ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಅಶ್ವಥ್ ನೆನಪಿನಲ್ಲಿ ಟಿ ಎನ್ ಸೀತಾರಾಂ ಬರೀತಾರೆ

ಟಿ ಎನ್ ಸೀತಾರಾಂ

ಮತದಾನ ಬಿಡುಗಡೆಯಾದಾಗ ನಮ್ಮ ನಿರೀಕ್ಷೆ ಮೀರಿ ಚಿತ್ರ ಯಶಸ್ವಿ ಆಯಿತು…….. ಚಿತ್ರದ ಕಲೆಕ್ಷನ್ ಚೆನ್ನಾಗಿಯೇ ಇದ್ದರೂ ೨ ನೇ ವಾರ ಮುಗಿಯುವ ವೇಳೆಗೆ ತ್ರಿವೇಣಿ ಚಿತ್ರಮಂದಿರದಲ್ಲಿ ಮತದಾನ ತೆಗೆದು “ಆಂಧ್ರ ಹೆಂಡತಿ” ಎನ್ನುವ ಚಿತ್ರ ಹಾಕುತ್ತಿದ್ದೇವೆಂದು ಅನೌನ್ಸ್ ಮಾಡಿದರು… ನಮಗೆಲ್ಲಾ ಮೈ ಉರಿದುಹೋಯಿತು… ಸಿ. ಅಶ್ವಥ್ ಕೋಪದಿಂದ ಕೂಗಾಡತೊಡಗಿದರು… ( ಮತದಾನಕ್ಕೆ ಅಶ್ವಥ್ ಮತ್ತು ವಿ . ಮನೋಹರ್ ಇಬ್ಬರೂ ಸೇರಿ ಸಂಗೀತ ಸಂಯೋಜನೆ ಮಾಡಿದ್ದರು ) ಅವರಿಗೆ ಇದು ತೀರಾ ಅನ್ಯಾಯವೆನ್ನಿಸಿತು… ಚಿತ್ರಮಂದಿರದ ವಿರುದ್ಧ ಪ್ರತಿಭಟನೆ ಮಾಡಲೇಬೇಕೆಂದು ಪಟ್ಟು ಹಿಡಿದರು… ಚಟವಟಿಕೆಯ ರಂಗಕರ್ಮಿ ನಾಗರಾಜಮೂರ್ತಿ ಸುಮಾರು ೫೦ ಜನ ಥಿಯೇಟರ್ ಹುಡುಗರನ್ನು ಪ್ಲಕಾರ್ಡ್ ಗಳ ಜತೆ ಕರೆದುಕೊಂಡು ಬಂದರು.. ಗುರುವಾರ ಮಧ್ಯಾನ್ಹ ಸುಮಾರು ೧ ಗಂಟೆ ವೇಳೆಗೆ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲಿ ನಾವೆಲ್ಲಾ ಘೋಷಣೆಗಳನ್ನು ಕೂಗುತ್ತಾ ಕೂತೆವು… ಮತದಾನ ತೆಗೆದುಹಾಕಿದರೆ ಆಮರಣಾಂತ ಉಪವಾಸ ಮಾಡುವುದಾಗಿ ಅಲ್ಲಿಗೆ ಬಂದ ಪತ್ರಕರ್ತರಿಗೆ ಹೇಳಿದೆವು.. ೧ ಗಂಟೆಯಿಂದ ೩ ಗಂಟೆವರೆಗೆ ಹೀಗೆಯೇ ಗಲಾಟೆ ನಡೆಯಿತು… ಭಯಂಕರ ಬಿಸಿಲು ಇತ್ತು … ೩ ಗಂಟೆಗೆ ಚಿತ್ರಮಂದಿರದ ಮಾಲೀಕರೊಬ್ಬರು ಅಲ್ಲಿಗೆ ಬಂದರು ( ಅವರ ಹೆಸರು ಅರುಣ ಕುಮಾರ್ ಎಂದು ನೆನಪು )….

“ಒಳಗೆ ಕೂತು ಮಾತಾಡೋಣ ಬನ್ನಿ ” ಎಂದು ಆಫೀಸ್ ಗೆ ಕರೆದರು…. ಅಶ್ವಥ್ , ನಾನು , ನಾಗರಾಜಮೂರ್ತಿ…. ಇನ್ನೂ ಇಬ್ಬರು ಒಳಗೆ ಹೋದೆವು… ನಾಗೇಂದ್ರ ಷಾ ಕೂಡ ಇದ್ದರೆಂದು ನೆನಪು…
” ನಿಮ್ಮ ಪಿಕ್ಚರ್ ಚೆನ್ನಾಗಿ ನಡೀತಾ ಇದೆ … ಜನ ತುಂಬಾ ಎಂಜಾಯ್ ಮಾಡ್ತಾ ಇದ್ದಾರೆ… ಒಳ್ಳೆ ಜೋಕ್ಸ್ ಇದೆ ” ಅಂದರು ಮಾಲೀಕರು
“ಮತ್ತೆ ಯಾಕೆ ತೆಗೆದು ಹಾಕ್ತಾ ಇದ್ದೀರಿ ” ಎಂದು ಅಶ್ವಥ್ ಜೋರಾಗಿ ಆವೇಶದಿಂದ ಕೂಗಿ ಟೇಬಲ್ ಕುಟ್ಟಿದರು
“ಸ್ವಲ್ಪ ತಾಳ್ಮೆಯಿಂದ ಕೇಳಿಸಿಕೊಳ್ಳಿ ಸಾರ್.. ನಮಗೂ ಇದನ್ನು ತೆಗೆದು ಹಾಕೋಕೆ ಇಷ್ಟ ಇರಲಿಲ್ಲ… ಆದ್ರೆ ಈ ಲೆಟರ್ ನೋಡಿ ” ಎಂದು ಒಂದು ಕಾಗದ ನಮ್ಮ ಮುಂದೆ ಇಟ್ಟರು…
ನಮ್ಮ ಚಿತ್ರದ ಹಂಚಿಕೆದಾರರು ೨ ವಾರ ಈ ಚಿತ್ರ ನಡೆದರೆ ಸಾಕೆಂದು ನಂತರ ಇದನ್ನು ಕಿತ್ತು ಹಾಕಬಹುದೆಂದೂ ಬರೆದು ಕೊಟ್ಟಿದ್ದರು… ನಮ್ಮ ನಿರ್ಮಾಪಕರ ಪೈಕಿ ಒಬ್ಬರು ಅದಕ್ಕೆ ಜಂಟಿ ಸಹಿ ಮಾಡಿದ್ದರು.. ಇನ್ನೇನು ಉಳಿಯಿತು.. !? ಕಿತ್ತು ಹಾಕಲು ಹಾಕಲು ಅನುಮತಿ ನಮ್ಮ ಕಡೆಯಿಂದಲೇ ಹೋಗಿತ್ತು… !ಅವಮಾನದಿಂದ ನಾವು ತಲೆ ತಗ್ಗಿಸಿ ಕೂತೆವು… !
“ಜ್ಯೂಸು ತರಿಸಲಾ” ಅಂದರು ಮಾಲೀಕರು
“ಜ್ಯೂಸು ಬೇಡ….. ನಿಮಗೆ ಹುಣಸೆ ಕಾಯಿ ತೊಕ್ಕು ಗೊತ್ತಾ ” ಎಂದು ಅಶ್ವಥ್ ಅವರನ್ನು ಕೇಳಿದರು..
“ಹಾಂ.. ಗೊತ್ತು… ಯಾಕೆ !?”
“ಬಿಸಿ ಬಿಸಿ ಅನ್ನ… !?”
“ಗೊತ್ತು….. !”
“ಕಡಲೇ ಕಾಯಿ ಎಣ್ಣೆ… ?”
“ಗೊತ್ತು… ಆದ್ರೆ ಇದೆಲ್ಲಾ… !?”
” ನಮ್ಮನೇಲಿ ಈ ಮೂರೂ ಇದೆ… ಒಂದು ಘಂಟೆಗೆ ನಾವು ಬಂದ ತಕ್ಷಣ ಈ ಲೆಟರ್ ತೋರಿಸಿದ್ದರೆ … ಮನೆಗೆ ಹೋಗಿ ಬಿಸಿ ಅನ್ನಕ್ಕೆ ಹುಣಸೇಕಾಯಿ ತೊಕ್ಕು , ಕಡಲೇಕಾಯಿ ಎಣ್ಣೆ ಹಾಕಿಕೊಂಡು ತಿಂದು ಮಲಗ್ತಿದ್ದೆ… ಬಿಸಿಲಿಗೆ ಎಷ್ಟು ಚೆನ್ನಾಗಿರ್ತಿತ್ತು ಗೊತ್ತ…. ಈಗ ಹೇಳ್ತಿದ್ದೀರಿ…. ಬನ್ರಯ್ಯ ” ಎಂದು ಎಲ್ಲರನ್ನೂ ಕರೆದುಕೊಂಡು ಆಚೆ ಹೊರಟ….
ಎರಡನೇ ದಿನ ಅಲ್ಲಿ ಮತದಾನ ಕಿತ್ತು ಆಂಧ್ರ ಹೆಂಡ್ತಿ ಹಾಕಿದರು….
ಅಲ್ಲಿ ಹೋದರೂ ಪುಟ್ಟಣ್ಣ ಚಿತ್ರಮಂದಿರದಲ್ಲಿ ಮತದಾನ ೫೦ ದಿನ ನಡೆಯಿತು…
ಅಶ್ವಥ್ ಗೆ ಒಳ್ಳೆಯದರ ಬಗ್ಗೆ ಇದ್ದ ಹುಚ್ಚು ಪ್ರೀತಿ… ಅನ್ಯಾಯದ ವಿರುದ್ಧ ಇದ್ದ ಸಾತ್ವಿಕ ಆಕ್ರೋಶ… ವಿನೋದ ಗುಣ ಇವೆಲ್ಲಾ ಈಚೆಗೆ ಕಂಡಿದ್ದು ಕಡಿಮೆ
ಇಂದು ಅಶ್ವಥ್ ಹುಟ್ಟಿದ ದಿನ ಮತ್ತು ಸತ್ತ ದಿನ …
 

‍ಲೇಖಕರು G

29 December, 2014

3 Comments

  1. samyuktha

    😀

  2. Ganesh Shenoy

    A nice and educative piece by Shri TN Sitharam. Really wonderful to read on Ashwath Sir’s birthday and as on his “punyathithi” today.

  3. Anonymous

    Tn seetharam always awakens common people

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading