸಂಬ೦ಧಗಳು ಕಾದಂಬರಿಯ ಮುಖ್ಯ ಆಸಕ್ತಿ. ಲೇಖಕರ ಗಮನ ಸಾಪೇಕ್ಷವಾಗಿ ಗೋದವ್ವಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿದ್ದರೂ ಉಳಿದ ಪಾತ್ರ-ಸನ್ನಿವೇಶಗಳನ್ನು ಅವರು ಕಡೆಗಣ ಸಿಲ್ಲ. ದಾದೂ ಪಾಟೀಲ, ಶಾರವ್ವ, ಶಿವಾನಂದ ಪಾಟೀಲ, ಟಿಕಾಣ ಭೀಮ, ರಾಣವ್ವ, ಸಾವಂತ್ರೆವ್ವ, ಶಾನು ಮಾಸ್ತರ, ಜಕಣವ್ವ. ಶುಕ್ಲಾಬಾಯಿ, ಮರೆಪ್ಪ, ಬೂಬಣ್ಣ, ಚಂದ್ರಭಾಗ, ರಾಮಭಟ್ಟ, ಚಂಪವ್ವ – ಮುಂತಾದ ‘ಮೈನರ್’ ಪಾತ್ರಗಳೂ ಇಲ್ಲಿ ತಮ್ಮತಮ್ಮದೇ ಚಹರೆಗಳಿಂದ ವಿಶಿಷ್ಟವಾಗಿ ಕಾಣುತ್ತವೆ. ಈ ಎಲ್ಲ ಪಾತ್ರಗಳು ಜೀವಂತವಾಗಿ ಓಡಾಡಿರುವುದರಿಂದಲೇ ಈ ಕಾದಂಬರಿಗೆ ಜೀವಂತಿಕೆ ಪ್ರಾಪ್ತವಾಗಿದೆ. ಈ ಕಾದಂಬರಿಯನ್ನು ಓದುತ್ತ ಹೋದಂತೆ ಹಳ್ಳಿಯ ಚಲನಚಿತ್ರವೊಂದನ್ನು ನೋಡಿದ ಅನುಭವವಾಗುವುದು ಅಲ್ಲಿರುವ ಗ್ರಾಮ ಸತ್ವ ತುಂಬಿಕೊ೦ಡಿರುವ ಚಲನಶೀಲ ಪಾತ್ರಗಳಿಂದ. ಇದು ಸಾಂಪ್ರದಾಯಿಕ ಪರಿಕಲ್ಪನೆಗಳನ್ನು ಮೀರುವ ಹೊಸ ರೀತಿಯ ಬರವಣ ಗೆಯಿಂದಾಗಿ ಹಾಗೂ ಗಹನತೆಯಿಂದಾಗಿ ಗಮನಾರ್ಹವಾದ ಕಾದಂಬರಿಯಾಗಿದೆ.

ಈ ಕಾದಂಬರಿಯಲ್ಲಿ ಲೋಕಾಪುರರ ಸಾಮಾಜಿಕ ಚಲನೆಯ ದಿಕ್ಕು ಯಾವ ಕಡೆಗೆ ಸಾಗಬೇಕೆಂಬುದು ಸ್ಪಷ್ಟವಾಗಿದೆ. ದಲಿತ ಮಹಿಳೆಯರು ಆತ್ಮಗೌರವಕ್ಕಾಗಿ ದಲಿತ ಮಹಿಳೆಯರೇ ಹೋರಾಡಬೇಕೆಂಬ ಮಹತ್ವಾಕಾಂಕ್ಷೆ ಇದರ ಹಿಂದಿದೆ. ಮನುಷ್ಯನ ಪ್ರಯತ್ನಕ್ಕೆ ಮೀರಿದ್ದು ಯಾವುದೂ ಇಲ್ಲ. ಆದುದರಿಂದ ತಪ್ಪು ದಾರಿ ಹಿಡಿಯದೆ, ಸರಿಯಾದ ಮಾರ್ಗದಲ್ಲೇ ಬದುಕಲು ಗೋದವ್ವಳ ಮನಸ್ಸು ಹೇಳುತ್ತದೆ. ಮನುಷ್ಯ ಸಾಧ್ಯತೆಯ ನೆಲೆಗಳನ್ನವಳು ಕಂಡುಕೊಳ್ಳುತ್ತಾಳೆ. ಸತ್ಯ, ನಿಷ್ಠೆ, ಶ್ರದ್ಧೆ ಮತ್ತು ಪ್ರಾಮಾಣ ಕತೆಯಂತಹ ಜೀವನ-ಮೌಲ್ಯಗಳಿಗೆ ಬದ್ಧರಾಗಿ ಬಂದ೦ತಹ ಕಷ್ಟಗಳನ್ನೆಲ್ಲ ಎದುರಿಸುತ್ತ, ಧೈರ್ಯ ತಂದುಕೊ೦ಡು ಮುನ್ನಡೆಯುವ ಗೋದವ್ವನಂತಹ ಪಾತ್ರಗಳು ಇಲ್ಲಿ ಗಮನ ಸೆಳೆಯುತ್ತವೆ. ಈ ಕಾದಂಬರಿಯಲ್ಲಿ ಜೀವಂತ ಪಾತ್ರಗಳಿವೆ; ಹಲವು ಪಾತ್ರಗಳ ಮೂಲಕ ಮನುಷ್ಯ ಸ್ವಭಾವದ ದರ್ಶನವಿದೆ. ಕುತೂಹಲಕರವಾದ ಮಾನಸಿಕ ವ್ಯಾಪಾರಗಳ ಅನಾವರಣವಿದೆ. ಇಲ್ಲಿ ಮುಖ್ಯವಾಗಿರುವುದು ವಿಶ್ಲೇಷಣೆ; ಪಾತ್ರಗಳ ಭಾವಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಶೋಧಿಸುವ ಪ್ರಯತ್ನ ಇಲ್ಲಿದೆ. ಲೇಖಕರು ಪಾತ್ರಗಳ ನಡೆನುಡಿಗಳನ್ನು ಕುರಿತು ಬಹು ಜಾಣ ‘ಕಾಮೆಂಟ್’ಗಳನ್ನು ಮಾಡಿ ತೃಪ್ತರಾಗದೆ ಪ್ರತಿಯೊಂದು ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣ ಸಿ ವಿಶ್ಲೇಷಿಸಿದ್ದಾರೆ. ಈ ಕಾದಂಬರಿ ಒಳಗೊಂಡಿರುವ ಗ್ರಾಮೀಣ ಜನಜೀವನದ ವಸ್ತುನಿಷ್ಠ ಚಿತ್ರಣದ ಮೂಲಕ, ಆ ಸಮಾಜದ ಅಧ್ಯಯನ ಕೈಗೊಳ್ಳುವವರಿಗೆ ಸಾಕಷ್ಟು ಸಾಮಗ್ರಿಯನ್ನೊದಗಿಸುವಂತಿದೆ.

ಬಾಳಾಸಾಹೇಬ ಲೋಕಾಪುರರ ಕಾದಂಬರಿ ಶಿಲ್ಪ ವಿಶಿಷ್ಟವಾದದ್ದು. ಘಟನೆ, ಪಾತ್ರ, ಸಂಭಾಷಣೆ, ನಿರೂಪಣೆ ಎಲ್ಲ ಮೇಳೈಸಿ ಕಾದಂಬರಿಯ ಪರಿಣಾಮವನ್ನು ರೂಪಿಸುತ್ತವೆ. ಯಾವ ಘಟನೆಯೂ ಅನಗತ್ಯವಲ್ಲ, ಒಂದು ಸಣ್ಣ ಕಥೆಯ ಬರಹದಲ್ಲಿ ತೋರಬಹುದಾದ ಎಚ್ಚರವನ್ನು, ಸಂಯಮವನ್ನು ಅವರು ಕಾದಂಬರಿಯಲ್ಲಿ ತೋರುತ್ತಾರೆ. ಲೋಕಾಪುರರ ಯಾವುದೇ ಕಾದಂಬರಿಯೊ೦ದನ್ನು ಓದಲು ಕೈಗೆತ್ತಿಕೊಂಡರೆ, ಜಗತ್ತನ್ನೇ ಮರೆಸಿಬಿಡುವ ಲೇಖಕ. ಲೋಕಾಪುರರ ಭಾಷೆಯ ಪ್ರಭುತ್ವ ವಿಶಿಷ್ಟವಾದದ್ದು. ಅವರು ಕೆಲವೇ ವಾಕ್ಯಗಳ ವರ್ಣನೆಯಲ್ಲಿ ಒಂದು ಇಡೀ ದೃಶ್ಯವನ್ನು ಪುನರ್‌ಸೃಷ್ಟಿಮಾಡುವುದು ಮಾತ್ರವಲ್ಲ, ಒಂದು ವಿಶಿಷ್ಟ ವಾತಾವರಣದ ಜಗತ್ತನ್ನೇ ಸೃಷ್ಟಿಸಿಬಿಡುತ್ತಾರೆ. ತಮ್ಮ ವಿಶಿಷ್ಟ ನಿರೂಪಣಾ ಕೌಶಲ್ಯಕ್ಕೆ ಹೆಸರುವಾಸಿಯಾದ ಲೋಕಾಪುರರ ಛಾಪು ಈ ಕಾದಂಬರಿಯ ಪ್ರತಿಯೊಂದು ಪುಟದಲ್ಲೂ ಎದ್ದು ಕಾಣುತ್ತದೆ. ಗಂಭೀರವಾಗಿ ಬರೆಯುವ ಲೋಕಾಪುರರು, ಬದುಕಿನ ಸೂಕ್ಷ್ಮಗಳನ್ನೂ ಮತ್ತು ಗಂಭೀರ ಸಮಸ್ಯೆಗಳನ್ನೂ ಅತ್ಯಂತ ಕಲಾತ್ಮಕವಾಗಿ ನಿರೂಪಿಸಿರುವುದು ಅವರ ಕಥನಕ್ರಮದ ವೈಶಿಷ್ಟ್ಯ. ಅಮೂರ್ತವಾದದ್ದನ್ನು ಮೂರ್ತಗೊಳಿಸುವ, ರಹಸ್ಯವಾದದ್ದನ್ನು ತಿಳಿಯಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ವಿಡಂಬನೆ ಹರಿತವಾದ ಕತ್ತಿಯ ಅಲುಗಿನಂತೆ, ನಯವಾಗಿ ಕೊಯ್ಯುತ್ತದೆ. ಕಾದಂಬರಿಯ ಕಾವ್ಯಾತ್ಮಕ ಶೈಲಿ, ಪ್ರತಿಮೆ, ಸಂಕೇತ, ತಂತ್ರ, ಮುಂಬೈ ಕರ್ನಾಟಕದ ಪ್ರಾದೇಶಿಕ ಭಾಷೆ ಮತ್ತು ಸಂಭಾಷಣೆಗಳು ಅತ್ಯಾಕರ್ಷಕವಾಗಿವೆ. ಆದ್ದರಿಂದ ‘ಹೋಟೆಲ್ ಗೋದಾವರಿ’ ತನ್ನ ವಸ್ತುವಿನ ಸಂಕೀರ್ಣತೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯಿಂದಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸಹಜವಾಗಿ ಸೇರುತ್ತದೆ.

‍ಲೇಖಕರು avadhi

2 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading